ಕಡೂರಿನ ದಿನಗಳು - ಕದ್ದು ತಿಂದ ಲಾಡು ಉಂಡೆ!

ಕಡೂರಿನ ದಿನಗಳು - ಕದ್ದು ತಿಂದ ಲಾಡು ಉಂಡೆ!

ಕಡೂರಿನ ದಿನಗಳು - ಕದ್ದು ತಿಂದ ಲಾಡು ಉಂಡೆ!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಕಡೂರಿನ ನಮ್ಮ ಮನೆಯ ಮುಂದೆ ಕೇಶವ ದೇವರ ದೇವಸ್ಥಾನವಿತ್ತು. ಸಾಕಷ್ಟು ವಿಶಾಲವಾಗಿತ್ತು. ಪ್ರಾಂಗಣವೂ ದೊಡ್ದದಾಗಿ ಹೂವು ಮತ್ತು ಹಣ್ಣಿನ ಗಿಡ ಮರಗಳಿದ್ದವು. ನಾವು ಚಿಕ್ಕವರಿದ್ದಾಗ ದೇವಸ್ಥಾನದ ಹೊರಗೆ, ಜಗುಲಿಯ ಮೇಲೆ, ಮತ್ತು ಕೆಲವೊಮ್ಮೆ ಒಳಗೂ ಆಟ ಆಡಿ ಕಾಲ ಕಳೆಯುತ್ತಿದ್ದೆವು. ಬೇಸಿಗೆ ರಜ ಬಂತೆಂದರೆ ಸಾಕು, ಪರಂಗಿ ಗಿಡದಿಂದ ಪರಂಗಿ ಕಾಯಿ ಉದುರಿಸಿ, ಇನ್ನೂ ಹಾಣ್ಣಾಗಿರದಿದ್ದರೆ, ಹೆಚ್ಚಿ, ಉಪ್ಪು ಕಾರ ಹಾಕಿ ತಿಂದು, ನೀರು ಕುಡಿದು, ಮತ್ತೆ ಆಟ ಆಡಲು ಹೋಗುತ್ತಿದ್ದೆವು. ಮದುವೆ, ಮುಂಜಿ ಮಾಡಲು ಅನುಕೂಲವಾಗಲಿ ಅಂತ ದೇವಸ್ಥಾನದ ಪ್ರಾಂಗಣದ ಒಂದು ಭಾಗದಲ್ಲಿ ಒಂದು ಅಡಿಗೆ ಶಾಲೆ ಮತ್ತು ಅದಕ್ಕೆ ಅಂಟಿಸಿದಂತೆ ಒಂದು ರೂಮು ಕಟ್ಟಿಸಿದ್ದರು ಹೊಸದಾಗಿ.

