ಮೆಕ್ಯಾನಿಕ್ ಮುರುಗೇಶ
[ಈ ಬರೆಹ ನಿಜ ಘಟನೆಯನ್ನಾಧರಿಸಿದ್ದರೂ, ಹೆಸರುಗಳೆಲ್ಲವೂ ಕಾಲ್ಪನಿಕ.]
"ಲೋ..."
"... ... ..."
"ಲೇಯ್..!"
"... ... ..."
"ಲೇಯ್, ಮಾದಾ! ಬಾರೋ ಇಲ್ಲೀ!"
"ಬಂದೇಣಾ..."
"ಇಪ್ಪತ್ತೊಂದು ಇಪ್ಪತ್ಮೂರು ತಕೊಂಬಾರೋ"
ಕುಕ್ಕರಗಾಲಲ್ಲಿ ಕುಳಿತು ಟೈಮರನ್ನು ಸೆಟ್ ಮಾಡುತ್ತಿದ್ದ ಮುರುಗೇಶ ಮಾದ ತಂದು ಕೊಟ್ಟ ಸ್ಪ್ಯಾನರಿನ ಒಂದು ತುದಿಯನ್ನು ಕೈಯಲ್ಲಿ ಹಿಡಿದು, ಅಚಾನಕ್ಕಾಗಿ
ಮಾದನ ಕಣಕಾಲಿನ ಹಿಂಭಾಗಕ್ಕೆ ಹೊಡೆದ.
"ಏನೋ ಅಲ್ಲಿ ಕೋತಿ ಕುಣಿಸ್ತಿದಾರೇನೋ? ಏನೋ ಮಾಡ್ತಿದ್ದೆ ಅಲ್ಲೀ... ಕೋತಿ ತರಾ ಅಲ್ ಬಿಟ್ಕೊಂಡೂ, ಕಳ್ಳ ನನ್ ಮಗ್ನೇ?"
"ಕರಡಿ ಕುಣಿಸ್ತಿದ್ರು" ಅಮಾಯಕತನದಿಂದ ಮೆಲುದನಿಯಲ್ಲಿ ಹುಡುಗ ಹೇಳಿದ.
"ಕರಡಿ ಕುಣಿಸ್ತಿದ್ದಾರಾ? ಅಲ್ಕಾ ನನ್ ಮಗ್ನೇ!" ಮುರುಗೇಶ ಮತ್ತೊಮ್ಮೆ ಸ್ಪಾನರ್ ಬೀಸಿದ.
"ಇಲ್ಲಣ್ಣೋ..." ಎಂದು ಅಳುದನಿಯಲ್ಲಿ ಚೀರಿ ಮಾದ ಪಕ್ಕಕ್ಕೆ ಜಿಗಿದು ತಪ್ಪಿಸಿಕೊಂಡ.
