ಕಥೆ: ಪರಿಭ್ರಮಣ..(49)

ಕಥೆ: ಪರಿಭ್ರಮಣ..(49)

( ಪರಿಭ್ರಮಣ..48ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

ಬೆಳಗಿನ ಏಳಕ್ಕೆಲ್ಲ 'ವಾಟ್ ಪಃ ನಾನಾಚಟ್' ದ್ವಾರವನ್ನು ತಲುಪಿದ ಶ್ರೀನಾಥ ಒಂದರೆಗಳಿಗೆ ಅಲ್ಲಿನ್ನ ನೈಸರ್ಗಿಕ ಸಹಜ ಪರಿಸರವನ್ನು ಕಂಡು ಸುಂದರ ಹಳ್ಳಿಯೊಂದರ ಭತ್ತದ ಗದ್ದೆಯ ನಡುವೆ ನಿಂತಂತಹ ಅನುಭವಾಗಿ ಅರೆಗಳಿಗೆ ಮೈ ಮರೆತಂತಾಗಿ ಹೋದ ಟುಕ್ ಟುಕ್ ನಲ್ಲಿ ಕುಳಿತಿದ್ದ ಹಾಗೆಯೆ. ದಾರಿಯುದ್ದಕ್ಕು ಬೀಸುತ್ತಿದ್ದ ತಣ್ಣನೆಯ ಗಾಳಿ ಬಹುಶಃ ಪರಿಸರ ಮಾಲಿನ್ಯದ ಹಂಗಿಲ್ಲದ ವಾತಾವರಣದ ದೆಸೆಯಿಂದಲೊ ಏನೊ ಬಹು ಆಹ್ಲಾದಕರವೆನಿಸಿ, ಅದು ತೀಡಿದಾಗ ಉಂಟಾದ ಕುಳಿರ್ಗುಟ್ಟುವ ಕಚಗುಳಿಯ ಭಾವಕ್ಕೆ ಮತ್ತಷ್ಟು ಹಿತವೆನಿಸಿ ಹಾಗೆ ಕಣ್ಣು ಮುಚ್ಚಿದ್ದ ಅರೆಗಳಿಗೆ. ಆ ಭತ್ತದ ಗದ್ದೆಯನ್ನು ದಾಟಿದರೆ ಒಂದೈನೂರು ಅಡಿಯಿಂದಾಚೆಗಿನ ಕಂಪೌಂಡಿನೊಳಗಿರುವುದೆ 'ವಾಟ್ ಪಃ ನಾನಚಟ್' ವನ್ಯಾಶ್ರಮಧಾಮ. ಅಲ್ಲಿಂದಾಚೆಗೆ ಆಗಲೆ ಕಾಡಿನ ಪರಿಸರದ ಆರಂಭ.  ಕಾಡಿನ ಮಡಿಲಲ್ಲಿ ಸ್ವಸ್ಥವಾಗಿ ನಿಂತ ಆ ತಾಣದ ಪ್ರಶಾಂತತೆಯೆ ಒಂದು ರೀತಿಯ ದೈವಿಕ ಭಾವನೆಯನ್ನು ಪ್ರೇರೆಪಿಸಿ ಯಾವುದೊ ವಿಭಿನ್ನ ಲೋಕಕ್ಕೆ ಕರೆತಂದು ನಿಲ್ಲಿಸಿಬಿಟ್ಟಂತಾಗಿ, ತೀರಾ ಭಕ್ತನಲ್ಲದ ಶ್ರೀನಾಥನ ಮನದಲ್ಲೂ ಒಂದು ರೀತಿಯ ಆಧ್ಯಾತ್ಮಿಕ ಭಾವವನ್ನು ಉದ್ದೇಪಿಸಿಬಿಟ್ಟಿತ್ತು. ಅದರೊಳಗೆ ಹೆಬ್ಬಾಗಿಲಿನ ಮೂಲಕ ಪ್ರವೇಶಿಸುತ್ತಿದ್ದ ಹಾಗೆ ಯಾವುದೊ ಬೇರೆಯದೆ ಲೋಕಕ್ಕೆ ಬಂದಂತಹ ಅನುಭವವಾಗುತ್ತಿರುವಾಗಲೆ ಅನತಿ ದೂರದಲ್ಲಿ ಮೊಳಗಿದ ಗಂಟೆಯ ಸದ್ದೊಂದು ಅವನ ಗಮನವನ್ನು ಚೂಪಾದ ಜಾರುಬಂಡೆಯಂತಿದ್ದ ಮೇಲ್ಚಾವಣಿಯ ಕಟ್ಟಡವೊಂದರತ್ತ ಸೆಳೆದಿತ್ತು - ಗೇಟಿನ ಹತ್ತಿರದಿಂದ ಎತ್ತರದ ಮರೆಗಳ ಮರೆಯಲ್ಲಿ ಪೂರ್ತಿಯಾಗಿ ಕಾಣಿಸದಂತೆ ಮುಚ್ಚಿ ಹೋಗಿದ್ದರು, ಅದರ ಚೂಪಾದ ಆಕಾಶಕ್ಕೆ ಚಾಚಿದ ತುದಿಯಿಂದಾಗಿ. ಥಾಯ್ಲ್ಯಾಂಡಿನ ಸುತ್ತ ಮುತ್ತ ಬೇರೆಡೆಯೆಲ್ಲ, ಅದೆ ರೀತಿಯ ಕಲಾ ವಿನ್ಯಾಸವನ್ನು ನೋಡಿ ರೂಡಿಯಿದ್ದ ಶ್ರೀನಾಥನಿಗೆ ಅದೆ ಅಲ್ಲಿಯ ಬುದ್ಧನ ದೇವಾಲಯವಿರಬೇಕೆಂದು ಕೂಡಲೆ ಹೊಳೆದಿತ್ತು. 

