ಸುಬ್ಬ: ಭಿಕ್ಷಾಪಾತ್ರೆ ಪ್ರಸಂಗ

ಸುಬ್ಬ: ಭಿಕ್ಷಾಪಾತ್ರೆ ಪ್ರಸಂಗ

 

ರಾತ್ರಿ ಒಂಬತ್ತೂವರೆ. ಸಾಮಾಜಿಕ, ಪೌರಾಣಿಕ, ಹಾಸ್ಯ (?) ಇತ್ಯಾದಿ ಮೆಗಾ ಧಾರಾವಾಹಿಗಳು ಮುಗಿದು ಕ್ರೈಮ್ ಸರಣಿಯ ಸೀರಿಯಲ್ಲುಗಳು ಮೂಡೋ ಹೊತ್ತು. ಹೊರಗೆ ಗಾಢಾಂಧಕಾರ. ಹಲ್ ಬಿಟ್ಟ ಹೊರತು, ಮುಖದದ ಬೌಂಡರಿ ಅರಿವಾಗುವುದಿಲ್ಲ.  ಮೊನ್ನೆ ಗಣೇಶನ ವಿಸರ್ಜನೆಯ ಶುಭ ಸಂದರ್ಭದಲ್ಲಿ ಸಂತೋಷ ಹೆಚ್ಚಾಗಿ ಯಾರೋ ಬೀದಿ ದೀಪದ ಬಲ್ಬ್ ಅನ್ನು ಕಲ್ಲೊಗೆದು ಧರೆಗೆ ಇಳಿಸಿದ್ದರಿಂದ ಹೊರಗೆ ಗಾಢಂಧಕಾರ.

ಅವನು ಕಪ್ಪು ಬಣ್ಣದ ಜ್ಯಾಕೆಟ್ ತೊಟ್ಟು, ತಲೆಗೆ ಮಂಕಿಕ್ಯಾಪ್ ಏರಿಸಿ, ಶೂಲೇಸ್ ಬಿಗಿದು ಕಾಂಪೌಂಡ್ ಮೂಲೆಯಲ್ಲಿದ್ದ ವಸ್ತುವನ್ನು ಕೈಗೆತ್ತಿಕೊಂಡ ಮೆಲ್ಲಗೆ ಗೇಟು ತೆರೆದು ಹೊರಗೆ ಅಡಿಯಿಟ್ಟ. ಕಾರ್ಗತ್ತಲಲ್ಲಿ, ಅಣತಿ ದೂರದಲ್ಲೇ ನಿಂತು ನೋಡಿದರೂ ಇವನ ಇರುವು ಯಾರಿಗೂ ತಿಳಿಯುತ್ತಿರಲಿಲ್ಲ. ನಾಲ್ಕು ಬೀದಿ ಸೇರೋ ಮಧ್ಯೆ ರಸ್ತೆಯಲ್ಲಿ ನಿಂತು ಎದುರಿಗೊಮ್ಮೆ, ಹಿಂದೊಮ್ಮೆ, ಎಡಕ್ಕೊಮ್ಮೆ, ಬಲಕ್ಕೊಮ್ಮೆ ಕಿರುಗಣ್ಣಿನಲ್ಲಿ ನೋಡಿದ. ಬೇಕಿದ್ದವರು ಕಾಣಲಿಲ್ಲ ಎಂದು ಒಮ್ಮೆ ಘರ್ಜಿಸಿದ. ಈ ಕೂಗಿಗೇ ಕಾದಿದ್ದವರಂತೆ ಐದು ಮಂದಿ ಪೆಂಗಳು ಈತನ ಸುತ್ತಲೂ ನಿಂತರು. ಅವನೇ ಸುಬ್ಬ-ಬಾಂಡ್.

