ಕೋಪ - ತಾಪ

ಕೋಪ - ತಾಪ

ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ

ಕೋಪದಿಂದಲೆ ನಾಶ ಕೋಪದಿಂದಲೆ ಭಯವು |

ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ

ಕೋಪಿಷ್ಠರವರು ಪಾಪಿಷ್ಠರೋ ಮೂಢ || 

     ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯಿದು. ಗಂಡ-ಹೆಂಡತಿ ಇಬ್ಬರೂ ಸಾಫ್ಟ್‌ವೇರ್ ಇಂಜನಿಯರರು. ಮದುವೆಯಾಗಿ ಕೆಲವು ವರ್ಷಗಳಷ್ಟೇ ಆಗಿತ್ತು. ಅನುರೂಪ ದಾಂಪತ್ಯ. 'ಹೇಳಿ ಮಾಡಿಸಿದ ಜೋಡಿ' ಎಂದು ನೋಡಿದವರು, ಅಕ್ಕ-ಪಕ್ಕದವರು ಹೇಳುತ್ತಿದ್ದರು. ಒಮ್ಮೆ ಯಾವುದೋ ವಿಷಯಕ್ಕೆ ಒಬ್ಬರಿಗೊಬ್ಬರಿಗೆ ಮಾತಿನ ಚಕಮಕಿ ನಡೆಯಿತು. ಗಂಡ ಸಿಟ್ಟಿನ ಭರದಲ್ಲಿ ಹೆಂಡತಿಯ ಕೆನ್ನೆಗೆ ಬಾರಿಸಿಬಿಟ್ಟ. ಸೂಕ್ಷ್ಮ ಸ್ಥಳಕ್ಕೆ ಪೆಟ್ಟು ಬಿದ್ದು ಆಕೆ ಅಲ್ಲೇ ಕುಸಿದು ಬಿದ್ದಳು. ದಿಗ್ಭ್ರಮೆಗೊಂಡ ಗಂಡ ಇನ್ನಿಲ್ಲದಂತೆ ಉಪಚರಿಸಿ, ಆಸ್ಪತ್ರೆಗೆ ತುರ್ತಾಗಿ ಕರೆದೊಯ್ದರೆ ಆಕೆ ಸತ್ತಿದ್ದನ್ನು ಅಲ್ಲಿ ಧೃಡಪಡಿಸಿದ್ದರಷ್ಟೆ. ಕ್ಷಣಿಕ ಸಿಟ್ಟು ಒಂದು ಪ್ರಾಣವನ್ನೇ ಬಲಿ ಪಡೆದಿತ್ತು. ಕ್ಷಣಿಕ ಸಿಟ್ಟಿನ ಆವೇಶ ಕೊಲೆ ಮಾಡಿಸುತ್ತದೆ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ, ಆಡಬಾರದ್ದನ್ನು ಆಡಿಸುತ್ತದೆ, ಮಾಡಬಾರದ್ದನ್ನು ಮಾಡಿಸುತ್ತದೆ. ಅರಿಷಡ್ವರ್ಗಗಳಲ್ಲಿ ಒಂದಾದ ಕೋಪದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

