ಕಥೆ: ಪರಿಭ್ರಮಣ..(61)

ಕಥೆ: ಪರಿಭ್ರಮಣ..(61)

( ಪರಿಭ್ರಮಣ..60ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...

ಅಂದು ಕೂಡ ಎಂದಿನಂತೆ ಬೆಳಗಿನ ನಿತ್ಯದ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ಎಂಟೂವರೆಯಷ್ಟೊತ್ತಿಗೆ ಆ ದಿನದ ಆಹಾರವನ್ನು ಸೇವಿಸಿ 'ಕುಟಿ'ಯತ್ತ ಹೆಜ್ಜೆ ಹಾಕುತ್ತಿದ್ದ ಶ್ರೀನಾಥ. ಮೂರು ದಿನಗಳಿಂದಲೂ ಬರಿಯ ಒಂದು ಹೊತ್ತಿನ ಆಹಾರ ಸೇವನೆಯಿಂದಾಗಿ ಬಳಲಿ ಕುಸಿದು ಹೋಗಬಹುದೇನೊ ಎಂದುಕೊಂಡಿದ್ದವನಿಗೆ ಅಚ್ಚರಿಯಾಗುವಂತೆ ಯಾವುದೊ ಹೇಳಲಾಗದ ಲವಲವಿಕೆ ಮೈ ತುಂಬಿಕೊಂಡಿದ್ದಂತೆ ಭಾಸವಾಗುತ್ತಿತ್ತು. ಆ ನಡೆವ ರೀತಿಯ ಸುಗಮತೆಯಲ್ಲೆ ಬಹುಶಃ ತುಸು ದೇಹದ ತೂಕವೂ ವರ್ಜ್ಯವಾಗಿರಬಹುದೆಂದು ಅನಿಸಲಿಕ್ಕೆ ಆರಂಭವಾಗಿದ್ದರೂ, ಅದಿನ್ನು ದೈಹಿಕವಾಗಿ ಗಮನೀಯ ಮಟ್ಟ ಮುಟ್ಟುವಷ್ಟು ಪ್ರಗತಿ, ಮೂರೆ ದಿನಗಳಲ್ಲಿ ಕಾಣಲು ಸಾಧ್ಯವಿಲ್ಲವೆಂಬ ಅಂಶವೂ ಮನವರಿಕೆಯಾಗಿ ಬಹುಶಃ ಆ ದಿಕ್ಕಿನತ್ತ ಸಾಗುತ್ತಿರುವ ಹಂತದಲ್ಲಿರಬಹುದೆಂದುಕೊಂಡು ಮುನ್ನಡೆದಿದ್ದವನಿಗೆ ಎಲ್ಲೊ ಓದಿದ್ದ ಮತ್ತೊಂದು ಅಂಶವೂ ನೆನಪಾಗಿತ್ತು... ಕೇವಲ ಆಹಾರ ಬಿಟ್ಟು ಉಪವಾಸ ಮಾಡಲಾರಂಭಿಸಿದ ಮಾತ್ರಕ್ಕೆ ದೇಹದ ತೂಕ ಏಕಾಏಕಿ ಕಡಿಮೆಯಾಗುವುದಿಲ್ಲ. ದೇಹದ ಜೈವಿಕ ಗಡಿಯಾರ ಹೊತ್ತಿಗೆ ಸರಿಯಾಗಿ 'ಹಸಿವು' ಎಂದು ಸೂಚನೆ ಕೊಡತೊಡಗಿದಂತೆ ಹೊಟ್ಟೆಯು ತಾಳ ಹಾಕುವುದು ಸಹಜ ಕ್ರಿಯೆಯಾದರು, ಅದಕ್ಕೆ ತಕ್ಷಣವೆ ಉಣ್ಣಲಿಡದಿದ್ದರೆ ತುಸು ಹೊತ್ತಿನ ನಂತರ ಆ ಹಸಿವೆ ಹಿಂಗಿ ಹೋದ ಅನುಭವವಾಗುವುದು ಮಾಮೂಲಿ ಪ್ರಕ್ರಿಯೆ. ಏಕೆಂದರೆ, ಯಾವಾಗ ಹೊರಗಿನಿಂದ ಬರಬೇಕಾದ ಆಹಾರ ಬರಲಿಲ್ಲವೊ, ಆಗ ದೇಹದಲ್ಲಿ ಶೇಖರವಾಗಿರುವ ಹೆಚ್ಚಿನ ಕೊಬ್ಬನ್ನೆ ಬಳಸಿಕೊಂಡು ಆ ಗಳಿಗೆಯ ಹಸಿವೆಯನ್ನು ತಾತ್ಕಾಲಿಕವಾಗಿ ಹಿಂಗಿಸಿ, ತನ್ನ ಚಟುವಟಿಕೆಗೆ ಬೇಕಾದ ಶಕ್ತಿಯನ್ನು ಒದಗಿಸಿಕೊಳ್ಳುತ್ತದೆ ಚಾಣಾಕ್ಷ ದೇಹದ ಕಾರ್ಖಾನೆ. ಇದೊಂದು ರೀತಿ, ಮರಿ ಹಾಕಿದ ಬೆಕ್ಕು ತನ್ನ ಮರಿಯನ್ನೆ ತಿಂದುಹಾಕುವ ಹಾಗೆ, ಶೇಖರಿತ ಕೊಬ್ಬಿನ ಕೋಶಗಳನ್ನೆ ತಿಂದುಹಾಕಿ, ಆ ಶಕ್ತಿಯಿಂದ ಮಿಕ್ಕ ಕೋಶಗಳ ನಿರ್ವಹಣೆಯ ಕಾರುಬಾರು ನಡೆಸಿದ ಹಾಗೆ. ಇದೆ ಪ್ರಕ್ರಿಯೆ ಸದಾ ಕಾಲ ಪದೇಪದೇ ನಡೆಯುತ್ತಿದ್ದರೆ, ಅದು ಅಸಿಡಿಟಿಯ ರೂಪವಾಗಿ ಗ್ಯಾಸ್ಟಿಕ್ಕಿನಂತಹ ತಲೆನೋವಿಗೆ ಕಾರಣವಾಗುತ್ತದೆನ್ನುವುದು ಬೇರೆ ವಿಷಯ. ಅದಕ್ಕೆ ಆ ಹಸಿವಿನ ಹೊತ್ತಲ್ಲಿ ಏನೂ ತಿನ್ನಲು ಅವಕಾಶವಿರದಿದ್ದರೆ, ಕೊಂಚ ನೀರಾದರೂ ಕುಡಿದು ಆ ಉರಿವ ಕೋಶಗಳನ್ನು ಶಮನಗೊಳಿಸುವುದುಚಿತ ಎನ್ನುತ್ತಾರೆ. ಆದರಿಲ್ಲಿ ದಿನಕ್ಕೊಂದೆ ಹೊತ್ತು ತಿನ್ನುವ ನಿರ್ಬಂಧವಿದ್ದರು ಯಾವುದೆ ರೀತಿಯ ತೊಡಕಾಗದಂತೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಿತ್ತು. 'ಪ್ರಾಯಶಃ ಭೌತಿಕ ಚಟುವಟಿಕೆಗಳಿಗಿಂತ ಹೆಚ್ಚು ಧ್ಯಾನದಂತಹ ಮಾನಸಿಕ ಕ್ರಿಯೆಗಳಲ್ಲಿ ತಲ್ಲೀನವಾಗಿದ್ದ ಕಾರಣ ದೇಹಕ್ಕೆ ಹೆಚ್ಚು ಬಾಹ್ಯಶಕ್ತಿಯ ಅಗತ್ಯ ಬೀಳಲಿಲ್ಲವೇನೊ' ಎಂದುಕೊಳ್ಳುತ್ತಲೆ 'ಕುಟಿ'ಯ ಮೆಟ್ಟಿಲು ಹತ್ತುತ್ತ ಮಾಂಕ್ ಸಾಕೇತರು ನೀಡಿದ್ದ ನಕ್ಷೆಯ ಪ್ರತಿಯನ್ನು ಕೈಗೆತ್ತಿಕೊಂಡ ಶ್ರೀನಾಥ. ಇನ್ನು ಅದನೆತ್ತಿಕೊಂಡು ಹೊರಬಿದ್ದರೆ ಮತ್ತೆ ಕುಟಿಗೆ ಹಿಂದಿರುಗುವಂತಿಲ್ಲ, ನಕ್ಷೆಯನುಸಾರ ಪೂರ್ತಿ ಶುದ್ಧೀಕರಣವನ್ನು ಮುಗಿಸದ ಹೊರತು. ವನ್ಯಾಶ್ರಮಧಾಮದ ಮುಖ್ಯ ಹೆಬ್ಬಾಗಿಲಿನಿಂದ ಹಿಡಿದು ಬುದ್ಧನ ದೇಗುಲದತ್ತ ಕರೆದೊಯ್ಯುವ ಕಾಲುದಾರಿ ಕೊನೆಯಾಗುವವರೆಗೆ, ಆ ಹಾದಿಯ ಎರಡು ಬದಿಗಳನ್ನು ಗುಡಿಸಿ, ಸ್ವಚ್ಛಗೊಳಿಸಬೇಕೆಂದು ಈಗಾಗಲೇ ಅದರಲ್ಲಿ ಆದೇಶ ನೀಡಿದ್ದರು ಮಾಂಕ್ ಸಾಕೇತರು. ಆ ಉದ್ದದ ಹಾದಿಯ ತುಂಬಾ ಸದಾಕಾಲ ಬೀಳುತ್ತಲೆ ಇರುವ ಗಿಡ-ಮರದ ಎಲೆಗಳು, ಗಾಳಿ ತಂದಿಕ್ಕುವ ಕಸಕಡ್ಡಿಗಳು, ಹಕ್ಕಿಯ ಪಿಕ್ಕೆ, ಅಲ್ಲೆ ಅಡ್ಡಾಡುವ ಪ್ರಾಣಿಗಳ ದೆಸೆಯಿಂದಾಗುವ ಮಲಿನವನ್ನೆಲ್ಲ ಪೂರಾ ಗುಡಿಸಿ ಹಾಕಿ ಸಂಜೆಯ ಹೊತ್ತಿಗೆ ಒಂದು ಚೂರು ಕಸಕಡ್ಡಿಯಿರದ ಹಾಗೆ ಮಾಡಿಡಬೇಕೆಂದು ತಾಕೀತು ಮಾಡಿಟ್ಟು ಹೋಗಿದ್ದರು. ಕೆಲಸ ದೊಡ್ಡದಲ್ಲದೆ ಹೋದರು, ಒಂದು ಹೊತ್ತಿನ ಆಹಾರದಲ್ಲೆ ನಿಭಾಯಿಸಿಕೊಂಡು ಮಾಡಿ ಮುಗಿಸಬೇಕಿದ್ದ ಕಾರಣ, ಶ್ರಮವಾಗದ ಹಾಗೆ ನಿಧಾನವಾಗಿ ಮಾಡಿಕೊಂಡು ಹೋಗಬೇಕೆಂದು ನಿರ್ಧರಿಸಿಕೊಂಡು ಮೇಲೆದ್ದವನಿಗೆ 'ಕುಟಿ'ಯ ಪಕ್ಕದಲ್ಲೆ ಒರಗಿಸಿಟ್ಟಿದ್ದ ಗುಡಿಸಲು ಬಳಸುವ ಉದ್ದ ಕೋಲಿನ, ತ್ರಿಕೋನದ ತುದಿಯಿರುವ ಪರಕೆ ಕಣ್ಣಿಗೆ ಬಿದ್ದಿತ್ತು. ಅಚ್ಚರಿಯೆಂದರೆ ಅಲ್ಲಿ ಅದರ ಹೊರತಾಗಿ ಮತ್ತೇನೂ ಇರಲಿಲ್ಲ.. ಗುಡಿಸಿದ ಕಸ ಸಂಗ್ರಹಿಸುವ ಮಕರಿ, ಮೊರ, ಕುಕ್ಕೆ, ಪುಟ್ಟಿಯಂತಹ ಸಲಕರಣೆಯಾಗಲಿ, ಸಂಗ್ರಹಿಸಿಡಬಲ್ಲ ಚೀಲಗಳಾಗಲಿ ಕಾಣಿಸಲಿಲ್ಲ. ಸಿಕ್ಕಿದ ಪೊರಕೆಯನ್ನೆ ಕೈಲಿ ಹಿಡಿದು ಹೆಬ್ಬಾಗಿಲಿನತ್ತ ನಿಧಾನವಾಗಿ ನಡೆದ ಶ್ರೀನಾಥ.

