ಕಥೆ: ಪರಿಭ್ರಮಣ..(30)
(ಪರಿಭ್ರಮಣ..29ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಕಾತುರದ ತುದಿಯಲ್ಲಿ ಕೂರಿಸಿದ್ದಂತೆ ನಿಧಾನವಾಗುರುಳುತ್ತಿದ್ದ ಆ ಹಗಲಲ್ಲಿ, ಅಂದಿನ ಮಧ್ಯಾಹ್ನ ಮೂರು ಗಂಟೆಯವರೆಗೂ ಏನೂ ನಡೆಯಲಿಲ್ಲ. ಈಗ ಪ್ರತಿದಿನದಂತೆ ಕಾಫಿ ಟೀ ತಂದುಕೊಡುತ್ತಿದ್ದ ಕುನ್. ಸು ಇಲ್ಲವಾಗಿದ್ದ ಕಾರಣ ತೀರಾ ಕುಡಿಯಲೇಬೇಕೆನಿಸಿದಾಗೆಲ್ಲ ಕೆಳಗಿಳಿದು ರೆಸ್ಟೊರೆಂಟಿಗೆ ಹೋಗಿ ಬರುತ್ತಿದ್ದ ಶ್ರೀನಾಥ. ಅಂದು ಏನಾದರು ಆಗಲಿದೆಯೊ ಇಲ್ಲವೊ ಎಂಬ ಕಾತರದ ಚಡಪಡಿಕೆಯನ್ನು ಅದುಮಿಡಲಾಗದ ಹೊತ್ತಿಗೆ, ಶಮನಕಾರಕವಾಗಿ ತುಸು ಕಾಫಿಯಾದರೂ ಕುಡಿಯಬೇಕೆನಿಸಿ ಸೌರಭ್ ದೇವನ ಜತೆ ಹೊರಗೆ ಹೋಗಿದ್ದ. ಇಬ್ಬರೂ ಸ್ಟಾರ್ ಬಕ್ಸಿನ ರೆಗ್ಯುಲರ್ ಸೈಜಿನ ಕಪ್ಪುನಲ್ಲಿ ಕಾಫಿ ಹೀರುತ್ತ ಕುಳಿತಿದ್ದಾಗ, ಗಾಜಿನ ಕಿಟಕಿಯಿಂದಾಚೆಗೆ ಎತ್ತಲೊ ನೋಡುತ್ತ 'ನೋ ನ್ಯೂಸ್ ಯೆಟ್?' ಎಂದಿದ್ದ ಶ್ರೀನಾಥ ಯಾರಿಗೊ ಹೇಳುವವನಂತೆ.
ಅದೆ ಹೊತ್ತಿಗೆ ಸೌರಭ್, ' ಸಾರ್.. ನಾವೇನಾದರೂ ತೀರಾ ಅತಿಯಾಗಿ ಇಲ್ಲಸಲ್ಲದ್ದನ್ನ ಊಹಿಸಿಕೊಂಡು ಆಗದ ಸಂಘಟನೆಗೆ ಸಿದ್ದತೆ ಮಾಡಿಕೊಂಡು ಕೂತಿದ್ದೆವಾ?' ಎಂದ ಕೊಂಚ ಪೆಚ್ಚು ನಗುತ್ತ..
ಹಾಗೇನಾದರೂ ಆಗಿದ್ದರೆ ಅದೊಂದು ರೀತಿಯ ಹುಚ್ಚುತನದ ಪರಮಾವಧಿಯೆನಿಸಿಬಿಡುತ್ತಿತ್ತು. ಆದರೆ ಅದನ್ನು ನಂಬಲೇಕೊ ಶ್ರೀನಾಥನ ಮನವಿನ್ನು ಸಿದ್ದವಿರಲಿಲ್ಲ. ಹಾಗೊಂದು ವೇಳೆ ಅವನೆಣಿಕೆಯೆಲ್ಲ ಸುಳ್ಳೆ ಆಗಿ, ಅಂದುಕೊಂಡಿದ್ದಂತೆ ಏನೂ ಘಟಿಸದಿದ್ದರೂ ಪ್ರಾಜೆಕ್ಟಿಗೆ ಯಾವುದೆ ತೊಡಕಿನ ಆತಂಕವಿಲ್ಲದೆ ಸುಗಮವಾಗಿ ನಡೆಯಲು ಅನುಕೂಲವಂತು ಆಗುತ್ತಿತ್ತು; ಅವನ ಸಾಕಾರಗೊಳ್ಳದ ಊಹೆಯ ವಿಪರೀತ ಭ್ರಮೆಗೆ ಸೌರಭನಂತಹವರು ಮರೆಯಲ್ಲಿ ನಗುವಂತಾದರೂ ಸಹ.
' ಒಂದು ವೇಳೆ ನೈಜ ಸ್ಥಿತಿ ಹಾಗೆ ಎಂದೆ ಅಂದುಕೊಂಡರೂ ಚಿಂತೆಯಿಲ್ಲ ಬಿಡು.. ಕನಿಷ್ಠ ಈ ರೀತಿಯಿಂದಾದರೂ ಕುನ್. ಸೋವಿಯ ಗುರಿ ಮುಟ್ಟಿದಂತಾಗುತ್ತದಲ್ಲ..? ನಮಗೆ ಪ್ರಾಜೆಕ್ಟಿನ ಯಶಸ್ಸಿಗಿಂತ ಮತ್ತೇನು ಬೇಕು? ಅದರ ಮುಂದೆ ಮಿಕ್ಕೆಲ್ಲ ಗೌಣವಲ್ಲವೆ? ' ಎಂದ ತಾನೂ ಪೆಚ್ಚುಪೆಚ್ಚಾಗಿ ನಗುತ್ತ. ಅದೆ ಹೊತ್ತಿನಲ್ಲಿ ಒಂದು ವೇಳೆ ಆ ಅನಿಸಿಕೆಯೆ ನಿಜವಾಗಿಬಿಟ್ಟರೆ ತನ್ನ ತೀರ್ಮಾನ ಶಕ್ತಿಗೆ ಅದೆಂತಹ ಅವಮಾನ? ಎಂದು ಒಳಗೊಳಗೆ ನಾಚಿಕೆಯೂ ಆಗಹತ್ತಿತ್ತು. ಹೀಗೆ ಸ್ವಲ್ಪ ಹೊತ್ತು ಇಬ್ಬರೂ ಅರೆಮನಸ್ಕತೆಯಲ್ಲೆ ಪರಸ್ಪರ ಕೀಟಲೆಯಾಡಿ, ಛೇಡಿಸುತ್ತ ಕಾಫಿ ಮುಗಿಸಿ ಮೇಲೆದ್ದಾಗ ನಾಲ್ಕು ಗಂಟೆಯ ಆಸುಪಾಸಿನ ಸಮಯ. ಇಬ್ಬರೂ ಲಿಪ್ಟಿನಿಂದ ಹೊರಬಂದು ಆಫೀಸಿನ ಒಳಗೆ ಹೋಗುವ ಹೊತ್ತಿಗೆ ಸರಿಯಾಗಿ ಎದುರಾದ ಕುನ್. ಕಾ ಇವರಿಬ್ಬರನ್ನು ಕಾಣುತ್ತಿದ್ದಂತೆ, ' ಪನ್ ಹಾ..ಪನ್ ಹಾ..(ಪ್ರಾಬ್ಲಮ್, ಪ್ರಾಬ್ಲಮ್)...ಸಿಸ್ಟಂ ಡೌನ್..ಸಿಸ್ಟಂ ಡೌನ್ ' ಎಂದು ಆತಂಕದಲ್ಲಿ ನುಡಿದಾಗ ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು - ಆಯಾಚಿತವಾಗಿ ಮೊಗದಲ್ಲರಳಿದ ನಗುವನ್ನು ಬಲು ಕಷ್ಟದಿಂದ ನುಂಗಲೆಣಿಸುತ್ತ. ತಾನು ತಿಂಗಳ ಕೊನೆಯಲ್ಲಿ ಸಿಸ್ಟಮ್ಮಿನ ತೊಂದರೆಯೆಂದು ಹೇಳಿದರೆ, ಅದಕ್ಕೆ ಗಾಬರಿಯಾಗುವ ಬದಲು, ಇವರೇಕೆ ಪರಸ್ಪರ ಮುಖ ನೋಡಿಕೊಂಡು ನಗುತ್ತಿದ್ದಾರೆಂದು ಅರಿವಾಗದೆ ಅವರಿಬ್ಬರನ್ನು ವಿಚಿತ್ರವಾಗಿ ದಿಟ್ಟಿಸಿ ನೋಡುತ್ತಲೆ, ತನ್ನ ಪಾಡಿಗೆ ತಾನು ಹೊರಗೆ ಹೋಗಿದ್ದಳು ಕುನ್. ಕಾ.