’ಬಾಸ್, ಶಲ್ ವೀ ಅಟ್ಯಾಕ್’ ಎಂಬುದು ಮುಂದಿನ ಮಾತು ಅಂತ ನೀವು ಅಂದುಕೊಂಡಿದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ! ಅಲ್ಲಿ ತೇಲಿಬಂದ ಮಾತುಗಳು ಹೀಗಿತ್ತು ’ಅಯ್ಯೋ ಅನಿಷ್ಟವೇ, ನೀನಾ? ನಿನಗೇನು ಬಂತೋ ಧಾಡಿ? ನೀನು ಅಮ್ಮಾ-ತಾಯಿ ಅಂತ ಕೂಗಿದ್ದು ನೋಡಿ ನಿಜಕ್ಕೂ ಭಿಕ್ಷದವರೇ ಬಂದರೂ ಅಂದುಕೊಂಡು ಓಡೋಡಿ ಬಂದೆ. ಓಡಿ ಬಂದ ರಭಸಕ್ಕೆ ಕಾಲು ಬೇರೇ ಉಳುಕಿತು. ಥತ್!’ ಅಂದರೊಬ್ಬರು ಹಿರಿಯಾಕೆ. 

’ನೀನೇನು ಭಿಕ್ಷುಕರನ್ನ ಕರೆಯೋಕ್ಕೆ ಬಂದ್ಯೋ? ಇಲ್ಲಾ ಭಿಕ್ಷೆ ತೊಗೊಳ್ಳೋಕ್ಕೆ ಬಂದ್ಯೋ?’... ’ನಿನ್ನಿಂದ ಇಷ್ಟು ಹೊತ್ತಿನ ಸೀರಿಯಲ್ಲು ತಪ್ಪಿ ಹೋಯ್ತು’. 

’ಈ ಎಲ್ಲ ಪಾತ್ರೇಲಿ ಏನೇನು ಇದೆಯೋ ಅದನ್ನ ನೀನೇ ಭಿಕ್ಷುಕರಿಗೆ ಹಾಕಿ, ಪಾತ್ರೆ ತೊಳೆದು ನಿಮ್ಮ ಮನೇಲಿ ಇಟ್ಕೊಂಡಿರು. ಬೆಳಿಗ್ಗೆ ತೊಗೋಳ್ತೀವಿ’ ಅಂದರು ಇನ್ನೊಬ್ಬರು. ಇದ್ದುದರಲ್ಲಿ ಕಿರಿಯಾಕೆ ಮಾತ್ರ ’ತೊಗೊಳ್ಳಿ ಸುಬ್ಬ’ ಅಂತ ಮರ್ಯಾದೆ ಕೊಟ್ಟಿದ್ದು.

ದಂಗಾಗಿ ನಿಂತು ಯಾರಿಗೆ ಎನು ಹೇಳಬೇಕು ಅಂತ ಕನ್ಫ್ಯೂಸ್ ಆದ ಸುಬ್ಬ ಆ ಕಿರಿಯಾಕೆಗೆ ಹೇಳಿದ ’ಆಂಟಿ, ನಿಮ್ಮದು ಚಿಕ್ಕ ಪಾತ್ರೆ. ಅದರಲ್ಲಿರೋದನ್ನು ನನ್ ಪಾತ್ರೆಗೆ ಹಾಕಿ, ನಿಮ್ ಪಾತ್ರೆ ನೀವು ತೊಗೊಂಡ್ ಹೋಗಿ’ ಅಂದ. ಆ ಮಾತು ಕೇಳಿ ಸಿಡಿದ ಆಕೆ ’ನಾನು ಆಂಟೀನಾ? ಹೈಸ್ಕೂಲಿನಲ್ಲಿ ಇಬ್ಬರೂ ಕ್ಲಾಸ್ ಮೇಟ್ ಆಗಿದ್ವಿ. ಆಗಲೇ ಮರೆತುಹೋಯ್ತಾ?’ ಅದಕ್ಕೆ ಸುಬ್ಬ ’ಅಯ್ಯೋ, ಅದು ಹಾಗಲ್ಲ. ನೀವು ಓದಿನಲ್ಲಿ ಮುಂದೆ ಹೋಗಿಬಿಟ್ರಲ್ಲ ಅದಕ್ಕೇ ನೀವು ದೊಡ್ಡವರು ಅಂತ ಹಾಗೆ ಹೇಳ್ದೆ ಅಷ್ಟೇ!’. ಆಕೆಗೆ ಇನ್ನೂ ರೇಗಿತು ’ನೀನು ಒಂದೇ ಕ್ಲಾಸಿನಲ್ಲಿ ನಾಲ್ಕು ವರ್ಷ ಇದ್ದ ಮಾತ್ರಕ್ಕೆ ನಿನ್ ವಯಸ್ಸೂ ಅಲ್ಲೇ ಕಾಯ್ತಿರುತ್ತಾ? ಇನ್ನೊಂದ್ ಹತ್ತು ವರ್ಷ ಅದೇ ಕ್ಲಾಸಿನಲ್ಲಿ ಮಣ್ ಹೊತ್ತಿದ್ರೆ, ನನ್ ಮಗಳೂ ನಿನ್ ಕ್ಲಾಸ್ ಮೇಟ್ ಆಗಿರ್ತಿದ್ಲು’ ಎಂದು ಖಾರವಾಗಿ ನುಡಿದು, ತನ್ನ ಪಾತ್ರೆಯ ಉಪ್ಪು-ಖಾರವಿಲ್ಲದ ಉಪ್ಪಿಟ್ಟನ್ನ ಅವನ ಪಾತ್ರೆಗೆ ಸುರಿದು ಹೊರಟಳಾಕೆ.

