ಕಥೆ: ಪರಿಭ್ರಮಣ..(10)

ಕಥೆ: ಪರಿಭ್ರಮಣ..(10)

(ಪರಿಭ್ರಮಣ..(09)ರ ಕೊಂಡಿ : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಅಲ್ಲಿನವರ ಊಟ ತಿಂಡಿಯ ರೀತಿ ನೋಡಿದ್ದವನಿಗೆ ಅವಳು ಭಾರತೀಯ ತಿನಿಸುಗಳನ್ನು ಇಷ್ಟಪಡುವಳೊ ಇಲ್ಲವೊ ಅನುಮಾನವಿತ್ತು. ಅದರಲ್ಲೂ ಯಾವುದಾದರೊಂದು ಮಾಂಸವಿಲ್ಲದ ಊಟ ರುಚಿಸೀತೆ ಅನ್ನುವ ಸಂಶಯವೂ ಕಾಡಿತ್ತು. ಆ ಅಳುಕಲ್ಲೆ ಒಂದೆರಡು ತರದ ದೋಸೆ ಮತ್ತು ನಾನ್ ಆರ್ಡರ ಮಾಡಿ, ತೀರಾ ಮಸಾಲೆಯಿಲ್ಲದ ಸೈಡ್ ಡಿಶ್ ಜತೆಗೆ ಮ್ಯಾಂಗೊ ಲಸ್ಸಿಯನ್ನು ಸೇರಿಸಿದ್ದ - ಅಲ್ಲಿನವರು ಮಾವಿನಹಣ್ಣು ಹೆಚ್ಚು ತಿನ್ನುವುದರ ನೆನಪಾಗಿ. ಅಚ್ಚರಿಯೆಂಬಂತೆ ಅವಳು ಎಲ್ಲವನ್ನು ಚಪ್ಪರಿಸಿಕೊಂಡು ತಿಂದಿದ್ದು ಕಂಡು ಸೋಜಿಗವಾಗಿತ್ತು. ಅದರಲ್ಲೂ ಲಸ್ಸಿಯನ್ನು ಒಂದೆ ಏಟಿಗೆ ಕುಡಿದು ಮುಗಿಸುತ್ತಿದ್ದು ಕಂಡು ಇನ್ನೊಂದು ಲೋಟ ಬೇಕೆ? ಎಂದಾಗ ಸಂಕೋಚದಲ್ಲೆ ಬೇಡವೆಂದು ತಲೆಯಾಡಿಸಿದ್ದಳು. ಬೇರೆ ಕೆಲವು ಥಾಯ್ ಸಹೋದ್ಯೋಗಿಗಳೊಡನೆ ಈ ಮುನ್ನ ಭಾರತೀಯ ರೆಸ್ಟೋರೆಂಟಿಗೆ ಹೋಗಿದ್ದಾಗ ಬೇರೆಯದೆ ಆದ ಅನುಭವವಾಗಿದ್ದ ಶ್ರೀನಾಥನಿಗೆ, ಇದು ಆ ಬಾರಿ ಕರೆದೊಯ್ದಾಗಿನದಕ್ಕಿಂತ ವಿಶಿಷ್ಟ ಅನುಭವ. ಆ ಸಲ ಸುಮಾರು ಎಂಟು ಹತ್ತು ತರದ ತುಟ್ಟಿ ಖಾದ್ಯಗಳನ್ನು ಆರ್ಡರ ಮಾಡಿದ್ದರೂ, ಯಾವುದೊಂದನ್ನು ಸರಿಯಾಗಿ ಮುಟ್ಟದೆ ಎಲ್ಲ ನೆಪಕ್ಕೆ ಮುಟ್ಟಿದಂತೆ, ತಿಂದಂತೆ ಅಭಿನಯಿಸಿ ವ್ಯರ್ಥವಾಗಿ ಹೋಗಿತ್ತು; ಸಾಲದ್ದಕ್ಕೆ, ಅದೊಂದು ವಿಪರೀತ ಬೆಲೆಯ ಜಾಗ. ಅಲಂಕರಣಕ್ಕೆ ಜೋಡಿಸಿದ ಖಾದ್ಯಗಳಿಗೆ ದುಡ್ಡು ಕೊಟ್ಟು ಬಂದಂತಾಗಿತ್ತು. ಮತ್ತೊಂದು ಬಾರಿ ಬಹುಶಃ ನಾರ್ತಿಂಡಿಯನ್ ಸರಿ ಹೋಗಲಿಲ್ಲವೇನೊ, ಸೌಥ್ ಇಂಡಿಯನ್ ಪ್ರಯತ್ನಿಸೋಣವೆಂದು ಸುಕುಮ್ ವಿತ್ ರಸ್ತೆಯಲ್ಲೆಲ್ಲೊ ಇರುವ ಅಪರೂಪದ ದಕ್ಷಿಣ ಭಾರತದ ರೆಸ್ಟೋರೆಂಟು ' ಕೋಮಲ ವಿಲಾಸ ' ಶಾಖೆಯೊಂದನ್ನು ಪತ್ತೆ ಹಚ್ಚಿ ಅಲ್ಲಿಗೆ ಕರೆದುಕೊಂಡು ಹೋಗಿದ್ದ. ಈ ಕೋಮಲ ವಿಲಾಸವು ಒಂದು ವಿಶೇಷ ರೀತಿಯ ದಕ್ಷಿಣ ಭಾರತದ ರೆಸ್ಟೊರೆಂಟು ಎಂದೆ ಹೇಳಬೇಕು. ಮೂಲತಃ ಇದೊಂದು ಸಿಂಗಪುರದ ಭಾರತೀಯ ರೆಸ್ಟೋರೆಂಟೆ ಆದರೂ ಈಚೆಗೆ ಆಗ್ನೇಯೇಷ್ಯ ದೇಶಗಳಲ್ಲಿ ಶಾಖೆಗಳನ್ನು ವಿಸ್ತರಿಸುತ್ತ ಸುತ್ತಮುತ್ತಲ ದೇಶೀಯ ಪ್ರಾಂತ್ಯಗಳಲ್ಲಿ ತನ್ನ ಕಾಲೂರಲು ಪ್ರಯತ್ನಿಸುತ್ತಿತ್ತು.  