ಶ್ರೀನಾಥ ಸೀಟಿಗೆ ಬಂದು ನೋಡುತ್ತಿದ್ದಂತೆ ಮೊದಲಿಗೆ ಕಣ್ಣಿಗೆ ಬಿದ್ದದ್ದು ಶ್ರೀನಿವಾಸ ಪ್ರಭುವಿನ ಮಿಂಚಂಚೆ; ಇದ್ದಕ್ಕಿದ್ದಂತೆ ಡೇಟಾ ಬೇಸಿನ ಮೇಲುಂಟಾದ ವಿಪರೀತ ಒತ್ತಡದಿಂದಾಗಿ ಸಿಸ್ಟಂ ಕ್ರಾಶ್ ಆಗಿ ಹೋಗಿದೆಯೆಂದು, ಅದನ್ನು ಕ್ಷಿಪ್ರ ಗತಿಯಲ್ಲಿ ಸರಿಪಡಿಸಲು ಸಿಂಗಪುರದ ತಾಂತ್ರಿಕ ತಂಡ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಿದೆಯೆಂದು 'ಅರ್ಜೆಂಟ್ ಅಂಡ್ ಇಂಪಾರ್ಟೆಂಟ್' ಎಂದಿದ್ದ ತಲೆ ಬರಹದಡಿಯಲ್ಲಿ ವಿವರಿಸಲಾಗಿತ್ತು ! ಇದೀಗ ತಾನೆ ಹೊಸದಾಗಿ ಜತೆಗೂಡಿದ ಥಾಯ್ಲ್ಯಾಂಡಿನ ಬಳಕೆದಾರರ ಹೊರೆಯು ಸೇರಿದ ಕಾರಣದಿಂದ ಈ ಹೆಚ್ಚಿದ ಭಾರದ ಸ್ಥಿತಿ ಉಂಟಾಗಿರಬಹುದೆಂದು, ತಿಂಗಳ ಕೊನೆಯಲ್ಲಾದ ಈ ತೊಡಕು ಮಿಕ್ಕ ದೇಶಗಳ ಬಳಕೆದಾರರನ್ನು ಸಂಕಟಕ್ಕೆ ಸಿಲುಕಿಸಿದ ಕಾರಣಕ್ಕೆ ಕ್ಷಮೆ ಯಾಚಿಸುತ್ತ, ಶೀಘ್ರದಲ್ಲೆ ಪರಿಹರಿಸುವ ಮತ್ತು ನಡುನಡುವೆ ಪರಿಸ್ಥಿತಿಯ ಪ್ರಗತಿಯ ಮಾಹಿತಿ ನೀಡುವ ಭರವಸೆಯೊಂದಿಗೆ ಆ ಸುದ್ದಿ ಕೊನೆಯಾಗಿತ್ತು. ಪಕ್ಕದಲ್ಲೆ ನಿಂತು ಜತೆಯಲ್ಲೆ ಓದುತ್ತಿದ್ದ ಸೌರಭ ದೇವನು, ಓದಿ ಮುಗಿಸಿದ ನಂತರ ಮತ್ತೇನು ಎಂಬಂತೆ ಶ್ರೀನಾಥನ ಮುಖ ನೋಡಿದ, 'ನಾವು ಊಹಿಸಿದಂತೆಯೆ ಆಯ್ತಲ್ಲ..?' ಎನ್ನುವ ಭಾವದಲ್ಲಿ ತುಟಿಯುಬ್ಬಿಸುತ್ತ. ಇಂತಹ ಪರಿಸ್ಥಿತಿಯಲ್ಲಿರಬೇಕಾದ ಕಳವಳ, ಕಾತರ, ಉದ್ವೇಗಗಳ ಬದಲು, ಅದಕ್ಕೆಂದೆ ಮಾನಸಿಕವಾಗಿ ಸಿದ್ದರಾಗಿದ್ದ ಕಾರಣ ನಿರಾತಂಕವಾಗಿ ನಿರಾಳವಾಗಿರುವ ಮನಸ್ಥಿತಿ ಅವರಿಬ್ಬರನ್ನು ಆವರಿಸಿಕೊಂಡಿತ್ತು. ಆ ಸನ್ನಿವೇಶ, ಪರಿಸ್ಥಿತಿಯೇನೊ ನಿರೀಕ್ಷಿಸಿದ್ದೆ ಆದರೂ ಆ ಭಾವದ ಅಭಿವ್ಯಕ್ತಿ ಬಹಿರಂಗವಾಗಿ ಪ್ರಕಟಗೊಳ್ಳದ ಹಾಗೆ ನೋಡಿಕೊಳ್ಳಬೇಕಿತ್ತು. ಸುತ್ತಮುತ್ತಲ ಹಿತಶತೃ ಸೀಐಡಿಗಳು ತಮ್ಮ ಪ್ರತಿ ಚಲನವಲನ ಪ್ರತಿಕ್ರಿಯೆಗಳನ್ನು ಗಮನಿಸುತ್ತ, ಆಗ್ಗಾಗ್ಗೆ ಸುದ್ದಿ ರವಾನಿಸುತ್ತಿರಬಹುದೆಂಬ ಅನುಮಾನದ ಅರಿವು ಸಹ ಜಾಗೃತವಾಗಿ, ತಮಗುಂಟಾದ ಆಘಾತ, ಆತಂಕವನ್ನು ಪ್ರಚುರ ಪಡಿಸಲೊ ಎಂಬಂತೆ ಗಟ್ಟಿಯಾದ ದನಿಯಲ್ಲಿ ಅದರ ಕುರಿತು ಪರಸ್ಪರ ಚರ್ಚಿಸತೊಡಗಿದರು - ಆಕಾಶವೆ ತಲೆಯ ಮೇಲೆ ಬಿತ್ತೇನೊ ಎಂಬ ಭಾವವನ್ನು ದನಿಯಲ್ಲಿ ಪ್ರತಿಬಿಂಬಿಸಲು ಹೆಣಗಾಡುತ್ತ. ಜತೆಗೆ ಅದೆ ಮಿಂಚಂಚೆಯನ್ನು ತನ್ನ ಪ್ರಾಜೆಕ್ಟಿನ ತಂಡದ ಮಿಕ್ಕ ಸದಸ್ಯರಿಗೆಲ್ಲ ಮುಂತಳ್ಳುತ್ತ, ಅದರ 'ಪರಿಣಾಮ ಮತ್ತು ಹೊಡೆತದ' ಗಹನತೆಗಳನ್ನು ಚರ್ಚಿಸುವ ಸಲುವಾಗಿ ತಕ್ಷಣವೆ ಎಮರ್ಜೆನ್ಸಿ ಮೀಟಿಂಗೊಂದನ್ನು ಕರೆದ ಶ್ರೀನಾಥ. ಅದನ್ನು ಕಳಿಸಿದ ಅರೆಕ್ಷಣದಲ್ಲೆ ಶ್ರೀನಿವಾಸ ಪ್ರಭುವಿನ ಮಿಂಚೋಲೆಗೆ ಮಾರುತ್ತರವಾಗಿ ಕುನ್. ಸೋವಿಯ ಮಾರುತ್ತರವೂ ಬಂದಾಗ ಎಲ್ಲವೂ ತಾವು ಹಾಕಿದ್ದ 'ಸ್ಕ್ರಿಪ್ಟಿ'ಗನುಸಾರವಾಗಿಯೆ ನಡೆಯುತ್ತಿರುವುದನ್ನು ಕಂಡು ತುಟಿಯಂಚಿನಲ್ಲೆ ನಗುತ್ತ ಸೌರಭನತ್ತ ನೋಡಿದ್ದ ಶ್ರೀನಾಥ. ಮೊದಲೆ ಚರ್ಚಿಸಿದ್ದಂತೆ ಕುನ್. ಸೋವಿ ತಿಂಗಳ ಕೊನೆಯಲ್ಲಿ ಸಿಸ್ಟಂ ಇಲ್ಲದಿದ್ದರೆ ಟರ್ನೋವರಿಗೆ ಭಾರಿ ಹೊಡೆತ ಬೀಳಬಹುದಾದ ಸಾಧ್ಯತೆಗಳಿರುವುದರಿಂದಾಗಿ ಆದಷ್ಟು ಬೇಗನೆ ಪರಿಸ್ಥಿತಿಯ ದುರಸ್ತಿ ಮಾಡಬೇಕೆಂದು ಕೋರುತ್ತಲೆ ಸ್ಥಳೀಯ ಮ್ಯಾನೇಜ್ಮೆಂಟಿನ ಮತ್ತು ರೀಜನಲ್ ಟಾಪ್ ಮ್ಯಾನೇಜ್ಮೆಂಟಿನ ಗಣ್ಯರನ್ನೆಲ್ಲ ಸಿ.ಸಿ. ಕಾಪಿಯಲ್ಲಿ ಸೇರಿಸಿ ಮೇಯಿಲ್ ಕಳಿಸಿದ್ದ.
ನಿಜ ಹೇಳಬೇಕೆಂದರೆ ಶ್ರೀನಿವಾಸ ಪ್ರಭು ಮಿಂಚಂಚೆಯಲ್ಲಿ ನೀಡಿದ್ದ ಕಾರಣ ತೀರಾ ಕ್ಷುಲ್ಲಕ ಮತ್ತು ಹಾಸ್ಯಾಸ್ಪದವಾಗಿತ್ತು. ಏಕೆಂದರೆ, ಪ್ರಾಜೆಕ್ಟು ಗೋಲೈವಿಗೆ ಕೆಲವು ವಾರ, ತಿಂಗಳುಗಳಿಗೂ ಮೊದಲೆ ಹೊಸದಾಗಿ ಸರ್ವರಿಗೆ ಸೇರ್ಪಡೆಯಾಗುವ ಪ್ರತಿಯೊಂದು ಅಂಶವನ್ನು ಕೂಲಂಕುಶವಾಗಿ ಪರಿಶೀಲಿಸಿ ಅದರ ಸೂಕ್ತ ಸಲಹುವಿಕೆಗೆ ಬೇಕಾದ ಗಾತ್ರ, ವಿಸ್ತಾರಗಳನ್ನು ಮೊದಲೆ ಲೆಕ್ಕ ಹಾಕಿರುತ್ತಾರೆ - ಗಿಗಾಬೈಟುಗಳ ಲೆಕ್ಕದಲ್ಲಿ. ಹೊಸ ಬಳಕೆದಾರರ ಸಂಖ್ಯೆ, ಯಾವ ಕಾರ್ಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ಬಳಕೆದಾರರು, ಎಷ್ಟು ಹೊಸ ದಾಖಲೆಗಳ (ಡಾಕ್ಯುಮೆಂಟು) ಸೇರ್ಪಡೆಯಾಗಲಿದೆ ಎಂದೆಲ್ಲ ಲೆಕ್ಕ ಹಾಕುವುದಲ್ಲದೆ, ಆ ಸಂಖ್ಯೆ ಪ್ರತಿದಿನ ಬೆಳೆಯುತ್ತ ಹೋಗುವ ಕಾರಣ ಆ ಬೆಳವಣಿಗೆಯ ಗತಿಯನ್ನಾಧರಿಸಿ ಮುಂದೆ ಬೇಕಾಗಬಹುದಾದ ಅಧಿಕಾಂಶ ವಿಸ್ತಾರವನ್ನು ಸೇರಿಸಿ ಲೆಕ್ಕ ಹಾಕುತ್ತಾರೆ. ತಾಂತ್ರಿಕ ಭಾಷೆಯಲ್ಲಿ ಈ ಪ್ರಕ್ರಿಯೆಗೆ 'ಸಿಸ್ಟಂ ಸೈಜಿಂಗ್' ಎಂದು ಕರೆಯುತ್ತಾರೆ. ಈ ಸೈಜಿಂಗಿನ ಕಾರ್ಯಕ್ಕೆ ಅನುಗುಣವಾಗಿ ಬೇಕಾದ ಮಾಹಿತಿಯನ್ನೆಲ್ಲ ಅದಕ್ಕೆಂದೆ ನಿಗದಿಪಡಿಸಿದ್ದ 'ಫಾರಂ' ವೊಂದರಲ್ಲಿ ಶ್ರೀನಾಥನೆ ತುಂಬಿಸಿಕೊಟ್ಟಿದ್ದ, ಪ್ರಾಜೆಕ್ಟಿನ ಆರಂಭದ ದಿನಗಳಲ್ಲೆ. ಹೀಗಾಗಿ, ಈಗ ಹೊಸ ಹೊರೆಯಿಂದ ಸಿಸ್ಟಮ್ ಕ್ರ್ಯಾಶ್ ಡೌನ್ ಆಗಿದೆಯೆಂದರೆ - ಒಂದೊ ಸೈಜಿಂಗನ್ನು ಸರಿಯಾಗಿ ಮಾಡಿಲ್ಲವೆಂದೆ ಅರ್ಥ ಅಥವಾ ಸೈಜಿಂಗೆ ಮಾಡದೆ, ಇದ್ದ ಸಿಸ್ಟಂ ಸಂಪನ್ಮೂಲಗಳೆ ಸಾಕೆಂದು ನಿರ್ಧರಿಸಿ 'ರಿಸ್ಕು ತೆಗೆದುಕೊಂಡೆ' ಮುಂದುವರೆದಿರಬೇಕು; ಒಟ್ಟಾರೆ ಎಲ್ಲೊ ಲೆಕ್ಕಾಚಾರ ತಪ್ಪಾಗಿರುವುದಂತೂ ನಿಜ. ಅದೊಂದೆ ಅಲ್ಲದೆ ಟೆಸ್ಟಿಂಗಿನ ವೇಳೆಯಲ್ಲೂ ಹೆಚ್ಚಿನ ಹೊರೆಯನ್ನು ತಾಳುವ ಶಕ್ತಿ ಸಿಸ್ಟಮ್ಮಿಗಿದೆಯೆ ಇಲ್ಲವೆ ಎಂದು