ಹಗಲಾಗಲಿ, ಇರುಳಾಗಲಿ, ಮಳೆಯಾಗಲಿ, ಛಳಿಯಾಗಲಿ ಹೆಣ್ಣು-ಗಂಡು, ಹಿರಿಯರು-ಕಿರಿಯರು ಎಂಬ ಭೇದಭಾವವಿಲ್ಲದೆ ಎಲ್ಲರ ಕೈಲೂ ಉಗಿಸಿಕೊಳ್ಳೋದೇ ಸುಬ್ಬನ ಹಣೆಬರಹ. ಈಗ ಸುಬ್ಬನ ಬಗ್ಗೆ ಸ್ವಲ್ಪ ಹೇಳಲೇಬೇಕು.

ಸುಬ್ಬ ಮ್ಯಾನ್ ಅನ್ನೋದಕ್ಕಿಂತ ಸ್ಪೆಸಿಮನ್ ಅನ್ನಬೇಕು. ಅವನೊಂದ ರೀತಿ "ನ ಭೂತೋ ನ ಭವಿಷ್ಯತಿ" ಎಂಬೋ ವ್ಯಕ್ತಿತ್ವ. ಅವನ ಮನಸ್ಸು ನಿಷ್ಕಲ್ಮಶ. ಈಗ ಮನೆಯಲ್ಲಿ ಮಾಡಿದ ಪದಾರ್ಥವಾವುದೂ ಉಳಿಯದೆ,  ಆಗಿನ ಪಾತ್ರೆ ಆಗಲೇ ತೊಳೆದಿಟ್ಟಲ್ಲಿ ಎಲ್ಲಾದರೂ ಕಲ್ಮಶ ಇರಲು ಸಾಧ್ಯವೇ? ಹಾಗೇ ನಮ್ ಸುಬ್ಬನ ಮನಸ್ಸು ಕೂಡ. ಯಾವುದನ್ನೂ ಮನಸ್ಸಲ್ಲಿ ಇಟ್ಟುಕೊಳ್ಳದೇ, ಇದ್ದುದನ್ನು ಇದ್ದ ಹಾಗೇ ಹೇಳಿ ಅದನ್ನು ಅಲ್ಲೇ ಮರೆತು ಮುಂದೆ ಹೋಗೋ ವ್ಯಕ್ತಿತ್ವ. ಹಾಗಾಗಿ ತಲೆಯನ್ನು ಶುಭ್ರವಾಗೇ ಇಟ್ಟುಕೊಳ್ಳೋದ್ರಿಂದ ಕಲ್ಮಶವೇ ಇಲ್ಲ. ಇದು ಸಮೀಪವರ್ತಿಗಳಾದ ನನ್ನಂಥವರು ಹೇಳೋ ಮಾತು. ಅವನ ಬಗ್ಗೆ ಹೆಚ್ಚು ಗೊತ್ತಿಲ್ಲದೆ ಅವನಿಂದ ಸಂಕಷ್ಟಕ್ಕೆ ಒಳಗಾದವರು ಹೇಳೋದು "ಸುಬ್ಬನ ಮನಸ್ಸು ನಿಷ್ಕಲ್ಮಶ ಏಕೆಂದರೆ ತಲೆಯಲ್ಲಿ ಏನಾದ್ರೂ ಇದ್ರಲ್ವೇ ಕಲ್ಮಶವಾಗಲಿಕ್ಕೇ?" ಅಂತ.