ಈ ರೆಸ್ಟೋರೆಂಟಿನ ವಿಶೇಷತೆಯೆಂದರೆ ಇದು ಸಂಪೂರ್ಣ ದಕ್ಷಿಣ ಭಾರತೀಯ ರೆಸ್ಟೋರೆಂಟಾದರೂ ಪಾಲಿಸುವ ರೀತಿ, ನೀತಿ, ವಿಧಾನಗಳು ಕೊಂಚ ವಿನೂತನ ಬಗೆಯದು. ತೀರ ಸರಳವಾಗಿ ಹೇಳುವುದಾದರೆ ಮ್ಯಾಕ್ಡೋನಾಲ್ಡಿನಂತಹ ಪಾಶ್ಚಾತ್ಯ ಕಂಪನಿಯೊಂದು ತನ್ನದೆ ಜಾಗತಿಕ ವಿಧಾನದಲ್ಲಿ ದೋಸೆ, ಇಡ್ಲಿ ಮಾರಿದರೆ ಹೇಗಿರುತ್ತದೊ ಹಾಗೆ! ಅಂದರೆ ಇಲ್ಲಿ ಮಾರುವ ತಿಂಡಿ, ತಿನಿಸುಗಳೆಲ್ಲ ಅವೆ ಆದರೂ ಮೊದಲು ಬಂದ ಗಿರಾಕಿ ನೇರ ಟೇಬಲಿನತ್ತ ಸಾಗುವುದಿಲ್ಲ. ಬದಲಿಗೆ ನೇರ ಕ್ಯಾಶ್ ಕೌಂಟರಿನತ್ತ ಹೆಜ್ಜೆಯಿಡಬೇಕು; ಕ್ಯಾಶ್ ಕೌಂಟರಿನ ಹಿಂದೆ, ಸುತ್ತ ಮುತ್ತ ಇರುವ ದೊಡ್ಡ ಡಿಸ್ಪ್ಲೇ ಪ್ಯಾನಲ್ಲುಗಳ ತುಂಬ ಅಲ್ಲಿ ಸಿಗುವ ಎಲ್ಲ ತರದ ತಿಂಡಿ ತಿನಿಸುಗಳ ಚಿತ್ರ, ಅದರ ಬೆಲೆ ಮತ್ತು ಸೆಟ್ ಮೀಲ್ಸು ಪ್ರಮೋಶನ್ ಪ್ಯಾಕೇಜುಗಳು ನೇತುಹಾಕಿದ ಕಾರಣ ಅಲ್ಲಿ ಸಾಲುನಿಂತ ಗಿರಾಕಿಗೆ ಮೊದಲೆ ಆಯ್ಕೆ ಮಾಡಿಕೊಳ್ಳುವುದು ಸಾಧ್ಯ. ಕೆಲವರಿಗದು ಅನುಕೂಲವಾದರೆ, ಮತ್ತಲವರಿಗೆ ಗೊಂದಲಕ್ಕೆ ಹಚ್ಚಿದರೂ ಅಚ್ಚರಿಯಿಲ್ಲ - ಅತಿಯಾದ ಆಯ್ಕೆಗಳಿಂದ. ಕೆಲವಂತೂ ವ್ಯಾಲ್ಯೂ ಮೀಲ್ಸ್ ಹೆಸರಿನಲ್ಲಿ ಒಂದು ಬೆಲೆಯಡಿ ಹಲವು ತಿನಿಸುಗಳ ಕಲಸು ಮೇಲೋಗರವು ಸಿಗುತ್ತದೆ. ದೋಸೆ, ಪೂರಿ, ವಡೆ ಜತೆಗೊಂದು ಪಾನೀಯವೊ, ಎರಡು ಮೂರು ತರದ ಅನ್ನಗಳ ಗುಂಪೊ, ಸೌತಿಂಡಿಯನ್ ಥಾಲಿ ಅಥವಾ ನಾರ್ತಿಂಡಿಯನ್ ಥಾಲಿಯೊ, ಉಪ್ಪಿಟ್ಟು, ಪೊಂಗಲ್, ಕಾಫಿಗಳ ಸಂಗಮವೊ - ಹೀಗೆ ಬಗೆ ಬಗೆಯ ಸಂಯೋಜನೆಗಳ ಜತೆಜತೆಗೆ ವೆಜ್ ಬರ್ಗರ, ಬಟೂರ ತರದ ತಿನಿಸುಗಳು ಲಭ್ಯ. ಕೌಂಟರಿನಲ್ಲಿ ಆರ್ಡರ ಮಾಡುತ್ತಲೆ ಬೇಕಿದ್ದರೆ ಪಾನೀಯವನ್ನು ಬದಲಿಸಿಕೊಳ್ಳಬಹುದು. ತಿನ್ನುವುದೇನೆಂದು ನಿರ್ಧರಿಸಿ ಹೇಳಿ ಮೊದಲು ದುಡ್ಡು ಕೊಟ್ಟುಬಿಡಬೇಕು; ಅದನ್ನು ಅವರ ಕಂಪ್ಯೂಟರಿಗೆ ಹಾಕುತ್ತಿದ್ದಂತೆ ಒಂದು ರಸೀತಿ ಅಲ್ಲೆ ಪ್ರಿಂಟಾಗುತ್ತದೆ - ಗ್ರಾಹಕರಿಗೆ ಕೊಡಲು; ಮತ್ತೊಂದು ಒಳಗೆ ನೇರ ಕಿಚನ್ನಿನಲ್ಲಿ ಪ್ರಿಂಟಾಗುತ್ತದೆ, ಅದೇ ಹೊತ್ತಿನಲ್ಲಿ. ಗ್ರಾಹಕರು ನೇರ ಅಲ್ಲಿಂದ ಕಿಚನ್ ಕೌಂಟರಿನತ್ತ ಹೋಗುತ್ತಿದ್ದಂತೆ ನಿಮ್ಮ ಆರ್ಡರು ಸಿದ್ದವಾಗಿರುತ್ತದೆ ಕಲೆಕ್ಷನ್ನಿಗೆ. ನಂತರ ಅಲ್ಲಿರುವ ಯಾವುದಾದರೂ ಟೇಬಲ್ ಹಿಡಿದು ಕೂತು ತಿಂದು ಪೂರೈಸುವುದಷ್ಟೆ ಮುಂದಿನ ಕೆಲಸ. ಅಲಿ ಗೋಬಿ ತರದ ತಿನಿಸುಗಳಲ್ಲದೆ ಕೆಲವು ಐಟಂಗಳಲ್ಲದೆ ಪಾನಿಪೂರಿ, ಮಸಾಲೆ ಪುರಿ, ಚುರುಮುರಿ ತರದ ಕೆಲವು ಚಾಟ್ ಐಟಂಗಳು ಸಿಗುವ ಕಾರಣ ಯಾವುದಾದರೊಂದೆರಡಾದರೂ ತಿಂಡಿಗಳು ಹಿಡಿಸೀತೆಂಬ ಆಶಯದಲ್ಲಿ ಕರೆದೊಯ್ದಿದ್ದರೆ ಅಲ್ಲಿಯೂ ಅದೇ ಕಥೆ! ಕೆಲವರು ಕೇವಲ ಮುಟ್ಟಿ ನೋಡಿದ ಶಾಸ್ತ್ರ ಮಾಡಿದರೆ, ಒಂದು ಕೈ ನೋಡೆ ಬೀಡೋಣವೆಂದುಕೊಂಡ ಮಿಕ್ಕ ಕೆಲವರು ಕೂಡ ದೋಸೆ, ಪೂರಿಗಳನ್ನು ಭಾರತೀಯರಂತೆ ಕೈಯಲ್ಲಿ ತಿನ್ನಲು ಬರದೆ ಒದ್ದಾಡಿ ಅರ್ಧಕರ್ಧ ಅಲ್ಲೆ ಬಿಟ್ಟು ಎದ್ದಿದ್ದರು. ಎರಡೂ ಬಾರಿಯೂ ಹೀಗಾದ ಮೇಲೆ ಮುಂದೆ ಎಲ್ಲೆ ಹೋದರೂ ಸರಿ, ತನಗೆ ಸಸ್ಯಾಹಾರ ಸಿಗದಿದ್ದರೂ ಸರಿ - ಭಾರತೀಯ ತಿನಿಸಿಗೆ ಮಾತ್ರ ಪ್ರಾಜೆಕ್ಟ್ ಟೀಮನ್ನು ಕೊಂಡೊಯ್ಯಬಾರದೆಂದು ತೀರ್ಮಾನಿಸಿಬಿಟ್ಟಿದ್ದ. ಆದರಲ್ಲೂ ಆ ಬಾರಿ ಇವನೆ ಬಲವಂತದಿಂದ ಅವರನೆಲ್ಲ ಹೊರಡಿಸಿದ್ದ ಗಿಲ್ಟ್ ಬೇರೆ ಜತೆ ಸೇರಿಕೊಂಡು ಕಾಡುತ್ತಿತ್ತು. 

