ದೂರಗಳು - ಲಕ್ಷ್ಮೀಕಾಂತ ಇಟ್ನಾಳ
ದೂರಗಳು
ನಿಮಿಷಗಳಲ್ಲಿ ಅಳೆಯುವರು ದೂರವನ್ನು
ತಾಸುಗಳಲ್ಲಿ ಅದೇ ದೂರವನ್ನು ಇನ್ನೊಮ್ಮೆ
ಅಳೆಯುವರೊಮ್ಮೆ ಬಾಣದಂತೆ, ಮತ್ತೊಮ್ಮೆ ಬಿಲ್ಲಿನಂತೆ
ಗೇಣು, ಚೋಟು, ಮೊಳ, ಮಾರುಗಳಲ್ಲಿ ಮತ್ತೆ ಹೆಜ್ಜೆಗಳಲ್ಲೂ ಅದರಳತೆ
ಗಾವುದ, ಫರ್ಲಾಂಗು, ಮೈಲು, ಹರದಾರಿಗಳು ಕಾಣವು ಈಗ
ಖಣ, ವಾರಗಳೂ ಸೀರೆ ಧೋತರಗಳಲ್ಲಿ ಮರೆಯಾಗಿ ಹೋಗಿವೆ
ಜೀವ ಹಿಡಿದಿವೆ ನೂಲು, ಇಂಚು, ಫೂಟುಗಳು ಕಟ್ಟಡಗಳ ಚೌಕಟ್ಟಿನಲ್ಲಿ
ಆಳುತ್ತಿವೆ ಸೆಂಟಿಮೀಟರು, ಮೀಟರು, ಕಿ.ಮೀಗಳು ಈಗ
ಇನ್ನು, ಲಿಂಬೆಕೈಯಿಯ ದೂರಳತೆಗಳು
ಒಯ್ಯುವವು ಕಲ್ಲುತಿಂದು ಕರಗಿಸಿದ ಹುಂಬ ಗಳಿಗೆಗಳಿಗೆ
ಕಣ್ಣಳತೆಗಳೂ, ಕೂಗಳತೆಗಳೂ, ಹಾರಿಗ್ಗಾಲುಗಳೂ,
ಜಪಾಟಿಗಳಲ್ಲೂ ದೂರದ ಚಾವಿಯಿದೆ,
ತೆರೆದುಕೊಳ್ಳುವವು ಮತ್ತೆ ರಸಗಳಿಗೆಯ ಬಳಿಗೆ
ಒಂದಾಳು ಎರಡಾಳು ಅಳೆಯುವರು ಬಾವಿಯ, ಹೊಳೆದಂಡೆಯ ಮಂದಿ
ನಾಟಿಕಲ್ ಮೈಲಿಯಲಿ ದೂರ, ಕಿಮೀಗಳ ಆಳಗಳಲ್ಲಿ ಸಾಗರದ ಮಂದಿ
ಶಬ್ದವೇಗವೂ ಅಳೆಯುವುದು ದೂರವನ್ನು
ಶರವೇಗವೂ ಸಾಲದು, ಅಳೆಯಲು ಬೆಳಕಿನ ದಾರಿಯನ್ನು
ಬಳಸುವನು ರೈತ ‘ನಂಬರ’ನ್ನು
ತಿನ್ನುವರು ಕೆಲವರು ಆರಾಮವಾಗಿ, 'ಟೈಮ್’ನ್ನೂ
ದೂರದಿಂದ ಹತ್ತಿರವಾಗುವ ಸಂಬಂಧಗಳಲ್ಲಿಯೂ ಅಡಗಿದೆಯಲ್ಲವೆ
ಅಂಕುಡೊಂಕಿನ ದೂರ,
ಸೂಕ್ಷ್ಮಾತಿಸೂಕ್ಷ್ಮ ಅಳತೆಗಳು, ಅಳತೆಗೂ ಸಿಗದ ಕಾಲಾತೀತ ದೂರಗಳು,
ಹತ್ತಿರವಿದ್ದರೂ ದೂರವಿರುವ, ದೂರವಿದ್ದರೂ ಹತ್ತಿರವಿರುವ
ದೂರಗಳೂ ಇವೆಯಲ್ಲವೆ!
ಹುಡುಕಿದರೆ ಸಿಗುತ್ತವೆ,
ಅವು ಹುಡುಕಿದರೆ ಸಿಗುತ್ತವೆ!