ಸುಬ್ಬನ ಸೀದಾ ಸಾದಾ ನಡುವಳಿಕೆಯಿಂದ ಹಲವು ಬಾರಿ ಬೇಸತ್ತು ಮನಸ್ಸು ರೋಸಿ ಹೋದರೂ, ಒಂದು ವಿಷಯವನ್ನು ಗಹನವಾಗಿ ಯೋಚಿಸಿದಾಗ, ಹೋಗ್ಲಿ ಅಂತ ಸುಮ್ಮನಾಗ್ತೀನಿ. ಏನು ಯೋಚನೆ ಅಂದಿರಾ? ಈಗ ನೋಡೀ,  ಸಿಕ್ಕಾಪಟ್ಟೆ ಓದಿದವರೋ, ಅಥವಾ ಸಿರಿವಂತರೋ ಅಥವಾ ಇನ್ನೇನೋ ಆಗಿರೋ ಜನ, ಒಳಗೊಂದು ಹೊರಗೊಂದು ಅಂತ ನಡುವಳಿಕೆ ತೋರುವ ಜನರ ಮಧ್ಯೆ ಸುಬ್ಬ ಪುಟಕ್ಕಿಟ್ಟ ಚಿನ್ನ.

ಸರಿ ಹಾಗಿದ್ರೆ ಈಗ ಸುಬ್ಬನ ಬಗ್ಗೆ ಸ್ವಲ್ಪ ತಿಳೀತು. ಸುಬ್ಬ ಸಮುದ್ರ ಇದ್ದ ಹಾಗೇ. ಆ ಸಾಗರದ ಗರ್ಭದಿಂದ ಹೊರತೆಗೆದ ಒಂದು ಮುತ್ತಷ್ಟೇ ಈ ಪ್ರಸಂಗ. ಇರಲಿ, ಪ್ರಸಂಗ ಮುಂದುವರಿಸೋಣ.

ತನ್ನ ಪಾತ್ರೆಯನ್ನೂ ಸೇರಿಸಿ ಪಂಚಪಾತ್ರೆಯನ್ನು ಹಿಡಿದು ನಿಂತಿದ್ದ ಸುಬ್ಬ ಈಗ ಇಡೀ ರಸ್ತೆಗೆ ಏಕಾಂಗಿ ವೀರ. ಈ ಬಾರಿ ’ಅಮ್ಮಾ, ತಾಯಿ’ ಎಂದು ಭಿಕ್ಷುಕರನ್ನು ಕರೆದ ಅವನ ಸ್ಟೈಲಿಗೆ ಓಗೊಟ್ಟಿದ್ದ ಲೊಳ್ ಲೊಳ್ ಎನ್ನುತ್ತ ಓಡಿ ಬಂದ ನಾಲ್ಕಾರು ಶ್ವಾನಗಳು. ಹಿಂದೊಮ್ಮೆ ಪಂಚೆಯುಟ್ಟು, ಬನೀನುಧಾರಿಯಾಗಿ,  ಬರಿಗಾಲಿನಲ್ಲಿ, ರಾತ್ರಿಯಲ್ಲಿ ಪಾತ್ರೆ ಹಿಡಿದು ಬಂದವನನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದ್ದವು. ಅವುಗಳಿಂದ ತಪ್ಪಿಸಿಕೊಂಡು ಓದಿ ಬರುವಾಗ ಪಾದಕ್ಕೆ ಕಲ್ಲು-ಮುಳ್ಳು ಚುಚ್ಚಿದ್ದೇ ಅಲ್ಲದೆ, ಪಂಚೆಯೂ ಕಾಲಿಗೆ ತೊಡರಿ ಬಿದ್ದು ಮೈಕೈ ತರಿಚಿಸಿಕೊಂಡಿದ್ದ. ಪುಣ್ಯಕ್ಕೆ ನಾಯಿ ಇವನನ್ನು ಕಚ್ಚಿ ಅವು ಹುಷಾರು ತಪ್ಪಲಿಲ್ಲ. ಅಂದು ಹಾಗಾಗಿದ್ದರಿಂದ ಈಗ ಕರೀ ಕೋಟು, ಶೂ, ಕ್ಯಾಪು ಎಂಬೆಲ್ಲ ಅಲಂಕಾರ.

