----ಹುಟ್ಟಿನಿಂದಾಚೆಗೆ, ಮತ್ತೆ ಸಾಯದಂತೆ----
ಹುಟ್ಟಿದ ದಿನದಂದು, ತಾನು ಹುಟ್ಟಿದ್ದು
ಯಾಕೆಂದು ಪ್ರಶ್ನೆ ಕಾಡಿದಾಗ
ಕಳವಳವಾಗಿತ್ತು,
ಹುಟ್ಟಿನ ಸತ್ಯ ತಿಳಿಯುವ ಸಾಹಸ ಬೇಕೆ ?
ಈ ಪರದಾಟದ ಪರಮಾನ್ನ ಬೇಕೇ ?
ದಿನವೂ ಅದೆಷ್ಟು ಜೀವಗಳು
ಹುಟ್ಟಿ ಹುಟ್ಟಿ ಮತ್ತೆ ಸಾಯುತ್ತವೆ,
ಹುಟ್ಟಿಸುವ ಜೀವಗಳಿಗೆ
ಹುಟ್ಟುವವರು ಯಾರೆಂದು ಗೊತ್ತೇ ?
ಸಾಯುವುದೇ ಖಚಿತವೆಂದಮೇಲೆ
ಹುಟ್ಟುವುದು ಯಾಕೆ, ಸಾಯಲಿಕ್ಕೆ ?
ಸಾಧಿಸಲಿಕ್ಕೆ !!!! ???????
ಇದ್ದ-ಬದ್ದ ಬುದ್ದಿಯನೆಲ್ಲ
ಜಗದ ಗಮನ ಸೆಳೆಯುವಲ್ಲಿ ಅಡವಿತ್ತು.
ಹುಟ್ಟಿದ ಜೀವಗಳಿಗೆ ಹೆಸರಿಟ್ಟು
ಕುಣಿದು, ದಣಿದು, ಅನ್ಯರ ಕಾಲೆಳೆದು,
ತಾನು ಏನಾದರೇನು ??
ಸಾಯಲೇ ಬೇಕಲ್ಲ, ಎಲ್ಲ ಬಿಟ್ಟು, ಎಲ್ಲ ಮರೆತು
ಸತ್ತಾಗಲು ಒಂದು ಬದುಕಿದೆ,
ಹಾಗಾದರೆ ಬದುಕಿಗೆ ಕೊನೆ ಇಲ್ಲವೇ ?
ಹುಟ್ಟಿಗೆ ಸಾವು ವಿರುದ್ದ "ಪದ" ಮಾತ್ರ ಏನು ??
ಓಡಬೇಕೆನಿಸುತ್ತಿದೆ ಈ ಹುಟ್ಟಿನಿಂದಾಚೆಗೆ,
ಮತ್ತದರ ಸಾವಿನಿಂದಾಚೆಗೆ,
ಸಾಗರವ ದಾಟಿದರು ಭೂಮಿ ಗುಂಡಗೆ ಅಂತೆ,,,
ಹೋಗುವುದು ಎಲ್ಲಿಗೆ ?
ಧರ್ಮದ ಹೆಸರಿನ ಮರ್ಮ ಮತ್ತು ಕರ್ಮ,
ಗಡಿಯ ಬೇಲಿ, ಗುಡಿ, ಶಿಲುಬೆ,
ಬಟ್ಟೆಯೊಳಗಿನ ವೇಷ, ಭಾಷೆ,
ಎಲ್ಲವನು ಬಿಟ್ಟು, ಕೊನೆ ಮೊದಲಿಲ್ಲದೆಡೆಗೆ,,,
ಹೋಗಬೇಕು ನನ್ನೊಳಗೆ,
ಮೌನದ ನಿರ್ವಾತಕ್ಕೆ,
ಮತ್ತೆ ಹುಟ್ಟದ, ಇನ್ನೆಂದೂ ಸಾಯದ, ನಿರ್ವಾಣಕ್ಕೆ,
Comments
ಉ: ----ಹುಟ್ಟಿನಿಂದಾಚೆಗೆ, ಮತ್ತೆ ಸಾಯದಂತೆ----
<ಹೋಗಬೇಕು ನನ್ನೊಳಗೆ,
ಮೌನದ ನಿರ್ವಾತಕ್ಕೆ,
ಮತ್ತೆ ಹುಟ್ಟದ, ಇನ್ನೆಂದೂ ಸಾಯದ, ನಿರ್ವಾಣಕ್ಕೆ,-- ಇದು ಜೀವಿಗಳ ಆಶಯವೇ ಸರಿ! ಇದೇ ಗುರಿ!
ಅಭಿನಂದನೆ.
In reply to ಉ: ----ಹುಟ್ಟಿನಿಂದಾಚೆಗೆ, ಮತ್ತೆ ಸಾಯದಂತೆ---- by kavinagaraj
ಉ: ----ಹುಟ್ಟಿನಿಂದಾಚೆಗೆ, ಮತ್ತೆ ಸಾಯದಂತೆ----
ಅದೇ ಅಲ್ಲವೇ ಕವಿಗಳೇ, ಏನು ಇಲ್ಲದಿರುವುದೇ ಎಲ್ಲ ಇದ್ದಂತೆ ಎಂದು ಎಲ್ಲೆಒ ಓದಿದ ನೆನಪು,
ಉ: ----ಹುಟ್ಟಿನಿಂದಾಚೆಗೆ, ಮತ್ತೆ ಸಾಯದಂತೆ----
ನವೀನ್ ಜಿ, ತುಂಬ ವಿಚಾರಪೂರ್ಣ ಅರ್ಥವತ್ತಾದ ಸಾಲುಗಳ ಕವನ. ಜೀವಂತಿಕೆಯಿಂದ ಕೂಡಿವೆ, ಸಾವಿನ ಬಗ್ಗೆ, ಹುಟ್ಟಿನ ಮೂಲದ ಬಗ್ಗೆ, ಆಳ ಆಳಕ್ಕೆಳಸುವ ಚಿಂತನೆ ಸುಂದರವಾಗಿದೆ. ಇದೊಂದು ತರಹ ಹುಡುಕಾಟದ ಹುಟ್ಟು, ಹುಟ್ಟಿನಿಂದಲೇ ಪ್ರಾರಂಭವಾಗುವುದು, ಮುಗಿಯದ ಪಯಣದೆಡೆ ಸಾಗುತ್ತ, ಸಿಗದ ಉತ್ತರಕ್ಕೆ ತಡಕುತ್ತ....ಸಾಗುವ ಪಯಣ.... ವಂದನೆಗಳು
In reply to ಉ: ----ಹುಟ್ಟಿನಿಂದಾಚೆಗೆ, ಮತ್ತೆ ಸಾಯದಂತೆ---- by lpitnal
ಉ: ----ಹುಟ್ಟಿನಿಂದಾಚೆಗೆ, ಮತ್ತೆ ಸಾಯದಂತೆ----
ಬಾಳೊಂದು ಇದೊಂದು ಮುಗಿಯದ ಕವಿತೆ ಅನ್ನಿಸುತ್ತೆ ಇತ್ನಾಳರೇ,,,,,,, ಹುಡುಕಾಟ ಸಾಗುತ್ತಲೇ ಇದೆ,,,, ಪ್ರತಿಕ್ರಿಯೆಗೆ ಧನ್ಯವಾದಗಳು