ಕಥೆ: ಪರಿಭ್ರಮಣ..(54)
( ಪರಿಭ್ರಮಣ..53ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
'ಅಂದರೆ ಧ್ಯಾನ, ಚಿಂತನೆ ಬಿಟ್ಟು ಮತ್ತೇನೊ ಮಾಡಬೇಕಿರುವಂತೆ ಕಾಣುತ್ತಿದೆ...?' ಏನಿರಬಹುದೆಂಬ ಆಲೋಚನೆಯಲ್ಲೆ ಎತ್ತಲೊ ನೋಡುತ್ತ ನುಡಿದಿದ್ದ ಶ್ರೀನಾಥ.
' ನಿಜ ಹೇಳಬೇಕೆಂದರೆ ಆ ಕಾರ್ಯಕ್ರಮದ ಯಾದಿ ಈಗಾಗಲೆ ಸಿದ್ದವಾಗಿ ಹೋಗಿದೆ ಕುನ್. ಶ್ರೀನಾಥಾ... ಮೂರನೆ ದಿನ ಕಳೆಯಲಿ ಆಮೇಲೆ ಹೇಳುತ್ತೇನೆ..' ಎಂದರು ಮಾಂಕ್ ಸಾಕೇತ್. ಅವರ ದನಿಯಲ್ಲಿದ್ದುದ್ದು ತೆಳು ಹಾಸ್ಯವೊ, ಛೇಡಿಕೆಯೊ ಅರಿವಾಗದ ಗೊಂದಲದಲ್ಲೆ ಶ್ರೀನಾಥ,
'ಅದನ್ನು ಈಗಲೆ ಹೇಳಬಾರದ್ದೆಂಬ ನಿಯಮವಿದ್ದರೆ ಹೇಳುವುದು ಬೇಡ..ತಿಳಿಯುವ ಕುತೂಹಲವೇನೊ ನನಗಿದೆಯಾದರೂ ಈಗಲೆ ತಿಳಿಯಬೇಕೆಂಬ ಅವಸರವೇನೂ ಇಲ್ಲಾ..' ಎಂದ.
' ನಿನಗೆ ಕೇಳಬೇಕೆನ್ನುವ ಅವಸರವಿಲ್ಲ ಎಂದಾದರೆ ಈಗ ಹೇಳುವುದರಿಂದ ತೊಂದರೆಯೂ ಇಲ್ಲವೆಂದು ಹೇಳಬಹುದು...ಸರಿ ಹೇಳಿಯೆ ಬಿಡುತ್ತೇನೆ ಬಿಡು...'
' ಆಹಾ...?' ನಂಬದವನಂತೆ ತಲೆಯಾಡಿಸುತ್ತ ನಕ್ಕ ಶ್ರೀನಾಥ. ಆದರೆ ಮಾಂಕ್. ಸಾಕೇತರು ಹೇಳಿಯೆಬಿಡಲು ನಿರ್ಧರಿಸಿಕೊಂಡೆ ಬಂದಂತಿತ್ತು.
' ಕುಟಿಯಲ್ಲಿರುವ ಈ ಮೂರು ದಿನಗಳ ಹಾಗೆ ಆ ಮಿಕ್ಕೆರಡು ದಿನಗಳಲ್ಲು ಮಾಮೂಲಿನಂತೆ ವನ್ಯಾಶ್ರಮಧಾಮದ ಎಲ್ಲಾ ನಿಯಮವೂ ಅನ್ವಯವಾಗುತ್ತವೆ.. ಆದರೆ...'
'ಆದರೆ ? ಆದರೆ ಏನು?'
' ಆದರೆ ಆ ಎರಡು ದಿನ ನೀನು ಮಾಮೂಲಿನಂತೆ ಕುಟಿಯಲ್ಲಿ ವಾಸ ಮಾಡುವಂತಿಲ್ಲ...ಯಾವುದೆ ಡಾರ್ಮೇಟರಿಯಾಗಲಿ, ಅತಿಥಿ ಗೃಹವನ್ನಾಗಲಿ ಬಳಸುವಂತಿಲ್ಲ...'
' ಮತ್ತೇನು ಮಾಡಬೇಕು ಮಾಸ್ಟರ..? ಹಾಗಾದರೆ ನಾನಿರಬೇಕಾದ್ದು ಎಲ್ಲಿ?'
'ಕುನ್. ಶ್ರೀನಾಥ..ನಿನ್ನ ಈ ತಾತ್ಕಾಲಿಕ ಸ್ವಯಂ ಪರಿಪೂರ್ಣತ್ವದತ್ತ ನಡೆಸಲು ಇದು ಬಲು ಮುಖ್ಯವಾದ ಅಂಶ.. ಅದಕ್ಕೆ ಗಮನವಿಟ್ಟು ಕೇಳು.. ನಿನ್ನ ಅಂತರ್ಮಥನದಲ್ಲಿ ನಿನಗೆಷ್ಟೆ ಸತ್ಯ, ಗ್ರಹಿಕೆಗೆ ಸಿಕ್ಕಿದರೂ ಈ ವನ್ಯಾಶ್ರಮಧಾಮವನ್ನು ದಾಟಿ ಹೊರಗೆ ಕಾಲಿಡುತ್ತಿದ್ದ ಹಾಗೆಯೆ ಆ ಹೊರಗಿನ ಪರಿಸರ ಇಲ್ಲಿಯದೆಲ್ಲವನ್ನು ಮಸುಕಾಗಿಸಿ ವಾಸ್ತವ ಜಗಕ್ಕೆಳೆದುಬಿಡುತ್ತದೆ.. ಅದು ಆದಾಗ, ಬರಿ ಸ್ವಲ್ಪ ಸಮಯದವರೆಗಷ್ಟೆ ಇಲ್ಲಿನ ಅಂತರ್ಮಥನದ ಪ್ರಕ್ಷೇಪ ತನ್ನ ಕಾಂತ ಕ್ಷೇತ್ರದ ಪ್ರಭಾವ ಬೀರಿ ಎಚ್ಚರದಲ್ಲಿಟ್ಟಿರಲು ಯತ್ನಿಸುತ್ತಿರುತ್ತದೆ.. ಆದರೆ ಆ ನಿರಂತರ ಬಾಹ್ಯದೊತ್ತಡದಲ್ಲಿ ಈ ಬೆರಗು ಬಹುಕಾಲ ನಿಲ್ಲುವುದಿಲ್ಲ.. ಹೊದಿಕೆ ಕಳಚಿದ ಗೋಡೆಯ ಚಕ್ಕೆಗಳಂತೆ ಉದುರಿ ಹೋಗುತ್ತಾ, ನೋಡು ನೋಡುತ್ತಲೆ ಮಾಯವಾಗಿಬಿಡುತ್ತದೆ..' ನಿಧಾನವಾಗಿ ಪದ ಜೋಡಿಸುತ್ತ ನುಡಿದಿದ್ದರು ಮಾಂಕ್ ಸಾಕೇತ್.
ಶ್ರೀನಾಥನೂ ಅದನ್ನು ಊಹಿಸಬಲ್ಲವನಾಗಿದ್ದ. ಅವನಲ್ಲಾಗಲೆ ಈ ಪ್ರಶ್ನೆ ಹಲವಾರು ಬಾರಿ ಬಂದು ಕಾಣಿಸಿಕೊಂಡಿತ್ತು. ಅದರ ನೆನಪಾಗಿ, 'ಹೌದು ಮಾಸ್ಟರ.. ನನಗೂ ಇದೊಂದು ಸಂದೇಹವಾಗಿ ಕಾಡುತ್ತಲೆ ಇದೆ... ಈ ಕಲಿಕೆಯನ್ನು, ಗಳಿಕೆಯನ್ನು ನಿರಂತರವಾಗಿಸುವುದು ಹೇಗೆ? ಎಂದು - ಅದೂ ಇಲ್ಲಿನ ವಾಸವಿಲ್ಲದೆ ಇರುವಾಗ..?'
' ಕುನ್. ಶ್ರೀನಾಥ.. ಅದು ನಿರಂತರವಾಗಬೇಕೆಂದರೆ ನೀನೂ ಇಲ್ಲೆ ಇದ್ದು ಬಿಡುವ ಭಿಕ್ಕುವಾದರಷ್ಟೆ ಸಾಧ್ಯ.. ನಿನ್ನ ಅನುಮಾನವೂ ನಿಜವೆ... ಇಲ್ಲಿಂದಾಚೆಗೆ ಹೋದಂತೆ ಕಲಿತದ್ದನ್ನು ಕಾಪಿಡುವುದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯೆ.. ಆದರೆ ನಿರಂತರವಾಗಿ ಕಾಪಿಡುವ ವಿಧಾನ ಇರದಿದ್ದರೂ, ಸಾಕಷ್ಟು ಧೀರ್ಘ ಕಾಲ ಉಳಿದಿರುವಂತೆ, ಮತ್ತಷ್ಟು ಸಶಕ್ತಗೊಳಿಸಲಂತೂ ಸಾಧ್ಯವಿದೆ...'
'ಅದು ಹೇಗೆ ಮಾಸ್ಟರ..?'
