ಕಥೆ: ಪರಿಭ್ರಮಣ..(47)

ಕಥೆ: ಪರಿಭ್ರಮಣ..(47)

( ಪರಿಭ್ರಮಣ..46ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

'ಮಾಂಕ್ ಹುಡ್' ಸನ್ಯಾಸ ದೀಕ್ಷೆ ನೀಡುವ ಕಾಡಿನ ಮಧ್ಯದ ಆ ವನ್ಯಾಶ್ರಮಧಾಮದ ಕುರಿತು ಹುಡುಕುತ್ತ ಹೋದಂತೆ ಆಸಕ್ತಿದಾಯಕ ಮಾಹಿತಿಗಳು ಒಂದೊಂದಾಗಿ ಬಿಚ್ಚಿಕೊಳ್ಳತೊಡಗಿತ್ತು ಶ್ರೀನಾಥನ ಕಣ್ಣೆದುರಲ್ಲೆ. ಬರಿಯ ಮೇಲ್ನೋಟದ ಮಾಹಿತಿಗೆಂದು ಹುಡುಕಲಾರಂಭಿಸಿದ್ದವನ ಮನ, ಓದೋದುತ್ತ ಕೆರಳಿದ ಆಸಕ್ತಿಗೆ ಶರಣಾಗಿ ಪೂರ್ತಿ ವಿವರವನ್ನು ಅವಲೋಕಿಸತೊಡಗಿತ್ತು - ಒಂದೆ ಓಘದಲ್ಲಿ (ಮಾಹಿತಿ ಋಣ : ವಿವರಣೆಯ ಅಂತ್ಯದಲ್ಲಿ).

'ವಾಟ್ ಪಃ ನಾನಚಟ್ (WPN)',  ಥಾಯ್ಲ್ಯಾಂಡಿನ ಈಶಾನ್ಯ ದಿಕ್ಕಿನ ಉಬೋನ್ ನ ಬಳಿ - ರಚ್ಚಥಾನಿ ಪಟ್ಟಣದಿಂದ ಹದಿನೈದೆ ಕಿಲೊಮೀಟರ್ ದೂರದಲ್ಲಿರುವ ಸಣ್ಣ ಕಾಡಿನ ಮಧ್ಯದಲ್ಲಿ ಕಟ್ಟಿರುವ ಅಂತರರಾಷ್ಟ್ರೀಯ ವನ್ಯಾಶ್ರಮಧಾಮ / ದೇವಾಲಯ. ಹೆಸರಿನ ಹೋಲಿಕೆಯಲ್ಲಷ್ಟೆ ಅದನ್ನು ನಮ್ಮ ಆಶ್ರಮ, ಇಲ್ಲವೆ ಮಠವೆನ್ನಬಹುದೆ ಹೊರತು, ಅಲ್ಲಿನ ವಾಸ್ತುಶಿಲ್ಪ, ಪರಿಸರ, ವಾತಾವರಣಗಳನ್ನು ಪರಿಗಣಿಸಿದರೆ ಅದೊಂದು ಬೌದ್ಧ ದೇವಾಲಯದ ಪ್ರಶಾಂತ ಸಂಕೀರ್ಣವೆಂದೆ ಹೇಳಬೇಕು - ಅದರಲ್ಲೂ ಕಾನನದ ನಡುವಲ್ಲಿ ಸ್ಥಾಪಿತವಾಗಿರುವ ಇದರ ವಿಶೇಷತೆಯಿಂದಾಗಿ. ಥಾಯ್ ಭಾಷೆ ಬಾರದ ವಿದೇಶಿಯರಿಗೆಂದೆ ೧೯೭೫ ರಲ್ಲಿ ನಿರ್ಮಿತವಾದ ಈ ಆಶ್ರಮಧಾಮ (ಮೊನೆಸ್ಟರಿ) ತನ್ನ ಆಡಳಿತ ನಡೆಸುವುದೆಲ್ಲ ಇಂಗ್ಲೀಷಿನಲ್ಲೆ. ಅದಕ್ಕೆಂದೆ ಏನೋ ಹೆಸರು ಕೂಡ ಇಂಗ್ಲೀಷಿನಲ್ಲಿ 'ಇಂಟರ ನ್ಯಾಷನಲ್ ಮಾನೆಸ್ಟರಿ' ಎಂದೆ ಇದ್ದರೂ 'ವಾಟ್ ಪಃ ನಾನಾಚಟ್' ಅನ್ನೆ ಚುಟುಕಾಗಿಸಿ 'ಡಬ್ಲ್ಯೂ.ಪಿ.ಎನ್' ಎಂದು ಕರೆಯುವ ವಾಡಿಕೆ. ಥಾಯ್ ಸಂಸ್ಕೃತಿಗನುಗುಣವಾದ ರೀತಿಯಲ್ಲಿ ಬೌದ್ಧ ಧರ್ಮದ ಪರಿಚಯ ಮಾಡಿಕೊಳ್ಳಲು ಬರುವವರಿಗಾಗಿಯೆ ನಡೆಸುವ ತಾಣವಾದ ಕಾರಣ ಅಲ್ಲಿ ಅನೇಕ ದೇಶ, ವಿದೇಶಗಳಿಂದ ಬಂದು ತಂಗಿದ ಪೂರ್ತಿ ಹೊಸಬರ ಗುಂಪು ಮಾತ್ರವಲ್ಲದೆ, ಸ್ವಲ್ಪ ಪಳಗಿ ಮೇಲಿನ ಸ್ತರಕ್ಕೇರಿ ಪ್ರತಿಜ್ಞಾವಿಧಿ ಸ್ವೀಕರಿಸುವ ಹಂತದಲ್ಲಿರುವ ಶಿಬಿರಾರ್ಥಿಗಳು ಸಹ ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದರು - ಅಲ್ಲಿರುವ ಮಾಂಕುಗಳ ಜತೆಜತೆಯಲ್ಲೆ. ಹೀಗಾಗಿ ವಿದೇಶಿಗರಲ್ಲಿ ಅದೊಂದು ಆಕರ್ಷಕ ಬೌದ್ಧ ವಿಹಾರ ಧಾಮವಾಗಿದ್ದುದರಲ್ಲಿ ಅಚ್ಚರಿಯೇನೂ ಇರಲಿಲ್ಲ. 

'ವಾಟ್ ಪಃ ನಾನಾಚಟ್' ಮೂಲತಃ ಧ್ಯಾನ ಕೇಂದ್ರವಲ್ಲವಾದರೂ, ಒಂದಷ್ಟು ಜನ ಅತಿಥಿಗಳು ಬಂದುಳಿದುಕೊಂಡು, ವನ್ಯಾಶ್ರಮ ಧಾಮದಲ್ಲಿರುವ ಶಾಶ್ವತ ನಿವಾಸಿಗಳ ಜತೆಯೆ ಇದ್ದುಕೊಂಡು, ಅವರಂತೆಯೆ ಸಾಧನೆ - ಅಭ್ಯಾಸ ಮಾಡಲು ಅಡ್ಡಿಯಿರದಂತಹ ಜಾಗ. ಅತಿಥಿಗಳು ಅಲ್ಲಿರುವತನಕ, ಅಲ್ಲಿಯೆ ವಾಸವಾಗಿರುವ ಬೌದ್ಧ ಭಿಕ್ಷುಗಳ (ಮಾಂಕುಗಳ) ದಿನಚರಿಯನ್ನೆ ಸಾಧ್ಯವಿದ್ದಷ್ಟು ಅನುಕರಿಸಿ, ಪರಿಪಾಲಿಸಬೇಕೆಂಬುದು ಅಲ್ಲಿನ ಮೂಲ ನಿಯಮ. ಅಲ್ಲಿರುವ ತನಕ ಸ್ವಯಂ ಗುರುಗಳಾಗಿಬಿಡುವ ಆ ಕಾನನವಾಸಿ ಸಂಪ್ರದಾಯದ ಬೌದ್ಧ ಸನ್ಯಾಸಿಗಳೆ ಒತ್ತಿ ಹೇಳುವ ಹಾಗೆ, ಅಲ್ಲಿನ ಸಮೂಹ ಒಡನಾಟ ಮತ್ತು ಚಟುವಟಿಕೆಗಳಿಂದ ವ್ಯಕ್ತಿಗಳ ವ್ಯಕ್ತಿತ್ವದಲ್ಲಿ ಆ ರೀತಿಯ ಬದುಕಿಗೆ ಬೇಕಾದ ಸಹಕಾರಿ ಮನೋಭಾವ, ಪರಸ್ಪರರಲ್ಲಿ ಗೌರವ ಮತ್ತು ನಿಸ್ವಾರ್ಥಪರತೆಯಿಂದುಂಟಾಗುವ ತ್ಯಾಗ - ಎಲ್ಲವೂ ಒಂದೆಡೆ ಸಾಮೂಹಿಕ ಸೌಹಾರ್ದತೆಯ ಶಾಂತಿಯನ್ನು ಪ್ರೇರೇಪಿಸಿದರೆ, ಮತ್ತೊಂದೆಡೆ ಸಾಧನೆಯ ಮುಖೇನದ ವ್ಯಕ್ತಿತ್ವದ ಬೆಳವಣಿಗೆಗೆ ರಹದಾರಿಯಾಗಿ ಬಿಡುತ್ತದೆ. ಧರ್ಮ-ವಿನಯ-ವಿಧೇಯತೆಯೊಂದಿಗೆ ಬುದ್ಧನ ಬೋಧನೆಯನುಸಾರ ಪ್ರಕ್ಷೇಪಿಸಿದ ವನ್ಯಾಶ್ರಮಧಾಮದ ಶಿಸ್ತಿನ ಜೀವನವನ್ನು ಉಣ ಬಡಿಸುತ್ತ ಸಾಧನೆಯ ತರಬೇತಿ ನೀಡುವ ಇಲ್ಲಿನ ಜೀವನ ಶೈಲಿ ಸರಳತೆ, ವೈರಾಗ್ಯ ಪೂರ್ಣ ಸನ್ಯಾಸಿ ಜೀವನ ಶೈಲಿ ಮತ್ತು ಮೌನಕ್ಕೆ ಪ್ರಾಮುಖ್ಯತೆ ನೀಡುವ ಪ್ರಶಾಂತತೆಯನ್ನು ಅನುಮೋದಿಸಿ, ಪ್ರೋತ್ಸಾಹಿಸುತ್ತದೆ. ಸೌಹಾರ್ದಯುತ ಸಮೂಹ ಪರಿಸರ ಪ್ರಜ್ಞೆಯನ್ನು ಹುಟ್ಟುಹಾಕಲೆಂದು, ಬೇಕೆಂದೆ ಈ ವಾತಾವರಣವನ್ನು ಸೃಜಿಸಿ ವಿಭಿನ್ನ ರೀತಿಯ ಹಿನ್ನಲೆಯ ಮತ್ತು ತರತರದ ವ್ಯಕ್ತಿತ್ವ ಹಾಗು ರಾಗದ್ವೇಷದ ಜನರೆಲ್ಲ ಪರಸ್ಪರರಿಗೆ ಸಹಕರಿಸುತ್ತಲೆ ಬುದ್ಧನ ಜ್ಞಾನೋದಯದ ಹಾದಿಯತ್ತ ನಡೆಯಲು, ಅಭ್ಯಸಿಸುತ್ತ ಸಾಧನೆಗೈಯಲು ಸಹಕಾರಿಯಾಗುತ್ತದೆಂಬ ಮೂಲ ಆಶಯವೆ ಇದರ ಮುಖ್ಯ ಉದ್ದೇಶ.  