     "ಸಿಟ್ಟು ಬಂದಾಗ ಮಾತನಾಡಿದರೆ ನೀವು ಅತ್ಯುತ್ತಮವಾಗಿ ಮಾತನಾಡುತ್ತೀರಿ, ಎಷ್ಟೆಂದರೆ ಅದಕ್ಕಾಗಿ ನೀವು ಎಂದೆಂದಿಗೂ ವಿಷಾದಿಸುವಷ್ಟು!" ಎಂಬ ಡಾ. ಲಾರೆನ್ಸ್ ಜೆ.ಪೀಟರ್ ಹೇಳಿದ ಮಾತನ್ನು ಎಲ್ಲರೂ, ವಿಶೇಷವಾಗಿ ಗಣ್ಯರು ಎನಿಸಿಕೊಂಡವರು ಸದಾ ನೆನಪಿನಲ್ಲಿಡಬೇಕು. ಸಾಹಿತಿ ಅನಂತಮೂರ್ತಿಯವರು, "ಮೋದಿ ಪ್ರಧಾನ ಮಂತ್ರಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಸಿಟ್ಟಿನ ಕ್ಷಣದಲ್ಲಿ ಹೇಳಿದ್ದಷ್ಟೆ, ನಾನು ದೇಶ ಬಿಟ್ಟು ಹೋಗುವುದಿಲ್ಲ" ಎಂದು ಎಷ್ಟು ಸಲ ವಿವರಣೆ ಕೊಡಬೇಕಾಗಿ ಬಂದಿತು! ಅಲ್ಲದೆ ಅವರಿಗೆ ಪೋಲಿಸ್ ರಕ್ಷಣೆ ಸಹ ಬೇಕಾಯಿತು! ಮೋದಿಯವರನ್ನು 'ನರಹಂತಕ' ಎಂದದ್ದಕ್ಕಾಗಿ ನಮ್ಮ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ವಿವರಣೆ ಕೊಡಬೇಕಾಯಿತು ಮತ್ತು ಈಗ ಮೋದಿಯವರ ಭಾವಚಿತ್ರವನ್ನು ತಮ್ಮ ಕೊಠಡಿಯಲ್ಲಿ ಹಾಕಿಕೊಳ್ಳಬೇಕಾದ ಮುಜುಗರದ ಸನ್ನಿವೇಶ ಎದುರಾಗಿದೆ. ಅಸಹನೆಯಿಂದ ಒಡಮೂಡಿದ ಸಿಟ್ಟಿನಲ್ಲಿ ಇಂತಹುದೇ ಮಾತುಗಳನ್ನಾಡಿದ ಇತರ ಗಣ್ಯರುಗಳೂ ತಮ್ಮ ಮಾತುಗಳನ್ನು ತಾವೇ  ನುಂಗಿಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದನ್ನೂ ಕಂಡಿದ್ದೇವೆ. ಸಿಟ್ಟು ವಿವೇಕವನ್ನು ಹಾಳುಗೆಡವುತ್ತದೆ ಎಂಬುದಕ್ಕೆ ಇವು ಉದಾಹರಣೆಯಾಗುತ್ತವೆ.

ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು

ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |

ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ

ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ || 

     ಕೋಪ ಅನ್ನುವುದು ಸುಮ್ಮ ಸುಮ್ಮನೆ ಕಾರಣವಿಲ್ಲದೆ ಬರುವುದಿಲ್ಲ ಮತ್ತು ಆ ಕಾರಣ ಒಳ್ಳೆಯದಂತೂ ಆಗಿರುವುದಿಲ್ಲ. ಪ್ರೆಷರ್ ಕುಕ್ಕರಿನಂತೆ ಒಂದು ಹಂತದವರೆಗೆ ಮಾತ್ರ ಕೋಪವನ್ನು ಅದುಮಿಡಬಹುದು. ಒತ್ತಡ ಹೆಚ್ಚಾದರೆ ಸಿಡಿದುಬಿಡುತ್ತದೆ. ಸಹಿಸಿಕೊಳ್ಳಬಹುದಾದ ಮಿತಿಯನ್ನು ಮೀರಿ ಇತರರು ವರ್ತಿಸಿದಾಗ, ಆತ್ಮಾಭಿಮಾನಕ್ಕೆ ಧಕ್ಕೆ ಬಂದಾಗ ಅದನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪ್ರತಿಕ್ರಿಯೆಯಾಗಿ ಉದಯಿಸುವುದೇ ಈ ಕೋಪ. ಕೋಪ ಬಂದಾಗ ಭೌತಿಕ ಬದಲಾವಣೆಗಳೂ ಆಗುತ್ತವೆ. ಉಸಿರಾಟ ತೀವ್ರವಾಗುತ್ತದೆ, ಹೃದಯದ ಬಡಿತ ಹೆಚ್ಚುತ್ತದೆ, ಕೈಕಾಲುಗಳು ಕಂಪಿಸುತ್ತವೆ, ಅವಡುಗಚ್ಚುತ್ತಾರೆ, ಹಾವಭಾವಗಳು ವಿಚಿತ್ರವಾಗುತ್ತವೆ, ಎತ್ತರದ ಧ್ವನಿಯಲ್ಲಿ ಅರಚುತ್ತಾರೆ, ಕಣ್ಣು ಕೆಂಪಗಾಗುತ್ತದೆ, ವಿವೇಚಿಸುವ ಶಕ್ತಿ ಕುಂದುತ್ತದೆ. ಈ ಹಂತದಲ್ಲಿ ಆಗುವ ಪರಿಣಾಮಗಳು ಹಾನಿಕಾರಕವಾಗಿರುತ್ತದೆ ಮತ್ತು ಹಲವು ಕಾಲದವರೆಗೆ ನೆಮ್ಮದಿಯನ್ನು ಹಾಳುಗೆಡವುತ್ತದೆ. ಬಸ್ಸಿನಲ್ಲಿ ಸೀಟಿಗಾಗಿ ಜಗಳ, ಕಂಡಕ್ಟರನೊಡನೆ ಚಿಲ್ಲರೆಗಾಗಿ ಮಾತುಕತೆ, ಆಕಸ್ಮಿಕವಾಗಿ ಬಾಯಿತಪ್ಪಿ ಆಡುವ ಯಾವುದೋ ಮಾತು, ಇತ್ಯಾದಿಗಳೂ ಇಂತಹ ಸಂದರ್ಭವನ್ನು ಸೃಷ್ಟಿಸಿಬಿಡಬಹುದು. ಮನಃಶಾಸ್ತ್ರಜ್ಞರು ಕೋಪ ಅನ್ನುವುದು ಸಹಜವಾದ ಮೂಲಭೂತ ಗುಣವೆನ್ನುತ್ತಾರೆ. ಇದನ್ನು ತಮಗಾದ ಲೋಪ, ಅನ್ಯಾಯವನ್ನು ಸರಿಪಡಿಸಲು ಉಪಯುಕ್ತವಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಬಹುದೆನ್ನುತ್ತಾರೆ. ಆದರೆ ಅನಿಯಂತ್ರಿತ ಕೋಪ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಂದಂತೂ ನಿಜ, "ಕೋಪಗೊಳ್ಳಲಾಗದವನು ಮೂರ್ಖ; ಕೋಪ ಮಾಡಿಕೊಳ್ಳದಿರುವವನು ಬುದ್ಧಿವಂತ".