ಆದರೆ ಆ ವಿಶಾಲವಾದ ಹೊರಗಿನ ಗೇಟನ್ನು ದಾಟಿ ಒಳಗೆ ಹೋಗುತ್ತಿದ್ದಂತೆ ಅಲ್ಯಾವುದೊ ಬೇರೆಯದೆ ಪ್ರಪಂಚ ತೆರೆದುಕೊಳ್ಳತೊಡಗಿತ್ತು. ಈಗಾಗಲೆ ದಟ್ಟವಾದಂತಿದ್ದ ಮರಗಳ ಎತ್ತರದ ಸಾಲಿನ ನಡುವೆಯಿದ್ದ ಕಾಲುದಾರಿಯಲ್ಲಿ ನಡೆಯುತ್ತ ಹೋದಂತೆ ಆ ತಾಣದ ಒಳಗಿನ ವಿಶಾಲತೆ, ಗಹನತೆಯ ಸ್ಥೂಲ ಕಲ್ಪನೆ ಅನುಭವಕ್ಕೆ ಬರತೊಡಗಿತು. ಆ ತಾಣದಲ್ಲಿ 'ಕಮ್ಯೂನಿಟಿ ಸರ್ವಿಸಿನ' ಹೆಸರಲ್ಲಿ ಬರಿಯ ಪೊರಕೆ ಹಿಡಿದು ಶುದ್ಧ ಮಾಡ ಹೊರಟರು ತಿಂಗಳುಗಟ್ಟಲೆ ಮಾಡುವಷ್ಟು ಕೆಲಸದ ಸಾಧ್ಯತೆಯಿತ್ತು - ಆದರೂ ಮುಗಿಯುವುದೆಂದು ಹೇಳಲಾಗದಷ್ಟು ಅಗಾಧತೆ ಅಲ್ಲಿ ಎದ್ದು ತೋರುತ್ತಿತ್ತು. ಸ್ವಲ್ಪದೂರದ ನಂತರ ಆ ಕಾಲು ಹಾದಿ ಮುಗಿದು ತುಸು ವಿಶಾಲವಾಗುತ್ತಿದ್ದ ಹಾಗೆಯೆ ಒಳಗಿರುವ ದೇವಾಲಯ, ಪ್ರಾರ್ಥನಾ ಮಂದಿರ, ಮತ್ತಿತರ ಕಟ್ಟಡಗಳ ಹತ್ತಿರಕ್ಕೆ ಬರುತ್ತಿರಬಹುದೆಂದುಕೊಂಡರು, ನಿಸರ್ಗದೊಂದಿಗಿನ ಸಹಜ ಸಮ್ಮಿಲನದಲ್ಲಿರುವಂತೆ ಸುತ್ತಲಿನ ಹಸಿರು ವಾತಾವರಣ ಮಾತ್ರ ಜತೆಯಲ್ಲಿ ಅಂಟಿಕೊಂಡಂತೆ ಇತ್ತು. ಆ ಸುತ್ತಲಿನ ಪರಿಸರದಿಂದ ಉತ್ತೇಜಿತನಾಗಿ ಹಾಗೆ ಅಡ್ಡಾಡಿಕೊಂಡು ಸುತ್ತಮುತ್ತ ದಿಟ್ಟಿ ಹಾಯಿಸಿಕೊಂಡೆ ನಡೆದವನಿಗೆ ತುಸು ದೂರದಲ್ಲಿದ್ದ ದೊಡ್ಡದೊಂದು ಕಪ್ಪುಕಲ್ಲಿನ ಶಯನಧಾರಿ ಬುದ್ಧನ ಬೃಹತ್ ವಿಗ್ರಹ ಕಣ್ಣಿಗೆ ಬಿದ್ದಿತ್ತು. ಅಂತೆಯೆ ಹಾದಿಯ ಬದಿಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಧುತ್ತನೆ ಎದ್ದು ಕಾಣುವ, ಮರದಲ್ಲಿ ಕಟ್ಟಿದ ಗಟ್ಟಿಮುಟ್ಟಾದ ಅಟ್ಟಣೆಯಂತಹ ಪುಟ್ಟ ಕುಟೀರಗಳು. ಅವುಗಳಿಗೆ 'ಕುಟಿ'ಗಳೆಂದೆ ಕರೆಯುತ್ತಾರೆಂದು ಆಮೇಲೆ ಗೊತ್ತಾದರೂ ಮೊದಲ ಬಾರಿ ನೋಡಿದಾಗ ಹೋಲಿಕೆಯಲ್ಲಿ ಕುಟೀರದಂತೆ ಇದ್ದುದರಿಂದ ಹಾಗೆಂದು ಕರೆದುಕೊಂಡಿದ್ದನಷ್ಟೆ. ಬಹುಶಃ ವನ್ಯ ಜೀವಿಗಳ ಮತ್ತು ಹುಳುಹುಪ್ಪಟೆಗಳ ತೊಂದರೆ ಭಾಧಿಸದಿರುವಂತೆ ಒಂದಷ್ಟು ಎತ್ತರಕ್ಕೆ ಕಟ್ಟಿದ್ದ ಈ ಕುಟೀರಗಳಿಗೆ ಆಧಾರವಾಗಿದ್ದುದು ನಾಲ್ಕು ಮೂಲೆಯಲಿದ್ದ  ಬಲವಾದ ಕಂಬಗಳು. ಆ ಕಂಬಗಳ ನಡುವಿನ ಜಾಗ ಖಾಲಿಯಿದ್ದು ಸುಮಾರು ನಾಲ್ಕೈದು ಅಡಿ ಎತ್ತರದ ಮೇಲೆ ಕುಟೀರದ ರಚನೆಯಾಗಿತ್ತು. ಮೇಲೆ ಹತ್ತಿ ಹೋಗಲೆಂದೆ ಪಾವಟಿಗೆಗಳು ಕಾಣಿಸುತ್ತಿದವು. ಆ ಕುಟೀರದ ಒಂದು ಪಾರ್ಶ್ವ ಪೂರ್ತಿ ತೆರೆದ ಅಂಗಳದಂತೆ ಬಾಲ್ಕಾನಿಯ ರೂಪದಲ್ಲಿ ಕಾಣಿಸಿದಾಗ ಬಹುಶಃ ಈ ಜಾಗದಲ್ಲಿ ಬೆಳಗಿನ ಪ್ರಶ್ನೋತ್ತರ, ಪ್ರಾರ್ಥನೆ ಮುಗಿದ ನಂತರ ಹಿಂದಿರುಗಿ ಧ್ಯಾನಾಸಕ್ತರಾಗಿ ಕೂಡಬಹುದೇನೊ - ನೇರ ನಿಸರ್ಗಕ್ಕೆ ತೆರೆದುಕೊಂಡ ಹಾಗೆಯೆ ಎಂದುಕೊಂಡ ಶ್ರೀನಾಥನಿಗೆ 'ಅರೆ, ಈ ತೆರೆದ ಸಭಾಂಗಣದಂತಹ ಜಾಗದಲ್ಲೆ ರಾತ್ರಿಯೂ ನಿದ್ರಿಸಬೇಕೆ, ಯಾವುದೆ ಮರೆಯಂತಹ ರಕ್ಷಣೆಯಿರದೆ?' ಅನಿಸಿ ಗಾಬರಿಯಾದರೂ ಸ್ವಲ್ಪ ಮುಂದಕ್ಕೆ ಬಂದಾಗ ಆ ತೆರೆದ ಅವರಣಕ್ಕಂಟಿಕೊಂಡಂತೆ ಇದ್ದ ಮರೆಯಲ್ಲಿ ಮುಚ್ಚಿಕೊಂಡಿದ್ದ ಕೊಠಡಿಯೂ ಕಣ್ಣಿಗೆ ಬಿದ್ದು ಸಮಾಧಾನವಾಗಿತ್ತು. ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಅಲ್ಲೊಂದಿಲ್ಲೊಂದು ಕಾಣಸಿಗುತ್ತಿದ್ದ ಅದೆ ರೀತಿಯ ಕುಟೀರಗಳ ಜತೆ ಜತೆಗೆ ಮತ್ತಲವಾರು ದೊಡ್ಡ ಮನೆಗಳಂತಹ, ಕಟ್ಟಡಗಳು ಕಣ್ಣಿಗೆ ಬಿದ್ದಿದ್ದವು. ಅಷ್ಟು ದೂರ ನಡೆದ ಮೇಲೆ ಅವನಿಗೆ ಮನದಟ್ಟಾದ ಒಂದು ವಿಷಯವೆಂದರೆ - ಅಲ್ಲಿ ನಡೆದಾಡಿದ ಎಡೆಯಲ್ಲೆಲ್ಲ ಒಂದಲ್ಲ ಒಂದು ತರದ ಬುದ್ಧನ ಪ್ರತಿಮೆ ಕಣ್ಣಿಗೆ ಬೀಳುತ್ತದೆ ಎಂದು; ಒಂದು ಕಡೆಯಂತೂ ಸಾಲಾಗಿ ಕೂತ ಒಂದೆ ರೀತಿಯ ಹಲವಾರು ಬುದ್ದನ ಪ್ರತಿಮೆಗಳು ಕಾಣಿಸಿದ್ದವು - ಕಂಬೋಡಿಯದ 'ಅಂಗ್ ಕೋರ್ ವಾಟ್' ಪ್ರತಿಮೆಗಳ ಸಾಲನ್ನು ನೆನಪಿಸುವ ರೀತಿಯಲ್ಲಿ. ಅದು ಬಿಟ್ಟರೆ ನಡೆಯುವೆಡೆಯುದ್ದಕ್ಕು ಅಲ್ಲಲ್ಲಿ ಇಂಗ್ಲೀಷಿನಲ್ಲಿ ಬರೆಸಿ ನೇತು ಹಾಕಿರುವ ಬೋರ್ಡುಗಳು. ತೀರಾ ಸರಳ ವಾಕ್ಯಗಳಲ್ಲಿ ಸತ್ಯವನ್ನು ಹೇಳುವ ನೀತಿ ಸೂಕ್ತಿಗಳ ಹಾಗೆ. 'ಭೋಧಿಸಿದ್ದನ್ನು ಹೃದಯದಿಂದ ಕೇಳು, ಕಿವಿಯಿಂದಲ್ಲ', ' ಶಾಂತಿಗಾಗಿ ಹುಡುಕುವುದೆಂದರೆ ಆಮೆಯ ಮೀಸೆ ಹುಡುಕಿದಂತೆ.. ಎಂದೂ ಕೈಗೆ ಸಿಗುವುದಿಲ್ಲ. ಆದರೆ ಹೃದಯ ಸಿದ್ದವಾದಾಗ ಶಾಂತಿ ತಾನಾಗಿಯೆ ಹುಡುಕಿಕೊಂಡು ಬರುತ್ತದೆ - ಆ ಹೃದಯವನ್ನರಸುತ್ತ..' - ಈ ರೀತಿಯ ಮರಕ್ಕೆ ತೂಗುಹಾಕಿದ ಬರಹದ ಫಲಕಗಳು ಎಲ್ಲೆಡೆಯೂ ಕಾಣಿಸುತ್ತಿದ್ದವು. 

ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಥಾಯ್ ಶೈಲಿಯ ವಾಸ್ತು ವಿನ್ಯಾಸದ ಆ ದೇವಾಲಯದ ಕಟ್ಟಡವಿದ್ದ ಅಂಗಳ ಎದುರಾಗಿತ್ತು. ಆ ವಿಶಾಲ ಪ್ರಾಂಗಣದ ಮೆಟ್ಟಿಲುಗಳ ಎರಡು ಬದಿಯಲಿದ್ದ ಡ್ರಾಗನನ್ನು ಹೋಲುವ ದೊಡ್ಡ ಆಕೃತಿಗಳು ಕಾವಲುಗಾರರಂತೆ ಎರಡು ಬದಿಯಲ್ಲೂ ಹರವಿಕೊಂಡು ನಿಂತಿದ್ದವು ಗತ್ತಿನಿಂದ. ಆ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಎದುರಾಗಿತ್ತು - ದೂರದಿಂದ ತುಸು ಮಾತ್ರವೆ ಇಣುಕಿದ್ದ ಆ ದೇಗುಲದ ಗೋಪುರ. ಬಹುಶಃ ಸಂಪರ್ಕ / ವಿಚಾರಣೆಯ ಆಫೀಸು ರೂಮನು ಹುಡುಕವ ಮೊದಲು ಒಮ್ಮೆ ಈ ದೇವಾಲಯ ಒಳಗೆ ಹೊಕ್ಕು ನೋಡಿದರೆ ಶುಭಾರಂಭವಾದೀತೆಂದೆನಿಸಿ ಕೈಯಲಿ ಬ್ಯಾಗು ಹಿಡಿದೆ ಒಳಹೊಕ್ಕ ಶ್ರೀನಾಥನಿಗೆ ಆಗ ಫಕ್ಕನೆ ಕುನ್. ಲಗ್ ಕೊಟ್ಟಿದ್ದ ಪೂಜಾವಸ್ತುಗಳ ಪ್ಯಾಕೆಟ್ಟು ಸಹ ನೆನಪಾಗಿ ಬ್ಯಾಗಿನಿಂದ ಅದನ್ನು ಹೊರಗೆತ್ತಿಟ್ಟುಕೊಂಡ - ಬುದ್ಧನ ವಿಗ್ರಹದ ಹತ್ತಿರ ಇಟ್ಟುಬಿಡಲು. ಅಲ್ಲಿದ್ದ ಮಾಂಕ್ ಕೈಗೆ ಕೊಟ್ಟರು ಸರಿ ಅಥವಾ ಬುದ್ಧನ ದೇವಾಲಯದಲ್ಲಿ ಇಟ್ಟರೂ ಸರಿ ಎಂದು ಸೂಚನೆ ಕೊಟ್ಟಿದ್ದರು ಕುನ್. ಲಗ್. ಅದನ್ನು ಕೈಲಿ ಹಿಡಿದೆ ಒಳಗೆ ಸಾಗುತ್ತಿದ್ದಂತೆ ತಟ್ಟನೆ ಎದುರಾಗಿತ್ತು ಅಲ್ಲಿದ್ದ ಭವ್ಯವಾದ, ವಿಶಾಲವಾದ, ಮೈಪೂರ ಹೊನ್ನಿನ ಬಣ್ಣ ಲೇಪಿಸಿದ್ದ ಬುದ್ಧನ ವಿಗ್ರಹ. ಅದನ್ನು ನೋಡುತ್ತಿದ್ದಂತೆ ಶ್ರೀನಾಥನಲ್ಲಿ ತಟ್ಟನೆ ಮೂಡಿದ ಭಾವವೆಂದರೆ ಅದರ ಗಾತ್ರವನ್ನು ಕುರಿತದ್ದು.  ಬ್ಯಾಂಕಾಕಿನಲ್ಲಿ  'ವಾಟ್ ಪ್ರಕ್ಯಾವ್' ದೇವಸ್ಥಾನದಲ್ಲಿ ಕಂಡಿದ್ದ ಜೇಡ್ ಬುದ್ಧನ ವಿಗ್ರಹವನ್ನು ಬಿಟ್ಟರೆ - ಮಿಕ್ಕೆಲ್ಲವು ಈ ರೀತಿಯ ಅಗಾಧ ಗಾತ್ರದವುಗಳೆ. ಒಂದು ಎನ್ನುವುದಕ್ಕಿಂತ ಹಲವಾರು ವಿಭಿನ್ನ ಆಯಾಮಗಳಲ್ಲಿ, ಆಸನಗಳಲ್ಲಿ ಕುಳಿತ ಬೇರೆ ಬೇರೆಯ ತರದ ಹಲವಾರು ಬುದ್ಧನ ವಿಗ್ರಹಗಳು ಸ್ಥಾಪಿತವಾಗಿದ್ದವು. ಅಲ್ಲಿ ಶ್ರೀನಾಥನ ಗಮನ ಸೆಳೆದ ಮತ್ತೊಂದು ಅಂಶವೆಂದರೆ ಹೊರಗಿನ ಸಾಂಪ್ರದಾಯಿಕ ವಾಸ್ತುಶಿಲ್ಪದ ನಡುವೆಯೆ ಒಳಗಡಕವಾಗಿದ್ದ ಆಧುನಿಕತೆಯ ಸಂವೇದನೆ. ಇಡಿ ಆವರಣವೆ ಯಾವುದೆ ಲೈಟುಗಳ ಅಗತ್ಯವಿಲ್ಲದೆಯೆ ದಿಗ್ಗನೆ ಹೊತ್ತಿಕೊಂಡ ಪ್ರಕಾಶಮಾನ ಬೆಳಕೊಂದರಡಿ ತೋಯಿಸಿದಂತೆ ಪ್ರಜ್ವಲಿಸಿತ್ತು. ಅದಕ್ಕೆ ಕಾರಣವೂ ಸ್ಪಷ್ಟವಾಗಿತ್ತು, ಬುದ್ಧನ ಆ ವಿಗ್ರಹದ ಹಿಂದಿನ ಭಾಗವನ್ನು ನೋಡುತ್ತಲೆ; ಅಲ್ಲಿ ಮಾಮೂಲಿ ಗೋಡೆಯ ಬದಲು ಓರೆಕೋನದಲ್ಲಿ ನಿಲ್ಲಿಸಿದ್ದ ದೊಡ್ಡ ಗಾಜಿನ ಗೋಡೆ ಆ ಬದಿಯನ್ನು ಪೂರ್ತಿಯಾಗಿ ಆವರಿಸಿಕೊಂಡಿತ್ತು. ಆದರೂ ಆ ಗಾಜಿನ ಗೋಡೆಯಲ್ಲಿ ಆಧುನಿಕತೆಯ ಲೇಪವಿರದೆ ಯಾವುದೊ ಪುರಾತನ ಪ್ರಶಾಂತ ಲೇಪನ ಪಸರಿಸಿಕೊಂಡಂತಿದೆಯಲ್ಲ ಅಂದುಕೊಳ್ಳುವಾಗಲೆ ಅದರ ಕಾರಣವೂ ಹೊಳೆದಿತ್ತು - ಆ ಗಾಜಿನ ಹಿನ್ನಲೆಯನ್ನು ಅವಲೋಕಿಸಿದಾಗ. 