'ಅದರ ಸಲುವಾಗಿಯೆ ಈ ಎರಡು ದಿನದ ತುಸು ಕಠಿಣ ಪ್ರಕ್ರಿಯೆಯ ಪ್ರಸ್ತಾರವನ್ನೆತ್ತಿದ್ದು...'
' ಅಂದರೆ, ಮೂರು ದಿನದ ಮಾನಸಿಕ ದಂಡನೆಯಾದಂತೆ ಮತ್ತೆರಡು ದಿನ ದೈಹಿಕವಾಗಿ ಇನ್ನಷ್ಟು ದಂಡಿಸಿ, ಅಳಿದುಳಿದ 'ಅಹಂ' ಎಲ್ಲವನ್ನು ಮಣಿಸಿ, ನಾಶಪಡಿಸಿ ಮನಸತ್ವದ ಮಟ್ಟದಲ್ಲಿ ಗ್ರಹಿಸಿದ್ದನ್ನು ತನುವಿನ ಕಣಕಣದತ್ತ ದೂಡುವ 'ಭೌತಿಕ ಪ್ರಜ್ಞೆಯ ದಂಡನಾ ಪ್ರಕ್ರಿಯೆ' ಯೆನ್ನಬಹುದೆ ಮಾಸ್ಟರ..?' ತನಗನಿಸಿದ ಊಹೆಯನ್ನೆ ತುಸು ಪ್ರೌಢ ಪರಿಧಿಯಲ್ಲಿ ಮಂಡಿಸಲು ಯತ್ನಿಸುತ್ತ ನುಡಿದ ಶ್ರೀನಾಥ.
ಅವನ ಮಾತಿನಿಂದ ಸಂಪ್ರೀತರಾಗಿ, ಅವನತ್ತ ಮೆಚ್ಚುಗೆಯ ನೋಟ ಬೀರುತ್ತ, 'ಭೇಷ್.. ಸೊಗಸಾಗಿ ಗ್ರಹಿಸಿದ್ದೀಯಾ..' ಎಂದರು.
'ಸರಿ ಸರಿ.. ಇನ್ನು ನೀರಿಗಿಳಿದಾ ಮೇಲೆ ಚಳಿಯೇನು, ಮಳೆಯೇನೂ? ಏನೇನು ಆಗಲಿದೆಯೊ ಎಲ್ಲಾ ಹೇಳಿ ಬಿಡಿ.. ಮಾನಸಿಕವಾಗಿಯಾದರೂ ಸಿದ್ದನಾಗಿಬಿಡುತ್ತೇನೆ ' ಎಂದ ಶ್ರೀನಾಥ.
ಮಾಂಕ್ ಸಾಕೇತರು ಮುಗುಳ್ನಕ್ಕು, ' ಅಮಿತಾಭ...! ಸರಿ ..ಆ ಎರಡು ದಿನ ನೀನು ಕುಟೀರದತ್ತ ತಲೆ ಹಾಕುವಂತಿಲ್ಲ.. ಮತ್ತು ಮೊದಲ ದಿನ ಪೂರ್ತಿ ನಿನ್ನ ಕೆಲಸ ವನ್ಯಾಶ್ರಮಧಾಮದ ಹೆಬ್ಬಾಗಿಲಿನಿಂದ ಪ್ರಾರ್ಥನಾ ಮಂದಿರ, ದೇಗುಲದ ಎಲ್ಲಾ ಹಾದಿಗಳ ಮೇಲ್ವಿಚಾರಣೆ... ಆ ಎರಡು ದಿನ ಮಾಂಕುಗಳೆಲ್ಲ ಬೇರೆಲ್ಲೊ ಹೋಗುವ ಕಾರಣ ಅದರ ಉಸ್ತುವಾರಿಗೆ ಯಾರೂ ಇರುವುದಿಲ್ಲ.. ನೀನು ಸ್ವತಃ ಕೈಯಾರೆ ಪೊರಕೆ ಹಿಡಿದು ದಿನವಿಡಿ ಆ ಎಲ್ಲಾ ಹಾದಿಗಳನ್ನು ಸ್ವಚ್ಛಗೊಳಿಸಬೇಕು ಬೇರಾರ ಸಹಾಯವೂ ಇಲ್ಲದಂತೆ. ಎಷ್ಟು ಹೊತ್ತು ಹಿಡಿದರೂ ಸರಿ, ನಿನಗೆ ಬಿಟ್ಟಿದ್ದು. ನಾನೊಂದು ನಕ್ಷೆ ಕೊಟ್ಟು ಹೋಗಿರುತ್ತೇನೆ ಅದರನುಸಾರ ಎಲ್ಲವನ್ನು ವಾಕವಾಗಿ ಶುದ್ಧಿಗೊಳಿಸಬೇಕು.... ಇದೆಲ್ಲ ದಿನದೊಳಗೆ ಮುಗಿಸಿದರೆ ರಾತ್ರಿ ಕುಟೀರದಲ್ಲಿ ಬಂದು ಮಲಗಿ ನಿದ್ದೆ ಮಾಡಲಷ್ಟೆ ಅಡ್ಡಿಯಿಲ್ಲ...'
' ಅಲ್ಲಿಗೆ ಆ ದಿನದ ನಿದ್ದೆ ಖೋತಾ ಎಂದೆ ಲೆಕ್ಕ..' ಆ ಅಗಾಧ ವಿಸ್ತಾರದ ಅರಿವಿದ್ದ ಶ್ರೀನಾಥ ಮೆಲುದನಿಯಲ್ಲೆ ಮಾರ್ನುಡಿದಿದ್ದ ತನಗೆ ಹೇಳಿಕೊಂಡಂತೆ. ಅದನ್ನು ಕೇಳಿಸಿಕೊಳ್ಳದೆ ಮುಂದುವರೆದಿದ್ದ ಮಾಂಕ್ ಸಾಕೇತರು ನುಡಿದಿದ್ದರು..
' ಇನ್ನು ಅದರ ಮುಂದಿನ ದಿನವಾದ ಐದನೆ ದಿನ ನಿನ್ನ ಕೆಲಸ 'ಮುನ್' ಹೊಳೆಯ ದಂಡೆಯಲ್ಲಿ... ಅಲ್ಲಿಂದ ಸ್ವಲ್ಪ ದೂರದಲ್ಲೊಂದು ಪುಟ್ಟ ಹೂ ಹಣ್ಣು ತರಕಾರಿಗಳ ತೋಟವಿದೆ. ಅದಕ್ಕೆಲ್ಲ ನೀರು ಹೊಂದಿಸಲೆಂದು ಅಲ್ಲೊಂದು ಹೊಂಡವನ್ನು ಮಾಡಲಾಗಿದೆ... ಆದರೆ ಅದರ ನೀರು ಮಾತ್ರ ಹೊಳೆಯಿಂದಲೆ ಬರಬೇಕು.. ಆ ದಿನ ನಿನ್ನ ಕೆಲಸ ಆ ಹೊಂಡಕ್ಕೆ ನೀರು ತುಂಬಿಸುವುದು..ಯಾವ ವಿಧಾನದಲ್ಲಾದರೂ ಸರಿ...ಅಲ್ಲೂ ಬೇಗ ಮುಗಿದರೆ ಕುಟೀಗೆ ಬಂದು ನಿದ್ರಿಸಬಹುದು...'
' ....!'
' ಈ ಎಲ್ಲಾ ಹೊತ್ತಲ್ಲೂ ಮನಸು ಮಾತ್ರ ಮೂರು ದಿನದ ಸಂಶೋಧನೆಯ ಫಲಿತವನ್ನೆ ಮಥಿಸುತ್ತ ಚಿಂತಿಸುತ್ತಾ ಇರಬೇಕು...ಏನೇನು ಹೊಳೆಯುವುದೊ ಅದನ್ನೆಲ್ಲ ಜೀರ್ಣಿಸಿಕೊಳ್ಳುತ್ತ...'
'ಸರಿ ಅರ್ಥವಾಯಿತು.. ಮಾಸ್ಟರ...'
' ಅದರ ಮರುದಿನ ಮತ್ತೆ ಕುಟಿ ವಾಸಕ್ಕೆ ವಾಪಸ್ಸಾದರೂ ಅದು ಪೂರ್ಣ ಪ್ರತಿಫಲನದ ದಿನ.. ಎಲ್ಲದರ ಸಾರವನ್ನು ನೀನೆ ಗ್ರಹಿಸಿ ಮನದಲ್ಲಿ ಕಟ್ಟಿಕೊಂಡು, ಮುಂದಿನ ನಿಖರ ಹೆಜ್ಜೆಗಳೇನೇನು ಎಂದು ಖಚಿತವಾಗಿ ನಿರ್ಧರಿಸಿಕೊಂಡು ಸಿದ್ದನಾಗಿಬಿಡಬೇಕು.. ಅದೆಲ್ಲ ಅಂತಿಮ ಸಿದ್ದತೆಯ ತರುವಾಯ ಅದರ ಮರುದಿನ - ಅಂದರೆ ಕೊನೆಯ ದಿನ ಇಲ್ಲಿಂದ ಹೊರಡಬೇಕು ಏನೂ ಭಾರವಿಲ್ಲದ ಸ್ಥಿತಿಯಲ್ಲಿ...'