     ಕೋಪವನ್ನು ಮೂರು ವಿಧವಾಗಿ ವಿಂಗಡಿಸಬಹುದೆನ್ನಿಸುತ್ತದೆ - ಆತುರದ ಧಿಡೀರ್ ಕೋಪ, ವ್ಯವಸ್ಥಿತವಾದ ಮತ್ತು ನೆಲೆನಿಂತ ಕೋಪ ಮತ್ತು ಮನೋಪ್ರವೃತ್ತಿಯ ಕೋಪ. ಮೊದಲನೆಯ ಪ್ರಕಾರದಲ್ಲಿ ಸ್ವಂತಿಕೆಯ ಉಳಿಕೆ ಅಥವ ಪ್ರದರ್ಶನಕ್ಕಾಗಿ ಸಣ್ಣ ಸಣ್ಣ ಸಂಗತಿಗೂ ಸಿಟ್ಟಿಗೇಳುವುದನ್ನು ಉದಾಹರಿಸಬಹುದು. ಎರಡನೆಯ ಪ್ರಕಾರದ ಕೋಪ ಅಪಾಯಕಾರಿಯಾದದ್ದು. ನಿರಂತರವಾದ ಅನ್ಯಾಯ, ದಬ್ಬಾಳಿಕೆ, ಶೋಷಣೆಗಳಿಂದ ಉಂಟಾದ ಈ ಕೋಪ ಪ್ರತಿಯಾಗಿ ಮತ್ತು ವ್ಯವಸ್ಥಿತವಾಗಿ ಪ್ರತೀಕಾರ ಮಾಡುವುದು, ದಬ್ಬಾಳಿಕೆ ನಡೆಸುವುದು, ಘಾಸಿಯುಂಟುಮಾಡುವುದರ ಬಗ್ಗೆ ಗುರಿಯಿರಿಸಿರುತ್ತದೆ. ಇನ್ನು ಮನೋಪ್ರವೃತ್ತಿಯ ಕೋಪವೆಂದರೆ ತಾವೇ ತಿಳಿದವರೆಂಬ ಭ್ರಮೆಯವರು ಮತ್ತು ಸಿನಿಕತನ ಬೆಳೆಸಿಕೊಂಡಿರುವವರಾಗಿದ್ದು ಪ್ರತಿಯೊಂದರಲ್ಲೂ ಕೊಂಕು ತೆಗೆಯುವುದು, ಹುಳುಕು ಹುಡುಕುವುದು, ಇತ್ಯಾದಿಗಳನ್ನು ಮಾಡುತ್ತಾ ಇತರರನ್ನು ಘಾಸಿಸುತ್ತಾ ಒಂದು ರೀತಿಯ ವಿಕೃತಾನಂದ ಪಡೆಯುವವರೆನ್ನಬಹುದು. ತಾವೂ ಕಿರಿಕಿರಿಪಡುತ್ತಾ ಇತರರನ್ನೂ ಕಿರಿಕಿರಿಗೊಳಪಡಿಸುವವರಿವರು. ಇವರು ಪೂರ್ವಾಗ್ರಹ ಪೀಡಿತ ವಿಚಾರಿಗಳಾಗಿದ್ದು, ತಮ್ಮ ವಿಚಾರ ತಪ್ಪೆಂದು ಮನದಟ್ಟಾದರೂ ಒಪ್ಪಿಕೊಳ್ಳದವರು ಮತ್ತು ತಾವು ಹೇಳುವುದೇ, ನಂಬಿದ್ದೇ ಸತ್ಯವೆಂದು ವಾದಿಸುವವರು ಈ ಪ್ರಕಾರಕ್ಕೆ ಸೇರುತ್ತಾರೆ.

