ಕಥೆ: ಪರಿಭ್ರಮಣ..(32)

ಕಥೆ: ಪರಿಭ್ರಮಣ..(32)

( ಪರಿಭ್ರಮಣ..31ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಆಮೇಲಿನದೆಲ್ಲ ಕನಸಿನಲ್ಲಿ ನಡೆದಂತೆ ಚಕಚಕನೆ ನಡೆದು ಹೋಗಿತ್ತು. ಕುನ್. ಸೋವಿ ಕನಸು ಮನಸಲೂ ನೆನೆಸದಿದ್ದ ರೀತಿಯಲ್ಲಿ ಗುರಿ ಸಾಧನೆಯಾಗಿ ಹೋಗಿತ್ತು ! ಈ ರೀತಿಯ ಸಿಸ್ಟಮ್ಮಿನ ಬದಲಾವಣೆಯಾದಾಗ ಎಲ್ಲವು ನೆಟ್ಟಗೆ ನಡೆಯುವುದಿರಲಿ, ಮೊದಲ ಒಂದೆರಡು ವಾರ ಯಾವುದು, ಏನು, ಎತ್ತ ಎಂದು ತಿಳಿದುಕೊಳ್ಳುವ ಒದ್ದಾಟದಲ್ಲೆ ಕಳೆದು ಹೋಗಿಬಿಡುತ್ತದೆ... ಅಷ್ಟಿಷ್ಟು ಮೇಲು ಮೇಲೆ ಏನು ಮಾಡಬೇಕೆಂಬುದು ಗೊತ್ತಾದರೂ, ಕನ್ಸಲ್ಟೆಂಟುಗಳು ಪಕ್ಕದಲ್ಲಿರದಿದ್ದರೆ ಸಣ್ಣ ಪುಟ್ಟ ಬಿಲ್ಲಿಂಗುಗಳನ್ನು ಮಾಡಲಾಗದೇನೊ ಅನ್ನುವಷ್ಟು ಅವಲಂಬನೆಯಾಗಿಬಿಡುವುದು ಸಾಮಾನ್ಯ ಕಾಣುವ ಅಂಶ... ಇದರ ನಡುವೆ ಯಾರ ಸಹಾಯವೂ ಇಲ್ಲದೆ ಯಾರಾದರು ಅಪರೂಪಕ್ಕೆ ನಾನೆ ಮಾಡುತ್ತಿದ್ದೇನೆಂದುಕೊಳ್ಳುತ್ತಿರುವ ಕಡೆ ಆ ಹೆಮ್ಮೆ ಪಡಲೂ ಬಿಡದೆ, ಸಿಸ್ಟಮ್ಮಿನ ಪ್ರೋಗ್ರಾಮೊ-ಮತ್ತೊಂದೊ ಕೈಕೊಟ್ಟು ಅಸಹಾಯಕರನ್ನಾಗಿಸಿ ಮೈ ಕೈ ಪರಚ್ಕೊಳ್ಳುವಂತೆ ಮಾಡುವುದು ಮತ್ತೊಂದು ಸುಪರಿಚಿತ ಚಿತ್ರಣ. ಒಟ್ಟಾರೆ ಕಾರಣವೇನೆ ಇರಲಿ - ಯಾವುದನ್ನು ನವಿರಾಗಿ ಹೂವೆತ್ತಿದಂತೆ ನಡೆಯಲು ಬಿಡದೆ ಎಲ್ಲರನ್ನು ತಡಕಾಡಿಸುವ ಮೊದಲ ಒಂದೆರಡು ತಿಂಗಳುಗಳ ಪರಿ, ಗರ್ಭಿಣಿ ಹೆಂಗಸು ಸಹಜವಾಗಿ ಪ್ರಸವಿಸುವ ಹೊತ್ತಲಿ ಅನುಭವಿಸಲೇಬೇಕಾದ ನೋವಿನ ಹಾಗೆ ಅನುಭವಿಸಲೇಬೇಕಾದ ಪ್ರಕ್ರಿಯೆ ಎಂದು ಎಲ್ಲರೂ ಎದುರು ವಾದಿಸದೆ ಒಪ್ಪಿಕೊಂಡು, ಯಾತನೆಯನ್ನನುಭವಿಸಿಕೊಂಡೆ ಮುನ್ನಡೆಯುವುದು ಒಂದು ವಿಧದಲ್ಲಿ 'ಸಮ್ಮತವಾದ ಮಾರುಕಟ್ಟೆಯ ಪ್ರಕ್ರಿಯೆ (ಅಕ್ಸೆಪ್ಟೆಡ್ ಮಾರ್ಕೆಟ್ ಪ್ರಾಕ್ಟೀಸ್)' ಎಂದೆ ಎಲ್ಲರು ಪರಿಗಣಿಸುವ ವಿಷಯ. ಹೀಗಾಗಿ ಗೋಲೈವ್ ಹೊತ್ತಿಗೆ ಮೊದಲ ಕೆಲವು ತಿಂಗಳು ಯಾವುದೂ ಸರಾಗವಾಗಿ ನಡೆಯದ ಸನ್ನಿವೇಶ, ಪರಿಸ್ಥಿತಿಗೆ ಮಾನಸಿಕವಾಗಿ ಮತ್ತು ಗುರಿಯ ಕಡಿತದ ದೃಷ್ಟಿಯಿಂದ ತುಸು ಕಡಿಮೆ ವ್ಯಾಪಾರದ ವಹಿವಾಟಿಗೆ ಸಿದ್ದರಿರುವುದು ಎಲ್ಲ ಕಂಪನಿಗಳು ಕೈಗೊಳ್ಳುವ ಪ್ರಮುಖ ಸಿದ್ದತಾ ಕಾರ್ಯಗಳಲ್ಲಿ ಒಂದು. ಆದರೆ ಈ ಅಪರೂಪದ ಪ್ರಾಜೆಕ್ಟಿನ ಸಂದರ್ಭದಲ್ಲಿ,  ಮಾಮೂಲಿ ವ್ಯವಹಾರದಲ್ಲಿ ಕಡಿತವಾಗುವುದಿರಲಿ - ಗುರಿಯ ಮೇರೆ ಮೀರಿದ ಶೇಕಡಾವಾರು ಹೆಚ್ಚುವರಿ ವಹಿವಾಟು ಗೋಲೈವಾದ ಮೊದಲ ತಿಂಗಳೆ ಸಾಧಿಸಲು ಸಾಧ್ಯವಾಗಿ ಒಂದು ರೀತಿಯ ಅಸಾಧಾರಣ ದಾಖಲೆಯನ್ನೆ ಬರೆದುಬಿಟ್ಟಿತ್ತು. ತಿಂಗಳ ಕೊನೆಯ ಸಿಸ್ಟಂ ರನ್ನಿಂಗ್ ಪ್ರಕ್ರಿಯೆಯೆಲ್ಲ ಮುಗಿದು ಅಂತಿಮಗೊಳಿಸಲ್ಪಟ್ಟ ಮಾಸಾಂತ್ಯದ ವಹಿವಾಟಿನ ಅಂಕಿ ಅಂಶಗಳು ಅಧಿಕೃತವಾಗಿ ಹೊರಬಿದ್ದಾಗ,  ತಿಂಗಳಿಗೆ ಸಾಧಿಸಲು ಪರಿಗಣಿಸಿದ್ದ ಮಾಮೂಲಿ ಗುರಿಗಿಂತ ಶೇಕಡಾ ಮೂವತ್ತೆಂಟರಷ್ಟು ಅಧಿಕ ಗುರಿ ಮುಟ್ಟಿಬಿಟ್ಟಿತ್ತು ಆ ತಿಂಗಳ ವಹಿವಾಟಿನ ಸಂಖ್ಯೆ.. ಹಿಂದಿನ ತಿಂಗಳ ವಹಿವಾಟಿಗೆ ಹೋಲಿಸಿದರೂ ಶೇಕಡಾ ಮೂವತ್ತಕ್ಕಿಂತ ಅಧಿಕ ಗುರಿ ಸಾಧನೆಯಾಗಿಬಿಟ್ಟಿತ್ತು, ಹೊಸ ಸಿಸ್ಟಮ್ - ಹೊಸ ಪ್ರೋಸೆಸ್ಸಿನ ಉದ್ಘಾಟನೆಯಾದ ಮೊದಲ ತಿಂಗಳಲ್ಲೆ..! ಆ ಮಾರಾಟ ವಹಿವಾಟಿನ ಅಂಕಿ ಅಂಶಗಳನ್ನು ನೋಡುತ್ತಿದ್ದಂತೆ ಕುನ್. ಸೋವಿಯ ಸಂತಸಕ್ಕಂತೂ ಪಾರವೆ ಇರಲಿಲ್ಲ - ಆಗಲೆ ಪ್ರಮೋಶನ್ ಬಂದೆ ಬಿಟ್ಟವನ ಹಾಗೆ ಕುಣಿದಾಡಿಬಿಟ್ಟಿದ್ದ... ಅದರಲ್ಲೂ ಕೊನೆಯ ದಿನಗಳ ಆಮೆ ವೇಗದ ಸಿಸ್ಟಮ್ಮಿನ ಪರಿಸ್ಥಿತಿಯನ್ನು ಕಂಡಾಗ, ತನ್ನ ಗುರಿಯನ್ನು ಸಾಧಿಸಬಹುದೆಂಬ ನಂಬಿಕೆಯೇ ಹೊರಟು ಹೋಗಿತ್ತವನಿಗೆ; ಆ ಕುಸಿದ ಮನಸ್ಥಿತಿಯಲ್ಲಿದ್ದವನಿಗೆ ತಿಂಗಳ ಮೊದಲ ದಿನದ ಬೆಳಗೆ ಶ್ರೀನಾಥನ ಕರೆ ಬಂದಾಗಲೂ ನಂಬಲೆ ಆಗದೆ, ಅವನು ತಮಾಷೆ ಮಾಡುತ್ತಿರುವನೆಂದೆ ಭಾವಿಸಿದ್ದ. ಆದರೆ ಅಕೌಂಟಿಂಗ್ ವಿಭಾಗದಿಂದ ಅಧಿಕೃತವಾಗಿ ವಹಿವಾಟಿನ ಸಾರಾಂಶ ಮತ್ತು ವಿವರಗಳ ಸಮೇತ ಮಿಂಚಂಚೆ ಬಂದಾಗ ಯಾವ ಸಂದೇಹವೂ ಉಳಿಯದೆ ಸಂಪೂರ್ಣ ನಂಬುವಂತಾಗಿತ್ತು. ಶ್ರೀನಾಥ ಮತ್ತು ಸೌರಭರೇನಾದರೂ ಪೋನಿನಲ್ಲಿರದೆ ವೇರ್ಹೌಸಿನಲ್ಲಿ ಇದ್ದಿದ್ದರೆ ಹೆಚ್ಚು ಕಡಿಮೆ ಅವರಿಬ್ಬರನ್ನು ಹೊತ್ತುಕೊಂಡು ಮೆರವಣಿಗೆಯನ್ನೆ ಮಾಡಿಸಿಬಿಡುತ್ತಿದ್ದನೊ, ಏನೊ...?!