"ಓಗಲ್ಲಿ! ಸೆಲ್ವ ಟೈರ್ ಬಿಚ್ತಾವ್ನೆ...ಇಡ್ಕೋ ಓಗು..." ಎಂದ ಮುರುಗೇಶ ನನ್ನ ಕಡೆ ತಿರುಗಿದ. "ಕೋತಿ ಕುಣೀತಿದ್ಯೇನೋ ಅಂತ ಕೇಳಿದ್ರೆ ಕರಡೀ ಕುಣೀತಿದೇಂತ ಜವಾಬ್ ಕೊಡ್ತವ್ನೆ, ನೋಡಿ... ಎಸ್ಟು ಕೊಬ್ಬು ನನ್ ಮಕ್ಳಿಗೇ..." ಹೀಗನ್ನು ತ್ತಿದ್ದಂತೆಯೇ ಕರಡಿ ಕುಣಿಸುವವನು ವರ್ಕ್ ಶಾಪಿನ ಎದುರು ನಿಂತ. ಸ್ವಲ್ಪ ಹೊತ್ತು ಕರಡಿಯನ್ನೂ ಅದನ್ನು ಕುಣಿಸುವವನನ್ನೂ ನೋಡಿದ ಮುರುಗೇಶ, ಹಾಗೆಯೇ ನನ್ನತ್ತ ನೋಡಿ, ಮಾದನ ಕಡೆ ದೃಷ್ಟಿ ಹಾಯಿಸಿದ. ಬಳಿಕ, ಕರಡಿಯಾತನಿಗೆ, "ಲೇಯ್, ಓಗೋ ಅತ್ಲಾ ಕಡೆ! ಬಂದು ನಿಂತ್ಬಿಟ್ಟ ಎದೂರ್ಗಡೆ...ಕಸ್ಟಮರ್ಸುಗಳ್ಗೆ ಡಿಶ್ಟರ್ಬ್ ಮಾಡೋಕೆ. ಓಗೋ..." ಎಂದು ಗದರಿದ. "ಈ ನನ್ ಮಕ್ಳು ಇಂಗೇನೇ..." ಎಂದು ಈ ಕರಡಿ ಕುಣಿಸುವವನನ್ನು ಬಯ್ಯುತ್ತಲೇ, ಅವನಂತೆಯೇ ಬರುವ ಬಸವನಾಟದವನನ್ನೂ, ಕಾವಡಿ ಹೊತ್ತು ಬರುವವರನ್ನೂ ಬಯ್ದ. ಹಾಗೆಯೇ ಅವರು ಹೊಟ್ಟೆಪಾಡಿಗಾಗಿ ಕಷ್ಟಪಡುವದರ ಬಗ್ಗೆ ಸಹಾನುಭೂತಿಯನ್ನೂ ತೋರಿಸಿದ. "ಇವ್ರ ಒಟ್ಟೆಪಾಡಿಗೆ ಈ ಕರಡೀನಾ, ಕೋತೀನಾ, ಆವನ್ನಾ, ಬಸವಣ್ಣನ್ನಾ, ಎಲ್ಲಾ ಇಡಕೊಂಡು ಬಂದು, ಅವುಗಳನ್ನೂ ಸತಾಯಿಸ್ತವ್ರೆ ನನ್ ಮಕ್ಳು!" ಎಂದೂ ಬಯ್ದ!
ರಸ್ತೆಗೆ ತೆರೆದುಕೊಂಡಿರುವ ಹತ್ತು x ಹತ್ತು ಚದರಡಿ ಅಳತೆಯ ಕೋಣೆಯಲ್ಲಿ ಮುರುಗೇಶನ ‘ಮುರುಗೇಶ್ ಸರ್ವಿಸ್ ಸೆಂಟರ್’ ಇದೆ. ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆತ. ಯೆಜ್ಡಿ ಮತ್ತು ಬುಲೆಟ್ ಮೋಬೈಕ್ಗಳ ‘ಸ್ಪೆಶಲಿಸ್ಟ್’. "ಈಗಿನ ಗಾಡಿಗಳೆಲ್ಲ ಏನೂ ಯೂಸಿಲ್ಲ ಸಾರ್. ಈರುಳ್ಳಿ ದಂಟಿನ ಫ್ರೇಮೂ, ಬೆಳ್ಳುಳ್ಳಿ ಸಿಪ್ಪೆಯ ಟ್ಯಾಂಕೂ, ಬಾಡೀ, ಮಡ್ಗಾರ್ಡೂ ಎಲ್ಲಾ...ಓಯ್ತಾ ಎಲ್ಲಾರ ಒಂದ್ಸಾರಿ ಬಿತ್ತೂಂತನ್ನಿ...ಮೂರ್ನಾಕ್ ಸಾವಿರ ಚೌರ! ... ನಿಮ್ ಯೆಜ್ಡಿ ತರ ಅಲ್ಲ ಬಿಡಿ." ನನ್ನನ್ನು ಮೆಚ್ಚಿಸುವ ಮಾತಲ್ಲ, ಆ ಬೈಕಿನ ಮೇಲಿನ ಅಭಿಮಾನದ ಮಾತದು ಎಂದು ನನಗೊತ್ತು.
