ಸುಬ್ಬ - ವಿಘ್ನ ನಿವಾರಕ ಗಣಪ

ಸುಬ್ಬ - ವಿಘ್ನ ನಿವಾರಕ ಗಣಪ

ಹಿಡಿ ಮಕ್ಕಳಿಂದ ಹಿಡಿದು ಹಿರಿ ಮುದುಕರವರೆಗಿನ ಎಲ್ಲರ ಕೈ ಬಿಜಿ ಇಡುವ ಇಂದಿನ ಸಾಧನವೆಂದರೆ ಸ್ಮಾರ್ಟ್ ಫೋನು. ಮಕ್ಕಳು ಗೇಮ್ಸ್’ನಲ್ಲಿ ಬಿಜಿಯಾದರೆ, ಹಿರಿಯರು ಸಾಮಾಜಿಕ ತಾಣದಲ್ಲಿ ಬಿಜಿ. ಹರೆಯದವರಂತೂ ಬಿಡಿ ಅನಾದಿ ಕಾಲದ ಸನ್ನೆಯ ಭಾಷೆಯನ್ನು ಜೀವಂತವಾಗಿಡುವುದಕ್ಕೇ ನಾವಿರೋದು ಎನ್ನುವಂತೆ  LOL, TTYL, JLT  ಇತ್ಯಾದಿ ಮೆಸೇಜಿಂಗ್’ನಲ್ಲಿ ಭಯಂಕರ ಬಿಜಿ.

ಅದೆಲ್ಲ ಸರಿ, ಕಿರಿಯ ಮಕ್ಕಳು ಎಂದು ಕೇಳಿದ್ದೇವೆ ಆದರೆ ಈ ಹಿಡಿ ಮಕ್ಕಳು ಎಂದರೇನು? ಸ್ನಾನ, ಟಾಯ್ಲೆಟ್ಟು, ನಿದ್ದೆ ಇತ್ಯಾದಿಗಳಿಗೆಲ್ಲ ಅಪ್ಪ-ಅಮ್ಮನ ಕೈ ’ಹಿಡಿ’ದೇ ಕರೆದುಕೊಂಡು ಹೋಗಬೇಕಿರೋ ಇಂದಿನ ಕಂದಮ್ಮಗಳು ಐ-ಫೋನ್ ಬಳಸೋದಕ್ಕೆ ಯಾರ ಸಹಾಯವೂ ಕೇಳೋದಿಲ್ಲ. ನನ್ನ ಮಾತು ನೀವು ನಂಬೋಲ್ಲ ಅಂದ್ರೆ ಪುಟ್ಟ ಮಗುವಿಗೆ ನಿಮ್ಮ ಮೊಬೈಲ್ ಆನ್ ಮಾಡಿಕೊಟ್ಟು ನೋಡಿ. ನೀವು ಎದುರಿಗೆ ಕೂತಿದ್ರೆ ಆಟವೂ ಆಡದೇ ನಿಮ್ ಮುಖ ನೋಡಿ ಒಮ್ಮೆ ಗುರಾಯಿಸುತ್ತೆ. ನೀವು ಸ್ವಲ್ಪ ಆಚೆಗೆ ಹೋದಾದ ಮೇಲೆ ಆಟ ಶುರು ಹಚ್ಚಿಕೊಳ್ಳುತ್ತೆ, ಇನ್ನೂ ಮಾತೂ ಆಡಲು ಬಾರದ ಆ ಕೂಸು. ಯಾಕೆ ಅಂದಿರಾ? they too demand privacy ಸ್ವಾಮಿ !