ಮೊದಲೆ ಯೋಜಿಸಿದ್ದಂತೆ ಮಾಸಾಂತ್ಯದ ಪ್ರಕ್ರಿಯೆ ಮುಗಿದ ಮೊದಲ ವಾರದಲ್ಲೆ ಬಂದಿಳಿದ ಭಾರತದ ಬಾಸಿನ ಜತೆ ತಾನೂ ಬಂದ ಶ್ರೀನಿವಾಸ ಪ್ರಭುವಿನ ಕುಗ್ಗಿದ ಮುಖ ನೋಡಲು ಶ್ರೀನಾಥನಿಗೆಂತದೊ ವಿಚಿತ್ರ ಸಂತಸವಾದರೂ, ವೃತ್ತಿಪರ ಸಮಚಿತ್ತತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿಯ ಭಾವದಲ್ಲಿ ನಿರಾಳ ಗಂಭೀರ ಮುದ್ರೆ ಧರಿಸಿ ಕೈ ಕುಲುಕಿದ್ದ. ಆ ಸಂಕಷ್ಟದ ಹೊತ್ತಿನಲ್ಲಿ ಭಾರತದ ಬಾಸ್ 'ಸುಬ್ರಮಣಿಯನ್' ಭೇಟಿಗೆ ಬಂದರೆ, ಪ್ರಾಜೆಕ್ಟಿನಲ್ಲಿ ಉಂಟಾಗುತ್ತಿರಬಹುದಾಗಿದ್ದ ಅಲ್ಲೋಲಕಲ್ಲೋಲವೆಲ್ಲ ನೇರ ಅವರ ಕಣ್ಣಿಗೆ ಬೀಳುವುದರಿಂದ, ಪ್ರಾಜೆಕ್ಟಿನ ಗೋಲೈವ್ ಸುಖಕರವಾಗಿರಲಿಲ್ಲವೆಂಬ ಅಭಿಪ್ರಾಯಕ್ಕೆ ಬರುವ ಖಚಿತ ಸಾಧ್ಯತೆಯಿದ್ದ ಕಾರಣ, ಆ ಅವಧಿಯಲ್ಲೆ ಬರುವ ಹಾಗೆ ಒತ್ತಾಯಪೂರ್ವಕವಾಗಿ ಕರೆಸುವ ವ್ಯವಸ್ಥೆ ಮಾಡಿದ್ದ, ಪಾಪ! ಆ ಅಹಿತಕರ ಭಾವನೆಯ ವಾತಾವರಣದ ನಡುವಲ್ಲೆ, ತಾನು ಮಹದುಪಕಾರ ಮಾಡುತ್ತಿರುವವನ ಸೋಗಿನಲ್ಲಿ, ಗೋಲೈವೋತ್ತರ ನಿರ್ವಹಣಾ ಜವಾಬ್ದಾರಿಯನ್ನು ಅವಧಿಗೆ ಮೊದಲೇ ತನ್ನ ಕೈಗೆತ್ತಿಕೊಂಡಂತೆ ನಟಿಸಿ, ಅದರ ಮುಂದಿನ ತಿಂಗಳು ವಹಿವಾಟೆಲ್ಲ ಸೂಕ್ತವಾಗಿ ನಡೆದಾಗ - ತನ್ನ ಉಸ್ತುವಾರಿಯಡಿಯಲ್ಲಿ ಎಲ್ಲವನ್ನು ದುರಸ್ತಿ ಮಾಡಿ ಸರಿಯಾಗಿಸಿಬಿಟ್ಟೆನೆಂದು ತೋರಿಸಿಕೊಳ್ಳುವ ಕನಸು ಕಾಣುತ್ತ ಸ್ವಪ್ನಲೋಕದಲ್ಲಿ ತೇಲುತ್ತಿದ್ದವನಿಗೆ, ಅಷ್ಟೆಲ್ಲಾ ಗಡಿಬಿಡಿಯಾದರು ಅದು ಹೇಗೆ ಅಷ್ಟೊಂದು ಟರ್ನೋವರ್ ಸಾಧ್ಯವಾಯಿತೆಂದು ಊಹಿಸಲು ಕೂಡ ಆಗಿರಲಿಲ್ಲ. ಅದರಲ್ಲೂ ಸಾಮಾನ್ಯಕ್ಕಿಂತ ಶೇಕಡ ಮೂವತ್ತು ಫಲಿತಾ ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿ ಅವನಿದ್ದರೆ, ಅಲ್ಲಿ ಗುರಿಯನ್ನು ದಾಟಿ ಶೇಕಡಾ ಮೂವತ್ತಕ್ಕಿಂತ ಹೆಚ್ಚು ಸಾಧನೆಯಾಗಿಹೋಗಿತ್ತು.. ಕುನ್. ಸೋವಿಯ ಸಹಯೋಗದಲ್ಲಿ ವಾರಗಳಿಗೂ ಮೊದಲು ಇವರುಗಳು ರೂಪಿಸಿಕೊಂಡಿದ್ದ ಪ್ರತಿತಂತ್ರದ ಅಂದಾಜು ಕೂಡಾ ಸಿಗದೆ ಯಾಕಾದರೂ ಈ ಹೊತ್ತಲ್ಲಿ ಸುಬ್ರಮಣ್ಯಂರನ್ನು ಕರೆಸಲು ಪಟ್ಟು ಹಿಡಿದು ಅವಸರ ಮಾಡಿದೆನೋ ಎಂದು ವ್ಯಥಿಸುತ್ತಾ 'ಎಲ್ಲಾ ಬಿಟ್ಟು ಇವರನ್ನು ಈ ಸಮಯದಲ್ಲೆ ಆಹ್ವಾನಿಸಬೇಕಿತ್ತೆ ಭಾರತದಿಂದ?' ಎಂದು ಹಲುಬುವಂತಾಗಿತ್ತು. ನಂತರ ನಡೆದ ಸರ್ವತಂಡದ ಮ್ಯಾನೇಜ್ಮೆಂಟಿನ ಜತೆಗಿನ ಮೀಟಿಂಗಿನಲ್ಲಂತೂ ಸ್ಥಳೀಯ ಹಿರಿಯ  ಮ್ಯಾನೇಜ್ಮೆಂಟ್ ತಂಡದವರೆಲ್ಲ, ತಾವು ಎದುರು ನೋಡದಿದ್ದ ಈ ಫಲಿತಾಂಶವನ್ನು ಬಹುವಾಗಿ, ಮುಕ್ತವಾಗಿ, ಮನಬಿಚ್ಚಿ ಪ್ರಶಂಸಿಸುತಿದ್ದರೆ ಶ್ರೀನಿವಾಸ ಪ್ರಭುವಿನ ಮುಖ ಸುಟ್ಟ ಬದನೆಕಾಯಿಯಂತೆ ಆಗುತ್ತಿದ್ದುದನ್ನು ಕಂಡು ಒಳಗೊಳಗೆ ನಕ್ಕಿದ್ದ ಶ್ರೀನಾಥ - ಅದರ ಕುರುಹು ಹೊರಗೆಡವದಂತೆ ಎಚ್ಚರಿಕೆ ವಹಿಸುತ್ತ. ಅಲ್ಲಿನ ಎಂಡಿಯವರಂತೂ ಶ್ರೀನಾಥನ ಪ್ರಾಜೆಕ್ಟ್ ಮ್ಯಾನೇಜ್ಮೆಂಟಿನ ಪರಿಣಿತಿಯ ಕುರಿತು ಪ್ರಶಂಸೆಯ ಮಾತಾಡಿದಾಗ ಸ್ವತಃ ಶ್ರೀನಾಥನಿಗೆ ಅಚ್ಚರಿಯಾಗಿತ್ತು - ಅವರಿಗೆ ಯಾವಾಗ ತನ್ನ ಕಾರ್ಯ ನಿರ್ವಹಣೆಯ ವಿಧಾನ ಕಣ್ಣಿಗೆ ಬಿದ್ದಿತ್ತೆಂದು.. ಇದೆ ಅವಕಾಶವನ್ನುಪಯೋಗಿಸಿಕೊಂಡು ಪ್ರಾಜೆಕ್ಟಿಗಾಗಿ ಕಷ್ಟಪಟ್ಟಿದ್ದ ಸ್ಥಳೀಯ ತಂಡದ ಸದಸ್ಯರಿಗೆ ಏನಾದರೂ ಅನುಕೂಲವಾಗುವ ಹಾಗೆ ಏನಾದರೂ ಮಾಡಲೆತ್ನಿಸಬಾರದೇಕೆನ್ನುವ ಸಮಾನಾಂತರ ಆಲೋಚನೆಯೂ ಮಿಂಚಿನಂತೆ ಆ ಕ್ಷಣದಲ್ಲೆ ಫಕ್ಕನೆ ಮೂಡಿ ಬಂದಿತ್ತು ಬಂತು ಶ್ರೀನಾಥನ ತಲೆಯೊಳಗೆ..