ಅಲ್ಲಿಗೆ ಹೋಗುವ ಮುನ್ನ ಹಾದಿಯಲ್ಲೆ ಇದ್ದ ಪ್ರಾರ್ಥನಾ ಮಂದಿರವನ್ನು ದಾಟುವಾಗ ಒಳಗಿರುವ ಬುದ್ಧನ ವಿಗ್ರಹಕ್ಕೊಂದು ನಮಸ್ಕಾರ ಹಾಕಿ ಹೋಗೋಣವೆಂದೆನಿಸಿ, ಪೊರಕೆಯನ್ನು ಹೊರಗಡೆಯೆ ಒಂದು ಕಡೆ ಒರಗಿಸಿಟ್ಟು ದೇಗುಲದ ಒಳನಡೆದ ಶ್ರೀನಾಥ. ಭವ್ಯ, ಪ್ರಶಾಂತ ಬುದ್ಧನ ವಿಗ್ರಹದ ಮುಂದೆ ನಿಂತು ಕಣ್ಮುಚ್ಚಿ ಕೈ ಜೋಡಿಸಿ ನಿಂತರು ಏನು ಪ್ರಾರ್ಥಿಸಿಕೊಳ್ಳಬೇಕೆಂದು ಹೊಳೆಯದೆ, ಮಾಂಕ್ ಸಾಕೇತರು ಪದೇ ಪದೇ ನುಡಿಯುವ ' ಅಮಿತಾಭ', 'ಅಮಿತಾಭ' ಎಂದು ಜಪಿಸುತ್ತಿರುವಾಗಲೆ, ಅನತಿ ದೂರದಲ್ಲೆ ಕೇಳಿಬಂದಿತ್ತು ಬಾಲಕನೋರ್ವನ ದನಿಯಲ್ಲಿ 'ಬುದ್ಧಂ, ಶರಣಂ, ಗಚ್ಛಾಮಿ', ' ಸಂಘಂ, ಶರಣಂ, ಗಚ್ಛಾಮಿ' ಎಂಬ ಪಠನ. ಆ ಸ್ಪಷ್ಟ, ನಿಖರ ದನಿಗೆ ಕಣ್ತೆರೆದು ಯಾರದಿರಬಹುದೆಂದು ನೋಡಿದರೆ - ತಲೆ ಪೂರ್ತಿ ಬೋಳಾಗಿಸಿಕೊಂಡಿದ್ದ, ಮಾಂಕುಗಳಂತೆ ದಿರುಸನುಟ್ಟ ಹುಡುಗನೊಬ್ಬ ಮೆಲುವಾದ ದನಿಯಲ್ಲಿ ಗುಣುಗುಣಿಸುತ್ತ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಣ್ಣಿಗೆ ಬಿದ್ದಿತ್ತು. ಅಷ್ಟು ದಿನದ ಒಡನಾಟದಲ್ಲಿ ಆ ಹುಡುಗನೆಂದು ಕಣ್ಣಿಗೆ ಬಿದ್ದಿರಲಿಲ್ಲವಾದರೂ, ಅವನ ವೇಷಭೂಷಣದಿಂದ ಅವನಲ್ಲಿ ತರಬೇತುಗೊಳ್ಳುತ್ತಿರುವ 'ಬೌದ್ಧ ಬಾಲಭಿಕ್ಷು'ವಾಗಿರಬೇಕೆಂದು ಊಹಿಸುತ್ತ ಅವನತ್ತ ನೋಡಿ ಮುಗುಳಕ್ಕ ಶ್ರೀನಾಥ. ಆ ಬಾಲಭಿಕ್ಷು ಮಾರುತ್ತರವಾಗಿ ತಾನೂ ಮುಗ್ದ ನಗುವೊಂದನ್ನು ಹಿಂತಿರುಗಿಸಿ, ದೇಗುಲದಿಂದ ಹೊರ ನಡೆದಾಗ ಅವನ ಜತೆಯಲ್ಲೆ ಹೊರಬಿದ್ದ ಶ್ರೀನಾಥನಿಗೆ, ಆ ಬಾಲಕನೂ ತನ್ನಂತೆಯೆ ಉದ್ದದ ಪೊರಕೆಯೊಂದನ್ನೆತ್ತಿಕೊಂಡು ಶ್ರೀನಾಥನ ವಿರುದ್ಧ ದಿಕ್ಕಿನಲ್ಲಿ ನಡೆದು ಹೊರಟಿದ್ದು ಕಂಡು ಅಚ್ಚರಿಯಾಗಿತ್ತು - ಬಹುಶಃ ಈ ದಿನ ತಾನು ಗುಡಿಸುವ ಎದುರು ದಿಕ್ಕಿನ ಕೆಲಸ ಆತನ ಪಾಲಿನದಾಗಿರಬೇಕು ಎಂದು ಸರಿಯಾಗಿಯೆ ಊಹಿಸುತ್ತ. ಶ್ರೀನಾಥನ ಕೈಯಲ್ಲಿದ್ದ ಪೊರಕೆಯನ್ನು ಗಮನಿಸಿದ ಆ ಬಾಲಕನು ಮತ್ತೊಮ್ಮೆ ನಸು ನಕ್ಕು ತನ್ನ ದಾರಿಯತ್ತ ಸರಸರನೆ ನಡೆದಿದ್ದ. ಆತನ ಕೈಯಲ್ಲೂ ಬರಿಯ ಪೊರಕೆ ಮಾತ್ರವಿದ್ದುದನ್ನು ನೋಡಿ, ಬಹುಶಃ 'ಈ ಆಶ್ರಮ ಧಾಮದ ಗುಡಿಸುವ ಕೆಲಸಕ್ಕೆ ಬೇರೇನೂ ಅಗತ್ಯವಿಲ್ಲವೇನೊ..' ಎಂದು ತೀರ್ಮಾನಿಸಿ, ತನ್ನ ಕೆಲಸವನ್ನಾರಂಭಿಸಬೇಕಿದ್ದ  ಹೆಬ್ಬಾಗಿಲಿನತ್ತ ತಾನು ನಡೆದಿದ್ದ, ನಿಧಾನವಾಗಿ ಕಾಲೆಳೆಯುತ್ತ. ಆ ಬಾಲಭಿಕ್ಷು ಗುಡಿಸುವ ಕೆಲಸವನ್ನು ದೇಗುಲದ ಮುಂದಿನಿಂದ ಆರಂಭಿಸದೆ, ಅದರ ವಿರುದ್ಧ ತುದಿಯತ್ತ ನಡೆದಿದ್ದನ್ನು ನೋಡಿ ಬಹುಶಃ ಆ ತುದಿಯಿಂದ ಆರಂಭಿಸಿ ದೇಗುಲದ ತುದಿಯಲ್ಲಿ ಮುಗಿಸುವ ಯೋಜನೆ ಹಾಕಿರಬೇಕೆಂದರಿವಾಗಿ, ತಾನೂ ಅದೇ ವಿಧಾನ ಬಳಸಿ ಹೆಬ್ಬಾಗಿಲಿನಿಂದ ಆರಂಭಿಸಿ ದೇಗುಲದ ತುದಿ ತಲುಪಲೆಣಿಸುತ್ತ ಅತ್ತ ಹೆಜ್ಜೆ ಹಾಕುತ್ತಿದ್ದ ಶ್ರೀನಾಥನ ಮನದಲ್ಲಿ ಹೇಗಾದರೂ ಆದಷ್ಟು ಬೇಗನೆ ಈ ಕೆಲಸ ಯಶಸ್ವಿಯಾಗಿ ಮುಗಿಸಿದರೆ ರಾತ್ರಿ 'ಕುಟಿ'ಯಲ್ಲಿ ನಿರಾಳವಾಗಿ ಮಲಗಬಹುದು ಎಂಬ ಪ್ರಲೋಭನೆಯೂ ಸೇರಿಕೊಂಡಿತ್ತು. ಕೆಲಸ ಮುಗಿಸದೆ 'ಕುಟಿ'ಯಲ್ಲಿ ಮಲಗುವಂತಿರಲಿಲ್ಲ - ಹಾಗೆಂದು ಮಾಂಕ್ ಸಾಕೇತ್ ಆಗಲೆ ಶರತ್ತನ್ನು ವಿಧಿಸಿಯಾಗಿತ್ತು. ತುಸು ನಿಧಾನವಾದರೂ ಸರಿ, ಮಾಡಿ ಮುಗಿಸಲೆಬೇಕೆಂಬ ಛಲ ಮಾತ್ರ ಮನದಲ್ಲಿ ಭದ್ರವಾಗಿ ನೆಲೆಯೂರಿಕೊಂಡು, ಆ ಛಲದಿಂದ ಪ್ರೇರೇಪಿತವಾದ ನಿರೀಕ್ಷೆಯ ಬಲ ಹುಟ್ಟಿಸಿದ ಯಶಸ್ಸಿನ ಅವಸರ, ಅವನ ನಡೆಯನ್ನು ಇದ್ದಕ್ಕಿದ್ದಂತೆ ಬಿರುಸಾಗಿಸಿ ಹೆಬ್ಬಾಗಿಲಿನತ್ತದ ಗಮನವನ್ನು ತೀವ್ರವಾಗಿಸಿತ್ತು. 

ಮುಚ್ಚಿದ್ದ ಹೆಬ್ಬಾಗಿಲಿನ ತುದಿಯಿಂದ ಗುಡಿಸುವ ಕೆಲಸವಾರಂಭಿಸಿದ ಶ್ರೀನಾಥನಿಗೆ ಆ ಬೆಳಗಿನ ವಾತಾವರಣವೇನೊ ಆಹ್ಲಾದವಾಗಿರುವಂತೆ ಕಂಡರೂ, ಆ ಹೊತ್ತಿಗಾಗಲೆ ನಿಧಾನವಾಗಿ ಬಿಸಿಲೇರುತ್ತ ಇದ್ದ ಕಾರಣ ನಿಧಾನವಾಗಿ ಬೆವರಿನ ಪಸೆ ಮೂಡಲು ಆರಂಭವಾಗಿತ್ತು. ಇನ್ನೂ ಆರಂಭಿಸುವ ಮೊದಲೆ ಹೀಗೆ ಬೆವರಿನ ಪಸೆಯ ಅನುಭವವಾದರೆ, ಕೆಲಸ ಮುಗಿಸುವ ಹೊತ್ತಿಗೆ ಬೆವರಿನಲ್ಲಿ ಸ್ನಾನವೇ ಆಗಿ ಹೋಗಿರುತ್ತದೇನೊ ಅಲ್ಲಿನ ಬಿಸಿಲ ವ್ಯವಹಾರದಲ್ಲಿ - ಎಂದುಕೊಂಡವನೆ ಗೇಟಿಗಂಟಿಕೊಂಡಂತಿದ್ದ ಭಾಗದಿಂದ ಹಾದಿಯ ಮೇಲೆಲ್ಲ ಹರಡಿಕೊಂಡು ಬಿದ್ದಿದ್ದ ಕಸದ ರಾಶಿಯನ್ನು ತಾನು ತಂದಿದ್ದ ಪೊರಕೆಯಲ್ಲಿ ಗುಡಿಸತೊಡಗಿದ. ಹಾಗೆ ಆರಂಭಿಸುತ್ತಿದ್ದಂತೆ ಆ ಬಿಸಿಲಿನ ಲೇಪದಲ್ಲೂ ಸತತವಾಗಿ ಬೀಸುತ್ತಿರುವ ಗಾಳಿಯ ಮಾರುತಗಳು, ಸುತ್ತೆಲ್ಲ ಗಾಳಿಯಲೆಯೆಬ್ಬಿಸಿಕೊಂಡೆ ಸುತ್ತಾಡುತ್ತ ಆ ಬೆವರಿನ ಪಸೆಯನ್ನು ಮೂಡುಮೂಡುತ್ತಿರುವಾಗಲೆ ನಿವಾರಿಸುತ್ತಿರುವುದನ್ನು ಕಂಡಾಗ, ಆ ಬಿಸಿಲಿನಲ್ಲಿ ಗುಡಿಸುವ ಅನುಭವ ತಾನೆಣಿಸಿದಷ್ಟು ಕೆಟ್ಟಾದಾಗಿರದೆಂದು ಸಮಾಧಾನವೂ ಆಗಿತ್ತು. ಹಾಗೆ ಗುಡಿಸುತ್ತಲೆ ಕಸವನ್ನೆಲ್ಲ ಎಲ್ಲಿ ಗುಡ್ಡೆ ಹಾಕುವುದೆಂದು ಸುತ್ತ ಮುತ್ತ ನೋಡಿದರೆ, ಅಲ್ಲಾವ ಸೂಕ್ತ ಎಡೆಯೂ ಇದ್ದಂತೆ ಕಾಣಲಿಲ್ಲ. ಇರಲಿ ಸದ್ಯಕ್ಕೆ ಗುಡಿಸಿಕೊಂಡೆ ಹೋಗುತ್ತ ಹಾದಿಯುದ್ದಕ್ಕೂ ಒಂದು ಬದಿಯಲ್ಲಿ ಅಷ್ಟಷ್ಟು ದೂರಕ್ಕೆ ಗುಡ್ಡೆ ಹಾಕಿಕೊಂಡು ಹೋಗುವುದೆಂದು ನಿರ್ಧರಿಸಿ, ಅದರಂತೆ ಹತ್ತೆಜ್ಜೆ ದೂರಕ್ಕೊಮ್ಮೆಯಂತೆ ಗುಡಿಸಿಕೊಂಡಿದ್ದನ್ನೆಲ್ಲ ಒಟ್ಟಾಗಿಸಿ ಒತ್ತಟ್ಟಿಗೆ ದೂಕಿ ಗುಡ್ಡೆಯಾಗಿಸುತ್ತ ನಿಧಾನವಾಗಿ ಮುನ್ನಡೆಯತೊಡಗಿದ. ಹಾಗೆ ದೈಹಿಕ ಶ್ರಮದ ಕಾಯಕದಲ್ಲಿ ನಿರತನಾಗಿದ್ದ ಹೊತ್ತಲ್ಲೆ ತಾನು ಹಿಂದಿನ ರಾತ್ರಿ ಗುರುತು ಹಾಕಿಕೊಂಡಿದ್ದ ಅಂಶಗಳನ್ನೆಲ್ಲ, ನೈಜದಲ್ಲಿ ಹೇಗೆ ನಿಭಾಯಿಸಬೇಕೆಂದು ಗುಡಿಸುತ್ತಲೆ ಚಿಂತಿಸುತ್ತಾ ಹೋಗಬಹುದಲ್ಲಾ? ಎನಿಸಿತು. ಹೇಗೂ ಗುಡಿಸುವ ಕಾರ್ಯ ಭೌತಿಕ ಶ್ರಮವೆ ಹೊರತು ಮನವಿಟ್ಟು, ಗಮನವಿಟ್ಟು ಮಾಡುವ ಕ್ರಿಯೆಯಲ್ಲವಾದ ಕಾರಣ ಅದೇನು ಕಷ್ಟಕರವಾದ ಪ್ರಕ್ರಿಯೆಯಲ್ಲವೆಂಬ ಅನಿಸಿಕೆಯುದಿಸಿ, ಅದರಂತೆ ತನ್ನಿಂದ ಅಥವಾ ತನ್ನ ಕಾರಣದಿಂದಾಗಿದ್ದ ಇತ್ತೀಚೆಗಿನ ತಾಮಸಿ ಕೃತ್ಯಗಳನ್ನೆಲ್ಲ ಒಂದೊಂದಾಗಿ ನೆನಪಿಸಿಕೊಂಡು ಆ ಕ್ರಿಯೆಯ ಯಾವ ಪ್ರತಿಕ್ರಿಯೆಯಿಂದ ತಾಮಸತ್ವವನ್ನು ಸಾತ್ವಿಕತ್ವವಾಗಿಸಬಹುದೆಂದು ಚಿಂತನೆಯಲ್ಲಿ ತೊಡಗಿಸಿಕೊಂಡುಬಿಟ್ಟ - ಆ ಗುಡಿಸುವ ಭೌತಿಕ ಕಾರ್ಯದ ಜತೆಜತೆಯಲ್ಲಿಯೆ... ಹಿಂದಿನ ರಾತ್ರಿ ಪಟ್ಟಿ ಮಾಡಿಕೊಂಡಿದ್ದ ಅಂಶಗಳೂ ಹಿನ್ನಲೆಯಲ್ಲಿ ತಮ್ಮ ಪ್ರತ್ಯಸ್ತ್ರದ ಶೋಧನೆಗಾಗಿ ಕಾಯುತ್ತಿದ್ದ ಕಾರಣ, ಒಂದು ರೀತಿಯ ಅವ್ಯಕ್ತ ಅವಸರವೂ ಸಹ ಅಲ್ಲಿ ಸೇರಿಕೊಂಡಿತ್ತು. ಅದೆಲ್ಲಕ್ಕೂ ಮೀರಿ - ಗುಡಿಸುವ ಭೌತಿಕ ಕ್ರಿಯೆಗೇನು ಮಾನಸಿಕ ಚಿಂತನದ ಅಗತ್ಯವಿರದ ಕಾರಣ, ಆ ಹೊತ್ತಿನಲ್ಲಿ ತಾತ್ವಿಕ ಚಿಂತನೆಯಲ್ಲಿ ತಲ್ಲೀನನಾದರೂ ಆ ಗುಡಿಸುವ ಸಣ್ಣ ಕೆಲಸಕ್ಕೇನು ಬಾಧೆಯಾಗದೆಂಬ ಲಘುವಾದ ನಿರ್ಲಕ್ಷ್ಯ, ತುಸು ಅಸಡ್ಡೆಯೂ ಸೇರಿಕೊಂಡಿತ್ತು. ಹೀಗಾಗಿ  ನಿರಂತರವಾಗಿ ಬೀಸುತ್ತಿದ್ದ ಗಾಳಿಗೆ ಮುಖವೊಡ್ಡಿಕೊಳ್ಳುತ್ತಲೆ ಆ ಹೊತ್ತಿನ ಕಾಯಕವನ್ನು ಆರಂಭಿಸುತ್ತ, ತನ್ನ ಆಂತರಿಕ ಮಥನ ಕ್ರಿಯೆಯನ್ನು ಸಮಾನಂತರದಲ್ಲಿ ಆರಂಭಿಸಿಬಿಟ್ಟಿದ್ದ ಶ್ರೀನಾಥ. ಆಗ ನಿರೀಕ್ಷೆಯಂತೆ ಮನದಲ್ಲಿ ಮೂಡಿದ್ದ ಮೊದಲ ಚಿತ್ರ ಕುನ್. ಸು ವಿನ ಕುರಿತಾದದ್ದು... ಎಲ್ಲಕ್ಕು ಮೊದಲು ಮನಸಿಗೆ ಬಂದಿದ್ದು ಸುಲಭದ ಕ್ಷುಲ್ಲಕ ಸಂಗತಿ - ತಿಂಗಳ ಮಾಮೂಲಿ ಕಾಫಿ, ಟೀ ಹಣದ ಋಣಭಾರ ತನ್ನ ಮೇಲಿನ್ನು ಹೊರೆಯಾಗಿಯೆ ಉಳಿದಿದೆ ಎಂಬುದು. ಅದು ಸಣ್ಣ ವಿಷಯವಾದರೂ ಆ ಹಣ ಅವಳಿಗೆ ತಲುಪಿಸುವುದು ಹೇಗೆಂಬ ದಾರಿಯೂ ಗೊತ್ತಿರಲಿಲ್ಲ. ಬಹುಶಃ  ಕುನ್. ಸೋವಿಯ ಮುಖಾಂತರ ಕೊಟ್ಟು ಹೇಗಾದರು ಅವಳಿಗೆ ತಲುಪಿಸಿಬಿಡು ಎಂದು ಹೇಳಿದರೆ ? ಹೌದು, ಅದೇ ಸರಿಯಾದ ದಾರಿ - ಹೇಗಾದರೂ, ಯಾವ ರೀತಿಯಿಂದಾದರೂ ಸರಿ, ಹಣ ಅವಳ ಕೈ ಸೇರಿದರೆ ಅದರ ಫಲಿತ ಸಾತ್ವಿಕ ತನ್ನಲ್ಲುಂಟಾಗಿಸಿರುವ ಆದರ ಸಂಬಂಧಿ ತಾಮಸವನ್ನು ಕರಗಿಸಿ ಹಗುರಾಗಿಸುವುದು.. ಹೌದು ಅವಳಿಗೆ ಆ ಹಣ ತಲುಪಿಸಲು ನೆರವಾಗಲಿಕ್ಕೆ ಕುನ್. ಸೋವಿಯೆ ಸೂಕ್ತ ವ್ಯಕ್ತಿ... 