ಅಷ್ಟರಲ್ಲಿ ಸೆಲ್ವ ಕೈಯಲ್ಲೊಂದು ಸಣ್ಣ ಬೇರಿಂಗ್ ಹಿಡಿದುಕೊಂಡು ಬಂದು ಮುರುಗೇಶನಿಗೆ ತೋರಿಸುತ್ತಾ, "ಇದ್ ಪಾರ್ ಅಣ್ಣೇ, ಎಲ್ಲಾ ಓಗ್ಬಿಟ್ಟಾಯ್ತು. ಮಾರಿಸಿ ಒಸತಾಕ್ಬೇಕು" ಎಂದು.
"ಇದನ್ಯಾರ್ಗಯ್ಯಾ ಮಾರ್ತೀಯಾ ನೀನೂ...? ಯಾವ್ದೋ ದೇವಸ್ತಾನದ್ ರಥದ್ ಚಕ್ರದ್ ಥರಾ ಗಡಗಡಾಂತ ಶಬ್ದ ಮಾಡ್ತೈತೆ?" ಬೇರಿಂಗಿನ ನಡುವಿಗೆ ಬೆರಳು ತೂರಿಸಿ ಇನ್ನೊಂದು ಕೈಯಿಂದ ಅದನ್ನು ತಿರುಗಿಸಿ ಮುರುಗೇಶ ಕೇಳಿದ.
"ಮಾರೋದಿಲ್ಲ ಬಾಸ್! ಚೇಂಜ್ ಮಾಡೂಂತ ಏಳ್ದೆ..." ಹಲ್ಲು ಕಿರಿದು ಸೆಲ್ವ ನುಡಿದ.
"ಆ..ಯ್! ನೀನೂ ನಿನ್ನ ಬಾಶೇನೂ..." ಎಂದು, ನನ್ನನ್ನು ಉದ್ದೇಶಿಸಿ ಹೇಳಿದ: "ಸಾರ್, ಈ ಬೇರಿಂಗುದು ಲೈಪ್ ಒಂಟೋಗೈತೆ ನೋಡಿ." ಎಂದು ಬೆರಳನ್ನು ತೂರಿಸಿದ್ದ ಅದನ್ನು ತಿರುಗಿಸಿ ತೋರಿಸಿದ.
"ಸರಿ, ಬದಲಾಯಿಸು. ಎಷ್ಟಾಗುತ್ತೆ?"
"ಆಗತ್ತೆ ಸಾರ್. ನೂರು ರೂಪಾಯಿಯಿಂದ ಶ್ಟಾರಟ್ ಆಗಿ ನಾನೂರು ಐನೂರರವರ್ಗೂ ಐತೆ. ನೋಡ್ಕಂಡು ಒಳ್ಳೇ ಪಾರ್ಟೇ ತರ್ಸಿ ಹಾಕೋಣ ಸಾರ್. ಯಾಕೆಂದ್ರೆ ಇದು ವೀಲ್ ಬೇರಿಂಗೂ... ಅದೂ ಪ್ರಂಟ್ ವೀಲೂ..." ಎಂದು ಅದರ ಬಗ್ಗೆ ಒಂದು ಸಣ್ಣ ಲೆಕ್ಚರನ್ನೇ ಹೊಡೆದ. ಬಳಿಕ, ಸ್ವಲ್ಪ ಆಕಡೆ ಪ್ಲಾಸ್ಟಿಕ್ ಬೇಸಿನಿನಲ್ಲಿ ವೀಲ್ ಚೈನೊಂದನ್ನು ತೊಳೆಯುತ್ತಿದ್ದ ಅರೆಪಡ್ಡೆಹುಡುಗನನ್ನು , "ಲೇಯ್! ಬಾರೋ, ಇಲ್ಲಿ!" ಎಂದು ಕರೆದ. "ನೀನು ಬಾರತ್ ಶಾಪಿಗೆ ಹೋಗೀ...." ಎಂದು ನಿಲ್ಲಿಸಿ, ಆ ಹುಡುಗನನ್ನೇ ದಿಟ್ಟಿಸಿ, "ಯಾವ ಬಾರತ್ ಶಾಪೋ? ಬಾರತ್ ಸ್ವೀಟ್ ಶಾಪಿಗೆ ಹೋಗಿ ಕೇಳ್ಬೇಡ... ಗೂಬೇ ತರಾ...