' ಈ ಯಶಸ್ಸಿನಲ್ಲಿ ನಮ್ಮ ತಂಡದಷ್ಟೆ ಸ್ಥಳೀಯ ಯೂಸರುಗಳ ತಂಡವೂ ತುಂಬಾ ಶ್ರಮ ಪಟ್ಟಿದೆ.. ಈ ಅಪ್ರತಿಮ ಸಾಧನೆಯ ಸಂಧರ್ಭವನ್ನು ನೆಪವಾಗಿ ಬಳಸಿಕೊಂಡು ಅವರಿಗೇನಾದರೂ 'ಮ್ಯಾನೇಜ್ಮೆಂಟ್ ರೆಕಗ್ನಿಶನ್' ರೀತಿಯಲ್ಲಿ ಪುರಸ್ಕಾರ ಕೊಡುವುದು ಒಳ್ಳೆಯದು ಎಂದು ನನ್ನ ಅನಿಸಿಕೆ.. ಈ ಪ್ರಾಜೆಕ್ಟಿಗೆ ಸೇರಿಕೊಂಡ ಮೇಲೆ ಅವರ ಅನುಭವದ ಮತ್ತು ಹೊಸ ಸಿಸ್ಟಮ್ ಹಾಗೂ ಪ್ರೋಸೆಸ್ಸಿನ ಜ್ಞಾನದ ಮಟ್ಟ ಈ ಪ್ರಾಜೆಕ್ಟಿನ ಕಡಿಮೆ ಅವಧಿಯಲ್ಲೆ ಏಕಾಏಕಿ ಹತ್ತಾರು ಪಟ್ಟು ಹೆಚ್ಚಾಗಿಹೋಗಿರುತ್ತದೆ - ಅವರ ಪ್ರಾಜೆಕ್ಟಿಗೆ ಮೊದಲಿದ್ದ ಸ್ಥಿತಿಗೆ ಹೋಲಿಸಿದಾಗ. ಅಂದರೆ ಹೊರಗಿನ ಮಾರುಕಟ್ಟೆಯಲ್ಲಿ ಅವರ ಹೊಸ ಪರಿಣಿತಿಯಿಂದಾಗಿ ಅವರಿಗಿರುವ ಬೇಡಿಕೆಯೂ ಒಂದೆ ಬಾರಿಗೆ ಮೇಲೇರಿಬಿಡುತ್ತದೆ. ನಾವು ಹೊರಗಿನ ಕನ್ಸಲ್ಟೆಂಟುಗಳು ಇನ್ನೇನು ಪ್ರಾಜೆಕ್ಟು ಮುಗಿಸಿ ಗಂಟು ಮೂಟೆ ಕಟ್ಟಿ ಹೊರಟ ಮೇಲೆ ನಿಮ್ಮ ಕೀ-ಯೂಸರುಗಳೆ ನಿಮ್ಮ ಸಂಸ್ಥೆಯ ಆಂತರಿಕ ಮಾರ್ಗದರ್ಶಿಗಳು - ನಿಮ್ಮ ದಿನದಿನದ ವ್ಯವಹಾರ ನಿಭಾಯಿಸುವುದಕ್ಕೆ ಮತ್ತು ಸಂಕಟದ ಸ್ಥಿತಿಯಲ್ಲಿ ತಕ್ಷಣದ ನೆರವಿಗೆ ಬರುವುದಕ್ಕೆ. ಹೀಗಾಗಿ ಅವರಾರು ಹೊಸ ಕೆಲಸ ಸಿಕ್ಕಿತೆಂದೊ, ಹೆಚ್ಚು ಸಂಬಳವೆಂದೊ, ಈಗಿರುವುದಕ್ಕಿಂತ ಉನ್ನತ ಅಧಿಕಾರದ ಸ್ಥಾನವೆಂದೊ - ತಾವಿರುವ ಕೆಲಸ ಬಿಟ್ಟು ಹೋಗಲು ಅವಕಾಶಕೊಡಬಾರದು... ಅವರಿಗೆ ಬೋನಸ್ಸು, ಪ್ರಮೋಷನ್ನು, ಸಂಬಳದಲ್ಲಿ ಹೆಚ್ಚಳ ಮತ್ತು ಪ್ರಮುಖವಾಗಿ ಅವರ ಸಾಧನೆಯನ್ನು ಗುರುತಿಸಿ ಸಾರ್ವತ್ರಿಕವಾಗಿ ಗೌರವಿಸುವ ರೀತಿಯಲ್ಲಿ ಏನಾದರೂ ಸಮಾರಂಭ ಮಾಡಿ ಗುರುತಿಸುವುದು, ಟೀಮ್ ಬಿಲ್ಡಿಂಗ್ ನೆಪದಲ್ಲಿ ತುಸು ಧಾರಾಳವಾಗಿ ಅವರ ಸಾಧನೆಯನ್ನು ಪ್ರಶಂಸಿಸುವ ದಾರಿ ಹುಡುಕುವುದು - ಇತ್ಯಾದಿಗಳ ಮುಖೇನ ಪ್ರಯತ್ನಿಸಬೇಕೆನ್ನುವುದು ನನ್ನ ಅನಿಸಿಕೆ. ಇದರಿಂದಾಗಿ ಈಗ ಹೊಸ ಪ್ರೊಸೆಸ್ಸಿನಲ್ಲಿ ಟ್ರೈನಿಂಗ್ ಆದವರು ಕಂಪನಿ ಬಿಟ್ಟು ಹೊರಗಿನ ಅವಕಾಶಕ್ಕೆ ಹುಡುಕಾಡಲು ಹೋಗದಂತೆ ತಾತ್ಕಾಲಿಕವಾಗಿಯಾದರೂ ತಡೆ ಹಾಕಬಹುದು.. ಹೊರಗಿನ ಪ್ರಾಜೆಕ್ಟ್ ತಂಡ ಹೊರಟು ಹೋದ ಮೇಲೆ ಇವರೆ ಎಲ್ಲವನ್ನು ಸ್ಥಳೀಯವಾಗಿ ನೋಡಿಕೊಂಡು ನಿಭಾಯಿಸಬೇಕಾದ ಕಾರಣ ಇದು ತುಂಬಾ ಮುಖ್ಯವಾದ ಅಂಶ' ಮುಂದೆ ಎದುರಾಗಬಹುದಾದ ರಿಸ್ಕಿನ ರೀತಿ ಮತ್ತು ಅದನ್ನು ಎದುರಿಸಲು ಬೇಕಾಗುವ ವಿಧಾನ ಮತ್ತು ಹಾದಿಯ ಸುಳಿವನ್ನು ಕೊಡುತ್ತ ನುಡಿದಿದ್ದ ಶ್ರೀನಾಥ. 

' ಯೆಸ್..ಐ ಸೀ ಯುವರ್ ಪಾಯಿಂಟ್.. ಈ ರೀತಿಯ ಫಲಿತಾಂಶ ಬಂದಾಗ ಅದನ್ನು ಮ್ಯಾನೇಜ್ಮೆಂಟ್ ಸರಿಯಾಗಿ ಗುರುತಿಸದಿದ್ದರೆ ತಪ್ಪಾಗಿಬಿಡುತ್ತದೆ..ಡು ಯು ಹ್ಯಾವ್ ಎನಿ ಐಡಿಯಾಸ್ ಆರ್ ಸಜೆಶನ್ಸ್ ಆನ್ ಹೌ ಇಟ್ ಇಸ್ ಡನ್ ಇನ್ ಅದರ ಪ್ರಾಜೆಕ್ಟ್ಸ್?' ಕುತೂಹಲದಿಂದ ಕೇಳಿದ್ದರು ಎಂಡಿ. ಹಿಂದೊಮ್ಮೆ ಎಂಡಿಯಾಗಿದ್ದ ಸಂಸ್ಥೆಯೊಂದರಲ್ಲಿ ಕೆಟ್ಟ ಸಿಸ್ಟಂ ಪ್ರಾಜೆಕ್ಟೊಂದರಲ್ಲಿ ನೇರ ಕೈ ಸುಟ್ಟುಕೊಂಡಿದ್ದ ಕಾರಣ, ಆ ಏಟಿನ ಅನುಭವ ಅವರಿಗೆ ಚೆನ್ನಾಗಿಯೆ ಇತ್ತು. ಹೀಗಾಗಿ ಈ ಪ್ರಾಜೆಕ್ಟಿನ ಅನುಭವ ಅವರಿಗೂ ಧನಾತ್ಮಕವಾಗಿ ಪ್ರತಿಕ್ರಿಯಿಸಲು ಪ್ರೇರೇಪಿಸಿತ್ತು.