ಕುನ್. ಸೋವಿಯ ಹೆಸರು ನೆನಪಾಗುತ್ತಿದ್ದಂತೆ ತಟ್ಟನೆ ಅನಿಸಿತ್ತು - 'ಈ ಪ್ರಾಜೆಕ್ಟಿನ ಯಶಸ್ವಿ ನಿಭಾವಣೆಯಲ್ಲಿ ಅವನ ಪಾತ್ರವೂ ಮಹತ್ವದ್ದಲ್ಲವೆ ?' ಎಂದು. ಬಹುಶಃ ಅವನ ಸಹಕಾರವಿರದಿದ್ದರೆ ಅದೆಲ್ಲವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಅಂದರೆ ಅವನ ಋಣಭಾರವೂ ತನ್ನ ಮೇಲೆ ಸಾಕಷ್ಟು ಹೇರಿಕೊಂಡಿರಬೇಕು. ಅದನ್ನು ಅಷ್ಟಿಷ್ಟಾದರೂ ಇಳಿಸಿಕೊಳ್ಳುವುದು ಹೇಗೆ ? ಹಾಂ... ಈ ಮೊದಲೊಮ್ಮೆ ಕುನ್. ಸೋವಿಯೆ ನುಡಿದಿದ್ದಂತೆ ಅವನಿಗೆ ಹೇಗಾದರೂ , ಈ ಬಾರಿಯಾದರೂ ಪ್ರಮೋಷನ್ ಗಿಟ್ಟಿಸಬೇಕೆಂಬ ಆಸೆಯಿದೆ. ಹೇಗೂ ಪ್ರಾಜೆಕ್ಟಿಗಾಗಿ ಚೆನ್ನಾಗಿ ದುಡಿದ ಹಿನ್ನಲೆಯಿದೆ. ಅವನ ಪ್ರಮೋಷನ್ ಕುರಿತು ಕುನ್. ಲಗ್ ಜತೆ ಮತ್ತೊಮ್ಮೆ ಮಾತನಾಡಿ ಶಿಫಾರಸು ಮಾಡಿಬಿಡಬೇಕು. ಅದೂ ಅಲ್ಲದೆ ಪ್ರಾಜೆಕ್ಟಿನಲ್ಲಿ ಇಷ್ಟೆಲ್ಲ ಜ್ಞಾನ ಸಂಪಾದಿಸಿದ ಅನುಭವಿ ವ್ಯಕ್ತಿಯ ಮಾರುಕಟ್ಟೆಯ ಮೌಲ್ಯವೂ ಧಿಢೀರನೆ ಏರಿಬಿಡುವ ಕಾರಣ, ಬೇರೆ ಕಡೆ ಕೆಲಸ ಸಿಗುವುದೂ ಸುಲಭವಾಗಿ ಹೋಗುತ್ತದೆ... ಹಾಗೇನಾದರೂ ಅವನು ಕೆಲಸ ಬಿಟ್ಟು ಹೋದರೆ ಕುನ್. ಲಗ್ ಗೆ ನಿಜಕ್ಕೂ ಕಷ್ಟ - ಅವನ ಬದಲಿನ ಆಸಾಮಿಗೆ ಹುಡುಕುವ ತಲೆ ನೋವು. ಹಾಗಾಗಲಿಕ್ಕೆ ಅವಕಾಶ ಕೊಡದೆ, ಪ್ರಮೋಶನ್ ಮೂಲಕ ಅವನನ್ನು ಉತ್ತೇಜಿಸಬೇಕೆಂಬ ವಾದ ಮುಂದಿಟ್ಟರೆ ಅದನ್ನು ತಿರಸ್ಕರಿಸಲು ಕುನ್. ಲಗ್ ಗೂ ಅಷ್ಟು ಸುಲಭ ಸಾಧ್ಯವಿರುವುದಿಲ್ಲ. ಕನಿಷ್ಠ ಹಾಗೆ ಮಾಡುವುದರಿಂದ ನನ್ನ ಪಾಲಿನ ನೈತಿಕ ಹೊರೆಯಾದರು ಕಡಿಮೆಯಾದಂತಾಗುತ್ತದೆ, ಸಾತ್ವಿಕದ ಮೂಟೆಗೊಂದಿನ್ನಿಷ್ಟು ಅಧಿಕ ಕಸುವಾಗಿ ಸೇರಿಕೊಳ್ಳುತ್ತ. ಇನ್ನು ಮತ್ತೆ ಕುನ್. ಸು ವಿಷಯಕ್ಕೆ ಬಂದರೆ - ಮೊಟ್ಟ ಮೊದಲಿಗೆ ಮುಖ್ಯವಾದದ್ದು ಅವಳ ಕೆಲಸದ ವಿಷಯ.. ತನ್ನಿಂದಾಗಿ ಅವಳ ಕೆಲಸ ಹೋಯ್ತೆಂಬ ವೇದನೆಯೆ, ತಾಮಸದ ದೊಡ್ಡ ಅಟ್ಟೆಯಾಗಿ ಹೂತು, ಆಳದ ತಾಮಸಿ ಸ್ಮೃತಿಯಾಗಿ ಕೂತುಬಿಟ್ಟಿದೆ. ಅದನ್ನು ತಿರುವು ಮುರುವಾಗಿಸದಿದ್ದರೆ ಆ ದೊಡ್ಡ ತಾಮಸಿ ಸ್ಮೃತಿಯ ತುಣುಕನ್ನು ಸಾತ್ವಿಕದತ್ತ ನಡೆಸಲಾಗುವುದಿಲ್ಲ. ಆದರೆ ಅದನ್ನು ಮಾಡುವುದು ಹೇಗೆ? ಅವಳು ಮೊದಲಿನಂತೆ ಮತ್ತೆ ಕೆಲಸಕ್ಕೆ ಮರಳುವ ಹಾಗೆ ಮಾಡುವುದರ ಮೂಲಕ ತಾನೆ? ಅವಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬಲ್ಲ ಶಕ್ತಿಯಿರುವುದು ಕೇವಲ ಕುನ್. ಲಗ್ ರಿಗೆ ಮಾತ್ರ. ಇನ್ನೇನು ತನ್ನ ಬ್ಯಾಂಕಾಕಿನಲ್ಲಿರಬೇಕಾದ ಅವಧಿ ಮುಗಿದು ಪ್ರಾಜೆಕ್ಟಿಗೆ ಕೈಮುಗಿದು ಹಿಂದಿರುಗುವ ಸಮಯ; ತಾನಿನ್ನು ಇರುವಾಗಲೆ ಅವಳಿಗಲ್ಲಿ ಇರಬಿಡದ ನೀತಿಯಿದ್ದರೆ ಅದೂ ಸರಿಯೆ. ತಾನು ಪ್ರಾಜೆಕ್ಟು ಮುಗಿಸಿ ಹೊರಟ ಸಮಯದ ನಂತರವೆ ಅವಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡರೂ ಸರಿ - ಅವಳಿಗೆ ಅಂತಾದರೂ ನ್ಯಾಯ ಸಿಕ್ಕಿದಂತೆ ಆಗುತ್ತದೆ. ಆದರೆ ಅದನ್ನು ಆಗಗೊಡಿಸುವುದು ಹೇಗೆ ? ಬೇರಾವ ದಾರಿಯೂ ಇರುವಂತೆ ಕಾಣುತ್ತಿಲ್ಲ - ಕುನ್. ಲಗ್ ರಲ್ಲಿ ನಿವೇದಿಸಿಕೊಳ್ಳುವುದನ್ನು ಬಿಟ್ಟು.  ನೇರ ಹೋಗಿ ಕುನ್. ಲಗ್ ಕಾಲು ಹಿಡಿದುಬಿಡುವುದಷ್ಟೆ ದಾರಿ; ತನ್ನ ತಪ್ಪಿಗೆ ಅವಳಿಗೆ ಶಿಕ್ಷೆ ಆಗುವುದು ತರವಲ್ಲವೆಂದು, ಅವಳು ಬಲಿಪಶುವಾಗುವುದು ಬೇಡವೆಂದು ಪರಿಪರಿಯಾಗಿಯಾದರೂ ಸರಿ, ಅವರ ಕಾಲು ಹಿಡಿದಾದರೂ ಸರಿ ನಾಚಿಕೆ ಬಿಟ್ಟು ಬೇಡಿಕೊಳ್ಳುವುದು. ಮಿಕ್ಕಿದ್ದು ದೈವೇಚ್ಛೆಯೆನ್ನಬೇಕಷ್ಟೆ...