ಪರಿಶೀಲಿಸುತ್ತಾರೆ. ಆಗ ವಾಸ್ತವದ ಹೊರೆಯನ್ನು ನೈಜವಾಗಿ ಉಂಟಾಗಿಸಿ ನೋಡುವ ಸಾಧ್ಯತೆ ಇಲ್ಲದ ಕಾರಣ ಕೆಲವು 'ಹುಸಿ ನೈಜ(ಸಿಮುಲೇಶನ್)' ಸನ್ನಿವೇಶಗಳನ್ನು ಸೃಷ್ಟಿಸಿ ಪರೀಕ್ಷಿಸಿ ನೋಡುತ್ತಾರೆ. ಉದಾಹರಣೆಗೆ ಸಿಸ್ಟಮ್ಮಿನ ತಾಕತ್ತನ್ನು ಅಳೆಯಲು ಒಂದೆ ಬಾರಿಗೆ ನೂರಾರು ಟ್ರಾನ್ಸಾಕ್ಷನ್ನುಗಳನ್ನು ಕೃತಕವಾಗಿ 'ಫೈರ್' ಮಾಡಿ ಸಿಸ್ಟಮ್ಮಿಗೆ ತಡೆದುಕೊಳ್ಳುವ ಶಕ್ತಿಯಿದೆಯೆ, ಇಲ್ಲವೆ ಎಂದು ಪರೀಕ್ಷಿಸಿರುತ್ತಾರೆ. ಪ್ರಾಜೆಕ್ಟು ಮ್ಯಾನೇಜರನಾಗಿ ಇದನ್ನೆಲ್ಲಾ ಮಾಡಿ, ನಂತರ ಕಾರ್ಯ ಮುಗಿಸಿದ ದಾಖಲೆಯ ರಿಪೋರ್ಟ್ ಕಳಿಸಬೇಕೆಂದು ಶ್ರೀನಾಥನೆ ಆ ಪ್ರಕ್ರಿಯೆಗೆ ಚಾಲನೆ ನೀಡಿದ್ದ. ಅದರ ಪ್ರಕಾರವೆ ಎಲ್ಲವನ್ನು ಮಾಡಿ ಮುಗಿಸಿ ಎಲ್ಲಾ ಸರಿಯಾಗಿದೆಯೆಂಬ ವರದಿಯನ್ನು ತರಿಸಿದ್ದ ಸಿಂಗಪುರದಿಂದ - ಆ ಸರ್ವರ ವಿಭಾಗದ ಜವಾಬ್ದಾರಿಯ ಹೊಣೆ ಹೊತ್ತಿದ್ದ 'ಸೈಮನ್ ಕೋಂಗ್'ನಿಂದ. ಈಗ ನೋಡಿದರೆ ಅವನ ಬಾಸ್ ಶ್ರೀನಿವಾಸ ಪ್ರಭು ಹೊಸತಿನ ಹೊರೆ ತಾಳಲಾಗದೆ ಸಿಸ್ಟಮ್ ಕುಸಿಯಿತೆಂದು ಕಾರಣ ಬರೆದಿದ್ದಾನೆ..ಎಲ್ಲಾ ಬರಿ ಬೊಗಳೆ, ನಾಟಕವೆ..!
ಎಮರ್ಜೆನ್ಸಿ ಮೀಟಿಂಗಿನಲ್ಲೂ ಚರ್ಚೆಯಾಗಿ ಎಲ್ಲರೂ 'ಸದಾಸರ್ವದ ಸನ್ನದ್ದ' ಮುದ್ರೆಯಲ್ಲಿ ಸಿದ್ದರಿರಬೇಕೆಂಬ ಸೂಚನೆ ಕೊಟ್ಟು ಎಲ್ಲರ ಸಂಪರ್ಕ ಸಂಖ್ಯೆ ಮತ್ತು ವಿಳಾಸಗಳನ್ನು ಸಂಗ್ರಹಿಸಿ ಒಟ್ಟುಗೂಡಿಸಿಕೊಂಡ ಶ್ರೀನಾಥ. ತಿಂಗಳ ಕೊನೆಯಾದ ಕಾರಣ ಅಗತ್ಯ ಬಿದ್ದರೆ ರಾತ್ರಿಯ ಪಾಳಿಗೂ ಸಿದ್ದವಾಗಿರಬೇಕೆಂದು ಸೂಚನೆ ಕೊಟ್ಟು, ಈ ಪರಿಸ್ಥಿತಿಯಲ್ಲಿ ಇನ್ವಾಯ್ಸಿಂಗ್ ಸಾಧ್ಯವಿರದ ಪರಿಸ್ಥಿತಿಯಿಂದಾಗಿ ಸೇಲ್ಸ್ ಟರ್ನೋವರಿಗೆ ವ್ಯತಿರಿಕ್ತ ಪರಿಣಾಮವುಂಟಾಗಬಹುದಾದ ಕಾರಣ ಎಲ್ಲರೂ ಸಮರೋಪಾದಿಯ ಶೀಘ್ರ ಪ್ರತಿಕ್ರಿಯೆಗೆ ಮಾನಸಿಕವಾಗಿ ಸಿದ್ದರಾಗಿರಬೇಕೆಂದು ಸೂಚನೆ ನೀಡಿ ಮೀಟಿಂಗ್ ಮುಗಿಸಿದ್ದ. ಸಿಸ್ಟಮಿಲ್ಲದೆ ಮತ್ತೇನೂ ಆಗುವಂತಿಲ್ಲದ ಕಾರಣ ಬರಿ ಕಾಯುವುದರ ವಿನಃ ಇನ್ನೇನು ಮಾಡುವಂತಿರಲಿಲ್ಲ. ಆ ದಿನ ಆಗಲೆ ಸಂಜೆಯಾಗುತ್ತಿದ್ದ ಕಾರಣ ಇನ್ನು ಸಿಸ್ಟಮ್ಮು ಬರುವುದೊ, ಇಲ್ಲವೊ ಎಂಬ ಸಂದಿಗ್ದ ಸ್ಥಿತಿಯಲ್ಲಿ ಕಾಯುತ್ತ ಕೂರಲಾಗದೆ ಸುಮಾರು ಜನರೆಲ್ಲ ಮಾಮೂಲಿ ಹೊತ್ತಿಗೆ ಮೊದಲೆ ಮನೆಗೂ ಹೊರಟುಬಿಟ್ಟಿದ್ದರು. ಹಿಂದಿನ ಈ ರೀತಿಯ ಸಂದರ್ಭಗಳಲ್ಲೆಲ್ಲ ಸಿಸ್ಟಂ ವಾಪಸ್ಸು ಬಂದ ಮೇಲೆ ವಿಸ್ತೃತ ಅವಧಿಯ 'ಓವರ್ ಟೈಮ್' ಮಾಡಬೇಕಾದ ಅಗತ್ಯ ಬೀಳುವ ಕಾರಣ, ಈಗ ಅಪರೂಪಕ್ಕೆ ಸಿಕ್ಕ ಮುಕ್ತ ಸಮಯವನ್ನು ವೈಯಕ್ತಿಕ ಬಳಕೆಗೆ ಸದುಪಯೋಗಪಡಿಸಿಕೊಳ್ಳುವ ಹವಣಿಕೆ ಅವರದಾಗಿತ್ತು. ವೇರ್ಹೌಸಿನಲ್ಲೂ ಇದೆ ಸ್ಥಿತಿಯಿಂದಾಗಿ, ಹೊತ್ತಿಗೆ ಮುನ್ನ ಎಲ್ಲರೂ ಹೊರಟುಬಿಡುವ ಸಾಧ್ಯತೆಯ ನೆನಪಾಗಿ ತಕ್ಷಣವೆ ಕುನ್. ಸೋವಿಗೆ ಪೋನಾಯಿಸಿದ ಶ್ರೀನಾಥ. ಅದೃಷ್ಟವಶಾತ್ ಇನ್ನೇನು ಹೊರಡುವುದರಲ್ಲಿದ್ದ ಕುನ್. ಸೋವಿ, ಕೈಗೆ ಸಿಕ್ಕಿದ್ದರಿಂದ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಾಮರ್ಶಿಸಲು ಸಾಧ್ಯವಾಯ್ತು. ಮಿಕ್ಕೆರಡು ದಿನಗಳಲ್ಲಿ ಕೇವಲ ಒಂದೆರಡು ಗಂಟೆ ಸಿಸ್ಟಂ ಸಿಕ್ಕರೂ ಸಾಕು, ಮಿಕ್ಕೆಲ್ಲವನ್ನು ನಿಭಾಯಿಸಬಹುದೆಂದು ಮತ್ತೆ ಭರವಸೆ ಕೊಟ್ಟಿದ್ದ ಕುನ್. ಸೋವಿ. ಅಲ್ಲದೆ ಪ್ಲಾನಿಗನುಸಾರವಾಗಿ ಸಿಸ್ಟಮಿಲ್ಲದೆ ನಡೆಯಬಹುದಾದ ಕೆಲಸಗಳೆಲ್ಲವೂ ಅಂದೂ ಸಹ ಅಭಾಧಿತವಾಗಿ ಮುಂದುವರೆದಿಹ ಕಾರಣ ಚಿಂತಿಸುವ ಅಗತ್ಯವಿಲ್ಲವೆಂದು ಸಹ ಮನವರಿಕೆ ಮಾಡಿಕೊಟ್ಟಿದ್ದ. ಇಷ್ಟೆಲ್ಲಾ ಆದ ಮೇಲೆ ತಾನೂ ಕೂಡ ಕಾಯುವುದಲ್ಲದೆ ಮತ್ತೇನೂ ಮಾಡುವಂತಿಲ್ಲವೆಂದರಿವಾಗಿ, ಬಹುದಿನಗಳಿಂದ ಬಾಕಿಯಿದ್ದ ಹಳೆಯ ಮಿಂಚಂಚೆಯನ್ನೆಲ್ಲ ಸುವ್ಯವಸ್ಥಿತಗೊಳಿಸ ಬೇಕಾಗಿದ್ದ ಕಾರ್ಯದ ನೆನಪಾಗಿ, ಮೇಯಿಲ್ ಫೋಲ್ಡರಿನಲಿದ್ದ ಕಡತಗಳನ್ನೆಲ್ಲ ಒಂದೊಂದಾಗಿ ಕೆದಕಿ, ಬೇಡದ್ದನೆಲ್ಲಾ ಡಿಲೀಟು ಮಾಡುತ್ತ ಮಿಕ್ಕಿದ್ದನ್ನೆಲ್ಲ ವ್ಯವಸ್ಥಿತವಾಗಿರುವಂತೆ ಸಂಯೋಜಿಸತೊಡಗಿದ. ಆ ಪ್ರಕ್ರಿಯೆಯಲ್ಲಿ ಮುಳುಗಿ ಹೊತ್ತು ಹೋಗಿದ್ದೆ ಗೊತ್ತಾಗದಂತೆ ತಲ್ಲೀನನಾಗಿದ್ದವನಿಗೆ, ಸುಮಾರು ಹತ್ತು ಗಂಟೆಯ ಹೊತ್ತಿಗೆ ಬಂದ ಶ್ರೀನಿವಾಸ ಪ್ರಭುವಿನ ಮತ್ತೊಂದು ಮಿಂಚಂಚೆ ವಾಸ್ತವ ಲೋಕಕ್ಕೆಳೆದುಕೊಂಡು ಬಂದಿತ್ತು. ಅಂದುಕೊಂಡಿದ್ದಂತೆ, ಮತ್ತೇನು ವಿಶೇಷ ಸುದ್ದಿಯಿರಲಿಲ್ಲ ಅದರಲ್ಲಿ - ಇಡಿ ತಂಡ ಪ್ರಯತ್ನಿಸಿದರೂ ಇನ್ನೂ ಸಿಸ್ಟಂ ಸರಿಪಡಿಸಲಾಗಿಲ್ಲವೆಂಬುದರ ಹೊರತಾಗಿ. ಅಲ್ಲದೆ ಸರಿಪಡಿಸಲು ಹೆಚ್ಚಿನ ನೈಪುಣ್ಯದ ಅಗತ್ಯವಿರುವ ಕಾರಣ ಮರುದಿನ ಸರ್ವರು ಹಾರ್ಡ್ ವೇರ್ ಮತ್ತು ಅಪ್ಲಿಕೇಶನ್ ಸಿಸ್ಟಮ್ಮಿನ ಜ್ಞಾನ - ಎರಡರ ಪರಿಣಿತಿಯೂ ಇರುವ ತಜ್ಞ ಸಿಬ್ಬಂದಿ ಬರುವತನಕ ಕಾಯಬೇಕಾದ ಕಾರಣ ಆ ದಿನ ಸಿಸ್ಟಂ ಮತ್ತೆ ಬರುವುದಿಲ್ಲವೆಂದು ವಿಷಾದಿಸಿದ್ದ ಸುದ್ದಿಯಿತ್ತು. ಮರುದಿನ ಸಾಧ್ಯವಾದಷ್ಟು ಬೇಗ ಸಿಸ್ಟಮನ್ನು ಜೀವಂತಗೊಳಿಸಲು ಪ್ರಯತ್ನಿಸುವುದಾಗಿ ಹೇಳಿ ಮಿಂಚಂಚೆ ಮುಗಿಸಿದ್ದ. ಹೆಚ್ಚು ಕಡಿಮೆ ಇದೆ ಉತ್ತರದ ನಿರೀಕ್ಷೆಯಲ್ಲಿದ್ದ ಶ್ರೀನಾಥನಿಗೆ ಇನ್ನು ಹೇಗೆ ಹೆಣಗಾಡಿದರೂ ಸಿಸ್ಟಮ್ ಮತ್ತೆ ಕುದುರಿಕೊಳ್ಳುವ ಹೊತ್ತಿಗೆ ಕನಿಷ್ಟವೆಂದರೂ ಮರುದಿನ ಸಂಜೆಯ ಹೊತ್ತಿಗೆ ಮಾತ್ರ ಎಂದು ಖಚಿತವಾಗಿಹೋಯ್ತು - ತಿಂಗಳ ಕೊನೆಯ ಒಂದು ದಿನ ಮಾತ್ರ ಬಾಕಿಯುಳಿಸಿ.