' ಸಾಧಾರಣವಾಗಿ, ಭಾಗವಹಿಸಿದವರಿಗೆಲ್ಲ ಒಂದೊಂದು 'ಸರ್ಟಿಫಿಕೇಟ್ ಆಫ್ ಅಪ್ರಿಶಿಯೇಶನ್' ರೀತಿಯಲ್ಲಿ ಒಂದು ಅರ್ಹತಾ ಪತ್ರವನ್ನು ಕೊಡಬಹುದು. ಜತೆಗೆ ಎಲ್ಲರಿಗೂ ಅವರ ಪ್ರಾಜೆಕ್ಟ್ ಕೊಡುಗೆಯನುಸಾರ ಪ್ರಾಜೆಕ್ಟ್ ಬೋನಸ್ ಅನೌನ್ಸ್ ಮಾಡಬಹುದು.. ದೊಡ್ಡ ಟೀಮ್ ಈವೆಂಟ್ ಮಾಡಿ ಎಲ್ಲರನ್ನು ಹೊರಗೆಲ್ಲಾದರೂ ಕರೆದುಕೊಂಡು ಹೋಗಿ ಸೆಲಬ್ರೇಟ್ ಮಾಡುವಂತೆ ನೋಡಿಕೊಳ್ಳಬಹುದು.. ಆಗಲೆ ಹೇಳಿದಂತೆ ವೇತನದಲ್ಲಿ ಹೆಚ್ಚಳ, ಆಯ್ದ ಕೆಲವರಿಗೆ ಬಡ್ತಿ ..ಹೀಗೆ. ಒಟ್ಟಾರೆ ಇಟ್ ಶುಡ್ ಲುಕ್ ಬಿಗ್ ಅಂಡ್ ಗ್ರೇಟ್ ಫಾರ್ ದೆಮ್..'

ಅದನ್ನು ಕೇಳಿಸಿಕೊಂಡ ಫೈನಾನ್ಶಿಯಲ್ ಕಂಟ್ರೊಲರ್ ಕುನ್. ರಗ್,'ಹೇಗೂ ವರ್ಷಕ್ಕೊಂದು ಸಾರಿ ಎಲ್ಲರನ್ನು ಹೊರಗೆ ಕರೆದುಕೊಂಡು ಹೋಗಿ ಸಂಭ್ರಮವನ್ನು ಆಚರಿಸುವ ಒಂದು ದಿನದ 'ಆನ್ಯೂಯಲ್ ಡಿನ್ನರ ಈವೆಂಟ್' ಹತ್ತಿರದಲ್ಲೆ ಇದೆ. ಬೇಕಿದ್ದರೆ ಅದಕ್ಕೆ ಇನ್ನೊಂದಷ್ಟು ಬಡ್ಜೆಟ್ಟು ಸೇರಿಸಿ, ಅದನ್ನೆ ಸ್ವಲ್ಪ ಗ್ರಾಂಡ್ ಇವೆಂಟ್ ಆಗಿ ಬದಲಿಸಿ ಎರಡು ಅಥವಾ ಮೂರು ದಿನದ ಔಟಿಂಗ್ ರೀತಿ ಪರಿವರ್ತಿಸಿ ಬಿಡಬಹುದು.. ಆಗ ಬಡ್ಜೆಟ್ಟಿಗೂ ಹೆಚ್ಚು ಹೊಡೆತ ಬೀಳುವುದಿಲ್ಲ.. ಈ ಪ್ರಾಜೆಕ್ಟಿನ ಯಶಸನ್ನು ಬರಿಯ ಪ್ರಾಜೆಕ್ಟಿನ ತಂಡದ ಜತೆ ಮಾತ್ರವಲ್ಲದೆ ಇನ್ನು ದೊಡ್ದ ಮ್ಯಾನೇಜ್ಮೆಂಟಿನ ಗುಂಪಿನ ಜತೆ ಆಚರಿಸಬಹುದು' ಎಂದಿದ್ದರು.

ಅದಕ್ಕೆ ಮಾರುತ್ತರಿಸಿದ ಎಂಡಿ, 'ದಟ್ ಇಸ್ ಎ ಗುಡ್ ಐಡಿಯಾ..ಪ್ಲೀಸ್ ಗೊ ಅಹೇಡ್ ಅಂಡ್ ಮೇಕ್ ಅ ಪ್ರಪೋಸಲ್ ಫಾರ್ ಅಪ್ರೂವಲ್.. ಆಲ್ಸೋ ಪ್ರೊಸೀಡ್ ವಿದ್ ಅರೆಂಜ್ಮೆಂಟ್ಸ್ ಇನ್ ಪ್ಯಾರಲೆಲ್...' ಎಂದವರೆ ಶ್ರೀನಾಥನತ್ತ ತಿರುಗಿ ' ಕ್ಯಾನ್ ಯೂ ಮೇಕ್ ಅ ಪ್ರೊಪೊಸಲ್ ಫಾರ್ ಬೋನಸ್ ಆಂಡ್ ಸರ್ಟಿಫಿಕೇಟ್ ? ಪ್ಲೀಸ್ ಇನ್ ಕ್ಲೂಡ್ ಯುವರ್ ಕನ್ಸಲ್ಟೆಂಟ್ ಟೀಮ್ ಆಲ್ಸೊ ಫಾರ್ ದಿಸ್ ರೆಕಗ್ನಿಶನ್... ಆಲ್ಸೋ ಪ್ಲೀಸ್ ಸೆಂಡ್ ಯುವರ್ ಅದರ ರೆಕಮೆಂಡೆಡ್ ಸಜೆಶನ್ಸ್ ವಿಚ್ ಯು ಜಸ್ಟ್ ಮೆನ್ಶಂಡ್' ಎಂದರು. 

' ನಮ್ಮ ಕನ್ಸಲ್ಟಿಂಗ್ ಟೀಮಿನ ಹುಡುಗರನ್ನು ಬೋನಸ್ಸಿಗೆ ಸೇರಿಸುವುದು ಕಂಪನಿಯ ನೀತಿಯಂತೆ ಸರಿಯೊ, ಇಲ್ಲವೊ ಎಂದು ನಿರ್ಧರಿಸಿ ತೀರ್ಪು ಕೊಡಬೇಕಾದ್ದು ನಮ್ಮ ಹಿರಿಯ ಮ್ಯಾನೇಜರ್.. ಸುದೈವಕ್ಕೆ ಈಗ ಮಿಸ್ಟರ್ ಸುಬ್ರಮಣಿಯಂ ಅವರಿಲ್ಲೆ ಇರುವುದರಿಂದ ನಿರ್ಧಾರ ಕೈಗೊಳ್ಳಲು ಅವರನ್ನೆ ಕೇಳಿ ನಿರ್ಧರಿಸಬಹುದು .. ಆದರೆ ಬೋನಸ್ಸಿನಲ್ಲಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟು ಕಡೆಯಿಂದ ಯಾರನ್ನು ಸೇರಿಸುವುದು ಬೇಡ..ನೈತಿಕವಾಗಿಯೂ ತಪ್ಪಾಗಿಬಿಡುತ್ತದೆ ... ಕಾನ್ಫ್ಲಿಕ್ಟ್ ಆಫ್ ಇಂಟ್ರೆಸ್ಟ್ ಆಗುವ ಸಾಧ್ಯತೆ ಇರುವುದರಿಂದ ನನ್ನನ್ನು ಮತ್ತು ಶ್ರೀನಿವಾಸ ಪ್ರಭುಗಳನ್ನು ಹೊರಗಿಟ್ಟು, ಮಿಕ್ಕ ತಂಡದ ಸದಸ್ಯರನ್ನು ಪರಿಗಣಿಸಿದರೆ ತೊಡಕಿರದು ಎಂದು ನನ್ನ ಅನಿಸಿಕೆ..'

