ಅಮ್ಮ

ಅಮ್ಮ

"ನೀ ದಿನಾ ಮುಂಜಾನೆ ಹೊರಗ್ ಹೋಗೋವಾಗ ದಯವಿಟ್ಟು ಸ್ವಲ್ಪ ತುಳಸಿ ಗಿಡಕ್ಕ ನೀರ್ ಹಾಕು.. ಅದನ್ನ ಒಣಗಿಸಬ್ಯಾಡ. ನಾ ದರಾ ಸರ್ತಿ ಊರಿಂದ ಬಂದಾಗ ಒಂದ್ ಹೊಸಾ ಸಸಿ ತಂದ್ ಹಚ್ಚಲಿಕ್ಕೆ ನನ್ನಿಂದ ಆಗಂಗಿಲ್ಲಾ.ಈ ಬೆಂಗ್ಳುರ್ನಾಗ ನಾ ತುಳಸಿ ಸಸಿ ಹುಡುಕೋತ ಎಲ್ಲಿ ಹೋಗ್ಲಿ ?"

ಪ್ರತಿ ಸರ್ತಿ ಊರಿಗೆ ಹೋಗುವಾಗ ಮನೆಯಿಂದ ಮೆಜೆಸ್ಟಿಕ್ ಬರುವವರೆಗೂ ಅಟೋದಲ್ಲಿ ಅಮ್ಮ ಹೇಳುತ್ತಿದ್ದ ಕೆಲ ಮಾತುಗಳು ಈಗಲೂ ನನ್ನಲ್ಲಿ ಹಾಗೆಯೇ ರಕ್ತಗತವಾಗಿ ಬಿಟ್ಟಿವೆ.ಓದು ಮುಗಿಸಿ ಕೆಲಸಕ್ಕೆಂದು ನಾನು ಬೆಂಗಳೂರಿಗೆ ಬಂದಮೇಲೆ ತನ್ನ ಗಂಡ ಹಾಗು ಮಗನ ಬದುಕು-ಬವಣೆಗಳ ನಡುವೆ ಅಮ್ಮ ಹರಿದು ಹಂಚಿಹೋಗಿದ್ದಾಳೆ.ನಾನು ನನ್ನ ತಂಗಿಯ ಜೊತೆಗೆ ಇರುವವರೆಗೂ ಬೆಂಗಳೂರಿನ ಕಡೆಗೆ ಅಷ್ಟಾಗಿ ತಲೆ ಹಾಕುತ್ತಿರದ ಅಮ್ಮ ತಂಗಿಯ ಮದುವೆಯಾದಮೇಲೆ ನನ್ನ ಒಂಟಿತನವನ್ನು ಒಂಚೂರು ಕಡಿಮೆ ಮಾಡಲು ಹಾಗು ನನ್ನ ಬೆಟ್ಟದಷ್ಟಿದ್ದ ಆಲಸ್ಯದಿಂದ ಗುಬ್ಬಿಯ ಗೂಡಾಗಿರುತ್ತಿದ್ದ ನನ್ನ ಮನೆಯನ್ನು ಹೆಚ್ಚು-ಕಡಿಮೆ ಮತ್ತೆ "ಮನೆ"ಯನ್ನಾಗಿ ಮಾಡುವಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲಾ.

"ನೀ ಯಾಕಿಷ್ಟು ಲೇಜಿ ಇದ್ದಿದ್ದಿ ? ನೀ ಹಿಂಗೇ ಇದ್ರೆ ಮುಂದ್ ಬಾಳ್ವಿ ಮಾಡೋದು ಬಹಳ ಕಷ್ಟ ನೋಡು..."ಎಂದು ಆಟೋ ಹತ್ತುವ ಮುಂಚೆ ನಿಧಾನವಾಗಿ ಸುರಿಯುವ ಸೋನೆ ಮಳೆಯ ಹಾಗೆ ನಾನು ಮಾಡಬೇಕಾದ ಬೇಕು-ಬೇಡಗಳ ಪಟ್ಟಿ ಮಾಡಿ,ಕೆಲವನ್ನು ಬಹಳ ನಾಜೂಕಾಗಿ ಇನ್ನೂ ಕೆಲವನ್ನು ಸ್ವಲ್ಪ ಖಾರವಾಗಿ ಹೇಳಿ ಕೊನೆಗೆ "ಅದೇನ್ ಮಾಡ್ತಿಯೋ..? ನಾ ಹೇಳಿದ್ದ್ ಒಂದ್ ಮಾತು ಕೇಳಂಗಿಲ್ಲ ನೀನು" ಎಂದು ಸ್ವಲ್ಪ ಹುಸಿ ಮುನಿಸು ತೋರಿಸಿ ಊರಿಗೆ ಹೋಗುತ್ತಿದ್ದಳು.