Comments
ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ
ನಿಜ... ದುಗಳನ್ನೂ ಅಳೆಯಬಹುದು. ಆದರೂ ದೂರಗಳನ್ನು ಅಳೆಯುತ್ತ ಅಳೆಯುತ್ತ.. ಮುಟ್ಟಲಾಗದೇ, ಇದ್ದಲ್ಲಿ ಇರಲಾಗದೇ, ಆನಾಥಶವವಾಗಿ ದೊರಕಿದವರೇ ಹೆಚ್ಚು! ದೂರದ ಸುದ್ದಿಗೆ ಹೋಗದೇ... ಹತ್ತಿರವಿರುವವರಲ್ಲಿ... ಹತ್ತಿರವಿರುವಲ್ಲಿ ಗಮ್ಯವನ್ನು-ಗಮನವನ್ನು ನೆಡುವುದೊಳ್ಳೆಯದು!
ಕವನದ ಆ೦ತರ್ಯ ಚೆನ್ನಾಗಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ
In reply to ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ by ksraghavendranavada
ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ಕೆಎಸ್ ರಾಘವೇಂದ್ರ ನಾವಡ ರವರೇ, ತಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯ. ದೂರಗಳು ಹೊರಗೂ ಇವೆ, ಒಳಗೂ ಇವೆ, ಅಳತೆಗಳಿಗೆ ನಿಲುಕುವ ಕೆಲವಿದ್ದರೆ, ಸಿಲುಕದೇ ಹುಡುಕಬೇಕಾದವು ಕೂಡ ಇವೆ ಎಂಬ ಸತ್ಯದ ಕುರಿತು ಅರಿತು ಗಮ್ಯವನ್ನು ನೆಡುವ ಬಗ್ಗೆ ಚಿಂತನೆಯೂ ಚನ್ನಾಗಿದೆ. ಪ್ರತಿಕ್ರಿಯೆಗೆ ಮತ್ತೊಮ್ಮೆ ವಂದನೆಗಳು ಸರ್.
ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ, ಕವನ ಸೂಪರ್. ಎಲ್ಲವನ್ನೂ ದುಡ್ಡಿಂದಲೇ ಅಳೆಯುವ ಕಾಲವಿದು. :)
In reply to ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ by ಗಣೇಶ
ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ಗಣೇಶಜಿ ರವರೇ, ತಮ್ಮ ಪ್ರತಿಕ್ರಿಯೆಗೆ ವಂದನೆಗಳು ಸರ್.
ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ
ಹತ್ತಿರವುದ್ದೂ ದೂರವಿರುವವರು ನಾವೇನೇ! ಎಷ್ಟೋ ಸಂದರ್ಭಗಳಲ್ಲಿ ನಾವೇ ನಮ್ಮಿಂದ ದೂರವಿರುತ್ತೇವೆ! ಸುಂದರ ಭಾವ ಮೂಡಿಸಿರುವಿರಿ. ಅಭಿನಂದನೆಗಳು, ಇಟ್ನಾಳರೇ.
In reply to ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ by kavinagaraj
ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಕ ವೆಂ ನಾಗರಾಜ್ ಸರ್, ತಮ್ಮ ಕವನದ ಬಗ್ಗೆ ಪ್ರೀತಿಯಿಂದ ವಿಮರ್ಶಿಸಿ ಪ್ರತಿಕ್ರಿಯ ನೀಡುತ್ತ, ಬೆನ್ನು ತಟ್ಟುವ ಮೆಚ್ಚುಗೆಗೆ ಧನ್ಯ ಸರ್.
ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ
ದೂರಗಳೊಳಗೆ ಅದೆಷ್ಟು ದಾರಿಗಳು ಇತ್ನಾಳರೆ, "ಹತ್ತಿರದ ಸಂಬಂದದ ದೂರಗಳು" ಮೈ ಮರೆಸಿತು ಕವಿತೆ
In reply to ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ by naveengkn
ಉ: ದೂರಗಳು - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ನವೀನ ಜಿ ಕೆ ರವರೇ, ತಮ್ಮ ಸೂಕ್ಷ್ಮ ಗ್ರಹಿಕೆಗೆ ಸಲಾಮ್ ಸರ್. ದೂರದ ಪರಿಗಳನ್ನು 'ಹತ್ತಿರ ಸಂಬಂಧಗಳಲ್ಲಿರುವ ದೂರಗಳು, ಹತ್ತಿರವಿದ್ದರೂ ದೂರ ದೂರವಿರುವ' ಸಂಬಂಧಗಳನ್ನು ಸರಿಯಾಗಿ ಗುರುತಿಸಿದ್ದೀರಿ. ವಂದನೆಗಳು