ಯಾಕೆ ಬರೆಯುವುದಿಲ್ಲ, ತೇಜಸ್ವಿ ?

ಯಾಕೆ ಬರೆಯುವುದಿಲ್ಲ, ತೇಜಸ್ವಿ ?

ನಾಳೆ ಸೆಪ್ಟಂಬರು ಎಂಟಕ್ಕೆ ಮತ್ತೆ ತೇಜಸ್ವಿಯವರನ್ನು ನೆನಪಿಸಿಕೊಳ್ಳಲೊಂದು ನೆಪ - ಅವರ ಹುಟ್ಟು ಹಬ್ಬದ ಹೆಸರಲ್ಲಿ. ಯಾವಾಗ ತೇಜಸ್ವಿ ಹೆಸರು ಕೇಳಿದರೂ ತಣ್ಣನೆ ಕೆಲವು ಪದಗಳು ಕಣ್ಣ ಮುಂದೆ ನಾಟ್ಯವಾಡುತ್ತವೆ - ಅದು ಈ ಮೂಡಿಗೆರೆಯ ಮಾಂತ್ರಿಕ ತನ್ನ ಓದುಗ ಬಳಗಕ್ಕೆ ಹಾಕಿದ ಮೋಡಿ, ಮಾಡಿದ ಜಾದು. ಈ ಬಾರಿಯೂ ನೆನಪಿನೊಲೆಯೊಂದು ಹುಟ್ಟು ಹಬ್ಬವನ್ನು ನೆನಪಿಸುತ್ತಿದ್ದಂತೆ ತಟ್ಟನೆ ಮನಃಪಟಲದಲ್ಲಿ ಮೂಡಿದ ಹೆಚ್ಚು ಕಡಿಮೆ ಅವೇ ಪದಗಳು - 'ಮೂಡಿಗೆರೆ, ಮಾಂತ್ರಿಕ, ಕಿವಿ, ಬೇಟೆ, ಹಂದಿ, ಕಾಡು, ಶಿಕಾರಿ, ಹಕ್ಕಿ, ಹೊಲ, ಕಥೆ, ನಿಗೂಢ, ವಿಜ್ಞಾನ, ಹಾರುವ ತಟ್ಟೆ...ಇತ್ಯಾದಿ, ಇತ್ಯಾದಿ. ಈ ಪ್ರತಿಯೊಂದು ಪದದಲ್ಲೂ ಅದರ ಹಿಂದಿನ ತೇಜಸ್ವಿಯವರ ಒಂದು ಬೃಹತ್ ಕಥಾನಕಕ್ಕೆ ಕೊಂಡಿಯಾಗುವ ತಾಕತ್ತಿರುವುದು ಈ ಪದಗಳ ವಿಶೇಷ. ಅಂತೆಯೆ ಪ್ರಕೃತಿ, ಪರಿಸರದಿಂದ ಹಿಡಿದು ಭೂಗೋಳ, ವಿಜ್ಞಾನ, ಖಗೋಳ ಜ್ಞಾನವನ್ನೆಲ್ಲ ಜಾಲಾಡಿಸಿ, ಮಾನವ ತುಡಿತಗಳ ಸಾಹಸಗಾಥೆ, ವ್ಯಥೆಯ ಅನಿವಾರ್ಯತೆ - ಹೀಗೆ ಬರಹದ ಯಾವ ಪ್ರಾಕಾರಕ್ಕೂ ಸೀಮಿತಗೊಳ್ಳದೆ ಕೈ ಹಾಕಿದ ಎಲ್ಲಾ ಪ್ರಾಕಾರಗಳಲ್ಲೂ ತನ್ನದೆ ಛಾಪು ಮೂಡಿಸಿ, ತನ್ನದೆ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡ ಅಪರೂಪದ ಸಾಹಿತಿ ಪೂರ್ಣ ಚಂದ್ರ ತೇಜಸ್ವಿ. 