'ಏನೂ ಭಾರವಿಲ್ಲದ ಸ್ಥಿತಿಯಲ್ಲಿ' ಎನ್ನುವ ಮಾತಿಗೆ ಒತ್ತುಕೊಟ್ಟು ನುಡಿಯುತ್ತ ನುಡಿದ ಅವರ ಮಾತಿನ ಗೂಡಾರ್ಥದ ಅರಿವಾದವನಂತೆ ಒಪ್ಪಿಗೆಯಲ್ಲಿ ತಲೆಯಾಡಿಸಿದ್ದ ಶ್ರೀನಾಥ..
' ಎಲ್ಲವೂ ಸರಿಯಾಗಿ ಅಂದುಕೊಂಡಂತೆ ನಡೆದರೆ ಆ ಕೊನೆಯ ದಿನ ನೀನೊಂದು ಅಲೌಕಿಕ ಅನುಭೂತಿಯ, ಅವರ್ಣನೀಯ ಮಟ್ಟವನ್ನು ಮುಟ್ಟಿದ ಸ್ಥಿತಿಯಲ್ಲಿರಬೇಕು - ಭೌತಿಕ ಮತ್ತು ಮಾನಸಿಕವಾಗಿ. ಆ ಸ್ತರವನ್ನು ಮುಟ್ಟಿದಾಗ ಯಾರೂ ಹೇಳದಿದ್ದರೂ ನಿನಗೆ ಅರಿವಾಗುತ್ತದೆ ಏನೊ ಬದಲಾದ ಸ್ಥಿತಿ ಪ್ರಕಟವಾಗಿದೆಯೆಂದು... ಆದರೆ ಆ ಸ್ಥಿತಿಗೆ ತಲುಪಲು ಬೇಕಾದ ಬಹು ಮುಖ್ಯ ಪೂರ್ವಾನುಸಂಧತೆಯೆಂದರೆ ಪರಿಶುದ್ಧವಾದ ಮಾನಸಿಕ ಮತ್ತು ಭೌತಿಕ ವೇದಿಕೆ.. ಪರಿಪೂರ್ಣ ಪರಿಶುದ್ಧತೆಯಿದ್ದಷ್ಟು ನಿನಗಾಗುವ ಅನುಭವದ ತೀವ್ರತೆ ಗಾಢವಾಗಿರುತ್ತದೆ..ಅದನ್ನು ಸಾಧಿಸಲೆಂದೆ ಈ ಎರಡು ದಿನದ ಭೌತಿಕ ಶ್ರಮದ ವಿಚಾರವನ್ನು ಪ್ರಯೋಗಿಸುತ್ತಿರುವುದು - ಮಾನಸಿಕ ಪರಿಶುದ್ಧತೆ, ಸ್ವಚ್ಚತೆಯ ಧ್ಯಾನದ ಜತೆಗೆ...'
' ಅರ್ಥವಾಯಿತು ಮಾಸ್ಟರ... ಒಟ್ಟಾರೆ ಈ ಐದು ದಿನಗಳಲ್ಲಿ ನಾನ್ಯಾವ ಮಟ್ಟ ಮುಟ್ಟಿರುತ್ತೇನೆಂಬ 'ರಿಪೋರ್ಟ್ ಕಾರ್ಡ್' ಆ ದಿನ ಸಿಗಬೇಕು.., ಅಲ್ಲವೆ? ಆದರೆ ಒಂದು ಅನುಮಾನ....'
' ಕೇಳು ಕುನ್. ಶ್ರೀನಾಥ...ಏನು ಅನುಮಾನ..?'
' ನೀವು ಹೇಳುತ್ತಿರುವ ಪರಮ ಪರಿಶುದ್ಧಿಯ ಹಂತ ಅಥವ ಸ್ಥಿತಿ, ನಿಮ್ಮ ದ್ವಂದ್ವತ್ವದ ಸಿದ್ದಾಂತದ ನಿಯಮಕ್ಕೆ ಬದ್ಧವಾಗಿರುತ್ತದೆಯೆ? ಅರ್ಥಾತ್ ಒಳಗಿನ ಪರಿಶುದ್ಧತೆಯ ಮಟ್ಟ ಹೆಚ್ಚುತ್ತಾ ಹೋದಂತೆಲ್ಲ ಅದರ ವಿರುದ್ಧಾರ್ಥಕ ಶಕ್ತಿಯಾದ ಅಪರಿಶುದ್ಧತೆಯೂ ಬಿಡುಗಡೆಯಾಗುತ್ತ ಹೋಗಬೇಕಲ್ಲವೆ ಸಮಾನ ಭೂಮಿಕೆಯಲ್ಲಿ...?'
' ನಿನ್ನ ಮಾತು ನಿಜ ಕುನ್. ಶ್ರೀನಾಥ..ನನಗೆ ಹೆಮ್ಮೆಯಾಗುತ್ತಿದೆ ಈ ಸಿದ್ದಾಂತದ ಆಳವನ್ನು ನೀನರಿತುಕೊಂಡ ಬಗೆಗೆ.. ಇದಕ್ಕೆ ಉತ್ತರಿಸುವುದು ಅಷ್ಟು ಸರಳ, ಸುಲಭ ವಿಚಾರವಲ್ಲ... ಆದರೆ ನಿನ್ನ ವಾರವೊಂದರ ಮಟ್ಟಿಗಿನ ವಾಸದ ಹಿನ್ನಲೆಯಲ್ಲಿ ಪರಿಗಣಿಸಿ ವಿಶ್ಲೇಷಿಸುವುದಾದರೆ ತೀರಾ ಕಠಿಣವೂ ಅಲ್ಲವೆನ್ನಬಹುದು. ಈ ಧ್ಯಾನದ ಸಾಧನೆಯನ್ನು ಕೇವಲ ಒಂದು ವಾರವೆ ಆದರೂ ಈ ಪ್ರಕೃತಿಯ, ನಿಸರ್ಗ ಧಾಮದ ಮಡಿಲಲ್ಲಿ ನಡೆಸುವ ಉದ್ದೇಶವೆ ಈ ರೀತಿಯಲ್ಲಿ ಬಿಡುಗಡೆಯಾದ ಸಂವಾದಿ ಶಕ್ತಿಗಳನ್ನು ಸುತ್ತಲಿನ ಪರಿಸರದ ಅಪ್ರತಿಮ ಶಕ್ತಿಗಳು ಆಪೋಶಿಸಿ ಹೀರಿಕೊಂಡುಬಿಡಲಿ ಎಂದೆ. ನೈಜ ಪರಿಶುದ್ಧ ನಿಸರ್ಗದ ಅಪಾರ ಶಕ್ತಿ ಎಲ್ಲರಿಗೂ ತಿಳಿದಿರುವುದಿಲ್ಲ ಕುನ್. ಶ್ರೀನಾಥ, ಯಾಕೆಂದರೆ ಅದರ ಮಡಿಲಿನ ಮಗುವಾಗಿದ್ದಾಗ ಎಲ್ಲವೂ ಸಹಜ ರೀತಿಯಲ್ಲಿಯೆ ನಡೆಯುವಂತೆ ಕಾಣುವುದರಿಂದ ಅದರ ಪರಿಣಾಮ ಎದ್ದು ಕಾಣಿಸುವ ರೀತಿಯಿರುವುದಿಲ್ಲ. ನೀನಿಲ್ಲಿ ಇರುವ ಪ್ರತಿ ಕ್ಷಣವೂ, ನೀನಿಲ್ಲಿ ಮಾಡುವ ಪ್ರತಿ ಚಟುವಟಿಕೆಯೂ ನಿನಗರಿವಿಲ್ಲದಂತೆಯೆ ನಿನ್ನ ವಿಷ ಕಲ್ಮಷ ಧಾತುವನ್ನು ಹೊರ ಹಾಕುತ್ತಿರುತ್ತದೆ ಸುತ್ತಲ ಪರಿಸರಕ್ಕೆ... ಆದರೆ ನಿಯತಿಯ ಸಮೀಕರಣದಲ್ಲಿ ಆ ವೈಷಮ್ಯವನ್ನೆ ಮೂಲ ಸರಕಾಗಿಸಿಕೊಂಡು ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಅದೆಷ್ಟೊ ಪ್ರಕೃತಿ ಸಹಜ ಕಾರ್ಯಾಗಾರಗಳು ನಿರಂತರವಾಗಿ ಕಾರ್ಯನಿರತವಾಗಿರುವುದರಿಂದ, ಅವುಗಳನ್ನು ಅದೇ ರೂಪದಲ್ಲಿ ಇರಲು ಬಿಡದೆ ನಿರ್ಹಾನಿಕಾರಕವನ್ನಾಗಿ ಪರಿವರ್ತಿಸಿಬಿಡುತ್ತದೆ.. ಹೀಗಾಗಿಯೆ ನಿನ್ನ ಸಮತೋಲನದ ಸಮೀಕರಣದಲ್ಲಿ ಪರಿಶುದ್ಧತೆಯ ಅಳತೆ ಕ್ರಮಕ್ರಮೇಣ ಏರುತ್ತಲೆ ಹೋಗುತ್ತದೆ... ನಿನ್ನ ಭಾಷೆಯಲ್ಲಿಯೆ ವಿವರಿಸುವುದಾದರೆ ಧ್ಯಾನ ಮುಖೇನ ಪ್ರಾಪ್ತವಾಗುವುದು ಸಾತ್ವಿಕ ಶಕ್ತಿಯ ಬಲ. ದೇಹ ದಂಡನೆಯ ಮೂಲಕ ನೀನು ಹಣಿಯಲು ಯತ್ನಿಸುವುದು ರಾಜಸ ಶಕ್ತಿಯ ಹಮ್ಮನ್ನ. ಸುತ್ತಲ ಪರಿಸರ ತಾಮಸ ಶಕ್ತಿಯ ನಿಗ್ರಹಕ್ಕೆ ಪೂರಕವಾಗಿ ದುಡಿಯುತ್ತದೆ.. ಈ ಪ್ರಕ್ರಿಯೆ ನಡೆಯುವಾಗಲೆ ಬಲವಾಗುತ್ತಿರುವ ಸಾತ್ವಿಕ ಶಕ್ತಿ ಎರಡರ ನಡುವೆ ಸಮತೋಲಿಸುವ ಸೇತುವೆಯಂತೆ ಎರಡನ್ನು ಪರಸ್ಪರ ವಿಕರ್ಷಿಸಿಕೊಳ್ಳುತ್ತ ತನ್ನ ಕೇಂದ್ರದಿಂದ ದೂರವಿರುವಂತೆ ಕಾವಲಾಗುತ್ತದೆ. ಅದರ ಬಲ ಎಷ್ಟು ತೀವ್ರವಿರುವುದೊ ಅಷ್ಟರಮಟ್ಟಕ್ಕೆ ನಿನ್ನ ಸಾಧನೆಯ ಮಟ್ಟವೂ ಏರಿದಂತೆ..'