ಕೊನೆಗೆ ಅಲ್ಲೆ ಪುಟ್ಟ ಚರ್ಚೆಯೊಂದು ನಡೆದು ಕನ್ಸಲ್ಟೆಂಟ್ ಬೋನಸಿನ ಮೊತ್ತ ಪೂರ್ವನಿರ್ಧಾರಿತ ಗರಿಷ್ಠ ಮೊತ್ತವನ್ನು ಮೀರಬಾರದೆಂಬ ಶರತ್ತಿನ ಮೇಲೆ ಶ್ರೀನಾಥನ ತಂಡದ ಸದಸ್ಯರನ್ನು ಬೋನಸ್ ಸ್ಕೀಮಿಗೆ ಸೇರಿಸಲು ಭಾರತದ ಬಾಸ್ ಸುಬ್ರಮಣಿಯಂ ಒಪ್ಪಿಗೆ ಕೊಟ್ಟಿದ್ದರು. ಎಲ್ಲಾ ಚರ್ಚೆ ಅಭಿನಂದನೆಗಳ ಶಿಷ್ಥಾಚಾರವನ್ನು ಮುಗಿಸಿ ಮೀಟಿಂಗಿನಿಂದ ಹೊರಬಂದಾಗ ಶ್ರೀನಾಥನಿಗೆ ಇನ್ನೂ ನಂಬಲೆ ಆಗಿರಲಿಲ್ಲ.. ಈ ರೀತಿಯ ಪ್ರಾಜೆಕ್ಟುಗಳಲ್ಲಿ ತೊಡಗಿಕೊಳ್ಳುವ ದೊಡ್ಡ ತಂಡ ಮತ್ತು ವೆಚ್ಚವಾಗುವ ಅಪಾರ ಮೊತ್ತದ ಹೊಡೆತದ ಜತೆಗೆ, ಬೋನಸ್ ಕೊಡಲು ಬೇಕಾಗಬಹುದಾದ ಮತ್ತೊಂದು ದೊಡ್ಡ ಮೊತ್ತದ ಪರಿಣಾಮವಾಗಿ ಸ್ಥಳೀಯ ತಂಡಕ್ಕೆ ಬೋನಸ್ಸು ಕೊಡಲೆ ಕಂಪನಿಗಳು ಹಿಂದೆ ಮುಂದೆ ನೋಡುವಾಗ, ಇಲ್ಲಿ ನೋಡಿದರೆ ಮ್ಯಾನೇಜ್ಮೆಂಟಿನವರೆ, ಸ್ಥಳೀಯ ಸದಸ್ಯರಿಗೆ ಮಾತ್ರವಲ್ಲದೆ  ತಮ್ಮ ತಂಡದ ಹುಡುಗರಿಗೂ ಬೋನಸ್ ಕೊಡುತ್ತೇವೆನ್ನುತ್ತಿದ್ದಾರೆ... ಅದರರ್ಥ ಈ ಪ್ರಾಜೆಕ್ಟಿನ ಅದ್ಭುತ ಮತ್ತು ಅನಿರೀಕ್ಷಿತ ಫಲಿತಾಂಶದಿಂದ ಮತ್ತು ವ್ಯವಹಾರಕ್ಕೆ ಅದರಿಂದುಂಟಾದ ಧನಾತ್ಮಕ ಪರಿಣಾಮದಿಂದಾಗಿ ಕಸ್ಟಮರರಿಗೆ ತುಂಬಾ ಖುಷಿಯಾಗಿದೆಯೆಂದೆ ಲೆಕ್ಕ..!

ಅದೆಲ್ಲಕ್ಕು ಮೀರಿಸಿದ್ದ ಮತ್ತೊಂದು ಅಂಶವೆಂದರೆ ಭಾರತದಿಂದ ಬಂದಿದ್ದ ಬಾಸಿಗೆ ಶ್ರೀನಾಥನ ಮೇಲುಂಟಾದ ಅಭಿಪ್ರಾಯ; ಒಂದೆ ಏಟಿಗೆ ಮಿಸ್ಟರ್. ಸುಬ್ರಮಣಿಯಂ ಕಣ್ಣಲ್ಲಿ ಶ್ರೀನಾಥನ ಘನತೆಯನ್ನು ಉನ್ನತ ಸ್ಥಾನಕ್ಕೇರಿಸಿಬಿಟ್ಟಿತ್ತು ಈ ಫಲಿತಾಂಶ. ಅವರ ಜೀವಮಾನದಲ್ಲೇ ಇದೆ ಮೊದಲ ಬಾರಿಗೆ ಕಂಪನಿಯ ಉನ್ನತಾಧಿಕಾರಿಗಳು ಫಲಿತಾಂಶವನ್ನು ಮುಕ್ತವಾಗಿ ಮನಸಾರೆ ಪ್ರಶಂಸಿಸುತ್ತಿರುವುದನ್ನು ಕೇಳಿದ್ದು.. ಇಂತಹ ಮೀಟಿಂಗುಗಳಲ್ಲಿ ಸದಾ ಯಾವುದಾದರೂ ದೂರುಗಳನ್ನೆ ಕೇಳಿ ಅಭ್ಯಾಸವಾಗಿದ್ದ ಅವರು, ಈ ಬಾರಿಯೂ ಅಂತಹದ್ದೆ ಸುದ್ದಿಗೆ ಮಾನಸಿಕವಾಗಿ ಸಿದ್ದರಾಗಿ ಬಂದಿದ್ದರೆ,ಇಲ್ಲಿ ಎಲ್ಲಾ ಅನಿರೀಕ್ಷಿತ ಆಹ್ಲಾದಕರ ವಾತಾವರಣ ಎದುರಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅವರಿಗೆ ನಂಬಲೆ ಅಸಾಧ್ಯವಾಗಿದ್ದೆಂದರೆ, ತಾವು ಕೇಳದಿದ್ದರು ಅವರಾಗಿಯೆ ತಮ್ಮ ತಂಡದ ಕನ್ಸಲ್ಟೆಂಟುಗಳಿಗೂ ಬೋನಸ್ ಸ್ಕೀಮಿನಲ್ಲಿ ಸೇರಬೇಕೆಂದು ಹೇಳುತ್ತಿದ್ದಾರೆ..! ಕನ್ಸಲ್ಟೆಂಟುಗಳ ಮಾಮೂಲಿ ದರಗಳನ್ನು ನೀಡಲೆ ಹತ್ತಾರು ಬರಿ ಚರ್ಚೆ ಮಾಡಬೇಕಾಗಾದ ಸಂಧರ್ಭದಲ್ಲಿ ಇದು ಅವನಿಗೆ ನಂಬಲೆ ಅಸಾಧ್ಯವಾದ ಸಂಗತಿಯಾಗಿ ಕಂಡಿತ್ತು. ಇನ್ನು ಈ ಫಲಿತಾಂಶದ ಪ್ರಖರ ಪ್ರಕಾಶದಲ್ಲಿ ಶ್ರೀನಿವಾಸ ಪ್ರಭುವಿನಂತಹವರು ಮತ್ತೇನೆ ಕುತಂತ್ರ ನಡೆಸಿ ಕಿವಿ ಚುಚ್ಚಿದರೂ ಅದನ್ನು ಸುಲಭದಲ್ಲಿ ನಂಬುವುದು ಸಾಧ್ಯವಿರಲಿಲ್ಲ... ನಂಬಲು ಸಿದ್ದವಿದ್ದರೂ ಈ ಸನ್ನಿವೇಶದಲ್ಲಿ ಪ್ರಶಂಸಿಸುವುದಲ್ಲದೆ ಮತ್ತೇನೂ ಮಾಡುವಂತೆಯೂ ಇರಲಿಲ್ಲ. ಅಷ್ಟರ ಮಟ್ಟಿಗಾದರೂ ಇಮೇಜ್ ಬದಲಾವಣೆಗೆ ಕಾರಣವಾಗಿತ್ತು ಈ ಪ್ರಾಜೆಕ್ಟಿನ ಫಲಿತಾಂಶದ ಪ್ರಭಾವಳಿ. 