ಹೀಗೆ ಬೆಳದಿರೋ ತಂತ್ರಜ್ಞ್ನಾನದ ಯುಗದಲ್ಲಿ, ಚಿಕ್ಕ ಮಗುವೇ ಈ ಪಾಟಿ ಬೆಳೆಯೋವಾಗ, ನಮ್ ಸುಬ್ಬ ಬೆಳೆಯದೇ ಇದ್ರೆ ಹೇಗೆ? ಅವನ ಕೈಗೂ ಒಂದು ಸ್ಮಾರ್ಟ್ ಫೋನ್ ಬಂದಿದೆ. ಸ್ಮಾರ್ಟ್ ಫೋನ್ ಇಟ್ಟುಕೊಂಡವರೆಲ್ಲ ಸ್ಮಾರ್ಟ್ ಆಗಿರಬೇಕು ಅಂತೇನಿಲ್ಲ, ಅಲ್ವೇ? ಮಂಗನ ಕೈಲಿ ಮಾಣಿಕ್ಯ ಅನ್ನೋ ಹಾಗೆ ಸುಬ್ಬನ ಕೈಲಿ ಸ್ಮಾರ್ಟ್ ಫೋನು. ಅದೇನೇನೋ ಆಟಗಳ ಕಲಿತಿದ್ದಾನೆ. ಯಾರು ಯಾರಿಗೋ ಮೆಸೇಜ್ ಕಳಿಸ್ತಾನೆ. ಹೊತ್ತಿಲ್ಲ ಹೊತ್ತಲ್ಲಿ ಕರೆ ಮಾಡೋದೇ ಅಲ್ದೇ, ಏನೇನೋ ಪ್ರಶ್ನೆಗಳು ಬೇರೆ !

ಮೊನ್ನೆ ಗೌರಿ ಹಬ್ಬದ ದಿನ ಕರೆ ಮಾಡಿದ್ದ ... ನಾಲ್ಕು ಘಂಟೆ ಬೆಳಿಗ್ಗೆಯಲ್ಲಿ ! ಕರೆ ಮಾಡಿದ್ದ ಮಾನವ "ಆಯ್ತೇನೋ ಪೂಜೆ" ಅಂದ ! "ನೆನ್ನೆ ರಾತ್ರಿ ಬಸ್ ಬಂದಿದ್ದು ಲೇಟು ಹಾಗಾಗಿ ಗೌರಿ ಉಂಡು ಮಲಗಿದ್ದು ಲೇಟು. ಅದಕ್ಕೇ ಇನ್ನೂ ಎಬ್ಬಿಸಿಲ್ಲ. ಪೂಜೆ ಸ್ವಲ್ಪ ನಿಧಾನ" ಅಂತಂದು ಫೋನ್ ಇಟ್ಟೆ. ಗಾಳಿಗೆ ತೆರೆದಿಟ್ಟ ಕಿಟಕಿಯಿಂದ ನಿದ್ದೆ ಹಾರಿ ಹೋಗಿತ್ತು ! ಬೆಳ್ ಬೆಳಿಗ್ಗೆ ಫೇಸ್ಬುಕ್ ತೆರೆದು ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳನ್ನು ತಿಳಿಸಿ, ಕನಿಷ್ಟ ಒಂದಾದರೂ ಲೈಕು ಕರುಣಿಸು ತಾಯೇ ಎಂದು ಬೇಡಿಕೊಂಡು ಪೋಸ್ಟ್ ಹಾಕಿಯೇಬಿಟ್ಟೆ.  ಹೆಚ್ಚು ಭಕ್ತರ ಕಾಟವಿಲ್ಲದೆ ಶುಭ ಸಮಯದಲ್ಲಿ ತಾಯಿ ಒಂದು ಲೈಕು ಕರುಣಿಸಿದಳು. ನಾನು ಬೇಡಿಕೊಂಡಿದ್ದನ್ನ ಸ್ವಲ್ಪ ಪಾಲಿಶ್ ಮಾಡಿ ಕೇಳಬೇಕಿತ್ತು. ನನ್ನದೇ ತಪ್ಪು. ಕರುನಾಡಿನವರೆಲ್ಲ ಮಲಗಿರಲು ಕತ್ತೆಯ ಹಾಲು ಕೊಂಡು ತರಲು ಇವನೊಬ್ಬ ಎದ್ದಿದ್ದ. ನನಗೆ ಬಂದ ಏಕ ಮಾತ್ರ ಲೈಕು ಸುಬ್ಬ’ ಒತ್ತಿದ್ದು !