'ಅರ್ಥವಾಯಿತು ಮಾಸ್ಟರ... ಆದರೆ ಆ ಮಟ್ಟದಲ್ಲಿ ನಿಕ್ಷೇಪಗೊಂಡ ಗಳಿಕೆ ಅದೇಕೆ ನಿರಂತರವಾಗುಳಿಯುವುದಿಲ್ಲ? ಅದು ಒಂದು ರೀತಿಯ ಮೋಸವಲ್ಲವೆ?'
' ಇಲ್ಲ ಕುನ್. ಶ್ರೀನಾಥಾ.. ನೀನು ಸೂಕ್ಷ್ಮವಾಗಿ ಗಮನಿಸಿದರೆ ನಿನಗೆ ಅರಿವಾಗುತ್ತದೆ.. ಏನು ಕಾರಣವೆಂದು. ನೀನಿಲ್ಲಿಂದಾಚೆಗೆ ಹೋದ ಮೇಲೆ ಈ ಸಾತ್ವಿಕತೆಯನ್ನು ಪ್ರೇರೇಪಿಸುವ ಸಹಜ ನಿಸರ್ಗ ವಾತಾವರಣ ಸದಾ ಇರುವುದಿಲ್ಲ. ಜತೆಗೆ ನಿರಂತರವಾಗಿ ನಡೆಯುವ ಈ ಪ್ರಕ್ರಿಯೆಯಲ್ಲಿ ನಿನ್ನಲ್ಲಿ ಹೊಸ ಪರಿಶುದ್ಧ ಸಾತ್ವಿಕ ಶಕ್ತಿ ಉದ್ಭವವಾಗುತ್ತಿದ್ದ ಹಾಗೆ ಅದರ ಪರ್ಯಾಯ ರಾಜಸ ಮತ್ತು ತಾಮಸಗಳು ಸೃಜಿಸಲ್ಪಡುತ್ತಲೆ ಇರಬೇಕಲ್ಲವೆ? ಹೀಗೆ ಹೊಸದಾಗಿ ಬಿಡುಗಡೆಯಾದಂತೆ, ದಿನದ ಹೆಜ್ಜೆ ಹೆಜ್ಜೆಯಲ್ಲೂ ರಾಜಸದ ಗರ್ವ ತನ್ನ ಚಳಕವನ್ನು ತೋರಿಸುತ್ತ ತನ್ನನ್ನು ತಾನೆ ಶೇಖರಿಸಿಕೊಳ್ಳುತ್ತ ಹೋಗುತ್ತದೆ.. ಅದೆ ಪ್ರಕಾರ ತಾಮಸವೂ ತನ್ನ ಬಲವನ್ನು ವೃದ್ಧಿಸಿಕೊಳ್ಳುತ್ತ ಹೋಗುತ್ತದೆ.. ಆದರೆ ಹೀಗೆ ಬಲವಾಗುತ್ತಿರುವ ಅವುಗಳ ನೇತಾತ್ಮಕತೆಯನ್ನು ವಿಸರ್ಜಿಸುವ ಮತ್ತು ಘಾತುಕವಾಗುವ ಮೊದಲೇ ಹೀರಿಕೊಂಡುಬಿಡುವ ನಿಸರ್ಗ ಸಹಜ ಪರಿಸರವಾದರೂ ಎಲ್ಲಿರುತ್ತದೆ ಅಲ್ಲಿ? ಅವುಗಳ ಬಲ ವರ್ಧನೆಯಾದಂತೆಲ್ಲ ಅದನ್ನು ನಿಗ್ರಹಿಸುವ ಸಾತ್ವಿಕದ ಬಲ ಕುಗ್ಗುತ್ತಾ ಹೋಗುತ್ತದೆ.. ಯಾವಾಗ ಶೇಖರವಾಗಿದ್ದ ಸಾತ್ವಿಕ ಬಲ ಕರಗುತ್ತಾ ಮಿಕ್ಕೆರಡಕ್ಕಿಂತ ಕಡಿಮೆಯ ಮಟ್ಟ ಮುಟ್ಟುವುದೊ ಆಗ ರಾಜ್ಯಭಾರವಾಳುವುದು ತಾಮಸದ ಸಾಂಗತ್ಯದಲ್ಲಿನ ರಾಜಸ; ಸಾತ್ವಿಕದ ನಿಯಂತ್ರಣದಲ್ಲಿರುವ ರಾಜಸವಲ್ಲ...'
ಅವರು ಹೇಳುವುದನ್ನೆ ತದೇಕ ಚಿತ್ತನಾಗಿ ಕೇಳಿಸಿಕೊಳ್ಳುತ್ತಿದ್ದ ಶ್ರೀನಾಥನಿಗೆ ಆ ಪ್ರಕ್ರಿಯೆಯ ಒಂದು ಸ್ಥೂಲ ಕಲ್ಪನೆ ನಿಧಾನವಾಗಿ ಮನದಲ್ಲಿ ಮೂಡತೊಡಗಿತ್ತು. ಜತೆಗೆ ತಾನು ಗಳಿಸಿದ ಸಿದ್ದಿಯೆಲ್ಲ ಹೇಗೆ ಕರಗಿಹೋಗಲಿಕ್ಕೆ ಸಾಧ್ಯವೆಂಬ ಅರಿವೂ ಮೂಡಿ, ಅದು ಹೋಗುವುದಲ್ಲ ಎಂದು ವ್ಯಥೆ ಪಡುವುದಕ್ಕಿಂತ, ಅದು ಇರುವವರೆಗೆ ಆದಷ್ಟು ಸತ್ಪ್ರಯೋಜನ ಪಡೆದುಕೊಂಡು ಅದರ ನೆಲೆಗಟ್ಟಿನಲ್ಲಿ ನೈತಿಕತೆಯ ಭದ್ರ ಬುನಾದಿ ಹಾಕಿಕೊಳ್ಳಬೇಕು ಎನ್ನುವ ಪರ್ಯಾಯ ಪ್ರಜ್ಞೆಯನ್ನು ಮೂಡಿಸಿ ತುಸು ನಿರಾಳವಾಗಿಸಿತು. ಅವನ ಮನದಲ್ಲೇನಾಗುತ್ತಿದೆ ಎನ್ನುವುದನ್ನೆಲ್ಲ ಓದಿಕೊಳ್ಳುತ್ತಿರುವವರಂತೆ ಮಾಂಕ್ ಸಾಕೇತರು,
' ನಿಜ ಕುನ್. ಶ್ರೀನಾಥ... ಅದೆ ಸರಿಯಾದ ದಾರಿ. ಅದನ್ನೇನು ದುರ್ಬಲತಮ ಹಾದಿಯೆಂದು ಪರಿಗಣಿಸಿ ನಿರ್ಲಕ್ಷಿಸಬೇಡ.. ಈಗಿನ ಗಳಿಕೆ ನಿನ್ನಲ್ಲಿರುವ ಹೊತ್ತಿನಲ್ಲಿ ಸರಿಯಾದ ಭದ್ರ ನೈತಿಕ ಬುನಾದಿಯನ್ನು ಹಾಕಿಕೊಂಡು ಬಿಟ್ಟೆಯೆಂದರೆ ಅದರ ಸತ್ಪರಿಣಾಮವನ್ನು ಅಷ್ಟು ಸುಲಭದಲ್ಲಿ ಅಲುಗಾಡಿಸಲು ಯಾವುದೆ ರಾಜಸ - ತಾಮಸ ಜೋಡಿಗೂ ಸಾಧ್ಯವಾಗದು. ಅಲ್ಲದೆ ನಿಜ ಹೇಳಬೇಕೆಂದರೆ ನೀನು ಲೌಕಿಕ ಪ್ರಪಂಚದಲ್ಲಿ ಬದುಕಬೇಕೆಂದರೆ ಸ್ವಲ್ಪವಾದರು ರಾಜಸ ಮತ್ತು ತಾಮಸಗಳ ಜತೆ ಬೇಕೆ ಬೇಕು. ಇಲ್ಲವಾದರೆ ಸುತ್ತಲ ಅಸುರಿ ಶಕ್ತಿಗಳು ಆ ಶುದ್ಧ ಸ್ವಾತಿಕವನ್ನು ಹುರಿದು ಮುಕ್ಕಿ ಹಾಕಿಬಿಡುತ್ತವೆ.. ಅದಕ್ಕೆ ಕಳುವಾಗಿ ಹೋಗುವ ಅದರ ಸಾಮರ್ಥ್ಯದ ಕುರಿತು ಚಿಂತಿಸದೆ ಅದು ಇರುವವರೆಗೆ ಅದನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೊ, ಆಲೋಚಿಸಿಕೊ...'