ತಾನಿಲ್ಲಿಗೆ ಆಶ್ರಮಕ್ಕೆ ಬರುವ ಮೊದಲು ಕುನ್. ಲಗ್ ತೋರಿದ್ದ ಉತ್ಸಾಹ, ಪ್ರೋತ್ಸಾಹದ ಪ್ರತಿಕ್ರಿಯೆಯನ್ನು ಗಮನಿಸಿದರೆ, ಬಹುಶಃ ಬಾಯಿಬಿಟ್ಟು ಹೇಳಿಕೊಳ್ಳುವ ಮೊದಲೆ ಅವರಿಗೆ ಅರ್ಥವಾಗಿರುತ್ತದೆ ತನ್ನ ಕಳಕಳಿ. ಅದೃಷ್ಟವಶಾತ್ ತಾನು ಪ್ರಾಜೆಕ್ಟು ಬಿಟ್ಟು ಹೋಗುತ್ತಿರುವ ಹೊತ್ತು ಇದೆ ಘಟನೆಯೊಡನೆ ಸಂಗಮಿಸುತ್ತಿರುವುದರಿಂದ ಯಾವ ರೀತಿಯ ಇರುಸು-ಮುರುಸು ಕೂಡ ಇರುವುದಿಲ್ಲ. ಇದು ಕಾರ್ಯಗತವಾದಲ್ಲಿ ದೊಡ್ಡದೊಂದು ಹೊರೆ ಕೆಳಗಿಳಿಸಿದ ಹಾಗೆಯೆ ಲೆಕ್ಕ. ಇಲ್ಲಿ ಅವಳ ಕೆಲಸ ಕಳೆದುಕೊಂಡ ಪ್ರಕ್ರಿಯೆ ತನ್ನರಿವಿಲ್ಲದೆಯೆ ನಡೆದಿದ್ದಾದರು, ತನ್ನ ಪರೋಕ್ಷ ಕಾರಣದಿಂದಲೆ ಅವಳು ಕೆಲಸ ಕಳೆದುಕೊಂಡಿದ್ದೆಂಬ ಕಾರಣವೆ ಅದರ ತಾಮಸ ಗುರುತ್ವವನ್ನು ಹೆಚ್ಚಿಸಿರಲಿಕ್ಕೆ ಸಾಕು. ಜತೆಗೆ ತಾನೂ ಪಾಲುದಾರನಾದರೂ ಶಿಕ್ಷೆ ಮಾತ್ರ ಅವಳೊಬ್ಬಳಿಗೆ ಆದ ಬಗೆಯೂ ಅದರ ಸಾಂದ್ರತೆಯನ್ನು ಇನ್ನಷ್ಟು ಘನೀಕರಿಸಿರಬಹುದು. ಆದರೆ ಅವಳು ಕೆಲಸಕ್ಕೆ ಮತ್ತೆ ಬಂದ ಮಾತ್ರಕ್ಕೆ, ಕಲೆತುಕೊಂಡಿದ್ದ ತಾಮಸವೆಲ್ಲವು ಕರಗಿದ ಪೂರ್ಣ ಸಾತ್ವಿಕತೆಯಾಗಿಬಿಡಲು ಸಾಧ್ಯವಿದೆಯೆ? ಇನ್ನು ಮಿಕ್ಕುಳಿದ ಚರ್ಯೆಗಳ ಮತ್ತದರ ಪರಿಣಾಮಗಳ ಕುರಿತು ಮಾಡುವುದೇನು? ತಮ್ಮಿಬ್ಬರ ಸಂಗಮವೂ ಪರಸ್ಪರರ ಪ್ರೇರಣೆ, ದಿನ-ವಾರಗಟ್ಟಲೆಯ ಒಡನಾಟದ ಸಹಚರ್ಯೆ, ಸಹಮತದಿಂದಲೆ ನಡೆಯಿತೆಂದು ಹೇಳಬಹುದಾದರು ಅದು ಕೇವಲ ಕುನ್. ಸು ಳನ್ನು ಮಾತ್ರ ದೋಷ ಮುಕ್ತಳಾಗಿಸುವುದೆ ಹೊರತು ತನ್ನನ್ನಲ್ಲ. ತಾನು ಆ ಸಂಬಂಧದತ್ತ ಆಯಾಚಿತವಾಗಿ, ಯಾವುದೊ ಮೋಹಕ್ಕೆ ಬಿದ್ದು  ಸೆಳೆಯಲ್ಪಡುತ್ತಿರುವಾಗ ಅದು ಲತಳಿಗಾಗುತ್ತಿರುವ ವಂಚನೆಯೆಂದಾಗಲಿ, ಜತೆಯಲ್ಲಿ ಅವಳಿಲ್ಲವೆಂಬ ಏಕ ಮಾತ್ರ ಕಾರಣಕ್ಕೆ ತಾನು ಆ ಜಾರುವ ಹಾದಿಗಿಳಿಯಬಾರದೆಂದಾಗಲಿ ಒಮ್ಮೆಯಾದರೂ ಅನಿಸಿರಲಿಲ್ಲ; ಅಥವಾ ಅವಳ ಸಾಂಗತ್ಯದ ಬಂಧನ ಸಂಯಮದ ಸಂಕೋಲೆಯಾಗಿ, ಅದು ತನ್ನ ತಾಮಸಿ ವಿಜೃಂಭಣೆಯನ್ನು ತಡೆಯೊಡ್ಡುವ ಅಡ್ಡಗೋಡೆಯಾಗಿಯೂ ಕಾಡಿರಲಿಲ್ಲ. ಅದರ ಫಲಿತದ ಪಾಪ ಪ್ರೇರೇಪಿಸಿರಬಹುದಾದ ತಾಮಸತ್ವದ ಶೇಖರಣೆಯೇನು ಕಡಿಮೆಯಿರಲು ಸಾಧ್ಯವೆ? ಅದಕ್ಕೆ ಪರಿಹಾರವಾದರೂ ಏನು? ಹೌದು, ಅದಕ್ಕೆ ಪರಿಹಾರವಿರುವುದು ಲತಳ ಹತ್ತಿರವೆ ಹೊರತು ಕುನ್. ಸು ಬಳಿಯಲ್ಲ... ನಡೆದುದ್ದನ್ನೆಲ್ಲ ಲತಳಿಗೆ ತಪ್ಪೊಪ್ಪಿಗೆಯಂತೆ ಹೇಳಿಬಿಟ್ಟು, ಕ್ಷಮಿಸಲು ಕೇಳಿ ನಿರಾಳವಾಗುವುದೊಂದೆ ಅಲ್ಲಿರುವ ದಾರಿ. ಅವಳು ಅದನ್ನು ಹೇಗಾದರೂ ಸ್ವೀಕರಿಸಲಿ, ಹೇಗಾದರೂ ಪ್ರತಿಕ್ರಿಯಿಸಲಿ - ಅದನ್ನು ಅವಳ ಹತ್ತಿರ ನೀವೇದಿಸಿಕೊಂಡ ಕಾರಣಕ್ಕಾದರೂ, ಆ ಹೊರೆಯ ತುಸು ಭಾಗ ಹಗುರವಾಗುವುದು ಖಚಿತ. ಅವಳೂ ಎಲ್ಲವನ್ನು ಅರ್ಥಮಾಡಿಕೊಂಡು ಮನಸಾರೆ ಕ್ಷಮಿಸುವ ಮನಸು ಮಾಡಿದರೆ ತಾಮಸೀ ಹೊರೆಯ ಬಹುಭಾಗವೆ ಕರಗಿಹೋಗುವುದು ಖಚಿತವೆ. ಅದೇ ಸರಿಯಾದ ದಾರಿ; ಅಭಿಮಾನದ , ಒಣ ಹಮ್ಮಿನ ದಾಸ್ಯಕ್ಕೊಳಗಾಗದೆ ಅವಳ ಹತ್ತಿರ ಬಾಯ್ಬಿಟ್ಟು ಒಪ್ಪಿಕೊಳ್ಳುವುದು ದೊಡ್ಡ ಪಂಥವೆ ಆದರು, ಅದನ್ನು ಮಾಡದೆ ವಿಧಿಯಿಲ್ಲ. ಅದರ ತರುವಾಯದ ಪರಿಣಾಮ ಏನೇ ಆದರು, ಅದನ್ನು ಎದುರಿಸುವ ಮನೋಬಲದಿಂದ ಮುನ್ನುಗ್ಗುವುದೆ ಸರಿಯಾದ ಮಾರ್ಗ. ಆ ನಂತರ ಅವಳ ದೃಷ್ಟಿಯಲ್ಲಿ ತಾನು ಚಿಕ್ಕವನಾಗಿ, ಕೀಳಾಗಿ ಕಾಣುವಂತಾದರೂ, ಮುಂದೆಂದೊ ಅದೆ ಆಡಿಕೊಂಡು, ಹಂಗಿಸುವ ಸರಕಾಗಬಹುದಾದರು ಅದೆ ವಿಹಿತ ಮಾರ್ಗ....ಸರಿಯಾದ ನೈತಿಕ ಮಾರ್ಗ....

ಮಾನಸಿಕವಾಗಿ ಲತಳಲ್ಲಿನ ತಪ್ಪೊಪ್ಪಿಗೆಯ ಕ್ರಿಯೆ ಸುಲಭದ್ದೆನಿಸಿದ್ದರು, ಅದನ್ನು ಕಾರ್ಯಗತಗೊಳಿಸುವುದು ಅಷ್ಟು ಸುಲಭದ್ದಾಗಿರಲಿಲ್ಲ, ಶ್ರೀನಾಥನಿಗೆ. ಒಂದು ರೀತಿಯಲ್ಲಿ ಅವರ ವಿವಾಹ ನಡೆದ ವಿಚಿತ್ರ ಹಿನ್ನಲೆಯೂ ಅದಕ್ಕೆ ಕಾರಣವಾಗಿತ್ತು. ಆ ಗಳಿಗೆಯಲ್ಲಿ ಅದೆಲ್ಲ ಹಿನ್ನಲೆಯೂ ಶ್ರೀನಾಥನ ಮನಃಪಟಲದ ಮೇಲೆ ನೆನಪೋಲೆಯಂತೆ ಮೂಡಿ ಬಂದಿತ್ತು ಒಂದರ ಹಿಂದೆ ಒಂದರಂತೆ ಸಾಲುಸಾಲಾಗಿ. ಮೂಲತಃ ಅವಳೇನೂ ಅವನಿಗೆ ಅಪರಿಚಿತಳಾಗಿರಲಿಲ್ಲ - ತಾಯಿಯ ಕಡೆಯ ದೂರದ ಸೋದರ ಸಂಬಂಧದ ಕೊಂಡಿಯಿದ್ದ ಕಾರಣ ಬಾಲ್ಯದಿಂದಲು ಚೆನ್ನಾಗಿ ಗೊತ್ತಿದ್ದವಳೆ. ಅವಳ ಕುಟುಂಬವು ಮೊದಲು ಹಳ್ಳಿಯಲಿದ್ದು ನಂತರ ಪಟ್ಟಣಕ್ಕೆ ಬಂದು ಸೇರಿದವರು. ಊರಿನಲ್ಲಿ ಬೇಕಾದಷ್ಟು ಹೊಲ, ಗದ್ದೆ, ಆಸ್ತಿ, ಪಾಸ್ತಿಗಳಿದ್ದು ವಿದ್ಯಾಭ್ಯಾಸದ ಕಾರಣಕ್ಕೆಂದು ನಗರದಲ್ಲಿ ನೆಲೆ ನಿಂತು ಅಲ್ಲಿಂದಲೆ ಓಡಾಡಿಕೊಂಡೆ ಗದ್ದೇ, ಜಮೀನಿನ ವಹಿವಾಟನ್ನು ನಿಭಾಯಿಸಿಕೊಂಡಿದ್ದವರು. ಆ ಹಳ್ಳಿಯೂ ತೀರಾ ದೂರವಾಗಿರದ ಕಾರಣ ಓಡಾಡಲು ಸಹ ಕಷ್ಟಕರವೇನೂ ಆಗಿರಲಿಲ್ಲ. ಹಾಗೆ ನೋಡಿದರೆ ಅವರಿಬ್ಬರದು ದೊಡ್ಡವರು ಮೊದಲೆ ನೋಡಿ, ನಿಶ್ಚಿತಾರ್ಥ ನಡೆಸಿ, ಮುಹೂರ್ತ ನಿರ್ಧರಿಸಿ ನಡೆಸಿದ ಮದುವೆಯೇನಾಗಿರಲಿಲ್ಲ. ಅದೊಂದು ಅನಿರೀಕ್ಷಿತ ಸಂಘಟನೆಯಲ್ಲಿ, ವಿಚಿತ್ರವಾಗಿ ಸಂಘಟಿಸಿದ ವಿವಾಹವಾಗಿತ್ತು. ಆ ವಿಚಿತ್ರ ಸಂಘಟನೆ ನಡೆಯುವುದಕ್ಕೂ ಮೊದಲೆ ಲತಳಿಗೆ, ಬೇರೆ ಯಾರದೊ ಸಂಬಂಧ ನೋಡಿ ಗಂಡು ನಿರ್ಧರಿಸಿದ್ದರು ಅವಳನ್ನು ಹೆತ್ತವರು. ಆದರೆ ಅವಳಾಗ ಇನ್ನು ಡಿಗ್ರಿಯ ಕೊನೆಯ ವರ್ಷದ ಓದಿನಲ್ಲಿದ್ದ ಕಾರಣ ಮತ್ತು ಹುಡುಗ ಸಹ ಮಾಸ್ಟರ ಡಿಗ್ರಿಯ ಅಂತಿಮ ವರ್ಷದ ಓದಿನ ಭಾಗವಾಗಿ ಸೇರಿಕೊಂಡಿದ್ದ ಕಂಪನಿಯೊಂದರ ತರಬೇತಿಯಲ್ಲಿ ನಿರತನಾಗಿದ್ದರಿಂದ, ಮದುವೆಯನ್ನು ಮುಂದಿನ ವರ್ಷಕ್ಕೆಂದು ನಿಷ್ಕರ್ಷಿಸಿ, ಮುಂಗಡದಲ್ಲೆ ನಿಶ್ಚಿತಾರ್ಥ ಮಾಡಿ ಮುಗಿಸಿಕೊಂಡು ಬಿಟ್ಟಿದ್ದರು - ಎರಡು ಕುಟುಂಬಗಳ ಸಹಮತ, ಒಪ್ಪಿಗೆಯಲ್ಲಿ. ತರಬೇತು ಮುಗಿಯುತ್ತಿದ್ದಂತೆ ಅದೆ ಕಂಪನಿಯಲ್ಲಿ ಕೆಲಸ ಸಿಕ್ಕುವ ಭರವಸೆಯಿದ್ದ ಕಾರಣ, ಅದು ಒಂದು ರೀತಿಯಲ್ಲಿ ತಾರ್ಕಿಕವಾಗಿಯೂ ಇತ್ತು. ಹೀಗೆ ಎಲ್ಲವೂ ಕಾರ್ಯಯೋಜಿತವಾಗಿ ನಿರ್ಧಾರವಾಗಿದ್ದ ಕಾರಣ, ಅದೆ ಊರಿನಲ್ಲಿ ರೂಮು ಮಾಡಿಕೊಂಡು ವಾಸಿಸುತ್ತಿದ್ದ ಹುಡುಗನು ಆಗಾಗ್ಗೆ ಮನೆಗೆ ಬಂದು ಹೋಗುವುದು, ಲತಳನ್ನು ಹೊರಗೆ ಕರೆದೊಯ್ಯುವುದು, ಅಲ್ಲಲ್ಲೆ ಸುತ್ತಾಡಿಕೊಂಡು ಓಡಾಡಿಕೊಂಡು ಬರುವುದು ನಡೆದೆ ಇತ್ತು. ಹುಡುಗ ಅವಳಿಗು ಇಷ್ಟವಾಗಿದ್ದ ಕಾರಣ, ಅವಳೂ ಖುಷಿಯಿಂದಲೆ ಒಡನಾಡಿಕೊಂಡು ರೆಕ್ಕೆ ಬಿಚ್ಚಿದ ಹಕ್ಕಿಯಂತೆ ವಿಹರಿಸಿಕೊಂಡಿದ್ದ ಹೊತ್ತದು. ನಿಶ್ಚಿತಾರ್ಥವೂ ಆಗಿಹೋಗಿದ್ದ ಕಾರಣ ಒಂದು ರೀತಿಯಲ್ಲಿ ಧೈರ್ಯವಾಗಿಯೆ, ಬಹಿರಂಗವಾಗಿ ರಾಜಾರೋಷವಾಗಿಯೆ ಓಡಾಡಿಕೊಂಡಿದ್ದರು ಸಹ. ಆ ವಿವಾಹ ಪೂರ್ವ ಒಡನಾಟದ ಕುರಿತು ಲತಳ ಮನೆಯವರಿಗು ಸಹ ಪೂರ್ತಿ ಸಮಾಧಾನವಿರದಿದ್ದರು, ಈಗಿನ ಹೊಸ ಕಾಲದ ಜನ, ವೈಭವೋಪೇತವಾಗಿ ನಿಶ್ಚಿತಾರ್ಥವೂ ನಡೆದಾಗಿದ್ದಲ್ಲದೆ, ಅಷ್ಟೊಂದು ಓದಿದ ಹುಡುಗನಲ್ಲಿ, ಜತೆಯಾಗಿ ಹೊರಗೆ ಹೆಚ್ಚು ಓಡಾಡಬೇಡಿರೆಂದು ಹೇಳಲು ಸಂಕೋಚವಾಗಿ, ಅರೆಮರೆ ಮನದಲ್ಲೆ ತುಸು ಸಲಿಗೆಯನ್ನು ಕೊಟ್ಟರೂ, ಲತಳಿಗೆ ಮಾತ್ರ ಸ್ವಲ್ಪ ಎಚ್ಚರದಲ್ಲಿರುವಂತೆ ಹೇಳಿದ್ದರು. ಸುಮಾರು ಹತ್ತಿರ ಹತ್ತಿರ ಒಂದು ವರ್ಷ ಉರುಳಿತ್ತು, ಎಲ್ಲವೂ ಚೆನ್ನಾಗಿಯೆ ನಡೆದು ಮದುವೆಯ ಸಿದ್ದತೆಗಳೆಲ್ಲ ಆರಂಭವೂ ಆಗಿತ್ತು. ಇದ್ದಕ್ಕಿದ್ದಂತೆ ಅದೇನಾಯಿತೊ, ಹೇಗಾಯಿತೊ - ವರದಕ್ಷಿಣೆ, ವರೋಪಚಾರದ ಕುರಿತ ಸಣ್ಣ ಮಾತೊಂದು ವಿಕೋಪಕ್ಕೆ ತಿರುಗಿ ದೂಷಣೆ, ಜಗಳಗಳಲ್ಲಿ ಪರ್ಯಾವಸಾನವಾಗಿ ದೊಡ್ಡ ಇರಿಸು ಮುರಿಸಿಗೆ ಕಾರಣವಾಗಿಹೋಗಿತ್ತು, ಮದುವೆಗಿನ್ನು ಕೆಲವೆ ದಿನಗಳು ಮಿಕ್ಕಿವೆ ಎನ್ನುವಾಗ. ಅದೇ ಹೊತ್ತಿನಲ್ಲಿ ಹುಡುಗನ ಓದಿನ ಮಾಹಿತಿಯೂ ಅರ್ಧಬರ್ಧ ಸತ್ಯವೆಂದು, ಕೆಲಸವು ಕೇವಲ ತರಬೇತಿಯ ಅವಧಿಯ ತಾತ್ಕಲಿಕವಷ್ಟೆ ಎಂದು ಯಾರಿಂದಲೊ ಗೊತ್ತಾಗಿ ಕಡೆ ಗಳಿಗೆಯಲ್ಲಿ ಇಡೀ ಮದುವೆಯೆ ರದ್ದಾಗಿ, ಸಂಬಂಧವೆ ಮುರಿದು ಬಿದ್ದಿತ್ತು. 