ಎದ್ದು ಸ್ನಾನಾದಿ ನಿತ್ಯಕರ್ಮ ಮುಗಿಸಿ ಮಡದಿ ಕೈಲಿ ಗೌರಿ ಪೂಜೆ ಮಾಡಿಸುವ ಶುಭ ಅವಸರದಲ್ಲಿ ಅದೇನು ಅವಸರವೋ ಸುಬ್ಬನಿಂದ ನಾಲ್ಕು ಬಾರಿ ಕರೆ. ಪೂಜೆ ಸಮಯದಲ್ಲಿ ಮೊಬೈಲ್ ಯಾಕೆ ಅಂತೆ ಕರೆ ತೆಗೆದುಕೊಳ್ಳದೇ ಹೋದರೆ, ಮನೆ ನಂಬರ್’ಗೆ ಕರೆ ಬಂತು. ಅಲ್ಲಿ ಬಿಟ್ರೆ ಇಲ್ಲಿ, ಇಲ್ಲಿ ಬಿಟ್ರೆ ಅಲ್ಲಿ. ಮಂಗಳಾರತಿಗೆ ಘಂಟೆಯ ಅವಶ್ಯಕತೆಯೇ ಇರಲಿಲ್ಲ, ಬರೀ ಸುಬ್ಬನ ಕರೆಯ ಸದ್ದೇ ಮನೆಯಲ್ಲೆಲ್ಲ !

ಪೂಜೆ ಎಲ್ಲ ಮುಗಿದ ಮೇಲೆ ಅವನಿಗೆ ಕರೆ ಮಾಡಿ ಏನ್ ವಿಷಯ ಅಂದಿದಕ್ಕೆ "ನಾಳೆ ಸಂಜೆ ಗಣೇಶನ ಆರತಿಗೆ ನಮ್ ಮನೆಗೆ ಬಂದುಬಿಡು" ಅಂದ.  ಎಲ್ಲ ರೀತಿಯ ಮೆಸೇಜುಗಳೇ ಅಲ್ದೇ ಈಗ ಫೋನ ಕರೆ ಬೇರೆ ಮಾಡಿ ನನಗೆ ಆಹ್ವಾನವಿತ್ತಿದ್ದ. ನಿಮಗೆಲ್ಲ ತಿಳಿದಿರೋ ಹಾಗೆ, ಅವನ ಪಾಲಿಗೆ ನಾನು VIP alias Very Intimate Person.

ಗೌರಿ ಹಬ್ಬದ ಸಂಜೆಯಿಂದಲೇ ಗಣೇಶನ ಪೂಜೆ ತಯಾರಿ ಶುರು. ಮಂಟಪದೊಳಗೆ ಅಕ್ಕಿ ಹರಡಿ, ಓಂ ಕಾರ ಮೂಡಿಸಿ, ಅದರ ಮೇಲೆ ಪರಿಸರ ಗಣಪನನ್ನು ಕುಳ್ಳರಿಸಿದೆ. ಆಗ "ಸುಬ್ಬನಾ ಫೋನಿನಾ ಕರೆ, ಬಂದಿತು ಸುಬ್ಬನಾ ಫೋನಿನಾ ಕರೆ". ಏಕ್ದಂ "ಏನೋ? ಅಂದೆ ... "ಮಾವಿನ ಸೊಪ್ಪು ಎಕ್ಸ್ಟ್ರಾ ಇದೆಯಾ? ನೆನ್ನೆ ತರೋದೇ ಮರೆತುಹೋಯ್ತು" ಅಂದ. "ಹೂ ... ಇದೆ. ರಾತ್ರಿ ಬಂದು ತೊಗೊಂಡ್ ಹೋಗು" ಅಂದೆ. "ಇದೆ ಅಂದ್ಯಾ ... ಗುಡ್. ಬಾಗಿಲು ತೆಗಿ. ನಿಮ್ ಮನೆ ಬಾಗಿಲಲ್ಲೇ ಇದ್ದೀನಿ" ಅನ್ನೋದೇ? ಪಾಪಿ! 

