ನನ್ನ ಬಣ್ಣದ ಕಾಲು

ನನ್ನ ಬಣ್ಣದ ಕಾಲು

ಷ್ಟೊಂದು ದೊಡ್ಡ ಗಾಯ ಆಗುತ್ತೆ ಅಂತ ಗೊತ್ತೇ ಇರಲಿಲ್ಲ. ನಡೆದುಕೊಂಡು ಹೋಗುವಾಗ ಜಾರಿಯೋ, ಎಡವಿಯೋ ಬಿದ್ದಿರುವುದು ಇದು ಮೊದಲನೇ ಬಾರಿ ಏನೂ ಅಲ್ಲ. ಆದರೆ ಇಷ್ಟು ಜೋರಾಗಿ ಬಿದ್ದು ಕಾಲಿಗೆ ಏಟಾಗಿರುವುದು ಲೈಫಲ್ಲಿ ಇದೇ ಮೊದಲು. ದಿನಾ ಮಿಲ್ಕಾ ಸಿಂಗ್ ತರಾ ಓಡ್ತಾ ಇದ್ದ ನನಗೆ ಕಾಲಿಗೆ ಗಾಯವಾದಾಗ ಕುಸಿದು ಹೋಗಿ ಬಿಟ್ಟೆ. ನಡೆದಾಡುವಂತಿಲ್ಲ, ನೀವು ಎಷ್ಟು ರೆಸ್ಟ್ ತೆಗೋಳ್ತೀರೋ ಅಷ್ಟು ಒಳ್ಳೇದು ಎಂಬುದು ಡಾಕ್ಟರ್ ಸಲಹೆ. ಕಾಲೂರಲು ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲಿ ಹಾಸ್ಟೆಲ್ ನಿಂದ ಮನೆಗೆ ಹೋಗುವುದಾದರೂ ಹೇಗೆ? ಅಪ್ಪ ಅಮ್ಮ ಪಕ್ಕದಲ್ಲಿಲ್ಲ, ಎಲ್ಲದಕ್ಕೂ ರೂಂಮೇಟ್ ನ ಸಹಾಯಬೇಕು. ಆರೋಗ್ಯ ಕೈಕೊಟ್ಟಾಗ ಅಪ್ಪ ಅಮ್ಮ ಪಕ್ಕದಲ್ಲಿರಬೇಕೆಂದು ಮನಸ್ಸು ಬಯಸುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಹಾಸ್ಟೆಲ್ ರೂಂ ಬಿಟ್ಟು ಹೊರಗೆ ಹೋಗುವಂತಿಲ್ಲ. ಒಂಥರಾ ಕಟ್ಟಿ ಹಾಕಿದ ಪರಿಸ್ಥಿತಿ. ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟು ಮತ್ತೆ ಮತ್ತೆ ಕುಗ್ಗುತ್ತಾ ಹೋಗುತ್ತಿದ್ದೆ.  ಫ್ರೆಂಡ್ಸ್ ಜಾಸ್ತಿ ಇದ್ದರೂ ಯಾರಿಗೂ ಈ ಬಗ್ಗೆ ಹೇಳಬೇಕೆಂದು ಅನಿಸಲೂ ಇಲ್ಲ. ಹೇಳಬೇಕೆಂದು ಅನಿಸಿದ್ದು ಎರಡು ಮೂರು ಜನರಿಗಷ್ಟೇ. ಯಾರ ಸಿಂಪಥಿಯೂ ನನಗೆ ಬೇಡ ಎಂಬ ಹಠವೂ ನನಗೆ ಇತ್ತು ಎನ್ನಿ. ದಿನೇ ದಿನೇ ಬೇಜಾರು ನನ್ನ ಮನಸ್ಸನ್ನು ಆವರಿಸಿತು. ಅಮ್ಮನ ಜತೆ ಮಾತಾಡುತ್ತಾ ಆಕೆಯನ್ನು ಸಮಾಧಾನಿಸಿ ನಂತರ ಅತ್ತು ಬಿಡುತ್ತಿದ್ದೆ. 