ಮದುವೆ, ಮುಂಜಿಗಳು ಬೇಸಿಗೆಯಲ್ಲಿ ಜಾಸ್ತಿಯಾದ್ದರಿಂದ ಆಗಾಗ್ಗೆ ಅಡಿಗೆ ಶಾಲೆ ಬಿಜಿಯಾಗಿ ಅಡಿಗೆ ಭಟ್ಟರುಗಳು ಮೊದಲೇ ತಯಾರಿಸಿ ಇಟ್ಟುಕೊಳ್ಳುವಂತಹ ತಿಂಡಿಗಳನ್ನು ಹಿಂದಿನ ದಿನವೇ ತಯಾರಿಸುತ್ತಿದ್ದರು. ಹೀಗೊಂದು ಮದುವೆ ಇನ್ನೆರಡು ದಿನಗಳು ಇದೆ ಅನ್ನುವಾಗ ಅಡಿಗೆಶಾಲೆಯಲ್ಲಿ ಲಾಡು ಉಂಡೆ ತಯಾರಿಸುತ್ತಿದ್ದರು ೨-೩ ಜನ ಭಟ್ಟರು ಸೇರಿ. ಒಬ್ಬರು ತುಪ್ಪದಲ್ಲಿ (ಎಣ್ಣೆಯಲ್ಲಿ) ಕರೆಯುತ್ತಿದ್ದರು, ಇನ್ನೊಬ್ಬರು ಆದ ಕಾಳುಗಳನ್ನೆಲ್ಲ ಒಂದು ದೊಡ್ದ ಬೇಸನ್ ಗೆ ಹಾಕಿ, ಸಕ್ಕರೆ ಪಾಕ ಎಲ್ಲ ಹಾಕಿ ಉಂಡೆ ಕಟ್ಟುತ್ತಿದ್ದರು. ಮೂರನೆಯವರು ಕಟ್ಟಿದ ಉಂಡೆಗಳನ್ನೆಲ್ಲ ಗೊಪುರದಲ್ಲಿ ತಟ್ಟೆಯ ಮೇಲೆ ಜೋಡಿಸಿ, ಆರಲು ಕಿಟಕಿಯ ಬಳಿ ಒಂದು ತೊಟ್ಟಿಯ ಮೇಲೆ ಇಡುತ್ತಿದ್ದರು. ಹೀಗೆ ಒಂದು ತಟ್ಟೆಯ ತುಂಬ ಗೋಪುರದಲ್ಲಿ ಲಾಡು ಉಂಡೆಗಳು ಜೋಡಿಸಿ ರೆಡಿಯಾಗಿತ್ತು. ನಾವುಗಳು ಒಂದು ೪ - ೫  ಮಕ್ಕಳು ಅಲ್ಲೇ ಹೊರಗಡೆ ದೇವಸ್ಥಾನದ ಪ್ರಾಂಗಣದಲ್ಲಿ ಜೂಟಾಟ, ಓಡಿ ಹಿಡಿಯುವ ಆಟ, ಜಗಲಿ ಆಟ ಎಲ್ಲ ಆಡುತ್ತಿದ್ದೆವು. ಪ್ರತೀಸಲ ಅಡಿಗೆಶಾಲೆ ಮುಂದೆ ಓಡುವಾಗ, ಘಮ - ಘಮ ಲಾಡು ವಾಸನೆ (ಪಚ್ಚಕರ್ಪೂರದ ಸುವಾಸನೆ) ನಮ್ಮಗಳ ಮೂಗಿಗೆ ತಗುಲಿ, ಅಲ್ಲೇ ಕಿಟಕಿ ಮೂಲಕ ನೋಡಿ ತಟ್ಟೆಯ ತುಂಬಾ ಲಾಡು ನೋಡಿ ಖುಷಿ ಪಡುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ವಿಶ್ರಮಿಸಿಕೊಳ್ಲಲು ಎಲ್ಲ ಒಂದು ಕಡೆ ಸೇರಿದಾಗ, ಮಾತು ಕಥೆ ಹೀಗೆ ನಡೆದಿತ್ತು.