"ಯಾವತ್ತು ಇಲ್ದೆ ಅಪರೂಪಕ್ಕ ರಾತ್ರಿ ಅಡಿಗಿ ಮಾಡ್ಕೋಳಿಕ್ಕೆ ಹೋದ್ರೆ ಹಿಂಗೇ ಆಗ್ತದ ನೋಡು...ಗ್ಯಾಸ್ ಮ್ಯಾಲೆ ಅನ್ನಕಿಟ್ಟು ಪಲ್ಯ-ಕಾಯಿ ತರಲಿಕ್ಕೆ ಅಂತ ಹೊರಗ ಹೋದ್ರೆ ನೀ ಬರೋತನಕ ಅನ್ನ ಯಾರ್ ನೋಡ್ಬೇಕು ?ಅವತ್ತಂತೂ ವಾಪಸ್ ಬರೋವಾಗ ಮನಿ ಕೀಲಿ ಬ್ಯಾರೇ ಕಳ್ಕೊಂಡ್ ಬಿಟ್ಟಿ.ಮನಿ ಒಳಗ್ ನೋಡಿದ್ರೆ ಕುಕ್ಕರ್ ಸೀಟಿ ಒಂದರ ಮ್ಯಾಲೆ ಒಂದು ಕೂಗಲಿಕ್ಕೆ ಶುರು ಆಗಿದ್ವು.ಅಂತೂ-ಇಂತೂ ಸಾಹಸ ಮಾಡಿ ಮನಿ ಕೀಲಿ ಮುರಿಸಿ ಒಳಗ ಹೋದಿ.ದೇವ್ರ ದಯದಿಂದ ಅವತ್ತೇ ಗ್ಯಾಸ್ ಬ್ಯಾರೇ ಮುಗದಿತ್ತು ಇಲ್ಲಾಂದ್ರೆ ಎಷ್ಟು ಧೊಡ್ಡ ಅನಾಹುತ ಆಗ್ತಿತ್ತು ?ಅದಕ್ಕೆ ಹೇಳೋದು ದಿನಾ ರಾತ್ರಿ ಅಡಗಿ ಮಾಡ್ಕೋ ಅಂತ.ಹೊರಗ ಹೋಗಿ ಅದೇನ್ ತಿಂದ್ರೂ ಹೊಟ್ಟಿ ತುಂಬಂಗಿಲ್ಲಾ.ಬರೀ ಮಸರನ್ನ ಒಂದ್ ತಿಂದ್ ಬಂದ್ರೆ ಮತ್ತೆ ಅಪರಾತ್ರಿ ಆಗೋ ಹಸಿವಿಗೆ ನಿದ್ದಿನೂ ಸರಿಯಾಗಿ ಬರಂಗಿಲ್ಲಾ".

ಅಮ್ಮನ ಎಲ್ಲ ಮಾಡು/ಬೇಡಗಳಿಗೆ ನನ್ನಿಂದ ಲಯಬಧ್ಹವಾದ ಸರಿ,ಆಯ್ತು,ಮಾಡ್ತೀನಿ,ಈ ಸರ್ತಿ ಖರೆನೇ ಮಾಡ್ತೀನಿ ಎಂಬ ಶಬ್ದಗಳು ಬಂದ ಮೇಲೆ ಅವಳು ಸ್ವಲ್ಪ ನಿರಾಳವಾಗುತ್ತಿದ್ದಳು."ನಾ ಎಷ್ಟ್ ದಿನಾಂತ ನಿನ್ ಜೊತಿ ಇರ್ಲಿಕ್ಕೆ ಆಗ್ತದ ?ಬಹಳ ದಿನ ಅಲ್ಲಿ ಅವ್ರುನ್ನು ಒಬ್ಬರನ್ನೇ ಬಿಟ್ಟು ಬರ್ಲಿಕ್ಕೆ ಆಗಂಗಿಲ್ಲಾ " ಎಂದು ಹೇಳಿ ಊರಿನ ಬಸ್ಸ್ ಹಿಡಿಯುತ್ತಿದ್ದ್ದಳು.