ಕುನ್.ಸೂ ಜತೆಯಲ್ಲಿನ ಈ ಅನುಭವ ಮಾತ್ರ ತೀರಾ ವಿಭಿನ್ನವಾದದ್ದಾಗಿತ್ತು. ಅವಳು 'ಮಾಂಗ್ ಸಾ ವಿರಾಟ್' (ಸಸ್ಯಾಹಾರ), 'ಅರಾಯಿ ಮಾಕ್' (ರುಚಿಯಾಗಿದೆ) ಎಂದು ಹೇಳಿಕೊಳ್ಳುತ ಚಪ್ಪರಿಸಿದ್ದುದನ್ನು ನೋಡಿದರೆ ಬಹುಶಃ ಇಲ್ಲಿನ ಸಾಮಾಜಿಕ ಅಂತಸ್ತಿನ ಕೆಳ ಸ್ತರ, ಮೇಲಿನ ಸ್ತರದ ಜನರ ಆಚಾರ ವಿಚಾರಗಳಲ್ಲಿ ಈ ರೀತಿಯ ವ್ಯತ್ಯಾಸಗಳು ಸಹಜವಿರಬಹುದೇನೊ ಅನ್ನುವ ತೀರ್ಮಾನಕ್ಕೆ ಬಂದಿದ್ದ. ಹೆಚ್ಚಿನ ವಿದ್ಯೆ, ನೌಕರಿ, ಸ್ಥಾನಮಾನಗಳ ಜತೆ ಯಾವುದೊ ರೀತಿಯ ವೈಚಾರಿಕ ಘನತೆ ಪರದೆ ಕಟ್ಟಿ ಈ ರೀತಿಯ ನಾಜೂಕಿನ ನಾಗರೀಕತೆಯ ಮುಸುಕು ಹಾಕಿಬಿಡುತ್ತವೇನೊ ಅಂದುಕೊಳ್ಳುವಾಗಲೆ 'ಅರೆ..ಇದು ನಮ್ಮ ಹಾಗೆ ಅಲ್ಲವಾ' ಅನಿಸಿತ್ತು... ಯಾರಾದರೂ ಊಟಕ್ಕೆ ಕರೆದರೆ ಬರಿ ಭಾರತೀಯ ಸಸ್ಯಾಹಾರವಲ್ಲದೆ ಬೇರೇನೂ ತಿನ್ನಲಾಗದ ನಮ್ಮ ಕೆಲವು ಜನರ ಹಾಗೆ, ಅವರೂ ಸಹ ಬೇರೆಯ ಆಹಾರ ತಿನ್ನಲು ನಿರೀಕ್ಷಿಸುವುದೆ ತಪ್ಪೇನೊ ಅನಿಸಿತ್ತು. ಹಾಗೆ ನೋಡಿದರೆ, ಇಲ್ಲಿನ ಜನರ ಹಾಗೆ ನಮ್ಮ ಊರುಗಳಲ್ಲಿ ಎಷ್ಟು ಜನ ಹೋಗಿ ಬೇರೆ ದೇಶದ ತಿಂಡಿ ತಿನಿಸು ತಿನ್ನುವ ಪ್ರಯತ್ನ ಮಾಡುತ್ತಾರೆ? ಮಾಡಬೇಕೆಂದರೂ ಈಗೀಗ ಅಲ್ಲಿಲ್ಲಿ ಕೆಲವು ರೆಸ್ಟೊರೆಂಟುಗಳು ಕಾಣುವುದಾದರೂ, ಮೊದಲೆಲ್ಲಾ ಆಯ್ಕೆಗಳೆ ಇರುತ್ತಿರಲಿಲ್ಲ. ಆಧುನಿಕ ಪೀಳಿಗೆಯಲ್ಲಿದು ತುಸು ಬದಲಾಗುತ್ತಿರುವುದಾದರೂ ಒಟ್ಟಾರೆ ಒಂದು ಮಡಿವಂತಿಕೆಯ ಚೌಕಟ್ಟು ಬೇಲಿಯ ಹಾಗೆ ಕಾಯುವ ಮನ ಪರಿಸ್ಥಿತಿ. ಆ ಹಿನ್ನಲೆಯಲ್ಲಿ ನೋಡಿದಾಗ ಇವಳು ಪರವಾಗಿಲ್ಲ, ಗಟ್ಟಿಗಿತ್ತಿ - ಎಲ್ಲ ತರಕ್ಕೂ ಚೆನ್ನಾಗಿ ಹೊಂದಿಕೊಳ್ಳಬಲ್ಲಳು ಅನಿಸಿತು. ಕೊನೆಯಲ್ಲಿ ಆರ್ಡರು ಮಾಡಿದ ಮಸಾಲ ಟೀ ಮತ್ತು ಕುಲ್ಫಿಯನ್ನೂ ಸಹ ಅಷ್ಟೆ ಖುಷಿಯಿಂದ ಖಾಲಿ ಮಾಡಿದ್ದು ಕಂಡಾಗ 'ಭೇಷ್' ಎಂದುಕೊಂಡ ಮನಸಿನಲ್ಲೆ. ಅಳುಕಿನಲ್ಲೆ ಆರಂಭವಾಗಿದ್ದರೂ ಅದೊಂದು ಸೊಗಸಾದ ಸಂಜೆಯಾಗಿ ಮಾರ್ಪಟ್ಟಿದ್ದು ಮಾತ್ರವಲ್ಲದೆ, ಭಾಷೆಯ ತೊಡಕಿನಲ್ಲಿ ಇಬ್ಬರೂ ಬರಿ ಸನ್ನೆ, ಸಂಜ್ಞೆ ಅಥವಾ ಪರಸ್ಪರ ಅರ್ಥವಾಗದ ವ್ಯಕ್ತಾವ್ಯಕ್ತ ಸಂಕೇತ ಭಾಷ ವಿಧಾನಗಳನ್ನನುಕರಿಸಿ ಸಂವಹಿಸಬೇಕಾಗಿ ಬಂದರೂ, ಅದೇ ಒಂದು ಬಗೆಯ ರಮಣೀಯ ಹಾಸ್ಯ, ರೋಚಕತೆಗೆ ಎಡೆ ಮಾಡಿಕೊಟ್ಟುಬಿಟ್ಟಿತ್ತು. ಜತೆಗೆ ರೆಸ್ಟೊರೆಂಟಿನಲ್ಲಿದ್ದ ಥಾಯ್ ಬಲ್ಲ ಭಾರತೀಯ ಸರ್ವರನಿಂದಾಗಿ ತುಸು ಸಂವಾದ, ಸಂಭಾಷಣೆ ಸಾಧ್ಯವಾಗಿ ಅಂತೂ ಯಾವುದೇ ಯೋಜನೆಯಿಲ್ಲದ ಆಯಾಚಿತ ಸಂಘಟನೆಯಾದರೂ, ಅತ್ಯಮೋಘ ರೋಚಕತೆಯ ಭೇಟಿಯಾಗಿ ಮನದಲುಳಿದುಬಿಟ್ಟಿತು ಶ್ರೀನಾಥನಿಗೆ.

ಅಂದಿನ ವಾಕಿಂಗ್ ಸ್ಟ್ರೀಟ್ ಭೇಟಿಯಾದ ಮೇಲೆ ಇಬ್ಬರಲ್ಲೂ ತುಸು ಹೆಚ್ಚಿದ ಸಲುಗೆ, ನಂತರದ ಒಡನಾಟದಲ್ಲಿ ಸಡಿಲಿಸಿದ್ದ ಮೊದಲಿನ ಬಿಗಿಯನ್ನು ಎತ್ತಿ ತೋರಿಸುತ್ತಿತ್ತು. ಈಗ ಮೊದಲಿನಂತೆ ಕಾಫಿಯಿಟ್ಟು ಓಡಿ ಹೋಗದೆ ಅಲ್ಲೆ ತುಸು ಹೊತ್ತು ನಿಂತಿದ್ದು ಅದೂ ಇದೂ ನೋಡುತ್ತ ಮಾತನಾಡುತ್ತ ಕೆಲವು ಗಳಿಗೆಗಳನ್ನು ಅಲ್ಲೆ ಕಳೆಯಲು ಪ್ರಯತ್ನಿಸುತ್ತಿದ್ದಳು. ಆಗಾಗ್ಗೆ ಬಂದು ತಾನು ಹೊಸದಾಗಿ ಕಲಿತ ಕೆಲವು ಇಂಗ್ಲೀಷ್ ಪದಗಳನ್ನು ತಪ್ಪು ತಪ್ಪಾಗಿಯೊ ಅಥವ ವಿಚಿತ್ರ ಥಾಯ್ ಬೆರೆತ ಉಚ್ಚಾರಣೆಯಲ್ಲೊ ಹೇಳಿ ನಗೆಯುಕ್ಕಿಸುತ್ತಿದ್ದಳು. ಆಗ್ಗಾಗೆ ಅವನಿಗೂ ಕೆಲವು ಥಾಯ್ ಪದಗಳನ್ನು ಹೇಳಿಕೊಡುತ್ತಿದ್ದುದಲ್ಲದೆ ತಾನೂ ಅವನಿಂದ ಹೇಳಿಸಿಕೊಂಡು ಕಲಿಯಲು ಯತ್ನಿಸುತ್ತಿದ್ದಳು. ಹೀಗೆಯೆ ಕಲಿತ 'ನಮಚ್ಕಾರ'ವನ್ನು ಅವಳು ದಿನವೂ ಹೇಳುವ ಪರಿಗೆ ನಗೆಯುಕ್ಕಿದರೂ, ಅಪಭ್ರಂಶವನ್ನು ಸಹಿಸಲಾಗದೆ ತುಂಡಾಗಿ 'ನಮಸ್ತೆ' ಹೇಳಿಕೊಟ್ಟರೂ ಅವಳದನ್ನು 'ನಮಚ್ತೆ' ಎಂದೆ ಉಚ್ಚರಿಸುತ್ತಿದ್ದಾಗ ತುಸು ಕೇಳಲು ಮುಜುಗರವೆನಿಸಿದರೂ ತುಸು ವಿನೋದಮಯವಾಗಿಯೂ ಕಾಣುತ್ತದೆಂದು ಹಾಗೆ ಬಿಟ್ಟುಬಿಟ್ಟಿದ್ದ. ಉಚ್ಚಾರಣೆಯ ದೋಷಕ್ಕಿಂತಲೂ ಅವಳದನ್ನು ಥಾಯ್ ಶೈಲಿಯಲ್ಲಿ ರಾಗವಾಗಿ ' ನಮಚ್...ತೆ ಕಾ..' ಎಂದು 'ಕಾ' ಜತೆ ಸೇರಿಸಿಯೆ ಹಾಡುವಾಗ ಥಾಯ್ ಪದವನ್ನೆ ಕೇಳಿದಂತಾಗುತ್ತಿತ್ತೆ ಹೊರತು ಭಾರತೀಯವಲ್ಲ. ಆಗೀಗ ಮಾಮೂಲಿಯಲ್ಲದೆ ಬೇರೆ ಹೊತ್ತಿನ ನಡುವೆಯೂ ಬಂದು ಕಾಫಿ ಯಾ ಟೀ ಬೇಕಾ ಎಂದು ವಿಚಾರಿಸಿ ಸಪ್ಲೈ ಮಾಡುತ್ತಿದ್ದಳು. ಅವಳದಕ್ಕೆ ಹೆಚ್ಚಿನ ಹಣ ಕೇಳದಿದ್ದರು, ಇವನೆ ತಿಂಗಳ ಬಾಬ್ತಿನಲ್ಲಿ ಅಷ್ಟೊ ಇಷ್ಟೊ ಹೆಚ್ಚು ಸೇರಿಸಿ ಕೊಟ್ಟುಬಿಡುತ್ತಿದ್ದ. 