     ಕೋಪವನ್ನು ವ್ಯಕ್ತಪಡಿಸುವಲ್ಲಿ ಎರಡು ರೀತಿಗಳನ್ನು ಗುರುತಿಸಬಹುದು - ಒಂದು ತಡೆಹಿಡಿದ ಕೋಪ ಮತ್ತು ಎದುರು ಬೀಳುವ ರೀತಿಯ ಕೋಪ. ತಡೆಹಿಡಿದ ಕೋಪವನ್ನು ವ್ಯಕ್ತಪಡಿಸುವ ರೀತಿಯೂ ಕುತೂಹಲಕಾರಿಯಾಗಿರುತ್ತದೆ. ಕೃತಕ ನಗು, ಸಂಬಂಧವಿಲ್ಲದಂತೆ ಇರುವುದು, ಮಾತುಗಳಿಗೆ ತಣ್ಣನೆಯ ಪ್ರತಿಕ್ರಿಯೆ ಕೊಡುವುದು, ಅತಿಯಾಗಿ ಪ್ರತಿಕ್ರಿಯಿಸುವುದು ಅಥವ ಪ್ರತಿಕ್ರಿಯಿಸದೆ ಇರುವುದು, ಅಗತ್ಯವಿದ್ದ ಸಂದರ್ಭದಲ್ಲಿ ಸಹಕರಿಸದೆ ಇರುವುದು, ಸಂಘರ್ಷ ಬಯಸದಿರುವುದು, ಬೆನ್ನ ಹಿಂದೆ ಮಾತನಾಡುವುದು, ಹತಾಶ ಮನೋಭಾವ ತೋರಿಸುವುದು, ಪ್ರತಿಯೊಂದರಲ್ಲೂ ಅತಿರೇಕದ ಪ್ರವೃತ್ತಿ ತೋರಿಸುವುದು, ಇತರರನ್ನು ಮುನ್ನುಗ್ಗಲು ಪ್ರಚೋದಿಸಿ ತಾವು ಹಿಂದೆ ಉಳಿಯುವುದು, ಅನಾರೋಗ್ಯದ ನೆಪ ಹೇಳುವುದು, ಸಂಬಂಧಗಳನ್ನು ಹಾಳು ಮಾಡುವುದು, ಕಣ್ಣಿಗೆ ಕಣ್ಣು ಸೇರಿಸಿ ಮಾತನಾಡದಿರುವುದು, ಅನಾಮಧೇಯ ದೂರುಗಳು ಬರುವಂತೆ ಮಾಡುವುದು, ಇತ್ಯಾದಿಗಳನ್ನು ಇದರಲ್ಲಿ ಹೆಸರಿಸಬಹುದು. ಯಾರದೇ ಹೆಸರುಗಳನ್ನು ಹೇಳಹೋಗದೆ, ಇತ್ತೀಚಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಂದೇ ರಾಜಕೀಯ ಪಕ್ಷಕ್ಕೆ ಸೇರಿದ, ಒಬ್ಬರನ್ನು ಕಂಡರೆ ಒಬ್ಬರಿಗಾಗದ ನಾಯಕರುಗಳು ಪರಸ್ಪರ ವರ್ತಿಸಿದ ರೀತಿ ಈ ರೀತಿಯ ಕೋಪದ ಅಭಿವ್ಯಕ್ತಿಗೆ ಉತ್ತಮ ಉದಾಹರಣೆಗಳಾಗುತ್ತವೆ.