ಅದರ ಹಿನ್ನಲೆಯೆಲ್ಲ ಪೂರ್ತಿ ಹಿತಕರವಾದ, ಆಹ್ಲಾದಕರ ತೆಳು ಹಸಿರು ಬಣ್ಣದಿಂದ ತುಂಬಿಹೋಗಿತ್ತು - ಅಲ್ಲಿ ಹೇರಳವಾಗಿ, ಶಿಸ್ತುಬದ್ಧಾಗಿ ಬೆಳೆದಿದ್ದ ಉದ್ದನೆಯ ತೆಳುಗಾತ್ರದ ಹಸಿರು ಬಿದಿರು ಮೆಳೆಯಂತಹ ಮರಗಿಡಗಳಿಂದ. ಯಾವುದೆ ಅಲಂಕರಣ, ವೆಚ್ಚದ ಅಗತ್ಯವಿಲ್ಲದೆಯೆ ಬುದ್ದನ ಹಿನ್ನಲೆಗೊಂದು ಅಭೂತಪೂರ್ವ ಮೆರುಗನ್ನಿತ್ತಿಬಿಟ್ಟಿತ್ತು ಆ ಪ್ರಕೃತಿ ಚಿತ್ತಾರ. ಅದರೊಟ್ಟಿಗೆ ಅದು ಪ್ರಕ್ಷೇಪಿಸಿದ್ದ ದೈವಿಕ ಕಳೆ, ಅಲ್ಲಿ ಹರಡಿಕೊಂಡಿದ್ದ ಮೌನೋಧ್ಬವಿತ ಪ್ರಶಾಂತಿ, ನೇರ ಬೀಳುವ ಬೆಳಕಿಗೆ ಹಸಿರಿನ ಸೀರೆಯುಡಿಸಿ ಮತ್ತಾವುದೊ ವಿಶಿಷ್ಠ ಲೋಕದಲ್ಲಿರುವ ಅನುಭೂತಿ ನೀಡುವಂತಿದ್ದ ಕಾಂತಿಯಲೆ, ಜತೆಗೆ ಸದ್ದು ಗದ್ದಲವಿಲ್ಲದ ತಾಣದಲ್ಲಿ ಒಬ್ಬನೆ ಏಕಾಂತವಾಗಿ ಭವ್ಯ ಮೂರುತಿಯೆದುರು ಪುಟ್ಟ ಬಾಲಕನಂತೆ ನಿಂತಿದ್ದ ಶ್ರೀನಾಥನ ಮನದಲ್ಲಿ ಏನೇನೊ ಭಾವನೆಗಳುದಕವಾಗಿಸಿ, ಅವನರಿವಿಲ್ಲದಂತೆಯೆ ಕೈ ಜೋಡಿಸಿ ನಮಿಸುವಂತೆ ಮಾಡಿತ್ತು. ಆ ನಮಿಸುವ ಹೊತ್ತಿನಲ್ಲೆ ಕೈಲಿದ್ದ ಕುನ್. ಲಗ್ ಕೊಟ್ಟಿದ್ದ ಪೂಜಾ ಸಾಮಗ್ರಿಯ ಪೊಟ್ಟಣವಿರುವುದು ನೆನಪಿನನುಭೂತಿಗೆ ಸಿಕ್ಕಿ ಅದನ್ನು ಪೊಟ್ಟಣದ ಸಮೇತ ವಿಗ್ರಹದ ಎದುರಿನಲ್ಲಿದ್ದ ಸಮತಲದ ಮೇಲಿಟ್ಟ ಶ್ರೀನಾಥ, ಅಲ್ಲಿದ್ದ ಇತರ ಪೂಜಾಪರಿಕರಗಳ ಜತೆ. ತದನಂತರ ಸುತ್ತ ಕಣ್ಣಾಡಿಸುತ್ತ ಮಿಕ್ಕಿದೆಲ್ಲಾ ವಿಗ್ರಹಗಳನ್ನು ಒಂದು ಬಾರಿ ಮತ್ತೆ ಅವಲೋಕಿಸಿ ಹೊರಬರುವ ಹೊತ್ತಿಗೆ ಪ್ರಾರ್ಥನಾ ಮಂದಿರದಂತೆ ಕಾಣುವ ದೊಡ್ಡ ವಿಶಾಲ ಪ್ರಾಂಗಣ ಕಾಣಿಸಿಕೊಂಡಿತ್ತು. ಅದರ ಮೂಲಕವೆ ಹಾದು ಹೋಗುವುದೆಂದುಕೊಂಡವನೆ ಅಲ್ಲಿಯೂ ಇದ್ದ ಮತ್ತೊಂದು ಬುದ್ಧನ ವಿಗ್ರಹವನ್ನೆ ತದೇಕ ಚಿತ್ರದಿಂದ ದಿಟ್ಟಿಸುತ್ತಿರುವ ಹೊತ್ತಿಗೆ ಸರಿಯಾಗಿ ಹಿಂದಿನಿಂದ ದೊಡ್ಡ ಉಚ್ಛಾರದ ದನಿಯಲ್ಲಿ ಕೇಳಿಸಿತ್ತು - 'ಅಮಿತಾಭ' ಎಂಬ ಕಂಚಿನ ಕಂಠದ ಉಕ್ತಿ.

ಆ ಪ್ರಶಾಂತ ವಾತಾವರಣದಲ್ಲಿ ಬಂದ ಮಂತ್ರಘೋಷದಂತಹ ದನಿಗೆ ಬೆಚ್ಚಿ ಬಿದ್ದಂತಾಗಿ 'ಅರೆ. ಮಾಂಕ್ ಸಾಕೇತರ ದನಿಯಿದ್ದಂತಿದೆಯಲ್ಲಾ?' ಎಂದು ತಟ್ಟನೆ ತಿರುಗಿ ನೋಡಿದರೆ ಅಲ್ಲಿ ಅವರೆ ನಿಂತಿದ್ದರು, ಇವನ ಆ ಹೊತ್ತಿನ ಬರುವಿಕೆಯನ್ನು ಬಹು ಹೊತ್ತಿನಿಂದ ನಿರೀಕ್ಷಿಸಿದ್ದವರಂತೆ. 'ಸದ್ಯ ಇನ್ನೆಲ್ಲು ಹೋಗಿ ಹುಡುಕುವ ಅಗತ್ಯವಿಲ್ಲದೆ ಇಲ್ಲೆ ಸಿಕ್ಕರಲ್ಲಾ' ಎಂಬ ನಿರಾಳತೆಯೊಂದಿಗೆ ಮುಗುಳ್ನಕ್ಕ ಶ್ರೀನಾಥ ಎಂದಿನಂತೆ, 'ಸವಾಡಿ ಕಾಪ್' ಎಂದು ನಮಸ್ಕರಿಸುತ್ತ. ಅವರು ಮಾರುತ್ತರವೆಂಬಂತೆ ಮತ್ತೊಮ್ಮೆ ಮುಗುಳ್ನಕ್ಕು ಕಣ್ಸನ್ನೆಯಲ್ಲೆ ಹಿಂಬಾಲಿಸುವಂತೆ ಆದೇಶಿಸಿ ತಾವು ಮುಂದೆ ನಡೆದಿದ್ದರು. ಅವರನ್ನೆ ಲಗುಬಗೆಯಲ್ಲಿ ಹಿಂಬಾಲಿಸಿದ ಶ್ರೀನಾಥ. ಅವರಾಗಲೆ ದೈನಂದಿನ ಭಿಕ್ಷಾಟನೆಯನ್ನು ಮುಗಿಸಿಕೊಂಡು ಬಂದೆ ಇವನ ಬರುವಿಕೆಗಾಗಿ ಕಾದಂತಿತ್ತು. ಮೊದಲೆ ಎಲ್ಲವನ್ನು ಯೋಜಿಸಿದ್ದ ಹಾಗೆ ನೇರವಾಗಿ ಅವನನ್ನು ಆ ಸ್ವಲ್ಪ ಮುಂಚಿನ ಹೊತ್ತಲ್ಲಿ ನೋಡಿದ್ದ ರೀತಿಯ ಮತ್ತೊಂದು ಕುಟೀರಕ್ಕೆ ಒಯ್ದವರೆ ಅಲ್ಲಿರುವ ತನಕ ಅವನು ತಂಗಿರಬೇಕಾದ ಜಾಗ ಅದೇ ಎಂದು ಸೂಚಿಸಿದರು. ನಂತರ ಹೆಚ್ಚೇನು ಮಾತನಾಡದೆ, ಬೇಗನೆ ಬೆಳಗಿನ ಶೌಚಕಾರ್ಯ, ಮುಖ-ಮಾರ್ಜನೆಗಳನ್ನು ಮುಗಿಸಿ ಪ್ರಾರ್ಥಾನಾ ಮಂದಿರದ ಹತ್ತಿರವೆ ಇದ್ದ ಪಾಕಶಾಲೆಯತ್ತ ಆ ದಿನದ ಆಹಾರ ಸೇವನೆಗೆ ಬರಲು ಹೇಳಿ ಸರಸರನೆ ಹೊರಟುಹೋದರು. ಎಂಟುಗಂಟೆಗೆ ದಿನದ ಆಹಾರ ಸೇವನೆಯ ಹೊತ್ತೆಂದು ನೆನಪಿದ್ದ ಶ್ರೀನಾಥ ಅದಕ್ಕಿನ್ನು ಕೆಲವೇ ನಿಮಿಷ ಬಾಕಿಯಿರುವುದನ್ನು ಗಮನಿಸಿ ತರಾತುರಿಯಲ್ಲಿ ಓಡಿದ ಬೇಗನೆ ಸಿದ್ದನಾಗಲೆಂದು. 