ನಾನು ಓದುವ ಪುಸ್ತಕಗಳಿಗೂ ಅಮ್ಮನಿಗೂ ಒನ್ದೂರಾಗದು."ಅದೇನ್ ರಾತ್ರಿ ತನಕ ಪುಸ್ತಕ ಓದ್ತಿರ್ತಿದಿ ?.. ಮುಂಜಾನೆ ಜಲ್ದಿ ಎದ್ದು ಆಫೀಸಿಗೆ ಹೋಗ್ಬೇಕು ಅಂಬೋದು ಮರಿಬ್ಯಾಡ... ಈ ಓದು-ಬರಿ ಎಲ್ಲಾ ನೀ ವೀಕೆಂಡ್ನಾಗ ಯಾಕ ಮಾಡಬಾರ್ದು ? ಹೋಗ್ಲಿ ಓದೋದ್ ಓದ್ತಿ.. ನಿನ್ನ ಕೆಲಸಕ್ಕ ಸಂಬಂಧ ಪಟ್ಟ ಕಂಪ್ಯೂಟರ್ ಪುಸ್ತಕ ಆದ್ರು ಓದು.. ಅದೆಲ್ಲಾ ಬಿಟ್ಟು ಈ ಸುಟ್ಟು-ಸುಡುಗಾಡ್ ಕಥಿ-ಕಾದಂಬರಿ ಓದಿದ್ರೆ ಮುಂದ ನಿನಗೇನು ಉಪಯೋಗ ಆಗ್ತದ ಹೇಳು ? ಅದರ ಬದ್ಲಿ ಒಂದ್ ಸ್ವಲ್ಪ ದೇವ್ರ ಪುಸ್ತಕದ ಕಡಿಗೂ ಹಣಿಕಿ ಹಾಕು.ನಾ ಒಂದ್ ಹೇಳ್ತೀನಿ ನೋಡ್ ಗಿರಿ.. ಪುಸ್ತಕ ಓದ್ಕೋತ ಕೂತ್ರೆ ಹೊಟ್ಟಿ ತುಂಬಂಗಿಲ್ಲಾ.. ಇದರ ಮ್ಯಾಲೆ ನಿನ್ನ ಇಷ್ಟಾ .. ನಾ ಅರೆ ಎಷ್ಟಂತ ಹೇಳ್ಲಿ ?"

ಅಮ್ಮ ಊರಿನಲ್ಲಿ ಇರುವಷ್ಟು ದಿನಾ ಹೊಸ ಪುಸ್ತಕಗಳನ್ನು ಕೊಂಡು ಮನೆಗೆ ತರುವದು ತುಂಬ ಪ್ರಯಾಸದ ವಿಷಯವಾಗಿರುತ್ತದೆ..

"ಅರೇ.. ಮತ್ತೆ ಒಂದ್ ಹೊಸಾ ಪುಸ್ತಕನಾ ? ಮನ್ನೆ ಒಂದ್ ತೊಗೊಂಡ್ ಬಂದಿದ್ದಿ ? ಅದನ್ನ ಪೂರ್ತಿ ಓದಿ ಮುಗ್ಸು ಮೊದ್ಲು..ಅಮ್ಯಾಲೆ ಬೇಕಾದ್ರೆ ಇನ್ನೊಂದ್ ತೊಗೊಂಡ್ ಓದು. ಮಗನೆ.. ಮನ್ಯಾಗಿನ ಲೈಟ್ ಬಿಲ್ ಕಟ್ಟಲಿಕ್ಕೆ ಟೈಮ್ ಇಲ್ಲಂತಿ.. ಈ ಪುಸ್ತಕ ಓದಲಿಕ್ಕೆ ನಿಂಗ ಟೈಮ್ ಯಲ್ಲಿಂದ ಬರ್ತದಲೇ.. ? "