'ಅರ್ಥವಾಯಿತು ಮಾಸ್ಟರ.. ಇನ್ನು ಪ್ರಯತ್ನವನ್ನೆಲ್ಲಾ ಅ ನಿಟ್ಟಿನಲ್ಲೆ ಕೇಂದ್ರೀಕರಿಸಲು ಯತ್ನಿಸುತ್ತೇನೆ.. ಈಗ ದಾರಿ ಮೊದಲಿಗಿಂತ ಇನ್ನು ಹೆಚ್ಚು ನಿಚ್ಛಳವಾದಂತೆ ಕಾಣುತ್ತಿದೆ, ಇನ್ನು ಸಂಪೂರ್ಣವಾಗಿ ಸ್ಪಷ್ಟವಾಗಿರದಿದ್ದರೂ..'
' ಸರಿ..ನಾನಿನ್ನು ದಿನದ ಭಿಕ್ಷಾಟನೆಗೆ ಹೊರಡುವ ಹೊತ್ತಾಯಿತು.. ಮತ್ತೆ ಭೇಟಿಯಾಗುವ.. 'ಅಮಿತಾಭ'...' ಎಂದವರೆ ಮೇಲೆದ್ದು ನಡೆದರು ಮಾಂಕ್ ಸಾಕೇತರು. ಹಾಗೆ ಎದ್ದು ನಡೆದವರೆ ಮರೆಯಾಗುವ ಮುನ್ನ ಮತ್ತೊಮ್ಮೆ ತಿರುಗಿ, 'ಕುನ್. ಶ್ರೀನಾಥ.. ನೀನೀಗ ಕಾಣುತ್ತಿರುವ, ನಿನ್ನ ಪೂರ್ವಾಶ್ರಮದ ಘಟನೆಗಳ ನೆನಪಿನ 'ಲೌಕಿಕ ರಾಜಸ ಅಂಶ'ಗಳ ಸ್ಮರಣೆಗೆ ತಲುಪುವ ಮೊದಲು, ಆ ಅಲೌಕಿಕ ಅಭೌತಿಕ ಅವಲೋಕನದಲ್ಲಿ ಮೂಡಿದ ಮತ್ತೇನನ್ನಾದರೂ ಅಲಕ್ಷಿಸಿಯೊ, ನಿರ್ಲಕ್ಷಿಸಿಯೊ, ಮನಸಿಗೆ ಬಂದಿದ್ದನ್ನು ಪಕ್ಕಕ್ಕೆ ಸರಿಸಿ ಮುಂದೆ ನಡೆದಿದ್ದೇಯ? ಅದರ ಸ್ಪಷ್ಟತೆ ಪೂರ್ತಿಯಾಗಿಲ್ಲವೆಂದೊ, ಅದು ಬಹುಶಃ ಅನಾವಶ್ಯಕವೆಂದೊ, ಅಸಂಗತವೆಂದೊ ಅನಿಸಿದ ಭಾವನೆಯಲ್ಲಿ?' ಎಂದು ಕೇಳಿದರು.
' ಮಾಸ್ಟರ.. ಕೆಲವು ಮನಃಪಟಲದ ಮೇಲೆ ಬಂದು ಹೋದ ಗಹನ ವಿಚಾರಗಳನ್ನು ಬಿಟ್ಟು ಮುಂದೆ ಹೋದದ್ದು ನಿಜವಾದರೂ , ಯಾವುದನ್ನು ಬಲವಂತವಾಗಿ ದೂಡಿ ಮುಂದೆ ಸರಿದಂತೆ ಕಾಣಲಿಲ್ಲ. ಒಂದೊ ಆ ವಿಷಯದ ಆಳ, ವ್ಯಾಪ್ತಿಯನ್ನು ಹೊಕ್ಕು ಅರಿತು ವಿಶ್ಲೇಷಿಸಬಲ್ಲ ಸಾಮರ್ಥ್ಯದ ಅಳುಕಿನಿಂದ ಅಥವಾ ಮೇಲ್ಮಟ್ಟದಲ್ಲಿ ಅದರ ಮಂದ್ರ ಗ್ರಹಿಕೆ ಸಿಕ್ಕಿ, ಆಳಕ್ಕಿಳಿದರೂ ಅದರ ಅರಿವು ವಿಭಿನ್ನವಾಗಿರದೆಂಬ ಅನಿಸಿಕೆಯಲ್ಲಿ ಮೂಡಿದಂತ ವಿಷಯಗಳು..' ತನ್ನ ಮನದಲ್ಲಿ ಮೂಡಿದ್ದ ಬ್ರಹ್ಮಾಂಡದ ಬೃಹತ್ ಸ್ಪೋಟ, ಸೃಷ್ಟಿ ಪ್ರಕ್ರಿಯೆಯ ಚಮತ್ಕಾರ, ಕಾಲದ ಕುರಿತಾದ ಚಿಂತನೆ, ಶಕ್ತಿ ಮೂಲದ ಕುರಿತಾದ ಜಿಜ್ಞಾಸೆ - ಅವೆಲ್ಲದರ ಅಳಕ್ಕಿಳಿಯದೆ ಮೇಲ್ಮಟ್ಟದಲ್ಲೆ ಸವರಿ ಮುನ್ನಡೆದುದರ ನೆನಪಲ್ಲೆ ನುಡಿದ ಶ್ರೀನಾಥ..
'ಕೂಡದು ಶ್ರೀನಾಥ.. ಕೂಡದು.. ಮನಃಪಟಲದ ಭಿತ್ತಿಯಲ್ಲಿ ಮೂಡಿದ ಯಾವುದೇ ಗಹನ ಯಾ ಲೌಕಿಕ ಗ್ರಹಿಕೆ ಅಥವ ಸಂಗತಿ ಮೂಡಿ ಬರಲಿ, ಅದನ್ನು ಆಳದ ಮಟ್ಟ ತಲುಪುವತನಕ ಹೊಕ್ಕು ನೋಡದೆ ಬಿಡಬಾರದು. ಕೆಲವೊಮ್ಮೆ ಅವುಗಳ ಸ್ಪಷ್ಟ ಅರಿವಿಲ್ಲದ ಗೊಂದಲದ ಜಡತೆಯೆ ನಮಗಿರಿವಿಲ್ಲದ ಹಾಗೆ ತಪ್ಪು ದಾರಿಗೆ ಎಳೆದುಬಿಡಬಹುದು... ನೀನು ಮತ್ತೆ ಲೌಕಿಕ ಜಗದ ರಾಜಸ, ತಾಮಸ, ಸಾತ್ವಿಕ ನೆನಪುಗಳ ಬೆನ್ನಟ್ಟುವ ಮೊದಲೆ ಇವೆಲ್ಲಾ ಕ್ಲೀಷೆಗಳನ್ನು ಜಾಲಾಡಿಕೊಂಡು ಮಿಕ್ಕೆಲ್ಲಾ ಕಶ್ಮಲಗಳ ಮಿಕ್ಕುಳಿದ ಕಿಡಿಯ ಹುಡಿಯನ್ನೆಗರಿಸುವುದು ತುಂಬಾ ಮುಖ್ಯ..'