ಇದರ ಮಧ್ಯದಲ್ಲೇ ಪ್ರಾಜೆಕ್ಟಿನ ತಂಡಕ್ಕೆ ಪುರಸ್ಕಾರದ ರೂಪದಲ್ಲಿ ಏನಾದರೂ ಕೊಡ ಮಾಡಿಸಿ ಅವರಿತ್ತ ಮನಃಪೂರ್ವಕ ಬೆಂಬಲದ ನೈತಿಕ ಹೊರೆಯಿಂದ ಋಣಮುಕ್ತನಾಗಬೇಕೆಂದು ಆಲೋಚಿಸುತ್ತಿದ್ದ ಶ್ರೀನಾಥನಿಗೆ ಅದನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ಗೊತ್ತಾಗದೆ ಒದ್ದಾಡುವಂತಾಗಿತ್ತು. ಆದರೆ ಈ ಆಯಾಚಿತವಾಗಿ ಒದಗಿ ಬಂದ ಸಂಧರ್ಭದಿಂದಾಗಿ ಹೆಚ್ಚಿನ ಪರಿಶ್ರಮಪಡುವ ಅಗತ್ಯವಿಲ್ಲದೆಯೆ ವಿಷಯವನ್ನು ಮ್ಯಾನೇಜ್ಮೆಂಟಿನ ಜತೆ ಚರ್ಚೆಗೆ ತರಲು ಸಾಧ್ಯವಾದ ಬಗೆ ಸ್ವತಃ ಶ್ರೀನಾಥನನ್ನು ಚಕಿತನಾಗುವಂತೆ ಮಾಡಿಬಿಟ್ಟಿತ್ತು. ಅವನಿಗರಿವಿಲ್ಲದಂತೆಯೆ ವ್ಯಾಪಾರಿ ಬದುಕಿನ ಮಹತ್ವದ ಸತ್ಯವೊಂದನ್ನು ಮನವರಿಕೆ ಮಾಡಿಕೊಟ್ಟುಬಿಟ್ಟಿತ್ತು ಈ ಅನುಭವ - ವಾಣಿಜ್ಯ ಜಗದಲ್ಲಿ ಹಣವನ್ನು ತಂದುಕೊಡುವ ವಹಿವಾಟು ಮತ್ತು ಅದರಿಂದಾಗುವ ಲಾಭದ ಮೊತ್ತಗಳಷ್ಟೆ ನಿಜವಾದ ದೇವರು ಎಂದು. ಯಾರು ಏನೇ ಮಾಡಿದರೂ ಎಲ್ಲಿಯತನಕ ವ್ಯಾಪಾರಿ ಲಾಭಾಂಶ ಗಲ್ಲಾಪೆಟ್ಟಿಗೆಯನ್ನು ಖುಷಿಯಲ್ಲಿಟ್ಟಿರುವುದೊ ಅಲ್ಲಿಯವರೆಗೆ ಅವರನ್ನಾವ ಭಾಧಕವೂ ತೀವ್ರವಾಗಿ ಕಾಡುವುದಿಲ್ಲ ; ಅದರ ಝಣಝಣ ಹೆಚ್ಚಿದ್ದಷ್ಟು ಕೇಳಿದ ಬೇಡಿಕೆಗಳೆಲ್ಲ ತಕ್ಷಣವೆ ತಪಸ್ಸಿಗೆ ಮೆಚ್ಚಿ ಬಂದ ದೇವರಿತ್ತ ವರದಂತ, ಪಟಪಟನೆ ಮಂಜೂರಾಗಿ ಬಿಡುತ್ತವೆ - ಈ ಪ್ರಾಜೆಕ್ಟಿನಲ್ಲಾಗುತ್ತಿರುವಂತೆ. ಅದೇನಾದರೂ ಆಗಲಿ ಹೇಗಾದರೂ ಆಗಲಿ, ಯಾವ ಯೋಜನೆ, ಕಾರ್ಯತಂತ್ರದ ಅಗತ್ಯವಿಲ್ಲದೆಯೆ ತಂತಾನೆ ಚಕ್ಕನೆ ಗುರಿ ಪೂರೈಸಿಕೊಂಡ ಬಗೆಗೆ ಅತೀವ ಸಂತಸಗೊಂಡ ಹುರುಪಿನಲ್ಲಿ ಪ್ರಸನ್ನವಾಗಿಹೋಗಿತ್ತು ಶ್ರೀನಾಥನ ಮನ. ಇದಕ್ಕೆ ಶ್ರೀನಿವಾಸ ಪ್ರಭುವು ಕೂಡ ಕಾಲೆಳೆಯುವಂತಿರಲಿಲ್ಲ - ಆ ಸಾಧ್ಯತೆಗೆ ಅವಕಾಶವೆ ಆಗದಂತೆ ಮುನ್ನೆಚ್ಚರಿಕೆಯಿಂದ ತನ್ನನ್ನು ಆ ಬೋನಸ್ ಸ್ಕೀಮಿನಿಂದ ಹೊರಹಾಕಿಕೊಂಡುಬಿಟ್ಟಿದ್ದ ಕಾರಣ ಆ ಯೋಜನೆಯಡಿಯಲ್ಲಿ ಯಾರೂ ಸ್ವಾರ್ಥವನ್ನು ಹುಡುಕುವಂತಿರಲಿಲ್ಲ. ತನ್ನ ಹೆಸರಿನ ಜತೆಗೆ ಚಾಕಚಕ್ಯತೆಯಿಂದ  ಶ್ರೀನಿವಾಸ ಪ್ರಭುವಿನ ಹೆಸರನ್ನು ಸೇರಿಸಿಬಿಟ್ಟಿದ್ದ ಕಾರಣ ಅವನನ್ನು ಆ ಪುರಸ್ಕಾರದ ಪರಿಧಿಯಿಂದ ಹೊರಗಿಟ್ಟ 'ವಿಘ್ನ ಸಂತೋಷವೂ' ಒಳಗೊಳಗೆ ಖುಷಿಕೊಡುತ್ತಿತ್ತು. ಒಟ್ಟಾರೆ ಯಶಸ್ಸಿನ  ಬಗಲಿಗೆ ಸೇರಿಕೊಂಡು ಬರುತ್ತಿದ್ದ ವಿಜಯಗಳ ಮೇಲೆ ವಿಜಯದ ಸಾಲುಗಳಿಂದಾಗಿ ವಿಜಯೋತ್ಸವ ಆಚರಿಸುವ ವಿಷಯವೆ ಅರ್ಥಹೀನವಾಗಿ ಕಾಣಿಸತೊಡಗಿತ್ತು - ಬರಿ ವಿಜಯಗಳೆ ಸುತ್ತುವರಿದ ವಾತಾವರಣದಲ್ಲಿ, ಸಂಭ್ರಮದಿಂದ ಆಚರಿಸುವುದಾದರೂ ಏನನ್ನು? ಎನ್ನುವ 'ಸುಭೀಕ್ಷ್ಯ ವೈರಾಗ್ಯ' ವಿಚಿತ್ರ ನಿರ್ಲಿಪ್ತತೆಯ ರೂಪದಲ್ಲಿ ಮನವನ್ನಾವರಿಸಿಕೊಂಡುಬಿಟ್ಟಿತ್ತು .

ಏನೇನೊ ತಿರುವು ಕಂಡು ಆತಂಕದಲಿ ಅದ್ದಿ, ತೆಗೆದು, ತಿರುವಿ, ಹೊರಳಾಡಿಸಿ, ಕಂಗೆಡಿಸಿ ಕಡೆಗೆಲ್ಲಾ ಸುಖಕರವಾಗಿ ಕೊನೆಗೊಂಡ ಪ್ರಾಜೆಕ್ಟು ಗೋಲೈವ್ ಶ್ರೀನಾಥ ಮತ್ತವನ ಹಿತೈಷಿಗಳಿಗದೆಷ್ಟೊ ಸಮಾಧಾನ, ನಿರಾಳತೆ ತಂದರೂ, ಶ್ರೀನಾಥನ ಮನದ ಮೂಲೆಯಲ್ಲಿ ಮಾತ್ರ ಕುನ್. ಸು ಳಿಗಾದ ಅನ್ಯಾಯದ ಚಿಂತೆ ನಿರಂತರ ಯಾತನಾಪೂರ್ಣ ವ್ಯಥೆಯ ರೂಪದಲ್ಲಿ ಕಾಡ ಹತ್ತಿತ್ತು. ಅಲ್ಲಿಯವರೆಗೆ ಪ್ರಾಜೆಕ್ಟಿನ ಉದ್ಘಾಟನೆ ಮತ್ತು ಮೊದಲ ಮಾಸಾಂತ್ಯದ ಗಡಿಬಿಡಿಯಲ್ಲಿ ಮರೆತು ಹೋದಂತಿದ್ದ ಅವಳ ಪ್ರಕರಣ, ಅವೆಲ್ಲಾ ಕಳೆದು ಈಗಿನ ಒತ್ತಡ ರಹಿತ ಪರಿಸ್ಥಿತಿಯ ಸಹಜ ತೆಕ್ಕೆಗೆ ಮರಳುತ್ತಿದ್ದಂತೆ, ಮನದಾಳದಿಂದ ಪುನರಾರ್ಭವಿಸಿ ಮತ್ತೆ ಮತ್ತೆ ಕೆಣಕುವ, ಮರುಕಳಿಸುವ ನೆನಪಾಗಿ ಕಾಡತೊಡಗಿತ್ತು. ಅವಳು ಕಾಣೆಯಾಗುವ ಆ ದಿನದ ಮುನ್ನ ಒಮ್ಮೆಯು ಅವಳೊಡನೆ ಮುಖತಃ ಮಾತಾಡಲಾಗದಿದ್ದ ಕೊರಗು ಮತ್ತು ತಾನವಳನ್ನು ಕಂಡು ಮಾತಾಡಬಹುದಾಗಿದ್ದ ಆ ಕೊನೆ ಗಳಿಗೆಯಲ್ಲೆ ಕೆಲಸದಿಂದ ತೆಗೆದು ಹಾಕಲ್ಪಟ್ಟಳೆಂಬ ಕಹಿ ಸುದ್ದಿಯ ಆಘಾತ - ಎರಡು ಸೇರಿ, ತನ್ನಿಂದ ಅವಳಿಗೆ ಅಗಾಧ ಅನ್ಯಾಯವಾಯಿತೆಂಬ ಭಾವನೆಯನ್ನು ಕೆದಕಿ ಮನಸನ್ನು ಕದಡಲಾರಂಭಿಸಿತ್ತು. ಪದೇ ಪದೇ ಅವಳ ಉದಾತ್ತತೆಯ ನೈತಿಕ ಸಾಮರ್ಥ್ಯ ಪ್ರಖರ ಕಾಂತಿಯಂತೆ ಕಣ್ಮುಂದೆ ಬಂದು ನಿಲ್ಲುತ್ತಾ ಕಾಡುತ್ತಿದ್ದರೆ, ತನ್ನ ನೀಚ ಸ್ತರಕ್ಕಿಳಿದ ಮನಸತ್ವದ ದೆಸೆಯಿಂದಾಗಿ ಹತಾಶೆ ಮತ್ತು ನಾಚಿಕೆಗಳಿಂದ ತಲೆ ತಗ್ಗಿಸುವಂತೆ ಮಾಡಿಬಿಡುತ್ತಿತ್ತು. ಅವಳನ್ನೊಂದು ಬಾರಿಯಾದರೂ ಹೇಗಾದರೂ ಸಂಧಿಸಿ ಮಾತನಾಡಿಸಿದರೆ, ಆ ಭಾವೋತ್ಕರ್ಷದ ಗರಿಷ್ಠ ವ್ಯಾಕುಲತೆ ಕೊಂಚ ತಹಬದಿಗೆ ಬರಬಹುದೇನೊ ಎನಿಸಿ ಅದರ ಸಾಧ್ಯತೆಯನ್ನು ಕುರಿತು ಮತ್ತೆ ಚಿಂತಿಸತೊಡಗಿತ್ತು ಮನಸ್ಸು. ಆ ಹೊತ್ತಲ್ಲಿ ತಟ್ಟನೆ ನೆನಪಾಗಿತ್ತು - ಕುನ್. ಸೋವಿಯ ಮಾತು; ಅವಳೆಲ್ಲೊ ಅವನ ಮನೆಯ ಹತ್ತಿರವೆ ಇರುವಳೆಂಬ ಮಾತು. ಆದರೆ ಅವಳ ಕುರಿತು ಅವನಲ್ಲಿ ನೇರವಾಗಿ ವಿಚಾರಿಸುವುದಾದರೂ ಹೇಗೆ? ಎಂಬುದಿನ್ನು ಅರಿವಾಗಿರಲಿಲ್ಲ ಶ್ರೀನಾಥನಿಗೆ. ಆದರೂ ಈಗೊಮ್ಮೆ ವೇರ್ಹೌಸಿಗೆ ಹೋಗುವ ನೆಪದಲ್ಲಿ ಮತ್ತೆ ಹೋಗಿ ಸಮಯ ಕಾದು, ಅವಕಾಶ ಸಿಕ್ಕಿ ಸಾಧ್ಯವಾದರೆ ಅವಳ ಕುರಿತು ವಿಚಾರಿಸುವುದು, ಇಲ್ಲವಾದರೆ ಕನಿಷ್ಠ ಕುನ್. ಸೋವಿಯ ಜತೆ ಮಾತಾಡಿದಂತಾದರೂ ಆದೀತೆಂದು ತೀರ್ಮಾನಿಸಿ ಒಂದು ದಿನ ಬೆಳಿಗ್ಗೆ ಅಲ್ಲಿಗೆ ನೇರವಾಗಿ ಹೋಗಿ ಬರಲು ನಿರ್ಧರಿಸಿದ್ದ ಶ್ರೀನಾಥ. ಅದು ಹೇಗೊ ಏನೊ ತಂಡದ ಎಲ್ಲರಿಗೂ ಪ್ರಾಜೆಕ್ಟ್ ಬೋನಸ್ ಸಿಗಬಹುದೆಂಬ ಸುದ್ಧಿ ಗಾಳಿಸುದ್ದಿಯ ರೂಪದಲ್ಲಿ ಹರಡಿ, ಎಲ್ಲರಿಗೂ ಅವನ ಮೇಲೊಂದು ಹೆಚ್ಚಿನ ಗೌರವ, ವಿಶ್ವಾಸವನ್ನು ಹುಟ್ಟಿಸಲು ಕಾರಣವಾಗಿತ್ತು. ಅದರ ವಿಸ್ತ್ರತ ರೂಪುರೇಷೆಗಳನ್ನು ರೆಕಮಂಡೇಶನ್ ಮಾಡುವ ಕೆಲಸ ಶ್ರೀನಾಥನದೆ ಆಗಿದ್ದ ಕಾರಣ ಅದಕ್ಕೆ ಬೇಕಿದ್ದ ಕೆಲ ವಿವರಗಳನ್ನು ಸಂಗ್ರಹಿಸುವ ಕೆಲಸವನ್ನು ವೇರ್ಹೌಸಿನಲ್ಲೂ  ಹೇಗೂ ಮಾಡಲೆಬೇಕಿತ್ತು. ಆ ಕಾರ್ಯವೂ ಮುಗಿದಂತಾಗಿಬಿಡಲಿ ಎಂದು ಸಂಬಂಧಪಟ್ಟ ವಿವರಗಳನ್ನೆಲ್ಲ ಫೈಲಿನಲ್ಲಿ ಜತೆಗೂಡಿಸಿ ಸಿದ್ದ ಮಾಡಿಟ್ಟುಕೊಂಡ ಶ್ರೀನಾಥ. 