ಆ ಸೇವೆಯೂ ಆಯ್ತು. ನನಗೆ ಸ್ವಲ್ಪ ಉಳಿಸಿ ಮಿಕ್ಕಿದ್ದೆಲ್ಲ ಎತ್ಕೊಂಡ್ ಹೋದ. ಅವನು ಆ ಕಡೆ ಹೋದ ಮೇಲೆ, ಹೊರಗೆಲ್ಲೋ ಅರಿಶಿನ-ಕುಂಕುಮಕ್ಕೆ ಹೋಗಿದ್ದ ನನ್ನಾಕೆ ಬಂದ್ಲು "ಮಂಟಪಕ್ಕೆ ತೋರಣ ಕಟ್ಟಿ ಆಗಿದ್ರೆ, ಮುಂದಿನ-ಹಿಂದಿನ ಬಾಗಿಲಿಗೂ ಕೈಸಂಗಾತ ಕಟ್ಟಿ ಬಿಡಿ" ಅಂದ್ಲು. "ಕಟ್ಟಬಹುದೂ, ಆದ್ರೆ ಮಾವಿನ ಸೊಪ್ಪು ಇಲ್ಲ" ಅಂದೆ ! "ಆ? ಸೊಪ್ಪು ತುಂಬಾ ಇದೆ, ಹೊಸಾ ಪಂಚೆ ಬದಲು ಸೊಪ್ಪು ಕಟ್ಕೋಬಹುದು ಅಂದ್ರೀ?" ಅಂದವಳಿಗೆ ಹೇಳಿದೆ "ಮೋಸ, ಎಲ್ಲೆಡೆ ಮೋಸ. ಸುಮಾರು ಎಲೆ ಹುಳುಕು ಹಿಡಿದಿತ್ತು" ಅಂತ ರೀಲು ಬಿಟ್ಟು ಸುಬ್ಬನನ್ನು ಉಳಿಸಿದೆ ! ಅದರಿಂದ ನನಗೆ ಸಿಕ್ಕ ಪ್ರತಿಫಲ ಏನು ಅಂದ್ರಾ? ಮತ್ತೆ ಪೇಟೆ ಬೀದಿಗೆ ಹೋಗಿ ಒಂದಕ್ಕೆ ಎರಡು ದುಡ್ಡು ಕೊಟ್ಟು ಮಾವಿನ ಸೊಪ್ಪು ತಂದೆ. ಪಾಪಿ ಸುಬ್ಬ !

ಎಲ್ಲೆಡೆ ನಳನಳಿಸುವಂತೆ ಅಲಂಕರಿಸಿ ಮರುದಿನದ ಹಬ್ಬಕ್ಕೆ ಸಿದ್ದಗೊಳಿಸಿದ್ದೆ. ಅಲ್ಲಿಗೆ ಗೌರಿ ಹಬ್ಬ ಮುಗೀತು. ಗಣಪ ಆಗಮನದ ನಿರೀಕ್ಷೆಯಲ್ಲಿ ಪಲ್ಲಂಗಕ್ಕೆ ತೆರೆಳಿದೆ. ಹೇಗಿದ್ರೂ ರಜೆ ಇದೆಯೆಲ್ಲ ಅಂತ ಆರಕ್ಕೆ ಅಲರಾಂ ಇಟ್ಟೆ. ಬೀದಿ ಗಲಾಟೆಗೆ ಅವಶ್ಯಕತೆ ಇಲ್ಲದೇ ಇದ್ದರೂ, ಇರಲಿ ಅಂತ ಅಲಾರಂ ಇಟ್ಟಿದ್ದೆ. ಭಾದ್ರಪದ ಶುಕ್ಲದ ಚೌತಿಯಂದು ಸರಿಯಾಗಿ ಐದೂವರೆಗೆ ಅಲಾರಂ ಬಡಿದುಕೊಳ್ತು. ಭಾರತೀಯರು ಹೋಗಿ ಬಂದೆಡೆಯಲ್ಲೆಲ್ಲ IST  ಪರಿಪಾಲಿಸುತ್ತ ತಡ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದರೂ, ಭಾರತೀಯ ಗಡಿಯಾರವೆಂದೂ ಇಟ್ಟ ಸಮಯಕ್ಕಲ್ಲದೆ ಹಿಂದು-ಮುಂದು ಅಲಾರಂ ಹೊಡೆದಿದ್ದೇ ಇಲ್ಲ ! ಇದ್ಯಾಕೆ ಅರ್ಧ ಘಂಟೆ ಮೊದಲೇ ಬಡ್ಕೊಳ್ತು ಅಂದುಕೊಂಡು ಎದ್ದೆ. ಹೊಡೆದುಕೊಂಡಿದ್ದು ಅಲಾರಂ ಅಲ್ಲ .... ಕಾಲಿಂಗ್ ಬೆಲ್ಲು !