ಅಯ್ಯೋ ಲಾಡು ವಾಸನೆ ಎಷ್ಟು ಚೆನ್ನಾಗಿ ಬರುತ್ತಿದೆ, ತಿನ್ನಬೇಕು ಅನ್ನಿಸುತ್ತಿದೆ ಏನು ಮಾಡುವುದು? ಅನ್ನೋದೆ ಎಲ್ಲರ ಪ್ರಶ್ನೆ ಯಾಗಿತ್ತು. ಸ್ವಲ್ಪ ಮಾತಾಡಿ, "ಅವರನ್ನು ಮಾತಾಡಿಸುವುದು, ಅವರೇ ನಮಗೆಲ್ಲ ಒಂದೊಂದು ಲಾಡು ಕೊಡಬಹುದು ಅಂತ ತೀರ್ಮಾನಿಸಿ...ಲಾಡು ಚೆನ್ನಾಗಿ ಕಟ್ಟಿದೀರ, ಮದುವೆಗಾ? ಯಾವತ್ತು ಮದುವೆ ಅಂತ ಕೇಳೋದು" ಅಂತ ತೀರ್ಮಾನಿಸಿದೆವು. ಹೀಗೆ ಗುಂಪಲ್ಲಿ ಹೋಗಿ ಮಾತಾಡಿಸಿದೆವು. "ಕಿಟಕಿ ಯಿಂದ ದೂರ ಇರಿ, ಒಂದು ಲಾಡು ಬಿದ್ದರೆ, ಎಲ್ಲ ಉರುಳಿ ಹೋಗತ್ತೆ, ದೂರ ಹೋಗಿ ಆಡಿಕೊಳ್ಳಿ" ಅಂದರು. ನಿರಾಸೆಯಿಂದ ಬಂದು ಮತ್ತೆ ಸ್ವಲ್ಪ ಆಟ ಆಡಿದೆವು. ಈಗ ಲಾಡು ಸುವಾಸನೆ - ಪಚ್ಚಕರ್ಪೂರದ ಘಮ ಘಮ ಇನ್ನೂ ಜೋರಾಗಿ ಬರಲಾರಂಬಿಸಿತು, ತುಂಬಾ ತಟ್ಟೆಗಳಾದ್ದರಿಂದ ಕೆಲವು ತಟ್ಟೆಗಳನ್ನು ನೆಲದಮೇಲೂ ಇಟ್ಟಿದ್ದರು. ಬಾಯಲ್ಲಿ ನೀರೂರಿ ಮನಸ್ಸಿನಲ್ಲೇ ಮಂಡಿಗೆ ತಿನ್ನಲಾರಂಬಿಸಿದೆವು. ಕಡೆಗೂ ಒಂದು ತೀರ್ಮಾನ ಮಾಡೇ ಬಿಟ್ಟೆವು. ನಮ್ಮಲ್ಲಿ ದೊಡ್ದವನಾದ ಪ್ರಸಾದಿ ಒಂದೇ ಒಂದು ಲಾಡು ಹುಷಾರಾಗಿ ಕದಿಯುವುದು ಕಿಟಕಿಯಿಂದ, ತಕ್ಷಣ ನಮ್ಮಲ್ಲೊಬ್ಬರಿಗೆ ಅದನ್ನು ಕೊಡುವುದು ಮುಚ್ಚಿಡಲು, ಮಿಕ್ಕವರು ಅಡಿಗೆ ಭಟ್ಟರ ಗಮನ ಸೆಳೆಯಲು ಅಡಿಗೆ ಶಾಲೆಯ ಬಾಗಿಲ ಮುಂದೆ ನಿಂತು ಒಳಗೆ ಲಾಡು ಕರಿಯುವುದನ್ನು ನೋಡುವುದು. ಆಮೇಲೆ ಕದ್ದ ಲಾಡುವಿನಲ್ಲಿ ಎಲ್ಲರೂ ಹಂಚಿಕೊಂಡು ತಿನ್ನುವುದು. ಪ್ರಸಾದಿನೂ ಕದಿಯುವಾಗ ಅಥವಾ ಕದ್ದಮೇಲೆ, ಅಡಿಗೆ ಭಟರೇನಾದರೋ ಸಂಶಯದಿಂದ ನೋಡಿದರೆ, ನಮ್ಮನ್ನೆಲ್ಲ ಸಂಭೋಧಿಸಿ ಹೀಗೆ ಹೇಳುವುದು "ಅವರು ಮದುವೆಗೆ ಲಾಡು ಮಾಡುತ್ತಿದ್ದಾರೆ, ನೀವೆಲ್ಲ ಯಾಕೆ ಹೀಗೆ ಅವರನ್ನು ಕಾಡ್ತೀರ, ಎಲ್ಲ ಮುಗಿದಮೇಲೆ ಅವರೇ ಕೊಡುತ್ತಾರೆ" ಅಂತ ಅನುಮಾನ ಬರದಿದ್ದ ಹಾಗೆ ನೋಡಿಕೊಳ್ಳುವುದು ಅಂತ ತೀರ್ಮಾನಿಸಿದೆವು. ದೇವಸ್ಥಾನದ ಭಟ್ಟರ ಮಗ ಪ್ರಸಾದಿಗೆ ಈ ತರಹ ಕೆಲಸದಲ್ಲಿ ಚಾತುರ್ಯ ಇತ್ತು. ಬೇಕಾದರೆ ಕದಿಯುವಾಗ ಸ್ವಲ್ಪ ಜೋರಾಗಿ ಮಂತ್ರ ಹೇಳಿದರೆ, ದೆವಸ್ಥಾನದ ಭಟ್ಟರಿರಬೇಕು, ಇಲ್ಲೇ ಓಡಾಡುತ್ತಿದ್ದಾರೆ ಅಂತ ಅಡಿಗೆ ಭಟ್ಟರಿಗೆ ಅನಿಸಬೇಕು, ಹಾಗೆ ಬೇಕಾದರೂ ತಂತ್ರ ಮಾಡಲು ಗೊತ್ತಿತ್ತು.

