ಮಳೆಯ ಮುಖ

ಮಳೆಯ ಮುಖ

ಬಲಿತ ಮಹೋನ್ನತ ಮೋಡಗಳ ಘರ್ಷಣೆ
ಹನಿಯ ಉದ್ಭವ, ಬೆಳಕು ಶಬ್ಧದ ಆಟ,
ಹಸಿರು ನಾಚಿ, ತಲೆಬಾಗಿ ಶರಣಾಗತ
ಭೋರ್ಗರೆವ ಮಳೆಯ ಕುಶಿಯ ಆರ್ಭಟ

ಕವಿಗೆ ಡಜನ್-ಡಜನ್ ಕವನಗಳ ಪ್ರಸವ
ವಿರಹಿಗೆ, ಮೌನ ಸಲ್ಲಾಪದ ಕೊಲ್ಲುವ ನೆನಪು,
ಮಗುವಿಗೆ ನೀರ ಹನಿಯ ತುಂಟ ನಗೆ,
ಪ್ರೇಮಿಗಳಿಗೆ ತುಟಿ ಬಿಚ್ಚಲಾಗದ ಅತೀ ಅಚ್ಚು ಮೆಚ್ಚು
ಉತ್ತಿ ಬಿತ್ತಿದಾತನಿಗೆ ಅದೇನೂ ಆನಂದ,,,

ಇತ್ತ ಒಂದು ಕಾಲುವೆಯ ಪಕ್ಕದ
ಕೊಳಗೇರಿಯಲ್ಲಿ ಅರೆ ಬೆತ್ತಲೆ ಮಕ್ಕಳ
ಹಾಹಾಕಾರ, ಕಳೆದ ಬಟ್ಟೆಗಲ್ಲ,
ಮೂರು ದಿನಕ್ಕೆ ಕಟ್ಟಿಟ್ಟ ಅಕ್ಕಿ ನೀರ ಪಾಲಯ್ತಲ್ಲ!!

ಸೀರೆ ನೆರಿಗೆಯನು ಮೇಲೆತ್ತಿ ಕಟ್ಟಿ
ಕೊಳಕು ಚರಂಡಿಗೆ ಎದುರಾಗಿ ಹೋರಾಡಿ
ಮಳೆ ನಿಂತಾಗ, ಬೆವರಿನ ಹನಿಗಳ ಲೆಕ್ಕಿಸದೆ,
ಬಂದು ಅಪ್ಪುವ ತನ್ನ ಕಪ್ಪು ಮುಸುಡಿಯ ಮಗುವನ್ನು
ಮುದ್ದಿಸುವುದಕ್ಕೆ, ಪ್ರೇಮ ಎಂದರೆ !! ?? ಅದೇ ಪ್ರೇಮ,,,

ವಣಗಿದ ಸೌದೆ ಮಳೆಗೆ ನೆನೆದು ಒದ್ದೆಯಾಗಿ
ಉಳಿದದ್ದು ಬರಿಯ ವಣ ಹೊಟ್ಟೆಯ ಮಕ್ಕಳ ತಾಯಿ,
ಬಂಡ ಮಳೆ ನೀರು, ಕೊಳಕಿನ ಜೊತೆಗೆ
ಬದುಕನ್ನು ತೊಳೆದಿತು,,,, ಮತ್ತೆ ಕಟ್ಟಬೇಕು
ನಾಳಿನ ತುತ್ತಿಗೆ, ಇಂದು ಜೋಳಿಗೆ ತುಂಬುವ ಕೆಲಸ,,

ಬಡತನದ ಕನಸಿಗೆ ಕೊಡೆ ಹಿಡಿಯಬಲ್ಲನೇ ಮೇಲಿನವನು ??

(ಚಿತ್ರ :  ಅಂತರ್ಜಾಲದಿಂದಾ)

Comments

Submitted by naveengkn Mon, 06/23/2014 - 14:27

In reply to by ಗಣೇಶ

ಗಣೆಶ್ ಸರ್, ಮೆಚ್ಚುಗೆಯ‌ ಪ್ರತಿಕ್ರಿಯೆಗೆ ಧನ್ಯವಾದಗಳು ‍‍
ಜೀ ಕೇ ನ‌

Submitted by kavinagaraj Sat, 06/21/2014 - 08:55

ಬಡತನದ ಕನಸಿಗೆ ಕೊಡೆ ಮೇಲಿನವನು ಹಿಡಿಯಲಿ ಬಿಡಲಿ, ಹಿಡಿಯುವ ಪ್ರಯತ್ನವನ್ನಂತೂ ಬಡವ ಮಾಡಲೇಬೇಕು.
ಉತ್ತಮ ಅಭಿವ್ಯಕ್ತಿಗೆ ಅಭಿನಂದನೆಗಳು, ನವೀನರೇ.

Submitted by naveengkn Mon, 06/23/2014 - 14:30

In reply to by kavinagaraj

ಕವಿಗಳೇ ನೀವು ಹೇಳಿದ್ದು ಸರಿ, ಅದು ಪ್ರಯತ್ನದ‌ ಜೊತೆಗೆ ಬದುಕುವ‌ ಹೊಣೆ ಕೂಡ‌, ಮೆಚ್ಚುಗೆಗೆ ಧನ್ಯವಾದಗಳು
ಜೀ ಕೇ ನ‌

Submitted by ksraghavendranavada Sat, 06/21/2014 - 09:00

ಕನಸಿನೊ೦ದಿಗೆ ಯಾ ಕಲ್ಪನೆಯೊ೦ದಿಗೆ ವಾಸ್ತವವನ್ನು ಬಿ೦ಬಿಸುತ್ತಿರುವ ರೀತಿಯಿ೦ದ ಕವನ ಮನಮುಟ್ಟುತ್ತದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.