ಬಾರತ್ ಆಟೋ ಪಾರ್ಟ್ ಶಾಪು. ಆ ಬಾಲಾಜಿ ಬಾರ್ ಪಕ್ಕದಲ್ಲಿದ್ಯಲ್ಲೋ ಅದೋ, ಮಂಕೇ!" ಎಂದು ನನ್ನತ್ತ ತಿರುಗಿ, "ಅಂಗಂದ್ರೇನೇ ಈ ನನ್ ಮಕ್ಳಿಗ್ ಗೊತ್ತಾಗೋದು. ಬಾರೂ, ಬ್ರಾಂದಿ ಶಾಪೂ ಎಲ್ಲಾ ಗೊತ್ತವೆ, ಈ ಕಳ್ಳ ಬಡ್ಮಕ್ಳಿಗೆ!" ಎಂದ.
ಮತ್ತೆ ಆ ಹುಡುಗನತ್ತ ತಿರುಗಿ, "ಬಾರತ್ ಆಟೋ ಶಾಪಿಗೆ ಓಗಿ ಯೋಳು..." ಎಂದು ಅವನನ್ನೇ ದಿಟ್ಟಿಸಿದ. "ಏನಂತ ಯೋಳ್ತೀಯೋ?"
ಹುಡುಗ ಸುಮ್ಮನೇ ನಿಂತಿದ್ದ. "ಓಗಿ ಯೋಳೂ, ಸಾರಿಗೆ ಈ ಥರಾ ಐಟಮ್ ಬೇಕೂ ಅಂತ ಯೋಳು" ಎಂದು ನನ್ನತ್ತ ತಿರುಗಿ, "ಇದು ಒರಿಜಿನಲ್ ಪಾರ್ಟೂ ಸಾರ್. ಈಗೆಲ್ಲಾ ಡೂಪ್ಳಿಕೇಟೇ ಸಾರ್ ಬರೋದು; ಎಲ್ಲಾ ಮೋಸಾನೇ..." ಎಂದು, ಹುಡುಗನಿಗೆ, "ಊಂ, ಏನೂಂತ ಯೋಳ್ತೀಯೋ...ಈ ಸಾರಿಗೇ ಅಂತ ಯೋಳು..." ಎಂದು ನನ್ನತ್ತ ಗೋಣಾಡಿಸಿ ಸೂಚಿಸಿ, "ಏನು, ಗೊತ್ತಾಯ್ತೇನೋ?" ಎಂದ.
ಹುಡುಗ ಜೋರಾಗಿ ತಲೆ ಅಲ್ಲಾಡಿಸಿ, ಹಳೆಯ ಬೇರಿಂಗನ್ನೆತ್ತಿಕೊಂಡು ಹೊರನಡೆದ. "ಲೆಕ್ಕದ್ ಬುಕ್ಕಲ್ಲಿ ಬರ್ಕೊಳ್ಳಾಕೇಳೋ..." ಹೋಗುತ್ತಿದ್ದ ಹುಡುಗನ ಬೆನ್ನಿಗೆ ಹೇಳಿದ, ಮುರುಗೇಶ. "ನಾ ಪೋನ್ ಮಾಡಿ ಯೊಳ್ತೀನಿ ಓಗು" ಎನ್ನುತ್ತಲೇ ಜೇಬಿನಿಂದ ಮೊಬೈಲ್ ಫೋನನ್ನೆತ್ತಿಕೊಳ್ಳುತ್ತಾ ನನ್ನತ್ತ ನೋಡಿ, "ನನ್ನತ್ರ ರೆಗ್ಯುರಲಾಗಿ ಬರೋ ಕಸ್ಟಮರ್ಸ್ಗಳಿಗ್ ಮಾತ್ರಾ ಈ ಪರಸನಲ್ ಸರ್ವೀಸು ಸಾರ್" ಎಂದ.