ಎಲ್ಲ ಸಿದ್ದರಾದೆವು. ಇಬ್ಬರು ಬಾಗಿಲ ಮುಂದೆ ಹೋಗಿ ನಿಂತು ಮಾತಾಡುತ್ತಿದ್ದೆವು. ಏಷ್ಟು ಚೆನ್ನಾಗಿ ಮಣಿ ಮಣಿ ಹಾಗೆ ಕಾಣಿಸುತ್ತೆ ಲಾಡು ಕಾಳುಗಳು ಅಂತ. ಅಡಿಗೆ ಭಟ್ಟರು (ಕರಿಯುತ್ತಿದ್ದವರು): ನೀವು ದೊಡ್ದವರಾದಮೇಲೆ ಇದನ್ನೆಲ್ಲ ಕಲಿತು ಮಾಡಬಹುದು ಅಂತ ಹೇಳುತ್ತಿದ್ದರು. ನಮ್ಮ ಸಂಭಾಷಣೆ ಶುರುವಾದಮೇಲೆ, ಪ್ರಸಾದಿ ಕಿಟಕಿಯ ಬಳಿಗೆ ಹೋಗಿ ಕದಿಯಲು ಸಿದ್ಧನಾದ. ಕದಿಯಲು ಕಷ್ಟ ಇರಲಿಲ್ಲ, ಕಿಟಕಿಯ ಕಂಬಿಗಳ ಮಧ್ಯದಲ್ಲಿ ಕೈ ತೂರಿಸಿ ಮೇಲಿನ ಲಾಡು ಉಂಡೆಯನ್ನು ಅಪಹರಿಸಬೇಕಿತ್ತು. ಹಾಗೆ ಮಾಡುವಾಗ ಅವಸರದಲ್ಲಿ, ಬೇರೆ ಉಂಡೆಗಳಿಗೆ ತಗುಲಿ, ಎಲ್ಲಾ ಒಂದಾದಮೆಲೆ ಇನ್ನೊಂದು ಕೆಳಗೆ ಬಿದ್ದರೆ, ಆಗ ಇವರೆಲ್ಲ ನಮ್ಮನ್ನೆಲ್ಲಾ ಸುಮ್ಮನೆ ಬಿಡುತ್ತಿರಲಿಲ್ಲ. ಇನ್ನೊಂದು ತೊಂದರೆ ಅಂದರೆ, ಕಿಟಕಿ ಹೊರಗಡೆಯಿಂದ ಎತ್ತರ ಇತ್ತು, ಒಳಗಡೆಗಿಂತ. ಆದ್ದರಿಂದ ಹೊರಗಡೆ ಗೋಡೆಯ ತಳಪಾಯದ ಮೇಲೆ ಹತ್ತಿ ಆಮೇಲೆ ಕಿಟಕಿಯೊಳಗೆ ಕೈ ಹಾಕಬೇಕಿತ್ತು. ದಿನಾ ದೇವಸ್ಥಾನದ ಪೌಳಿ ಹತ್ತುತ್ತಿದ್ದಿದ್ದರಿಂದ ಇದರ ಅನುಭವ ಇತ್ತು. ಪ್ರಸಾದಿ ಕೈ ಹಾಕಿ ಒಂದು ಲಾಡುವನ್ನು ಕದ್ದು ಕೆಳಗೆ ಜಂಪ್ ಮಾಡಿದ. ಜಂಪ್ ಮಾಡಿದ ಶಬ್ಧ ಕೇಳಿ ಅಡಿಗೆ ಭಟ್ಟರು ಯಾರದು ಅಂತ ಕಿಟಕಿ ಕಡೆಗೆ ಬಂದರು. ಪ್ರಸಾದಿ: ಇಲ್ಲ, ನಾನೇ ಇಲ್ಲಿ ಓಡಿಕೊಂಡು ಬಂದೆ, ಇವರನ್ನೆಲ್ಲ ಕರೆದುಕೊಂಡು ಹೋಗೋಣ ಅಂತ ಅಂದ. ನಂತರ ಎಲ್ಲರೂ ದೇವರ ಗರ್ಭಗುಡಿಯ ಹಿಂದೆ ಅಂದರೆ ದೇವಸ್ಥಾನದ ಹಿಂದಿನ ಭಾಗಕ್ಕೆ ಹೋಗಿ ಕದ್ದು ತಂದ ಲಾಡು ಉಂಡೆಯನ್ನು ತಿನ್ನಲು ರಡಿಯಾದೆವು. ಒಂದು ೪-೫ ಜನ ಇದ್ದಿದ್ದರಿಂದ ನಮಗೆಲ್ಲ ಹೆಚ್ಚೂ ಕಡಿಮೆ ಕಾಲು ಭಾಗದಷ್ಟು ಸಿಕ್ಕಿತು. ದ್ರಾಕ್ಷಿ, ಗೋಡಂಬಿ, ಲವಂಗ, ಪಚ್ಚಕರ್ಪೂರ ಎಲ್ಲ ಹಾಕಿ ಸಿದ್ಧವಾಗಿದ್ದ ಲಾಡು ನಮ್ಮ ಪಾಲಿನದಾಗಿತ್ತು. ಸ್ವಲ್ಪವಷ್ಟೇ ತಿನ್ನಲು ಸಿಕ್ಕಿದ್ದರೂ ಅದರ ರುಚಿ ಮತ್ತು ಕದ್ದು ತಿಂದಿದ್ದ ಸಾಹಸ ಅದರ ರುಚಿಯನ್ನು ಇಮ್ಮಡಿಗೊಳಿಸಿತ್ತು. ಎಲ್ಲರೂ ಬಾಯಿ ಚಪ್ಪರಿಸುತ್ತಾ ತಿಂದೆವು. ಹಾಗೇ ಪ್ರಸಾದಿಯನ್ನು ಕೇಳಲು ಮರೀಲಿಲ್ಲ. "ನೀನು ಹೇಗೆ ಕದ್ದೆ ಅಷ್ಟೊಂದು ಕರೆಕ್ಟಾಗಿ? ಬೇರೆ ಲಾಡುಗಳು ಬೀಳಲಿಲ್ವಾ?" ಪ್ರಸಾದಿ ಜಂಬದಿಂದಾ " ನೀವು ಅವರನ್ನು ಮಾತಾಡಿಸುತ್ತಿರಿ ಅಂದರೆ, ನೀವು ಒಂದೆರಡು ಮಾತನಾಡಿ ನನ್ನ ಕಡೆ ನೋಡ್ತಿದ್ರಲ್ಲಾ" ಅಂತ ನಮಗೆಲ್ಲಾ ಬೈದ.