ಆ ಮುಂದಿನೊಂದು ದಿನ ಬೆಳಿಗ್ಗೆಯೆ ವೇರ್ಹೌಸಿಗೆ ಶ್ರೀನಾಥನು ಕಾಲಿಡುವ ಹೊತ್ತಿಗೆ, ಅವನು ಮೊದಲೆ ಬರುವನೆಂದು ಗೊತ್ತಿದ್ದ ಕುನ್. ಸೋವಿ ಆಗಲೆ ಫ್ಲಾಸ್ಕಿನಲ್ಲಿ ಕಾಫಿ ತರಿಸಿ ಲೋಟ ಸಿದ್ದ ಮಾಡಿಕೊಂಡು ಕಾಯುತ್ತಿದ್ದ ಪ್ರಸನ್ನ ಚಿತ್ತನಾಗಿ. ಒಳಗೆ ಬರುತ್ತಿದ್ದ ಹಾಗೆಯೆ ಅವನ ಪ್ರಪುಲ್ಲಿತ ವದನ ಕಣ್ಣಿಗೆ ಬಿದ್ದಾಗ ಅವನನ್ನು ತುಸು ಛೇಡಿಸುವ ಮನಸಾಗಿ, ' ಹಲೋ ಕುನ್. ಸೋವಿ....ಏನಿದು? ಮುಖವೆಲ್ಲ ಆಗಲೆ ಫಳ ಫಳವೆನ್ನುತ್ತಿದೆ? ಆಗಲೆ ಪ್ರಮೋಶನ್ ಕೊಟ್ಟುಬಿಟ್ಟರಾ ಹೇಗೆ?' ಎಂದ.

ಅದನ್ನು ಕೇಳುತ್ತಿದ್ದಂತೆ ಪ್ರಮೋಶನ್ ಸಿಕ್ಕವನಷ್ಟೆ ಸಂತಸದಲ್ಲಿ ಗಹಿಗಹಿಸಿ ನಗುತ್ತ, 'ನಾಟ್ ಯೆಟ್..ನಾಟ್ ಯೆಟ್... ಬಟ್ ಆಲ್ರೆಡಿ ಡಿಸ್ಕಸ್ಡ್ ವಿತ್ ಮೈ ಬಾಸ್..' ಎಂದು ಕಣ್ಣು ಮಿಟುಕಿಸಿದ ಕುನ್. ಸೋವಿ.

ಅವನ ಸಹಕಾರವಿರದಿದ್ದರೆ ಈ ಪ್ರಾಜೆಕ್ಟಿನ 'ನ ಭೂತೊ..ನ ಭವಿಷ್ಯತೆ...' ಯಶಸ್ಸು ಸಾಧ್ಯವಿರುತ್ತಿರಲಿಲ್ಲವೆಂದು ಅರಿತಿದ್ದ ಶ್ರೀನಾಥ ಅವನ ಸಾಧನೆಗೆ ಈ ಬಾರಿಯಾದರೂ ಪ್ರಮೋಶನ್ ಸಿಗಲೆಂದು ಹಾರೈಸುತ್ತ, ಅವಕಾಶ ಸಿಕ್ಕರೆ ಕುನ್. ರಗ್ ಹತ್ತಿರ ಕುನ್. ಸೋವಿಯ ಕುರಿತು ಒಂದೆರಡು ಒಳ್ಳೆಯ ಮಾತು ಹೇಳಬೇಕೆಂದು ತೀರ್ಮಾನಿಸಿಕೊಂಡ. ಅವನು ಬಗ್ಗಿಸಿಟ್ಟ ಕಾಫಿಯನ್ನು ಗುಟುಕರಿಸುತ್ತ ಕಾಫಿಯನ್ನು ಕಂಡು ನೆನಪಿಸಿಕೊಂಡವನಂತೆ ನಟಿಸುತ್ತ, ' ಅಂದ ಹಾಗೆ ಆ ಕಾಫಿ ವನಿತೆಯಿದ್ದಳಲ್ಲ ಕುನ್. ಸು ಅವಳೀಗ ಏನು ಮಾಡುತ್ತಿದ್ದಾಳೆ ? ಬೇರೆಲ್ಲಾದರೂ ಕೆಲಸ ಸಿಕ್ಕಿತಂತ ಇಲ್ಲವಾ?' ಎಂದು ಕೇಳಿದ.

' ಇಲ್ಲಾ..ಇನ್ನು ಎಲ್ಲೂ ಕೆಲಸಕ್ಕೆ ಹೋಗುತ್ತಿಲ್ಲ ಅವಳು... ಕೆಲವು ಅನಾಥ ಮಕ್ಕಳನ್ನು ಅವಳೆ ನೋಡಿಕೊಳ್ಳುತ್ತಿದ್ದಾಳೆಂದು ಹೇಳಿದ್ದು ನೆನಪಿದೆಯೆ? '

'ಹೌದು..ನೆನಪಿದೆ..'

'ಅವುಗಳಲ್ಲಿ ಗಂಡು ಮಕ್ಕಳಿಗೆ 'ಥಾಯ್' ಸಂಪ್ರದಾಯದ ಪ್ರಕಾರ 'ಸನ್ಯಾಸಿ - ಬೌದ್ಧ ಭಿಕ್ಷು'ವಿನ ದೀಕ್ಷೆ ಕೊಡಿಸುವ 'ಮಾಂಕ್ ಹುಡ್'ಗಾಗಿ ಓಡಾಡುತ್ತಿದ್ದಾಳಂತೆ... ಅದಕ್ಕಾಗಿ ಪ್ರತಿ ದಿನವೂ ಈಗ 'ವಾಟ್ ಫೋ' (ಥಾಯ್ ದೇವಾಲಯದ ಹೆಸರು) ಗೆ ಹೋಗಿ ಬರುತ್ತಿದ್ದಾಳಂತೆ...'

