ಅಕ್ಕ ಮತ್ತು ಕಪ್ಪು ಕೂದಲಿನಾಸೆ,,,,

ಅಕ್ಕ ಮತ್ತು ಕಪ್ಪು ಕೂದಲಿನಾಸೆ,,,,

ಅಕ್ಕನಿಗೆ ಕಪ್ಪು ಉದ್ದ ಕೂದಲು ಇಷ್ಟ, ನಾನು ಆಕೆಯ ಜುಟ್ಟು ಹಿಡಿದೆಳೆದರೆ ಆಕೆಗೆ ಎಲ್ಲಿಲ್ಲದ ಕೋಪ, ಕಿತಾಪತಿ ಮಾಡುವ ಹಂಬಲ ನನಗೆ, ಎಂದಿಗೂ ಆಕೆಯ ಜುಟ್ಟೆ ಆಕೆಯನು ಕೆಣಕುವ ಸಾಧನ, ಕೋಪದಲಿ ಎರಡೇಟು ಬಿಗಿಯಲು ಬಂದರೆ ಕತ್ತರಿ ಹಿಡಿದು ನಿಂತು ಬಿಡುತ್ತಿದ್ದೆ ನಾನು, ಕೂದಲಿನ ಪ್ರೇಮಕ್ಕೆ, ನನ್ನಗೆ ಬೆಲ್ಲದ ಉಂಡೆ ಕೊಟ್ಟು ಸಂತೈಸಿ ಬಿಡುತ್ತಿದ್ದಳು,,, ನನಗೆ ಬೆಲ್ಲ ಬೇಕೆಂದಾಗೆಲ್ಲ ಆಕೆಯ ಜುಟ್ಟು ಹಿಡಿದೆಳೆದರೆ ಸಾಕು, 
     
     ನಿಲುಕದ ಪೇರಳೆ ಹಣ್ಣಿಗೆ ಅಕ್ಕನ ಹೆಗಲೇ ನನ್ನ ಪಾದ ಊರುವ ಜಾಗ, ಆಕೆಯ ಹೆಗಲ ಮೇಲೆ ಹತ್ತಿ ಪೇರಳೆ ಹಣ್ಣು ಕೊಯ್ದು, ತಿನ್ನುತ್ತಿದ್ದವ ನಾನೇ ಆದರು, ಬಣ್ಣದಲ್ಲೇ ರುಚಿಯ ಕಂಡು ಸುಮ್ಮನಾಗುತ್ತಿದ್ದಳು ಅಕ್ಕ, ಇನ್ನೂ, ನಾನು ಈಜುವಾಗ ಬಟ್ಟೆಯನು ಕೈಲಿ ಹಿಡಿದು ಕಾಯುತ್ತಿದ್ದಳು ಅಕ್ಕ, ಹೊಳೆಯ ಮೀನುಗಳನು ನೋಡುತಾ ಏನೇನೋ ತನ್ನೊಳಗೆ ಗೊಣಗುತ್ತಿರುತ್ತಿದ್ದಳು, ಆಗಾಗ ಒಬ್ಬಳೇ ನಗುತ್ತಿರುತ್ತಿದ್ದಳು, ಗುಡ್ಡದ ಮೇಲೆ ಹಣ್ಣು ಕೀಳುವಾಗ "ಪುಟ್ಟ ನೀನು ದೊಡ್ಡವನಾದ ಮೇಲೆ ಏನಾಗುತ್ತಿ ಎಂದ ಆಕೆಯ ಪ್ರಶ್ನೆಗೆ "ಬಸ್ ಕಂಡಕ್ಟರ್" ಆಗುತ್ತೇನೆ, ಅವರ ಬಳಿ ಬಹಳಷ್ಟು ಹಣ ಇರುತ್ತದಲ್ಲ ಎಂದು ನಾನು ಹೇಳಿದಾಗ ತಲೆಗೊಂದು ಮೊಟಕಿ ನಕ್ಕಿದ್ದಳು,

