ಗೋಲುಗಳ ಹಿಂದೆ...

ಗೋಲುಗಳ ಹಿಂದೆ...

 

ವಿಶಾಲ ಬಯಲಿನೊಂದು ಗೋಲು ಪೆಟ್ಟಿಗೆಗೆ
ಹೊಡೆಯಲೆಂದೆ ಮಂದೆ ತಂಡ ತಂಡ
ಒಳಗೇನುಂಟೊ ಇರದೊ ಒಳಬಿದ್ದರೆ ಕಾಲ್ಚೆಂಡು
ತಾನ್ಹೊಕ್ಕಿರದಿದ್ದರೂ ಗುರಿ ಮುಟ್ಟಿದ ಹೆಗಲು ||

ಕಾದವನೊಬ್ಬ ಕಾವಲುಗಾರನ ಕಣ್ತಪ್ಪಿಸಿ ಮೊತ್ತ
ಒಳಗಿರಿಸಬೇಕು ಚತುರ ಚಾಕಚಕ್ಯತೆಯಾಗಿ
ಕೊಡುವವರ್ಹತ್ತು ತಡೆವವರಿನ್ಹತ್ತು ನಡುನಡುವೆ
ಎಡವಿ ಬೀಳಿಸಿ ತೊಡರಿಸುವರ ಕಣ್ಗಾವಲ ಕುತ್ತು ||

ಬೇಕೆಂದೆ ತಡೆವರೊ ಬೇಡದೆಯು ಮುನ್ನಡೆಸುವರೊ
ನಿಂತು ನೋಡಲು ಪುರುಸೊತ್ತಿಲ್ಲದ ವೇಗ
ಹೇಗಾದರು ಸರಿ ಗೋಲು ಚೀಲಕೊದ್ದರದೆ ಧನ್ಯತೆ
ತಳ್ಳಿಕೊಟ್ಟವರ ಕುರುಹಿಡಿದು ಗೆಲುವಿನತ್ತ ಉರುಳು ||

ಒಂದಕೆ ಧನ್ಯರೆಷ್ಟೊ, ಒಂದರ ಹಿಂದೊಂದವರೆಷ್ಟೊ
ಅವರವರ ಪಾಲಿನ ಪಂಚಾಮೃತ ಪಾಯಸ
ಬಿದ್ದ ಗೋಲಿಗೆ ಧನ ಕನಕ ವೃಷ್ಟಿ ಸಿರಿ ಸಂಪದವಷ್ಟು
ಗೋಲು ತುಂಬಿದಂತೆಲ್ಲ ಸುಖವಾಗುವುದೆ ಸಮಷ್ಟಿ? ||

ಬಕಾಸುರನ್ಹೊಟ್ಟೆಯ ಪೆಟ್ಟಿಗೆ ತುಂಬಿ ತುಂಬದ ತೊಟ್ಟಿ
ಎಲ್ಲರಾಶಯದಾಶಯ ಭರ್ತಿಯದೊಂದೆ ಪೆಟ್ಟಿಗೆಗೆ
ನೋಡುವರ್ಧದ ಹೃದಯ ಬಾಯಿಗೆ ಬಂದ ಸಮಯ
ಹರ್ಷಾತಿರೇಖದರ್ಧ ನಶ್ವರವಿದ್ದರು ಗೋಳದ ಸುತ್ತು || 

-------------------------------------------------------- 
ನಾಗೇಶ ಮೈಸೂರು,  ಸಿಂಗಪುರ
---------------------------------------------------------

 

 

Comments

Submitted by naveengkn Mon, 07/14/2014 - 09:24

ಇಷ್ಟು ದಿನಗಳ‌ ಕಾಲ‌, ಪ್ರಪಂಚವ್ನ್ನು ಸ್ಥಬ್ಧಗೊಳಿಸಿದ್ದ‌ ಗೋಲಿನ‌ ಆಟ‌ ಸದ್ಯಕ್ಕೆ ಮುಗಿದಿದೆ, ಅದರ‌ ಮರ್ಮವನ್ನು ತತ್ವಗಳಲ್ಲಿ ಹೇಳೀದ್ದಿರಿ, ಧನ್ಯವಾದಗಳು,

Submitted by nageshamysore Mon, 07/14/2014 - 18:55

In reply to by naveengkn

ಬದುಕಲ್ಲಿ ಬೆನ್ನತ್ತುವ ಗೋಲುಗಳಿಗು ಈ ಆಟದ ಗೋಲಿಗು ಇರುವ ಸಾಮ್ಯತೆಯನ್ನು ಬಿಂಬಿಸುವ ಸಲುವಾಗೆ ಹೊಸೆದ ಕವನ ನವೀನರೆ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :-)