ಪೀಠಿಕೆಯಂತಿದ್ದ ಆರಂಭಿಕ ಮಾಹಿತಿಯನ್ನು ಮುಗಿಸುತಿದ್ದಂತೆ ಅವನ ಕಣ್ಣಿಗೆ ಬಿದ್ದಿದ್ದು ದಿನಚರಿ / ಧ್ಯಾನದ ವೇಳಾಪಟ್ಟಿ. ಅಲ್ಲಿ ಹೋಗಿ ತಂಗುವ ಎಲ್ಲರೂ ಆ ದಿನಚರಿಯನ್ನು ಪಾಲಿಸಬೇಕೆಂದು ಕೇಳಿದ್ದ ಶ್ರೀನಾಥ ಅದೇನಿರಬಹುದೆಂಬ ಕುತೂಹಲದಲ್ಲಿ ಮತ್ತಷ್ಟು ಆಸಕ್ತಿಯಿಂದ ನೋಡತೊಡಗಿದ. ಅಲ್ಲಿನ ದಿನಚರಿಯಲ್ಲು, ಅಲ್ಲೆ ಹೋಗಿದ್ದುಕೊಂಡ ಅತಿಥಿಗಳಿಗೆ ಸಾಕಷ್ಟು ಮುಕ್ತ ಸಮಯ ಸಿಕ್ಕುವುದರಿಂದ ಅವರು ತಮ್ಮಷ್ಟಕ್ಕೆ ತಾವೆ ಧ್ಯಾನದಲ್ಲೊ ಅಥವಾ ಅಧ್ಯಯನದಲ್ಲೊ ತೊಡಗಿಸಿಕೊಂಡಿರಲು ಸಾಕಷ್ಟು ಸಮಯವಿರುತ್ತದೆ. ಹೀಗಾಗಿ ಆ ಸಮಯ ವ್ಯರ್ಥವಾಗದಿರಬೇಕೆಂದರೆ ಮೊದಲೆ ಸ್ವಲ್ಪ ಸರಳ ಧ್ಯಾನದ ಮತ್ತು ಬೌದ್ಧ ಧರ್ಮದ ಸ್ಥೂಲ ಬೋಧನೆಯ ಪೂರ್ವಾನುಭವವಿದ್ದರೆ ಒಳ್ಳೆಯದು. ಶ್ರೀನಾಥನಿಗೆ ಮೊದಲೆ ಕೊಂಚ ಧ್ಯಾನದ ಹಿನ್ನಲೆ ಅನುಭವಿದ್ದ ಕಾರಣ ಅದೇನು ದೊಡ್ಡ ತೊಡಕಾಗಿರಲಿಲ್ಲ. ಅಲ್ಲಿನ ಜೀವನ ಶೈಲಿಯ ಅತಿ ಮುಖ್ಯವಾದ ದಿನಚರಿ ಆರಂಭವಾಗುತ್ತಿದ್ದುದೆ ಬೆಳಗಿನ ಜಾವ ಮೂರು ಗಂಟೆಗೆ - ಎಚ್ಚರಿಸುವ ಗಂಟೆ ಮೊಳಗಿಸುವುದರೊಂದಿಗೆ. ಆ ಹೊತ್ತಿಗೆ ಎದ್ದು ಅರ್ಧ ಗಂಟೆಯಲ್ಲಿ ಸಿದ್ದರಾಗಿ ಬೆಳಗಿನ ಮಂತ್ರ ಘೋಷ ಮತ್ತು ಧ್ಯಾನದ ತರಗತಿಗಳಿಗೆ ಸಿದ್ದರಾಗಿಬಿಡಬೇಕಿತ್ತು. ಅಷ್ಟು ತೀರಾ ಬೆಳಗಿನ ಜಾವದ ಹೊತ್ತಿಗೆ ಎಚ್ಚರಾಗುವ ಅದೊಂದು ಕಠಿಣ ಪರಿಶ್ರಮಕ್ಕೆ ಒಗ್ಗಿಕೊಂಡುಬಿಟ್ಟರೆ, ಮಿಕ್ಕ ಭಾಗವನ್ನು ಪೂರೈಸುವುದು ಅಷ್ಟು ಕಠಿಣವೆನಿಸುತ್ತಿರಲಿಲ್ಲ. ಈ ಪರಿಕ್ರಮ ಕಳೆದು ಮುಂಜಾವು ಹಾಸಿಕೊಳ್ಳುತ್ತಿದ್ದಂತೆ, ನಸುಕಿನ ಸೂರ್ಯ ಮೇಲೆಗರಿ ಮೈ ಚಾಚಿ ಹರವಿಕೊಳ್ಳುವ ಮೊದಲೆ ಅಲ್ಲಿನ ಬೌದ್ಧ ಸನ್ಯಾಸಿಗಳೆಲ್ಲ ಸುತ್ತ ಮುತ್ತಲಿನ ಹಳ್ಳಿಗಳಿಗೆ ಭಿಕ್ಷಾಟನೆಗೆ ಹೊರಟು ಬಿಡುತ್ತಾರೆ. ಇನ್ನು ಮಿಕ್ಕುಳಿದುಕೊಂಡ ಅತಿಥಿಗಳು ಮಾತ್ರ ಸೋಮಾರಿಗಳಾಗುಳಿಯದೆ ಅಲ್ಲಿನ ಸುತ್ತಮುತ್ತಲ ಪ್ರಾಂಗಣದಲ್ಲಿ ಕಸ ಗುಡಿಸುತ್ತಲೊ ಅಥವಾ ಪಾಕಶಾಲೆಯ ಅಡುಗೆಯ ಸಿದ್ದತೆಯಲ್ಲಿ ಕೈ ಜೋಡಿಸುತ್ತಲೊ ಕಾಲ ದೂಡುತ್ತಾರೆ. ಗಂಟೆ ಎಂಟಾಗುವ ಹೊತ್ತಿಗೆ ಭಿಕ್ಷಾಟನೆಯಿಂದ ಹಿಂತಿರುಗಿದ ಮಾಂಕುಗಳು ಬೇಡಿ ತಂದ ಆಹಾರವನ್ನು ಸರ್ವರು ಹಂಚಿಕೊಂಡು ತಿನ್ನಬೇಕು - ಬಂದ ಅತಿಥಿಗಳಿಗೂ ಸೇರಿದಂತೆ.  ಆಮೇಲೆ ಹತ್ತು ಗಂಟೆಯ ಹೊತ್ತಿಗೆ ಸಣ್ಣ ಪುಟ್ಟ ಚಿಲ್ಲರೆ ಕೆಲಸಗಳನ್ನು ಮಾಡಿಕೊಂಡು ಬಿಟ್ಟರೆ, ಮಧ್ಯಾಹ್ನ ನಾಲ್ಕೂವರೆಯ ಡ್ರಿಂಕ್ ಬ್ರೇಕಿನವರೆಗು ಮತ್ತೇನು ಮಾಡುವಂತಿರುವುದಿಲ್ಲ - ಅಧ್ಯಯನ, ಸಂವಾದ, ಚರ್ಚೆ , ಧ್ಯಾನ ಮತ್ತಿತರ ಸ್ವಯಂ ಸಾಧನೆಯ ಕೆಲಸಗಳನ್ನು ಬಿಟ್ಟರೆ. ಬೆಳಗಿನ ಹಾಗೆ ಸಂಜೆ ಆರೂ ಕಾಲಿಗೆ ಮತ್ತೊಮ್ಮೆ ಮಂತ್ರಘೋಷ ಮತ್ತು ಧ್ಯಾನದ ಸಭೆ ಸೇರಿದರೆ ಅಲ್ಲಿಗೆ ಆ ದಿನದ ಮುಕ್ತಾಯ. ಮಿಕ್ಕ ಸಮಯವೆಲ್ಲ ಮತ್ತೆ ಸ್ವಂತಕ್ಕೆ ಸೇರಿದ್ದು. ಆ ಹೊತ್ತಿನಲ್ಲಿ ಮಾಂಕುಗಳ ಹಾಗೆ ಮತ್ತೆ ಊಟ ಮಾಡದೆ, ಒಂದೆ ಹೊತ್ತಿನ ಊಟಕ್ಕೆ ತೃಪ್ತರಾಗಿ ದಿನದೂಡಬೇಕು. ಈ ತೆಳುವಾದ ಸರಳ ದಿನಚರಿಯಿಂದಾಗಿ ನಡುವಲ್ಲಿ ಚರ್ಚೆ, ಪ್ರವಚನದಂತಹ ಕಾರ್ಯಗಳಿಗೆ ಹೇರಳ ಸಮಯವಿರುತ್ತದೆ. ಹೊರಗಿನ ಯಾವುದೆ ಪ್ರಲೋಭನೆಯಿಲ್ಲದೆ ನಿಸರ್ಗದ ಮಡಿಲಲ್ಲಿ, ಯಾವ ಭಾವ ವಿಕಾರಕ್ಕೂ ಬಲಿಯಾಗದೆ ತನ್ನನ್ನೆ ಅವಲೋಕಿಸಿಕೊಳ್ಳಲು, ಅಂತರ್ದರ್ಶಿಸಿಕೊಳ್ಳಲು ಸೊಗಸಾಗಿ ಹೇಳಿ ಮಾಡಿಸಿದಂತಹ ಪರಿಸರ, ವಾತಾವರಣ.

ಈ ಮಿತ ದಿನಚರಿಯ ಜತೆಗೆ ಆಗಾಗ್ಗೆ ಸಮೂಹಾಭ್ಯಾಸವೊ, ಸಮೂಹ ಸೇವಾಕಾರ್ಯವೊ ಅಥವಾ ಏನಿಲ್ಲದ ಧರ್ಮ ಸೂಕ್ತಿಗಳನ್ನು ಕೇಳುವುದೊ - ಗುಂಪಿನನುಕೂಲಕ್ಕೆ ತಕ್ಕಂತೆ ಯಾವುದನ್ನಾದರೂ ಆಯ್ದುಕೊಳ್ಳಬಹುದು. ಬೆಳಗಿನ ಎಂಟುಗಂಟೆಯ ಊಟದ ನಂತರ ಅಲ್ಲಿರುವ ಮುಖ್ಯ ಮಾಂಕನ್ನೊ ಅಥವಾ ಹಿರಿಯ ಮಾಂಕನ್ನು ಭೇಟಿಯಾಗುವ ಪ್ರಶ್ನೋತ್ತರ ಕಾರ್ಯಕ್ರಮದ ಅವಕಾಶವೂ ಇರುತ್ತದೆ. 'ಬಹುಶಃ ಮಾಂಕ್ ಸಾಕೇತರು ತನಗೆ ಬಹುತೇಕ ಸಿಗಬಹುದಾದ ಸಮಯ ಇದೆ ಎಂದು ಕಾಣುತ್ತದೆ' ಎಂದುಕೊಂಡ ವಿವರಗಳನ್ನೆಲ್ಲ ಓದಿ ಗ್ರಹಿಸುತ್ತಿದ್ದ ಶ್ರೀನಾಥ. ಅತಿಥಿಗಳಿದ್ದ ಹೊತ್ತಿನಲ್ಲೆ ಯಾವುದಾದರೂ ಬೌದ್ಧ ಧರ್ಮದನುಸಾರದ ಪವಿತ್ರ ದಿನ ಬಿದ್ದರೆ ಆ ದಿನಗಳಲ್ಲಿ ತಡರಾತ್ರಿಯ ಕಾರ್ಯಕ್ರಮಗಳೂ ನಡೆಯುವುದುಂಟು. ಆಗ ಹಿರಿಯ ಮಾಂಕುಗಳೊಡನೆ ಬೌದ್ಧ ಧರ್ಮದ ಆಚರಣೆಯ ವಿಧಿ, ವಿಧಾನಗಳ ಕುರಿತಾದ ಚರ್ಚೆ, ಸಂವಾದಗಳಲ್ಲೂ ಪಾಲ್ಗೊಳ್ಳಬಹುದು. 

ಹೀಗೆ ದಿನದ ಬಹುತೇಕ ಪಾಲು ಖಾಸಗಿ ಅಭ್ಯಾಸಕ್ಕೆಂದೆ ಮೀಸಲಿಟ್ಟು ಆ ಸಮಯವನ್ನು ಕೂತೊ ಅಥವ ನಡೆದಾಡುತ್ತಲೆ ಧ್ಯಾನಮಗ್ನರಾಗಿರಲು ಬಳಸಿಕೊಳ್ಳುತ್ತಾರೆ - ಆ ಧ್ಯಾನಕ್ಕೆ, ಬಂದವರಿಗೆ ಉಳಿದುಕೊಳ್ಳಲೆಂದೆ ಬಿಟ್ಟುಕೊಟ್ಟಿರುವ ಕಾಡಿನ ಖಾಸಗಿ ಕುಟೀರದಲ್ಲಾದರೂ ಸರಿ ಅಥವಾ ಧ್ಯಾನಕ್ಕೆಂದೆ ಮೀಸಲಿರಿಸಿದ ದೊಡ್ಡ ಸಭಾಂಗಣದಲ್ಲಾದರೂ ಸರಿ. ಅಲ್ಲಿ ಇಂತಹದೆ ರೀತಿಯ ಧ್ಯಾನ ಮಾಡಬೇಕೆಂಬ ವಿಧಿ, ವಿಧಾನದ ನಿರ್ಬಂಧವಿರುವುದಿಲ್ಲ. ಈ ವನ್ಯಾಶ್ರಮಧಾಮದಲ್ಲಿ ದೈನಂದಿನ ಜೀವನದ ಎಲ್ಲಾ ಸರಳ ಮತ್ತು ಸಾಧಾರಣ ರೀತಿಯ ನಡೆ ನುಡಿಗಳನ್ನೆ ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರೇರಣ ಶಕ್ತಿಯನ್ನಾಗಿಸುವ ಅವಕಾಶವನ್ನಾಗಿ ಬಳಸಿಕೊಳ್ಳುತ್ತಾರೆ. ಆ ಮುಖೇನ ಶ್ರದ್ಧಾಪೂರ್ವಕ ಪ್ರಯತ್ನ, ಆನಂದ, ಸಂತೃಪ್ತಿ, ಸಹನೆ ಮತ್ತು ನಂಬಿಕೆಯಂತಹ ಸಹಜ ಗುಣಗಳನ್ನು ಧನಾತ್ಮಕವಾಗಿ ಮತ್ತು ನೈಸರ್ಗಿಕವಾಗಿ ಉದ್ದೇಪಿಸುವ ಸರಳ ಗುರಿಯನ್ನಷ್ಟೆ ಇಟ್ಟುಕೊಂಡು ಅಭ್ಯಾಸ ಮುಂದುವರೆಸುತ್ತಾರೆ. ಕಾಲಾನುಕ್ರಮೇಣ ಈ ಗುಣಗಳೊಡಲಿನಿಂದ ಉದ್ಭವಿಸುವ ನೈತಿಕ ಬಲವೆ ಮಾನಸಿಕ ಶಕ್ತಿಯ ಆಕರವಾಗಿ ಆಳವಾದ ಮಾನಸಿಕ ಶಾಂತಿ ಮತ್ತು ಏಕಾಗ್ರತೆಯತ್ತ ಕೊಂಡೊಯ್ಯುತ್ತದೆಂಬ ನಂಬಿಕೆ ಈ ಆಚರಣೆಯ ವಿಧಾನದ ಹಿಂದಿರುವ ಮೂಲ ಸೂತ್ರ. ಏಕಾಗ್ರ ಮತ್ತು ಪ್ರಶಾಂತ ಮನವಿದ್ದರೆ ಅದು ತಂತಾನೆ ಅಂತರ್ದೃಷ್ಟಿ, ಅಂತರ್ವೀಕ್ಷಣೆಯನ್ನು ಪ್ರೇರೇಪಿಸಿ, ನೈಜ ಜ್ಞಾನದ ಅರಿವನ್ನು ಮೂಡಿಸುತ್ತಲೆ ಅದನ್ನು ಒಳಗಿನ ಪರ್ಯಾವರಣದಿಂದ ಬಿಡುಗಡೆಯಾಗಿಸುವ ಕಾರ್ಯವನ್ನು ಮಾಡುತ್ತದೆ. ಆ ಅಂತಿಮ ಗುರಿಯನ್ನು ದೈನಂದಿನ ಸರಳಾಚರಣೆಯ ಮೂಲಕವೆ ಅರಿತುಕೊಳ್ಳಲೆತ್ನಿಸುವುದು ಇಲ್ಲಿನ ವಿಧಾನದ ಮೂಲ ಸಾರ. ಅದೆ ಬೌದ್ಧ ಧರ್ಮದ ತಿರುಳಿನ ಸಾರ ಕೂಡ; ಅಲ್ಲಿ ಎಲ್ಲವು ಇಷ್ಟೆ ಸಮಯದಲ್ಲಿ ಘಟಿಸಬೇಕೆಂಬ ಕಾಲಪಟ್ಟಿಯಾಗಲಿ, ಇಷ್ಟೆ ಅವಧಿಯಲ್ಲಿ ಮುಗಿಸಬೇಕೆಂಬ ಅವಸರದ ಗುರಿಯಾಗಲಿ ಇರುವುದಿಲ್ಲ. ಎಲ್ಲವು ತಂತಾನೆ, ತನ್ನದೆ ಆದ ಸಹಜ ನಿರಾತಂಕ ಪರಿಸರದಲ್ಲಿ ಯಾವುದೆ ಒತ್ತಡೋನ್ಮಾದಗಳ ಹಂಗಿಲ್ಲದೆ ತನ್ನಲ್ಲೆ ವಿಕಸಿತವಾಗಬೇಕೆಂದು ಇದರ ತಿರುಳು. ಕೆಲವರಲ್ಲಿ ಇದು ಕ್ಷಿಪ್ರವಾಗಿ ನಡೆದರೆ ಮತ್ತೆ ಕೆಲವರಲ್ಲಿ ವಿಳಂಬಿತ ಕಾಲಧರ್ಮದಲ್ಲಿ ಕೈಗೂಡಬಹುದು. ಅದು ಕೈ ಗೂಡುವ ತನಕ ಸಹನೆ ತಾಳ್ಮೆಯಿಂದ ಪ್ರಯತ್ನಿಸುತ್ತಿರಬೇಕಷ್ಟೆ. ಅದಕ್ಕೆಂದೆ ಇಲ್ಲಿಗೆ ಬರುವ ಎಷ್ಟೊ ಮಂದಿ ಪ್ರತಿ ವರ್ಷಕ್ಕೊಮ್ಮೆಯೊ, ಹಲವು ಬಾರಿಯೊ ಬಂದು ಇದ್ದು ಹೋಗುವುದುಂಟು. 