      ಅವಳು ದೂರದ ತೋಡಿನಿಂದಾ ನೀರು ಹೊತ್ತು ಬರುವಾಗ, ಕಂಬಳಿ ಹುಳವನ್ನು ಎಲೆಗಳ ರಾಶಿಯೊಳಗೆ ತಿನ್ನಲು ಬಿಟ್ಟು ನಾಲ್ಕು ದಿನ ಕಾಪಾಡಿದರೆ ಅದು ಚಿಟ್ಟೆ ಆಗಿ ಎಂದಿಗೂ ನಮ್ಮ ಜೊತೆಯಲ್ಲೇ ಇರುವುದು ಎಂದು ಹೇಳಿದ್ದಳು, ಹಾಗೆ ಅವಳು ಮನೆಯ ಕಿಟಕಿಯಲಿ ಬಚ್ಚಿಟ್ಟ ಕಂಬಳಿ ಹುಳವನ್ನು ತೋರಿಸಲು ಕರೆದೊಯ್ದಾಗ ಅದು ಅಲ್ಲಿ ಇಲ್ಲವಾಗಿತ್ತು, ಆಗ ಸಪ್ಪೆ ಮೋರೆಯ ಅವಳ ಜುಟ್ಟನ್ನು ಎಳೆದು ವಾಸ್ತವಕ್ಕೆ ನಾನು ಕರೆ ತಂದಿದ್ದೆ, ಬಟ್ಟೆ ಹೊಲಿಯಲು ಕಲಿಸುವ ಶಕುಂತಲ ಟೀಚರ್ ನ ಎದುರಲ್ಲಿಯೇ ಸೂಜಿ ಆಕೆಯ ಹೆಬ್ಬೆರಳ ಒಳ ಹೊಕ್ಕು, ಹೆಬ್ಬೆರಳು ಶಿಲುಬೆಯಂತೆ ಕಂಡಾಗ, ಕಣ್ಣಲ್ಲಿ ನೀರು ತುಂಬಿ ನಕ್ಕಿದ್ದಳು, ಆಸ್ಪತ್ರೆಗೆ ಹೋಗದೆ ಬರಿಯ ಅರಿಶಿನ ಪುಡಿ ಹಾಕಿ ಗುಣ ಮಾಡಿಕೊಂಡಿದ್ದಳು,   

     ನಾನಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಸಮಯ ಅನ್ನಿಸುತ್ತೆ, ಒಂದಿನ ಯಾರೋ ಅಕೆಗೆ ಹೇಳಿದರಂತೆ ಕೂದಲಿಗೆ ಮೊಟ್ಟೆಯ ಬಿಳಿ ತಿರುಳು ಹಚ್ಚಿದರೆ ಕೂದಲು ಕಪ್ಪಾಗುವುದೆಂದು, ಅಂದು ಸಂಜೆ ಬಂದವಳೇ ನಾಲ್ಕು ದಿನದಲ್ಲಿ ತನ್ನ ಕೂದಲು ಇನ್ನಷ್ಟು ಕಪ್ಪಾಗುವುದನ್ನು ಕಲ್ಪನೆಯಲ್ಲೇ ಕಂಡಿದ್ದಳು, ಕನ್ನಡಿಯಲ್ಲಿ ಪದೇ ಪದೇ ನೋಡಿಕೊಂಡು, ಕೂದಲು ಕಪ್ಪಾಗಿ ಹೊಳೆಯುವಾಗ ಯಾವ ರಿಬ್ಬನ್ ಹಾಕಬೇಕೆಂದು ಕನಸು ಕಂಡಳು, ರಾತ್ರಿಯೆಲ್ಲ ಅದೇ ಕನವರಿಕೆ ಆಕೆಗೆ, ಮರುದಿನ ಎದ್ದವಳೇ ಹಿಂದಿನ ದಿನ ಕೊಂಡು ತಂದ ಮೊಟ್ಟೆಗಳನು ಒಡೆದು ತಲೆಗೆ ನೀಟಾಗಿ ಹಚ್ಚಲಾರಂಬಿಸಿದಳು, ನಾನು ತುದಿ ಬೆರಳುಗಳಲ್ಲಿ ಅವಳ ಕೂದಲುಗಳನ್ನು ಮುಟ್ಟಿ, ವ್ಯಾಕ್ ವ್ಯಾಕ್ ಎಂದು ಅಣಕಿಸಿದ್ದೆ, ಆಕೆ ಅದಕ್ಕೆಲ್ಲ ಸೊಪ್ಪು ಹಾಕದೆ, ಪೂರ್ತಿಯಾಗಿ ಹಚ್ಚಿ, ಕೂದಲನ್ನು ತುರುಬು ಕಟ್ಟಿ,  ಕೊಟ್ಟಿಗೆಗೆ ಹೋಗಿ ದರಗು-ಗೊಬ್ಬರ  (ಮಲೆನಾಡಿನ ಕೊಟ್ಟಿಗೆಗಳಲ್ಲಿ, ಹಸುಗಳ ಕಾಲಿನ ಅಡಿಯಲ್ಲಿ ಹಾಕುವ ಹಸಿರು ಮತ್ತು ಒಣಗಿದ ಎಲೆಗಳು- ಅವು ಸಗಣಿಯ ಜೊತೆ ಸೇರಿ ಒಳ್ಳೆಯ ಗೊಬ್ಬರವಾಗುತ್ತದೆ)  ಬಾಚುವ ಕೆಲಸದಲ್ಲಿ ಮಗ್ನಳಾಗಿದ್ದಳು, ನಾನು ಬಾಗಿಲಲ್ಲೇ ನಿಂತು ಅಕ್ಕನಿಗೆ ಕಿಚಾಯಿಸುತ್ತಿದ್ದೆ, ಆಕೆ ಬಗ್ಗಿ ಗೊಬ್ಬರ ಬಾಚುತ್ತಿದ್ದಳು, ಕೊಟ್ಟಿಗೆಗೆ ಅರ್ಧ ಎತ್ತರಕ್ಕೆ ಮಾತ್ರ ಗೋಡೆ, ಅವಳ ತಲೆಗೆ ನೇರವಾಗಿ ಗೋಡೆಯ ಮೇಲೆ ಒಂದು ಸರ್ಪ ಹೆಡೆ ಬಿಚ್ಚಿ, ಅಕ್ಕನನ್ನೇ ನೋಡುತ್ತಾ ಆಚೆ ಈಚೆ ವಾಲುತ್ತಿತ್ತು, ಆ ಒಂದು ಕ್ಷಣ ನಾನು ಸ್ಥಬ್ಧ, ಮನಸ್ಸು ಏನು ಮಾಡಲಾಗದೆ ನಿಶಕ್ತ, ಅಕ್ಕನಿಗೆ ವಿಷಯ ತಿಳಿಸುವುದು ಹೇಗೆಂದು ತೋಚದಾಯಿತು, ಬಾಯಿಂದ ಮಾತುಗಳು ಹೊರಗೆ ಬರುತ್ತಲೇ ಇಲ್ಲ. ಅಕ್ಕ ಸ್ವಲ್ಪ ಮೇಲಕ್ಕೆ ಎದ್ದರೂ ಸರ್ಪ ಕಚ್ಚುವುದು ಗ್ಯಾರಂಟಿ ಎನಿಸಿತು, 
ಸಾವರಿಸಿಕೊಂಡು, ನಿಧಾನವಾಗಿ 'ಅಕ್ಕಾ' ಎಂದೆ !!
ಏನಾ ? ಅಂದಳು,,
ನಿನ್ನ ತಲೆ ಹತ್ತಿರ ಹಾವು, ಎಂದೆ
ಕೋತಿ, ಹೋಗಿ ಹಲ್ಲು ತಿಕ್ಕು, ನಾಟಕ ಸಾಕು, ಅಂದಳು, ಹಾಗೆ ಹೇಳುತ್ತಲೇ ಬಗ್ಗಿದಲ್ಲಿನಿಂದಾ ಮೇಲೆದ್ದಳು, ಅವಳ ಮುಖ ನೇರವಾಗಿ ಹಾವಿನ ಎದುರಲ್ಲಿ, ಅಬ್ಬಾ, ಚೀರುತ್ತಾ ಹಾರಿ ಓಡಿ ಬಂದಳು, ಆಕೆಯನ್ನು ಸಮಾಧಾನ ಮಾಡಲು ಸುಮಾರು ಅರ್ಧ ಗಂಟೆ ಬೇಕಾಯಿತು, ಅಜ್ಜಿ ಆಗಲೇ ಹರಕೆ ಹೊತ್ತಾಗಿತ್ತು, 
ಅಷ್ಟರಲ್ಲಿ ಹಲ್ಲುಜ್ಜಿ ಬಂದ ನಾನು ಹೇಳಿದೆ 'ಅಕ್ಕ ಹಾವೇ ನಿನ್ನ ಅವತಾರ ಕಂಡು ಹೆದರಿರಬೇಕು" ಎಂದು. "ಪುಟ್ಟಾ,,,,, ಅಂತಾ ಎತ್ಕೊಂಡು ಮುದ್ದು ಮಾಡಿದಳು"
ಮತ್ತೆಂದೂ ಅಕ್ಕ ಕೂದಲಿಗೆ ಮೊಟ್ಟೆ ಹಚ್ಚಿದ್ದು ನಾ ನೊಡಲಿಲ್ಲ........
 
 

Comments