ಬಿಳಿ ಜುಬ್ಬಾ ಪೈಜಾಮದ ಉಡುಗೆಯೊಡನೆ ಪಾಕಶಾಲೆಯತ್ತ ಕಾಲಿಡುವ ಹೊತ್ತಿಗೆ ಸರಿಯಾಗಿ ಗಂಟೆಯಾದದ್ದನ್ನು ನೋಡಿ 'ಸದ್ಯ, ತಡವಾಗಲಿಲ್ಲ'ವೆಂಬ ನಿರಾಳತೆಯಿಂದ ಅಲ್ಲಿದ್ದ ಗುಂಪು ಜನರತ್ತ ನಡೆದ ಶ್ರೀನಾಥ. ಅಲ್ಲಾಗಲೆ ಬಂದುಳಿದ ಅತಿಥಿಗಳಲ್ಲದೆ ಅಲ್ಲೆ ಶಾಶ್ವತವಾಗಿ ನೆಲೆಸಿದ ಭಿಕ್ಷು-ಮಾಂಕುಗಳು ಬಂದು ಸೇರಿಕೊಂಡಿದ್ದರು. ಬಂದ ಅತಿಥಿಗಳ ಮುಖ ನೋಡಿದರೆ ಎಲ್ಲಾ ಪಾಶ್ಚಾತ್ಯರೆ ಹೆಚ್ಚಾಗಿದ್ದಂತೆ ಕಂಡಿತ್ತು. ಆಸ್ಟ್ರೇಲಿಯ ನ್ಯೂಜಿಲ್ಯಾಂಡುಗಳಂತಹ ದೇಶದ ಕೆಲವರಿರಬಹುದೆನ್ನುವುದನ್ನು ಬಿಟ್ಟರೆ ಸ್ಥಳೀಯರಾಗಲಿ, ಸುತ್ತಮುತ್ತಲ ದೇಶಗಳಿಂದ ಬಂದವರಾಗಲಿ ಹೆಚ್ಚಿದ್ದಂತೆ ಕಾಣಲಿಲ್ಲ - ಸಿಂಗಾಪುರ, ಮಲೇಶಿಯಕ್ಕೆ ಸೇರಿರಬಹುದಾದ ಒಂದೆರಡು ಚೀನಿ ಮುಖಗಳನ್ನು ಬಿಟ್ಟರೆ. ಎಲ್ಲರಿಗೂ ನೀಡಿದ ಸೂಚನೆಯೆಂಬಂತೆ ಗಂಟೆಯ ಸದ್ದೊಂದು ಎಂಟಕ್ಕೆ ಹತ್ತು ನಿಮಿಷ ಮೊದಲೆ ಮೊಳಗಿದಾಗ ಎಲ್ಲರು ಶಿಸ್ತಿನಿಂದ ಸಾಲಾಗಿ ತಂತಮ್ಮ ಬಟ್ಟಲುಗಳನ್ನು ತುಂಬಿಕೊಂಡು ಒಂದು ಕಡೆ ಕೂತು ಕಾಯತೊಡಗುವುದು ನಿಯಮ. ಶ್ರೀನಾಥನೂ ಅದೆ ಸಾಲಿನ ಜಾಡು ಹಿಡಿದು ತಾನೂ ಒಂದು ಬಟ್ಟಲಿನ ತುಂಬಾ ತುಂಬಿಕೊಂಡು ಬಂದು ಕುಳಿತ. ಎಲ್ಲಾ ಭಿಕ್ಕುಗಳ ಸರದಿಯೂ ಮುಗಿದು ಅವರ ಪಾತ್ರೆಗಳನ್ನು ಕೈಯಲಿ ಹಿಡಿದು ಕೂತು ಶ್ಲೋಕದ ರೀತಿಯ ಮಂತ್ರ ಪಠನೆಗೆ ತೊಡಗುತ್ತಾರೆ - ಅದು ಮುಗಿದ ನಂತರವಷ್ಟೆ ತಂತಮ್ಮ ಆಹಾರ ಸೇವಿಸಲು ಅಪ್ಪಣೆ. ಅದು ಮುಗಿಯುತ್ತಿದ್ದಂತೆ ಎಲ್ಲರೂ ಕನಿಷ್ಠ ಒಂದು ಗಂಟೆಯ ಮಟ್ಟಿಗೆ ಅಲ್ಲಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು - ಅಡಿಗೆ ಮನೆಯ ಒಪ್ಪ ಓರಣದಿಂದ ಹಿಡಿದು ಓಡಾಡುವ ರಸ್ತೆ, ಸೇರುವ ಜಾಗಗಳನ್ನೆಲ್ಲ ಗುಡಿಸಿ ಸ್ವಚ್ಛಗೊಳಿಸುವವರೆಗೆ. ಅದನ್ನು ಮುಗಿಸಿದ ಮೇಲೆ ಎಲ್ಲರನೂ ಒಂದೆಡೆ ಸೇರಿಸಿ ಪ್ರವಚನವೊ, ಚರ್ಚೆಯೊ, ಭೋಧನೆಯೊ ನಡೆಯುವುದು - ಬಂದ ಅತಿಥಿಗಳು ಸಾಮಾನ್ಯವಾಗಿ ಭಾಗವಹಿಸುವ ಸಾಧ್ಯತೆಯೊಡನೆ. ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆಗಳಲ್ಲಿ ನಡೆಯುವ ಈ ಸಭೆಗಳನ್ನು ಬಿಟ್ಟರೆ ಮಿಕ್ಕೆಲ್ಲ ಸಮಯ ಅತಿಥಿಗಳ ಸ್ವಯಂ ಪರಾಮರ್ಶೆಗೆ ಬಿಟ್ಟಿದ್ದು. ಆದರೆ ಗುಂಪಾಗಿ ಸೇರಿ ಮಾಡುವ ಸಾಮೂಹಿಕ ಚಟುವಟಿಕೆಗಳಲ್ಲಿ ಎಲ್ಲರು ಬಂದು ಸೇರುವುದು, ಭಾಗವಹಿಸುವುದು ಮಾತ್ರ ಕಡ್ಡಾಯ. 