ನೀವು ಬಹಳ ಪ್ರೀತಿಸುವವರಿಂದ ಬೈಸಿಕೊಳ್ಳುವ ಸುಖವಿದೆಯಲ್ಲಾ...ಅದು ಶಬ್ದಗಳಲ್ಲಿ ಸೆರೆಹಿಡಿಯಲಾಗದು.... ಇದರರ್ಥ ನಾವು ಅವರ ನೋವುಗಳಿಗೆ ತುಡಿಯುತ್ತಿಲ್ಲಾ ಎಂಬುದಲ್ಲ..ಆದರೇ ಆ ಬಯ್ಗಳ ಹಿಂದಿರುವ ಕಾಳಜಿ,ಬಯ್ಯುವಾಗ ಅವರ ಧ್ವನಿಯಲ್ಲಿ ಕಾಣಿಸಿಕೊಳ್ಳುವ ಆರ್ಧತೆ,ನಮ್ಮ ಭವಿಷ್ಯದ ಬಗ್ಗೆ ಅವರಿಗಿರುವ ಚಿಂತೆ,ಬೈದ ತಕ್ಷಣ ನಮ್ಮನ್ನು ರಮಿಸಿ "ಅದು ಹಂಗಲ್ಲ... ಆದ್ರೆ ನನ್ ಕಡೆಯಿಂದ ಬೈಸಿಕೊಳ್ಳೋ ಕೆಲ್ಸ ಯಾಕ ಮಾಡ್ತಿದಿ ? "ಎಂದು ಹೇಳುವ ಪರಿ, ಸ್ವಲ್ಪ ದಿನಗಳ ತನಕ ನಡೆಯುವ ಶೀತಲ ಸಮರ..ಒಲ್ಲದ ಮುನಿಸು.. ಮತ್ತೆ ಯಥಾ ಪ್ರಕಾರ ಗಾಣದೆತ್ತಿನಂತೆ ತಿರುಗುವ ಈ ಪ್ರಕ್ರಿಯೆ ನಿಮ್ಮ ಪ್ರೀತಿಪಾತ್ರರೊಂದಿಗಷ್ಟೇ ಸಾಧ್ಯ. ಯಾಕೆಂದರೆ ಅಲ್ಲಿ ಬಯ್ಯುವುದು/ಬೈಸಿಕೊಳ್ಳುವುದು ನಗಣ್ಯವಾಗಿಬಿಡುತ್ತದೆ, ಸಿಟ್ಟು,ಕೋಪಗಳು ಬರೀ ತಾತ್ಕಾಲಿಕ ಕ್ರಿಯೇಗಳಾಗಿ ಸ್ವಲ್ಪ ಸಮಯದನಂತರ ಅವು ತಮ್ಮ ಮೊನಚನ್ನು ಕಳೆದುಕೊಂಡು ಶಾಶ್ವತವಾದ ಪ್ರೀತಿಯೊಂದೆ ಪರಸ್ಪರರಲ್ಲಿ ಆವರಿಸಿರುತ್ತದೆ.ಆದರೇ ಇದೇ ನಿಮ್ಮ ಮ್ಯನೇಜರ್ ಜೊತೆ ಒಮ್ಮೆ ಬೈಸಿಕೊಂಡು ನೋಡಿ... ಒಂದು ವಾರದ ವರೆಗೂ ನಿಮ್ಮ ಮುಖ ಹರಳೆಣ್ಣೆ ಕುಡಿದವರ ಹಾಗೆ ಆಗಿರುತ್ತದೆ.

ಈ ವೀಕೆಂಡ್ ಬಂದಾಗಲಂತೂ ನಮ್ಮ ಮನೆಕೆಲಸದವಳು ನನಗೆ ಮನಸಾರೆ ಬಯ್ಯಲು ಅಮ್ಮನಿಗೆ ಕೆಲವೊಮ್ಮೆ ನೆರವಾಗುತ್ತಾಳೆ.