ಕಣ್ಣುಜ್ಜಿಕೊಂಡೇ ಎದ್ದು ಹೋಗಿ ಬಾಗಿಲು ತೆಗೆಯ ಹೋದೆ. ತೆರೆದೇ ಇತ್ತು. ಬೆಚ್ಚಿದೆ !! ಸದ್ಯ, ಅಂಥಾ ಅವಾಂತರ ಏನಿಲ್ಲ. ನನ್ನಾಕೆ ರಂಗೋಲಿ ಹಾಕ್ತಿದ್ಲು. ರಂಗೋಲಿ ದಾಟಿಕೊಂಡು ಬಂದು, ತೆರೆದೇ ಇದ್ದ ಬಾಗಿಲಿನ ಕಾಲಿಂಗ್ ಬೆಲ್ ಒತ್ತಿದ ಸುಬ್ಬ’ನ ದರ್ಶನ ಬೆಳಿಗ್ಗೆ ಬೆಳಿಗ್ಗೆ. "ಹ್ಯಾಪಿ ಗಣೇಶ ಹಬ್ಬದ ಶುಭಾಶಯಗಳು ಕಣೋ" ಅಂದ ... "ಹ್ಯಾಪಿ" ಇಂದ ಶುರು ಮಾಡಿ "ಶುಭಾಶಯಗಳು" ಎಂದೂ ಹೇಳಿ ಕಲಸು ಮೇಲೋಗರ ಮಾಡಿದ್ದ ಸುಬ್ಬನನ್ನೇ ನೋಡುತ್ತಿದ್ದೆ. ಜೊತೆಗೆ "ಫೋನ್ ಮಾಡಿದ್ದೆ. ತೆಗೀಲೇ ಇಲ್ಲ" ಅನ್ನೋ ಆಕ್ಷೇಪಣೆ ಬಂತು. ಅದಕ್ಕೂ ಉತ್ತರಿಸದೆ "ಏನೋ ಇಷ್ಟು ಬೇಗ (ವಕ್ಕರಿಸಿದ್ದು) ?" ಅಂದೆ ... "ನಿನಗೇ ಅಂತ ವಾಯನ ದಾನ ಎತ್ತಿಟ್ಟಿದ್ದನ್ನ ತಂದೆ ಕಣೋ" ಅಂದ ಭೂಪತಿ ....

ಅಂದ್ರೇ? ಪೂಜೆ ಮುಗಿಸಿ ದಾನ ಕೊಡ್ಲಿಕ್ಕೆ ಬಂದಿದ್ದಾನೆ. ನಾನಿನ್ನು ಮುಖ ತೊಳೆದಿಲ್ಲ, ಫೇಸ್ಬುಕ್ ನೋಡಿಲ್ಲ. ಹೇಗೆ ತೆಗೆದುಕೊಳ್ಳೋದು? "ಏನೋ ನಿನಗೆ ಅಂಥ ಆರ್ಜಂಟು? ಹೋಗ್ಲಿ ದೇವರ ಮುಂದೆ ಇಡು, ಪೂಜೆ ಮುಗಿಸಿ ತೊಗೋತೀನಿ" ಅಂತಂದವನೇ ಬಚ್ಚಲಿಗೆ ಓಡಿದೆ. ಸ್ನಾನಾದಿ ನಿತ್ಯಕರ್ಮ ಮುಗಿಸಿ ತಲೆ ಒರೆಸಿಕೊಳ್ಳುತ್ತ ಹೊರಬಂದೆ, ಸುಬ್ಬನ ಸವಾರಿ ಅಲ್ಲೇ ಇತ್ತು. "ಸ್ನಾನ ಆಗಿದ್ರೆ, ನಮಸ್ಕಾರ ಮಾಡಿ ಹೋಗ್ತೀನೋ" ಅಂದ !!! ಅಂದ್ರೆ ಅರ್ಧ ಘಂಟೆಯಿಂದ ಇಲ್ಲೇ ಇದ್ದಾನಾ? ಹೆಂಡತಿಯ ಮುಖ ನೋಡಿದೆ. ಅವಳ ಹಣೆಯ ಮೇಲೆ ಅಕ್ಷರಗಳು ಹಾದು ಹೋದವು "ಕೂತ್ಕೋ ಅಂದ್ರೆ ಕೂತ್ಕೊಳ್ಳಿಲ್ಲ" ಅಂತ ... ಅದೂ ಆಯ್ತು ಸೇವೆ !