ಲಾಡು ತಿಂದ ಸ್ಪೂರ್ತಿ ಜಾಸ್ತಿಯಾಗಿ ಮತ್ತೆ ದೇವಸ್ಥಾನದ ಮುಂದೆ ಆಡುತ್ತಿದ್ದೆವು. ಆಗ ಅಡಿಗೆ ಶಾಲೆಯಿಂದ ಒಬ್ಬರು ಭಟ್ಟರು ನಮ್ಮನ್ನೆಲ್ಲಾ ಕರೆದು " ಈ ಒಂದೆರಡು ಲಾಡು ಒಡೆದು ಹೋಗಿದೆ ಒಂದು ಕಡೆ, ನೀವೆಲ್ಲಾ ಇಲ್ಲಿ ಕುಣಿಯುವಾಗ ಕೆಳಗೆ ಬಿದ್ದಿದೆ. ತಗೋಳಿ, ಎಲ್ಲರೂ ಅರ್ಧ ಅರ್ಧ ಮಾಡಿಕೊಂಡು ತಿನ್ನಿ. ಇಲ್ಲಿ ಆಟ ಆಡಬೇಡಿ ಇನ್ನೊಂದು ಸ್ವಲ್ಪ ಹೊತ್ತು. ನಮ್ಮ ಕೆಲಸ ಇನ್ನೇನು ಮುಗಿಯುತ್ತೆ" ಅಂತ ಕೇಳಿಕೊಂಡರು. ಪ್ರಸಾದಿ ಆ ಒಂದು ಲಾಡು ಕದಿಯುವಾಗ, ಇನ್ನೆರಡು ಲಾಡುಗಳಿಗೆ ಪೆಟ್ಟಾಗಿತ್ತು. ಅವರು ನೋಡಿರಲಿಲ್ಲವಾದ್ದರಿಂದ ನಮ್ಮ ಕೃತ್ಯ ಇದು ಅಂತ ಅವರಿಗೆ ತಿಳಿಯಲಿಲ್ಲ. ನಮ್ಮ ಲಾಡು ತಿಂದ ಸಂತೋಷ ಇನ್ನಷ್ಟು ಹೊತ್ತು ಜಾಸ್ತಿಯಾಯಿತು ಅವರಾಗೇ ಕೊಟ್ಟ ಲಾಡು ತಿಂದ ಮೇಲೆ. ೩- ದಿನಗಳ ನಂತರ ಮದುವೆ ಊಟಕ್ಕೂ ಹೋಗಿದ್ವಿ. ನಮ್ಮ ಸ್ನೇಹಿತರಿಗೆಲ್ಲ ಇವತ್ತು ಲಾಡು ವಿಶೇಷ ಊಟಕ್ಕೆ ಅಂತ ಹೇಳಿ ಅದೇ ಅಡಿಗೆ ಭಟ್ಟರಿಂದ ಲಾಡು ಉಂಡೆನ ಕೈಯಲ್ಲಿ ಇಸ್ಕೊಂಡು ಥರ್ಡ್ ಡೋಸ್ ತಿಂದೆವು. ಲಾಡು ತಿಂದಿದ್ದು ವಿಶೇಷವಲ್ಲ, ಕಷ್ಟ ಪಟ್ಟು, ಕದ್ದು, ಸಿಗಹಾಕಿಸಿಕೊಳ್ಳದೇ ತಿಂದೂ, ಮತ್ತಷ್ಟು ಗಿಟ್ಟಿಸಿಕೊಂಡೆವಲ್ಲಾ ಅದೇ ಮಜಾ!!!!! ಏನಂತೀರ?????