ಮರುದಿನ ಬೆಳಗಿನ ಹೊತ್ತಿಗೆ ವಿಶೇಷ ತಂತ್ರಜ್ಞನ ಆಗಮನವಾಗಿ ತಜ್ಞ ಗಮನದ ತರುವಾಯವೂ ಅದೇನು ತೊಡಕೆಂದು ಅರಿವಾಗುವಷ್ಟರಲ್ಲಿ ಅರ್ಧ ದಿನವೆ ಕಳೆದುಹೋಗಿತ್ತು. ಸಾಲದ್ದಕ್ಕೆ ತಜ್ಞರಿಗಾದರೂ ಏಕಾಏಕಿ ಸಮಸ್ಯೆಯ ಮೂಲಕಾರಣ ಸ್ಪಷ್ಟವಾಗಿ ತಿಳಿಯದ ಕಾರಣ, ಪರಿಹಾರದ ದಾರಿ ಸುಲಭದ್ದಾಗಿರದೆ ಊಹೆ ಮತ್ತು ಅನುಭವಗಳು ಸಂಗಮಿಸಿದ ಅಸ್ಪಷ್ಟತೆಯಲ್ಲೆ ಕಾರ್ಯ ನಿರ್ವಹಿಸಬೇಕಾಗಿತ್ತು. ಕೊನೆಗೆ ಬೇರಾವ ದಾರಿಯೂ ಕಾಣದೆ ಹಂತಹಂತವಾಗಿ ಸಿಸ್ಟಮ್ಮನ್ನು ಕಾಲರೇಖೆಯಲ್ಲಿ ಅದರ ಹಿಂದಿನ ಘಟ್ಟಕ್ಕೆ ಒಯ್ಯುತ್ತ, ಅದು ಪರಿಪೂರ್ಣವಾಗಿ, ಸಮರ್ಪಕವಾಗಿ ವರ್ತಿಸುತ್ತಿದ್ದ ಕಾಲಘಟ್ಟಕ್ಕೆ ತಂದು ನಿಲ್ಲಿಸಿದ ನಂತರ ಮತ್ತೆ ಹಂತಹಂತವಾಗಿ ನಂತರದ ಕಾಲ ಘಟ್ಟಗಳ ತುಣುಕುಗಳನ್ನು ಬ್ಯಾಕಪ್ಪಿನ ಮೂಲಕ ಜೋಡಿಸತೊಡಗಿದರು, ಒಂದೊಂದೆ ಹಂತದ ಹೆಜ್ಜೆಗಳಲ್ಲಿ. ಹೀಗೆಲ್ಲ ಹೆಣಗಾಡಿ ಯಾವ ಹಂತದಲ್ಲಿ ಸಿಸ್ಟಮ್ ಫೆಯಿಲ್ ಆಯಿತೆಂದು ಗೊತ್ತಾದರೂ, ಯಾಕೆ ಆಯ್ತೆಂಬ ಸುಳಿವು ಸಿಗಲಿಲ್ಲ. ಆ ಅವಸರದ ಹೊತ್ತಿನಲ್ಲಿ ಅಷ್ಟೆಲ್ಲ ವಿಶ್ಲೇಷಣೆ ಮಾಡಿ ಕಂಡು ಹಿಡಿಯುವ ಸಮಯವೂ ಇರದ ಕಾರಣ ಮೊದಲು ಸಿಸ್ಟಮ್ ಫಿಕ್ಸ್ ಮಾಡಿ ರಿಸ್ಟೋರು ಮಾಡುವತ್ತ ಗಮನ ಹರಿಸತೊಡಗಿದಾಗ ಮಧ್ಯಾಹ್ನ ಮೂರುಗಂಟೆಯ ಹೊತ್ತಾಗಿ ಮಿಕ್ಕೆರಡು ದೇಶಗಳ ಸಿಸ್ಟಮ್ಮು ಕ್ಲೈಂಟುಗಳು ಮಾಮೂಲಿನ ರೀತಿ ಕೆಲಸ ಮಾಡುವ ಸ್ಥಿತಿ ತಲುಪಿದರೂ, ಥಾಯಿಲ್ಯಾಂಡಿನ ಸಿಸ್ಟಂ ಕ್ಲೈಂಟು ಏನೊ ಬಲವಾದ ತೊಡಕಿಗೆ ಸಿಕ್ಕಂತೆ ಆಟವಾಡಿಸತೊಡಗಿತು. ತಿಂಗಳ ಕೊನೆಯ ಒತ್ತಡದ ಕಾರಣ ಆ ತಂತ್ರಜ್ಞನ ಮೇಲೂ ವಿಪರೀತ ಒತ್ತಡ ಹೇರಲೆತ್ನಿಸಿದರೂ, ಕೊನೆಗೆ ಪರಿಹಾರ ಕಾಣದ ಸಮಸ್ಯೆಗೆ ಬೇಸತ್ತ ಆತ ಈಗ ಅವಸರದಲ್ಲಿ ಇದನ್ನು ನಿವಾರಿಸಲಾಗದು, ಏನಿದ್ದರೂ ತಿಂಗಳ ಕೊನೆಯಾದ ನಂತರ ವಾರಾಂತ್ಯದಲಷ್ಟೆ ನೋಡಿ ದುರಸ್ತಿ ಮಾಡಬಹುದು ಎಂದು ತಲೆಯಾಡಿಸಿಬಿಟ್ಟ ! ಆ ಸ್ಥಿತಿಯುಂದುಂಟಾಗಬಹುದಾದ ಅಲ್ಲೋಲಕಲ್ಲೋಲ್ಲತೆಯ ಅರಿವಿದ್ದ ಸಿಂಗಪುರ ತಾಂತ್ರಿಕ ತಂಡ ಅವನನ್ನು ಕಾಡಿ, ಬೇಡಿ, ಒದ್ದಾಡಿ ಕೊನೆಗೆ ಅವನೊಂದು ತಾತ್ಕಲಿಕ ಪರಿಹಾರ ಒದಗಿಸುವಂತೆ ಬೇಡಿಕೊಂಡಿದ್ದರು. ಅದೇನು ಮಾಡಿದನೊ, ಅದೆಂತು ಮಾಡಿದನೊ - ಕೊನೆಗೆ ರಾತ್ರಿಯ ಹೊತ್ತಿಗೆ ಥಾಯ್ಲ್ಯಾಂಡಿನ ಸಿಸ್ಟಮ್ ಕೂಡ ಕುದುರಿಕೊಂಡಂತೆ ಮೇಲೆದ್ದಿತ್ತು...ಆದರೆ ಘನಾತಿಘನ ನಿಧಾನಗತಿಯ ರೆಸ್ಪಾನ್ಸಿನಲ್ಲಿ! ಒಂದು ಕಮ್ಯಾಂಡು ಕೊಟ್ಟು ಕೀಬೋರ್ಡು ಒತ್ತಿದರೆ ಅದರ ಪ್ರತಿಕ್ರಿಯೆ ಮತ್ತೆ ವಾಪಸಾಗಿ ಪರದೆಯ ಮೂಲಕ ವ್ಯಕ್ತವಾಗಲಿಕ್ಕೆ ನಿಮಿಷಗಟ್ಟಲೆ ಹಿಡಿಯುತ್ತಿತ್ತು. ಪ್ರತಿ ಟ್ರಾನ್ಸಾಕ್ಷನ್ನಿನಲ್ಲಿ ಮೂವತ್ತು ನಲ್ವತ್ತು ಕ್ಲಿಕ್ಕುಗಳು ಇರುವ ಕಾರಣ ಒಂದೊಂದು ಟ್ರಾನ್ಸ್ಯಾಕ್ಷನ್ ಮುಗಿಯಲು ಇಪ್ಪತ್ತರಿಂದ ಮೂವತ್ತು ನಿಮಿಷ ಹಿಡಿಯುತ್ತಿತ್ತು. ಸಾಲದ್ದಕ್ಕೆ ಒಂದೆರಡು ಕ್ಲಿಕ್ಕುಗಳು ಮಾತ್ರ ಮಿಕ್ಕುಇನ್ನೇನು ಮುಗಿಯಿತೆನ್ನುವ ಹೊತ್ತಿಗೆ ಸರಿಯಾಗಿ, ಆ ಟ್ರಾನ್ಸ್ಯಾಕ್ಷನ್ ಹ್ಯಾಂಗ್ ಆದಂತೆ ಆಗಿ ಉಭ-ಶುಭ ಎನ್ನದೆ ಅಲ್ಲೆ ನಿಂತುಬಿಟ್ಟು, ಅದನ್ನು ಅರ್ಧದಲ್ಲೆ ನಿರ್ಜೀವಗೊಳಿಸಿ ಮತ್ತೆ ಮೊದಲಿಂದ ಆರಂಭಿಸಬೇಕಾದ ಪರಿಸ್ಥಿತಿಯು ಹುಟ್ಟಿಕೊಂಡಿತ್ತು. ಆ ಆಮೆ ವೇಗದ ಸಿಸ್ಟಮ್ಮಿನಲ್ಲಿ ಹೆಣಗಾಡಿದ ಎಲ್ಲರೂ ಪರದೆಯ ಮುಂದೆ ಕಾಯಬೇಕಾದ ಅಸಹನೀಯ ಅನಿವಾರ್ಯತೆಗೆ ಬೇಸತ್ತು ತಾವೀ ಸ್ಥಿತಿಯಲ್ಲಿ ಕೆಲ ಮಾಡಲಾಗದೆಂದು ಕೈಯಾಡಿಸಿಬಿಟ್ಟಿದ್ದರು..!