ಅಲ್ಲೆ ಇದ್ದ ಒಂದು ಸಣ್ಣ ಕಲ್ಲು ಹಾಸಿನ ಮೇಲೆ, ಪಾತ್ರೆಗಳಲ್ಲಿದ್ದುದೆಲ್ಲವನ್ನೂ ಬರಿದು ಮಾಡಿ ಐದೂ ಪಾತ್ರೆ ಪೇರಿಸಿಕೊಂಡು ಮನೆ ಒಳಗೆ ಅಡಿಯಿಡಲಿದ್ದ ಸುಬ್ಬನನ್ನು ತಡೆದಿದ್ದು ಅಜ್ಜಿಯ ಬರುವಿಕೆ. ಅವನ ಕೈಲಿದ್ದ ಪಾತ್ರೆಗಳನ್ನು ಕಂಡ ಸುಬ್ಬನ ಅಜ್ಜಿ ತಲೆತಿರುಗಿ ಬೀಳೋದೊಂದು ಬಾಕಿ ’ಅಲ್ವೋ ಹು.ಮು.ದೇ ! ಭಿಕ್ಷೆ ಹಾಕಿ ಬಾರೋ ಅಂದರೆ ಭಿಕ್ಷೆಯವರ ಪಾತ್ರೆನೂ ತೊಗೊಂಡ್ ಬಂದಿದ್ದೀಯಲ್ಲೋ. ಒಳಗೆ ಬರಬೇಡ. ಅಲ್ಲೇ ಇರು ಮೊದಲಿಗೆ ....’. ಅಜ್ಜಿ ಕೂಗಾಡ್ತಾನೇ ಇದ್ದು, ಸುಬ್ಬನಿಗೆ ಮಾತನಾಡಲೇ ಅವಕಾಶ ನೀಡಲಿಲ್ಲ. ಕೊನೆಗೆ ಸುಬ್ಬನ ಅಮ್ಮನ ಮಧ್ಯಪ್ರವೇಶದಿಂದ ಅಜ್ಜಿಗೆ ವಿಷಯ ಅರಿವಾದರೂ, ಮನಸ್ಸಿಗೆ ಸಮಾಧಾನ ಆಗಲಿಲ್ಲ. ಸುಬ್ಬನ ಕೈಲಿ ಪಾತ್ರೆಗಳನ್ನು ತೆಗೆದುಕೊಂಡು ಅವನಮ್ಮ ಒಳಗೆ ಹೋದರೆ, ಸುಬ್ಬ ಕೈತೊಳೆದು ಬಂದು ಸೋಫಾ ಅಲಂಕರಿಸಿದ.

ಯಾರೋ ಸೀರಿಯಲ್ಲು ಮಿಸ್ ಆಯ್ತು ಅಂತ ಅಲವತ್ತುಕೊಂಡಿದ್ದು ನೆನಪಿಗೆ ಬಂದು ತಾನು ಟಿವಿ ಹಚ್ಚಿದ. ಐದೇ ನಿಮಿಷಕ್ಕೆ ಸುಬ್ಬನ ಅಜ್ಜಿ ’ಅದೇನು ಬರೀ ಕೊಲೆ, ಸುಲಿಗೆ, ರಕ್ತಪಾತ. ಎಂಥಾ ಧಾರವಾಹಿ ನೋಡ್ತಿದ್ದೀಯೋ. ಮೊದಲು ಬೇರೆ ದರಿದ್ರ ಹಾಕು.’ ಸುಬ್ಬ ನುಡಿದ ’ಇದು ಸೀರಿಯಲ್ ಅಲ್ಲ ಅಜ್ಜೀ ನ್ಯೂಸು’ ಅಂತ. ಅದಕ್ಕೆ ಅಜ್ಜಿ ’ಹಾಡು ಹಸೆ ಎಲ್ಲ ಯಾವುದೂ ಬರೋಲ್ವೋ?’  ಸುಬ್ಬ ಒಂದಿನಿತೂ ಯೋಚನೆ ಮಾಡದೆ, ಸೀರಿಯಸ್ಸಾಗೇ ನುಡಿದ ’ಮಿಡ್-ನೈಟ್ ಮಸಾಲ ರಾತ್ರಿ ಹನ್ನೆರಡಕ್ಕೆ ಅಜ್ಜಿ’ ಅಂತ. ’ಅನಿಷ್ಟ, ಅನಿಷ್ಟ’ ಅಂತ ಒಳಗೆ ಹೋದರು ಅಜ್ಜಿ.