'ವಾಟ್ ಪಃ ನಾನಾಚಟ್' ನಲ್ಲಿ ಬಂದು ತಂಗುವ ಅತಿಥಿಗಳು ಅಲ್ಲಿಯ ನೀತಿ ಸಂಹಿತೆಯ ಎಂಟು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅದರಲ್ಲಿ ಮೊದಲ ಐದು - ಸರಳ ಸನ್ನಡತೆಯ ತರಬೇತಿಯ ನಿಯಮಗಳು - ಸೌಹಾರ್ದತೆ ಮತ್ತು ಆತ್ಮಾಭಿಮಾನವನ್ನು ಬೆಳೆಸುವ ಉದ್ದೇಶ, ಧ್ಯೇಯದೊಂದಿಗೆ ರೂಪಿಸಿದ್ದರೆ, ಮಿಕ್ಕ ಮೂರು ನಿಯಮಗಳು ಸನ್ಯಾಸಾಶ್ರಮದ ಸಾಧನೆಗೆ ಮೂಲಭೂತವಾಗಿ ಅವಶ್ಯಕವಾದ ಪರಿತ್ಯಾಗ ಮತ್ತು ಸರಳ ಜೀವನ ಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲ್ಪಟ್ಟಂತಹವು. 

ಆ ಮೊದಲ ಐದು ತರಬೇತಿಯ ನೀತಿ ಸಂಹಿತೆಯ ನಿಯಮಗಳೆಂದರೆ, 

೦೧. ಹಾನಿಗೊಳಿಸದಿರುವಿಕೆ: ಉದ್ದ್ದೇಶಪೂರ್ವಕವಾಗಿ ಯಾವುದೆ ಬದುಕಿರುವ ಜೀವಿಯ, ಪ್ರಾಣ ಹರಣದಂತಹ ಕ್ರಿಯೆಯಿಂದ ದೂರವಿರುವುದು (ಹಾರ್ಮ್ ಲೆಸ್ ನೆಸ್)
೦೨. ನಂಬಿಕಾರ್ಹ ನಡುವಳಿಕೆ: ತಾನಾಗಿ ಕೊಡದ ಹೊರತು ಏನನ್ನು ತೆಗೆದುಕೊಳ್ಳದೆ ಇರುವುದು (ಟ್ರಸ್ಟ್ ವರ್ತಿ ನೆಸ್)
೦೩. ಶೀಲವಂತಿಕೆ : ಕಾಮಸಂಬಂಧಿ ಕ್ರಿಯೆಗಳಿಂದ ದೂರವಿರುವಿಕೆ (ಚಾಸ್ಟಿಟಿ)
೦೪. ಸದ್ವಾಕ್ / ಸುವಾರ್ತೆ : ತಪ್ಪಾದ, ನಿಂದನೀಯ, ಹಾನಿಕಾರಕ ಉದ್ದೇಶದ, ಸೌಹಾರ್ದಪೂರಿತವಲ್ಲದ ಮತ್ತು ಗಾಳಿ ಸುದ್ದಿಯನ್ನು ಹರಡದಂತಹ ಮಾತಿನ ಸನ್ಮಾರ್ಗ (ರೈಟ್ ಸ್ಪೀಚ್ )
೦೫. ಮಾದಕತೆ: ಮಾದಕತೆಯನ್ನುತ್ತೇಜಿಸುವ ಮದ್ಯದಂತಹ ಪಾನೀಯ ಅಥವಾ ಮತ್ತಿನ ಔಷಧಿಗಳಾಗಲಿ, ಧೂಮಪಾನವನ್ನಾಗಲಿ ಮಾಡದೆ ಇರುವುದು ( ಸೊಬ್ರಿಯೆಟಿ)

ಪರಿತ್ಯಾಗಕ್ಕೆ ಸಂಬಂಧಿಸಿದ ಮೂರು ನಿಯಮಗಳು:

೦೬. ದಿನದ ಮಧ್ಯಂತರದ ನಂತರ ಏನೂ ತಿನ್ನದೆ ಇರುವುದು. ವನ್ಯಾಶ್ರಮಧಾಮದ ಸರಳ ನಿಯಮವೆಂದರೆ ದಿನಕ್ಕೊಂದೆ ಹೊತ್ತಿನ ಊಟ, ಒಂದೆ ಬೋಗುಣಿಯಲ್ಲಿ ಮತ್ತು ಒಂದೆ ಸಲ ಕೂತು. ಇದರಿಂದ ಧ್ಯಾನಕ್ಕೆ ಹೆಚ್ಚು ಸಮಯ ಸಿಗುವುದು ಮಾತ್ರವಲ್ಲದೆ ಮೊನೆಸ್ಟರಿಯ ಸರಳ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.

೦೭. ಸಂಗೀತ, ನೃತ್ಯ, ಆಟೋಟಗಳಲ್ಲಿ ತೊಡಗಿಸಿಕೊಳ್ಳುವಿಕೆ, ದೇಹವನ್ನು ಅಲಂಕರಿಸಿಕೊಳ್ಳುವಿಕೆ, ಸುಂದರವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುವುದು ಇತ್ಯಾದಿಯ ಎಲ್ಲಾ ತರದ ಮನೋರಂಜನೆಯ ಚಟುವಟಿಕೆಗೆ ಕಡಿವಾಣ ಹಾಕುವುದು. ಇದರಿಂದ ಚಂಚಲತೆಯಿಲ್ಲದ ಮನಸನ್ನು ಅವಿಚಲತೆಯಿಂದ ಧರ್ಮದೆಡೆಗೆ ತಿರುಗಿಸಿ ಕೇಂದ್ರೀಕರಿಸಲು ಸಹಾಯಕವಾಗುತ್ತದೆ.

೦೮. ಎತ್ತರದ ಮತ್ತು ಐಷಾರಾಮಿ ಹಾಸಿಗೆಯನ್ನಾಗಲಿ, ಮೆತ್ತನೆಯಾಸೀನದ ಆಸನ / ಕುರ್ಚಿಗಳನ್ನಾಗಲಿ ಬಳಸದೆ ಇರುವುದರ ಜತೆಗೆ ಅತಿ ನಿದ್ದೆಯಿಂದಲೂ ದೂರವಿರಲು ಯತ್ನಿಸುವುದು. ಆ ಮೂಲಕ ಸದಾ ಎಚ್ಚರವಿರುವ ಜಾಗೃತ ಸ್ಥಿತಿ, ಮನತುಂಬಿದ ಪೂರ್ಣತೆಯ ಸ್ಥಿತಿ ಮತ್ತು ದಿನದೆಲ್ಲ ಚಟುವಟಿಕೆಗಳ ಆಗುಹೋಗುಗಳ ಸ್ಪಷ್ಟ ಅರಿವಿರುವ ಸ್ಥಿತಿಯನ್ನು ಎಲ್ಲ ಮುದ್ರೆಯಲ್ಲು (ಪೊಸ್ಚರ) ಇರುವಂತೆ ನೋಡಿಕೊಳ್ಳುವುದು..

ದೇಹ ಮತ್ತು ಮಾತಿನ ಸನ್ನಡತೆಯನ್ನು ರೂಪಿಸುವಲ್ಲಿ ಮಾರ್ಗದರ್ಶಿಯಾಗುವ ತರಬೇತಿಯ ನಿಯಮಗಳು ಮನಃಪೂರ್ಣತೆಗೆ, ಸ್ಪಷ್ಟ ಗ್ರಹಿಕೆಗೆ ಮತ್ತು ಧ್ಯಾನಕ್ಕೆ ಬೇಕಾದ ಸೂಕ್ತ ತಳಹದಿಯನ್ನು ಹಾಕಿ ಅಂತಿಮ ಮತ್ತು ಪರಮ ಅಷ್ಟಪಥವನ್ನು ಅಳವಡಿಸಿಕೊಳ್ಳುವ ಮಾರ್ಗದಲ್ಲಿ ಮಾರ್ಗದರ್ಶಿಯಾಗಿ ಸಹಾಯಕವಾಗುತ್ತವೆ ಎನ್ನುವುದು ಇಲ್ಲಿನ ನಂಬಿಕೆ. ಈ ಐದು ನಿಯಮಗಳು ಅನಗತ್ಯ ಮಾತು ಮತ್ತು ಕ್ರಿಯೆಯನ್ನು ಮೂಲೋತ್ಪಾಟಿಸಿ, ಸಮೂಹ ಸೌಹಾರ್ದವನ್ನು ಪ್ರೇರೇಪಿಸುತ್ತವೆ. ಅಂತೆಯೆ ಈ ನೀತಿಸೂತ್ರಗಳು ಆಧ್ಯಾತ್ಮಿಕ ಪ್ರಗತಿಗೆ ಬೇಕಾದ ಸ್ವಯಂ ಶಿಸ್ತನ್ನು ಬೆಳೆಸುತ್ತವಾದ ಕಾರಣ, ಈ ಪ್ರಕ್ರಿಯೆಗಳನ್ನು ಅಲ್ಲಿಗೆ ಬಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಅನುಕರಿಸುವಂತೆ ನಿಗಾ ವಹಿಸುತ್ತಾರೆ. 

ಇದೆಲ್ಲಾ ವಿವರವನ್ನು ನೋಡಿ ನೋಟ್ ಮಾಡಿಕೊಳ್ಳುತ್ತಿದ್ದ ಶ್ರೀನಾಥನಿಗೆ 'ಅತಿಥಿಗಳಾಗಿ ಬಂದಿರಬೇಕಾದರೆ..' ಎನ್ನುವ ತಲೆಬರಹದಡಿಯ ವಿವರಗಳು ಕಾಣಿಸಿಕೊಂಡು, ಅದು ತನಗೆ ಬೇಕಾದ ವಿಷಯವನ್ನೆಲ್ಲ ಹೊಂದಿರಬೇಕೆಂದು ಸರಿಯಾಗಿಯೆ ಊಹಿಸಿ ಅದರತ್ತ ಗಮನ ಹರಿಸಿದ. ಅಲ್ಲಿದ್ದ ಮಾಹಿತಿ ಬಹಳ ಉಪಯುಕ್ತವಾಗಿದ್ದುದು ಮಾತ್ರವಲ್ಲದೆ ವಿವರಣೆಯ ಆಳ ಸಾಕಷ್ಟು ನಿಖರವಾಗಿಯೂ ಇತ್ತು. ಅದರಲ್ಲಿ ಬಹು ಮುಖ್ಯವಾದ ಸಂಗತಿಯೆಂದರೆ ಅಲ್ಲಿಗೆ ಹೋಗಿ ಇರಬೇಕೆಂದರೆ ಕನಿಷ್ಠ ಒಂದು ವಾರದತನಕವಾದರೂ ಇರುವ ಭರವಸೆಯನ್ನು ನೀಡಿ ಹೋಗಬೇಕಾಗಿತ್ತು. ಸಾಕಷ್ಟು ಮುಂಚಿತವಾಗಿಯೆ ಅತಿಥಿಯನ್ನು ಆಹ್ವಾನಿಸಿದ ಮಾಂಕ್ ಹೆಸರಿನಲ್ಲೊಂದು ಪತ್ರ ಬರೆದು, ಅಲ್ಲಿ ಇರಬೇಕೆಂದು ಬಯಸಿದ ದಿನಗಳ ಸಂಖ್ಯೆ ಮತ್ತು ಬರಲಿರುವ ದಿನಾಂಕವನ್ನು ತಿಳಿಸುವುದು ಮೊದಲು ಮಾಡಬೇಕಿದ್ದ ಕೆಲಸ. ಅಲ್ಲಿನ ವಿಶಿಷ್ಠ ಪರಿಪಾಠವೆಂದರೆ - ಹಾಗೆ ಬರೆದ ಪತ್ರಕ್ಕೆ ವನ್ಯಾಶ್ರಮಧಾಮದಿಂದ ಮಾರುತ್ತರ ಬರದೆ ಇದ್ದರೆ, ಅಲ್ಲಿ ಉಳಿದುಕೊಳ್ಳಲು ಖಾಲಿ ಜಾಗವಿದೆ, ಏನೂ ತೊಂದರೆಯಿಲ್ಲ ಎಂದರ್ಥ. ಒಂದು ವೇಳೆ ಉಳಿದುಕೊಳ್ಳುವ ಖಾಲಿ ಜಾಗದ ವ್ಯವಸ್ಥೆಯಾಗದಿದ್ದರೆ ಮಾತ್ರ ಅವರಿಂದ ಕಾಗದ ರೂಪದ ಉತ್ತರ ಬರುತ್ತದೆ. ಮಿಂಚಂಚೆಯನ್ನು ಜತೆಗೆ ಕಳಿಸಿದ್ದರೆ, ಅದರ ಮುಖೇನವೂ ಸುದ್ದಿ ತಲುಪಿಸುತ್ತಾರೆ. ಬಂದಂತಹ ಅತಿಥಿ ಎಷ್ಟೆ ದಿನವಿರಲು ಇಚ್ಚಿಸಿಕೊಂಡೆ ಬಂದಿದ್ದರು, ಮೊದಲು ಪರವಾನಗಿ ಕೊಡುವುದು ಮೂರು ದಿನಗಳ ಮಟ್ಟಿಗೆ ಮಾತ್ರವೆ; ನಂತರ ಆಹ್ವಾನಿಸಿದ ಮಾಂಕ್ ಅಥವಾ ಮುಖ್ಯ ಮಾಂಕ್ ರವರ ಅನುಮತಿ ಪಡೆದು ಮಾತ್ರವಷ್ಟೆ ತಂಗುವಿಕೆಯ ಸಮಯವನ್ನು ವಿಸ್ತರಿಸಲು ಸಾಧ್ಯ. ಅದನ್ನು ನೋಡಿದಾಗ ತಾನು ವಾರದ ಮಟ್ಟಿಗೆ ರಜೆ ಹಾಕಲು ನಿರ್ಧರಿಸಿದ್ದುದು ತುಂಬಾ ಒಳಿತಾಯಿತೆಂದು ಅನಿಸಿ ತುಸು ನಿರಾಳನಾದ ಶ್ರೀನಾಥ. 