ವಾಸ್ತವವಾಗಿ ಆಹಾರದ ಸೇವನೆಯ ಹೊತ್ತಲ್ಲಿ ಮಾಂಕುಗಳು, ಪಾಕೋವ್ ಮತ್ತು ಸಮನೇರರ ಮಂತ್ರೋದ್ಗಾರದ ನಂತರ ಅವರು ದಿನದಾಹಾರ ಸೇವಿಸಿದ ಮೇಲಷ್ಟೆ ಮಿಕ್ಕಿತರರು ಆರಂಭಿಸುವುದು. ಹೀಗಾಗಿ ಮಿಕ್ಕವರು ಎಂಟು ಗಂಟೆಗೆ ಅಲ್ಲಿ ಸೇರಿದ್ದರು ಸೇವನೆಯ ಪ್ರಕ್ರಿಯೆ ಎಂಟೂವರೆಯ ಆಸುಪಾಸಿನಲ್ಲಿ ನಡೆಯುತ್ತದೆ. ಮಿಕ್ಕೆಲ್ಲಾ ಅತಿಥಿಗಳು ಅದೇ ಜಾಗದಲ್ಲಿ ಕೂತು ಆಹಾರ ಸೇವಿಸುವಂತಿಲ್ಲ - ಪಾಕಶಾಲೆಗೆ ಹೊಂದಿಕೊಂಡಂತಿರುವ ಭೋಜನ ಶಾಲೆಯಲ್ಲಿ ಅವರಿಗೆಂದೆ ಪ್ರತ್ಯೇಕ ಜಾಗ ಮೀಸಲು. ಊಟ ಕೂಡ - ಸಸ್ಯಾಹಾರವೂ ಸೇರಿದಂತೆ ಉತ್ತಮ ಗುಣಮಟ್ಟದ್ದು - ಮಾಮೂಲಿನ ಅನ್ನ, ಅಂಟಕ್ಕಿಯ ಅನ್ನ ಅಥವ ಸರ್ವೆ ಸಾಧಾರಣ ಬಡಿಸುವ ಕಂದಕ್ಕಿಯ ಅನ್ನದ ಜತೆಗೆ ಮಿಕ್ಕವುಗಳನ್ನು ಸೇರಿಸಿದರೆ ಸೊಗಸಾದ, ರುಚಿಕಟ್ಟಾದ ಭೋಜನವೆಂದೆ ಹೇಳಬೇಕು. ಆ ಭೋಜನ ಶಾಲೆ, ಪಾಕ ಶಾಲೆಗೆ ಸೇರಿದಂತೆ ಮೇಲೆ ಕಟ್ಟಿರುವ ಡಾರ್ಮೆಟೊರಿಗಳಲ್ಲಿ ಆ ರೀತಿ ತಾತ್ಕಾಲಿಕವಾಗಿ ಬಂದವರು ಉಳಿದುಕೊಳ್ಳಲು ಜಾಗ ಸಿಗುತ್ತದೆ - ವಾರಕ್ಕಿಂತ ಕಡಿಮೆ ದಿನ ಇದ್ದು ಹೋಗುವ ಉದ್ದೇಶದಿಂದ ಬಂದವರಿಗೆ. ಯಾಕೆಂದರೆ ಆ ರೀತಿಯ ಭೇಟಿಗೆಂದು ಬಂದವರು ಇತರ ವನ್ಯಾಶ್ರಮಧಾಮದ ವಾಸಿಗಳಂತೆ 'ಕುಟಿ'ಗಳಲ್ಲಿ ಇರಲು ಸಾಧ್ಯವಿಲ್ಲ. ಅದಕ್ಕೆ ಮೊದಲೆ ಪತ್ರ ಬರೆದು ಅನುಮತಿ ಪಡೆದು ಬಂದರಷ್ಟೆ ಸಾಧ್ಯ - ಶ್ರೀನಾಥನ ಹಾಗೆ. ಅಲ್ಲಿಯೆ ಸ್ನಾನ ಶೌಚಾದಿಗಳಿಗೆ ಅನುಕೂಲವೂ ಉಂಟು. ಸಂಜೆಯ ಚಹಾ ಹೊತ್ತಲ್ಲಿ ಜೊತೆಗೊಂದಿಷ್ಟು ಲಘುವಾಗಿ ತಿನ್ನಲು ಏನಾದರು ಕೊಡಬಹುದೆನ್ನುವುದನ್ನು ಬಿಟ್ಟರೆ ಮಿಕ್ಕೆಲ್ಲರು ಅಲ್ಲಿಯವರಂತೆ ಒಂದೆ ಹೊತ್ತಿನ ಊಟದಲ್ಲೆ ದಿನದೂಡಬೇಕು. ಅಲ್ಲಿರುವ ನಿರಂತರ ವಾಸಿಗಳಿಗು ಕೂಡ, ಅಲ್ಲಿರುವ ಕುಟಿ ಅಥವ ವಾಸದ ತಾಣಗಳು ಹದಿನೈದಿಪ್ಪತ್ತಕ್ಕಿಂತ ಹೆಚ್ಚೇನೂ ಇಲ್ಲ. ಆದರೆ ಅದು ಹರಡಿಕೊಂಡಿರುವ ವಿಸ್ತಾರದ ಜಾಗ ಮಾತ್ರ ಕಾಡಿನ ಸುಮಾರು ನೂರು ಎಕರೆಯಷ್ಟು ವಿಸ್ತೀರ್ಣವನ್ನು ಸುತ್ತುವರಿದ ತಾಣ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ದಟ್ಟವಾದ ಕಾಡಿನಿಂದಲೆ ಆವೃತ್ತವಾಗಿದೆಯೆನ್ನಬೇಕು. ಈ ಕುಟಿಗಳು ಇರುವ ಜಾಗಕ್ಕೆ ಹೋಗಿ ತಲುಪಲು ಸುಲಭವಾಗಿ ಸಾಧ್ಯವಾಗುವಂತೆ ಬಹುತೇಕ ಕಡೆಗಳಲ್ಲಿ ಕಾಲುಹಾದಿಗಳಿರುವುದರಿಂದ ಹೊಸಬರಿಗು ಹುಡುಕಲು ತೀರಾ ತ್ರಾಸವೇನೂ ಆಗುವುದಿಲ್ಲ. ಅಲ್ಲದೆ ಬಹುತೇಕ ಕುಟಿಗಳಿಗೆ ವಿದ್ಯುದ್ದೀಪದ ವ್ಯವಸ್ಥೆಯಿದೆ ಕೂಡ. ಮುಕ್ಕಾಲು ಪಾಲು ಎಲ್ಲೆಡೆ ಏಷಿಯಾ  ಶೈಲಿಯ ಶೌಚಾಲಯದ ವ್ಯವಸ್ಥೆಯಿದೆ, ಶವರಿನ ಅನುಕೂಲವೂ ಸೇರಿದಂತೆ. ಹೆಚ್ಚಾಗಿ ಸಾಮೂಹಿಕ ಬಳಕೆಗೆ ಅನುಕೂಲವಾಗುವಂತೆ ಮಾತ್ರ ಇದ್ದರು, ಆ ಸಾಮಾಜಿಕ ಸಾಮೂಹಿಕತೆಯೆ ಅಲ್ಲಿನ ದೈನಂದಿನ ಜೀವನದ ಜೀವಾಳವಾಗಿರುವುದರಿಂದ ಅಲ್ಲಿನ ತತ್ವಗಳಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆಯೆನ್ನಬಹುದು. ಇಷ್ಟೆಲ್ಲಾ ಸುಂದರ ಕಾಡಿನ ಪರಿಸರ, 'ಕುಟಿ'ಗಳೆಂಬ ಕುಟೀರ, ಧ್ಯಾನ ಭಕ್ತಿಯ ಪ್ರೇರಣೆಗಿರುವ ದೇವ ಮಂದಿರಗಳಿರುವ ವಾತಾವರಣದಲ್ಲಿ ನೈಸರ್ಗಿಕವಾಗಿ ಹರಿಯುವ ನದಿಯೊಂದಿದ್ದರೆ ಎಷ್ಟು ಚೆಂದ ಎಂದನಿಸುವುದು ಸಹಜವೆ; ಆ ಕುಂದು  ಕೊರತೆಯೊಂದೇಕಿರಬೇಕು ಎಂಬಂತೆ, ಅಲ್ಲೆ ಹರಿಯುವ 'ಮುನ್' ನದಿಯೂ ಉಂಟು! ಅದರ ದಡದಲ್ಲಿ ಧ್ಯಾನಾಸಕ್ತರಾದ ಭಿಕ್ಕುವೊ, ಸಮನೇರರೊ, ಪಾಕೋವ್ ಗಳೊ ಕಂಡರೆ ಅಚ್ಚರಿಯೇನೂ ಆಗುವುದಿಲ್ಲ - ಅದಲ್ಲಿಯ ಸಾಮಾನ್ಯ ದೃಶ್ಯ. 