'ಆದರೆ.. ಮಾಸ್ಟರ..ಈ ವಿಷಯಗಳಲ್ಲಿ ಪಾಂಡಿತ್ಯವಾಗಲಿ, ಜ್ಞಾನವಾಗಲಿ ಇಲ್ಲದ ನಾನು ಅದು ಹೇಗೆ ಇದನ್ನೆಲ್ಲ ವಿಶ್ಲೇಷಿಸಬಲ್ಲೆ? ಇವೆಲ್ಲ ಗಹನ ಪಾಂಡಿತ್ಯದ ವಿಷಯಗಳು ಎನ್ನುವುದಕ್ಕಿಂತ, ಮಹಾನ್ ವಿಜ್ಞಾನಿಗಳ ಅಳವಿಗು ಸಿಗದೆ ತಿಣುಕಾಡಿಸುತ್ತಿರುವ ಈ ರೀತಿಯ ಸಂಗತಿಗಳು ನನ್ನ ಕೈಯಳತೆಗೆ ಸಿಕ್ಕಿ ಗ್ರಾಹ್ಯವಾಗಲಿಕ್ಕೆ ಸಾಧ್ಯವೆ? ಎಂದು ನನಗೇನೊ ಅನುಮಾನ. ಹಾಗೆ ಮಾಡುತ್ತೇನೆಂದು ಹೊರಟರು ತಪ್ಪು ತಪ್ಪು ಗ್ರಹಿಕೆ, ಅನಿಸಿಕೆಗಳಿಂದ ಕೂಡಿದ ತೀರ್ಮಾನಗಳೆ ಬರುವ ಸಾಧ್ಯತೆ ಹೆಚ್ಚಿರುವುದಿಲ್ಲವೆ?' ಅವರ ಮಾತು ಕೇಳುತ್ತಲೆ ಗಾಬರಿ ಬಿದ್ದವನಂತೆ ಕೇಳಿದ ಶ್ರೀನಾಥ.
'ಕುನ್. ಶ್ರೀನಾಥಾ.. ಮತ್ತೆ ಯಾಕೆ ಸರಿ ತಪ್ಪುಗಳ ಜಿಜ್ಞಾಸೆ, ಗೊಂದಲಗಳ ಬಲೆಗೆ ಬೀಳುತ್ತೀಯಾ? ಇಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದಲ್ಲ ಪ್ರಶ್ನೆ.. ಯಾವುದು ನಂಬಿಕೆಯ ತಳಹದಿಯಲ್ಲಿ ಭದ್ರವಾಗಿ ಕುಳಿತಿದೆ ಎನ್ನುವುದು ಮುಖ್ಯ. ನೀನು ಜಿಜ್ಞಾಸೆಯ ಆಳಕ್ಕಿಳಿಯದೆ ನಿನ್ನ ನಂಬಿಕೆಯ ಬುಡ ಭದ್ರವಾಗುವುದಿಲ್ಲ. ನಿನಗೆ ಮತ್ತೊಮ್ಮೆ ನೆನಪಿಸುತ್ತೇನೆ - ನೀನು ಮಥನಕ್ಕಿಳಿದ ವಿಷಯ ನಿನಗೆ ಸುಲಭ ಗ್ರಾಹ್ಯವಿರುವ, ಚಿರಪರಿಚಿತವಾದದ್ದೆ ಆಗಿರಬೇಕೆಂದೇನೂ ಇಲ್ಲ. ಆ ಜಿಜ್ಞಾಸೆಯ ಹೊತ್ತಿನಲ್ಲಿ ಏನು ತೋರುವುದೊ ಅದನ್ನೆ ನೈಜ ಅನಿಸಿಕೆಯ ಮೂಲವೆಂದುಕೊಂಡು ಅದರ ಜಾಡಿನಲ್ಲೆ ಸಾಗುತ್ತಿರಬೇಕು. ಹೊರಟ ಅರಂಭಿಕ ಪಥ ತಪ್ಪನಿಸಿಕೆಗಳ ಮೇಲೆಯೆ ಆಧಾರಗೊಂಡಿದ್ದರೂ ಮುಖ್ಯವಾದದ್ದು ಅಂತಿಮ ತುದಿ. ಈ ಅಂದುಕೊಂಡ ಆರಂಭವೆ ಸರಿಯಾದ ಅನಿಸಿಕೆಗಳಾಗಿದ್ದರೆ ಅದು ಅಂತಿಮ ತೀರ್ಮಾನದಲ್ಲಿ ತಂತಾನೆ ಗೋಚಾರವಾಗುತ್ತದೆ - ಯಾವುದೊ ಗೊಂದಲ, ಅನುಮಾನಗಳ ಜಂಜಡವಿಲ್ಲದ ಅನಾವರಣದಲ್ಲಿ. ಅದೇ ತಪ್ಪನಿಸಿಕೆಗಳ ಆರಂಭವಾಗಿದ್ದರೆ ಅಂತಿಮ ತೀರ್ಮಾನದಲ್ಲಿ ಇಲ್ಲದ ಗೊಂದಲ, ಅಸ್ಪಷ್ಟತೆ ಗೋಚರವಾಗಿ ಆ ಮೂಲ ಅನಿಸಿಕೆ ಸರಿಯಿಲ್ಲವೆಂದು ಗೊತ್ತಾಗಿಬಿಡುತ್ತದೆ...'
'ಮಾಸ್ಟರ... ಯಾವುದೆ ಪ್ರಾಯೋಗಿಕ ತುಲನೆಯಿಲ್ಲದೆ ಬರಿ ಅನಿಸಿಕೆಗಳ ನೆಲೆಗಟ್ಟಿನಲ್ಲೆ, ಸತ್ಯದ ಅಂತಿಮ ದರ್ಶನ, ತೀರ್ಮಾನ ಮಾಡಿಕೊಳ್ಳಲು ಹೇಳುತ್ತಿದ್ದೀರಾ? ಅದೂ ನನಗೆ ಕೊಂಚವೂ ಗೊತ್ತಿರದ, ಆಳವಿರದ ಈ ಗಹನ ವಿಷಯಗಳಲ್ಲೂ..' ದಿಗ್ಭ್ರಾಂತನಾದವನಂತೆ, ನಂಬಲಾಗದೆ ಮತ್ತೆ ಕೇಳಿದ ಶ್ರೀನಾಥ.
ಅವನ ಗೊಂದಲ ಅರ್ಥವಾದವರಂತೆ ಮುಗುಳ್ನಕ್ಕ ಮಾಂಕ್ ಸಾಕೇತ್, 'ಕುನ್. ಶ್ರೀನಾಥ..ನಿನಗೆ ಈ ಮನಸಿನ ಅಪಾರ ಶಕ್ತಿಯ ಕುರಿತು ಅರಿವಿಲ್ಲ .. ಅದಕ್ಕೆ ಈ ಅನುಮಾನ ಗೊಂದಲವೆಲ್ಲ ಕಾಡುತ್ತಿದೆ. ಒಂದರೆಗಳಿಗೆ ಇದೆಲ್ಲಾ ಸಂಶಯಗಳನ್ನು ಬದಿಗಿಟ್ಟು ಸುಮ್ಮನೆ ಪ್ರಯತ್ನಿಸಿ ನೋಡು.. ಅದೆಂತಹ ಅದ್ಭುತ ಜಗ ತೆರೆದುಕೊಳ್ಳುತ್ತದೆಂದು ನಿನಗೇ ಅರಿವಾಗುತ್ತದೆ... 'ನಿನ್ನ ಅರಿವಿನ ಬಗ್ಗೆಯೆ' ನಿನ್ನ ತಿಳುವಳಿಕೆಯೆಷ್ಟು ಕುಬ್ಜವೆಂದು ನಿನ್ನ ಅರಿವಿಗೆ ಬರುತ್ತದೆ. ಅದಕ್ಕ್ಯಾವ ಪಾಂಡಿತ್ಯವೂ ಬೇಕಾಗಿಲ್ಲ - ನಿನ್ನ ತಿಳಿವಿನ ಮಟ್ಟದಲ್ಲಿ ಗೊತ್ತಿರುವಷ್ಟನ್ನೆ ವಿಸ್ತರಿಸುತ್ತ ತಾರ್ಕಿಕ ಚಿಂತನೆಗೆ ಹಚ್ಚುತ್ತಾ ಹೋಗು.. ಮಿಕ್ಕಿದ್ದೆಲ್ಲಾ ತಾನೆ ಮಡಿಕೆ ಬಿಚ್ಚಿಕೊಂಡಂತೆ ಅನಾವರಣವಾಗುತ್ತದೆ... ನಿನ್ನ ವೈಜ್ಞಾನಿಕ ತಿಳುವಳಿಕೆ, ಆಧ್ಯಾತ್ಮಿಕ ಅನುಬಂಧತೆ, ಮೂಢ ನಂಬಿಕೆಗಳ ನೆಲೆಯಿಂದಾದ ಬೇರು ಬಿಟ್ಟ ನಂಬಿಕೆ, ಅವರಿವರಲ್ಲಿ, ಅಲ್ಲಿಲ್ಲಿ ಓದಿ ಕೇಳಿದ ತುಣುಕು - ಹೀಗೆ ಸಿಕ್ಕಿದ್ದೆಲ್ಲವನ್ನು ಅದೇ ಮೂಸೆಯ ಬಾಣಲಿಯಲ್ಲಿ ಹಾಕಿ ಬೇಯಿಸುತ್ತಾ ಹೋಗು. ನಿನಗೆ ಅಚ್ಚರಿಯಾಗುವಂತಹ ಫಲಿತಾಂಶ ನಿನ್ನನ್ನೆ ಚಕಿತಗೊಳಿಸುತ್ತದೆ..'