ಮಗಳ ಮದುವೆಯೊಂದು ಮುಗಿದರೆ ಎಲ್ಲವೂ ನಿರಾಳವಾದಂತೆ ಎಂದು ಕಾತರದಿಂದ ಮುಹೂರ್ತದ ಗಳಿಗೆಯನ್ನು ಎದುರು ನೋಡುತ್ತಿದ್ದವರಿಗೆ, ಕೊನೆಗಳಿಗೆಯಲ್ಲಾದ ಈ ಆಘಾತದಿಂದ ಆಕಾಶವೆ ಮೇಲೆ ದೊಪ್ಪನೆ ಕುಸಿದು ಬಿದ್ದಂತಾಗಿ, ಮುಂದೇನು ಮಾಡುವುದೆಂದು ಗೊತ್ತಾಗದೆ ತಲೆ ಮೇಲೆ ಕೈಹೊತ್ತು ಕುಳಿತ ಅದೆ ಹೊತ್ತಲ್ಲಿ, ಕಾಲೇಜು ಮುಗಿಸಿ ಅದಾಗ ತಾನೆ ಕೆಲಸ ಹಿಡಿದಿದ್ದ ಶ್ರೀನಾಥ ಕಾಲೇಜಿನ ಕಡೆಯ ವರ್ಷದ ಪ್ರಾಜೆಕ್ಟಿನಲ್ಲಿ ಜತೆಯಾಗಿದ್ದ ಸಹಪಾಠಿಯೊಬ್ಬಳ ಸ್ನೇಹದಿಂದ ಪ್ರಭಾವಿತನಾಗಿ ಅವಳ ಹಿಂದೆ ಸುತ್ತುತ್ತಲೆ, ಅವಳ ಕುರಿತಾದ ಆರಾಧನಾ ಭಾವನೆಯೊಂದನ್ನು ಬೆಳೆಸಿಕೊಂಡುಬಿಟ್ಟಿದ್ದ. ಮೊದಮೊದಲ ಸ್ನೇಹದ ಸಲಿಗೆ, ಒಡನಾಟ ಹೆಚ್ಚಿದಂತೆಲ್ಲ ತೀವ್ರವಾಗುತ್ತ ಹೋಗಿ ಹೆಚ್ಚಿದ ಆತ್ಮೀಯತೆಯಾಗಿ, ಅವನಿಗರಿವಿಲ್ಲದ ಹಾಗೆ ಪ್ರೇಮದತ್ತ ತಿರುಗಿಕೊಳ್ಳಹತ್ತಿತ್ತು. ಹಾಗೆಂದು ಅವಳಲ್ಲಿ ಬಾಯಿಬಿಟ್ಟು ಹೇಳಿರದಿದ್ದರೂ, ಅಷ್ಟು ಹತ್ತಿರದ ಒಡನಾಟ, ಚರ್ಯೆಗಳಿಂದ ಅವಳಿಗು ತನ್ನ ಜತೆ ಇಷ್ಟವಿದೆಯೆಂದು ಗ್ರಹಿಸಿದ್ದ. ಆದರೆ ಅವಳ ಮನೆಯ ಕಡೆ ಇರುವ ಜವಾಬ್ದಾರಿಯ ವಿಷಯವೂ ಗೊತ್ತಿದ್ದ ಕಾರಣ, ಅದರಲ್ಲೂ ಅವಳಿಗಿಂತ ದೊಡ್ಡವರಿಬ್ಬರು ಇನ್ನು ಮದುವೆಯಾಗದೆ ಇರುವಾಗ ಅವಳು ತನ್ನ ಸ್ವಂತದ ಬದುಕಿನ ಕುರಿತು ಆಲೋಚಿಸಲೂ ಒಪ್ಪುವುದು ಅನುಮಾನವಾಗಿದ್ದುದರಿಂದ, ಆ ಕುರಿತೇನು ಮಾತನಾಡದೆ ಬರಿಯ ಆತ್ಮೀಯ ಕೆಳೆಯ ಬಂಧ ಬಲವಾಗಿಸುವತ್ತ ಗಮನ ಹರಿಸಿ ಅವಳಿಗೆ ಆತ್ಮೀಯನಾಗುವಲ್ಲಿ ಸಫಲನೂ ಆಗಿದ್ದ. ಇನ್ನು ಸರಿಯಾದ ಸೂಕ್ತ ಸಮಯದಲ್ಲಿ ಅವಳಲ್ಲೊಮ್ಮೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡರೆ, ತಕ್ಷಣಕ್ಕೆ ಸಮ್ಮತಿಸದಿದ್ದರೂ ತಾನು ಅವಳಿಗಾಗಿ ಕಾಯಲು ಸಿದ್ಧನಿರುವುದನ್ನು ಅರಿವಾಗುವಂತೆ ಮಾಡಿದರೆ, ತನ್ನ ಯಾಚನೆಗೆ ಮನಗೊಡಬಹುದೆಂಬ ಭರವಸೆಯಲ್ಲಿ ಕನಸಿನ ಲೋಕದಲ್ಲಿ ತೇಲುತ್ತಿದ್ದವನಿಗೆ, ಬರಸಿಡಿಲಿನಂತೆ ಬಂದೆರಗಿತ್ತು ಲತಳ ಮದುವೆ ಮುರಿದು ಬಿದ್ದ ಸುದ್ದಿ. ಆ ಮದುವೆ ಮುರಿಯಿತೆಂದಾಗ ಮಾವನ ಮಗಳಿಗಾದ ಸ್ಥಿತಿಗೆ ತುಸು ಖೇದವಾದರು, ಅದೇನು ಅವನ ಎದೆಯೊಡೆಯುವ ಸಂಗತಿಯಾಗಬೇಕಿರಲಿಲ್ಲ. ಆದರೆ ಈಗಾಗಲೆ ನಿಶ್ಚಿತಾರ್ಥವಾಗಿದ್ದ ಹುಡುಗನೊಂದಿಗೆ ಓಡಾಡಿಕೊಂಡಿದ್ದ ಹೆಣ್ಣಿಗೆ, ನಿಶ್ಚಯವಾಗಿದ್ದ ಮದುವೆ ತಟ್ಟನೆ ಮುರಿದು ಬಿತ್ತಂತೆ - ಎಂದ ತಕ್ಷಣ ಎಲ್ಲೆಲ್ಲಿಂದಲೊ ಏನೇನೊ ಅನಪೇಕ್ಷಿತ ಗುಸುಗುಸು, ಪಿಸಪಿಸಗಳೆಲ್ಲ ಶುರುವಾಗಿ, ಯಾರು ಏನಂದರೊ, ಏನೊ , ಅದೆಲ್ಲಿ ಹೇಗೆ ಕೈಗೆ ಸಿಕ್ಕಿತೊ - ಒಂದಷ್ಟು ನಿದ್ರೆ ಮಾತ್ರೆ ನುಂಗಿ ಇಹಯಾತ್ರೆ ಮುಗಿಸುವ ದುಸ್ಸಾಹಸಕ್ಕಿಳಿದ ಸುದ್ದಿ ಬಂದಿತ್ತು. ಮನೆಯಿಂದ ಅವಸರವಾಗಿ ಪೋನ್ ಮಾಡಿ ಅರ್ಜೆಂಟಾಗಿ ಊರಿಗೆ ಬರುವಂತೆ ಒತ್ತಾಯಿಸಿದಾಗ, ಆ ಹೊತ್ತಿನಲ್ಲಿ ಸಿಕ್ಕಿದ್ದ ಹಬ್ಬದ ರಜೆಗೆ ಮತ್ತೆರಡು ದಿನ ಸೇರಿಸಿ ಧಾವಿಸಿ ಬಂದಿದ್ದ , ಅಲ್ಲಿ ತನಗೇನು ಕಾದಿದೆಯೆಂದರಿವಾಗದೆ. ಅವನು ಬರುವುದನ್ನೆ ಕಾದಿದ್ದ ತಂದೆ ತಾಯಿಯರ ಜತೆ, ಕಣ್ಣೀರು ಹಾಕುತ್ತ ನಿಂತಿದ್ದ ಅತ್ತೆ, ಮಾವನ ಕುಟುಂಬವೆಲ್ಲ ಒಟ್ಟಾಗಿ ಸೇರಿ, ಆ ಸಂಕಟದ ಹೊತ್ತಲ್ಲಿ ಕೈ ಬಿಡದೆ, ಮತ್ತೇನು ಅವಘಡವಾಗಲಿಕ್ಕೆ ಅವಕಾಶ ಕೊಡದೆ , ಲತಳಿಗೊಂದು ತಾಳಿ ಕಟ್ಟಿ ಆ ಹೊತ್ತಿನ ಸಂಸಾರದ ಮಾನ, ಪ್ರಾಣ ಎಲ್ಲವನ್ನು ಕಾಪಾಡಬೇಕೆಂದು ದುಂಬಾಲು ಬಿದ್ದು, ಗೋಳಾಡುತ್ತ ಕುಳಿತಾಗ ಏನು ಹೇಳಬೇಕೆಂದರಿವಾಗದೆ ದಿಗ್ಮೂಢನಾಗಿ ಕೂತುಬಿಟ್ಟಿದ್ದ ಶ್ರೀನಾಥ. ಮೊದಲಿಗೆ, ಅನುವಂಶೀಯತೆಯ ವೈಜ್ಞಾನಿಕ ಕಾರಣಗಳಿಂದ ಸೋದರಿಕೆಯ, ರಕ್ತಸಂಬಂಧದಲ್ಲಿ ಮದುವೆಯಾಗಲಿಕ್ಕೆ ಅವನಿಗೆ ಸುತರಾಂ ಇಷ್ಟವಿರಲಿಲ್ಲ. ಜತೆಗೆ ಹತ್ತಿರದ ಒಡನಾಟದಲ್ಲಿಯೆ ಬೆಳೆದಿದ್ದರೂ ಲತಳ ಕುರಿತಾಗಿ ಅವನಿಗೆಂದು ಆ ಭಾವನೆ ಬಂದಿರಲೂ ಇಲ್ಲ. ಅದೆಲ್ಲಕ್ಕಿಂತ ಮಿಗಿಲಾಗಿ ತಾನು ಹಿಂದೆ ಬಿದ್ದಿದ್ದ ಗೆಳತಿ, ಸಹೋದ್ಯೋಗಿ ಶಾಲಿನಿಯ ಆಕರ್ಷಣೆಯಿಂದ ದೂರವಾಗಿ ಇನ್ಯಾರನ್ನೊ ಕಣ್ಣೆತ್ತಿ ನೋಡುವುದು ಅವನಿಗೆ ಕನಸು ಮನಸಿನಲ್ಲೂ ಉಹಿಸಲಾಗದ ಸಂಗತಿಯಾಗಿತ್ತು. ಆದರೆ ಮನೆಯವರೆಲ್ಲರ ಭಾವನಾತ್ಮಕ ಕಟ್ಟೊತ್ತಾಯ ತಪ್ಪಿಸಿಕೊಳ್ಳಲಾಗದ ಅನಿವಾರ್ಯದ ಉರುಳಾಗತೊಡಗಿದಾಗ, ಅದರಿಂದ ಹೇಗೆ ಪಾರಾಗಬಹುದೆಂದು ಸಾಧ್ಯವಿದ್ದ ಎಲ್ಲಾ ದಾರಿಯನ್ನು ಹುಡುಕತೊಡಗಿದ್ದ ಶ್ರೀನಾಥ. ಅದು ಸೂಕ್ತ ಸಮಯವಲ್ಲದಿದ್ದರು ಶಾಲಿನಿಗೆ ಈ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿ, ಹೇಗಾದರೂ ಒಪ್ಪಿಸಿ ತಕ್ಷಣವೆ ಗುಟ್ಟಾಗಿ ಅವಳೊಂದಿಗೆ ಮದುವೆಯಾಗಿಬಿಡದಿದ್ದರೆ, ತಾನೇನು ಮಾಡಿದರೂ ಬಿಡದೆ ಈ ಬಲವಂತದ ಯಜ್ಞದಲ್ಲಿ ತನ್ನನ್ನು ಬಲಿಪಶುವನ್ನಾಗಿಸಿ ಬಿಡುತ್ತಾರೆನ್ನುವುದರಲ್ಲಿ ಅವನಿಗೆ ಯಾವ ಸಂಶಯವೂ ಉಳಿದಿರಲಿಲ್ಲ.  