 

Comments

Submitted by lpitnal Sat, 07/26/2014 - 23:13

ಬಾಲ್ಯದ ಒಡನಾಟಗಳೇ ಹಾಗೇನೆ. ಏನು ಕೊಟ್ಟರೆ ಆ ದಿನಗಳು ಬಂದಾವು? 'ನ ದುನಿಯಾ ಕಾ ಗಮ್ ಥಾ, ನ ರಿಸ್ತೋಂ ಕಾ ಬಂಧನ್, ಬಡೀ ಖೂಬಸೂರತ್ ಥೀ ವೋ ಜಿಂದಗಾನಿ, ವೊ ಕಾಗಜ್ ಕಿ ಕಸ್ತೀ ವೋ ಬಾರಿಶ್ ಕಾ ಪಾನಿ' ಜಗಜಿತ್ ಹಾಡು ಎಂಥ ಅರ್ಥಪೂರ್ಣವಲ್ಲವೇ? ಸುಂದರ ದಿನಗಳ ನೆನಪು ಕೊಟ್ಟಿದ್ದೀರಿ, ಇವು ನಮ್ಮೆಲ್ಲರ ಬದುಕಿನ ಬೇರೆ ಮಾಡಲಾಗದ ಪುಟಗಳು. ಧನ್ಯವಾದಗಳು