"ಅಯ್ಯೋ ನೋಡು ಒಂದ್ ಕಿತಾ ನಿನ್ನ್ ಸುಕುಮಾರನ್ನ.... ಒಗೆಯಕ್ಕೆ ಬಟ್ಟೆ ಹಾಕಲ್ಲಾ ದಿನಾಗ್ಲುನುವೇ...ಬಟ್ಟೆ ಇಟ್ರು ಸಬ್ಕಾರ ಮರೀತಾವ್ನೆ.. .ಅದೇಂಗ್ ಒಗಿಲಿ ನಾ ಬಟ್ಟೆನಾ.. ಒಣಗ್ ಹಾಕಿದ ಬಟ್ಟೆ ಒಳಗೂ ತೊಗೊಂಡ್ ಹೊಗಕಿಲ್ಲಾ..ನೋಡು ಗಾಳಿಗ್ ಅದೇಂಗ್ ಹಾರ್ತಾವೆ ಬಟ್ಟೆಯಲ್ಲಾ ಪಟ-ಪಟ ಅಂತಾ ... ಆಪೀಸ್ ಹೋಗೋ ಟೈಮಲ್ಲಿ ಬೆಳ್ಬೆಳಿಗ್ಗೆ ಅದೇಂಗ್ ಓಡ್ತಾ ಇರ್ತಾನೆ ನೋಡಿದ್ಯಾ.. ಸರಿಯಾಗಿ ಬಾಚ್ಕೊಂಡು ಹೊಗೊದಿಲ್ಲಾ ,, ಅದೇಂಗ್ ನೀನ್ ಇವ್ನ ಇಂಜೀನಿಯರ್ ಮಾಡ್ದೆ ಅಂತಾ ? "

ಎಂದು ಉಪ್ಪು-ಖಾರ ಹಚ್ಚಿ ತನ್ನ ಅಪ್ಪಟ ಮಂಡ್ಯ ಭಾಷೆಯಲ್ಲಿ ನನ್ನನ್ನು ನಿವಾಳಿಸಿ ಹಾಕಿ ತಿಂಗಳ ಕೊನೆಯ ಪಗಾರ ಮಾತ್ರ ಮರೆಯದೆ ತೆಗೆದುಕೊಳ್ಳುತ್ತಿದ್ದಳು.

ಇದೆ ನೆವವಾಗಿ ನನ್ನಮ್ಮ " ಅಲ್ಲಲೇ.. ಅಕಿ ಬಂದಾಗ ಸರಿಯಾಗಿ ಕೆಲ್ಸ ಮಾಡಿಸಲಿಕ್ಕೆ ಆಗಂಗಿಲ್ಲೇನು ? ಕಸಾ-ಮುಸ್ರಿ ಮಾಡಿಸಿ, ಒಂದ್ ಸ್ವಲ್ಪ ಆಕಿನ್ ಕಡೆ ಮನಿ ವರ್ಸಿಸಿ, ಧೂಳಾ-ಜೀಡಿ ಬಳ್ಸಿ ಮನಿ ಸ್ವಲ್ಪ ಮಟ್ಟಸಾಗಿ ಇಟ್ಗೊಳಿಕ್ಕೆ ಏನ್ ಆಗ್ಯದ ನಿಂಗ್ ಧಾಡಿ.. ಅಕಿಗೆ ಪುಕ್ಸೆಟ್ಟೆ ರೊಕ್ಕಾ ಕೊಡಲಿಕ್ಕೆ ಏನ್ ಅಕಿನ್ ತಂದ್ ನಾ ಹಚ್ಚಿದ್ದ್ ಇಲ್ಲಿ "

ಎಂದು ನನ್ನ ಮಂಗಳಾರತಿ ಕಾರ್ಯಕ್ರಮ ರಜೆಯ ನಿಮಿತ್ತ ಬಹಳ ಪ್ರಶಸ್ತವಾಗಿ ಮಾಡುತ್ತಿದ್ದಳು.

ಹಾಗೆಯೇ ಅಮ್ಮ ಮನೆ ಸ್ವಚ್ಛ ಗೊಳಿಸುವಾಗ ಎಕ್ಷ್ಪೈರಿ ಡೇಟು ಮುಗಿದು ಹೋದ ಫುಡ್ ಕೂಪನ್ಸ್ ಸಿಕ್ಕರೆ ಕೇಳಬೇಕೆ,