ಅದೇ ಅವಸರದಲ್ಲಿ ಆ ರಾತ್ರಿಯೆ ಶಾಲಿನಿಗೆ ಪೋನ್ ಮಾಡಿ, ಆತುರಾತುರವಾಗಿ ಮನೆಯಲ್ಲಿ ನಡೆಯುತ್ತಿರುವುದನ್ನೆಲ್ಲ ವಿವರಿಸಿ, ಅದೇ ಹೊತ್ತಿನಲ್ಲಿ ತನ್ನ ಮನದಿಂಗಿತವನ್ನು ಬಿಚ್ಚಿಟ್ಟು, ಅದನ್ನು ಪೂರೈಸಬೇಕಾದರೆ ತಾವಿಬ್ಬರೂ ಕೂಡಲೆ ಮದುವೆಯಾಗಿಬಿಟ್ಟರೆ ತಾನೀ ಸಂಕಟದಿಂದ ಪಾರಾಗಲಿಕ್ಕೊಂದು ಸೂಕ್ತ ದಾರಿಯಾದೀತೆಂಬ ಅನಿಸಿಕೆಯ ಜತೆಯ ಪ್ರಸ್ತಾಪವನ್ನು ಅವಳ ಮುಂದಿಟ್ಟಿದ್ದ. ಅವನ ಮಾತನೆಲ್ಲ ಮಧ್ಯೆ ಬಾಯಿಹಾಕದೆ ಗಮನವಿಟ್ಟು ಕೇಳಿದ ಅವಳು ಕೊನೆಗೆ ನುಡಿದಿದ್ದುದು ಒಂದೆ ಮಾತು... ' ಶ್ರೀನಾಥ್.. ನಾನಿರುವ ಪರಿಸ್ಥಿತಿಯಲ್ಲಿ ನನ್ನ ಮದುವೆಯನ್ನು ಕುರಿತು ಈಗ ಚಿಂತಿಸಲು ಬಿಡದಷ್ಟು ಅಡ್ಡಿ, ಆತಂಕಗಳಿವೆ.. ಅಲ್ಲದೆ ನಮ್ಮಿಬ್ಬರ ಜಾತಿ, ಮತ್ತಿತರ ಹಿನ್ನಲೆಗಳೆಲ್ಲದರ ಮೇಲೆ ಬೀಳುವ ಒತ್ತಡ, ಸಂಕಟಗಳೆಲ್ಲವನ್ನು ಎದುರಿಸಿ ಜತೆಗೂಡುವ ಚೈತನ್ಯ ಬರಲು ಇನ್ನು ಸುಮಾರು ಕಾಲ ಕಾಯಬೇಕು... ಅಟ್ಲೀಸ್ಟ್ ಐಯಾಮ್ ನಾಟ್ ರೆಡಿ ಫಾರ್ ದಟ್.. ನೀನು ನಿಮ್ಮ ಮನೆಯ ಪರಿಸ್ಥಿತಿ ಹೇಗೆ ನಿಭಾಯಿಸ್ತಿಯೊ ನಿನಗೆ ಬಿಟ್ಟಿದ್ದು.. ಆದರೆ ನನ್ನ ಮಟ್ಟಿಗೆ ಹೇಳುವುದಾದರೆ ನಾವಿಬ್ಬರೂ ಸದ್ಯಕ್ಕೆ ಗುಡ್ ಪ್ರೆಂಢ್ಸ್ ಅಷ್ಟೆ... ಮುಂದೊಂದೊ ಅದು ಸಂಬಂಧವಾಗಿ, ನಂಟಾಗಿ ಪರಿವರ್ತನೆಯಾಗಬಹುದಾ ಎಂದು ಕೇಳಿದರೆ, ನಾನು 'ಹೌದು' ಅಂತಲೂ ಹೇಳುವುದಿಲ್ಲ, 'ಇಲ್ಲ' ಎಂದೂ ಅನ್ನುವುದಿಲ್ಲ... ಆದರೂ ಆಗಬಹುದೇನೊ, ಆ ಸಮಯದ ಪರಿಸ್ಥಿತಿಯನುಸಾರ.. ಆದರೆ, ಈಗ ಈ ನಿಂತ ಕ್ಷಣದಲ್ಲಿ ನಿರ್ಧಾರ ತೆಗೆದುಕೊಂಡು ಮದುವೆಯಾಗಬೇಕೆಂದರೆ, ಐ ಡೊಂಟ್ ಥಿಂಕ್ ಐಯಾಮ್ ರೆಡಿ ಫಾರ್ ಇಟ್ ಮೆಂಟಲಿ, ಆರ್ ವಿತ್ ಮೈ ಕಮಿಟ್ಮೆಂಟ್ಸ್ ನೌ.. ಸಾರಿ ಟು ಡಿಸಪಾಯಿಂಟ್ ಯು ಸೋ ರೂಡ್ ಲಿ, ಬಟ್ ಐ ಶುಡ್ ಬಿ ಹಾನೆಸ್ಟ್ ವಿತ್ ಯು...' ಎಂದವಳೆ ಪೋನಿಟ್ಟು ಬಿಟ್ಟಿದ್ದಳು. ಅವಳ ಗಟ್ಟಿ ಮನಸಿನ, ದೃಢ ನಿರ್ಧಾರದ ಪರಿ ಗೊತ್ತಿದ್ದವನಿಗೆ ಅವಳ ಮಾತಿನ ಖಚಿತತೆಯ ಹಿನ್ನಲೆಯಲ್ಲಿ ಇನ್ನೆಷ್ಟು ಒತ್ತಾಯಿಸಿದರೂ, ಇದಕ್ಕಿಂತ ಭಿನ್ನ ಉತ್ತರ ಬರುವುದಿಲ್ಲವೆಂಬ ಸತ್ಯದ ಅರಿವಾಗಿ ಪೂರ್ಣ ನಿರಾಶೆಯಿಂದ ಕುಸಿದುಹೋಗಿದ್ದ ಶ್ರೀನಾಥ. ಆ ಕುಸಿದ ಮನಸ್ಥಿತಿಯಲ್ಲೆ ಸುತ್ತಲವರ ಒತ್ತಡದ ಅಡಿಯಾಳಾಗಿ ಕೊನೆಗೆ 'ಆದದ್ದಾಗಲಿ, ಶಾಲಿನಿ ಸಿಗುವುದಿಲ್ಲ ಎಂದ ಮೇಲೆ, ಯಾರದರೇನು? ಹೆಸರಿಗೊಬ್ಬಳು ಇದ್ದಂತೆ ತಾನೆ?' ಎಂಬ ಉದಾಸ, ಅನಾಸಕ್ತ ಭಾವವುದಿಸಿ 'ಏನಾದರು ಮಾಡಿಕೊಳ್ಳಿ' ಎಂಬರ್ಥದಲ್ಲಿ ಯಾಂತ್ರಿಕವಾಗಿ ತಲೆಯಾಡಿಸಿಬಿಟ್ಟಿದ್ದ. ಹೀಗೆ ಅವನಿಗರಿವಿಲ್ಲದ ಹಾಗೆ, ಅನಿರೀಕ್ಷಿತ ಗತಿಯಲ್ಲಿ ಲತಳ ಜತೆಗಿನ ಅವನ ವಿವಾಹ ನಡೆದುಹೋಗಿತ್ತು. ಅವಳಿಂದಲೆ ತನಗೆ ಶಾಲಿನಿಯ ಜತೆಯಾಗುವ ಅವಕಾಶ ತಪ್ಪಿತೆಂಬ ರೋಷದ ಜತೆಗೆ, ವರ್ಷದಿಂದ ಯಾರನ್ನೊ ಪತಿಯಾಗುವನೆಂಬ ಹಿನ್ನಲೆಯಲ್ಲಿ ಮಾನಸಿಕವಾಗಿ ಅವನನ್ನೆ ಪತಿಯೆಂದು ಸ್ವೀಕರಿಸಿ ಜತೆಗೆಲ್ಲ ಸುತ್ತಾಡಿ, ಓಡಾಡಿ, ಏನೆಲ್ಲಾ ಮಾಡಿಕೊಂಡಿದ್ದರೊ ಎಂಬೆಲ್ಲ ಅನುಮಾನದ ಒಗರು ಸೇರಿಕೊಂಡು, ಅದು ಅವಳನ್ನು ಪೂರ್ತಿ ದ್ವೇಷಿಸಿ ಹಿಂಸಿಸುವ ಅನಾಗರೀಕ ಮಟ್ಟಕ್ಕಿಳಿಯದಿದ್ದರು, ಅವಳಾರೊ ತನಗೆ ಸಂಬಂಧಿಸಿದವಳೆ ಅಲ್ಲಾ ಎನ್ನುವ ಹಾಗೆ ದೂರದಲಿಟ್ಟು ತನ್ನದೆ ಜಗದ ಸುತ್ತ ಯಾಂತ್ರಿಕ ಬದುಕನ್ನು ಬದುಕತೊಡಗಿದ್ದ ಶ್ರೀನಾಥ. ಮನೆಗೆ ಬೇಕಿದ್ದನ್ನು ತಂದು ಹಾಕುವುದು, ಮಾಡಿದ್ದನ್ನು ತಿಂದು ಮೂರು ಹೊತ್ತು ಆಫೀಸಿನ ಕೆಲಸದಲ್ಲಿ ನಿರತನಾಗಿಬಿಡುವುದು ದೈನಂದಿನ ಚಟುವಟಿಕೆಯಾಗಿ ಹೋಗಿತ್ತು. 'ಮಾತಿಲ್ಲ ಕಥೆಯಿಲ್ಲ'ದ ಆ ನಂಟಿನ ಹಿಂದಿನ ವಿಷಾದದ ಹಿನ್ನಲೆಯ ಅರಿವಿದ್ದ ಇಬ್ಬರೂ ಅದೇ ತಮ್ಮ ಪಾಲಿನ ಬದುಕು ಎಂಬಂತೆ ನಿರ್ಲಿಪ್ತವಾಗಿ ದಿನದೂಡತೊಡಗಿದ್ದರು. ಹೀಗೆ ವರ್ಷಗಳುರುಳುತಿದ್ದರು ಅವಳ ಮಡಿಲಲೊಂದು ಹೂ ಅರಳದ್ದನ್ನು ಗಮನಿಸುತ್ತಿದ್ದ ಅವೇ ಸುತ್ತಲ ಕಣ್ಣುಗಳು 'ಮಗು ಯಾವಾಗ?' ಎಂದು ಕೇಳುವ ಪ್ರಶ್ನೆಯ ಜತೆಗೆ ಐದಾರು ವರ್ಷಗಳು ಕಳೆದುಹೋಗಿ, ಕಡೆಗೊಮ್ಮೆ ಕಣ್ಣೀರಿಡುತ್ತ ಗೋಳಾಡುವ ತಾಯಿಯಷ್ಟೆ ಅಲ್ಲದೆ, ಗುಟ್ಟಾಗಿ ಕಣ್ಣೀರಿಡುತ್ತ ಕೊರಗುವ ಲತ ಮತ್ತವಳ ಹೆತ್ತವರ ಬೇಗುದಿಯೂ ತಟ್ಟಿದಂತಾಗಿ, ' ಸರಿ, ಇದೂ ಆಗಿಹೋಗಲಿ..' ಎಂದು ನಿರ್ಧರಿಸಿದ್ದರ ಫಲವೆ ಹಾಸಿಗೆಯ ಮತ್ತೊಂದು ಯಾಂತ್ರಿಕ ಕ್ರಿಯೆಯಲ್ಲಿ ಪರ್ಯಾವಸಾನವಾಗಿ ಮಗಳ ಹುಟ್ಟಿಗೆ ನಾಂದಿ ಹಾಡಿತ್ತು. ಅದಾದ ಕೆಲ ದಿನಗಳಲ್ಲೆ, ಈ ವಿದೇಶಿ ಪ್ರಾಜೆಕ್ಟಿನ ಅವಕಾಶ ಸಿಕ್ಕಿ, ಸಹೋದ್ಯೋಗಿಗಳಲ್ಲಿ ಕೆಲವರು 'ಮಗಳು ಹುಟ್ಟಿದ ಹೊತ್ತಿನ ಲಕ್...' ಎಂದು ವ್ಯಾಖ್ಯಾನಿಸುವಂತೆ ಮಾಡಿದಾಗ ಆ ಮಗಳ ಮೇಲೆ ಇದ್ದಕ್ಕಿದ್ದಂತೆ ಯಾವುದೊ ವಾತ್ಸಲ್ಯಪೂರಿತ ಮೋಹದ ಭಾವ ಮೆಲ್ಲನುದಿಸಿ, ಹೇಳಲಾಗದ ಸೆಳೆತವೊಂದರ ಅಂಕುರಕ್ಕೆ ಕಾರಣವಾಗಿಯೂ ಹೋಗಿತ್ತು..