ರೂಂನಲ್ಲಿ ಯಾರೂ ಇಲ್ಲದೇ ಇದ್ದಾಗ ಜೋರಾಗಿ ಅತ್ತು ಸಮಾಧಾನ ಮಾಡಿಕೊಳ್ಳುತ್ತಿದ್ದೆ.ಆವಾಗ ಯಾರಾದರೂ ನನ್ನ ಪಕ್ಕ ಬೇಕು, ನನಗೆ ಸಾಂತ್ವನ ಹೇಳಬೇಕೆಂದು ಮನಸ್ಸು ಬಯಸುತ್ತಿದ್ದರೂ ಅಲ್ಲಿದ್ದದ್ದು ನನ್ನ ರೂಂಮೇಟ್ ಮಾತ್ರ. ಆ ಕ್ಷಣದಲ್ಲಿ ಯಾರಾದರೂ ಹೇಗಿದ್ದೀಯಾ? ಎಂದು ಕೇಳಿದರಷ್ಟೇ ಸಾಕಾಗಿತ್ತು. ಈ ನಡುವೆ ಗೆಳೆಯರೊಬ್ಬರ ವತ೯ನೆಯಿಂದ ಮನಸ್ಸು ಇನ್ನಷ್ಟು ಬೇಜಾರಾಯ್ತು. ನನ್ನ ಸಮಾಧಾನಕ್ಕಾಗಿ ಪುಸ್ತಕ ಓದೋಣವೆಂದರೆ ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಇದ್ದ ಬದ್ದ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿ ಮೊಬೈಲ್ ನಲ್ಲೇ ಪುಸ್ತಕ ಓದುವುದು, ಕಾದಂಬರಿಗಳನ್ನು ಕೇಳುವ ಕೆಲಸ ಶುರು ಮಾಡಿಕೊಂಡೆ. ಮಲಗಿದಲ್ಲಿಯೇ ಗೇಮ್ಸ್ ಆಡುವುದು, ಹಾಡು ಕೇಳುವುದು, ದಿನಕ್ಕೆ ಐದಾರು ಬಾರಿ ಅಮ್ಮನ ಜತೆ ಮಾತನಾಡುವುದು ಇದೇ ನನ್ನ ದಿನಚರಿ ಆಯಿತು. ನನಗೇನೂ ಮಾಡಲು ಆಗುವುದಿಲ್ಲವಲ್ಲ ಎಂಬ ಕೊರಗಿನಿಂದ ನಾನು ಸೋಲುತ್ತಾ ಹೋದೆ. ಗೆಲ್ಲಬೇಕೆಂಬ ಹಠದಿಂದ ಎರಡು ಹೆಜ್ಜೆ ಇಟ್ಟು ಆಮೇಲೆ ನೋವಿನಿಂದ ಒದ್ದಾಡುತ್ತಿದ್ದೆ. ಇಂಥಾ ಪ್ರಯತ್ನಗಳಿಂದ ಕಾಲು ನೋವು ಜೋರಾದಾಗ ನನ್ನ ಪ್ರಯತ್ನಕ್ಕೆ ಬ್ರೇಕ್ ನೀಡಿದೆ. ಇಷ್ಟು ವಷ೯ದ ಬದುಕಿನಲ್ಲಿ ಇದೇ ಮೊದಲ ಬಾರಿಗೆ ತುಂಬಾ ಹೊತ್ತು ನಿದ್ದೆ ಮಾಡಿದ್ದು. ಬೆಡ್  ನಲ್ಲಿ ಮಲಗಿಕೊಂಡೇ ಟೈಮ್  ವೇಸ್ಟ್ ಮಾಡುತ್ತಿದ್ದೇನಲ್ಲಾ ಎಂಬ ನೋವು ಕಣ್ಣೀರು ತರಿಸುತ್ತಿತ್ತು. ಇದಕ್ಕಿಂತ ದೊಡ್ಡ ನೋವು ಅನುಭವಿಸುವವರು ನಮ್ಮ ನಡುವೆ ಇದ್ದಾರೆ ಆದರೂ ಅವರವರ ನೋವು ಅವರವರಿಗೆ ದೊಡ್ಡದು ಅಲ್ಲವೇ?

ಆದದ್ದು ಆಯ್ತು, ಎಷ್ಟೂಂತ ಅಳುವುದು? ಇನ್ನು ಸ್ವಲ್ಪವಾದರೂ ನಗಬೇಕೆಂದು ತೀಮಾ೯ನಿಸಿದೆ. ಜತೆಗೆ ನನಗೆಲ್ಲಾ ಮರೆತುಹೋಗುತ್ತಿದೆ ಎಂಬ ಭಯ ನನ್ನನ್ನು ಆವರಿಸುತ್ತಿತ್ತು. ಏನಾದರೂ ಗೀಚಲೇ ಬೇಕೆಂಬ ಹಠ ಮತ್ತೆ ಬರೆಯುವಂತೆ ಮಾಡಿದ್ದು. 

ಹೌದು, ನನ್ನ ಕಾಲೀಗ ಬಣ್ಣದ ಕಾಲು. ಜಯಂತ್ ಕಾಯ್ಕಿಣಿ ಕತೆ ನೆನಪಿಗೆ ಬಂತಲ್ವಾ?  ಪಿಂಕ್ ಕಲರ್ ನ ಪ್ಲಾಸ್ಟರ್ ಹಾಕಿರುವುದರಿಂದ ನನ್ನ ಪಾದವೀಗ ಪಿಂಕ್ ಪಿಂಕ್ ! 
ಬಾಲ್ಯದಲ್ಲಿ ನಡೆಯಲು ಕಲಿಯುವಾಗ ನಾನು ಹೇಗೆ ಗೋಡೆ ಹಿಡಿದು ನಡೆಯುತ್ತಿದ್ದೆನೋ ಅದೇ ತರ ಈಗ ಹಾಸ್ಟೆಲ್ ಗೋಡೆ ಹಿಡಿದು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಿದ್ದೇನೆ. ಚಿಕ್ಕವಳಿರುವಾಗ ಅಪ್ಪನ ದೊಡ್ಡ ಚಪ್ಪಲಿಯಲ್ಲಿ ಕಾಲು ತೂರಿಸಿ ಅದನ್ನು ಹ್ಯಾಂಡಲ್ ಮಾಡುತ್ತಾ ನಡೆಯುತ್ತಿದ್ದೆ. ಈಗ ಪ್ಲಾಸ್ಟರ್ ಹಾಕಿದ ಕಾಲಿಗೆ ಬ್ಯಾಲೆನ್ಸ್ ಸಿಗಲೆಂದು ಒಂದು ಕಾಲಿಗೆ ಗಂಡಸರ ಚಪ್ಪಲಿ, ಇನ್ನೊಂದಕ್ಕೆ ನನ್ನ ಚಪ್ಪಲಿ. ಫನ್ನಿ ಕ್ಯಾರೆಕ್ಟರ್ ತರ ಅನಿಸುತ್ತಿದೆ 
ಕೂದಲು ನೋಡು ಹೇಗಾಗಿದೆ ? ಅಂತ ಬೈಯುವ ರೂಂಮೇಟ್ ಮೊದಲ ಬಾರಿಗೆ ನನ್ನ ಕೂದಲಿಗೆ ಹೇರ್ ಪ್ಯಾಕ್ ಹಾಕಿ ಶೈನಿಂಗ್ ಬರುವಂತೆ ಮಾಡಿದ್ದು ಈ ಹೊತ್ತಲ್ಲೇ. ಅಷ್ಟೇ ಯಾಕೆ? ಸೆಲ್ಫ್ ಗ್ರೂಮಿಂಗ್ ಮಾಡಿಕೊಂಡರೆ ಕಾನ್ಫಿಡೆನ್ಸ್ ಬರುತ್ತೆ ಅಂತ ಬೆಡ್ ನಲ್ಲೇ ಕೂರಿಸಿ ನನ್ನ ಹೇರ್ ಕಟ್ ಮಾಡಿ ನನ್ನ ಹೇರ್ ಸ್ಟೈಲ್ ಕೂಡಾ ಬದಲಿಸಿದ್ಳು.