"ಊಟಕ್ಕೆ ಮನೆಗೆ ಬಂದು ಬಿಡೋ" ಅಂದ ... ನಾನೂ ನನ್ನಾಕೆ ಒಟ್ಟಿಗೆ ಬೆಚ್ಚಿದೆವು ! "ವರ್ಷಾವರಿ ಹಬ್ಬ ಕಣೋ. ನಮ್ ಮನೆಯಲ್ಲೇ ಹಬ್ಬದ ಊಟ ಆಗುತ್ತೆ" ಅಂತ ಹೇಳಿ ಸಾಗ ಹಾಕಿದ್ದಾಯ್ತು. ಹಿಂದೊಮ್ಮೆ ಹೀಗೇ ಆಯ್ತು "ಮನೆಗೆ ಊಟಕ್ಕೆ ಬಂದು ಬಿಡೋ" ಅಂತ ಹೇಳಿ ಹೋಗಿದ್ದ. ಪೂಜೆ, ಕಾಫಿ ಇತ್ಯಾದಿ ಎಲ್ಲ ಆಗಿ ಹನ್ನೆರಡೂವರೆಗೆ ಅವರ ಮನೆ ಬಾಗಿಲು ಬಡಿದ್ವಿ. ಸುಬ್ಬನ ಅಜ್ಜಿ ಬಾಗಿಲು ತೆರೆದು "ಓ! ಬಾಪ್ಪಾ !! ಊಟಾನೂ ಮುಗಿಸಿ ನಮಸ್ಕಾರ ಹಾಕ್ಕೊಂಡ್ ಹೋಗೋಕ್ಕೆ ಬಂದ್ಯಾ? ಬಾ. ಆ ಹು.ಮು. ಉಂಡು ಮಲಗಿದೆ. ದೇವರ ಮುಂದೆ ಮಂತ್ರಾಕ್ಷತೆ ಇದೆ. ನೀನೇ ತೊಗೋ" ಅಂತಂದು ಒಳ ನೆಡೆದರು. ಆ ಹು.ಮು ಅಜ್ಜಿಗೆ ಹೇಳಿಯೇ ಇರಲಿಲ್ಲ ನಮ್ಮನ್ನು ಊಟಕ್ಕೆ ಕರೆದಿರೋದು !!!