      ಇನ್ನು ಎದುರು ಬೀಳುವ ರೀತಿಯ ಕೋಪದ ಅಭಿವ್ಯಕ್ತಿ ಹೇಗಿರುತ್ತದೆಂದರೆ, ನೇರವಾಗಿ ವೈಯಕ್ತಿಕ ಮಟ್ಟದ ಟೀಕೆಗಳನ್ನು ಮಾಡುವುದು, ಕಿರುಚುವುದು, ತಳ್ಳಾಡುವುದು, ವ್ಯಕ್ತಿಗಳ ದೌರ್ಬಲ್ಯಗಳನ್ನು ಎತ್ತಿ ಆಡುವುದು, ಗೂಂಡಾಗಿರಿ ಮಾಡುವುದು, ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದು, ಇತರರ ಭಾವನೆಗಳಿಗೆ ಬೆಲೆ ಕೊಡದೆ ಅವಮಾನಿಸುವುದು, ತೀರಾ ಕೆಳಮಟ್ಟದಲ್ಲಿ ನಡೆದುಕೊಳ್ಳುವುದು, ಲೈಂಗಿಕ ದಬ್ಬಾಳಿಕೆ ನಡೆಸುವುದು, ಅಶ್ಲೀಲ ಪದಗಳನ್ನು ಬಳಸಿ ಬೈಯುವುದು, ಇತರರನ್ನು ಲೆಕ್ಕಿಸದೆ ತಾವೇ ಪ್ರಥಮ ಆದ್ಯತೆ ಪಡೆದುಕೊಳ್ಳುವ ಸ್ವಾರ್ಥತೆ, ಬೆದರಿಕೆ ಹಾಕುವುದು, ಹೆದರಿಸುವುದು, ತಮ್ಮದೇ ತಪ್ಪಿದ್ದರೂ ಅದಕ್ಕೆ ಇತರರನ್ನು ದೂಷಿಸುವುದು, ದ್ವೇಷ ಸಾಧಿಸುವುದು, ಇತ್ಯಾದಿಗಳನ್ನು ಇಲ್ಲಿ ಪಟ್ಟಿ ಮಾಡಬಹುದು. ಇದಕ್ಕೂ ಅನೇಕ ಉದಾಹರಣೆಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಲವರು ನಡೆದುಕೊಂಡ ರೀತಿಯಿಂದ ಸಿಗುತ್ತವೆ. ಯಾರದೇ ಹೆಸರುಗಳನ್ನು ಹೇಳದೆ ಇದನ್ನೂ ಓದುಗರ ಊಹೆಗೇ ಬಿಡುತ್ತೇನೆ. 

ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು

ಹದವರಿತ ಬೆಂಕಿಯದು ಅಟ್ಟುಣಬಡಿಸೀತು |

ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ

ಹದವರಿತ ಕೋಪವದು ಹಿತಕಾರಿ ಮೂಢ || 

      ದೈಹಿಕ ದೌರ್ಬಲ್ಯ, ಅಸಹಾಯಕತೆ, ಕೀಳರಿಮೆ, ಅಭಿಮಾನಕ್ಕೆ ಆಗುವ ಆಘಾತ, ಇತ್ಯಾದಿಗಳೂ ಸಿಟ್ಟಿಗೆ ಕಾರಣವಾಗುವ ಅಂಶಗಳಾಗಿವೆ. ಇವುಗಳನ್ನು ಮೆಟ್ಟಿನಿಲ್ಲಬೇಕೆಂದರೆ ವ್ಯಕ್ತಿಗತವಾಗಿ ದೈಹಿಕ ಧೃಡತೆ ಬೆಳೆಸಿಕೊಳ್ಳುವ, ಸ್ವಪ್ರಯತ್ನ, ಛಲಗಳಿಂದ ಮೇಲೆ ಬರುವ ಕೆಲಸ ಸಂಬಂಧಿಸಿದವರೇ ಮಾಡಬೇಕು. ಇತರರನ್ನು ದೂಷಿಸಿ, ಹೀಯಾಳಿಸುವುದರಿಂದ ತಾವು ಮೇಲೆ ಬರಲಾರೆವೆಂಬುದನ್ನು ಅರಿಯಬೇಕು. ವ್ಯಕ್ತಿಗತವಾಗಿ ಕೋಪ ಸ್ವಂತದ ಅಭಿವೃದ್ಧಿಗೆ ಮಾರಕವಾಗುತ್ತದೆ. ಸಾಂಸಾರಿಕವಾಗಿ ನೋಡಿದರೆ ಕೋಪದ ಫಲವಾಗಿ ಮನೆಯಲ್ಲಿ ಸರಸ-ಸಂತಸಗಳಿರುವುದಿಲ್ಲ, ಮಾತುಕತೆಗಳಿರುವುದಿಲ್ಲ, ನಗುವಿರುವುದಿಲ್ಲ, ಸಾರವಾಗಿ ಹೇಳಬೇಕೆಂದರೆ ಕೋಪಿಷ್ಠರ ಮನೆ ಸೂತಕದ ಮನೆಯಂತಿರುತ್ತದೆ. ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ನೋಡಬೇಕೆಂದರೆ, ಮತೀಯ ಅಸಹನೆಗಳು, ಜಾತಿ ವೈಷಮ್ಯಗಳು, ವಿವಿಧ ವರ್ಗಗಳ ನಡುವಣ ಕಂದರಗಳು ಜಗತ್ತಿನ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿವೆ. ರಾಷ್ಟ್ರ-ರಾಷ್ಟ್ರಗಳ ನಡುವೆ, ರಾಜ್ಯ-ರಾಜ್ಯಗಳ ನಡುವೆ, ಗ್ರಾಮ-ಗ್ರಾಮಗಳ ನಡುವೆ, ಮನುಷ್ಯ-ಮನುಷ್ಯರ ನಡುವೆ ಧಗಧಗಿಸುವ ಕ್ರೋಧಾಗ್ನಿ ಜ್ವಲಿಸುತ್ತಿದೆ. ಬುದ್ಧಿಜೀವಿಗಳು, ವಿಚಾರವಾದಿಗಳು ಎನಿಸಿಕೊಂಡವರು ಇಂತಹ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳನ್ನು ಸೂಚಿಸುವ ಬದಲಿಗೆ ತಾವೇ ಒಂದೊಂದು ಬಣದ ಪರವಾಗಿ ನಿಂತು ವೈಷಮ್ಯದ ದಳ್ಳುರಿಗೆ ತೈಲ ಎರೆಯುತ್ತಿರುವುದು ವಿಪರ್ಯಾಸವೇ ಸರಿ. ಇಂದಿನ ಅಗತ್ಯವೆಂದರೆ ಯಾವುದೋ ಒಂದು ಬಣದ, ಒಂದು ಗುಂಪಿನ ಪರವಾಗಿ ಅಥವ ವಿರೋಧವಾಗಿ ನಿಲ್ಲುವುದಲ್ಲ. ಸಾಮರಸ್ಯದ, ಸೌಹಾರ್ದತೆಯ ಮಾತುಗಳನ್ನು ತೋರಿಕೆಗಾಗಿ ಆಡದೆ ನೈಜ ಅನುಷ್ಠಾನ ಹೇಗೆ ಮಾಡಬೇಕೆಂದು ಆಲೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ಕಾಲ ಬಂದುಬಿಟ್ಟಿದೆ. ಇತರರ ಧಾರ್ಮಿಕ ಆಚರಣೆಗಳ ಕುರಿತು ಅಸಹನೆಯ ಮನೋಭಾವ ತ್ಯಜಿಸದೆ, ತಮ್ಮ ನಂಬಿಕೆಯನ್ನೇ ಇತರರ ಮೇಲೆ ಹೇರಬಯಸಿ ಮತಾಂತರ, ಭಯೋತ್ಪಾದನೆ, ಇತ್ಯಾದಿಗಳಲ್ಲಿ ತೊಡಗದೆ ಇರುವವರೆಗೆ ಶಾಂತಿ, ನೆಮ್ಮದಿ ಇರಲಾರದು. ಇಂತಹ ಪರಿಸ್ಥಿತಿ ಬಂದೊದಗಿರುವುದಕ್ಕೆ ಸಮಾಜದ, ದೇಶದ ಹಿತ ಬಯಸುವವರಿಗೆ ಸಾತ್ವಿಕ ಕ್ರೋಧ ಬರದೇ ಇರದು. ಅನ್ಯಾಯದ ವಿರುದ್ಧದ ಸಮರಕ್ಕೆ ಕೋಪವೂ ಒಂದು ಅಸ್ತ್ರವಾಗಿದೆ. ಆದರೆ, ಅಂತಹ ಕೋಪ ನಿಯಂತ್ರಿತವಾದುದಾಗಿ, ಅನ್ಯಾಯದ ವಿರುದ್ಧದ ಮಾತ್ರವಾಗಿದ್ದು ವ್ಯಕ್ತಿ ವಿರುದ್ಧವಾಗಿರದಿದ್ದರೆ ಸಮಾಜ ಒಪ್ಪುತ್ತದೆ.

ದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣಕಾಗಿ

ಸಮಾಜಹಿತಕಾಗಿ ಧರ್ಮ ರಕ್ಷಣೆಗಾಗಿ |

ರಾಷ್ಟ್ತ ಭದ್ರತೆಗಾಗಿ ಆತ್ಮಸಮ್ಮಾನಕಾಗಿ

ಕೋಪವದುಕ್ಕುಕ್ಕಿ ಬರಲಿ ಮೂಢ ||

     "ಭೂತಕಾಲವನ್ನು ಕೋಪದಿಂದ ಹಿಂತಿರುಗಿ ನೋಡದಿರೋಣ, ಭವಿಷ್ಯದೆಡೆಗೆ ಭಯದಿಂದ ಮುನ್ನಡೆಯದಿರೋಣ, ವರ್ತಮಾನದಲ್ಲಿ ಜಾಗೃತರಾಗಿರೋಣ." 

-ಕ.ವೆಂ.ನಾಗರಾಜ್.

****************

ಚಿತ್ರ ಕೃಪೆ: http://www.selfhelpzone.com/wp-content/uploads/2007/09/types-of-anger.jpg

Comments

Submitted by naveengkn Fri, 06/27/2014 - 10:09

ಕೋಪದ‌ ವಿವಿದ‌ ಸ್ವರೂಪಗಳು ಹಾಗು ಅದರಿಂದಾಗುವ‌ ಉನ್ನತಿ ಅವನತಿಗಳ‌ ಸಮಗ್ರ‌ ಚಿತ್ರಣ‌ ಎಂದು ಹೇಳಲು ಅಡ್ಡಿ ಇಲ್ಲ‌, ಕೊನೆಯಲ್ಲಿ ಕೋಪ‌ ಏತಕ್ಕಾಗಿ ಬೇಕು ಎನ್ನುವ‌ ಮೂಢ‌ ಉವಾಚ‌ ಬಹಳ‌ ಅರ್ಥಪೂರ್ಣ‌, ಸಾಗುತ್ತಿರಲಿ ಬರಹ‌ ಕವಿಗಳೇ, ಧನ್ಯವಾದಗಳು ‍‍
ಜೀ ಕೇ ನ‌

Submitted by nageshamysore Sat, 06/28/2014 - 04:52

ಕೋಪದ ಹಲವು ಅವತಾರಗಳಲ್ಲಿ ಒಂದು ರೂಪವೆಂದರೆ - ಮತ್ತೊಬ್ಬರು ನಮ್ಮನಿಸಿಕೆ, ನಿರೀಕ್ಷೆಗಳಿಗನುಗುಣವಾಗಿ ವರ್ತಿಸದಿದ್ದರೆ ಅಥವಾ ಪ್ರತಿಕ್ರಿಯಿಸದಿದ್ದರೆ ಬರುವ ಕೋಪ. ಸಹೋದ್ಯೋಗಿಗಳಲ್ಲಾಗಲಿ, ಬಂಧು ಮಿತ್ರರಲ್ಲಾಗಲಿ, ಸ್ನೇಹಿತರಲ್ಲಾಗಲಿ ಅಥವಾ ತೀರ ಹತ್ತಿರದ ಸಂಬಂಧಗಳಲ್ಲಾಗಲಿ - ಈ 'ನಿರೀಕ್ಷೆ' ಅವರು ಹೇಗೆ ಪ್ರತಿಕ್ರಿಯಿಸಬೇಕೆಂದು ಮೊದಲೆ ನಿರ್ಧರಿಸಿಕೊಂಡುಬಿಟ್ಟಿರುತ್ತದೆ; ಆದರೆ ನೈಜ ಪ್ರತಿಕ್ರಿಯೆ ಅದಕ್ಕೆ ವ್ಯತಿರಿಕ್ತವಾಗಿದ್ದಾಗ ಅಸಹಾಯಕತೆ, ಅಸಹನೆಯಿಂದ ಅಸಾಧ್ಯ ಕೋಪ ಬಂದುಬಿಡುತ್ತದೆ. ಬಹುಶಃ ಸಾತ್ವಿಕ ಕೋಪವು ಸಹ ಈ ಗುಂಪಿಗೆ ಸೇರಬಹುದು. ಇಲ್ಲಿಯು ಸಹ ಕೋಪದ ಸರಿ ತಪ್ಪುಗಳ ವಿಶ್ಲೇಷಣೆಗಿಂತ ಅದನ್ನು ಹೇಗೆ ನಿಯಂತ್ರಿಸಿ, ಧನಾತ್ಮಕವಾಗಿ ಬಳಸಬಹುದೆಂದು ಕಲಿಯುವುದು ಮುಖ್ಯ. ನನ್ನಲ್ಲೂ ಈ ಸಿಟ್ಟಿನ ರೂಪ ಕೊಂಚ ಹೆಚ್ಚೆ ಇದೆ ಅನ್ನಬೇಕು ! ಕೋಪದ ಕುರಿತು 'ಕೋಪಿಸಿಕೊಳ್ಳದೆ' ಓದಬೇಕಾದ  ಸೊಗಸಾದ ಬರಹ ಕವಿಗಳೆ :-)

Submitted by kavinagaraj Sat, 06/28/2014 - 08:45

In reply to by nageshamysore

ಕೋಪಿಸಿಕೊಳ್ಳದೆ ಓದಿ ಪ್ರತಿಕ್ರಿಯಿಸಿರುವಿರಿ. ಧನ್ಯವಾದ, ನಾಗೇಶರೇ.