ಕಾಲಿಗೆ ನೇಲ್ ಪೇಂಟ್ ಹಚ್ಚಿ ಅದರಲ್ಲೂ ವಿಚಿತ್ರ ಡಿಸೈನ್ ಮಾಡಿರುವುದರಿಂದ ನೋವಿನ ಕಾಲುಗುರು ನೋಡಿ ನಗುಬರುತ್ತದೆ. ತಡ ರಾತ್ರಿಯಾದರೂ ನಿದ್ದೆ ಬರದಿದ್ದಾಗ ಕಾಫಿ ಮಾಡಿ ಚಿಯರ್ಸ್ ಅಂತ ಹೇಳಿ ಕುಡಿದಿದ್ದೇವೆ. ಹರಟುತ್ತಾ ಇಡೀ ರಾತ್ರಿ ಕಳೆದು ಬೆಳಗ್ಗಿನ ಜಾವ ಗಡದ್ದಾಗಿ ಮಲಗಿದ್ದೇವೆ.
ಇಷ್ಟೆಲ್ಲಾ ಕಿತಾಪತಿಗಳ ನಡುವೆ ದೋಸೆ ತಿನ್ನಬೇಕೆಂಬ ಬಯಕೆಯಾದಾಗ (ನನ್ನ ಫೇವರಿಟ್ ತಿಂಡಿ) ಇಲೆಕ್ಟ್ರಿಕ್ ರೈಸ್ ಕುಕ್ಕರ್ ನಲ್ಲಿ ದೋಸೆ ಮಾಡಿ ಕೊಟ್ಟಿದ್ದಳು ನನ್ನ ರೂಂ ಮೇಟ್.
ಮೊಬೈಲ್ ನಲ್ಲೇ ಜಗತ್ತಿನ ಸುದ್ದಿ ತಿಳಿದುಕೊಳ್ಳುತ್ತಾ, ಚಾಕ್ಲೇಟ್  ಡಬ್ಬವನ್ನೂ ಬೆಡ್ ಪಕ್ಕದಲ್ಲೇ ಇರಿಸಿ ಎಲ್ಲವನ್ನೂ ಮಧುರ ನೆನಪುಗಳನ್ನಾಗಿಸುವ ಹುಚ್ಚು ಪ್ರಯತ್ನ ಮಾಡುತ್ತಿದ್ದೇನೆ. 
ಎಲ್ಲರಿಗೂ ನೋವು ಇದ್ದದ್ದೇ. ಅದನ್ನೆಲ್ಲಾ ಅದುಮಿ ನಗಬೇಕು ಎಂದು ಸಮಾಧಾನ ಮಾಡುವ ರೂಂಮೇಟ್ ಒಬ್ಬಳಾದರೆ, ಯೂ ಪೀಪಲ್ ಆರ್ ಕ್ರೇಜಿ ಎಂದು ಕಾಮೆಂಟ್ ಕೊಡುವ ಇನ್ನೊಬ್ಬಳು. 
ಎಲ್ಲರ ನಡುವೆ ಹಾಸ್ಟೆಲ್ ನ ಪುಟ್ಟ ಕೋಣೆಯಲ್ಲಿ ಕುಳಿತು ಇದನ್ನೆಲ್ಲಾ ಬರೆಯುವಾಗ ಮನಸ್ಸು ಹಗುರವಾಗುತ್ತದೆ. ನಾಳೆಯ ಬಗ್ಗೆ ಗೊತ್ತಿಲ್ಲ, ಈ ಕ್ಷಣಕ್ಕೆ ತೋಚಿದ್ದನ್ನು, ಅನುಭವಿಸುತ್ತಿರುವುದನ್ನು ಎಲ್ಲ 
ಬರೆಯಬೇಕೆಂದೆನಿಸಿತು ಅಷ್ಟೇ. 
 
                                                                       
        
  

ಚಿತ್ರ ಕೖಪೆ : ಗೂಗಲ್

Comments

Submitted by hpn Thu, 09/04/2014 - 12:36

ರಶ್ಮಿ, ಚಿತ್ರ ಕೃಪೆ: ಗೂಗಲ್ ಎಂದು ಕೊಡುವುದು ಸರಿಯಾಗಲಿಕ್ಕಿಲ್ಲ. ಚಿತ್ರ ಯಾರದ್ದೋ ಅವರಿಗೇ ಕ್ರೆಡಿಟ್ಸ್ ಕೊಟ್ಟರೆ ಚೆನ್ನ.