ತನ್ನ ಪ್ರಖರ ಬರಹಗಳಿಂದ ತಾನಿಲ್ಲದೆಯೂ ಪ್ರಸ್ತುತವಾಗುವ ಕಿಲಾಡಿ ಸಾಹಿತಿ ತೇಜಸ್ವಿ. ಹೀಗಾಗಿ ಅವರ ಕೃತಿಗಳ ಸಾಂಗತ್ಯದಲ್ಲಿ ಇನ್ನು ಅವರಿಲ್ಲವೆಂಬ ಅರಿವಿನ ಪ್ರಜ್ಞೆ ನಿಲುಕಿಗೆಟಕುವುದು ಬಹುಶಃ ಅವರೆಲ್ಲಾ ಕೃತಿಗಳನ್ನು ಓದಿ ಮುಗಿಸಿದ ಮೇಲಷ್ಟೆ - ಮತ್ತೇನಾದರೂ ಹೊಸತಿನದಿದೆಯೆ ಎಂದು ಅವರ ಹೊಸ ಬರಹಕ್ಕೆ ಹುಡುಕಿದಾಗ. ಅಲ್ಲಿಯವರೆಗೆ ಅವರಿನ್ನು ನಮ್ಮ ನಡುವಲ್ಲೆ ಜೀವಂತವಿರಬೇಕೆಂಬ ಹುಸಿ ಭ್ರಮೆಯ ಹಿಡಿತದಿಂದ ಹೊರಬರುವುದು ಕಷ್ಠ. 

ಆ ಭ್ರಮೆ, ಅವರ ಹೆಸರು ನೆನಪಾಗಿಸಿದ ಪದಗಳ ಗುಂಪು, ಪ್ರತಿ ಬರಹದಲ್ಲೂ ಏನನ್ನೊ ಶೋಧಿಸ ಹೊರಟಿದ್ದಂತೆ ಕಾಣುತ್ತಿದ್ದ ಹುಡುಕಾಟ - ಅದರಲ್ಲೂ ಹಾರುವ ತಟ್ಟೆಗಳ ಜಗದ ಗುಟ್ಟನ್ನೆಲ್ಲ ಬಿಡಿಸಬಲ್ಲ ಲೋಕಕ್ಕೆ ಹೋದರೂ, ಯಾಕಿನ್ನು ಆ ಗುಟ್ಟು ಬಿಡಿಸಿದ ವಿವರವನ್ನೆಲ್ಲಾ ಅಲ್ಲಿಂದಲೆ ರೋಚಕ ಕಥೆಯಾಗಿಸಿ ಇಲ್ಲಿಗೆ ಬರೆದು ಕಳಿಸುತ್ತಿಲ್ಲವೆಂಬ ಉದ್ದಟತನದ ಪ್ರಶ್ನೆ - ಇದೆಲ್ಲದರ ಕಲಸುಮೇಲೋಗರವಾಗಿ ಈ ತೇಜಸ್ವಿ ನೆನಪಿನ ಕವನ ಅವರ ಹುಟ್ಟು ಹಬ್ಬದ ನೆನಪಿಗೆ. 

ಯಾಕೆ ಬರೆಯುವುದಿಲ್ಲ ?
____________________________

ಮೂಡಿಗೆರೆಯ, ಕಾಡುಗಳಲಿ
ನಡು ಮಧ್ಯಾಹ್ನದ, ಬಿರು ಬಿಸಿಲಲಿ
ಕಿವಿಯ ಕಿವಿಯ, ಬೆನ್ಹಿಡಿದು
ಶಿಕಾರಿಗ್ಹೊರಟ, ಮಾಂತ್ರಿಕನ ಜಾದು ||

ಕಂಡನೆಲ್ಲೊ ಹಕ್ಕಿ, ಕೋಳಿ ಪುಕ್ಕ
ಯಾವುದೊ ಹೊಲದ, ಹಂದಿಯು ಸಖ
ಹೊತ್ತೊಡುವ ಪರಿ, ಬೆನ್ನಲಿ ಭಾರ
ದಢೂತಿಯನ್ಹೊತ್ತ, ದಢೂತಿಯ ಪ್ರವರ ||

ಯಾರದೊ ಸ್ವರೂಪ, ಬಿಚ್ಚಿಟ್ಟಂತೆ
ಕಥೆ ಬಿಚ್ಚಿ ಬೇಟೆ, ಅಂತರಾಳದ ಕಂತೆ
ಬೇಟೆಯೇನೊ, ಹುಲಿಗೆ-ಮೊಲಕೆ
ಬೇಟೆಯಾದವರ ಪಾಡು, ಓದಿದ ಜನಕೆ ||