ಹಾಗಾಗಿ ಈಗ, ಅವನನ್ನು ಅತ್ಲಾಗೆ ಅಟ್ಟಿ, ಪೂಜೆಗೆ ಕೂತೆ. ನಲವತ್ತೈದು ನಿಮಿಷಗಳ ಪೂಜೆಯಲ್ಲಿ ನಲವತ್ತು ಸಾರಿ ಕರೆ ಮಾಡಿದ್ದ. ನಾನು ಪೂಜೆ ಮುಗಿಯೋವರೆಗೂ ಫೋನ್ ಮುಟ್ಟೋಲ್ಲ ಅಂತ ತೀರ್ಮಾನ ಮಾಡಿದ್ದೆ. ಪೂಜೆ ಮುಗಿಸಿ "ವಿಘ್ನಗಳನ್ನೆಲ್ಲ ಪರಿಹರಿಸೋ ತಂದೆ" ಅಂತ ಇಪ್ಪತ್ತೊಂದು ಬಸ್ಕಿ ಹೊಡೆದು, ಕಾಫಿ ಕುಡಿದು ಕೂತೆ. ಲ್ಯಾಪ್ಟಾಪ್’ನಲ್ಲಿ ಭಕ್ತಿಗೀತೆಗಳನ್ನು ಹಾಕಿಕೊಂಡು ಕೇಳುತ್ತ ಕೂತವನಿಗೆ ಎಷ್ಟೋ ಹೊತ್ತಿನ ಮೇಲೆ ಸುಬ್ಬನ ನೆನಪಾಯ್ತು. ಕರೆ ಮಾಡಿದ್ದ ಪಾಪಿ, ಏನು ನೋಡೋಣ ಅಂತ ಫೋನು ಕೈಗೆತ್ತಿಕೊಂಡೆ. ಪೂಜೆ ಮಧ್ಯದಲ್ಲಿ ಬಂದ ನಲವತ್ತನೇ ಕರೆ ಆದ ಮೇಲೆ ಮತ್ತೆ ಅವನಿಂದ ನೋ ಕಾಲ್ಸ್!!

ನಾನೇ ಅವನಿಗೆ ಕರೆ ಮಾಡಿದರೆ, ಫೋನು ಆಫ್ ಆಗಿದೆ. ಮನದಲ್ಲಿ ಏನೇನೋ ಯೋಚನೆಗಳು "ಬಸ್ಕಿ ಹೊಡೆಯಬೇಕಾದರೆ ಕೈಕಾಲು ಸಿಕ್ಕಿ ಹಾಕಿಸಿಕೊಂಡು ಬಿಟ್ನಾ?" "ನಮಸ್ಕಾರ ಮಾಡಬೇಕಾದರೆ ಹಾಗೇ ಮಲಗಿಬಿಟ್ನಾ?" "ಮನೆ ಮುಂದಿನ ಪೆಂಡಾಲ್’ನವರ ಶೀಲಾ-ಕಿ-ಜವಾನಿ ಹಾಡು ಹಾಕಿದ್ದಕ್ಕೆ ಜಗಳ ಆಡಿದ್ನಾ?" ಹೀಗೆ

ಮಧ್ಯಾನ್ನ ಊಟವೂ ಆಯ್ತು, ಒಂದೆರಡು ಘಂಟೆಗಳ ಸುಖ ನಿದ್ರೆಯೂ ಆಯ್ತು. ಸಂಜೆ ಕಾಫಿ ಬಸಿದುಕೊಂಡು ಒಂದು ರೌಂಡ್ ಹೊರಗೆ ಹೊರಟೆ. ಆ ನಲವತ್ತನೇ ಕಾಲ್ ಆದ ಮೇಲೆ ಇದುವರೆಗೂ ಒಂದು ಕರೆ ಇಲ್ಲ ಸುಬ್ಬನಿಂದ ಅನ್ನೋದೇ ದೊಡ್ಡ ಸೋಜಿಗ. ಸುಬ್ಬನ ಮನೆ ಕಾಲಿಂಗ್ ಬೆಲ್ ಒತ್ತುವ ಪ್ರಮೇಯವೇ ಬರಲಿಲ್ಲ. ಇಡೀ ಬಾಗಿಲಿಗೆ ಅಡ್ಡಲಾಗಿ ಅವನೇ ಕೂತಿದ್ದ. ಏನೋ ದು:ಖದಲ್ಲಿದ್ದಂತೆ ಕಂಡಿತು. ಊದಲು ಮುಖ ನೋಡಿದರೆ, ಹತ್ತನೇ ಕಡುಬು ತಿಂದ ಮೇಲೆ ಸಾಕು ಅಂತ ಅವನ ಅಜ್ಜಿ ಗದರಿದ್ದಾರೆ ಅನ್ನಿಸುತ್ತೆ. "ಏನಾಯ್ತೋ?" ಅಂದೆ ....