ನಾನು ನಸುನಗುವಿನೊಡನೆ ಅಂಗೀಕೃತಿಯ ಗೋಣಾಡಿಸುವದು ಅನಿವಾರ್ಯವಾಗಿತ್ತು.
ಆಮೇಲೆ ನಿಧಾನವಾಗಿ ಅಂದುಕೊಂಡೆ: ‘ಆ ಭಾರತ್ ಆಟೋ ಪಾರ್ಟ್ ಶಾಪಿನವನಿಗೆ ಈ ಹುಡುಗ ಹೋಗಿ, ಸಾರಿಗೆ ಈ ತರಹದ ಬೇರಿಂಗ್ ಬೇಕು, ಅಂತ ಒಂದು ವೇಳೆ ಅಂದರೆ, ಅವನಿಗೆ ಯಾವ ಸಾರೂ ಅಂತ ಅರ್ಥವಾದೀತು? ಅದನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಆತ ಮಾಡಿಯಾನೇ? ಇದೆಲ್ಲಾ ಮುರುಗೇಶನ ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಟೆಕ್ನಿಕ್ ಅಷ್ಟೇ’
Comments
ಉ: ಮೆಕ್ಯಾನಿಕ್ ಮುರುಗೇಶ
ಕಸ್ಟಮರ್ ಹೋದ ಮೇಲೆ ಹಾಕುವುದು ಬೇರೆ ಹಳೆಯ ಪಾರ್ಟೇ!! ನಿಮ್ಮ ಸಹಜ ನಿರೂಪಣೆ ಗಮನ ಸೆಳೆಯುತ್ತದೆ.
In reply to ಉ: ಮೆಕ್ಯಾನಿಕ್ ಮುರುಗೇಶ by kavinagaraj
ಉ: ಮೆಕ್ಯಾನಿಕ್ ಮುರುಗೇಶ
ಸಣ್ಣ ಪುಟ್ಟ ವರ್ಕ್ ಷಾಪ್ ಗಳಲ್ಲಿ ಸಣ್ಣ ರಿಪೇರಿ ಕೆಲಸಗಳನ್ನು ನಿಂತು ಮಾಡಿಸಿದರೆ ಹಳೆಯ ಪಾರ್ಟ್ ಗಳನ್ನು ಹಾಕಉವದನ್ನು ತಪ್ಪಿಸಿಕೊಳ್ಳಬಹುದು!
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು!
In reply to ಉ: ಮೆಕ್ಯಾನಿಕ್ ಮುರುಗೇಶ by kavinagaraj
ಉ: ಮೆಕ್ಯಾನಿಕ್ ಮುರುಗೇಶ
ಸಣ್ಣ ಪುಟ್ಟ ವರ್ಕ್ ಷಾಪ್ ಗಳಲ್ಲಿ ಸಣ್ಣ ರಿಪೇರಿ ಕೆಲಸಗಳನ್ನು ನಿಂತು ಮಾಡಿಸಿದರೆ ಹಳೆಯ ಪಾರ್ಟ್ ಗಳನ್ನು ಹಾಕುವದನ್ನು ತಪ್ಪಿಸಿಕೊಳ್ಳಬಹುದು!
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು!