'ದೃಶ್ಯ' ಚಿತ್ರ ವಿಮರ್ಶೆ
ಜೀವನದಲ್ಲಿ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ ಯಾವೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಹುಟ್ಟೇ ಒಂದು ಆಕಸ್ಮಿಕ, ಇನ್ನು ಸಾವಿನ ಕತೆ ಹಾಗಿರಲಿ. ನೀವು ಏನೂ ತಪ್ಪು ಮಾಡದೆ ನಿಮ್ಮನ್ನಾರೋ ಹಿಂಸಿಸಿದರೆ ಹೇಗಿರುತ್ತೆ? ನೀವು, ನಿಮ್ಮವರು ಅಂತ ಇದ್ದ ನಿಮ್ಮ ಪುಟ್ಟ ಗೂಡು ಬಿರುಗಾಳಿಗೆ ಬಲಿಯಾದರೆ? ಯಾವುದೋ ವಿಷಸರ್ಪ; ಗೂಡಿಗೆ ಬಂದು ನಿಮ್ಮವರನ್ನು ಕಚ್ಚಿದರೆ? ಈ ಯಾವ ಕಹಿ ಘಟನೆಯೂ ನಮ್ಮ ಕೈನಲ್ಲಿ ಇಲ್ಲ ಆದರೆ ಇಂತಹ ಘಟನೆಗಳು ಯಾರ ಜೀವನದಲ್ಲೂ, ಯಾವಗಳಿಗೆಯಲ್ಲೂ ಸಂಭವಿಸಬಹುದು, ಸಂಭವಿಸುತ್ತಿರುತ್ತವೆ.
ಬೇಲಿಯೇ ಎದ್ದು ಹೊಲ ಮೈದರೆ? ಪೋಲಿಸ್ಸೇ ಕೊಲೆಗಡುಕರಾದರೆ? ನಾಯಕರಾದವರೇ ನಾಯಿಗಳಾದರೆ? ಹೌದು ಇವತ್ತಿನ ದಿನ ಇದು ಅನೇಕ ಕಡೆಗಳಲ್ಲಿ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯ ಕೆಲಸಕ್ಕೆ ಬಾರದು, ಆಗ ಮೊರೆ ಹೋಗಬೇಕಾದದ್ದು ಒಂದಕ್ಕೇ ಅದೇ 'ಧರ್ಮ'. ಕಾನೋನಿಗೆ ನಿಲುಕದ ಎಷ್ಟೋ ಸನ್ನಿವೇಶಗಳನ್ನು ಧರ್ಮವು ತೀರ್ಮಾನಿಸಬಲ್ಲುದು. ಆದರೆ ನಮ್ಮ ಧುರಾದೃಷ್ಟಕ್ಕೆ ಕಾನೋನಿನಲ್ಲಿ ನ್ಯಾಯದ ಹೊರತು ಧರ್ಮವಿಲ್ಲ. ಕಾನೋನನ್ನ ಕೈಗೆತೆಗೆದು ಕೊಂಡು ಧರ್ಮದ ಅಸ್ತ್ರ ಚಲಾಯಿಸುವುದೇ ಇಂತಹ ಸಂಧರ್ಭದಲ್ಲಿ ಅಮಾಯಕನಿಗಿರುವ ಕಟ್ಟಕಡೆಯ ಮಾರ್ಗ.
ದಾರಿ ದಾರಿಯಲ್ಲಿ ಕೈ ಅಡ್ಡಹಾಕಿ ದುಡ್ಡು ಕಸಿದುಕೊಂಡು ಜೇಬಿಗೆ ಇಳಿಸುವ ಟ್ರಾಫಿಕ್ ಪೋಲಿಸರ ಬಗ್ಗೆ ಎಷ್ಟು ಜನರಿಗೆ ಅರಿವಿಲ್ಲ ಹೇಳಿ? ಅಮಾಯಕರ ಮೇಲೆ ಹಲ್ಲೆಮಾಡುವ, ಭೂಗತ ಲೋಕದ ಸಂಘಮಾಡುವ ಕಾಕಿ ವಸ್ತ್ರದ ಬಗ್ಗೆ ಹೇಳಬೇಕೆ! ಕಾಕಿ ವಸ್ತ್ರ ಸಿಗಲು ಕಾಸು ಬಿಚ್ಚಲೇಬೇಕು ಎನ್ನುವುದು ಎಲ್ಲರಿಗೂ ತಿಳಿದ ಮತ್ತು ನಿರಾಕರಿಸಲಾಗದ ಸತ್ಯ; ಅಂಥಹದರಲ್ಲಿ ಕಾಸು ಕೊಟ್ಟು ಹೋದ ಕದೀಮರು ಕಾಕಿ ಹಾಕಲು ಬದಲಾಗ ಬಲ್ಲರೇ ನೀವೇ ಹೇಳಿ? 'ಪೋಲಿಸ್ ಹೆಚ್ಚು ಇರುವ ಪಟ್ಟಣದಲ್ಲಿ ಕ್ರೈಮ್ ಹೆಚ್ಚು' ಇದು ನಿಮಗೆ ಗೊತ್ತಿರಬೇಕಾದ ಒಂದು ಮನೋಶಾಸ್ತ್ರ ಸಂಬಂಧ ಅಂಕಿ ಅಂಶ.