ಅವಳ ಜತೆ ಮಾತಿಗಿಳಿಯಲು ಭಾಷೆಯೆ ಅಡ್ಡಿಯಾಗಿದ್ದರು ದಿನಗಳೆದಂತೆ ಯಾವುದೊ ಒಂದು ರೀತಿಯ ಅಲಿಖಿತ ಗ್ರಹಣ ಸಾಮರ್ಥ್ಯ ಅವರಿಬ್ಬರ ನಡುವೆ ತನ್ನಂತಾನೆ ಉದ್ಭವವಾಗತೊಡಗಿದಂತೆ ಅನಿಸತೊಡಗಿತು ಶ್ರೀನಾಥನಿಗೆ. ಇಬ್ಬರಿಗೂ ಪರಸ್ಪರ ಅರ್ಥವಾಗುವ ಪದಗಳು ಕೆಲವೆ ಆದರೂ ಹಾವಭಾವದ ಸಂಗಮದಲ್ಲೊ ಅಥವಾ ಇಬ್ಬರ ನಡುವಿನ ಸಲಿಗೆಯ ಮಟ್ಟವೇರ್ಪಡಿಸಿದ ಆಂತರಿಕ ಅಂತರ್ವಹನ ಸ್ವಪ್ರಬುದ್ಧತೆಯಿಂದಲೊ ಕೆಲವೆ ಪದಗಳಲ್ಲೆ ಮಾತಿನ ಭಾವ ಬಹುತೇಕ ಅರ್ಥವಾಗಿಬಿಡುತಿತ್ತು. ಅದರ ಜತೆಗೆ ಈಚೆಗೊಂದು ಥಾಯ್ ಇಂಗ್ಲೀಷ್ ಡಿಕ್ಷನರಿ ತಂದಿಟ್ಟುಕೊಂಡ ಮೇಲೆ ಶ್ರೀನಾಥನಿಗೆ ಇನ್ನೂ ಸುಲಭವಾಗಿತ್ತು - ಗೊತ್ತಾಗದ ಪದ ಬೇಕಾದಾಗೆಲ್ಲ ಇಂಗ್ಲೀಷಿನಲ್ಲಿ ಹುಡುಕಿ ಅದರ ಪಕ್ಕದಲಿದ್ದ ಥಾಯ್ ತೋರಿಸಿದರೆ ಆಯ್ತು, ಅವಳಿಗೆ ಓದಿಕೊಂಡು ಅದೇನೆಂದು ತಿಳಿಯಲು ಸಾಧ್ಯವಾಗುತ್ತಿತ್ತು. ಆದರೂ ಅದರ ಥಾಯ್ ಉಚ್ಚಾರವನ್ನು ಅವಳಿಂದಲೆ ತಿಳಿದುಕೊಳ್ಳಬೇಕಾಗುತ್ತಿತ್ತು. ಅದನ್ನು ಕೇಳಿದಾಗ ಬರೆದಿಟ್ಟುಕೊಳ್ಳದಿದ್ದರೆ ಎಷ್ಟೊ ಬಾರಿ ಮರೆತು ಹೋಗಿ ಪದೇ ಪದೇ ಅವಳನ್ನೆ ಕೇಳುವಂತಾಗಿ ನಾಚಿಕೆಯೂ ಆಗುತ್ತಿತ್ತು. ಅದೆ ಸುಮಾರು ಬಾರಿ ಮರುಕಳಿಸಿ ಅವಳು ಅದನ್ನೆ ಛೇಡಿಸಿ ಹಾಸ್ಯ ಮಾಡತೊಡಗಿದಾಗ ಇದಕ್ಕೇನು ದಾರಿಯೆಂದು ತಲೆಕೆಡಿಸಿಕೊಳ್ಳುವಂತಾಯ್ತು.. ಪ್ರಾಜೆಕ್ಟಿನ ಕೆಲಸದ ನಡುವೆ ಬರೆದುಕೊಂಡು ಉರು ಹೊಡೆಯಲು ಹೊತ್ತಾದರೂ ಎಲ್ಲಿರುತ್ತಿತ್ತು? 

ಈ ನಡುವೆ ಸಂಘಟಿಸಿದ ಮತ್ತೊಂದು ಪ್ರಕರಣದಿಂದಾಗಿ ಈ ಸಮಸ್ಯೆಗೂ ತಂತಾನೆ ದಾರಿಯೊಂದು ಕಾಣಿಸಿಕೊಂಡಿತು. ಪರಿಹಾಸವೆಂದರೆ ಅದೂ ಕೂಡ ಭಾಷೆಗೆ ಸಂಬಂಧಿಸಿದ ಮತ್ತೊಂದು ಅವಘಡದಿಂದಾಗಿ. ಈ ಬಾರಿಯ ಪ್ರೇರಕವಾಗಿ ಸನ್ನಿವೇಶಕ್ಕೆ ಹೊಸ ತಿರುವು ಕೊಟ್ಟಿದ್ದು ಥಾಯ್ಲ್ಯಾಂಡಿನ ಟ್ಯಾಕ್ಸಿ! ಮೊದಲೆ ಆದ ಅನುಭವಗಳಿಂದಾಗಿ ಟ್ಯಾಕ್ಸಿಯಲ್ಲಿ ಅಡ್ಡಾಡುವ ತ್ರಾಸದಾಯಕ ಕೆಲಸ ಬಿಟ್ಟು ಆದಷ್ಟು ಟ್ರೈನಿನಲ್ಲಿ ಅಥವಾ ಕಾಲ್ನಡಿಗೆಯಲ್ಲೆ ಓಡಾಡುತ್ತಿದ್ದ ಶ್ರೀನಾಥನಿಗೆ ಪ್ರಾಜೆಕ್ಟಿನ ಒಂದು ಅನಿವಾರ್ಯದ ನಿಮಿತ್ತ ಟ್ಯಾಕ್ಸಿಯಲ್ಲಿ ಪದೇ ಪದೇ ಓಡಾಡಲೇ ಬೇಕಾದ ಸಂಧರ್ಭವುಂಟಾಯಿತು. ಅದಕ್ಕೆ ಮೂಲ ಕಾರಣವಾದದ್ದು ಆಫೀಸಿನಿಂದ  ಇಪ್ಪತ್ತು , ಮೂವತ್ತು ಕಿಲೋಮೀಟರು ದೂರದಲಿದ್ದ ದಾಸ್ತಾನು ಉಗ್ರಾಣದ (ವೇರ ಹೌಸ್) ದೆಸೆಯಿಂದಾಗಿ.. ಅಲ್ಲಿಗೆ ಹೋಗಲಿಕ್ಕೆ ಟ್ರೈನಿನ ಅನುಕೂಲವಿಲ್ಲದ ಕಾರಣ ಪ್ರತಿ ಬಾರಿಯೂ ಟ್ಯಾಕ್ಸಿಯಲ್ಲೆ ಓಡಾಡಬೇಕಾಗಿತ್ತು. ಅಲ್ಲಿನ ಟ್ಯಾಕ್ಸಿ ಡ್ರೈವರುಗಳ ಆಂಗ್ಲ ಭಾಷಾ ಸಾಮರ್ಥ್ಯದ ಪರಿಚಯವಿದ್ದ ಶ್ರೀನಾಥ ಪ್ರತಿ ಬಾರಿ ಟ್ಯಾಕ್ಸಿ ಹತ್ತುವಾಗಲೂ ಸಹೋದ್ಯೋಗಿಗಳ ಸಹಾಯವನ್ನು ಜತೆಗೆ ನೇರಕ್ಕೆ, ಎಡಕ್ಕೆ, ಬಲಕ್ಕೆ ಹೋಗೆಂದು ಹೇಳುವ ಚೀಟಿ ಜತೆಯಲಿಟ್ಟುಕೊಂಡು ಸಾಗಬೇಕಾಗುತಿತ್ತು. ಆದರೆ ನಿಜವಾಗಿಯೂ ಬಂದ ತೊಂದರೆಯೆಂದರೆ ಪ್ರತಿ ಬಾರಿಯೂ ಟ್ಯಾಕ್ಸಿ ಡ್ರೈವರುಗಳು ಒಂದೆ ದಾರಿ ಹಿಡಿದು ಹೋಗುತ್ತಿರಲಿಲ್ಲ. ಟ್ರಾಫಿಕ್ಕಿನಿಂದಲೊ ಅಥವ ಇನ್ನಾವ ಕಾರಣಕ್ಕೊ ಅವರು ಬಳಸು ದಾರಿಯನ್ನೊ, ಕಿರುದಾರಿಯನ್ನೊ ಹಿಡಿದು ಹೋದಾಗ ಗೊಂದಲವುಂಟಾಗುತ್ತಿತ್ತು. ಗಲ್ಲಿ ಪಲ್ಲಿ ಸುತ್ತಿ ಮುಖ್ಯ ರಸ್ತೆಗೆ ಬಂದರೂ ಅವರೇನು ಸರಿಯಾದ ದಾರಿಯಲ್ಲಿದ್ದಾರೊ, ಇಲ್ಲವೊ ಎನ್ನುವುದೂ ತಿಳಿಯುತ್ತಿರಲಿಲ್ಲ. ಕನಿಷ್ಠ ರಸ್ತೆಯ ಹೆಸರಾದರೂ ನೋಡಿ ಗುರುತಿಸಲು ಯತ್ನಿಸೋಣವೆಂದರೆ ಎಲ್ಲಾ ಫಲಕಗಳು ಥಾಯ್ ಭಾಷೆಯಲ್ಲಿದ್ದು, ಓದಲೆ ಆಗುತ್ತಿರಲಿಲ್ಲ !