ಶ್ರೀನಾಥನಿಗೆ ಮಾಂಕ್ ಸಾಕೇತರ ದೆಸೆಯಿಂದ ಇಂತಹದ್ದೊಂದು ಕುಟಿಯಲ್ಲೆ ಉಳಿದುಕೊಳ್ಳುವ ಅನುಕೂಲ ಪ್ರಾಪ್ತವಾಗಿತ್ತು. ಮೊದಲೆ ಹೇಳಿದಂತೆ, ಹೀಗೆ ವಾರ ಅಥವ ವಾರಕ್ಕಿಂತ ಹೆಚ್ಚು ದಿನ ಉಳಿದುಕೊಳ್ಳುವವರಿಗೆ ಮಾತ್ರವೆ ಕುಟಿಯಲ್ಲಿರುವ ಸೌಲಭ್ಯವಿದ್ದುದು ; ಅದಕ್ಕಿಂತ ಕಡಿಮೆಯೆಂದರೆ ಡಾರ್ಮೇಟರಿಯಲ್ಲಿ ಮಾತ್ರ ಸಾಧ್ಯವಿತ್ತು. ಈ ರೀತಿಯ ಹೆಚ್ಚುವರಿ ಕುಟಿಗಳಿದ್ದುದೆ ಬರಿ ನಾಲ್ಕೋ, ಐದೊ ಆಗಿದ್ದ ಕಾರಣ ಅದನ್ನು ವಿಶೇಷವಾಗಿ ಹೆಚ್ಚು ದಿನ ತಂಗುವ ಅತಿಥಿಗಳಿಗಾಗಿ ಮಾತ್ರ ಬಳಸುವ ಸಂಪ್ರದಾಯ, ಅವನ್ನು ಸೂಕ್ತ ಮತ್ತು ಉಪಯುಕ್ತ ರೀತಿಯಲ್ಲಿ ಬಳಸುವ ಉಪಾಯವೂ ಆಗಿತ್ತು. ಶ್ರೀನಾಥನ ಕುಟಿಯೂ ಸಹ ಕಾಡಿನ ಒಳಗೆ ತೀರಾ ದೂರಕ್ಕೆ ಹೋಗಬೇಕಾದ ಅಗತ್ಯವಿಲ್ಲದೆ ಐದತ್ತು ನಿಮಿಷಗಳ ಕಾಲ್ನಡಿಗೆಯಳತೆಯಲ್ಲೆ ತಲುಪುವಂತಿತ್ತು. ಜತೆಗೆ ಹತ್ತಿರದಲ್ಲೆ ಮತ್ತೈದು ನಿಮಿಷದ ದೂರದಲ್ಲಿರುವ ಮತ್ತೊಂದು ಕುಟಿಯಲ್ಲೆ ಮಾಂಕ್ ಸಾಕೇತರು ಇದ್ದು, ಅಲ್ಲಿ ಅವರಿದ್ದಾಗೆಲ್ಲ ಅದನ್ನೆ ಧ್ಯಾನ, ನಿದ್ರೆಗೆ ಬಳಸುತ್ತಿದ್ದುದ್ದು. ಜತೆಗೆ ವಿದ್ಯುದ್ದೀಪವೂ ಇದ್ದ ಕಾರಣ ರಾತ್ರಿಯೂ ಅನುಕೂಲಕರವಾಗಿರುವಂತೆ ಇತ್ತು. ಸಾಮೂಹಿಕವಾಗಿ ಪಾಲ್ಗೊಳ್ಳುವ ಸಭೆ, ಧ್ಯಾನ, ಸಮೂಹ ಸೇವೆ, ಪ್ರಾರ್ಥನೆಗಳ ಹೊತ್ತನ್ನು ಬಿಟ್ಟರೆ ಮಿಕ್ಕೆಲ್ಲ ಹೊತ್ತು ಶ್ರೀನಾಥ ಆ ಕುಟಿಯಲ್ಲೆ ಕಳೆಯಬಹುದಿತ್ತು, ಬೇರಾವ ಗೊಡವೆಯೂ ಇರದಂತೆ. 

ಮೊದಲ ದಿನದ ಬೆಳಗಿನ ಆಹಾರದ ಪರಿಕ್ರಮ ಮುಗಿಯುತ್ತಿದ್ದಂತೆ ಚಕಚಕನೆ ಪಾತ್ರೆ ಪಗಡಿ ಬಟ್ಟಲುಗಳೆಲ್ಲವನ್ನು ಒಪ್ಪ ಒರಣಗೊಳಿಸುವ ಕ್ರಿಯೆಯನ್ನು ಮುಗಿಸಿ ಎಲ್ಲರು ಸಭಾಂಗಣದಲ್ಲಿ ಸೇರಿದ್ದರು ಆ ದಿನದ ಬೋಧನೆ, ಪ್ರಾರ್ಥನೆ, ಪ್ರಶ್ನೋತ್ತರಕ್ಕಾಗಿ. ಆದರೆ ಅಂದು ಭಿಕ್ಕುಗಳೆಲ್ಲ ಸೇರಿಕೊಂಡು ಒಟ್ಟಾಗಿ ಮಾಡಬೇಕಿದ್ದ ಕಾರ್ಯಕ್ರಮವಿತ್ತಾಗಿ ಮಿಕ್ಕ ಅತಿಥಿಗಳೆಲ್ಲ ಅರ್ಧಗಂಟೆಯ ಹೊತ್ತಿಗೆಲ್ಲ ಹೊರಡಬೇಕಾಗಿ ಬಂದಿತ್ತು - ತಂತಮ್ಮ ನಿಗದಿತ ಜಾಗಗಳಿಗೆ. ಶ್ರೀನಾಥನೂ ತಾನು ಕೂತಿದ್ದ ಮೂಲೆಯಿಂದ ಏಳುವುದೊ , ಮಾಂಕ್ ಸಾಕೇತರ ಅಪ್ಪಣೆಗೆ ಕಾಯುವುದೊ ಎಂದು ದ್ವಂದ್ವದಲಿದ್ದಾಗ ಮಾಂಕ್ ಸಾಕೇತರೆ ಎದ್ದು ನಿಂತಿದ್ದು ಕಾಣಿಸಿತು. ಅವರು ನೇರ ಅವನತ್ತ ದೂರದಿಂದಲೆ ದೃಷ್ಟಿಸಿ ಹಿಂಬಾಲಿಸುವಂತೆ ಸನ್ನೆ ಮಾಡಿ ಸದ್ದು ಮಾಡದೆ, ಅಲ್ಲಿ ಧ್ಯಾನ ನಿರತರಾಗಿದ್ದ ಮಿಕ್ಕ ಮಾಂಕುಗಳ ಏಕಾಗ್ರತೆಗೆ ಭಂಗ ಬರದ ರೀತಿಯಲ್ಲಿ ಮೇಲೆದ್ದು ಹೊರಗೆ ಬಂದಾಗ ಅವರಾಗಲೆ ಕುಟಿಯತ್ತ ನಡೆದಿರುವುದು ಕಾಣಿಸಿ, ಹೆಜ್ಜೆಯ ವೇಗವನ್ನು ಹೆಚ್ಚಿಸಿಕೊಂಡು ಅವರ ಬಿರುಸಿನ ನಡಿಗೆಯ ಹಿಂದೆ ನಡೆದ ಶ್ರೀನಾಥ.  ಅವರು ನೇರ ತಮ್ಮ ಕುಟಿಯತ್ತ ಹೋಗದೆ ಅವನಿಗಿತ್ತಿದ್ದ ಕುಟಿಯತ್ತಲೆ ನಡೆದು ಮೆಟ್ಟಿಲುಗಳನ್ನೇರಿ ತೆರೆದ ಅಂಗಳದಂತಿದ್ದ ಪುಟ್ಟ ಹಜಾರದಲ್ಲಿ ಕಟೆಕಟೆಯ ಎದುರು ಕುಳಿತರು ಕುಟಿಯ ಹೊರಗಿನ ವಾತಾವರಣಕ್ಕೆ ಮುಖ ಮಾಡಿಕೊಂಡು. ಅವರನ್ನೆ ಅನುಕರಿಸಿದ ಶ್ರೀನಾಥ ಅವರ ಹಾಗೆ ಅದೆ ದಿಕ್ಕಿನಲ್ಲಿ ವೀಕ್ಷಿಸುತ್ತ ಪಕ್ಕದಲ್ಲಿ ಕೂಡಬೇಕೊ ಅಥವಾ ಅವರಿಗೆದುರಾಗಿಯೊ, ಲಂಬವಾಗಿಯೊ ಸಂಭಾಷಿಸಲುನುವಾಗುವಂತೆ ಕೂಡಬೇಕೊ ಎಂಬ ಲಘು ಜಿಜ್ಞಾಸೆಯಲ್ಲಿ ತೊಡಗಿದ್ದವನನ್ನು ಸ್ವಲ್ಪ ದೂರದಲ್ಲಿ ತಮ್ಮ ಪಕ್ಕವೆ, ತಮ್ಮಂತೆಯೆ ಕೂಡಲು ಸೂಚಿಸಿದ್ದರು ತಮ್ಮ ಬೆರಳನ್ನು ಅತ್ತ ಕಡೆ ಚಾಚಿ.  ಅಲ್ಲಾಗಲೆ ಹಾಸಿದ್ದ, ಮಡಿಚಿಟ್ಟಂತಿದ್ದ ದಪ್ಪನೆಯ ಹಾಸೊಂದರ ಮೇಲೆ ಕಾಲು ಮಡಿಸಿ ಕೂತ ಶ್ರೀನಾಥನಿಗೆ ಅಭ್ಯಾಸವಿಲ್ಲದೆ ಹಾಗೆ ಕೂರುವುದೆ ಕಷ್ಟವಾಗಿ 'ಹೀಗೆ ದಿನಪೂರ್ತಿ ಕೂಡಬೇಕೆಂದರೆ ಹೇಗಪ್ಪಾ?' ಎಂದುಕೊಳ್ಳುತ್ತಿದ್ದಂತೆ, 