' ಆದರೆ 'ಮಾಂಕ್ ಹುಡ್' ಕೊಡಿಸಬೇಕಾದ್ದು ಬರಿ ಗಂಡು ಹುಡುಗರಿಗೆ ಮಾತ್ರವಲ್ಲವೆ? '

'ಹೌದು... ಆದರೆ ಅವೆಲ್ಲ ತೀರಾ ಚಿಕ್ಕ ಮಕ್ಕಳಾದ ಕಾರಣ ಯಾರಾದರೂ ದೊಡ್ಡವರು ಜತೆಯಲ್ಲಿರಲೆಬೇಕಲ್ಲ? ಅವರಂತೂ ಕನಿಷ್ಠ ಮೂರು ವಾರವಾದರೂ ಅಲ್ಲೆ ಇರಬೇಕು, ಹೊರಗೆ ಬರುವಂತಿಲ್ಲ.. ಅದಕ್ಕೆ ಇವಳು ದಿನವೂ ಅಲ್ಲಿಗೆ ಹೋಗಿ ಬರುತ್ತಾಳಂತೆ...'

' ವಾಟ್ ಫೋ ದೊಡ್ಡ ಬೌದ್ಧ ದೇವಸ್ಥಾನವೆಂದು ಕೇಳಿದ್ದೆ.. ಆದರೆ ಅಲ್ಲಿಗೆ ಹೋಗಲಿಕ್ಕೆ ಯಾಕೊ ಆಗಲೆ ಇಲ್ಲ...ಈ ಪ್ರಾಜೆಕ್ಟಿನ ಗಡಿಬಿಡಿಯಲ್ಲಿ' ಎತ್ತಲೋ ನೆಟ್ಟ ನೋಟದಲ್ಲೆ ಆಲೋಚಿಸುತ್ತ ನುಡಿದಿದ್ದ ಶ್ರೀನಾಥ..

' ಹೌದು ಬಲು ದೊಡ್ಡ ದೇವಾಲಯವೆ ಅದು ... ನನಗಂತೂ ಅಲ್ಲಿ ಹೋಗುವುದೆಂದರೆ ತುಂಬಾ ಇಷ್ಟ... ನಾಳೆಯೊ, ನಾಳಿದ್ದೊ ನಾನೆ ಅಲ್ಲಿಗೆ ಹೋಗಿ ಬರಬೇಕೆಂದಿದ್ದೇನೆ ಬುದ್ಧ ಭಗವಾನನಿಗೆ ನಮಸ್ಕರಿಸಿ, ಧನ್ಯವಾದ ಹೇಳಿ ಬರಲು.. ಅಲ್ಲಿರುವ ಮಲಗಿದ ಬುದ್ಧನ ಪ್ರತಿಮೆಯ ಉದ್ದವೆ ನೂರೈವತ್ತು ಅಡಿಗೂ ಹೆಚ್ಚು ಗೊತ್ತಾ?' ಎಂದ ಕುನ್. ಸೋವಿ.

ಅಲ್ಲಿರುವ ಶ್ರೀರಂಗನಂತೆ ಮಲಗಿ ನಿದ್ರಿಸುತ್ತಿರುವ ಭಂಗಿಯಲ್ಲಿರುವ ಬುದ್ಧ ಭಗವಾನನ ಪ್ರತಿಮೆಯ ಉದ್ದ ನೂರೈವತ್ತು ಅಡಿಯಷ್ಟೆಂದು ಶ್ರೀನಾಥನೂ ಕೇಳಿದ್ದ. ಅದನ್ನು ಒಂದೆ ಬಾರಿಗೆ ನೋಡಲೆ ಆಗದಷ್ಟು ವಿಶಾಲವಾಗಿರುವುದರಿಂದ ದರ್ಶನಕ್ಕೆ ಮೂರು ಬೇರೆ ಬೇರೆಯಾದ ವಿಶಾಲವಾದ ದ್ವಾರಗಳನ್ನು ಮಾಡಿರುವುದನ್ನು ಕೇಳಿದ್ದ. ಕುನ್. ಸೋವಿ ಅದರ ಕುರಿತು ಹೇಳಿದಾಗ ಸ್ವಲ್ಪ ಕುತೂಹಲ ಹೆಚ್ಚಾದಂತಾಯಿತು. ಜತೆಗೆ ಅವನೂ ಅಲ್ಲಿಗೆ ಹೋಗಿ ಬರುವ ಯೋಚನೆಯಲ್ಲಿದ್ದಾನೆಂದಾಗ ತಾನೂ ಜತೆಯಲ್ಲೆ ಹೋಗಿ ಬರಬಾರದೇಕೆ? ಎನ್ನುವ ಆಲೋಚನೆಯೂ ಬಂತು.. ಅದೆ ಹೊತ್ತಿನಲ್ಲಿ ಮನದ ಮೂಲೆಯ ಆಸೆಯೊಂದು 'ಅದೃಷ್ಟವಶಾತ್...ಅಲ್ಲೇನಾದರೂ ಕುನ್. ಸು ಸಹ ಬಂದಿದ್ದರೆ ಅವಳನ್ನು ಕಂಡು ಕ್ಷಮೆ ಕೇಳುವ ಅವಕಾಶ ಸಿಕ್ಕಿದ್ದರೂ ಸಿಕ್ಕೀತೂ?' ಎಂಬ ಪ್ರಲೋಭನೆಯೂ ಹಿನ್ನಲೆಯಲ್ಲಿ ಕೆಲಸ ಮಾಡಿ 'ಯಾಕಾಗಬಾರದು ?' ಅನಿಸಿ ಕುನ್. ಸೋವಿಯನ್ನು ಕೇಳಿಯೆಬಿಟ್ಟ..

' ನಾನೂ ಸಹ ಈ 'ಮಾಂಕ್ ಹುಡ್' ಮತ್ತು ದೊಡ್ಡ ಬುದ್ಧನ ವಿಗ್ರಹದ ಕುರಿತು ಸುಮಾರು ಕೇಳಿದ್ದೇನೆ.. ಅಲ್ಲಿಗೆ ಹೋಗಲಿಕ್ಕೆ ಇಲ್ಲಿಯತನಕ ಸಮಯವಿರಲಿಲ್ಲ.. ಈಗ ಸಮಯವಂತೂ ಇದೆ.. ನೀನು ಹೋಗುವುದಾದರೆ ನಾನೂ ಜತೆಯಲ್ಲಿ ಬರಬಹುದೆ?' 

ಅದನ್ನು ಕೇಳಿ ತಮ್ಮ ದೇವರು, ದೇವಾಲಯದ ಬಗ್ಗೆ ಅವನಿಗಿರುವ ಆಸಕ್ತಿಯಿಂದ ಉತ್ಸುಕನಾಗಿ, 'ಶೂರ್ ಅದರಲ್ಲೇನಿದೆ? ಖಂಡಿತ ಹೋಗಿಬರುವ... ಒಂದು ದಿನ ಬೆಳಿಗ್ಗೆ ಆಫೀಸಿನಿಂದ ನೇರ ಹೊರಟರೆ ಆಯ್ತು.. ಹಗಲಿನ ಹೊತ್ತಿನಲ್ಲಿ ಜನ ಸಂದಣಿ ಕಡಿಮೆ ಮತ್ತು ಕೆಲವು ಬೌದ್ಧ ಗುರುಗಳು, ಸನ್ಯಾಸಿಗಳು, ಭಿಕ್ಷುಗಳು ಸ್ವಲ್ಪ ವಿರಾಮವಾಗಿ ಮಾತಿಗೆ ಸಿಗುತ್ತಾರೆ...ನೇರ ಅವರ ಆಶೀರ್ವಾದ ಪಡೆಯಬಹುದು....ಅಲ್ಲೆ ಹತ್ತಿರದಲ್ಲೆ ಊಟ ಮುಗಿಸಿಕೊಂಡು ವಾಪಸ್ಸು ಬಂದುಬಿಡಬಹುದು..ಆರ್ ಯೂ ಫ್ರೀ ಆನ್ ಥರ್ಸ್ ಡೆ? ' ಎಂದಿದ್ದ ಕುನ್. ಸೋವಿ. 

ಅಲ್ಲಿಗೆ ಗುರುವಾರದ ಬೆಳಿಗ್ಗೆ ಕುನ್. ಸೋವಿ ನೇರ ಆಫೀಸಿಗೆ ಬಂದು ಶ್ರೀನಾಥನನ್ನು ಕರೆದುಕೊಂಡು 'ವಾಟ್ ಫೋ'ಗೆ ಒಟ್ಟಾಗಿ ಹೋಗುವುದೆಂದು ತೀರ್ಮಾನವಾಯ್ತು. ಆ ದಿನವನ್ನೆ ಕಾತರದಿಂದ ಎದುರು ನೋಡತೊಡಗಿದ ಶ್ರೀನಾಥ - ಅಲ್ಲಾದರೂ ಕುನ್. ಸು ಮುಖತಃ ಭೇಟಿಗೆ ಸಿಗಬಹುದೆ? ಎನ್ನುವ ಸದಾಶಯ ತುಂಬಿದ ದೂರದಾಸೆಯಲ್ಲಿ...!

(ಇನ್ನೂ ಇದೆ)
__________

 

Comments