ಅಲ್ಲಿಗೆ ತಂಗಿದ್ದು ಬರಲೆಂದು ಹೋಗುವವರು ಬೆಳಿಗ್ಗೆ ಎಂಟು ಗಂಟೆಯ ಮೊದಲೆ, ಆ ದಿನದ ಆಹಾರ ಸೇವನೆಯ ಹೊತ್ತಿಗೆ ಮುನ್ನ ಹೋಗಿ ತಲುಪುವಂತೆ ವ್ಯವಸ್ಥೆ ಮಾಡಿಕೊಳ್ಳುವುದು ಉಚಿತವೆಂದು ಕೂಡ ಸೂಚಿಸಿತ್ತು. ಊಟವಾದ ನಂತರ ಒಂಭತ್ತರಿಂದ ಹನ್ನೊಂದರವರೆಗೆ ಅತಿಥೇಯ ಮಾಂಕುಗಳ ಜತೆ ಮಾತುಕಥೆಯ ಸಾಧ್ಯತೆಯಿರುವುದರ ಕಾರಣ, ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯ ಮುಂದಿನ ಹೆಜ್ಜೆಗಳನ್ನು ಚರ್ಚಿಸಿ ನಿರ್ಧರಿಸಲು ಅನುಕೂಲವಾಗುತ್ತದೆಯೆಂಬ ಹಿನ್ನಲೆಯಲ್ಲಿ ಆ ಸೂಚನೆ. ಅದೇನೆ ಇದ್ದರೂ ಸಂಜೆ ನಾಲ್ಕೂವರೆಯ ನಂತರದ ಆಗಮನವನ್ನು ಪ್ರತಿಬಂಧಿಸಿರುವುದರಿಂದ, ತಡವಾಗೆಂದರೂ ಆ ಹೊತ್ತಿಗೆ ಮುನ್ನ ಹೋಗಿ ಸೇರಿಕೊಳ್ಳಬೇಕು. ಅದನ್ನು ನೋಡುತ್ತಿದ್ದಂತೆ ಶ್ರೀನಾಥನಿಗೂ ಬೆಳಿಗ್ಗೆ ಎಂಟಕ್ಕೆ ಮೊದಲೆ ತಲುಪುವ ಸಾಧ್ಯತೆಯಿದ್ದರೆ ವಾಸಿಯೆನಿಸಿತ್ತು. ಆದರೆ ಆ ಸಂಭವನೀಯತೆ ಅದನ್ನು ಆಗಗೊಡಿಸುವ ಸಾಗಾಣಿಕೆಯ ವ್ಯವಸ್ಥೆಯ ಮೇಲೆ ಅವಲಂಬಿಸಿತ್ತು. ಅಲ್ಲಿಗೆ ತಲುಪುವ ಸಾರಿಗೆಯ ವ್ಯವಸ್ಥೆಯ ಕುರಿತು ಮತ್ತಷ್ಟು ಮಾಹಿತಿ ಮುಂದೆ ಸಿಗಬಹುದೆಂದು ಊಹಿಸುತ್ತಲೆ ತನ್ನ ಓದುವಿಕೆಯನ್ನು ಮುಂದುವರೆಸಿದ್ದ ಶ್ರೀನಾಥ. ಆಗ ಕಣ್ಣಿಗೆ ಬಿದ್ದ ಅಲ್ಲಿನ 'ಡ್ರೆಸ್ ಕೋಡ್' ಕೂಡ ಅಷ್ಟೆ ಕುತೂಹಲಕಾರಿಯೆನಿಸಿತ್ತು. ಅದರನುಸಾರ, ತಂಗಲಿಕ್ಕೆ ಬಂದ ಅತಿಥಿಗಳು ಹೆಂಗಸಾಗಿದ್ದರೆ ಬಿಳಿಯ ಬ್ಲೌಸ್ ಮತ್ತು ಉದ್ದನೆಯ ಕಪ್ಪು ಸ್ಕರ್ಟ್ ಧರಿಸಬೇಕೆಂಬ ಕಡ್ಡಾಯ ನಿಯಮವಿತ್ತು. ಅಂತೆಯೆ ಗಂಡಸರಿಗೆ ಸಡಿಲ ಮತ್ತು ಉದ್ದನೆಯ ದೊಗಲೆ ಪೈಜಾಮದಂತಹ ಬಿಳಿಯ ಪ್ಯಾಂಟಿನ ಜೊತೆಗೆ, ಬಿಳಿಯ ಷರಟನ್ನು ಧರಿಸಬೇಕೆಂಬ ನಿಯಮ ಸೂಚಿಯಿತ್ತು. ಅದಕ್ಕೂ ಮೀರಿದ ವಿಶೇಷ ನಿಯಮವೆಂದರೆ ಒಂದು ವಾರಕ್ಕು ಹೆಚ್ಚು ಕಾಲ ತಂಗಬಯಸುವ ಗಂಡಸರು ಪೂರ್ತಿ ತಲೆಗೂದಲು, ಗಡ್ಡ ಮೀಸೆ ಮತ್ತು ಕಣ್ಣಿನ ಹುಬ್ಬಿನ ಕೂದಲುಗಳನ್ನೆಲ್ಲ ಬೋಳಿಸಬೇಕಾಗುತ್ತಿತ್ತು. ಸದ್ಯ ತಾನು ಒಂದೆ ವಾರದ ಅತಿಥ್ಯವನ್ನು ಆಶಿಸುತ್ತಿರುವುದರಿಂದ ಆ ಮುಂಡನ ಕರ್ಮದಿಂದ ತನಗಂತೂ ವಿನಾಯ್ತಿ ದೊರಕಲಿದೆಯೆಂದು ನಿರಾಳವಾಗಿತ್ತು ಶ್ರೀನಾಥನಿಗೆ. ಜತೆಗೆ ಅಲ್ಲಿಗೆ ಹೋಗುವವರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದು, ಇರುವಷ್ಟು ಕಾಲಕ್ಕೆ 'ಟ್ರಾವೆಲ್ ಇನ್ಶ್ಯೂರೆನ್ಸ್' ಮಾಡಿಸಿಕೊಂಡಿರಬೇಕಿತ್ತು. ಯಾರಿಗಾದರು ತೀವ್ರ ಮಾನಸಿಕ ಅಸ್ವಸ್ಥತೆಯಿದ್ದ ಚರಿತ್ರೆಯಿದ್ದರೆ ಅದನ್ನು ಮೊದಲೆ ತಿಳಿಸಿಬಿಡಬೇಕಿತ್ತು - ಅದಕ್ಕೆ ಸೂಕ್ತವಾಗುವಂತೆ ವ್ಯವಸ್ಥೆಯನ್ನು ಮಾಡಿಕೊಡಲು ಅನುವಾಗುವಂತೆ.  ಒಟ್ಟಾರೆ ಬಂದವರಿಗಾಗಲಿ ಮತ್ತು ಇತರ ಸಮೂಹ ಸಹವರ್ತಿಗಳಿಗಾಗಲಿ ಯಾವುದೆ ಅಸೌಕರ್ಯ ಮತ್ತು ತೊಡಕುಂಟಾಗದಂತಹ ಪರಿಸ್ಥಿತಿಯನ್ನು ನಿರ್ಮಿಸುವತ್ತ ಪೂರ್ಣ ನಿಗಾ ವಹಿಸುವ ಎಲ್ಲ ಪ್ರಯತ್ನವೂ ಅಲ್ಲಿ ಕಾಣುತ್ತಿತ್ತು. 

ಬಂದು ತಂಗುವ ಅತಿಥಿಗಳಿಗೆ ವನ್ಯಧಾಮಾಶ್ರಮದ ವತಿಯಿಂದ ಮಲಗುವ ಹಾಸಿಗೆ ಮತ್ತು ಜೊತೆಗೊಂದು ಸೊಳ್ಳೆಯಪರದೆಯನ್ನು ಕೊಡುವರಾದರೂ, ಉತ್ತಮದರ್ಜೆಯ ಟಾರ್ಚ್ ಲೈಟ್, ಅಲಾರಾಂ ಗಡಿಯಾರ, ಕಾಲಿನ ಪಾದರಕ್ಷೆ, ಮೊಂಬತ್ತಿಗಳು, ಸೊಳ್ಳೆ ವಿಕರ್ಷಕಗಳು, ಸ್ನಾನ ಶೌಚಾದಿ ಸಾಮಾಗ್ರಿಗಳಂತಹ ಮಿಕ್ಕೆಲ್ಲ ಸಣ್ಣಪುಟ್ಟ ಸಲಕರಣೆಗಳನ್ನು ಬರುವ ಅತಿಥಿಗಳೆ ಹೊಂದಿಸಿಕೊಂಡು ಬರಬೇಕಿತ್ತು. ಜತೆಯಲ್ಲಿ ವೈಯಕ್ತಿಕವಾದ ಬೆಲೆಬಾಳುವ ವಸ್ತುಗಳಿದ್ದರೆ ಒಂದು ಕೈ ಬೀಗವನ್ನು ಜತೆಗೊಯ್ಯುವುದು ಉಚಿತವೆನ್ನುವುದು ಮತ್ತೊಂದು ಸಲಹೆ. ಮತ್ತೊಂದು ಮುಖ್ಯ ವಿಚಾರವೆಂದರೆ ತಾವು ಬೇಡಿ ತಂದ ಭಿಕ್ಷೆಯನ್ನೆ ಬಂದ ಅತಿಥಿಗಳೊಡನೆ ಹಂಚಿ ತಿನ್ನಲು ಅಲ್ಲಿನ ಬೌದ್ಧ ಭಿಕ್ಷುಗಳಿಗೆ ಯಾವುದೆ ಅಭ್ಯಂತರವಿರದಿದ್ದರು, ಯಾವುದೆ ಕಾರಣಕ್ಕೂ ಅತಿಥಿಗಳಿಗೆಂದೆ ವಿಶೇಷ ಅಡಿಗೆ ಮಾಡಿ ಉಣಬಡಿಸುವ ಸಾಧ್ಯತೆ ಇರುವುದಿಲ್ಲ. ಅಲ್ಲಿರುವುದನ್ನೆ ಹಂಚಿಕೊಂಡು ತಿನ್ನಲಷ್ಟೆ ಸಾಧ್ಯ - ಪರಿತ್ಯಾಗದ ನಿಯಮಾನುಸಾರವಾಗಿ. ಮೊಬೈಲ್ ಪೋನ್, ಜತೆಗೆ ಕೊಂಡೊಯ್ಯಬಲ್ಲ ಲ್ಯಾಪ್ಟಾಪುನಂತಹ ಕಂಪ್ಯೂಟರ, ಕ್ಯಾಮೆರದಂತ ಆಧುನಿಕ ಜಗದ ಗ್ಯಾಡ್ಜೆಟ್ಟುಗಳನ್ನು  ಕೂಡ ತರುವಂತಿಲ್ಲ. ತಂದರೂ ಬೀಗ ಹಾಕಿ ಎತ್ತಿಟ್ಟುಬಿಡಬೇಕು - ಅಲ್ಲಿರುವತನಕ. ಅವೆಲ್ಲಾ ಪ್ರಾಪಂಚಿಕ ಮತ್ತು ಲೌಕಿಕ ವಾತಾವರಣವನ್ನು ಸೃಜಿಸಿ, ಸರಳವಾದ ಮಧ್ಯಮ ಜೀವನ ಶೈಲಿ ಅನುಕರಿಸಬಯಸುವ ಮಾನೆಸ್ಟರಿಯ ಜೀವನ ಕ್ರಮಕ್ಕೆ ಧಕ್ಕೆಯಾಗಿಸದಿರಲೆಂಬ ಆಶಯದಿಂದ. ಧೂಮಪಾನವಂತು ಈ ವನ್ಯಧಾಮಾಶ್ರಮ ಮಾನೆಸ್ಟರಿಯಲ್ಲಿ ಖಡಾಖಂಡಿತ ನಿಷಿದ್ಧ...