" ಫುಡ್ ಕೂಪನ್ಸ್ ಖರ್ಚ್ ಮಾಡ್ಲಾರ್ದೆ ಸುಮ್ನೆ ಮನ್ಯಾಗ್ ಇಟ್ಟರೆ ಅವೇನ್ ಮರಿ ಹಾಕ್ತಾವಂತ ಅನ್ಕೊಂಡಿ ಏನು ? ಬಗಲಾಗೆ ಇರೋ ಬಿಗ್ ಬಜಾರಕ್ಕ ಹೋಗಿ ನಿನಗ ಏನ್ ಬೇಕು ಅದು ತೊಗೊಂಡ್ ಬರ್ಲಿಕ್ಕೆ ಬರಂಗಿಲ್ಲೇನು ?ಕನಿಷ್ಠ ಪಕ್ಷ ತೊಗರಿ ಬ್ಯಾಳಿ,ಅವಲಕ್ಕಿ, ಒಂದಿಷ್ಟು ಹಣ್ಣು ಇಷ್ಟರ ತೊಗೊಂಡ್ ಇಡಬಾರ್ದಾ ?ತೊಗರಿ ಬ್ಯಾಳಿ ಹಾಕ್ಲಾರ್ದೆ ಬರಿ ಟಮಾಟಿ ಹಣ್ಣ ಮ್ಯಾಲೆ ಅದೇಂಗ್ ಸಾರ್ ಮಾಡ್ತಿ ಅಂತ ? ಅದಕ್ಕ ಯಾರರ ಸಾರ್ ಅಂತಾರೆನ್.. ನಿಸ್ಸಾರ್ ಅಂತಾರ.ಬ್ಯಾಳಿ ಹಾಕ್ಲಾರ್ದೆ ಸಾರ್ ಮಾಡಿದ್ರೆ ನಿಂಗ ಶಕ್ತಿ ಆದ್ರೂ ಎಲ್ಲಿಂದ ಬರ್ಬೇಕು ? ನೀ ಮನಸ್ಸ್ ಮಾಡಿದ್ರೆ ಒಂದೇ ಕುಕ್ಕರ್ನಾಗ ಎಲ್ಲಾ ಆಗ್ತಾವ.ಅದೂ ಹೋಗ್ಲಿ,ಕೊನಿಗೆ ನಾ ಮಾಡಿಕೊಟ್ಟ ಸಾರಿನ ಪುಡಿ ಡಬ್ಬಿನೂ ಸರಿಯಾಗಿ ಮುಚ್ಚಿ ಇಡಬೇಕು ಅಂತ ಗೊತ್ತಾಗದಿಲ್ಲೇನು ?"

ಹೀಗೆ ಪಟ್ಟಿ ಮಾಡ ಹೊರಟರೆ ಅದಕ್ಕೆ ಎಣೆಯೇ ಇಲ್ಲಾ...ನಿಜ ಹೇಳಬೇಕೆಂದರೆ ಅಮ್ಮ ನನಗೆ ಬಯ್ಯುವುದು ಬಹಳ ಕಡಿಮೆಯೇ..

ಪೂರ್ತಿ ಕೆಲವೊಮ್ಮೆ ಅವಳ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ಮಾಡಿದಾಗ ನಿರ್ವಾಹವಿಲ್ಲದೆ ಬೈಸಿಕೊಳ್ಳಬೇಕಾಗುತ್ತದೆ.

ನನಗೆ ಜ್ವರ ಅಥವಾ ಸಣ್ಣ ಶೀತವಾದರೂ ಸಾಕು ಅಮ್ಮ ಗುಬ್ಬಚ್ಚಿಯಾಗಿ ಬಿಡುತ್ತಾಳೆ."ನೀ ಸ್ವಲ್ಪ ಆರಾಮ್ ಆಗು.. ನಾಳೆ ಬೆಳಗಾಗದ್ರಾಗ ನಾ ಬೆಂಗಳುರ್ನಾಗ ಇರ್ತೀನಿ" ಎಂದು ಹೇಳುವ ಅಮ್ಮನ ಧ್ವನಿಯ ಮುಂದೆ ನನ್ನ ಜ್ವರ ಬಹಳ ಹೊತ್ತು ನಿಲ್ಲುವುದಿಲ್ಲಾ.

ಬಹಳ ಬರೆಯಬೇಕೆನಿಸುತ್ತಿದ್ದರೂ ಇಲ್ಲಿಗೆ ನಿಲ್ಲಿಸುತ್ತೇನೆ.ಅಮ್ಮ ಬಯ್ತಾ ಇದ್ದಾಳೆ.. "ಗಿರಿ.... ಜಲ್ದಿ ಮಲ್ಕೋ.. ನಾಳೆ ಆಫೀಸ್ಗೆ ಹೋಗ್ಬೇಕು......."

Rating
No votes yet

Comments

Submitted by kavinagaraj Sun, 07/13/2014 - 08:16

ಅಮ್ಮ ಅಮ್ಮನೇ! ಧನ್ಯವಾದಗಳು.