ಈ ರೀತಿಯ ಅಡ್ಡಾದಿಡ್ಡಿ ಯಾನ ಮತ್ತೆ ಮತ್ತೆ ಮರುಕಳಿಸಿದಾಗ ಕನಿಷ್ಠ ಓಡಾಡುವ ರಸ್ತೆಯ ಹೆಸರಾದರೂ ಅರಿವಾಗುವಂತಿದ್ದರೆ ಯಾವ ದಾರಿಯಲ್ಲಿರುವ ಅರಿವಾದರೂ ಆಗುತ್ತಿತ್ತಲ್ಲ ಎಂದು ಪೇಚಾಡಿಕೊಂಡಿದ್ದ ಶ್ರೀನಾಥ. ಇದರ ನಡುವೆ ಟ್ರಾಫಿಕ್ಕಿನಲೊಮ್ಮೊಮ್ಮೆ ಸಿಕ್ಕಿಕೊಂಡಾಗ ಅಲ್ಲೆ ಗಂಟೆಗಟ್ಟಲೆ ಕಳೆಯುವ ಸಂಧರ್ಭವೂ ವಕ್ಕರಿಸಿ ತಲೆ ಕೆಡಿಸಿಬಿಟ್ಟಿತ್ತು. ಹಾಗೊಮ್ಮೆ ಸಿಕ್ಕಿಕೊಂಡಿದ್ದ ವೇಳೆಯಲ್ಲಿ ಬೇರೇನೂ ಮಾಡಲು ತೋಚದೆ ತಾನು ಸದಾ ಒಯ್ಯುತ್ತಿದ್ದ ಇಂಗ್ಲೀಷ್ ಥಾಯ್ ಡಿಕ್ಷನರಿಯನ್ನು ತಿರುವಿ ಹಾಕುತಿದ್ದಾಗಲೆ ಥಾಯ್ ಅಕ್ಷರ ಮಾಲೆಯ ಆ ಪುಟ ಗಮನ ಸೆಳೆದದ್ದು...ಅಕ್ಷರಗಳ ಉಚ್ಚಾರ ಸ್ವರವನ್ನು ಆಂಗ್ಲದಲ್ಲಿ ಭಾಷಾಂತರಿಸಿ ಕೊಟ್ಟಿದ್ದ ಕಾರಣ ಸುಮ್ಮನೆ ತಮಾಷೆಗೆಂಬಂತೆ ಎದುರಿನ ಅಂಗಡಿಯ ಮೇಲಿದ್ದ ಫಲಕದ ಒಂದು ಅಕ್ಷರವನ್ನು ನೋಡಿ ಅದೇ ಅಕ್ಷರಕ್ಕಾಗಿ ಆ ಪುಟದಲ್ಲಿ ಹುಡುಕಿ ಅದನ್ನು ಉಚ್ಚರಿಸುವುದು ಹೇಗೆ ಎಂದು ತಿಳಿಯಲು ಸಾಧ್ಯವೆ ಎಂದು ಪ್ರಯತ್ನಿಸಿ ನೋಡಿದ. ಅಚ್ಚರಿಯೊ..ಅಚ್ಚರಿ..ಅವನು ಕಂಡ ಅಕ್ಷರಗಳು ಯಥಾವತ್ತಾಗಿ ಆ ಪುಟದಲಿದ್ದವು; ಒಟ್ಟಾರೆ ಕೇವಲ ಒಂದೆ ಪುಟದಲಿದ್ದ ಎಲ್ಲಾ ಅಕ್ಷರಗಳ ಆ ಪುಟವನ್ನು ಓದಿ ಗುರುತಿಸಲು ಸಾಧ್ಯವಾದರೆ, ಬಹುಶಃ ಬೋರ್ಡುಗಳನ್ನೆಲ್ಲ ಸುಲಭವಾಗಿ ಓದಬಹುದಲ್ಲವೆ? ಎನಿಸಿ ಮತ್ತೆ ಪರಿಶೀಲಿಸಿ ನೋಡಲು ರಸ್ತೆಯ ಹೆಸರಿದ್ದ ಫಲಕದತ್ತ ನೋಡಿ ಮತ್ತೆ ಅದನ್ನು ಡಿಕ್ಷನರಿಯಲ್ಲಿ ಇದೆಯೇ ಇಲ್ಲವೆ ಎಂದು ಹುಡುಕಿದ..ಈ ಬಾರಿ ಅವನಿಗೆ ಆ ರಸ್ತೆಯ ಹೆಸರು ಗೊತ್ತಿತ್ತು 'ರಾಮಾ 5' ಎಂದು...ಹೋಲಿಸಿ ತಾಳೆ ನೋಡಿದರೆ ಉಚ್ಚಾರಣೆ 'ರಾಮಾ 5' ಎಂದೆ ಬರುತ್ತಿದೆ! ಅಂದರೆ ಆ ಅಕ್ಷರಗಳನ್ನೆಲ್ಲ ಕಲಿತು ಅದರ ಜತೆಗಿರಬಹುದಾದ ಕಾಗುಣಿತಗಳನ್ನು ಕಲಿತುಬಿಟ್ಟರೆ, ಸಾಕಲ್ಲ? ಬೋರ್ಡುಗಳೆಲ್ಲಾ ಸುಲಭದಲ್ಲಿ ಓದಬಹುದಲ್ಲಾ ಅನಿಸಿತು. ಪರಿಣಿತಿ ಗಳಿಸುವ ಮಟ್ಟಿಗೆ ಅಲ್ಲದಿದ್ದರೂ ಬರಿ ಹೆಸರು ಗುರುತಿಸುವಷ್ಟಾದರೆ ಸಾಕಲ್ಲ? ಹೀಗೆಂದುಕೊಂಡೆ ಟ್ಯಾಕ್ಸಿಯಲ್ಲಿ ಉಗ್ರಾಣದತ್ತ ಹೋಗುವಾಗ, ಬರುವಾಗೆಲ್ಲ ಒಂದೆರಡು ಅಕ್ಷರ ಓದತೊಡಗಿದಂತೆ ಕೆಲವು ದಿನಗಳಲ್ಲೆ ಸರಿ ಸುಮಾರು ಅಕ್ಷರಗಳನೆಲ್ಲ ಗುರುತಿಸುವ ಮಟ್ಟಕ್ಕೆ ಬಂದುಬಿಟ್ಟ. ಒಂದೆರಡು ಬಾರಿ ಜತೆಯಲಿ ಸಹೋದ್ಯೋಗಿಗಳು ಕೂತಿದ್ದಾಗ ಅದೇ ರೀತಿ ಓದಲು ಯತ್ನಿಸಿದಾಗ ಅವರಿಗೆ ಆದ 'ಆಘಾತ'ವನ್ನು ಕಂಡು ಇನ್ನು ಹುಮ್ಮಸ್ಸು ಮೂಡಿ ಇನ್ನು ಹೆಚ್ಚು ಗಮನವಿಟ್ಟು ಕಲಿಯತೊಡಗಿದ ಥಾಯ್ ಅಕ್ಷರಗಳನೆಲ್ಲ..