ಸಾಂಸ್ಕೃತಿಕವಾಗಿ 'ವಾಟ್ ಪಃ ನಾನಾಚಟ್' ಅಸ್ತಿತ್ವಕ್ಕೆ ಬಂದಿದ್ದೆ ಥಾಯ್ ಜನರ ನಂಬಿಕೆ ಮತ್ತು ಔದಾರ್ಯದ ದೆಸೆಯಿಂದ. ಥಾಯ್ ಈಶಾನ್ಯ ಸಮಾಜದ ಜನಗಳಲ್ಲಿ, ಅದರಲೂ ಗ್ರಾಮೀಣ ಭಾಗಗಳಲ್ಲಿ ಇನ್ನು ಪರಂಪರಾನುಗತ ನಂಬಿಕೆ ಮತ್ತು ಪದ್ದತಿಗಳು ಜೀವಂತವಾಗಿರುವುದರಿಂದ ಅವುಗಳ ಮೌಲ್ಯವನ್ನು ಎತ್ತಿ ಹಿಡಿಯುವ ಆ ಜನರ ನಡೆ ನುಡಿಗಳನ್ನು ಅತಿಥಿಗಳಾಗಿ ಬಂದವರು ಗೌರವಿಸಿ, ಅದಕ್ಕೆ ಧಕ್ಕೆ ಬರದಂತಹ ಸೂಕ್ಷ್ಮ ರೀತಿಯಲ್ಲಿ ನಡೆದುಕೊಳ್ಳುವುದು, ಬಟ್ಟೆ ಬರೆಯುಡುವಂತಹ ವಿಷಯದಲ್ಲೂ ಅವರ ಆಚಾರ ವಿಚಾರಕ್ಕೆ ಭಂಗ ಬರದ ರೀತಿ ಅನುವರ್ತಿಸುವುದು ಅತ್ಯಗತ್ಯ. ಅಂತೆಯೆ ಇಡಿ ಮೊನೆಸ್ಟರಿಯ ಆರ್ಥಿಕ ಅಗತ್ಯಗಳೆಲ್ಲ ಈ ರೀತಿಯ ನಂಬಿಕೆಯುಳ್ಳ ಮತ್ತು ಮುಕ್ತ ಮನದ ಈ ರೀತಿಯ ಸ್ಥಳೀಯ ಅಥವಾ ಪರಕೀಯ ಜನರಿಂದಲೆ ಪೂರೈಸಲ್ಪಡುವುದರಿಂದ ಈ ಸಾಂಸ್ಕೃತಿಕ ಸೂಕ್ಷ್ಮಜ್ಞತೆ ಅತಿ ಮುಖ್ಯವಾದ ಅಂಶವಾಗಿಬಿಡುತ್ತದೆ. 

ಸಾಮಾನ್ಯವಾಗಿ ಮಾರ್ಚ್ ಏಪ್ರಿಲ್ ಮಾಸದಲ್ಲಿ ಬಹುತೇಕ ಮಾಂಕುಗಳು ಪಶ್ಚಿಮ ಕಾಂಚನಾಬುರಿಯ ಪರ್ವತಗಳತ್ತ ಹೋಗಿ,  ವನ್ಯಧಾಮಾಶ್ರಮದಲ್ಲಿರುವವರ ಸಂಖ್ಯೆ ಕಡಿಮೆಯಿರುವ ಕಾರಣ ಹೊರಗಿನ ಹೆಚ್ಚು ಅತಿಥಿ / ಜನರನ್ನು ತಂಗಿರಲು ಅನುಮತಿ ಕೊಡುವುದಿಲ್ಲ. ಜನವರಿ ೧೨ ರಿಂದ ೧೭ ಮತ್ತು ಜೂನ್ ೧೬ರ ಆಚೀಚೆ ಕೂಡ ಅತಿಥಿ ಜನ ಸಂದಣಿ ಹೆಚ್ಚಿರುವ ಕಾರಣ ಸುಲಭ ವಸತಿ ಸಿಗುವ ಸಾಧ್ಯತೆಗಳು ಕಡಿಮೆ.  ಆ ಹೊತ್ತಿನಲ್ಲಿ ಬಂದ ಆಹ್ವಾನ ರಹಿತ ಅತಿಥಿಗಳೇನಿದ್ದರು ಹಗಲಿನ ಹೊತ್ತಲ್ಲಿ ಭೇಟಿಯಿತ್ತು ಹೋಗಬಹುದೆ ಹೊರತು ಇರುಳಿನ ತಂಗುವಿಕೆ ಸಾಧ್ಯವಾಗುವುದಿಲ್ಲ. ಇರಲು ಬಂದವರು ಸಹ ಸ್ವಲ್ಪ ಸರಳ ಧ್ಯಾನದ ಜ್ಞಾನ, ಅನುಭವವನ್ನು ಹೊಂದಿರುವ ಅಥವಾ ತರಬೇತಿ ಪಡೆದಿರುವ ಅಗತ್ಯವೂ ಇತ್ತು - ಅದನ್ನು ಆ ವನ್ಯಾಶ್ರಮಧಾಮ / ಮೊನೆಸ್ಟರಿಯಲ್ಲಿ ನೀಡಲು ಸಾಧ್ಯವಿರದ ಕಾರಣ. ಆದರೂ, ಆ ರೀತಿಯ ಧ್ಯಾನದ ತರಬೇತಿಯ ಕಲಿಕೆಯನ್ನು ಪಡೆಯಬಯಸುವವರಿಗಾಗಿ ಸಾಧ್ಯವಿರುವ ಹತ್ತಾರು ವಿಳಾಸಗಳು ಅಲ್ಲಿತ್ತು - ಸುಮಾರು ಹತ್ತರಿಂದ ಇಪ್ಪತ್ತು ದಿನಗಳ ತರಬೇತಿಯನ್ನು ಕೊಡಬಲ್ಲ ಸುಮಾರು ಸಂಸ್ಥೆಗಳು ಅಲ್ಲಿನ ಪಟ್ಟಿಯಲ್ಲಿದ್ದವು. ಶ್ರೀನಾಥ ಪೋನ್ ಮಾಡಿದ್ದ ನಂಬರು ಕೂಡ ಅಂತಹದ್ದೆ ತರಬೇತು ನೀಡುವ ಸಂಸ್ಥೆಯೆಂದು ಗುರುತಿಸಿದ ಶ್ರೀನಾಥನಿಗೆ ಹಳೆಯ ಯೋಗಾಸನದ ಕಿರು ಪರಿಣಿತಿ / ಪರಿಚಯವಿದ್ದ ಕಾರಣ ಮತ್ತೆ ಆ ತರಬೇತಿಗೆ ಹೋಗುವ ಅಗತ್ಯ ಕಾಣಲಿಲ್ಲ. 

ಇನ್ನು ಕಡೆಯದಾಗಿ ಹುಡುಕಬೇಕಾಗಿದ್ದ ವಿಷಯ ಸಾರಿಗೆ ವ್ಯವಸ್ಥೆಯನ್ನು ಕುರಿತದ್ದು . ಅದರ ಕುರಿತಾದ ವಿವರಗಳನ್ನು ತಡವಿದಾಗ ಬ್ಯಾಂಕಾಕಿನಿಂದ ಹಗಲಿನಲ್ಲಿ ಮತ್ತು ರಾತ್ರಿಯಲ್ಲಿ ಓಡಾಡುವ ಹಲವಾರು ರೈಲು ಸೇವೆ ಇರುವುದು ಕಾಣಿಸಿತು. ಬ್ಯಾಂಕಾಕಿನ ಸೆಂಟ್ರಲ್ ರೈಲ್ವೆ ನಿಲ್ದಾಣವಾದ ಹ್ವಾಲಾಫೋಂಗ್ ನಿಂದ ಹೊರಟು ಉಬೋನ್ ರಚ್ಚಥಾನಿಯಿಂದ ಐದು ಕಿಲೊಮೀಟರು ದೂರಕಿದ್ದ ವಾರಿನ್ ಚಂರಾಬ್ ನಿಲ್ದಾಣಕ್ಕೆ ನೇರವಾಗಿ ತಲುಪಿಕೊಂಡುಬಿಡಬಹುದಿತ್ತು. ಬಹುಶಃ ರಾತ್ರಿ ರೈಲು ಹಿಡಿದರೆ ಬೆಳಗಿನ ಎಂಟು ಗಂಟೆಯ ಆಹಾರ ಸೇವನೆಯ ಹೊತ್ತಿಗೆ ತಲುಪುವುದು ಸಾಧ್ಯವೆನಿಸಿತು. ಅದು ಬಿಟ್ಟರೆ ಬ್ಯಾಂಕಾಕಿನ 'ಮೋರ ಚಿಟ್' ಬಸ್ ನಿಲ್ದಾಣದಿಂದ ಹೊರಡುವ ಲಗ್ಜುರಿ ಬಸ್ಸು ಹಿಡಿದು ಉಬೋನ್ ತನಕ  ಪಯಣಿಸ ಬಹುದಿತ್ತು. ಅಲ್ಲಿಂದ ಟ್ಯಕ್ಸಿಯನ್ನೊ ಟುಕ್ ಟುಕ್ ಅನ್ನೊ ಹಿಡಿದರೆ ನೇರ ಮೊನೆಸ್ಟರಿಗೆ ತಂದು ಬಿಡುವ ಸಾಧ್ಯತೆಯಿತ್ತು. ಅದು ಬೇಡವೆಂದರೆ ಹಿಂದೆ ಎರಡು ಸಾಲಿನ ಬೆಂಚ್ ಹಾಕಿರುವ ತೆರೆದ ಟೆಂಪೊಗಳನ್ನು ಹೋಲುವ ' ಸೊಂಗ್ಥೈವ್' ಸಾರ್ವಜನಿಕ ಸಾಗಣೆ ಬಸ್ಸು ಹಿಡಿದರೆ ವನ್ಯಾಶ್ರಮಧಾಮದಿಂದ ಐನೂರು ಮೀಟರು ದೂರದ ರಸ್ತೆಯಲ್ಲಿಳಿದುಕೊಳ್ಳಬಹುದಿತ್ತು. ಅಲ್ಲಿಂದ ಕಾಣುವ ಭತ್ತದ ಹೊಲಗದ್ದೆಯ ಪರಿಸರ ದಾಟಿ ಕಾಡಿನ ಪರಿಸರವನ್ನು ಹೊಕ್ಕರೆ ಎದುರಿಗೆ ಕಾಣುವ ಬಿಳಿಯ ಗೋಡೆಯಿಂದಾವೃತ್ತವಾದ ಜಾಗವೆ 'ವಾಟ್ ಪಃ ನಾನಾಚಟ್'. ಅಲ್ಲಿಗೆ ಹೆಚ್ಚು ಕಡಿಮೆ ತನಗೆ ಬೇಕಾದ ಮಾಹಿತಿಯೆಲ್ಲ ಸಿಕ್ಕಿತೆಂದುಕೊಳ್ಳುತ್ತಿದ್ದ ಶ್ರೀನಾಥನ ಕಣ್ಣಿಗೆ ಅದೆ ಹೊತ್ತಿಗೆ ಅಲ್ಲಿ ಪೂರ್ಣಾವಧಿಯ 'ಮಾಂಕ್ (ಭಿಕ್ಕು)' ಗಳಾಗುವವರಿಗೆಂದೆ ನೀಡಿದ್ದ ವಿಶೇಷ ಮಾಹಿತಿಯೂ ಕಾಣಿಸಿತು. ವಾರದ ಮಟ್ಟಿನ ಅತಿಥಿಯಾಗಿ ತಾನದನ್ನು ಓದುವ ಅಗತ್ಯವಿರದಿದ್ದರೂ, ಅದರಲ್ಲೇನಿದೆಯೆಂದು ತಿಳಿಯುವ ಆಸಕ್ತಿಗಷ್ಟೆ ಕೆದಕಿ ನೋಡತೊಡಗಿದಾಗ ಮತ್ತಷ್ಟು ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿದ್ದವು. 