ಇದೆಲ್ಲ ಹಿನ್ನಲೆಯಿದ್ದ ಕಾರಣದಿಂದಲೆ ಅವಳೊಡನೆ ಈ ವಿಷಯವನ್ನೆತ್ತಿ ಮಾತನಾಡುವುದು, ನಡೆದಿದ್ದನ್ನೆಲ್ಲ ಹೇಳಿ ತಪ್ಪೊಪ್ಪಿಗೆಯನ್ನಾಗಿಸಿ ಕ್ಷಮೆ ಬೇಡುವುದು ಸುಲಭದ ಮಾತಾಗಿರದಿದ್ದರು, ಈಗಿನ ಪ್ರಶಾಂತ ವಾಸನರಹಿತ ಮನಸ್ಥಿತಿ 'ಅದರಲ್ಲೇನು ತಪ್ಪು?' ಎನ್ನುವಂತೆ ಮಾಡಿತ್ತು. ಅದನ್ನು ಹೇಗೆ ನಿಭಾಯಿಸಬೇಕೆಂಬ ರೂಪುರೇಷೆಯ, ಕಾರ್ಯಗತವಾಗಿಸುವ ಬಗೆಯನ್ನು ಚಿಂತಿಸುತ್ತ ಹಾಗೆಯೆ ನಡುವಲ್ಲಿ ತುಸು ವಿಶ್ರಮಿಸಿಕೊಳ್ಳಲೆಂದು ಗುಡಿಸುವುದನ್ನು ನಿಲ್ಲಿಸಿ ಸುತ್ತಲು ಕಣ್ಣು ಹಾಯಿಸಿದ ಶ್ರೀನಾಥ, ಮುಖದಲ್ಲಿ ತೆಳುವಾಗಿ ಮೂಡಿದ್ದ ಬೆವರೊರೆಸಿಕೊಳ್ಳುತ್ತಲೆ. ಈ ಯೋಚನೆಗಳ ನಡುವೆ ಗುಡಿಸಿ-ಗುಡಿಸಿ ಗುಡ್ಡೆ ಹಾಕುತ್ತಲೆ ಈಗಾಗಲೆ ಮುಕ್ಕಾಲು ಪಾಲು ಮುಗಿದುಹೋಗಿರುವುದನ್ನು ಕಂಡು 'ಪರವಾಗಿಲ್ಲವೆ? ಅಂದುಕೊಂಡಿದ್ದಕ್ಕಿಂತ ವೇಗವಾಗಿಯೆ ನಡೆಯುತ್ತಿರುವಂತಿದೆ ಈ ಕೆಲಸ' ಎಂದುತ್ಸಾಹ ಮೂಡಿಸಿ, ಅದು ಮೂಡಿಸಿದ್ದ ಹೊಸ ಶಕ್ತಿ ಸಂಚಲನದಲ್ಲಿ ಮತ್ತಷ್ಟು ಉತ್ಸಾಹದಿಂದ ಮಿಕ್ಕ ಭಾಗದತ್ತ ಗಮನ ಹರಿಸಿದ್ದ, ನಡುವೆ ನಿಲ್ಲಿಸಿದ್ದ ತನ್ನ ವಿಚಾರಸರಣಿಯನ್ನು ಹಾಗೆ ಮುಂದುವರೆಸುತ್ತ... ಈ ಬಾರಿ ಲತಳ ಕುರಿತಾದ ವಿಚಾರದ ಪರದೆ ಪಕ್ಕಕ್ಕೆ ಸರಿದು ಮತ್ತೆ ಕುನ್. ಸು ಚಿತ್ರ ಕಣ್ಮುಂದೆ ಕಾಣಿಸಿಕೊಂಡಿತ್ತು. 'ಹೌದಲ್ಲ..? ತನ್ನಿಂದ ಅವಳಿಗಾದ ವಿಪರೀತದ ಪರಿಣಾಮ ಬರಿಯ ಕೆಲಸ ಕಳೆದುಕೊಂಡಿದ್ದು ಮಾತ್ರವಾಗಿರಲಿಲ್ಲವಲ್ಲ..? ಅದಕ್ಕಿಂತ ದೊಡ್ಡ ಅನಾಹುತವಾಗಿದ್ದೆಂದರೆ ಅವಳು ಗರ್ಭಪಾತ ಮಾಡಿಸಿಕೊಳ್ಳುವ ಮಟ್ಟಕ್ಕೆ ದೂಡಲು ತಾನೂ ಕಾರಣನಾಗಿದ್ದು. ಅದು ಉದ್ದೇಶಪೂರಿತವೊ, ಆಕಸ್ಮಿಕವೊ ಅನ್ನುವುದು ಬೇರೆಯೆ ಆದ ವಿಷಯ - ಪರಿಣಾಮದಲ್ಲಿ ಅದು ಘಟಿಸಿದ್ದಂತು ನಿಜವಾಗಿತ್ತಲ್ಲ? ಅಷ್ಟು ಸಾಲದೆಂಬಂತೆ, ಆ ಹೊತ್ತಿನಲ್ಲಿ ಅವಳಲ್ಲಿ ಯಾವುದೊ ದುರುದ್ದೇಶದ ಹವಣಿಕೆಯಿದೆ, ಅದರಿಂದಲೆ ಈ ಪರಿಸ್ಥಿತಿಯ ಲಾಭ ಪಡೆದು ಹಣ ಕೀಳಲು ಯತ್ನಿಸುತ್ತಿದ್ದಾಳೆ ಎಂದೆಲ್ಲಾ ಅವಳನ್ನೆ ದೂಷಿಸುವ ಮಟ್ಟಕ್ಕಿಳಿದಿದ್ದು ಕ್ಷುಲ್ಲಕತನವಲ್ಲವೆ ? ಇರಲಿ, ಸದ್ಯಕ್ಕೆ ಮತ್ತೆ ಅವುಗಳನ್ನು ಕೆದಕಿ ಸಣ್ಣವನಾಗುವ ಸ್ವಪರಿತಾಪ ಚಕ್ರಕ್ಕೆ ಸಿಲುಕದೆ ತಮ್ಮ ಮಿಲನದಿಂದ ಅವಳ ಗರ್ಭಕಲನದವರೆಗಾದ ಮತ್ತು ನಂತರದ ಫಲಿತ ಘಟನೆಗಳ ಪಾಶವೀಶಕ್ತಿಗಳು ಪ್ರೇರೇಪಿಸಿರಬಹುದಾದ ತಾಮಸತ್ವದ ಹೊರೆಯನ್ನು ಕಳಚುವ ದಾರಿ ಹುಡುಕಬೇಕು... ಯಾವ ಪ್ರತಿಕ್ರಿಯೆಯಿಂದ ಅದರ ಪರಿಣಾಮವನ್ನು ಗಮನೀಯವಾಗಿ ತಗ್ಗಿಸಬಹುದು? ಏನು ಮಾಡಿದರೆ ಆ ತಾಮಸೀ ರಾಸಾಯನಿಕ ಕರಗಿ ತನ್ನ ಪಾಪಪ್ರಜ್ಞೆಯನ್ನು ಹಗುರವಾಗಿಸಬಹುದು ? ಯಾವ ಪ್ರತ್ಯಾಸ್ತ್ರ ಬಳಸಿದರೆ ಇದರ ಮಾರಕ ಪರಿಣಾಮದ ವ್ಯಾಪ್ತಿ, ದೂರದಲ್ಲಿರುವ ಪಾಪುವಿಗೂ ತಟ್ಟಿ ಕಾಡದಂತೆ ಕಾಪಾಡಬಹುದು? ಅರೆರೆ..ಪಾಪು ಎಂದ ತಕ್ಷಣ ಹೊಳೆಯುತ್ತಿದೆ, ಈ ಇಡೀ ಸನ್ನಿವೇಶದಲ್ಲಿ ಅರಿತೊ ಅರಿಯದೆಯೊ ಗರ್ಭಸ್ಥ ಶಿಶುವೊ, ಭ್ರೂಣವೊ, ಮಗುವೊ ಒತ್ತೊತ್ತಾಗಿ ಹೆಣೆದುಕೊಂಡ ಬಂಧದಲ್ಲಿರುವಂತಿದೆಯಲ್ಲಾ? ಅಂದರೆ ಈ ಸಮಸ್ಯೆಯ ಪರಿಹಾರದ ಮೂಲವೂ ಅದೆ ರೀತಿಯ ಮಕ್ಕಳ ವಿಷಯಕ್ಕೆ ಸಂಬಂಧಿಸಿರಬೇಕೆಂಬ ಸೂಚನೆಯೆ ? ನಡೆದುದ್ದೆಲ್ಲವನ್ನು ನಡೆದೆ ಇಲ್ಲವೆನ್ನುವಂತೆ ವಿರುದ್ಧ ದಿಕ್ಕಿನತ್ತ ತಿರುಗಿಸುವುದಂತು ಆಗದ ಮಾತು - ಅದು ಕೊಟ್ಟ ಸಾಲ ಹಿಂದಿರುಗಿಸುವಷ್ಟು ಸರಳವಲ್ಲ.. ಆದರೆ ತಾನು ಹುಡುಕಬೇಕಾದ ಪರಿಹಾರ ಮೂಲ ಬಹುಶಃ ಯಾವ ರೀತಿಯಿಂದಲಾದರು ಮಕ್ಕಳಿಗೆ ಸಂಬಂಧಿಸಿದಂತಿದ್ದರೆ, ಅದು ಮೂಲದೋಷಕ್ಕೆ ಹತ್ತಿರವಾಗಿರುವ ಕಾರಣ, ಹೆಚ್ಚು ಪರಿಣಾಮಕಾರಕವಾಗಬಹುದೆ? ಅದರ ಜತೆಗೆ ಈ ಪರಿಹಾರ ಯಾವುದೊ ತರದಲ್ಲಿ ಕುನ್.ಸು ಗೆ ಸಂಬಂಧಿಸಿದ್ದರಷ್ಟೆ ಗಾಢ ಪರಿಣಾಮ ಬೀರಲು ಸಾಧ್ಯ.. ಇಲ್ಲದಿದ್ದರೆ ಆ ಪರಿಣಾಮ ಧನಾತ್ಮಕವಾಗಬಹುದಾದರೂ, ಗಷ್ಟ ಕಟ್ಟಿಕೊಂಡ ಆ ನಿರ್ದಿಷ್ಟ ತಾಮಸದ ಹೊರೆಯನ್ನು ಕಡಿತಗೊಳಿಸಲಾಗದು. ಅಂದಹಾಗೆ ಕುನ್. ಸು ಅದಾವುದೊ ನಾಲ್ಕಾರು ಅನಾಥ ಮಕ್ಕಳನ್ನು ಸಾಕಿ, ಸಲಹಿ, ನೋಡಿಕೊಳ್ಳುತ್ತಿರುವಳೆಂದು ಕುನ್. ಸೋವಿಯಿಂದ ಕೇಳಿದ್ದಂತೆ ನೆನಪು. ಅರೆರೆ.. ಹೌದಲ್ಲ ? ಈ ವಿಷಯ ಅವಳ ಹೃದಯಕ್ಕೆ ತೀರಾ ಹತ್ತಿರದ್ದಿರಬೇಕಲ್ಲವೆ? ಅಂದ ಮೇಲೆ ಆ ಕೆಲಸಕ್ಕೆ ಪೂರಕವಾಗಿ, ಸಹಕಾರಿಯಾಗುವಂತೆ, ಶಾಶ್ವತ ಪರಿಣಾಮ ಬೀರುವಂತೆ ಏನಾದರೂ ವ್ಯವಸ್ಥೆ ಮಾಡಿದರೆ ಅದವಳಲ್ಲಿ ಉಂಟುಮಾಡುವ ಪ್ರಸನ್ನತಾಭಾವದ ಶಕ್ತಿ ತರಂಗ, ತನ್ನೀ ತಾಮಸಿಕವನ್ನು ಕರಗಿಸುವ ನಿರಂತರ ಶಕ್ತಿಮೂಲವಾಗಬಹುದಲ್ಲವೆ? ಉದಾಹರಣೆಗೆ ಒಂದಷ್ಟು ಮೂಲಧನವನ್ನು ಠೇವಣಿಯಾಗಿರಿಸಿ ಅದರಿಂದ ಬರುವ ಆದಾಯದಲ್ಲಿ ಆ ಮಕ್ಕಳ ಬೇಕು, ಬೇಡಗಳನ್ನು ನಿಭಾಯಿಸಲು ಸಹಾಯ ಮಾಡಬಹುದಲ್ಲ? ಅದನ್ನು ಅಷ್ಟಕ್ಕೆ ಸೀಮಿತಗೊಳಿಸದೆ ಕುನ್. ಲಗ್ ರಂತಹವರ ಸಹಕಾರದಲ್ಲಿ ಒಂದು ಅನೌಪಚಾರಿಕ 'ಟ್ರಸ್ಟ್' ಮಾಡಿ, ಒಂದಷ್ಟು ಜನ ನಿಯಮಿತವಾಗಿ ಕೈಲಾದಷ್ಟು ಹಣ ಕೊಡುವಂತೆ, ಕಾಫಿ ಕ್ಲಬ್ಬಿನ ಮೂಲಕವಾದರು ಕಾಣಿಕೆ ನೀಡುವಂತೆ ಮಾಡಿದರೆ ಆ ಮಕ್ಕಳ ವಿದ್ಯಾಭ್ಯಾಸಕ್ಕು ಪ್ರೇರಕವಾದೀತು... ತಾನೂ ಕೂಡ ಸಾಧ್ಯವಿದ್ದಷ್ಟು ದೊಡ್ಡ ಆರಂಭಿಕ ಮೊತ್ತ ನೀಡಿ , ಈ ಪ್ರಕ್ರಿಯೆಗೆ ಚಾಲನೆ ನೀಡಿದರೆ ನಂತರ ತಂತಾನೆ ಪೋಷಿಸಿಕೊಂಡು ಹೋಗುತ್ತದೆ.. ತಾನೂ ಆದಾಗೆಲ್ಲ ಸಹಾಯ ಮಾಡುತ್ತಲೆ ಇರಬಹುದು ಎಲ್ಲೆ ಇದ್ದರೂ.. ಹೌದು ಇದೇ ಸರಿಯಾದ ತಾರ್ಕಿಕ ಮತ್ತು ಸೂಕ್ತ ಪರಿಹಾರ.. ಅಬ್ಬಾ ! ಈ ಪರಿಹಾರ ಹೊಳೆಯುತ್ತಿರುವಂತೆಯೆ ಮನದಲ್ಲಿ ಅದೆಷ್ಟು ನಿರಾಳ, ಹಗುರ ಭಾವ ಮೂಡುತ್ತಿದೆ... ?!