ಕಲಿಕೆ ಆರಂಭಿಸಿದಾಗ ತುಸು ಆತಂಕವೆ ಇತ್ತು ಆಗುವುದೊ ಇಲ್ಲವೊ ಎಂದು. ಹಿಂದೊಮ್ಮೆ ಹೀಗೆ ಉತ್ಸಾಹದಲ್ಲಿ ಚೀನಿ ಭಾಷೆ ಕಲಿಯುವೆನೆಂದು ಹೋಗಿ ಮುಖ ಭಂಗವಾಗಿತ್ತು. ಕನ್ನಡದಲ್ಲಿ ಹೇಗೆ ಸ್ವರ ಮತ್ತು ವ್ಯಂಜನಗಳಿರುವುದೊ ಅದೆ ರೀತಿ ಎಲ್ಲಾ ಭಾಷೆಗಳಲ್ಲೂ ಇರುವುದೆಂಬ ತಪ್ಪು ಕಲ್ಪನೆ ಅವನಲ್ಲಿ ಆಳವಾಗಿ ಬೇರೂರಿಬಿಟ್ಟಿತ್ತು. ಹೀಗಾಗಿ ನಮ್ಮಲ್ಲಿ ಅಕ್ಷರ ಕಾಗುಣಿತ ಕಲಿತಂತೆ ಅಲ್ಲೂ ಕಲಿತರೆ ಸಾಕು, ಏನು ಬೇಕಾದರೂ ಓದಬರುವುದೆಂಬ ಕಲ್ಪನೆಯಲ್ಲಿ ಚೀನಿ ಭಾಷೆಯತ್ತ ಕಣ್ಣು ಹಾಯಿಸಿದಾಗ ದಿಗ್ಭ್ರಮೆಯಾದದ್ದು ಅಲ್ಲಿರುವ ಸಿದ್ದಾಂತವೆ ಬೇರೆ ರೀತಿಯದು ಎಂದು ಗೊತ್ತಾದಾಗ. ನಮ್ಮ ಹಾಗೆ ಐವತ್ತು ಅಕ್ಷರ ಮತ್ತು ಕಾಗುಣಿತ ಕಲಿತ ಹಾಗೆ ಎಂದುಕೊಂಡು ಆ ಚೀನಿ ಅಕ್ಷರಗಳನ್ನು ಕಲಿಯ ಹೊರಟರೆ ಸುಮಾರು ಐದು ಸಾವಿರ ಅಕ್ಷರ ಕಲಿತುಕೊಳ್ಳಬೇಕಾಗುತ್ತದೆ! ಆಧುನಿಕ ಚೀನಿಯಲ್ಲಿ ಆ ಐದು ಸಾವಿರ ಅಕ್ಷರಗಳು ಚೀನಿಯರಿಗೇ ಅರಿವಿರುವುದಿಲ್ಲವಂತೆ...ಅಬ್ಬಬ್ಬಾ ಎಂದರೆ ಎರಡು ಸಾವಿರವಷ್ಟೆ ಸಾಧಾರಣ ಬಳಕೆಯಲ್ಲಿರುವುದು. ಸಾಮಾನ್ಯ ಜನರಿಗೆ ಸುಮಾರು ಐನೂರು ಗೊತ್ತಿದ್ದರೆ ಹೆಚ್ಚು! ಸ್ಥೂಲವಾಗಿ ಹೇಳುವುದಾದರೆ ಅಲ್ಲಿ ಸ್ವರಗಳು ಇಲ್ಲ, ವ್ಯಂಜನಗಳೂ ಇಲ್ಲ; ಹೀಗಾಗಿ ವ್ಯಂಜನಕ್ಕೆ ಸ್ವರ ಸೇರಿಸಿ ಕಾಗುಣಿತ ಕಟ್ಟಲು ಸಾಧ್ಯವಿಲ್ಲ. ಅದರಿಂದಾಗಿಯೆ ಪ್ರತಿ ಅವಶ್ಯಕತೆಗೂ ಹೊಸ ಹೊಸ ಅಕ್ಷರಗಳು ಹುಟ್ಟಿಕೊಂಡಿರಬೇಕು. ಅಂದರೆ ಅಲ್ಲಿ ಕಾಗುಣಿತವೆ ಇಲ್ಲವೆ? - ಕಾಗುಣಿತ ಎಂದು ಬರಿಯ ಹೋಲಿಕೆ ಮಟ್ಟದಲಷ್ಟೆ ಹೇಳಬೇಕೊ ಏನೊ? ಯಾಕೆಂದರೆ ಅಲ್ಲಿ ವ್ಯಾಕರಣವೆ ಇದ್ದಂತೆ ಕಾಣಲಿಲ್ಲ. ಬದಲಿಗೆ ಮಾತಾಡುವಾಗ ನಾಲ್ಕೈದು ಬಗೆಯ ಸ್ವರದ ಏರಿಳಿತಗಳನ್ನು ಬಳಸುತ್ತಾರೆ (ಟೋನ್ ಎನ್ನುತ್ತಾರೆ - ಬಳಕೆ ಬರಹದಲ್ಲಲ್ಲಾ, ಆಡು ಭಾಷೆಯಲ್ಲಿ ಮಾತ್ರ). ಹೀಗಾಗಿ ಓದಲು ಒಂದೆ ಅಕ್ಷರದಂತೆ ಇದ್ದರೂ ಸ್ವರದ ಏರಿಳಿತಕನುಸಾರವಾಗಿ ಅರ್ಥವೆ ಬೇರೆಯಾಗಿಬಿಡಬಹುದು. ಈ ಥಾಯ್ ಭಾಷೆಯೂ ಹಾಗೆ ಇದ್ದರೆ ಕಲಿಯುವುದೆ ಅಸಾಧ್ಯವಾದೀತು ಎಂದುಕೊಂಡು ಹೊರಟವನಿಗೆ ಆಶ್ಚರ್ಯವಾಗುವಂತೆ ಕನ್ನಡಕ್ಕೂ ಆ ಭಾಷೆಯ ಅಕ್ಷರ ಕ್ರಮಕ್ಕೂ ಕನಿಷ್ಠ ಸೈದ್ದಾಂತಿಕ ಮಟ್ಟದಲ್ಲಿ ಸಾಮ್ಯತೆ ಕಂಡಿತ್ತು. ಇಲ್ಲೂ ಕಾಗುಣಿತಗಳ ಕಲ್ಪನೆ ಇರದಿದ್ದರು, ಸೀಮಿತ ಅಕ್ಷರಗಳ ಒಂದು ಪಟ್ಟಿಯಂತೂ ಇತ್ತು. ಅವಷ್ಟನ್ನು ಕಲಿತರೆ ಸಾಕಿತ್ತು - ಕಂಡಿದ್ದನು ಸುಮಾರಾಗಿ ಓದಲು ಸಾಧ್ಯವಾಗುವಂತೆ.. ಜತೆಗೆ ಸ್ವರದ ಏರಿಳಿತದ ತೊಂದರೆಯೂ ಇರಲಿಲ್ಲ. ಆ ಪಟ್ಟಿಯ ಮೇಲೆ ಪ್ರಭುತ್ವ ಸಾಧಿಸಿದ ಮೇಲೆ ಟ್ಯಾಕ್ಸಿಯ ಯಾತ್ರೆ ಆರಾಮವಾಯ್ತು. ಕಂಡ ಕಂಡ ಬೋರ್ಡು ಓದುವ ಹವ್ಯಾಸವೂ ಬೆಳೆಯುತ್ತಾ ಹೋಯ್ತು. ಹೀಗಾಗಿ ಕುನ್. ಸೂ ಜತೆಗಿನ ಭಾಷಾ ಒಡನಾಟವೂ ಸಲಿಸಾಯ್ತು..ಮೊದಲ ಬಾರಿಗೆ ಥಾಯ್ನಲ್ಲೆ ಅವಳ ಹೆಸರು ಬರೆದು ತೋರಿಸಿದಾಗ, ಅವಳಿಗೆ ಅಚ್ಚರಿಗಿಂತ ಹೆಚ್ಚು ದಿಗ್ಭ್ರಮೆಯೆ ಆಗಿತ್ತು. ಮತ್ತು ಹಾಗೆ ಕಲಿಯುತ್ತಿರುವುದರ ಕುರಿತು ಆದರ, ಗೌರವ ಮೂಡಿ ಅವನತ್ತ ಮತ್ತಷ್ಟು ಸಲಿಗೆ ಹೆಚ್ಚಲು ಕಾರಣವಾಗಿತ್ತು. 