'ವಾಟ್ ಪಃ ನಾನಾಚಟ್' - ಅಂತರರಾಷ್ಟ್ರೀಯ ವನ್ಯಾಶ್ರಮಧಾಮವನ್ನು ಸ್ಥಾಪಿಸಿದ ಒಂದು ಪ್ರಮುಖ ಉದ್ದೇಶವೆ, ಥಾಯ್ ಸಂಸ್ಕೃತಿಯ ಅರಿವಿರದ ಮತ್ತು ಭಾಷೆ ಬಾರದ ವಿದೇಶಿಯರಿಗೆ ಬುದ್ದ ಭಿಕ್ಷುಗಳಾಗಲು (ಬುದ್ದಿಸ್ಟ್ ಮಾಂಕ್) ಆಂಗ್ಲ ಮಾಧ್ಯಮದ ಮುಖೇನ ತರಬೇತಿ ನೀಡುವುದು. ಮುಖ್ಯ ಹಿರಿಯ ಮಾಂಕ್ ಅಜಹ್ನ್ ಚಾಹ್ ರಿಂದ ೧೯೭೫ ರಲ್ಲಿ ಆರಂಭಿಸಲ್ಪಟ್ಟ ಈ ಆಶ್ರಮ ಪಾಶ್ಚಾತ್ಯರು ಮತ್ತು ಥಾಯ್ ಬಾರದ ವಿದೇಶಿಯರು ಹಳದಿಯ ಮೇಲ್ವಸ್ತ್ರದುಡುಗೆ ತೊಟ್ಟು ಮಾಂಕುಗಳಾಗಲು ಸಿದ್ದಪಡಿಸುವ ತಾಣವೆಂದೆ ಹೆಸರುವಾಸಿ. ಗೊತ್ತು ಗುರಿಯಿಲ್ಲದ ವಿದೇಶಿ ಸಂಸ್ಕ್ರತಿಯ ಪರಿಸರದಲ್ಲಿ  ಬೌದ್ದಾಶ್ರಮದ ವಿಧಿ ವಿಧಾನಗಳನ್ನನುಕರಿಸುತ್ತ ಆ ಜೀವನ ಕ್ರಮಕ್ಕೆ ಹೊಂದಿಕೊಳ್ಳುವುದು ಸ್ಥಳೀಯರಲ್ಲದವರಿಗೆ ಅಷ್ಟು ಸುಲಭದಲ್ಲಿ, ಸಾಕಷ್ಟು ಸಮಯವಾಗುವತನಕ ಬರುವುದಿಲ್ಲವಾದ ಕಾರಣ, 'ವಾಟ್ ಪಃ ನಾನಚಟ್' ನಲ್ಲಿ ಅನುಕರಿಸುವ 'ನಿಧಾನವೇ ಪ್ರಧಾನ'ದ ವಿಧಾನ ಈ ವಿದೇಶಿಯರಿಗೆ ಹೊಂದಿಕೆಯಾಗುವ ಅತ್ಯಂತ ಸೂಕ್ತ ವಿಧಾನವೆಂದೆ ಪ್ರಸಿದ್ಧಿ. ಇಲ್ಲಿ ಮಾಂಕುಗಳಾಗಬೇಕೆಂದು ಬಂದವರು ಆ ಸಿದ್ದಿಯ ಸ್ಥಿತಿಗೆ ತಲುಪಲು ಹಲವಾರು ಹಂತಗಳಿವೆ.  ಜೀವನ ಪರ್ಯಂತ ಮಾಂಕುಗಳಾಗಬೇಕೆಂದುಕೊಂಡು ಬರುವವರು ಕೂಡ ಹಲವಾರು ಹಂತಗಳನ್ನು ಒಂದೊಂದಾಗಿ ದಾಟಿಯೆ ಕೊನೆಯ ಹಂತವನ್ನು ಮುಟ್ಟಬೇಕು. ಒಮ್ಮೆಗೆ ಓರ್ವ ವ್ಯಕ್ತಿ ಬೌದ್ಧ ಸನ್ಯಾಸಿ ದೀಕ್ಷೆಯನ್ನು ಪಡೆಯಬೇಕೆಂದು ನಿರ್ಧರಿಸಿದರೆಂದಿಟ್ಟುಕೊಳ್ಳಿ; ಆ ನಿರ್ಧರಿಸಿದ ಹೊತ್ತಿನಿಂದ ಈ ಕೆಳಗಿನ ಹಂತಗಳನ್ನು ಅದರನುಕ್ರಮಣವಾಗಿಯೆ ದಾಟಬೇಕಾಗುತ್ತದೆ. 

'ವಾಟ್ ಪಃ ನಾನಾಚಟ್' ಮೊನೆಸ್ಟರಿಯಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಪುಲ್ ಟೈಮ್ 'ಮಾಂಕ್' ಆಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಗೆ ಈ ಕೆಲವಾರು ಹಂತಗಳನ್ನು ದಾಟಿಯೆ ಮುನ್ನಡೆಯಬೇಕು (ಮಾಂಕ್ - ಎನ್ನುವುದು ಆಂಗ್ಲ ಪದವಾದರೂ ಅದನ್ನೆ ಹೆಚ್ಚಾಗಿ ಬಳಸಿದ್ದೇನೆ - ಸಾಮಾನ್ಯ ಬಳಕೆಯ ಮಾತಿಗೆ ಹತ್ತಿರವಾಗಿರಲೆಂದು; ಅಲ್ಲಿ ಬಳಸುವ ಮತ್ತೊಂದು ಪದ 'ಭಿಕ್ಕು' - ಬೌದ್ಧ ಧರ್ಮೀಯ ಮೂಲದ 'ಭಿಕ್ಷು' ಇಲ್ಲಿ 'ಭಿಕ್ಕು' ವಾಗಿ ರೂಪಾಂತರಗೊಂಡಿದೆ - ಲೇಖಕ). ಈ ಬೌದ್ಧ ಸನ್ಯಾಸತ್ವವನ್ನು ಪಡೆದು ಭಿಕ್ಕುವಾಗಲಿಚ್ಛಿಸುವವನು ಮೊದಲಿಗೆ ಆ ವನ್ಯಾಶ್ರಮ ಧಾಮದಲ್ಲಿ ಅಲ್ಲಿನ 'ಅಷ್ಟ ನಿಯಮ ಸೂತ್ರ' ಗಳನ್ನು ಪಾಲಿಸಿಕೊಂಡು ಅತಿಥಿಯ ರೂಪದಲ್ಲಿ ಒಂದು ತಿಂಗಳು ಕಳೆಯಬೇಕು. ಆ ಒಂದು ತಿಂಗಳ ವಾಸ ಆ ಅಭ್ಯರ್ಥಿಗೆ ಒಂದು ರೀತಿಯ 'ಪ್ರೊಬೇಷನರಿ' ಭಿಕ್ಕುವಾಗುವ ಅರ್ಹತೆಯನ್ನು  ಗಳಿಸಿಕೊಟ್ಟು, ಅದಕ್ಕನುಸಾರವಾದ ಶ್ವೇತ ವರ್ಣದ ಮೇಲ್ವಸ್ತ್ರವನ್ನು ಹೊದ್ದ 'ಪಾ - ಕೋವ್'  ನನ್ನಾಗಿಸುತ್ತದೆ (ಥಾಯ್ ಭಾಷೆಯಲ್ಲಿ ಇದರರ್ಥ 'ವಸತಿರಹಿತ' 'ಮನೆಯಿಲ್ಲದವ' ಎಂದು; ಬೌದ್ಧ ಸಂಹಿತೆಯಲ್ಲಿ ಇದನ್ನು 'ಅನಾಗರೀಕ' - (ನಾಗರೀಕ ವಾತಾವರಣದಿಂದ ಹೊರಬಂದವ) ಎನ್ನುತ್ತಾರೆ). ಪಾ-ಕೋವ್ ಗಳಾದವರು ಅಲ್ಲಿನ ಜೀವನ ಶೈಲಿಯ ಅಷ್ಟ ನಿಯಮ ನೀತಿ ಸಂಹಿತೆಗೆ ವಿಧ್ಯುಕ್ತವಾಗಿ ಬದ್ಧವಾಗಿರುವ ಪ್ರತಿಜ್ಞೆ ಸ್ವೀಕರಿಸುತ್ತಾರೆ ಮತ್ತು ಮಾನೆಸ್ಟರಿಯ ಸಾಮಾನ್ಯ ವಿಧಿ ನಿಯಮಗಳ ತರಬೇತು ಪಡೆಯುವ ಪ್ರಕ್ರಿಯೆಯು ಶುರುವಾಗುತ್ತದೆ. ಸುಮಾರು ನಾಲ್ಕರಿಂದ ಆರು ತಿಂಗಳವರೆಗೆ ಈ 'ಪಾ-ಕೋವ್' ರೂಪಧಾರಿಯಾಗಿದ್ದು ನಿಭಾಯಿಸಿದರೆ, ಮುಂದಿನ ಹಂತವಾದ 'ಪಬ್ಬಜ್ಜ'ದತ್ತ ಹೊಸಮುಖವಾಗಿ ಮುನ್ನಡೆಯಬಹುದು. ಈ ಹಂತವನ್ನು 'ಸಮನೇರ' ಎಂದು ಕರೆಯುತ್ತಾರೆ - ಅನಾಗರೀಕ ಮತ್ತು ಸಮನೇರ ಹಂತಕ್ಕಿರುವ ಪ್ರಮುಖ ವ್ಯತ್ಯಾಸವೆಂದರೆ, ಪಾ-ಕೋವ್ ಹಂತದಲ್ಲಿರುವ ವ್ಯಕ್ತಿ ತನ್ನೊಡನೆ ಹಣಕಾಸು ವ್ಯವಸ್ಥೆ ಮತ್ತು ವ್ಯವಹಾರ ಇಟ್ಟುಕೊಳ್ಳಲು ಅನುಮತಿಯಿರುವ ಕಾರಣ ಸ್ವಲ್ಪ ಹೆಚ್ಚಿನ ಮಟ್ಟದ ಸ್ವಾತಂತ್ರ ಮತ್ತು ಸ್ವಾವಲಂಬನೆ ಸಾಧ್ಯವಿರುತ್ತದೆ. ಆದರೆ ಸಮನೇರ ಹಂತ ತಲುಪುತ್ತಿದ್ದಂತೆ ಹಣವಿಟ್ಟುಕೊಂಡಿರಬಾರದ ಮತ್ತು ಅದರ ಮೂಲಕ ಏನನ್ನು ನಿಭಾಯಿಸಬಾರದ ಒಂಭತ್ತನೆ ನೀತಿ ಸಂಹಿತೆ ಸೇರಿಕೊಳ್ಳುತ್ತದೆ. ಇದರ ತಕ್ಷಣದ ಪರಿಣಾಮವೆಂದರೆ ಸಮನೇರ ಹಂತದ ಶಿಬಿರಾರ್ಥಿ ತನ್ನೆಲ್ಲ ಹಣದ ಸ್ವಾತ್ಯಂತ್ರ ಕಳೆದುಕೊಂಡು ಸುತ್ತಮುತ್ತಲ ಸಾಮಾನ್ಯರು ಕೊಡುವ ದಾನ ಧರ್ಮದ ಆಶ್ರಯದಲ್ಲಷ್ಟೆ ಬದುಕಬೇಕಾದ, ದೈನಂದಿನ ಚರ್ಯೆ ಮತ್ತು ದಿನಚರಿ ಸಾಗಿಸಬೇಕಾದ ಅನಿವಾರ್ಯ ಉಂಟಾಗಿ ಬಿಡುತ್ತದೆ. 

ಸಮನೇರರಾಗುತ್ತಿದ್ದಂತೆ ಆಗುವ ಮತ್ತೊಂದು ಬದಲಾವಣೆಯೆಂದರೆ ಪಾಕೋವ್ ಗಳಾಗಿ ತಾವುಡುತ್ತಿದ್ದ ಹಳದಿಯ ವಸ್ತ್ರದ ಬದಲು ಮತ್ತಿತರ ಮಾಂಕುಗಳ ಹಾಗೆಯೆ ಕಂದು ಬಣ್ಣದ ಮೇಲ್ವಸ್ತ್ರ ಧರಿಸಲಾರಂಭಿಸುತ್ತಾರೆ ಮತ್ತು ಎಲ್ಲಾ ನಡೆ ನುಡಿ ಆಚಾರ ವಿಚಾರಗಳನ್ನು ಆ ಮಾಂಕುಗಳ ರೀತಿಯೆ ಅನುಕರಿಸಲು ಅಥವ ಅದು ಸಾಧ್ಯವಾಗುವ ರೀತಿ ತರಬೇತಿ ಹೊಂದಲು ಪ್ರಯತ್ನಿಸುತ್ತಾರೆ. ಅವರಿಗು ಮಾಂಕುಗಳಿಗು ಇರುವ ಸೂಕ್ಷ್ಮ ವ್ಯತ್ಯಾಸವೆಂದರೆ ಅವರು ಕಡ್ಡಾಯವಾಗಿ ಪಾಲಿಸಬೇಕಾದ ನೀತಿ ಸಂಹಿತೆ ನಿಯಮಾವಳಿಗಳ ಸಂಖ್ಯೆ ಚಿಕ್ಕದಿರುತ್ತದೆ ಮತ್ತು ಆಳದ ಮಟ್ಟ ಕೂಡ ಮಾಂಕುಗಳಿಗಿಂತ ಕಡಿಮೆ ವಿವರದ ಹಂತದಲ್ಲಿರುತ್ತದೆ. ವಾಟ್ ಪಃ ನಾನಾಚಟ್ ನಲ್ಲಿರುವ ಸಮನೇರರು ಹೊಸಮುಖಗಳೆ ಆದರೂ ಆಗಲೆ ಮಾಂಕುಗಳ ನಿಯಮಗಳನ್ನು ಕಲಿಯುತ್ತ,  ಆ ವನ್ಯಾಶ್ರಮಧಾಮದ ದೈನಂದಿನ ಜೀವನ ಕ್ರಮಕ್ಕೆ ಬೇಕಾದ ಮಂತ್ರಘೋಷಣೆ, ತಾವು ಹೊದೆಯುವ ನೀಳ ಮೇಲ್ವಸ್ತ್ರವನ್ನು ಹೊಲಿದು ಸಿದ್ದಪಡಿಸುವಿಕೆಯಂತಹ ಮತ್ತಿತರ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಬೇರೇನೂ ಮಾಡಲಿಲ್ಲದಾಗ ಬೇರೆ ಮಾಂಕುಗಳ ಹಾಗೆಯೆ ಅವರೂ ಸಹ ಧ್ಯಾನ ನಿರತರಾಗಿಯೊ, ಯಾವುದಾದರೂ ಸಾಮಾಜಿಕ ಸಮೂಹ ಕಾರ್ಯದಲ್ಲೊ ಪಾಲ್ಗೊಳ್ಳುತ್ತಾರೆ. ಹೀಗೆ ಸುಮಾರು ಒಂದು ವರ್ಷದ ತನಕ ನಡೆಯುವ ಈ ಸಮನೇರ ಹಂತ ತೃಪ್ತಿಕರವಾಗಿ ನಡೆದು ಸಂಘದ ಪರಿವಾರಕ್ಕೆ ಮತ್ತು ಆ ವ್ಯಕ್ತಿಗೆ ಸಮಾಧಾನಕರವಾಗುವಂತೆ ಸಾಗಿದ್ದರೆ, ಆಗ ಆ ವ್ಯಕ್ತಿ ತನ್ನ ಮುಂದಿನ ಉನ್ನತ ಹಂತವಾದ 'ಉಪಸಂಪದ' ಪಟ್ಟಕ್ಕೆ ಪಾದಾರ್ಪಣೆ ಮಾಡಬಹುದು. ಒಬ್ಬ ಸಮನೇರ ಈ ಮಟ್ಟ ಮುಟ್ಟಿದನೆಂದರೆ ಅವನೀಗ ಭಿಕ್ಕು ಸಂಘ ಪರಿವಾರದ ಭಾಗವಾದನೆಂದು ಅರ್ಥ. ಹೀಗೆ ಒಬ್ಬ ಸಾಮಾನ್ಯ ವ್ಯಕ್ತಿ ಸಂಘದ ಪರಿವಾರದ ಸದಸ್ಯನಾಗುವ ಕಾರ್ಯ ಯಾವುದೆ ಅವಸರವಿಲ್ಲದೆ, ನಿಧಾನ ಗತಿಯಲ್ಲಿ ವ್ಯಕ್ತಿ ಮತ್ತು ಸಂಘ ಇಬ್ಬರಿಗು ಪೂರಕವಾಗಿ, ಸಹನುಮತದಲ್ಲಿ ಹೊಂದಿಕೆಯಾಗುವಂತೆ ಅಳವಡಿಸಲ್ಪಡುತ್ತದೆ - ಅಲ್ಲಿನ ವ್ಯವಸ್ಥೆಗೆ ಮತ್ತು ಥಾಯ್ ಸಂಸ್ಕೃತಿ, ಪದ್ದತಿ, ಆಚರಣೆ, ಸಂಪ್ರದಾಯಗಳಿಗನುಗುಣವಾಗಿ. 