ಮರುದಿನ ಅವರವರ ಪಾತ್ರೆ ತಲುಪಿಸಲು ಹೊರಟ ಸುಬ್ಬ. ಎಲ್ಲರಿಗೂ ಪಾತ್ರೆಯ ತಲುಪಿಸಿ ವಾಪಸ್ ಬರುವಾಗ ಕಲ್ಲುಹಾಸಿನ ಕಡೆ ದೃಷ್ಟಿ ಹರಿಸಿದ. ಮಿಕ್ಕೆಲ್ಲ ಆಹಾರ ಪದಾರ್ಥವನ್ನು ಕಚ್ಚಾಡಿಕೊಂಡು ತಿಂದು ತೇಗಿದ್ದ ಶ್ವಾನಗಳು ಒಂದು ಪದಾರ್ಥವನ್ನು ಮೂಸಿಯೂ ನೋಡದೆ ಹಾಗೇ ಬಿಟ್ಟಿದ್ದವು. ಸುಬ್ಬ ಮನೆಗೋಡಿ ಬಂದು ಕೈಗೆ ಸಿಕ್ಕ ಪಾತ್ರೆ ತೆಗೆದುಕೊಂಡು ಮತ್ತೆ ಕಲ್ಲುಹಾಸಿನ ಬಳಿ ಹೋದ. ಅಲ್ಲಿದ್ದ ಪದಾರ್ಥವನ್ನು ಪಾತ್ರೆಗೆ ಬಳಿದುಕೊಂಡು ಕಿರಿಯಾಕೆಯ ಮನೆಗೆ ಹೋಗಿ, ಬಾಗಿಲು ತೆರೆದಿದ್ದೂ ಜನ ಅಲ್ಲೇ ಓಡಾಡುತ್ತಿದ್ದರೂ, ಕಾಲಿಂಗ್ ಬೆಲ್ ಒತ್ತಿದ.

ತಲೆಗೆ ಸ್ನಾನ ಮಾಡಿ, ಶುಭ್ರವಸ್ತ್ರಳಾಗಿ ಬಾಗಿಲ ಬಳಿ ಬಂದ ಆ ಕ್ಲಾಸ್-ಮೇಟ್ ಕೈಗೆ ಪಾತ್ರೆ ಇಟ್ಟು ನುಡಿದ ’ಯಾಕೋ ಗೊತ್ತಿಲ್ಲ, ನಾಯಿಗಳು ನಿಮ್ಮ ಉಪ್ಪಿಟ್ಟು ತಿಂದೇ ಇರಲಿಲ್ಲ. ಅದಕ್ಕೇ ವಾಪಸ್ ತಂದೆ’.

ಬಾಯಿಂದ ಮಾತೇ ಹೊರಡದೆ ಮೂಕಾಗಿ ಗರ ಬಡಿದವಳಂತೆ ನಿಂತು ಸುಬ್ಬ’ನನ್ನೇ ನೋಡುತ್ತಿದ್ದಳು.... ’ಪಾಪಿ ಸುಬ್ಬಾ!’ ಅಂತ ಆಕೆ ಚೀರಿದ್ದು, ಸುಬ್ಬನು ಓಡಿ ಮನೆ ತಲುಪಿದ್ದರೂ ಅಲೆಅಲೆಯಾಗಿ ಕೇಳಿಸುತ್ತಿತ್ತು.

{ನಗೆಗಡಲ ಕಾರಂಜಿ ’ಅಪರಂಜಿ’ಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ}

Comments

Submitted by venkatb83 Mon, 06/30/2014 - 18:35

In reply to by kavinagaraj

ಮೊದಲಿಗೆ ಓದಿದ್ದು ಪ್ರತಿಕ್ರಿಯೆಗಳು ..!! ಆಗ್ಲೂ ಆದರೂ ಪೂರ್ತಿ ಬರಹ ಓದಿ ಕೊನೆಗೆ ಆ ಗಟ್ಟಿ ವಸ್ತು ತಿಂಡಿ ಏನಿರಬಹುದು ಅಂತ ...!! ಕೊನೆಗೆ ಅದು 'ಕಲ್ಲುಪ್ಪಿಟ್ಟು' ಎಂದು ತಿಳಿದು ಈ ಹಿಂದೆ ಹಲವು ಬಾರಿ ನಮ್ಮ ನಿಮ್ಮ ಬರ್ಹಗಳಲ್ಲಿ ಅದರ ವರ್ಣನೆ ಖ್ಯಾತಿ ಕುಖ್ಯಾತಿ ನೆನಪಿಗೆ ಬಂದು :()))))) ಉಕ್ಕಿತು ...!!