ಹೀಗೆ ಭಾಷೆ ಕಲಿತ ಮೇಲೆ ಶ್ರೀನಾಥನಿಗೆ ಅಲ್ಲಿಯವರೆಗೂ ಗೊತ್ತಾಗದಿದ್ದ ಎಷ್ಟೊ ವಿಷಯಗಳು ಗೊತ್ತಾಗಲಾರಂಭವಾಯ್ತು. ಅದೆಲ್ಲ ಸರಿಸುಮಾರು ಕುನ್. ಸೂ ಇಂದಲೆ ಗೊತ್ತಾಗಿದ್ದು. ಭಾರತದಿಂದ ಬಂದವರನ್ನು ತುಸು ಲಘು ಆಡುಭಾಷೆಯಲ್ಲಿ ಕುನ್.ಕೇರ್ ಎಂದು ಕರೆಯುತ್ತಾರೆಂದು ಅವಳೆ ಜ್ಞಾನೋದಯ ಮಾಡಿಸಿದ್ದು. ಅಂತೆಯೆ ಮನೆಗೆ ಅಡುಗೆಗೆ ಬೇಕಾದ ಸರಿಯಾದ ಅಕ್ಕಿ ಸಿಗದೆ ಒದ್ದಾಡುತ್ತಿದ್ದಾಗ, ಒಂದು ವಾರದ ಕೊನೆಯಲ್ಲಿ ಎರಡು ಸ್ಟಾಪಿನಾಚೆಗಿದ್ದ ದೊಡ್ಡದೊಂದು ಸ್ಥಳೀಯ ಮಾರ್ಕೆಟ್ಟಿಗೆ ಕರೆದೊಯ್ದು ತೋರಿಸಿದ್ದಳು. ಅಲ್ಲಿ ನೋಡಿದರೆ ನಮ್ಮ ಕೆ.ಆರ್. ಮಾರ್ಕೆಟ್ಟು, ಮಂಡಿಯ ಹಾಗೆ ನಾನಾ ತರಹದ ಅಕ್ಕಿ, ದಿನಸಿಗಳು ಸಾಲುಸಾಲಾಗಿ ಬಂಡಿಗಟ್ಟಲೆ ತೀರ ಅಗ್ಗದ ದರದಲ್ಲಿ ಬಿದ್ದಿದ್ದುದನ್ನು ಕಂಡಾಗ ಇವನೆ ಮೂಗಿನ ಮೇಲೆ ಬೆರಳಿಡುವಂತಾಗಿತ್ತು. ಅಲ್ಲಿ ದಿನಸಿಗಳಲ್ಲದೆ ಹಣ್ಣು ಹಂಫಲ ತರಕಾರಿಗಳು ಸಿಕ್ಕಿ ಅದೊಂದು ವಾರಕೊಮ್ಮೆಯಾದರೂ ಮಾಮೂಲಿ ಹೋಗಿಬರುವ ತಾಣವಾಗಿ ಹೋಗಿತ್ತವನಿಗೆ. ಅಷ್ಟು ಸಾಲದೆಂಬಂತೆ ಸರಿಯಾದ ಊಟ ಸಿಗದೆ ಒದ್ದಾಡುತ್ತಿದ್ದಾಗ ಹತ್ತಿರವಿದ್ದ ಜಪಾನೀಸ್ ರೆಸ್ಟೋರೆಂಟೊಂದಕ್ಕೆ ಕರೆದೊಯ್ದು ಅಲ್ಲಿದ್ದ 'ಭಾರತೀಯ ಕರಿ'ಯನ್ನು ಪರಿಚಯಿಸಿದ್ದಳು. ಅಚ್ಚರಿಯೆಂದರೆ ಅಷ್ಟು ಸೊಗಸಾದ ಕರಿ ಭಕ್ಷ್ಯವನ್ನು ಜಪಾನೀಯರು ಅದು ಹೇಗೆ  ಕರಗತ ಮಾಡಿಕೊಂಡಿದ್ದರು ಎಂಬುದೆ...! ಹಾಗೆಯೆ ಕೆಲವೂ ಥಾಯಿ ತಿನಿಸು ತಿನ್ನಲು ಅವಳ ಪ್ರೇರಣೆಯೂ ಕಾಣವಾಗಿತ್ತು. ಟೋಮ್ ಯುಂ ಸೂಪ್ ಭಾರತೀಯ ತಿಳಿಸಾರಿನ ಹಾಗೆ ಇರುವ ವಿಷಯ ತಿಳಿಸಿದ್ದು ಅವಳೆ.. ಹೀಗೆ ಕಲಿತ ಭಾಷೆಯಿಂದಾಗಿ ಒಬ್ಬನೆ ರೆಸ್ಟೋರೆಂಟಿಗೂ ಹೋಗಿ ಮೆನು ನೋಡಿ ಆರ್ಡರು ಹಾಕುವಷ್ಟು ಪರಿಣಿತಿ ಸಿದ್ದಿಸಿತ್ತು.. ಆ ನಡುವಿನ ಓಡನಾಟದಲ್ಲೆ ಅವಳ ಗಂಡ ತೀರಿ ಹೋಗಿ ವರ್ಷಗಳಾಗಿ ವಿಧವೆಯಾಗಿದ್ದರೂ ಮಕ್ಕಳನ್ನು ಸಾಕುತ್ತ ಬದುಕಲ್ಲಿ ಮುನ್ನುಗ್ಗುತ್ತಿರುವ ಪರಿಯ, ಹೇಗೊ ಏಗಿ ಜೀವನ ಸಾಗಿಸುತ್ತಿರುವ ವಿಷಯ ಅರಿವಾಗಿತ್ತು. 

ಈ ನಡುವೆ ಹೆಚ್ಚಿದ ಪ್ರಾಜೆಕ್ಟಿನ ಭರಾಟೆಯಿಂದಾಗಿ ಕೆಲಸಗಳು ಮೊದಲಿಗಿಂತ ತೀವ್ರವಾಗತೊಡಗಿದವು. ಸಾಲದೆಂಬಂತೆ ಮೊದಲಿಗಿಂತ ಹೆಚ್ಚು ಮೀಟಿಂಗುಗಳು, ಸಂಜೆಯ ಮಾಮೂಲಿ ಹೊತ್ತನ್ನು ಮೀರಿದ ತಡ ರಾತ್ರಿಯ ಕೆಲಸಗಳು ಮಾಮೂಲಾಗತೊಡಗಿದವು. ಎಷ್ಟೊ ಬಾರಿ ಅವಳು ಕಾಫಿ, ಚಹಾ ತರುವ ಹೊತ್ತಲ್ಲಿ ಇವನಿರುತ್ತಲೆ ಇರಲಿಲ್ಲ. ಒಂದೆರಡು ದಿನ ಇಟ್ಟಿದ್ದು ತಣ್ಣಗಾಗಿ ಹಾಗೆ ಉಳಿದಿದ್ದನ್ನು ಕಂಡು ವೇಳೆ ಬದಲಿಸಿ ಅವನು ಸೀಟಿಗೆ ಬಂದ ಸಮಯದಲ್ಲಿ ಚಕ್ಕನೆ ಆಗಮಿಸಿ ಕಪ್ಪು, ಸಾಸರನಿಟ್ಟು ಅದೇ ಮೋಹಕ ನಗೆ ಬೀರಿ ಓಡಿ ಹೋಗುತ್ತಿದ್ದಳು. ಜತೆಗೆ ಸಂಜೆ ಹೆಚ್ಚು ಹೊತ್ತು ಇರುವನೆಂದು ಗೊತ್ತಾದಾಗ, ತಾನು ಕೆಲಸ ಮುಗಿಸಿ ಹೋಗುವ ಮುನ್ನ ಒಂದು ಚಹಾ ಕಪ್ಪನ್ನು ಟೇಬಲ್ಲಿನ ಮೇಲಿರಿಸಿ , ಮೇಲೊಂದು ಸಾಸರು ಮುಚ್ಚಿಟ್ಟು ಹೋಗಿರುತ್ತಿದ್ದಳು. ಎಷ್ಟೊ ಬಾರಿ ಅದೂ ತಣ್ಣಗಾಗಿರುತ್ತಿದ್ದರೂ, ಕುಡಿಯಬೇಕೆಂಬ ಹವಣಿಕೆ ಹೆಚ್ಚಾಗಿರುವ ಆ ಹೊತ್ತಿನಲ್ಲಿ ಅದು ಸ್ವರ್ಗ ಸಮಾನವಾಗಿ ಕಂಡು ಬಿಸಿಪೆಟ್ಟಿಗೆಯಲ್ಲಿ ಬಿಸಿ ಮಾಡಿ ಕುಡಿಯುತ್ತಿದ್ದ. ಈಚೆಗಂತೂ ಮುಗಿಯದ ಕೆಲಸಗಳ ಹೊರೆಯಿಂದಾಗಿ ವಾರದ ಕೊನೆಯ ದಿನಗಳಲ್ಲಿ ಶನಿವಾರವೂ ಬರುವಂತಹ ಅನಿವಾರ್ಯವಾದಾಗ, ಆಫೀಸಿನಲ್ಲಿ ಕಡಿಮೆ ಜನರಿದ್ದರೂ ಕುನ್.ಸೂ ಸಹ ತಪ್ಪದೆ ಹಾಜರು - ಬಹುಶಃ ಆಫೀಸು ತೆರೆದಿದ್ದ ದಿನ ಅವರ ವಿಭಾಗದಿಂದ ಯಾರಾದರೊಬ್ಬರು ಇರಲೇಬೇಕೆಂಬ ನಿಯಮವಿತ್ತೊ ಏನೊ. ಅ ದಿನಗಳಲ್ಲಷ್ಟೆ ತುಸು ಒತ್ತಡವಿಲ್ಲದ ನಿರಾಳ ಒಡನಾಟ ಸಾಧ್ಯವಾಗುತ್ತಿತ್ತು. ಜತೆಗೆ ತಾನು ತಂದ ಕತ್ತರಿಸಿಟ್ಟ ಹಣ್ಣುಗಳನ್ನು ಹಂಚಿಕೊಳ್ಳುತ್ತ ವಾರವೆಲ್ಲ ಬಿಟ್ಟು ಹೋಗಿದ್ದ ಮಾತಿನ ಕೊಂಡಿಯನ್ನು ಮತ್ತೆ ಎಳೆದು ತಂದು ಚಾಲನೆ ನೀಡಲು ಯತ್ನಿಸುತ್ತಿದ್ದಳು.