ಆ ಸಮಯಕ್ಕೆ ಸರಿಯಾಗಿ ಬಂದ ಶ್ರೀನಿವಾಸ ಪ್ರಭುವಿನ ಮಿಂಚಂಚೆ, ಆಮೆ ಗತಿಯ ಸಿಸ್ಟಮ್ಮನ್ನು ಒದಗಿಸಿಕೊಡುವುದಕ್ಕಿಂತ ಹೆಚ್ಚೇನು ಮಾಡಲಾಗದೆಂದು ಅಸಹಾಯಕತೆ ವ್ಯಕ್ತಪಡಿಸಿ, ಸದ್ಯಕ್ಕೆ ನಿಧಾನಗತಿಯಲ್ಲಾದರೂ ಕೆಲಸ ಮಾಡುತ್ತಿರುವ ಕಾರಣ ಅದನ್ನೆ ಬಳಸಿ ಸಾಧ್ಯವಾದಷ್ಟು ಮಟ್ಟಿಗೆ ನಿಭಾಯಿಸಿಕೊಳ್ಳಬೇಕೆಂದು ಬರೆದಿದ್ದ. ಒಟ್ಟಾರೆ ತನ್ನ ಮಟ್ಟಿಗೆ ಮಾಡಬೇಕಾದ್ದೆಲ್ಲ ಮಾಡಿಯಾಯ್ತು ಇನ್ನು ಮಿಕ್ಕಿದ್ದು ತನ್ನ ಕೈಲಿಲ್ಲ ಎನ್ನುವಂತಿತ್ತು ಅದರ ಭಾವ. ಅದರ ಜತೆಗೆ ಹೊರಗಿನವರ ಕಣ್ಣಿಗೆ ನಿಧಾನಗತಿಯಲ್ಲಾದರೂ ಹೊತ್ತು ಮೀರಿ ಹೋಗುವ ಮುನ್ನ ಸಿಸ್ಟಂ ಒದಗಿಸಿ ಕೊಟ್ಟನೆಂಬ ಅಭಿಪ್ರಾಯ ಬರಿಸುವಂತೆ ಇತ್ತು. ಅಲ್ಲಿಂದಾಚೆಗೆ ಟರ್ನೋವರಿನ ಗುರಿ ಮುಟ್ಟದಿದ್ದರೂ ಕೂಡ ಅದರ ತೆಗಳಿಕೆಯನ್ನು ಸಿಸ್ಟಮ್ಮಿನ ಹೆಗಲಿನಿಂದ ಪ್ರಾಜೆಕ್ಟಿನ ಹೆಗಲಿಗೆ ಸುಲಭವಾಗಿ ತಗುಲಿಸಿಬಿಡಬಹುದಿತ್ತು! ಕೊನೆಗೂ ಏನೊ ಮಾಡಿ ತನಗೆ ಬೇಕಾದ ಫಲಿತಾಂಶದ ಪರಿಸರವನ್ನು ನಿರ್ಮಿಸಿಕೊಂಡೆ ಬಿಟ್ಟನಲ್ಲ ? ಎನಿಸಿ ಮತ್ತಷ್ಟು ಖೇದವಾಗುವ ಹೊತ್ತಲ್ಲೆ ಕುನ್. ಸೋವಿಯ ಪೋನ್ ಬಂದಿತ್ತು - ಈ ನಿಧಾನ ಗತಿಯ ಸಿಸ್ಟಮ್ಮಿನಲ್ಲಿ ಒಂದೆ ಒಂದು ಪೋಸ್ಟಿಂಗ್ ಕೂಡ ಮಾಡಲು ಸಾಧ್ಯವಾಗಲಿಲ್ಲ ಎಂದು. ಆಫೀಸಿನಲ್ಲಿ ಹಾಗೂ ಹೀಗೂ ಹೆಣಗಿ ನಿಧಾನಗತಿಯಲ್ಲಾದರು ಪೋಸ್ಟಿಂಗ್ ಮಾಡಲು ಸಾಧ್ಯವಿತ್ತು. ಆದರೆ ವೇರ್ಹೌಸಿನಲ್ಲಿ ಅದೂ ಸಾಧ್ಯವಾಗಿರಲಿಲ್ಲ. ಅದೇಕೆಂದು ಅರಿವಾಗಲಿಕ್ಕೆ ಹೆಚ್ಚು ಹೊತ್ತೇನೂ ಬೇಕಾಗಲಿಲ್ಲ ಶ್ರೀನಾಥನಿಗೆ. ಆಫೀಸಿನಲ್ಲಿರುವ ನೆಟ್ವರ್ಕ್ಕಿನ ಗಮನ-ಗತಿ ವೇರ್ಹೌಸಿಗಿಂತ ಹೆಚ್ಚು ವೇಗವುಳ್ಳದ್ದು. ವೇಹೌಸಿನ ಬ್ಯಾಂಡ್ವಿಡ್ತ್ ತೀರಾ ಕಡಿಮೆಯದಿರುವ ಕಾರಣ ಸಹಜವಾಗಿಯೆ ಅದು ಆಫೀಸಿಗಿಂತಲೂ ನಿಧಾನ ಗತಿಯಲ್ಲಿ ಮಂದವಾಗಿ ಪ್ರತಿಕ್ರಿಯಿಸುತ್ತಿತ್ತು. ಪೋನಿನಲ್ಲಿ ಅವನನ್ನು ಸಮಾಧಾನಿಸಿ ಬೆಳಿಗ್ಗೆ ತಾನೂ, ಸೌರಭನೊಡನೆ ಬಂದು ಏನು ಸಾಧ್ಯತೆಗಳಿವೆಯೆಂದು ನೋಡುವುದಾಗಿ ಸಮಾಧಾನಿಸಿದರೂ ಕುನ್. ಸೋವಿಯ ದನಿಯಲಿದ್ದ ಆತಂಕ ಮರೆಯಾಗಿರಲಿಲ್ಲ. ಹೇಗಾದರೂ ಗುರಿ ಮುಟ್ಟೆ ಮುಟ್ಟುವೆನೆಂದು ಉತ್ಸಾಹದಿಂದ ಹೊರಟವನಿಗೆ ಈ ಪರಿಸ್ಥಿತಿಯ ತೊಡಕು ಅಡ್ಡಗಾಲು ಹಾಕಿದ್ದರ ಜತೆ, ಇನ್ನು ಮಿಕ್ಕುಳಿದದ್ದು ಕೇವಲ ಒಂದೆ ದಿನವೆಂಬ ಒತ್ತಡದ ಬಾಧೆಯೂ ಸೇರಿ ಅವನನ್ನು ಪೂರ್ತಿ ವಿಚಲಿತನನ್ನಾಗಿಸಿಬಿಟ್ಟಂತಿತ್ತು. ತನಗೆ ಧೈರ ಹೇಳಲು ಯಾರಿಲ್ಲದ ಹೊತ್ತಲ್ಲೂ ಕುನ್. ಸೋವಿಗೆ ಹುರಿದುಂಬಿಸುವ ಮಾತಾಡುತ್ತ, ಯಾವುದಕ್ಕೂ ವೇರ್ಹೌಸಿನ ಪರಿಸ್ಥಿತಿಯನ್ನು ವಿವರಿಸಿ ಮತ್ತೊಂದು ಮಿಂಚಂಚೆಯನ್ನು ತಕ್ಷಣವೆ ಕಳಿಸಿಬಿಡಲು ಹೇಳಿ, ಈ ಪರಿಸ್ಥಿತಿಯಿಂದ ಪಾರಾಗಲಿಕ್ಕೆ ಮತ್ತಾವ ದಾರಿಗಳಿವೆಯೆಂಬ ಚಿಂತನೆಯಲ್ಲಿ ತನ್ನನ್ನೆ ತೊಡಗಿಸಿಕೊಂಡು ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟಿದ್ದ ಪ್ರಾಜೆಕ್ಟ್ ಮ್ಯಾನೇಜರ ಶ್ರೀನಾಥ...