'ಹಾಗೇನಿಲ್ಲಾ.. ಕಾಲು ಮಡಿಸಿಕೊಂಡು ಕೂರಲು ಕಷ್ಟವಾದರೆ ಎರಡು ಕಾಲನ್ನು ಒಂದೆ ಬದಿಗೆ ಜೋಡಿಸಿಕೊಂಡು ಮೊಗ್ಗಲಾಗಿ ಕೂರಬಹುದು..' ಎಂದರು !

ಅವರ ಮಾತು ಕೇಳುತ್ತಿದ್ದಂತೆ ಒಂದೆಡೆ ಬಿಗಿಯಾಗಿದ್ದ ವಾತಾವರಣ ಏಕಾಏಕಿ ತಿಳಿಯಾದಂತಾದರೆ, ಮತ್ತೊಂದೆಡೆ 'ಅದು ಹೇಗೆ ಪ್ರತಿ ಬಾರಿಯೂ ತನ್ನ ಆಲೋಚನೆ ಅವರಿಗೆ ತಿಳಿದು ಹೋಗುತ್ತದೆಯೊ ?' ಎನ್ನುವ ವಿಸ್ಮಯ ಮತ್ತೆ ಧಾಳಿಯಿಕ್ಕುತ್ತಿರುವಾಗಲೆ ಆ ರೀತಿಯ ಹಲವಾರು ಬಾರಿಯ ಮರುಕಳಿಸಿದ ಅನುಭವದ ಸೃತಿಯೂ ಜತೆ ಸೇರಿ ಬಹುಶಃ ಅವರ ಈ ವಿಶೇಷ ಶಕ್ತಿಗೆ ಅಚ್ಚರಿ ಪಡುವುದನ್ನೆ ನಿಲ್ಲಿಸಬೇಕೇನೊ ಎಂದುಕೊಂಡ ಶ್ರೀನಾಥ. ಆದರೂ ಬಾಯಲ್ಲಿ ಮಾತ್ರ,

' ಮಾಸ್ಟರ ... ನನ್ನ ಮನದ ಪದರದಲ್ಲಿ ಮೂಡುವ ಆಲೋಚನೆಗಳು ನಿಮಗೆ ಅದು ಹೇಗೆ ಅಷ್ಟು ನಿಖರವಾಗಿ ತಿಳಿಯುವುದೆಂದು ನನಗೆ ಈಗಲೂ ಅತೀವ, ವಿಸ್ಮಯ ಹಾಗು ಕುತೂಹಲ. ಮೊದಲದನ್ನು ನೋಡಿದಾಗ ಅದು ಕಾಕತಾಳೀಯತೆಯ ಫಲವಾಗಿರಬಹುದೆಂದು ಕೊಂಡಿದ್ದೆ .. ಆದರೆ ಅದರ ಪುನಾರವರ್ತನೆ ಅದೆಷ್ಟು ಬಾರಿ ಆಗಿ ಹೋಗಿದೆಯೆಂದರೆ - ಈಗ ಕಾಕತಾಳೀಯತೆ ಎನ್ನುವ ಪ್ರಶ್ನೆಯೆ ಇಲ್ಲದಂತೆ ಪೂರ್ತಿ ನಂಬಿಕೆ ಬಂದು ಬಿಟ್ಟಿದೆ, ನಿಮಗೇನೊ ವಿಶೇಷ ಶಕ್ತಿಯಿದೆ ಎಂದು....!' ಎಂದಿದ್ದ.

(ಇನ್ನೂ ಇದೆ)
__________
 

Comments

Submitted by nageshamysore Wed, 09/03/2014 - 11:38

ಸಂಪದಿಗರೆ, ಕಥೆಯಲ್ಲಿ ಬಂದಿರುವ 'ವಾಟ್ ಪಃ ನಾನಚಟ್' ವನ್ಯಾಶ್ರಮಧಾಮದ ವಿವರಣೆಯ ತುಣುಕುಗಳ ದೃಶ್ಯ ಕಲ್ಪನೆಗೆ 'wat pah nanachat images' ಎಂದು ಗೂಗಲ್ ಮಾಡಿ. ಆಗ ತೋರಿಸುವ 'images' ಕ್ಲಿಕ್ ಮಾಡಿದರೆ ವಿವರಣೆಗೆ ಹೊಂದಿಕೆಯಾಗುವ ಚಿತ್ರಗಳು ಕಾಣುತ್ತವೆ - ನಾಗೇಶ ಮೈಸೂರು. 

Submitted by nageshamysore Thu, 09/04/2014 - 03:27

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ಹೌದು, ಆರೋಹಣದತ್ತ ಇಟ್ಟ ಹೆಜ್ಜೆ ಮತ್ತಷ್ಟು ಸದೃಢವಾಗಬೇಕಾದರೆ ಏನಾದರು ಪೂರಕ ವಾತಾವರಣ ಒದಗಿಸುವ ನೆಲೆಗಟ್ಟು ಇರಬೇಕಲ್ಲ? ಅದಕ್ಕೆ ನಮ್ಮ ಗುರುಕುಲವಾಸದಂತೆ ಈ ಥಾಯ್ ಆಶ್ರಮ ಅವಕಾಶವನ್ನೊದಗಿಸಿಕೊಡುತ್ತಿದೆ ಶ್ರೀನಾಥನಿಗೆ. ಅವನದರಲ್ಲಿ ಎಷ್ಟರ ಮಟ್ಟಿಗೆ ಮೇಲೇರಬಲ್ಲ, ಮೇಲೇರಿದರೂ ಎಲ್ಲಿಯತನಕ ಅಲ್ಲಿಯೆ ಸ್ಥಿರತೆಯನ್ನು ಕಾದುಕೊಂಡು ನಿಲ್ಲಬಲ್ಲ ಎನ್ನುವುದು ಕುತೂಹಲದ ವಸ್ತು - ಕಾದು ನೋಡೋಣ :-)