ನಾನು ಈಗ ಹೇಳ ಹೊರಟ್ಟಿದ್ದು 'ದೃಶ್ಯ' ಚಿತ್ರದ ಬಗ್ಗೆ.
ಒಂದು ಪುಟಾಣಿ ಸಂಸಾರ ಗಂಡ(ಪೊನ್ನಪ್ಪ), ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು. ಇವರ ಸುಂದರವಾದ ಜೀವನಕ್ಕೆ ಮುಳ್ಳಾಗಿ ಬಂದ ಒಬ್ಬ ಯುವಕ. ಸುಪ್ಪತ್ತಿಗೆಯಲ್ಲಿ ಬೆಳೆದ ಆ ಯುವಕ ಒಬ್ಬ ಐಪಿಎಸ್ ಅಧಿಕಾರಿಣಿಯ ಮಗ ಹೆಸರು ತರುಣ್. ಪೊನ್ನಪ್ಪನ ಹೆಣ್ಣುಮಗಳ ಅಶ್ಲೀಲ ಚಿತ್ರವನ್ನು ತೆಗೆದು ಬ್ಲಾಕ್ಮೇಲ್ ಮಾಡ ಹೊರಟ ಈತ ಇದ್ದಕ್ಕೆ ಇದ್ದ ಹಾಗೆ ಕಾಣೆಯಾಗುತ್ತಾನೆ. ಇದಕ್ಕೆ ಪೊನ್ನಪ್ಪನ ಕುಟುಂಬವೇ ಹೊಣೆ ಎಂದು ಓರ್ವ ಪೋಲಿಸ್ ಪೇದೆ ಅನುಮಾನಿಸಿ ಕೊನೆಗೆ ಐಪಿಎಸ್ ವರೆಗೂ ಎಳೆತರುತ್ತಾನೆ. ಈ ಚಿತ್ರದಲ್ಲಿ ಮುಖ್ಯವಾಗಿ ಕಂಡುಬರುವುದು ಪೋಲಿಸ್ ದಬ್ಬಾಳಿಕೆ, ಒಬ್ಬ ಅನಕ್ಷರಸ್ತ ತಂದೆಯ ಅಸಹಾಯಕತೆ; ಆದರೂ ಬಿಡದ ಎದೆಗಾರಿಕೆ. ನೀವು ಎಂದೋ ನೋಡಿದ ಸಿನಿಮಗಳ ದೃಶ್ಯಾವಳಿಗಳು ನಿಮ್ಮ ಕಷ್ಟಕಾಲಕ್ಕೂ ಆಗಬಹುದು ಎಂಬುದು ಪೊನ್ನಪ್ಪನ ಪಾತ್ರದಲ್ಲಿ ತೋರಲ್ಪಟ್ಟಿದೆ. ಅಷ್ಟೇ ಅಲ್ಲ ಇವತ್ತಿನ ಮಾಧ್ಯಮಗಳನ್ನ ಜನಸಾಮಾನ್ಯರು ಯಾವರೀತಿಯಲ್ಲಿ ಸದುದ್ದೇಶಕ್ಕೆ ಬಳಸಿಕೊಳ್ಳಬಹುದು ಎಂಬುದು ಚಿತ್ರದಲ್ಲಿ ತೋರಿಸಲ್ಪಟ್ಟಿದೆ. ರವಿಚಂದ್ರನ್, ನವ್ಯ ಅಭಿನಯದ ಈ ಚಿತ್ರದ ಸಿ.ಡಿ ಸಿಕ್ಕರೆ ಮರೆಯದೆ ನೋಡಿ ಮತ್ತು ನಿಮಗೆ ಹೇಗನಿಸಿತು ಬರೆಯಿರಿ. ಇಂತಹ ಅಸಹಾಯಕ ಕಹಿ ಘಟನೆಗಳು ನಿಮ್ಮ ಸುತ್ತ ಮುತ್ತಲು ನಡೆದಿದೆಯೆ? ಹೌದಾದಲ್ಲಿ ಇಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ಚಿತ್ರ ಕೃಪೆ: ದೃಶ್ಯ' ಚಿತ್ರದಿಂದ
Comments
ಉ: 'ದೃಶ್ಯ' ಚಿತ್ರ ವಿಮರ್ಶೆ
ದೃಶ್ಯ ನೋಡಬೇಕೆಂದಿದ್ದವನು ಕೊನೆ ಗಳಿಗೆಯಲ್ಲಿ ಮನಸ್ಸು ಬದಲಿಸಿ ಹಿಂದಿ ಸಿನೆಮಾ ನೋಡಿದೆ. ಇನ್ನು ಟಿ.ವಿಯಲ್ಲಿ ದೃಶ್ಯ ಬರುವುದನ್ನು ಕಾಯಬೇಕು..
In reply to ಉ: 'ದೃಶ್ಯ' ಚಿತ್ರ ವಿಮರ್ಶೆ by ಗಣೇಶ
ಉ: 'ದೃಶ್ಯ' ಚಿತ್ರ ವಿಮರ್ಶೆ
ಇಂದಿನ ಪ್ರಸಕ್ತ ಪರಿಸ್ಥಿತಿ ಗೆ ಕನ್ನಡಿ ಹಿಡಿತಂದಿದೆ.ಒಮ್ಮೆ ನೊಡಲೇ ಬೆಕಾದ ಚಿತ್ರ ಇದು.