' ಈ ಮಾತು ನಿಜವೆ? ಈ ಪ್ರಕ್ರಿಯೆಯಲ್ಲಿ ಇಡಿ ಜಗವೆ ಬಿಡಿಸಲಾಗದ ಒಗಟೆಲ್ಲಾ, ಕೂತ ಕಡೆಯೆ ನನ್ನ ಗ್ರಹಿಕೆಗೆ ಸಿಕ್ಕಿ ಸತ್ಯದ ಅರಿವುಂಟಾಗಿಬಿಡುವುದೆ ?' ಇನ್ನೂ ನಂಬಲಾಗದ ಸಂದಿಗ್ದದಲ್ಲಿ ಕೇಳಿದ್ದ ಶ್ರೀನಾಥ.
' ಖಂಡಿತ ಖಚಿತ ಉತ್ತರ ನಿನ್ನ ಗ್ರಹಿಕೆಗೆ ಸಿಕ್ಕುತ್ತದೆ... ಹಾಗೆ ಸಿಕ್ಕ ಉತ್ತರವೆ ನಿನ್ನ ನಂಬಿಕೆಯ ಭದ್ರ ಬುನಾದಿಯಾಗುತ್ತದೆ.. ಆದರೆ ಅದರ ಸತ್ಯಾಸತ್ಯತೆಯ ಕುರಿತು ಒಂದು ಮಾತು...'
'ಏನು?' ಎಂಬಂತೆ ಅವರತ್ತಲೆ ದಿಟ್ಟಿಸಿದ ಶ್ರೀನಾಥ.
' ಇಲ್ಲಿ ನೀನು ಹೂಡಿಕೊಂಡು ಹೊರಟಿರುವ ಪಯಣ ಅಂತಿಮ ಸತ್ಯ ಶೋಧನೆಯಲ್ಲ..ಬದಲಿಗೆ ನಿನ್ನಲ್ಲಿರುವ ಗೊಂದಲ, ಅಸ್ಪಷ್ಟತೆ, ಚಡಪಡಿಕೆಗಳೆಲ್ಲ ನಿವಾರಿಸಿದ ಸಂಪೂರ್ಣ ಶುದ್ಧ ಸಮತಲದ ಸ್ಥಿತಿ...'
' ನನಗಿನ್ನೂ ಅರ್ಥವಾಗಲಿಲ್ಲ ಮಾಸ್ಟರ..ಎಲ್ಲವೂ ಮಸುಕು ಮಸುಕು...'
' ಅಂದರೆ, ನಿನಗೆ ತಿಳಿದ, ಖಚಿತವಾದ ಅಂತಿಮ ಸತ್ಯ ನಿಜಕ್ಕೂ ಎಲ್ಲರ ಪರಿಭಾಷೆಯಲ್ಲಿ ಅಂತಿಮ ಸತ್ಯವಾಗಿರಬೇಕಿಲ್ಲ ಎಂದರ್ಥ. ಅರ್ಥಾತ್ ನಿನ್ನ ತಾರ್ಕಿಕ ವಾದದಲ್ಲಿ ನಿನಗೆ ಅದು ಸತ್ಯವೆಂದು ಮನವರಿಕೆಯಾದರೆ ಸಾಕು...ಅದನ್ನು ಯಾರಿಗೂ ನಂಬಿಸುವ ಅಥವಾ ಒಪ್ಪಿಸುವ ಉದ್ದೇಶಕ್ಕಾಗಿ ಬಳಸಲು ಯೋಜಿಸಿದ್ದಲ್ಲ. ಎಷ್ಟೊ ಬಾರಿ ಹಾಗೆ ನೀನು ಕಂಡುಕೊಂಡ ಸತ್ಯವೂ ಸಹ ಮತ್ತೊಂದು ಪರಮಾಂತಿಮ ಸತ್ಯ ದರ್ಶನದ ದೆಸೆಯಿಂದ ಅಪೂರ್ಣ ಸತ್ಯವೆಂದೊ, ಸುಳ್ಳೆಂದೊ ಮನವರಿಕೆಯಾಗಬಹುದು.. ಆಗ ಈ ಸತ್ಯವೆ ಅಪ್ರಸ್ತುತವಾಗಿ ಬಿಡಬಹುದು..'
' ಹಾಗಿದ್ದಲ್ಲಿ ಈ 'ಸತ್ಯವಲ್ಲವಾಗಿರಬಹುದಾದ' ಸತ್ಯವನ್ನು ಮಥನದ ಮೂಲಕ ಶೋಧಿಸಿಕೊ ಎಂದು ಹೇಳುವುದೆ ಅತಾರ್ಕಿಕ ಮತ್ತು ಅಸಂಗತವಾಗಿ ಕಾಣುವುದಲ್ಲ ಮಾಸ್ಟರ..?'
' ಹಾಗಲ್ಲ ಕುನ್. ಶ್ರೀನಾಥ.. ಇಲ್ಲಿನ ಉದ್ದೇಶ ಕೇವಲ ಮನದಲ್ಲಿರಬಹುದಾದ ಅರೆಬರೆ ಗೊಂದಲಗಳೆಲ್ಲವನ್ನು ನಿವಾರಿಸಿಕೊಂಡು ಶುದ್ಧ ಸಮತಲ ಸ್ಥಿತಿಯನ್ನಾಗಿಸಿಕೊಳ್ಳುವುದಷ್ಟೆ. ಮನಕ್ಕೆ ಆ ನಂಬಿಕೆ ಹುಟ್ಟಬೇಕಾದರೆ ಗೊಂದಲಗಳಿಲ್ಲದ ಆತ್ಮವಿಶ್ವಾಸ, ನಂಬಿಕೆ ಮುಖ್ಯ - ಆ ನಂಬಿಕೆ ಮೂಲತಃ ಸರಿಯಾದ ಅನಿಸಿಕೆ, ತೀರ್ಮಾನದ ಮೇಲೆ ಆಧಾರಿತವಾಗದಿದ್ದರೂ ಸಹ. ನೀನು ಈಗ ನಾನು ಹೇಳಿದಂತೆ ಮಥನ ನಡೆಸಿದ್ದಾದರೆ ಅದರ ಫಲಿತವಾಗಿ ನಿನ್ನಲ್ಲಿ ಗಾಢವಾದ ನಂಬಿಕೆ, ಆತ್ಮವಿಶ್ವಾಸ ಮೂಡುತ್ತದೆ. ಅದರ ಅಡಿಪಾಯದ ಮೇಲೆ ಮುಂದಿನ ಸೌಧ ಕಟ್ಟಲು ಸುಲಭವಾಗುತ್ತದೆ.. ಅದರ ಬದಲು ಗೊಂದಲ, ಅಸ್ಪಷ್ಟತೆಗಳಿದ್ದರೆ ಅದರ ಪ್ರಭಾವ ನಿನ್ನ ಮಿಕ್ಕ ಚಿಂತನೆಗಳನ್ನು ದಿಕ್ಕು ತಪ್ಪಿಸಿ, ನೀನು ಏನು ಉತ್ತರ ಕಂಡುಕೊಳ್ಳಲು ಬಂದೆಯೊ ಅದು ಸಾಧ್ಯವಾಗದೆ ಹೋಗುತ್ತದೆ...'
'ಒಟ್ಟಾರೆ ಗೊಂದಲವಿರದ ಮನ, ತನಗನಿಸಿದ ಸತ್ಯವನ್ನು ಭದ್ರವಾಗಿ ನಂಬಿಕೊಂಡ ನೆಲೆಗಟ್ಟಿನಲ್ಲಿ ಮುಂದುವರೆಯಬೇಕು ಎಂದು ಹೇಳುತ್ತಿದ್ದೀರಿ... ನಾನೀಗ ಈ ಲೌಕಿಕ ಜಗದ ಹಳೆಯ ನೆನಪುಗಳನ್ನೆಲ್ಲ ತಾತ್ಕಾಲಿಕವಾಗಿ ಬದಿಗಿಟ್ಟು, ಬದಿಗೆ ಸರಿಸಿದ್ದ ಗಹನ ವಿಷಯಗಳತ್ತ ಮತ್ತೆ ಗಮನ ಹರಿಸಬೇಕು, ಎಲ್ಲವೂ ನಿಖರವಾಗಿ, ಸತ್ಯವೆನಿಸುವಷ್ಟು ಸ್ಪಷ್ಟವಾಗುವವರೆಗೆ.. ಹೌದಲ್ಲವೆ?'
