ನಾ ಬರೆದ ಪುಸ್ತಕ !
ನನ್ನನ್ನೂ ಹೊತ್ತುಕೊಂಡು ಸಾಗುತ್ತಿತ್ತು ಟ್ರೈನೊಂದು
ಕುಳಿತಿತ್ತೆದುರಿಗೆ ತಾಯೊಂದಿಗೆ ಅಳುವ ಮಗುವೊಂದು
ನಾ ಕೈಯಲ್ಲಿ ಪಿಡಿದಿದ್ದೆ ದಪ್ಪನೆಯ ಪುಸ್ತಕವೊಂದು
ಹೇಳುವುದಕ್ಕೆ ಗರ್ವವೆನಗೆ ಅದ ಬರೆದವ ನಾನೆಂದು
ನಾ ಬರೆದ ಪುಸ್ತಕವ ನಾನೇ ಪಿಡಿದಿದ್ದೆನೇಕೆಂದು
ನಿಮ್ಮ ಮನದಲ್ಲಿ ಮೂಡಿರಬಹುದೇನೋ ಶಂಕೆಯೊಂದು
ಕೇಳಬಹುದು ಯಾರಾದರೂ ಓದಿ ಕೊಡುವೆನೆಂದು
ಹಾಗಾದರೂ ತಿಳಿಯಲಿ ಜನರಿಗೆ ನಾನು ಯಾರೆಂದು
ನಾ ಬರೆದಿದ್ದೇ ಓದಿದರೂ ಅರ್ಥವಾಗುತ್ತಲೇ ಇಲ್ಲವಿಂದು
ತಲೆಯ ನರನರದಲ್ಲೂ ಅಳುವಿನ ಸದ್ದು ತುಂಬಿಹುದಿಂದು
ಮಗುವಿನ ಅಳುವಿನ ಸದ್ದಡಗಿಸಲು ನನ್ನ ಕಥೆ ಹೇಳಲೆಂದು
ನಾ ಪುಸ್ತಕವ ಸಿದ್ದಿವಿಟ್ಟುಕೊಂಡೆ, ಆ ತಾಯಿ ಕೇಳಬಹುದೆಂದು
ಕೊನೆಗೂ ’ಪುಸ್ತಕವ ಕೊಡುವಿರಾ’ ಎಂಬ ಮಾತುಗಳುದುರಿತ್ತಂದು
ಕೇಳಿದ್ದೇ ಸಾಕೆಂದು ತಾಯ ಕೈಗೆ ತುರುಕಿ ಹೇಳಿದ್ದೆ "ಓದಿ" ಎಂದು
ಮಗನ ಕೈಯ ಹಿಡಿದು ಸೆಳೆದು ನಿಲ್ಲಿಸಿ ಭರ್ರನೆ ತಿರುಗಿಸಿದ್ದಳಾಕೆ
ಪುಸ್ತಕವ ಪಿಡಿದು ರಪ್ಪನೆ ಅವನ ಹಿಂಭಾಗಕ್ಕೆ ಬಡಿದಿದ್ದಳಾಕೆ
ಅಮ್ಮನ ದಾಳಿಗೆ ಬೆಚ್ಚಿ ಮೂಕಾಗಿ ಬಾಯಿ ಮುಚ್ಚಿದ್ದನವ
ಅತ್ತು ಸುಸ್ತಾದವನನ್ನು ಮಲಗಿಸಲು ಸಿಕ್ಕಿತ್ತವಳಿಗೆ ನೆವ
’ಮಕ್ಕಳ ಕಥೆಗಳು’ ಎಂಬ ಶಿರೋನಾಮೆಯ ಹೊತ್ತುಗೆಯಿಂದು
ಮಗುವಿಗೆ ದಿಂಬಾಗಿಯಾದರೂ ಉಪಯೋಗ ಪಡೆದಿಹುದಿಂದು !
Comments
ಉ: ನಾ ಬರೆದ ಪುಸ್ತಕ !
ಆತ್ಮೀಯ ಭಲ್ಲೆ ಜಿ,ನಮಸ್ಕಾರ, ಕವನ ಮುದಗೊಳಿಸಿತು, ಅಂತೂ ಹಾಗಾದರೂ ಪುಸ್ತಿಕೆ ಉಪಯಾಗವಾಯಿತೆನ್ನಿ, ಪುಸ್ತಕಗಳ ಬಹುಪಯೋಗಗಳ ಕುರಿತು ಕವನ ಚನ್ನಾಗಿ ಮೂಡಿದೆ, ಧನ್ಯವಾದಗಳು ಸರ್ ಮತ್ತೊಮ್ಮೆ,
In reply to ಉ: ನಾ ಬರೆದ ಪುಸ್ತಕ ! by lpitnal
ಉ: ನಾ ಬರೆದ ಪುಸ್ತಕ !
ಇಟ್ನಾಳರಿಗೆ ನಮಸ್ಕಾರಗಳು
ಧನ್ಯವಾದಗಳು ... ಇ-ಪುಸ್ತಕಗಳ ಜಗತ್ತಿನಲ್ಲಿ ಈ ಪುಸ್ತಕಗಳ ಉಪಯೋಗ ಹೀಗೇ :-)
ಉ: ನಾ ಬರೆದ ಪುಸ್ತಕ !
ಉಪಯೋಗಿ ಪುಸ್ತಕ ಬರೆದಿದ್ದಕ್ಕೆ ಅಭಿನಂದನೆಗಳು.
In reply to ಉ: ನಾ ಬರೆದ ಪುಸ್ತಕ ! by kavinagaraj
ಉ: ನಾ ಬರೆದ ಪುಸ್ತಕ !
ಧನ್ಯವಾದಗಳು ಕವಿಗಳೇ
ಪುಸ್ತಕ - ಮಕ್ಕಳ, ಮಕ್ಕಳಿಂದ, ಮಕ್ಕಳಿಗಾಗಿ - ಯಾಕೆ/ಯಾವುದಕ್ಕೆ ಎಂಬೋದು ಬೇರೆ ವಿಷಯ :-)