ಶುಭವಾಗಲಿ

\|/

Submitted by lpitnal Tue, 07/01/2014 - 22:58

ಭಲ್ಲೆ ಜಿ, ಸುಬ್ಬನ ಕಥಾ ಪ್ರಸಂಗ ತುಂಬ ಚನ್ನಾಗಿದೆ. ನೀವು ನೀಡುವ ಉಪಮೆ, ಹೋಲಿಕೆಗಳು ಬಲು ಸೊಗಸು, ಸಾಮಾನ್ಯವಾಗಿ ಹೊಳೆಯಲಾರವು. ಸರಿಯಾಗಿ ಉಪಯೋಗಿಸಿದ್ದಿರಿ. ಧನ್ಯವಾದಗಳು..ಸರ್

Submitted by ಗಣೇಶ Fri, 07/04/2014 - 23:52

....ಮುಗಿದು ಕ್ರೈಮ್ ಸರಣಿಯ ಸೀರಿಯಲ್ಲುಗಳು ಮೂಡೋ ಹೊತ್ತು..... :)
.... ’ಅಲ್ವೋ ಹು.ಮು.ದೇ ! ಭಿಕ್ಷೆ ಹಾಕಿ ಬಾರೋ ಅಂದರೆ ...
-ಅಜ್ಜಿ ಎಂಟ್ರಿ :) :) ಮನೆಯೆಂದ ಮೇಲೆ ಒಂದು ಅಜ್ಜಿ ಇರಲೇಬೇಕು. ಯಾರೂ ಗಮನಿಸದಿದ್ದರೂ, ಅದು ತಪ್ಪು, ಇದು ತಪ್ಪು...ವಟವಟಾಂತ ಗದರಿಸುತ್ತಲೇ ಇರಬೇಕು. ಅದು ತಪ್ಪು ಇದು ತಪ್ಪು..ವಟವಟಾಂತ ಗೊಣಗೋ ಅಜ್ಜಿ ಸಂಪದದಲ್ಲೂ ಇರುವುದರಿಂದ ಮನೆಯ ವಾತಾವರಣದಲ್ಲಿ ಇದ್ದ ಹಾಗೇ ಆಗುತ್ತದೆ. :)
ಭಲ್ಲೇಜಿ,
ಉಪ್ಪಿಟ್ಟು ಪ್ರಸಂಗ ಸೂಪರ್.
ನಮ್ಮಲ್ಲೂ... ಚೆನ್ನಾಗಿಲ್ಲದಿದ್ದರೆ ನಮ್ಮ ರಾಮು(ಗಿಳಿ) ಬಡಿಸಿದ್ದನ್ನು ಮೂಸಿಯೂ ನೋಡುವುದಿಲ್ಲ. ಕೊಕ್ಕಿನಿಂದ ತಟ್ಟೆಯನ್ನೇ ಎತ್ತಿಹಾಕುವುದು. ಆ ಸ್ವಾತಂತ್ರ್ಯ ನನಗಿಲ್ಲ. :(

Submitted by bhalle Sat, 07/05/2014 - 08:17

In reply to by ಗಣೇಶ

ಧನ್ಯವಾದಗಳು ಗಣೇಶ್'ಜಿ
ಸುಬ್ಬ ಯಾರಿಗೆ ಉಪಯೋಗಕ್ಕೆ ಬಂದನೋ ಇಲ್ಲವೋ ಅಜ್ಜಿ ಮುಖೇನ ಸಂಪದವನ್ನು ಒಂದು ಮನೆಯನ್ನಾಗಿ ಮಾಡಿದ್ದಾನೆ ಎಂದು ಅರಿತು ಸಂತಸವಾಯ್ತು!
ಮಾತು ಬಾರದ ಪ್ರಾಣಿಗಿರೋ ಧೈರ್ಯ ಕೆಲವೊಮ್ಮೆ ಮಾತು ಬರೋ ಪ್ರಾಣಿಗಿರೋಲ್ಲ !