ಆ ಕತ್ತರಿಸಿದ ಮಾವಿನ , ಸೀಬೆಯ ಅಥವಾ ಹಲಸಿನ ಹಣ್ಣುಗಳನ್ನು ರಸ್ತೆ ಬದಿಯ ಹಣ್ಣು ಮಾರುವವರಿಂದ ತರುತ್ತಿದ್ದಳೊ, ಏನೊ - ಆದರೆ ಒಮ್ಮೆಯೂ ಅದಕ್ಕೆ ಹಣ ಕೇಳಿರಲಿಲ್ಲ. ಬಹುಶಃ ತನಗೆಂದು ತಂದಿದ್ದನೆ ಅವನ ಜತೆಯೂ ಹಂಚಿಕೊಳ್ಳುತ್ತಿದ್ದಳೇನೊ. ಬೇರಾರೊಂದಿಗೂ ಇಲ್ಲದ ಈ ಅನೋನ್ಯ ಸಖ್ಯವನ್ನು ಕಂಡು ಸ್ಥಳೀಯ ಸಹೋದ್ಯೋಗಿಗಳು ಕೂಡ , ' ಯುವರ್ ಬೆಸ್ಟ್ ಫ್ರೆಂಡ್ ಕಮ್...' ಎಂದು ಹಾಸ್ಯ ಮಾಡುತ್ತಿದ್ದರು ಶ್ರೀನಾಥನಿಗೆ. ಉಳಿದ ಸ್ವಕೀಯ ಸಹೋದ್ಯೋಗಿಗಳಿಗು ಇದರ ಕುರಿತು ಈರ್ಷ್ಯೆಯಿದ್ದರೂ, ಬೇರಾರ ಜತೆ ಅವಳಿಗಂತಹ ಸಲಿಗೆ ಉಂಟಾಗಲೆ ಇಲ್ಲ. ಹೀಗಾಗಿ ಮೊದಲಿನ ಕೀಳರಿಮೆಯಲ್ಲಿ ಬಳಲುತ್ತಿದ್ದ ಶ್ರೀನಾಥನ ಹಮ್ಮಿಗೆ ಅವಳ ಈ ಒಡನಾಟವೂ ಇಂಬು ಕೊಟ್ಟು, ಒಳಗೊಳಗಿನ ಪ್ರತಿಷ್ಟೆಯ ತಿಮಿರಿಗೆ ಅವಳ ಸಾಂಗತ್ಯ ಹಚ್ಚಿಕೊಡುತ್ತಿರುವ ಹಿರಿಮೆಯನ್ನು ಅನುಭವಿಸುವುದರಲ್ಲೆ ಸುಖ ಕಂಡಂತಾಗಿ, ಒತ್ತಡದ ನಡುವೆಯೂ ಚೇತೋಹಾರಿ ಉತ್ಸಾಹದ ತುಣುಕೊಂದು ಅವನನ್ನು ಕ್ರಿಯಾಶೀಲನನ್ನಾಗಿಸಿತ್ತು.  ಇತ್ತೀಚೆಗಂತೂ ಕೆಲಸದ ಒತ್ತಡ ತೀರಾ ಹೆಚ್ಚಾಗಿದ್ದರೂ ಯಾವುದೊ ಅರಿವಾಗದ ಹುರುಪು ಎಲ್ಲವನ್ನು ಸರಿದೂಗಿಸಿಕೊಂಡು ನಡೆಸಿದಂತೆ ಭಾಸವಾಗುತ್ತಿತ್ತು. ಇತ್ತೀಚಿನ ಮೀಟಿಂಗುಗಳ ಬ್ರೇಕಿನಲ್ಲಿ ಕಾಫಿ, ಚಹಾ, ಸ್ನ್ಯಾಕುಗಳನ್ನು ಟ್ರಾಲಿಯೊಂದರಲ್ಲಿ ತುಂಬಿಕೊಂಡು ಅವಳೆ ಬರಲಾರಂಭಿಸಿದಾಗಲಂತು, ಮೀಟಿಂಗಿಗಿಂತ ಬ್ರೇಕುಗಳನ್ನೆ ಎದುರು ನೋಡುತ್ತಿರುವ ಹಾಗೆ ಭಾಸವಾಗಿ ತನಗೇನಾಗುತ್ತಿದೆಯೊ ಎಂದು ಭೀತಿಯೂ ಮೂಡಿ ಮರೆಯಾಗುತ್ತಿತ್ತು. ಆದರೆ ಅವಳು ಹಾಗೆ ಬಂದಾಗೆಲ್ಲ ಹೇಗಾದರೂ ಕಣ್ಣೋಟ ಜೋಡಿಸಿ ಮಿಂಚಿನ ಮುಗುಳ್ನಗೆಯೊಂದನ್ನು ಹರಿಸಿ ಮರೆಯಾಗುವಾಗ ಎಲ್ಲಾ ಮರೆತು ಹೋಗಿ, ಆ ಸ್ನಿಗ್ದ ಸ್ಮಿತ ಮಂದಹಾಸವಷ್ಟೆ ಮನದಲ್ಲುಳಿಯುತ್ತಿದ್ದುದು.  ಒಟ್ಟಾರೆ ಅವಳ ಬರುವಿಕೆಯಿಂದ ನೀರಸವೆನಿಸಬಹುದಾಗಿದ್ದ ಪ್ರಾಜೆಕ್ಟಿನ ಯಾಂತ್ರಿಕತೆಯೂ, ಸಹನೀಯ ಮಾಧುರ್ಯವಾಗಿ ಅನಿಸತೊಡಗಿ ಅವನ ಕಾರ್ಯಕ್ಷಮತೆಯಲ್ಲೂ ಅದು ಧನಾತ್ಮಕ ಪರಿಣಾಮ ಬೀರಿದ್ದೆ ಅಲ್ಲದೆ, ಅದರ ಗುರುತುಗಳ ಪ್ರತಿಫಲನದ ಕುರುಹು ಪ್ರಾಜೆಕ್ಟಿನ ಪ್ರಗತಿಯಲ್ಲೂ ಎದ್ದು ಕಾಣಿಸತೊಡಗಿತು. ಈ ಮನೋಲ್ಲಾಸದ ವಲ್ಲರಿ ಹೀಗೆ ಮುಂದುವರೆದರೆ ಪ್ರಾಜೆಕ್ಟಿನ ಕೆಲಸವೆಲ್ಲ ಹೂವೆತ್ತಿದಂತೆ ಸಲೀಸಾಗಿ ಆಗಿಬಿಡುವುದೆಂಬ ಆತ್ಮವಿಶ್ವಾಸವೂ ಹೆಚ್ಚತೊಡಗಿತು.

(ಇನ್ನೂ ಇದೆ)
___________
 

Comments

Submitted by nageshamysore Mon, 03/10/2014 - 03:11

In reply to by kavinagaraj

ಶ್ರೀನಾಥನ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಬಿಚ್ಚಿಡುವ ಯಾತ್ರೆಯಲ್ಲಿ ಇದು ಒಂದು ಅವತಾರ. ಪ್ರತಿ ಅವತಾರಕ್ಕು ಸಾಮಾನ್ಯ ಅಂಶವೆಂದರೆ - ಎಲ್ಲೆಡೆಯೂ ಏನನ್ನೊ ಹುಡುಕಾಡುತ್ತ ಅಲೆವ ಮನಸತ್ವ. ಈಗ ಆ ಹುಡುಕಾಟ ಕುನ್. ಸೂ ಒಡನಾಟದತ್ತ ಎಳೆದು ತಂದಿದೆ. ಮುಂದೆಲ್ಲಿಗೊಯ್ಯುವುದೊ ನೋಡೋಣ :-)

Submitted by ಗಣೇಶ Sun, 07/20/2014 - 20:40

ನಾಗೇಶರೆ, ಪರಿಭ್ರಮಣ ೨೬ನೇ ಸುತ್ತಿಗೆ ತಲುಪಿದ್ದರೂ, ನಾನಿನ್ನೂ ಸಿಂಗಾಪುರದ ಕೋಮಲ ವಿಲಾಸ ಹೋಟಲ್ ( https://foursquare.com/v/komala-vilas-restaurant/4b058813f964a5204cb022e3 ) ನಿಂದ ಹೊರಬಂದಿಲ್ಲ. ತಿನಿಸುಗಳ + ಥಾಯ್ ಭಾಷೆ ಬಗ್ಗೆ ವಿವರ ಚೆನ್ನಾಗಿದೆ.

Submitted by nageshamysore Mon, 07/21/2014 - 03:51

In reply to by ಗಣೇಶ

ಗಣೇಶ್ ಜಿ, ನಿಮ್ಮ ಲಿಂಕ್ ಕೋಮಲಾಸ್ ಸಿಂಗಪುರದ ವಿಳಾಸ ತೋರಿಸುತ್ತಿದೆ - ಅದರ ಬಾಂಕಾಕ್ ಬ್ರಾಂಚ್ - ಸುಖುಂವಿತ್ ರಸ್ತೆಯಲ್ಲಿದೆ. ಅದು ಎಲ್ಲಾದರೂ ಸರಿ, ನಿಧಾನಕ್ಕೆ ತಿಂದು ಮುಗಿಸಿ ಆರಾಮವಾಗಿ ಬನ್ನಿ. ಸಂಪದದ ದೆಸೆಯಿಂಬ ಪರಿಭ್ರಮಣದ ಕಂತುಗಳನ್ನು ಸಮಯವಾದಾಗ ಯಾವಾಗ ಬೇಕಾದರೂ ಓದಬಹುದು! ಪ್ರತಿಕ್ರಿಯೆಗೆ  ಧನ್ಯವಾದಗಳು :-)