(ಇನ್ನೂ ಇದೆ)
_________
Comments
ಉ: ಕಥೆ: ಪರಿಭ್ರಮಣ..(30)
ಪ್ರಭು ಕುತಂತ್ರದ ಬಗ್ಗೆ ಮೇನೇಜುಮೆಂಟಿನವರಿಗೆ ಅನುಮಾನ ಬರುವುದೇ ಇಲ್ಲವೇ? ಮುಂದುವರೆಸಿರಿ.
In reply to ಉ: ಕಥೆ: ಪರಿಭ್ರಮಣ..(30) by kavinagaraj
ಉ: ಕಥೆ: ಪರಿಭ್ರಮಣ..(30)
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಪ್ರಭುವಿನ ಕುತಂತ್ರದ ಬಗೆ ಮ್ಯಾನೇಜುಮೆಂಟಿಗೆ ಅನುಮಾನ ಬರದಿರಲು ಎರಡು ಕಾರಣಗಳಿವೆ - ಅಂದ ಹಾಗೆ ಕಥೆಯಲ್ಲಿ ಮಾತ್ರವಲ್ಲ, ನಿಜವಾದ ಐಟಿ ಜಗತ್ತಿನ ವ್ಯವಹಾರದಲ್ಲೂ ಇದು ಸತ್ಯವೆ!
.
1. ಮೊದಲನೆಯದಾಗಿ ಶ್ರೀನಾಥ ಮತ್ತು ಪ್ರಭು ಇಬ್ಬರೂ ಒಂದೆ ಮಾತೃ ಸಂಸ್ಥೆಗೆ ಸೇರಿದವರು. ಹೀಗಾಗಿ ಸ್ಥಳೀಯ ಮ್ಯಾನೇಜ್ಮೆಂಟು ಇಬ್ಬರಿಗೂ ಕಸ್ಟಮರ ಆದ ಕಾರಣ, ಏನಿದ್ದರೂ ಅವರವರಲ್ಲೆ ಹಲ್ಲು ಮಸೆಯುತ್ತಾರೆಯೆ ಹೊರತು ಅವರ ತನಕ ತಲುಪಬಿಡುವುದಿಲ್ಲ. ಇನ್ನು ಇಬ್ಬರ ನಿಜವಾದ ಬಾಸುಗಳು ದೂರದ ಭಾರತದಲ್ಲಿರುತ್ತಾರೆ. ಇಲ್ಲಿ ದೈನಂದಿನ ನಡೆಯುವುದು ಅವರ ಕಣ್ಣಿಗೆ ಬೀಳುವುದಿಲ್ಲ. ಈ ರೀತಿಯಾ ನೂರಾರು ಜನರನ್ನು ಅವರು ದೂರದಿಂದಲೆ ನಿಭಾಯಿಸಬೇಕಾದ ಕಾರಣ, ತೀರ ಹೆಚ್ಚಿನ ಆಸಕ್ತಿಯೂ ಇರುವುದಿಲ್ಲ. ಅವರಿಗೆ ಯಾವುದೆ ತೊಂದರೆ ಇರದೆ ಬಿಲ್ಲಿಂಗ್ ಆಗುತ್ತಿದ್ದರೆ ಸರಿ!
.
2. ಸ್ಥಳೀಯ ಮ್ಯಾನೇಜ್ಮೆಂಟಿಗೆ ಗೊತ್ತಾಗುವ ಸ್ಥಿತಿಯೆ ಇದ್ದರೂ ಸಹ, ಸಾಮಾನ್ಯವಾಗಿ ಆ ಮಟ್ಟದ ಉನ್ನತಾಧಿಕಾರಿಗಳಿಗೆ ಐಟಿಯ ಬಗ್ಗೆ ಅಷ್ಟೊಂದು ತಿಳುವಳಿಕೆ ಅಥವಾ ಆಸಕ್ತಿ ಇರುವುದಿಲ್ಲ. ಐಟಿ ಪರಿಣಿತರು ಹೇಳಿದ್ದನ್ನೆ ನಂಬಬೇಕಾದ ಪರಿಸ್ಥಿತಿಯಾದ ಕಾರಣ ಅವರು ಈ ತಂತ್ರಜ್ಞರ ಸಹಕಾರವನ್ಹೆ ಅವಲಂಬಿಸಿರುತ್ತಾರೆ - ಬಿಜಿನೆಸ್ ತೊಡಕಿಲ್ಲದೆ ಮುಂದುವರೆಯಲು. ಹೀಗಾಗಿ ಅವರಿಗೂ ಅನುಮಾನ ಬರುವುದಿಲ್ಲ. ಅವರು ಚಾಟಿ ಬೀಸುವುದು ಏನಿದ್ದರೂ ಬಿಲ್ಲಿಂಗ್ ಆಗುತ್ತಿಲ್ಲ, ಶಿಪ್ಪಿಂಗ್ ಆಗುತ್ತಿಲ್ಲ ಸಿಸ್ಟಮ್ಮಿನ ಕಾರಣದಿಂದ ಅನ್ನುವ ದೂರು ಬಂದಾಗ ಮಾತ್ರ. ಅದಕ್ಕೆಂದೆ ಶ್ರೀನಾಥ ಹೇಗಾದರೂ ಬಿಲ್ಲಿಂಗ್ / ಟರ್ನೋವರ್ ಗುರಿ ತಪ್ಪದಿರುವಂತೆ ಯತ್ನಿಸುತ್ತಿರುವುದು!
.
3. ಅಲ್ಲದೆ ಪ್ರಭು ಹುಟ್ಟಿಸುತ್ತಿರುವ ಅಡ್ಡಿ ಹೇಗಿದೆಯೆಂದರೆ ಅದರ ದೂಷಣೆ ಶ್ರೀನಾಥನ ಪಾಲಿಗೆ ಬರಬೇಕು, ಆಮೇಲೆ ಅವನದನ್ನು ನಿವಾರಿಸಿ ಹೀರೊ ಅನಿಸಿಕೊಳ್ಳಬೇಕು!