Submitted by ಗಣೇಶ Sun, 07/27/2014 - 21:35

In reply to by kavinagaraj

ಐ ಆಬ್ಜೆಕ್ಟ್ ಕವಿನಾಗರಾಜರೆ,
ಕಾಮ, ಕ್ರೋಧ....ದ ಬಗ್ಗೆ ನಮಗೆ ನೀತಿ ಬೋಧೆ ಮಾಡಿ, ಇಲ್ಲಿ ಬಂದು ಕದ್ದ ಲಾಡಿನಲ್ಲಿ ಪಾಲು ತೆಗೆದುಕೊಂಡು...ರುಚಿಯಾಗಿದೆ ಅಂತ ಬೇರೆ ಹೇಳುತ್ತಿದ್ದೀರಾ!?
ಡಾಕ್ಟ್ರೆ,
>>ನೀವು ಅವರನ್ನು ಮಾತಾಡಿಸುತ್ತಿರಿ ಅಂದರೆ, ನೀವು ಒಂದೆರಡು ಮಾತನಾಡಿ ನನ್ನ ಕಡೆ ನೋಡ್ತಿದ್ರಲ್ಲಾ" ಅಂತ ನಮಗೆಲ್ಲಾ ಬೈದ..
:)
ಮತ್ತೆ ನಿಮ್ಮನ್ನು ಸಂಪದದಲ್ಲಿ- ಅದೂ ಲಾಡು ಜತೆ.. ಓದಿ ಖುಷಿಯಾಯಿತು.

Submitted by abdul Sun, 07/27/2014 - 16:37

ಲಾಡು ಪುರಾಣ ಚೆನ್ನಾಗಿದೆ, ಮೇಡಂ. ಚಿಕ್ಕಂದಿನಲ್ಲಿ ಮನೆಯವರು ಎಷ್ಟೇ ಸಿಹಿ ತಿನಿಸುಗಳನ್ನು ತಿನ್ನಲು ಕೊಟ್ಟರೂ ಸಾಲದೆ ಕದ್ದು ತಿನ್ನದ ಮಕ್ಕಳೇ ಇಲ್ಲ ಎನ್ನಬಹುದು.

ಲಾಡು ಸ್ಯಾಚುರೇಟೆಡ್ ಕೊಬ್ಬು ಎಂದು ಅದರಿಂದ ದೂರ ಇರುವ ಸಂಕಲ್ಪದ ಜೊತೆ ಈ ಅನುಭವವೂ ಕೂಡಾ ಲಾಡು ವಿನಿಂದ ಮಾರುದೂರ ಮಾಡಿತು ನನ್ನನ್ನು.

ಐಶ್ವರ್ಯ ರಾಯ್ ವಿವಾಹದ ಸಮಯ ಬರುವ ಅತಿಥಿಗಳಿಗೆಂದು ತಯಾರಾಗುತ್ತಿದ್ದ ಖಾದ್ಯ ಗಳ ಕುರಿತು ಟೀವೀ ಯಲ್ಲಿ ವೀಕ್ಷಿಸಿದ್ದೆ. ಅದರಲ್ಲಿ ಲಾಡು ಮಾಡುವ ಭಟ್ಟರುಗಳ ಪಂಚೆ, ಬಾಯ್ತುಂಬಾ ತಾಂಬೂಲ ಹಾಕಿಕೊಂಡು ಎಡಗೈಯ್ಯಲ್ಲಿ ಲಾಡು ಗಳನ್ನು ಉಂಡೆ ಮಾಡುತ್ತಿದ್ದ ದೃಶ್ಯ ನೋಡಿ ಅಪರೂಕ್ಕೊಮ್ಮೆ ಲಾಡು ಮೆಲ್ಲುವ ಆಸೆಗೆ ಕಡಿವಾಣ ಬಿತ್ತು.

ಅಂದ ಹಾಗೆ, ಲಾಡು ಉಂಡೆಯ ಆಕಾರದಲ್ಲೇ ಇರೋದ್ರಿಂದ ಲಾಡು ಉಂಡೆ ಎಂದು ಹೇಳಬೇಕಿಲ್ಲ -), ಅಲ್ಲವೇ?

ಧನ್ಯವಾದಗಳು.