ಬರೆವನೇನು ಬದುಕ, ತಾನೆ ಅಜ್ಞಾನಿ 
ಬದುಕನೆ ಮಗುವಾಗಿಸಿಬಿಟ್ಟನಲ್ಲಾ, ವಿಜ್ಞಾನಿ
ಸ್ಕೂಟರ ಬಾಣಲಿಗೆ, ಬಿಚ್ಚಿಟ್ಟನೆ ಭೂಪ
ಇಲ್ಲವತರಿಸಿದದ್ಯಾವ, ದೇವತೆಯ ಅಭಿಶಾಪ ||

ಶಾಪವೊ ವರವೊ, ನೀನ್ಹೊರಟೆ
ಹುಡುಕಲಿತ್ತೇನು ಅಲ್ಲಿ, ಹಾರಾಡುವ ತಟ್ಟೆ?
ಈಗರಿವಾಗಿರಬೇಕಲ್ಲಾ, ಸತ್ಯವೆಲ್ಲ -
ಅಲ್ಲಿಂದಲೆ ಯಾಕೆ, ನೀ ಬರೆಯುವುದೆ ಇಲ್ಲಾ? ||

------------------------------------------------------------------------------------
ನಾಗೇಶ ಮೈಸೂರು,  ಸಿಂಗಪುರ
-------------------------------------------------------------------------------------
 

Comments

Submitted by nageshamysore Mon, 09/08/2014 - 04:39

In reply to by ಗಣೇಶ

ಗಣೇಶ್ ಜಿ ನಮಸ್ಕಾರ, ಅಲ್ಲೂ ನಮ್ಮ ಇಂಟರ್ನೆಟ್ ಕನೆಕ್ಷನ್ ಸಿಗೊ ಹಾಗಿದ್ರೆ, ಸಂಪದಕ್ಕೆ ಬಂದು  ಕಾಮೆಂಟ್ ನೋಡಿ ಅಲ್ಲಿಂದಲೆ ಬರೆಯೋಕೆ ಶುರು ಹಚ್ಕೊಂಡ್ರು ಹಚ್ಕೊಂಡ್ರೆ! ಸದ್ಯಕ್ಕೆ ಇವತ್ತಿಗೆ ಇಲ್ಲಿಂದ್ಲೆ ಇನ್ನೊಂದು ಸಾರಿ ಹ್ಯಾಪಿ ಬರ್ತಡೆ ಹೇಳಿಬಿಡೋಣ ಬಿಡಿ :-)

Submitted by H A Patil Tue, 09/09/2014 - 20:54

ನಾಗೇಶ ಮೈಸೂರು ರವರಿಗೆ ವಂದನೆಗಳು
ತೇಜಸ್ವಿ ಕುರಿತು ಬರೆದ ಲೇಖನ ಮತ್ತು ಕವನ ಸೊಗಸಾಗಿ ಮೂಡಿದೆ, ಅವರ ಬದುಕು ಮತ್ತು ಬರಹಗಳ ಕುರಿತ ಅವಲೋಕನ ಚೆನ್ನಾಗಿದೆ, ಧನ್ಯವಾದಗಳು ಸರ್.

Submitted by nageshamysore Wed, 09/10/2014 - 03:24

In reply to by H A Patil

ಹಿರಿಯ ಪಾಟೀಲರಿಗೆ ನಮಸ್ಕಾರಗಳು. ಆರಂಭಿಕ ಹಂತದಿಂದ ವಿಭಿನ್ನವೆನಿಸಬಹುದಾದ ಸಾಹಿತ್ಯ ಲೋಕ ಪ್ರಭೇದಕ್ಕೆ ಕಾಲಿಡಿಸುವಲ್ಲಿ, ತೇಜಸ್ವಿಯವರ ಬರಹಗಳು ಸಾಕಷ್ಟು ಪ್ರಭಾವ ಬೀರಿದ ಕಾರಣ ಒಂದು ರೀತಿ ಆ ಪಾತ್ರಗಳು, ಕಥಾನಕಗಳು ಮತ್ತು ಸ್ವಯಂ ಅವರ ಜೀವನ ಶೈಲಿ ಅವರ ನೆನಪಿನೊಡನೆ ಬೇರ್ಪಡಿಸಲಾಗದಂತೆ ಮಿಳಿತವಾಗಿ ಹೋಗಿವೆ. ಅವುಗಳ ಪ್ರೇರಣೆಯಿತ್ತ ಕಿರು ತುಣುಕು ಲಹರಿ ಈ ಕವನಕ್ಕೂ ಸ್ಪೂರ್ತಿ. ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.