' ಹೌದು... ಮೊದಲು ಆ ಗಹನ ಭಾರದ ವಿಷಯಗಳ ಹೊರೆಯನ್ನು ಪೂರ್ತಿ ಕೆಳಗಿಳಿಸಿಬಿಡು. ನಂತರ ಮಿಕ್ಕ ಲೌಕಿಕಗಳನ್ನು ಜಾಲಾಡಿಸಿದರೆ ಅವು ಒಂದಕ್ಕೊಂದು ಪೂರಕವಾಗಿ ಹೊಂದಿಕೊಂಡು ಒಂದು ಸಮಗ್ರ ಸಚಿತ್ರವನ್ನು ಬಿತ್ತರಿಸುತ್ತವೆ... ಆಗಷ್ಟೆ ಆ ಗಹನ ಮೇಲುಸ್ತರದ ವಿಷಯಕ್ಕೂ, ಕ್ಷುಲ್ಲಕ ಲೌಕಿಕ ಸ್ತರದ ಸಂಗತಿಗೂ ನಡುವೆಯಿರುವ 'ಕಳಚಿದ ಕೊಂಡಿ'ಗಳೆಲ್ಲ ಗೋಚರವಾಗುವುದು.. ಆ ತುದಿಯಿಂದ ತುದಿಯ ಸರಪಳಿ ಸರಣಿಯ ಪ್ರಕ್ರಿಯೆ ಅರಿವಾದಾಗ ಎಲ್ಲವೂ ಒಂದಾಗಿ ಮೇಳೈಸಿ ಎಲ್ಲ ಪ್ರಶ್ನೆಗೂ ಉತ್ತರ ಶೋಧಿಸಲು ಸುಲಭ ಸಾಧ್ಯವಾಗುವುದು...'
'ಸರಿ ಮಾಸ್ಟರ.. ಅದು ಹೇಗೆ ಇವೆಲ್ಲಾ ಮೇಳೈಸಿಕೊಳ್ಳುವುದೆಂದು ನನಗಿನ್ನೂ ಅಸ್ಪಷ್ಟವಿದ್ದರೂ ನಿಮ್ಮ ಮಾತಿನಲ್ಲಿ ನನಗೆ ಪೂರ್ಣ ನಂಬಿಕೆಯಿದೆ.. ನೀವು ಹೇಳಿದಂತೆ ಮಾಡುತ್ತೇನೆ.. ಬಹುಶಃ ನನ್ನ ಅಸ್ಪಷ್ಟತೆಗೆ ಉತ್ತರ ಅಲ್ಲಿಯೆ ಸಿಗುವುದೋ ಏನೊ..?' ಅವರಿಗೆ ಹೊರಡುವ ಹೊತ್ತು ಮೀರಿದ್ದನ್ನು ಗ್ರಹಿಸುತ್ತ ಇನ್ನು ಹೆಚ್ಚು ಕಾಲ ವ್ಯಯಿಸಬಾರದೆಂದು ತೀರ್ಮಾನಿಸುತ್ತ ನುಡಿದ ಶ್ರೀನಾಥ.
' ನಿಜ.. ಮತ್ತೊಂದು ಕೊನೆಯ ಮಾತು... ಈ ಆಳಕ್ಕಿಳಿದಾಗ ಪದೇ ಪದೆ ಅನುಮಾನ, ಸಂಶಯಗಳು ಬರುತ್ತಲೆ ಇರುತ್ತವೆ.. ಇದರ ಅಗತ್ಯವಿದೆಯೆ? ಇದೇಕೆ ಬೇಕು? ಅದು ಅಸಂಗತವಲ್ಲವೆ? ಇತ್ಯಾದಿ, ಇತ್ಯಾದಿ.. ಆ ರೀತಿಯ ಯಾವ ಆಲೋಚನೆ ಬಂದರೂ ಬದಿಗೆ ಸರಿಸಿ ಮುನ್ನಡೆಯುತ್ತಾ ಇರು. ಇದೊಂದು ರೀತಿಯ ಶುದ್ಧೀಕರಣದ ಕಾರ್ಯವೆಂಬಂತೆ ಭಾವಿಸಿಕೊ... ಇಡೀ ಮನಸೆಂಬ ಕಾರ್ಯಾಗಾರಕ್ಕೆ ಚಿಂತನೆಯೆಂಬ ಪೊರಕೆಯನ್ನು ಹಚ್ಚುತ್ತ ಗುಡಿಸಿ, ಸಾರಿಸಿ, ಸ್ವಚ್ಛಗೊಳಿಸಿ ರಂಗವಲ್ಲಿಯನ್ನಿಡುವ ಕೆಲಸ ಎಂಬ ಅರಿವಿರಲಿ.. ಇದೆಲ್ಲಾ ಮುಗಿದು ಇನ್ನೇನು ಮಿಕ್ಕಿಲ್ಲ ಎನ್ನುವವರೆಗೆ ಮತ್ತೆ ಲೌಕಿಕದ ಪೂರ್ವಾಶ್ರಮದ ನೆನಪುಗಳಿಗೆ ಹಿಂದಿರುಗುವ ಯತ್ನವನ್ನು ಉತ್ತೇಜಿಸಬೇಡ.. ಇಲ್ಲಿ ಶುದ್ಧಿಯಾದಷ್ಟು, ಅದು ಹೆಚ್ಚು ಕಾಲ ಕಾಪಿಡುತ ಉಳಿಸುವ ನೈತಿಕ ನೆಲೆಗಟ್ಟಿಗೆ ಸಂವಾದಿಯಾಗುತ್ತದೆ. ಇಲ್ಲಿಂದ ಹೋದ ಮೇಲೂ ನೀನದನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ... ಅದಕ್ಕೆ ನಿನ್ನೆಲ್ಲಾ ಅನುಮಾನ, ಸಂಶಯಗಳನ್ನು ಅದೆ ಮೂಸೆಗೆ ಹಾಕಿ ಉತ್ತರ ಸಿಗುವುದೊ ಎಂದು ನೋಡು. ಯಾರಿಗೆ ಗೊತ್ತು? ನಿನಗೆ ಸಿಗುವ ಉತ್ತರ ನಿನ್ನನ್ನೆ ಬೇರೆಯಾದ ವ್ಯಕ್ತಿಯನ್ನಾಗಿಸಬಹುದು - ಸ್ವಚ್ಛ ಆಂತರ್ಯ, ಅಂತರಂಗವನ್ನರಿತ ಸ್ವಯಂ ಪ್ರಖರತೆಯ ಅನುಭವವಾಗುವುದರಿಂದ.... ಬೇರೆ ಏನಿಲ್ಲವೆಂದರೂ ಗೊಂದಲ ಪರಿಹಾರವಾಗಿ ಮುಂದಿನ ಚಿಂತನೆಗೆ ಮುಕ್ತ ನೆಲೆಗಟ್ಟಾದರೂ ಸಿಗುವುದು..' ಎಂದವರೆ ಸರಸರನೆ ನಡೆದರು ಮಾಂಕ್ ಸಾಕೇತ್.
(ಇನ್ನೂ ಇದೆ)
__________
Comments
ಉ: ಕಥೆ: ಪರಿಭ್ರಮಣ..(54)
ಮನದ ಕೊಳೆ ಗುಡಿಸಿ ಸಾರಿಸುವ ಕೆಲಸ ಶ್ರೀನಾಥನಿಂದ ಮಾಡಿಸುತ್ತಿದ್ದೀರಿ, ಕುನ್.ನಾಗೇಶರೇ. ಮುಂದುವರೆಸಿರಿ.
In reply to ಉ: ಕಥೆ: ಪರಿಭ್ರಮಣ..(54) by kavinagaraj
ಉ: ಕಥೆ: ಪರಿಭ್ರಮಣ..(54)
ಕವಿಗಳೆ ನಮಸ್ಕಾರ. ಕುನ್. ಶ್ರೀನಾಥನ ತಟ್ಟೆ ಸ್ವಚ್ಛವಾದಂತೆ, ಅದಕ್ಕೆ ಸಾಕ್ಷೀಭೂತರಾಗುತ್ತ, ನಮ್ಮ ತಟ್ಟೆಯು ಸ್ವಚ್ಛವಾಗದಿದ್ದರು, ಕನಿಷ್ಠ ತಟ್ಟೆಯಲ್ಲೇನೇನಿದೆಯೆಂದು ಅನಾವರಣಗೊಂಡು, ಸ್ವಯಂ ಪರಾಮರ್ಶಿಸಿಕೊಳ್ಳಲೊಂದು ಪ್ರೇರಣೆಯಾದರೂ ಆದೀತೆಂಬ ಅನಿಸಿಕೆ. ಅದರ ಜತೆಗೆ ಶ್ರೀನಾಥನ ಅಭಿಯಾನದಲ್ಲಿ ನಮ್ಮ ಹುಡುಕುವ ಪ್ರಶ್ನೆಗಳಿಗೂ ಉತ್ತರ ದೊರಕೀತೇನೊ ಅನ್ನುವ ದೂರದಾಸೆ. ಅದೆಂತು ರೂಪುಗೊಳ್ಳುವುದೊ ಅಂತಿಮವಾಗಿ ಅನ್ನುವುದು ಇನ್ನೂ ಕಾದು ನೋಡಬೇಕಾದ ವಿಷಯ - ಎಲ್ಲಾ ಕುನ್. ಶ್ರೀನಾಥನ ಮೇಲೆ ಅವಲಂಬಿಸಿದೆಯೆನ್ನೋಣವೆ? ಪ್ರತಿಕ್ರಿಯೆಗೆ ಧನ್ಯವಾದಗಳು ಕವಿಗಳೆ :-)