Submitted by rekhash Mon, 07/28/2014 - 13:22

ಬರಹ‌ ತುಂಬಾ ಚೆನ್ನಾಗಿದೆ ಮೇಡಂ!!
ನಿಜಕ್ಕೂ ಬಾಲ್ಯವೆಂಬೋದು ಎಷ್ಟು ಬಗೆದರೂ ಖಾಲಿಯಾಗದ‌ ಸಿಹಿನೀರಿನ‌ ಒರತೆ..
ನಿಮ್ಮ‌ ಅನುಭವವನ್ನ‌ ಕಣ್ಣಿಗೆ ಕಟ್ಟೋ ಹಾಗೆ ವಿವರಿಸಿದ್ದೀರಾ... ಅಭಿನಂದನೆಗಳು :)

Submitted by rasikathe Tue, 07/29/2014 - 00:44

ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ನನ್ನ ವಂದನೆಗಳು! ಸಮಯದ ಕೊರತೆಯಿಂದ ಇತ್ತೀಚೆಗೆ ಏನೂ ಬರೆದಿರಲಿಲ್ಲ, ಸಂಪದದಲ್ಲಿ ಬರೆಯುವುದು ನನಗೆ ಆತ್ಮೀಯವಾದ ವಿಷಯಗಳಲ್ಲೊಂದು. ಸವಿನೆನಪು ಸವಿಯನ್ನು ಕೊಡುತ್ತಲೇ ಇರುತ್ತದೆ. ಅದಕ್ಕೆ ಕಷ್ಟ ಬಂದಾಗಲೂ ನಾವು ಅವುಗಳನ್ನು ಸವಿಯಬೇಕು. ಅದರಲ್ಲೂ ಬಾಲ್ಯದ ನೆನಪುಗಳು ಸುಂದರ. ನೀವೆಲ್ಲರೂ ಅದನ್ನು ಒಪ್ಪುತ್ತೀರ ಎಂದು ತಿಳಿಯಿತು. ಇನ್ನೊಮ್ಮೆ ಎಲ್ಲರಿಗೂ ವಂದನೆಗಳು...ಲಕ್ಷ್ಮೀ ಕಾಂತ್, ಕವಿ ನಾಗರಾಜ್, ಮಂಜುನಾಥ್, ರೇಖ, ಮತ್ತು ಗಣೇಶ್

ಕವಿ ನಾಗರಾಜರ ಕಾಮೆಂಟಿಗೆ ತಮಾಶೆಯಿಂದ ಬರೆದಿದ್ದು ಗಣೇಶ ಅವರ ಹಾಸ್ಯ ಪ್ರವೃತ್ತಿಯನ್ನು ಎತ್ತಿ ತೋರಿಸಿದೆ. ನನಗೂ ಹಾಸ್ಯ ಇಷ್ಟ ಆದ್ದರಿಂದ ತುಂಬಾ ಹಿಡಿಸಿತು. ನಾಗರಾಜ್ ಅವರೆ, ನಿಮ್ಮ ರೆಸ್ಪಾನ್ಸ್ ಕೂಡಾ ಚೆನ್ನಾಗಿದೆ.

Submitted by rasikathe Fri, 08/15/2014 - 00:59

In reply to by Sujith Kumar

ಧನ್ಯವಾದಗಳು! ಸುಜಿತ್ ಅವರೆ,
ನೀವು ಚಿಕ್ಕಮಗಳೂರ್ ಅವರಾ? ಹಾಗಾದ್ರೆ ಕಡೂರ್ ಚೆನ್ನಾಗಿ ಗೊತ್ತಿರಬೇಕಲ್ವಾ?
ಮೀನಾ

Submitted by Sujith Kumar Sat, 08/16/2014 - 10:05

In reply to by rasikathe

ತಕ್ಕ ಮಟ್ಟಿಗೆ ಗೊತ್ತು ,,,, ಚಿಕ್ಕಮಗಳೂರಿನ, ಊರಿನ ಹಸರಲ್ಲಿ ಬರೆದಿರುವ ಲೇಖನಗಳು ಬಹಳ ಚೆನ್ನಾಗಿದೆ.. :)