ಹೊಸಮುಖವಾಗಿ ಈ 'ಸಮನೇರ' ಹಂತವನ್ನು ಕೈಗೊಳ್ಳುವ ಮತ್ತೊಂದು ಮುಖ್ಯ ಉದ್ದೇಶವೆಂದರೆ ಸಂಘದ ನೈಜ ಚಟುವಟಿಕೆಗಳ ನಡುವೆಯೆ ಇದ್ದು ಅದನ್ನೆಲ್ಲಾ ನೋಡುತ್ತ , ಸ್ವಯಂ ಅನುಭವಿಸುತ್ತಾ ಸಾಗುವ ವ್ಯಕ್ತಿಗೆ ಭಿಕ್ಕುವಾಗುವ ತನ್ನ ಮೂಲ ಉದ್ದೇಶದ ಕುರಿತು ಅಂತರ್ಪರಿವೀಕ್ಷಣೆಗೆ ತೊಡಗಿಕೊಳ್ಳುವ ಅವಕಾಶ ಸಿಗುತ್ತದೆಯಷ್ಟೆ ಅಲ್ಲದೆ ಆ ಜೀವನಕ್ರಮದ ಸಾಧಕ ಭಾಧಕಗಳ ನೇರ ಪರಿಚಯವೂ ಆಗುತ್ತದೆ. ಜತೆಗೆ ಜೀವನ ಪೂರ್ತಿ ಭಿಕ್ಕುವಾಗಿದ್ದುಬಿಡುವ ನಿರ್ಧಾರ ಕೈಗೊಳ್ಳುವ ಹಂತದಲ್ಲಿ ಹೆತ್ತವರು, ಬಂಧು-ಭಾಂಧವರು, ಸ್ನೇಹಿತರ ಗುಂಪಿಗೆಲ್ಲ ತನ್ನ ಇಚ್ಛೆ, ನಿರ್ಧಾರಗಳನ್ನು ಅರಿವಾಗುವ ರೀತಿ ತಿಳಿಯಹೇಳಿ ಸಮ್ಮತಿ ದೊರಕಿಸಿಕೊಳ್ಳಬೇಕಾಗುತ್ತದೆ. ಆ ನಡುವೆಯೆ ತಾನು ಸಂಘದ ಭಿಕ್ಕುವಾಗಬೇಕೆನ್ನುವ ಆ ಕಾಮನೆ ಅದೆಷ್ಟು ಪ್ರಬಲವೆಂದು, ಆ ಬಯಕೆಗೆ ಮಿಕ್ಕುಳಿದ ಇಡೀ ಜೀವನವನ್ನು ಮುಡಿಪಾಗಿಡುವ ಅಂತರ್ಪ್ರೇರಣೆ ಎಷ್ಟು ಬಲಯುತವಾದುದೆಂದು ಒರೆಗಿಟ್ಟು ನೋಡಲು ಸಹಕಾರಿಯಾಗುತ್ತದೆ. ಒಟ್ಟಾರೆ ಅಲ್ಲಿ ಕೊನೆಗೆ ಭಿಕ್ಕುವಾದವರು ನಿಜವಾದ ಆಸಕ್ತಿ ಮತ್ತು ಅರ್ಪಣಾ ಮನೋಭಾವದಿಂದಷ್ಟೆ ಸಂಘ ಜೀವನಕ್ಕೆ ಬೆಸೆದುಕೊಳ್ಳಬೇಕೆ ಹೊರತು ಯಾರದೆ ಒತ್ತಾಯ ಅಥವಾ ಮತ್ತಿನ್ನಾವುದೊ ವಾಂಛೆಗಳ ಪ್ರೇರಣೆಯಿಂದಲ್ಲ. ಅದನ್ನು ಸೂಕ್ತ ರೀತಿಯಲ್ಲಿ ನಿಬಂಧಿಸುವ ಉದ್ದೇಶದಿಂದಲೆ ಉಪಸಂಪದ ಹಂತಕ್ಕೆ ಕಾಲಿಟ್ಟವರನ್ನು ಒಬ್ಬ ಹಿರಿಯ ಭಿಕ್ಕುವಿನೊಡನೆ ಶಿಷ್ಯತ್ವವನ್ನು ಸ್ವೀಕರಿಸಿ ಮುಂದುವರೆಸಲಾಗುತ್ತದೆ. ಈ ಗುರುವಿನ ಸಾಂಗತ್ಯದ ಅವಲಂಬನೆ ಮುಂದಿನ ಐದು ವರ್ಷಗಳತನಕ ಸಾಗುತ್ತದೆ. ಈ ಐದು ವರ್ಷಗಳಲ್ಲಿ ಅಲ್ಲಿನ ಸನ್ಯಾಸಿ ಜೀವನದ ಏರಿಳಿತಗಳನೆಲ್ಲ ಪೂರ್ಣವಾಗಿ ಅನುಭವಿಸಿ ನೋಡಲು ಸಾಧ್ಯವಿರುವ ಕಾರಣ ಆ ಹಂತದಲ್ಲು ಮನಸು ಬದಲಿಸಿ ಪೂರ್ವಾಶ್ರಮಕ್ಕೆ ಮರಳುವಂತಿದ್ದರೆ ಅದು ಈ ಐದು ವರ್ಷದ ಅವಧಿಯಲ್ಲಿ ಎದ್ದು ಕಾಣಿಸಬೇಕು ಅಥವಾ ಸಂಜ್ಞೆಗಳನ್ನಾದರೂ ನೀಡಬೇಕು. ಆಧ್ಯಾತ್ಮಿಕ ಮಾರ್ಗದಲ್ಲಿ ತನ್ನನ್ನೆ ಹುಡುಕುತ್ತ, ಮನಶ್ಯಾಂತಿಯನರಸುತ್ತ ನಡೆದವರಿಗೆ ತನ್ನಲ್ಲಿನ ಅಂತರಾಳದ ಕಳವಳ, ಚಡಪಡಿಕೆಗಳೆಲ್ಲ ಕಳೆದು ಸ್ಥಿತಪ್ರಜ್ಞತೆಯನ್ನು ಗಳಿಸಿ ಸಂಘದ ಸ್ಥಿರ ಸಮೂಹದ ಸದಸ್ಯನಾಗುವುದು ಸಾಧ್ಯವೆ? ಇಲ್ಲವೆ? ಎಂಬುದರ ಸಂಪೂರ್ಣ ಪರೀಕ್ಷೆ ಮತ್ತು ಫಲಿತಾಂಶ ಈ ಐದು ವರ್ಷದ ಸಹಚರ್ಯೆಯಲ್ಲಿ ಖಚಿತವಾಗಿ ಪ್ರಕಟವಾಗಿಬಿಟ್ಟಿರುತ್ತದೆ. ಒಮ್ಮೆ ಈ ಭಿಕ್ಕುವಿನ ಜೀವನವನ್ನರಸಿ 'ವಾಟ್ ಪಃ ನಾನಾಚಟ್' ಆಶ್ರಮಕ್ಕೆ ಬಂದು ಸೇರಿದ ಮೇಲೆ ಹೆಚ್ಚಾಗಿ ಹೊರಗೆ ಓಡಾಡಲಾಗಲಿ ಅಥವಾ ಬೇರೆ ಯಾವುದೆ ಭಿನ್ನ ಸಿದ್ದಾಂತ, ತತ್ವದ ಪಾಲನೆಗೆ ಅವಕಾಶವಿರದ ಕಾರಣ ಅಲ್ಲಿಗೆ ಹೋಗುವ ನಿರ್ಧಾರ ಮಾಡುವ ಮೊದಲೆ ಬೇರೆ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ನೋಡಿ ನಂತರ ಕೊನೆಯದಾಗಷ್ಟೆ ಈ ಆಶ್ರಮದ ತೆಕ್ಕೆಗೆ ಬರಬೇಕು. ಬಂದ ಮೇಲಿನ ನಿಷ್ಠೆಯೆಲ್ಲ ಏನಿದ್ದರು ಇಲ್ಲಿನ ತತ್ವಗಳಿಗೆ, ಪದ್ದತಿಗಳಿಗೆ, ನಿಯಮಾವಳಿಗಳಿಗೆ ಮತ್ತು ಆಚಾರ ವಿಚಾರಗಳಿಗೆ . ಅಲ್ಲದೆ ಈ ಅವತಾರವನ್ನು ಹೊಕ್ಕ ನಂತರ ತಂದೆ ತಾಯಿಯರ ನಡುವಿನ ನಂಟು ಯಾವ ರೀತಿಯದೆಂದು ಚೆನ್ಬಾಗಿ ವಿಮರ್ಶಿಸಿ, ವಿವರಿಸಿ ಅವರ ಸಹಕಾರದ ಅಣತಿ ಪಡೆದು ಆ ಅಶ್ರಮದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು. ಇದೆಲ್ಲಾ ಜೀವನ ಪರ್ಯಂತ ಬೌದ್ಧ ಭಿಕ್ಷುವಾಗಬೇಕೆಂದು ಹಂಬಲಿಸು ಹೊರಟವರ ಮಾತು. ಆದರೆ ಕೆಲ ದಿನಗಳ ಮಟ್ಟಿಗೆ ಅತಿಥಿಯಾಗಿದ್ದು ಬರಲು ಹೊರಟವರ ಕಥೆಯೆ ಬೇರೆ. ಅವರದೇನಿದ್ದರು ಅಲ್ಲಿ ಬಂದು ನಿರಾತಂಕವಾಗಿ ನಡೆಯುವುದನೆಲ್ಲ ನೋಡಿ ಕೊಂಚ ಅನುಭವ ಪಡೆಯುವುದಷ್ಟೆ. ಪಾ-ಕೋವ್ ಗಳಾಗಿ ಸೇರ ಬಯಸುವ ಎಷ್ಟೊ ಮಂದಿ ಇದನ್ನೆ ಮೊದಲ ಪರೀಕ್ಷಾ ಹಂತವಾಗಿ ಪರಿಗಣಿಸಿ ಕೊಂಚ ಮೊದಲ ಸ್ವಾನುಭವದ ನಂತರ ಮುಂದಿನ ಹೆಜ್ಜೆಯನ್ನು ನಿರ್ಧರಿಸುವುದು ಇಲ್ಲಿ ಮಾಮೂಲಿಯಾಗಿ ನಡೆಯುವ ಪ್ರಕ್ರಿಯೆ. 

ಪಾ-ಕೋವ್ ಆಗಲಿಕ್ಕೆ ಯಾವುದೆ ವಿಶೇಷ ಪರವಾನಗಿಯ ಅಗತ್ಯವಿರದಿದ್ದರೂ, ಅಲ್ಲಿಂದ ಮುಂದಿನ ಹಂತದ ದೀಕ್ಷೆ ಕೈಗೊಳ್ಳಬೇಕೆಂದರೆ ಮಾತ್ರ ಹೆತ್ತವರ ಅನುಮತಿಯ ಅಗತ್ಯವಿರುತ್ತದೆ. ಜತೆಗೆ ವಯಸ್ಸು ಐವತ್ತು ಮೀರಿದವರನ್ನು ದೀಕ್ಷಾವಿಧಿಗೆ ಪರಿಗಣಿಸುವುದಿಲ್ಲ. ಮಿಕ್ಕಂತೆ ಈ ಸನ್ಯಾಸ ದೀಕ್ಷೆಯನ್ನರಸಿ ಬರುವವರು ಸಾಲ ವಿಮುಕ್ತರಾಗಿರಬೇಕು, ಸರಕಾರಿ ವೃತ್ತಿಯಿಂದ ಮುಕ್ತರಾದವರಾಗಿರಬೇಕು, ಹೆಚ್. ಐ.ವಿ, ಅಪಸ್ಮಾರ, ಕ್ಯಾನ್ಸರಿನಂತಹ ವ್ಯಾಧಿಗಳಿಂದ ಮುಕ್ತರಾದವರಾಗಿರಬೇಕು. ಆ ಮುನ್ನ ಮಾನಸಿಕ ಸ್ವಾಸ್ಥಕ್ಕೆ ಸಂಬಂಧಿಸಿದ ಯಾವುದೆ ರೀತಿಯ ಅಸ್ವಸ್ಥತೆಯಿಂದ ನರಳಿದ್ದರೆ, ಖಿನ್ನತೆಯಿಂದ ನರಳುತಿದ್ದರೆ ಅಥವಾ ಮಾದಕ ದ್ರವ್ಯ ವ್ಯಸನದಲ್ಲಿದ್ದವರಾದರೆ ಅದನ್ನೆಲ್ಲ ಮುಕ್ತವಾಗಿ ಚರ್ಚಿಸಿ ಆ ಅಶ್ರಮ ಜೀವನ ಶೈಲಿ ಅವರಿಗೆ ಹೊಂದುವುದೊ ಇಲ್ಲವೊ ಎಂದು ನಿರ್ಧರಿಸುವುದು ಒಳಿತು. ಅಲ್ಲದೆ ಖಚಿತವಾಗಿ ಭಿಕ್ಕುವಾಗುವ ಸುಳಿವು ಸಿಗುವ ತನಕ - ಉದಾಹರಣೆಗೆ 'ಸಮನೇರ' ಹಂತ ತಲುಪುವ ತನಕ ವೀಸಾ, ಪ್ರಯಾಣದ ವೆಚ್ಚ , ಆರೋಗ್ಯ ಸಂಬಂಧಿ ವಿಮಾ ವೆಚ್ಚ ಮತ್ತು ಇತರೆ ಬಾಬ್ತಿಗಾಗಿ ಹಣಕಾಸಿನ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು. ಭಿಕ್ಕುವಾದ ಮೇಲಷ್ಟೆ ಇವೆಲ್ಲ ಸಂಘ ಪರಿವಾರದ ಆಶ್ರಮದ ವತಿಯಿಂದ ನೋಡಿಕೊಳ್ಳಲ್ಪಡುವುದು. ಇನ್ನು ಕಡೆಯದಾಗಿ ಅಲ್ಲಿಗೆ ಬರುವ ಯಾರೂ ಈ ಲೌಕಿಕ ಜಗದ ಐಷಾರಾಮಗಳ ಸಂಕೇತವಾದ ಪೋನ್, ಲ್ಯಾಪ್ಟಾಪ್, ಕ್ಯಾಮರ,ಟ್ಯಾಬ್ಲೆಟ್ಟುಗಳನ್ನು ತರುವಂತಿಲ್ಕ. ಎಲ್ಲಾ ಬಿಟ್ಟು ಬಂದ ಸನ್ಯಾಸಿ ಜೀವನಕ್ಕೆ ಸಹಜ ನೈಸರ್ಗಿಕ ಪರಿಸರದ ಸರಳ ಜೀವನವಷ್ಟೆ ಸಮ್ಮತ. ಇ ಮೇಯಿಲು ಇಂಟರನೆಟ್ಟುಗಳಂತಹ ಅನುಕೂಲಗಳನ್ನು ತ್ಯಜಿಸಿ ಸರ್ವ ಸಂಗ ಪರಿತ್ಯಾಗಿಗಳಾಗಿ ಬದುಕುವ ಆಶಯವಷ್ಟೆ ಇಲ್ಲಿ ಸಮ್ಮತವಾದ ರೀತಿ.