ಕೇಳಿದ್ದೇ ತಡ "ನಿನಗೆ ಬೆಳಿಗ್ಗೆ ಫೋನ್ ಮಾಡ್ತಾ ಇದ್ದೆ, ನೀನು ತೊಗೊಳ್ಳಿಲ್ಲ. ಆಗ ಅಜ್ಜಿ ತಣ್ಣೀರ್ ರಾಮರಾಯರ ಮನೆಗೆ ಹೋಗಿ ಬಾ ಅಂದ್ರು. ಒಂದು ಕೈಯಲ್ಲಿ ಅಜ್ಜಿ ಕೊಟ್ಟ ಎಲೆ-ಅಡಿಕೆ-ತೆಂಗುಗಳು ಹಿಡಿದು ಇನ್ನೊಂದು ಕೈಲಿ ಫೋನ್ ಹಿಡಿದುಕೊಂಡು ಹೊರಟೆ ಕಣೋ. ಆಗ ಕೈ ಜಾರಿ ಫೋನ್ ಬೀಳೋದ್ರಲ್ಲಿತ್ತು. ಅದನ್ನ ಹಿಡ್ಕೊಳ್ಳೋಣಾ ಅಂತ ಹೋದ್ರೆ ಎರಡೂ ತೆಂಗಿನಕಾಯಿಗಳು ಒಂದಾದ ಮೇಲೆ ಇನ್ನೊಂದು ಫೋನ್ ಮೇಲೆ ಬಿದ್ದು, ಫೋನ್ ಚೂರು ಚೂರಾಯ್ತು ಕಣೋ!" ಅಂತ ಅಳ ಹತ್ತಿದ.

ಅವನನ್ನ ಸಮಾಧಾನ ಮಾಡಿ ಎದ್ದು ಹೊರಬಂದೆ. 

ನೆನ್ನೆ ಫೇಸ್ಬುಕ್’ನಲ್ಲಿ ಒಂದು ಲೈಕ್ ಆದ್ರೂ ಬರಲಿ ಅಂತ ಬೇಡಿಕೊಂಡೆ. ತಕ್ಷಣ ಬಂದಿತ್ತು. ಇಂದು ಪೂಜೆ ಮಾಡಿದ ಮೇಲೆ "ವಿಘ್ನಗಳನ್ನೆಲ್ಲ ಪರಿಹರಿಸೋ ತಂದೆ" ಅಂದೆ. ನೋಡಿದ್ರೆ, ಸುಬ್ಬನ ಫೋನು  ... ಓ! ನನಗೇನೋ ಸ್ಪೆಷಲ್ ಪವರ್ ಬಂದಿದೆ ಅನ್ನಿಸುತ್ತಿದೆ. ಒಂದು ಆಶ್ರಮ ತೆಗೆದೇ ಬಿಡ್ಲೇ?

 

 

Comments

Submitted by ಗಣೇಶ Sun, 09/07/2014 - 23:19

:)))
>>"ಓ! ನನಗೇನೋ ಸ್ಪೆಷಲ್ ಪವರ್ ಬಂದಿದೆ ಅನ್ನಿಸುತ್ತಿದೆ. ಒಂದು ಆಶ್ರಮ ತೆಗೆದೇ ಬಿಡ್ಲೇ?"
-ಅನ್ನಿಸುತ್ತಿದೆ ಅಲ್ಲ, ಬಂದಿದೆ. ಆಶ್ರಮ ಪ್ರಾರಂಭಿಸಿ...ಸಲಹೆ ಬೇಕಿದ್ದರೆ ಯಾವ ಸಂಕೋಚವಿಲ್ಲದೆ ನಮ್ಮಲ್ಲಿ ಕೇಳಬಹುದು- ಅಂ.ಭಂ.ಸ್ವಾಮಿ.
॒॒॒***********
ವಿಘ್ನಕಾರಕ ಸುಬ್ಬನ ಬಗ್ಗೆ ಸೂಪರ್ ಹಾಸ್ಯಕ್ಕೆ ಧನ್ಯವಾದಗಳು.