ಓದುತ್ತಾ ಹೋದಂತೆ ಪುಂಖಾನುಪುಂಖವಾಗಿ ಹೊರಬೀಳುತ್ತಿದ್ದ ಮಾಹಿತಿಯನ್ನು ನೋಡುತ್ತಲೆ, ಇನ್ನು ನೋಡಬೇಕಾದ ಸಾಕಷ್ಟು ವಿವರಗಳು ಮಿಕ್ಕಿರುವುದನ್ನು ಗಮನಿಸಿ, ಇದು ಒಂದೆ ಏಟಿನಲ್ಲಿ ಓದಿ ಮುಗಿಸುವ ಸಾಮಾಗ್ರಿಯಲ್ಲವೆಂದು ಅರಿವಾಗಿ ಅಷ್ಟಕ್ಕೆ ಮೇಲೆದ್ದ ಶ್ರೀನಾಥ. ಅಲ್ಲದೆ ಅವನು ಹೊರಡಬೇಕಿದ್ದ ಉದ್ದೇಶಕ್ಕೆ ಬೇಕಾಗಿದ್ದ ಸಂಗತಿಯನ್ನೆಲ್ಲ ಆಗಲೆ ಸಂಗ್ರಹಿಸಿಕೊಂಡು ಆಗಿತ್ತು. ಅದರನುಸಾರ ಮೊದಲು ಆಶ್ರಮಕ್ಕೊಂದು ಪತ್ರ ಬರೆಯಬೇಕಾಗಿತ್ತು ತನ್ನ ಬರುವಿಕೆಯ ದಿನಾಂಕವನ್ನು ಸೂಚಿಸುತ್ತ. ಕೊರಿಯರ್ ಅಥವಾ ಸ್ಪೀಡ್ ಪೋಸ್ಟಿನಲ್ಲಿಯೆ ಕಳಿಸಬೇಕಾದ ತುರ್ತು ನಿರ್ಮಾಣವಾಗಿ ಹೋಗಿತ್ತು - ಉಳಿದಿರುವ ದಿನಗಳ ಲೆಕ್ಕ ಹಾಕಿ ನೋಡುತ್ತಿದ್ದರೆ. ಮತ್ತು ಯಾರದಾದರು ಸಹಾಯ ತೆಗೆದುಕೊಂಡು ಟ್ರೈನಿಗೊ, ಬಸ್ಸಿಗೊ ಟಿಕೇಟ್ ಬುಕ್ ಮಾಡಿಸಿಬಿಡಬೇಕಿತ್ತು - ರಜೆಯಲ್ಲಿ ಎಲ್ಲರೂ ಪ್ರವಾಸ ಹೊರಡುವ ಸಾಧ್ಯತೆ ಹೆಚ್ಚಿರುವ ಕಾರಣ ಟಿಕೇಟ್ ರಿಸರ್ವ್ ಮಾಡಿಸದೆ ಪರದಾಡುವ ಸ್ಥಿತಿ ಬೇಡವಾಗಿತ್ತು. ಅವೆರಡರತ್ತ ಗಮನ ಹರಿಸಲು ಮೇಲೆದ್ದು ಹೊರಟ ಶ್ರೀನಾಥ, ತಾನು ಓದುತ್ತಿದ್ದ ಪೇಪರುಗಳ ಕಂತೆಯನ್ನು ಬದಿಗೆತ್ತಿಟ್ಟು ಒಪ್ಪವಾಗಿಸುತ್ತ. 

(ಸೂಚನೆ / ಮಾಹಿತಿ ಋಣ : 'ವಾಟ್ ಪಃ ನಾನಾಚಟ್' ವನ್ಯಾಶ್ರಮಧಾಮದ ಮತ್ತು 'ಮಾಂಕ್ ಹುಡ್' ಕುರಿತಾದ ಈ ಕಂತಿನಲ್ಲಿ ಸಂಗ್ರಹಿಸಿದ ಎಲ್ಲಾ ವಿವರಗಳನ್ನು ಅದೇ ಆಶ್ರಮದ ಅಧಿಕೃತ ವೆಬ್ಸೈಟಿನಿಂದ (ಆಂಗ್ಲ ಆವೃತ್ತಿ - ಆಗಸ್ಟ್ ೨೦೧೪ ರಲ್ಲಿ ಪ್ರಕಟಿಸಿದ್ದಂತೆ) ಸಂಗ್ರಹಿಸಿ  ಸರಳವಾಗಿ ಭಾವಾಂತರಿಸಲಾಗಿದೆ - ಮೂಲಕ್ಕೆ ಯಾವುದೆ ಅಪಚಾರವಾಗದ ರೀತಿಯಲ್ಲಿ. ಕಥೆಗೆ ತೀರಾ ದೂರವಿರಬಹುದಾದ ವಿವರಗಳನ್ನೆಲ್ಲ ಬಿಟ್ಟುಹಾಕಿದ್ದರು, ಅದನ್ನು ವಿವರವಾಗಿ ಮತ್ತು ಮೂಲ ಆಂಗ್ಲ ಆವೃತ್ತಿಯಲ್ಲಿ ಓದಬಯಸುವ ಆಸಕ್ತರು ಈ ಕೆಳಗೆ ಕಾಣಿಸಿದ ಕೊಂಡಿಯಲ್ಲಿ ನೋಡಬಹುದು. ಕಥೆಯ ಓಘಕ್ಕೆ ಒದಗುವ ಮಟ್ಟಕ್ಕೆ ಸಾಕಾಗುವಷ್ಟು ಮಾತ್ರ ಭಾವಾಂತರ (ಭಾಷಾಂತರವಲ್ಲ) ಮಾಡಿದ್ದರಿಂದ, ಮೂಲಕ್ಕೆ ಹೋಲಿಸಿದಲ್ಲಿ ತುಸು ಪದ ಭಾಷಾಂತರ ದೋಷಗಳು ಕಂಡು ಬರಬಹುದು, ಅಂತಹ ದೋಷಗಳು ಕಾಣಿಸಿದಲ್ಲಿ ಕ್ಷಮೆಯಿರಲಿ ಎಂದು ಕೋರುತ್ತೇನೆ. ಜತೆಗೆ ಇಲ್ಲಿ ಕೊಡಮಾಡಿದ ಎಲ್ಲಾ ಮಾಹಿತಿಯ ಸಕಲ ಹಕ್ಕು ಭಾಧ್ಯತೆಗಳು (ಕಾಫಿರೈಟ್ ಸೇರಿದಂತೆ) ಎಲ್ಲವೂ ಈ ಕೆಳಗಿನ ವೆಬ್ ಸೈಟ್ / ವನ್ಯಧಾಮಾಶ್ರಮದ ಆಡಳಿತ ವರ್ಗಕ್ಕೆ ಸೇರಿದ್ದು. ಬರಿತ ಭಾವಾಂತರವಷ್ಟೆ ನನ್ನದಾಗಿರುತ್ತದೆ. ಇಷ್ಟೆಲ್ಲ ವಿವರವಾಗಿ ಮಾಹಿತಿ ಓದಗಿಸಿರುವ ವೆಬ್ ಸೈಟ್ / ವನ್ಯಧಾಮಾಶ್ರಮ ಆಡಳಿತ ಮಂಡಳಿಗೆ ನಾನು ಚಿರಕೃತಜ್ಞ. Website link :  http://www.watpahnanachat.org/ )

(ಇನ್ನೂ ಇದೆ)
__________

Comments

Submitted by kavinagaraj Sat, 08/23/2014 - 09:54

ನಿಮ್ಮ ಮೂರು ಕಂತುಗಳನ್ನು ಒಟ್ಟಿಗೆ ಇಂದು ಓದಿದೆ. ಶ್ರೀನಾಥನ ಮಗು ಗುಣಮುಖವಾಗುವ ಸುದ್ದಿ ಬರಲಿ ಎಂದು ಆಶಿಸುವೆ. ಆಶ್ರಮದ ನಿಯಮಗಳು ಮನಸ್ಸಿನ ಸ್ಥಿಮಿತಕ್ಕೆ, ನಿಯಂತ್ರಣಕ್ಕೆ ಸಹಕಾರಿಯಾಗಿವೆ. ಉಪಯುಕ್ತ ಮಾಹಿತಿ. ಧನ್ಯವಾದಗಳು, ನಾಗೇಶರೇ.

Submitted by nageshamysore Sun, 08/24/2014 - 20:22

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಕಂತಿನಲ್ಲಿ ವಿವರಿಸಿದ ಆಶ್ರಮವಾಸದ ಸಂಗತಿಗಳೆಲ್ಲ ವಾಸ್ತವಿಕ ಸಂಗತಿಗಳು. ಈ ಕಾಡಿನಲ್ಲಿರುವ ಮಾನೆಸ್ಟರಿ ಸಹ ವಿದೇಶಿಯರಿಗೆಂದೆ ಮೀಸಲಾದ ವನ್ಯಾಶ್ರಮ (ಅದರ ಮತ್ತೊಂದು ಶಾಖೆ ಇಂಗ್ಲೆಂಡಿನಲ್ಲಿದೆ). ಬರಹದಲ್ಲಿ ವಿವರಿಸಿದ ನಿಯಮಾವಳಿ, ನೀತಿ ಸಂಹಿತೆಗಳು ಸಹ ನಿಜಕ್ಕು ಆಚರಣೆಯಲ್ಲಿರುವಂತಹದ್ದು. ಇವೆಲ್ಲವೂ ಬೌದ್ಧ ಧರ್ಮದನುಸಾರ (ತೇರಾವಾದ ಪದ್ದತಿಯಲ್ಲಿ) ರೂಪುಗೊಂಡ ಸಂಸ್ಥೆ / ದೇವಾಲಯ / ಆಶ್ರಮಗಳಾದರೂ ಥಾಯ್ಲ್ಯಾಂಡಿನಂತಹ ಶೆಕಡ 90ಕ್ಕೂ ಹೆಚ್ಚು ಬೌದ್ಧ ಧರ್ಮೀಯರಿರುವ ನಾಡಿನಲ್ಲಿ ಅದು ಸಹಜವಾಗಿಯೆ ಕಾಣುತ್ತದೆ. ಆದರೆ ಈ ತಾಣದ ವಿಶೇಷವೆಂದರೆ - ಇದು ವಿದೇಶಿಯರನ್ನು ದೃಷ್ಟಿಯಲ್ಲಿಟ್ಟುಕೊಂಡೆ ರೂಪುಗೊಂಡ ವನ್ಯಾಶ್ರಮಧಾಮ. ಕಥೆಯ ಹಂದರಕ್ಕೆ ಹೊಂದಿಕೊಂಡ ಕಾರಣ ಅದನ್ನೆ ಬಳಸಿಕೊಂಡಿದ್ದೇನೆ. ಆದರೆ ಅದನ್ನು ನೇರ ಹೋಗಿ ನೋಡಿದ ಅನುಭವವಿಲ್ಲದ ಕಾರಣ, ಸುಮ್ಮನೆ ಊಹೆಯ ಆಧಾರದ ಮೇಲೆ ಎಲ್ಲವನ್ನು ಚಿತ್ರಿಸುವ ಬದಲು ಅದರ ನೈಜ ಮಾಹಿತಿಯನ್ನೆ ಬಳಸಿಕೊಂಡೆ - ಅವರ ವೆಬ್ಸೈಟಿನನುಸಾರ.

ಆರೋಹಣದ ಮೆಟ್ಟಿಲೇರಲು ಆರಂಭವಾಗಿರುವ ಕಾರಣ ಮಗುವಿನ ಆರೋಗ್ಯವೂ ಆರೋಹಣದತ್ತ ನಡೆಯಬೇಕು ಬಿಡಿ, ಶೀಘ್ರದಲ್ಲೆ :-)