ದೈಹಿಕವಾಗಿ ಗಮನವಿನ್ನೆತ್ತಲೊ ಹರಿಸಿ ಗುಡಿಸಿ ಶುಧ್ಧಗೊಳಿಸುವ ಕಾಯಕದಲ್ಲಿ ನಿರತವಾಗಿದ್ದಾಗಲೆ ಅಂತರಂಗದಲ್ಲೂ ಅದೇ ಬಗೆಯ ಶುದ್ಧಿ ಪ್ರಕ್ರಿಯೆಗೆ ಪೂರಕವಾಗುವ ಚಿಂತನೆ ನಡೆದು ತನ್ನೆಲ್ಲ ಯಾತನೆಯ ತುಣುಕುಗಳನ್ನು ತಿರುವು-ಮುರುವಾಗಿಸಬಲ್ಲ ಪರಿಹಾರದ ರೂಪದಲ್ಲಿ ಹೊರಬರುತ್ತಿರುವುದು ಶ್ರೀನಾಥನಿಗೆ ಅಚ್ಚರಿಯನ್ನು ತಂದಿತ್ತು. 'ಬಹುಶಃ ವನ್ಯಧಾಮಾಶ್ರಮದ ಹಾದಿಯನ್ನು ಶುದ್ಧಿಗೊಳಿಸೆಂದು ಮಾಂಕ್. ಸಾಕೇತರು ಹೇಳಿದ್ದು ಇದೇ ಕಾರಣದಿಂದ ಇರಬಹುದೆ ? ತಾನೇ ಕಂಡುಕೊಂಡ ಹಾಗೆ ಬಾಹ್ಯದ ಭೌತಿಕ ಕ್ರಿಯೆಯು ಶುದ್ಧವಾಗಿದ್ದರೆ ಅದು ಒಳಗೆ ಪ್ರೇರೇಪಿಸುವ ಆಂತರೀಕ ತರಂಗಗಳೂ ಶುದ್ಧ ಸಾತ್ವಿಕವಾಗಿ ಪರಿಣಮಿಸಿ, ಅದೇ ಸಾತ್ವಿಕ ರಾಸಾಯನಿಕಗಳಾಗಿ ಪ್ರಚೋದಕವಾಗುತ್ತವೆ. ಅದಕ್ಕೆ ತನ್ನನ್ನು ಈ ಕಾರ್ಯಕ್ಕಿಳಿಸಿ ತನ್ಮೂಲಕ ಸಾತ್ವಿಕ ಪರಿಹಾರಕ್ಕೆ ಮನದ ನೆಲ ಹದವಾಗುವಂತೆ ಮಾಡಿದರೊ ಏನೊ? ಅದೇನೆ ಇರಲಿ ಈಗ ಕಂಡುಕೊಂಡ ಪರಿಹಾರದ ದಾರಿಗಳು ತನ್ನನ್ನು ಕಾಡುತ್ತಿರುವ ತಾಮಸಿಕ ಶಕ್ತಿಯ ಬಲು ದೊಡ್ಡ ತುಣುಕುಗಳನ್ನು ಸ್ಥಾನ ಪಲ್ಲಟವಾಗಿಸಿ ಅಪಾರ ಮನಶ್ಯಾಂತಿಯನ್ನೀಯುವುದು ಖಚಿತ. ಇನ್ನೇನು? ಪ್ರಶ್ನೆಯೂ ಗೊತ್ತಾಯಿತು, ಅದರ ಉತ್ತರವೂ ಗೊತ್ತಾಯಿತು.. ಜತೆಗೆ ಮುಂದಿನ ಅದೇ ತರದ ಪ್ರಶ್ನೆಗಳನ್ನು ಎದುರಿಸುವ ದಾರಿ, ವಿಧಾನವೂ ಹಸ್ತಗತವಾಯಿತು. ಇನ್ನು ಈ ಸ್ಥೂಲ ಯೋಜನೆಯನುಸಾರ ಎಲ್ಲವನ್ನು ಕಾರ್ಯಗತಗೊಳಿಸುವುದಷ್ಟೆ ಬಾಕಿಯಲ್ಲವೆ? ಆದರೂ ಈ ದಿನ ಮತ್ತು ನಾಳೆಯ ಕಾರ್ಯಕ್ರಮ ಮುಗಿವತನಕ ಕಾಯಬೇಕು - ಅಲ್ಲಿ ಮತ್ತಿನ್ಯಾವ ಪಾಠ ಕಾದಿದೆಯೋ ಬಲ್ಲವರಾರು?' ಹೀಗೆಲ್ಲಾ ಚಿಂತನೆಯ ಪಥದಲ್ಲಿ ಮಥಿಸುತ್ತ ಸಾಗಿದ್ದವನ ಚಿಂತನೆಯ ಸರಪಳಿಗೆ ತಟ್ಟನೆ ತಡೆಯೊಡ್ಡುವಂತೆ ಪೊರಕೆಯ ತುದಿ, ಹಾದಿಯ ಕೊನೆಯ ಬದಿಗಿದ್ದ ಎತ್ತರದ ಮೆಟ್ಟಿಲಿನ ಬದಿಯ ಜಗುಲಿಯ ಕಲ್ಲಿಗೆ ತಲುಪಿ ಅಲ್ಲಿಂದ ಮುಂದಕ್ಕೆ ಗುಡಿಸಲೇನು ಇಲ್ಲ ಎನ್ನುವಂತೆ ನಿಂತುಬಿಟ್ಟಿತ್ತು. ಅಲ್ಲಿಗೆ ಆ ಗುಡಿಸುವ ಕ್ರಿಯೆಯ ಅಂತ್ಯಕ್ಕೆ ಬಂದಂತಾಯ್ತೆಂದು ಅರಿವಾಗಿ , ಒಳಗಿನ ಚಿಂತನೆಯ ಗಮನ ಮತ್ತೆ ಹೊರಗಿನ ಕರ್ಮದತ್ತ ತಿರುಗಿತ್ತು. ಅಲ್ಲಿ ಆಗ ತಲೆಯೆತ್ತಿ ನೋಡಿದರೆ ಆ ಬಾಲಭಿಕ್ಷು ಸ್ವಲ್ಪ ದೂರದಲ್ಲೆ ಜಗುಲಿಯ ತುದಿಯಲ್ಲಿ ಕುಳಿತು ಮುಗುಳ್ನಗುತ್ತಿದ್ದ. ಅವನಾಗಲೆ ತನ್ನ ಪಾಲಿನ ಗುಡಿಸುವ ಕೆಲಸ ಮುಗಿಸಿ ಆರಾಮವಾಗಿ ವಿಶ್ರಮಿಸಿಕೊಳ್ಳಲು ಕುಳಿತುಕೊಂಡಂತಿತ್ತು. ತಾನಿನ್ನು ಈಗ ತಾನೆ ಗುಡಿಸಿ ಉದ್ದಕ್ಕು ಗುಡ್ಡೆ ಹಾಕಿಟ್ಟು ಬಂದಿರುವೆ.. ಅದನ್ನು ಹಾಗೆ ಬಿಡಬೇಕೊ, ಮತ್ತೆಲ್ಲಿಗಾದರು ಹೊತ್ತೊಯ್ದು ಹಾಕಬೇಕೊ ಇನ್ನು ಗೊತ್ತಿಲ್ಲ.. ಆದರೆ ಈತನಾಗಲೆ ಎಲ್ಲಾ ಮುಗಿಸಿ ಕೂತಂತಿದೆಯಲ್ಲಾ? ಬಹುಶಃ ಈ ಕೆಲಸ ದಿನಾ ಮಾಡುವುದರಿಂದ ಆ ಅನುಭವ ವೇಗವನ್ನು ಕಲಿಸಿರಬೇಕು ಎಂದುಕೊಂಡು ಕಣ್ಣೆತ್ತಿ ನೋಡಿದರೆ ಆ ಎದುರಿನ ಹಾದಿ ಒಂದು ಚೂರು ಕಸವಿಲ್ಲದೆ ಶುಭ್ರವಾಗಿ ಹಾಸಿಕೊಂಡಿತ್ತು. ಆದರೆ ಎಲ್ಲಿಯೂ ಗುಡ್ಡೆ ಹಾಕಿದ್ದ ಸುಳಿವೆ ಕಾಣಿಸಲಿಲ್ಲವಾಗಿ 'ಗುಡಿಸಿದ್ದೆಲ್ಲಾ ವಿಲೇವಾರಿಯನ್ನು ಮಾಡಿಬಿಟ್ಟಿದ್ದಾನಲ್ಲ ಈತ..?' ಎಂದುಕೊಂಡೆ ಆತನ ಮುಖದತ್ತ ನೋಡಿದರೆ ಅವನಿನ್ನು ನಗುತ್ತಲೆ ಇದ್ದ. ಅವನೇನು ಸದಾ ಈ ನಗುಮೊಗದಲ್ಲೆ ಇರುವವನೊ, ಅಥವಾ ತಾನಿನ್ನು ಗುಡಿಸಿದರೂ ಗುಪ್ಪೆಯನ್ನು ಎತ್ತಿಹಾಕುವ ಕೆಲಸ ಮುಗಿಸಿಲ್ಲವೆಂಬ ಕಾರಣಕ್ಕೆ ನಗುತ್ತಿರುವನೊ - ಅರಿವಾಗದೆ ಮತ್ತೆ ಅವನತ್ತಲೆ ಆಳವಾಗಿ ದಿಟ್ಟಿಸಿದಾಗ ಅವನ ದೃಷ್ಟಿ ಪೂರ ತಾನು ಗುಡಿಸಿಕೊಂಡು ಬಂದ ಹಾದಿಯತ್ತಲೆ ನೆಟ್ಟಿರುವುದನ್ನು ಗಮನಿಸಿ, ಅಲ್ಲೇನು ವಿಶೇಷವಿದೆಯೆಂದು ಹಿಂತಿರುಗಿ ನೋಡಿದವನೆ ಅಲ್ಲಿ ಕಂಡ ದೃಶ್ಯಕ್ಕೆ ಮಾತೆ ಹೊರಡದವನಂತೆ ಸ್ತಂಭೀಭೂತನಾಗಿ ನಿಂತುಬಿಟ್ಟ ಶ್ರೀನಾಥ...!

ಅಲ್ಲಿ ತಿರುಗಿ ನೋಡಿದರೆ ಅವನು ಗುಡಿಸಿ, ಗುಪ್ಪೆ ಹಾಕಿಕೊಂಡು ಬಂದಂತೆಲ್ಲ, ಅಲ್ಲಿ ವಿರುದ್ಧ ದಿಕ್ಕಿನಿಂದ ಬೀಸುತ್ತಿದ್ದ ಗಾಳಿ ಅವನಿಗರಿವಿಲ್ಲದಂತೆಯೆ ಆ ಗುಪ್ಪೆಗಳ ಮೇಲೆಲ್ಲಾ ಸವರಾಡಿ, ಸುಳಿದಾಡಿದಂತೆಲ್ಲ ಅದರ ಹೊದರನ್ನು ಪದರ ಪದರವಾಗಿ ಚೆದುರಿಸುತ್ತ, ಗುಡಿಸಿದ್ದ ಹಾದಿಯಲ್ಲೆ ನಿಧಾನವಾಗಿ ಮತ್ತೆ ಹರವಿಕೊಂಡು ಬಂದಿತ್ತು - ಅದುವರೆವಿಗೆ ಅವನ ಶುದ್ಧಿಯ ಕಾರ್ಯವೆಲ್ಲ ನೀರಿನಲ್ಲಿ ಮಾಡಿದ ಹೋಮವಾಗುವ ಹಾಗೆ...! ಆ ಬಾಲಭಿಕ್ಷು ನಗುತ್ತಿದ್ದುದು ಏಕೆಂದು ಆಗರಿವಾಗಿತ್ತು ಶ್ರೀನಾಥನಿಗೆ - 'ತಾನು ಹಿಂದೇನಾಗುತ್ತಿದೆಯೆಂದು ಗಮನಿಸದೆ ಗುಡಿಸುತ್ತ, ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮುಂದೆ ಮುಂದೆ ಸಾಗಿದ್ದರೆ ಅವೆಲ್ಲ ಅದೇ ವೇಗದಲ್ಲಿ ಮತ್ತೆ ಹರಡಿಕೊಳ್ಳುತ್ತ ಹೋಗುತ್ತಿವೆ.. ತಾನದನ್ನು ಒಮ್ಮೆಯೂ ತಿರುಗಿ ನೋಡದೆ, ಸರಿಪಡಿಸುವ ಯತ್ನವನ್ನೂ ಮಾಡದೆ ಮುನ್ನಡೆದಿದ್ದೇನೆ..! ಏನಿದರ ಸಂದೇಶ ? ಈ ಗುಡ್ಡೆ ಹಾಕಿದ್ದ ಗುಪ್ಪೆಗಳೆಲ್ಲ ನಾವು ಉದ್ದಕ್ಕು ಮಾಡಿಕೊಂಡು ಬಂದ ಕರ್ಮಗಳ ಸಂಕೇತವೆ? ಅವು ಸರಿಯಾಗಿ ಪೇರಿಸಿದ ಸಾತ್ವಿಕ ಗುಡ್ಡೆಯೊ ಅಥವಾ ತಪ್ಪಾಗಿ ಪೇರಿಸಿದ ತಾಮಸದ ಗುಡ್ಡೆಯೊ, ಅವನ್ನು ಪೇರಿಸುತ್ತಿದ್ದ ಹಾಗೆ ಹಾರಿ, ಚೆಲ್ಲಾಡಿ ಹೋಗದಂತೆ ಸರಿಯಾಗಿ ನೋಡಿಕೊಳ್ಳದಿದ್ದರೆ ಎಲ್ಲವೂ ಮತ್ತೆ ಚೆದುರಿ ದಿಕ್ಕುಪಾಲಾಗಿ ಹೋಗುವುದೆಂದರ್ಥವೆ? ಇದೆ ಗುಡ್ಡೆ ನಮ್ಮ ಕೋಶಗಳಲ್ಲಿ ಶೇಖರವಾಗುವ ಸಾತ್ವಿಕ, ರಾಜಸ, ತಾಮಸಗಳ ಸಂಕೇತವೆಂದಿಟ್ಟುಕೊಂಡರೆ ಅವನ್ನು ಸರಿಯಾಗಿ ನಿಭಾಯಿಸದೆ ಬಿಟ್ಟರೆ, ಅವು ಗುರುತು ಹಿಡಿಯಲಾಗದಂತೆ ಚೆದುರಿಕೊಂಡು, ಮಿಕ್ಕಿದ ಅದೇ ರೀತಿ ಚೆಲ್ಲಾಡಿಹೋದ ಗುಪ್ಪೆಗಳ ಜತೆ ಮಿಶ್ರಗೊಂಡು ಮತ್ತೆ ಗುರುತಿಸಲಾಗದಂತೆ ಎಲ್ಲೆಲ್ಲೊ ದಿಕ್ಕಾಪಾಲಾಗಿ ವ್ಯರ್ಥವಾಗಿ ಹೋಗುತ್ತವೆಯೆ - ಉದಾಹರಣೆಗೆ, ಅಲ್ಲಲ್ಲಾದ ತಪ್ಪುಗಳನ್ನು ಅಲ್ಲಲ್ಲೆ ಸರಿಪಡಿಸದೆ ಹೋದರೆ, ಅವುಗಳ ನಿವ್ವಳ ಪರಿಣಾಮದ ಮೊತ್ತ ಗುರುತು ಹಿಡಿಯಲೂ ಆಗದಂತೆ ಸ್ವರೂಪ ಬದಲಾಯಿಸಿಕೊಂಡು ಎಲ್ಲೊ ನೆಲೆ ಸಿಕ್ಕಿದೆಡೆ ಕರಗಿಹೋದಂತೆ ? ಹಾಗಾದಾಗ ಮುಂದೆ ಅವುಗಳನ್ನು ತಿದ್ದಬೇಕೆಂದರೂ, ಪೂರ್ಣರೂಪದಲ್ಲಿ ಕೈಗೆ ಸಿಗದ ವಿರೂಪವಾಗಿಯೊ, ಚೂರುಚೂರಾಗಿ ಒಡೆದ ಗಾಜಿನಂತಾಗಿಯೊ ಬದಲಾಗಿ ಅವನ್ನು ಸರಿಪಡಿಸುವುದು ಸಹ ಕಷ್ಟಕರವಾಗಿಬಿಡುವಂತೆ...? ಅಂದರೆ ತಾನು ಮುಂದೆ ತೀರಾ ಹಳೆಯ ನೆನಪಿನ ತುಣುಕುಗಳನ್ನು ಹೆಕ್ಕಿ ಪರಿಹಾರ ಹುಡುಕಲು ಹೊರಟರೂ ಅವುಗಳಲ್ಲಿ ಅದೆಷ್ಟೊ ಹೀಗೆ ಚೂರುಚೂರಾಗಿ ಹೋಗಿರಬೇಕಲ್ಲವೆ? ಅವನ್ನು ಗಾಜಿನ ಚೂರೆತ್ತಿ ಅಂಟಿಸಿದಂತೆ ಸಿಕ್ಕಿದ ತುಣುಕನ್ನಷ್ಟೆ ರಿಪೇರಿ ಮಾಡಿಕೊಂಡು ಹೋಗಬೇಕೇನೊ? ಆ ಚೂರು ದೊಡ್ಡದಿದ್ದಷ್ಟು ಅನುಕೂಲ... ಆದರೆ, ಸಾಧ್ಯವಿರುವುದಾದರೆ, ಈ ರೀತಿ ಚೂರಾಗಲಿಕ್ಕೆ ಬಿಡದೆ, ಹೀಗೆ ಚೂರೆ ಆಗದ ಹಾಗೆ ನೋಡಿಕೊಳ್ಳುವುದು ಜಾಣತನವಲ್ಲವೆ? ಅರ್ಥಾತ್ ಗುಡಿಸಿದ ಗುಪ್ಪೆ ಚೆದುರದ ಹಾಗಿಡುವ ದಾರಿ ಹುಡುಕಬೇಕೆಂದರ್ಥವಲ್ಲವೆ? ಆ 'ಚೆದುರದ ಹಾಗಿಡುವ ದಾರಿ' ಅದೇನಿರಬಹುದೆಂದೆ ಹೊಳೆಯುತ್ತಿಲ್ಲವಲ್ಲ ? ಬಹುಶಃ ಈ ಗುಡಿಸಿದ ಗುಪ್ಪೆಯನ್ನು ಸರಿಸೂಕ್ತವಾಗಿ ನಿಭಾಯಿಸಿದರೆ ಅದಕ್ಕೂ ಉತ್ತರ ಸಿಗಬಹುದೆ?' ಎಂದುಕೊಳ್ಳುತ್ತಲೆ ಮತ್ತೆ ಆ ಬಾಲಭಿಕ್ಷುವನ್ನು ನೋಡಿದರೆ, ಅವನಿನ್ನು ನಗುತ್ತಿರುವುದು ಕಂಡು ಯಾಕೊ ತುಸು ಕೋಪವೆ ಬಂದಿತ್ತು - ತನ್ನ ಸ್ಥಿತಿಗೆ ಅವಹೇಳನ ಮಾಡುವವನಂತೆ ನಗುತ್ತಿರುವ ಅವನನ್ನು ಕಂಡು. ಈ ಬಾರಿ ಮತ್ತೊಮ್ಮೆ ಬೇರೆ ವಿಧಾನದಲ್ಲಿ ಯತ್ನಿಸಿ ಗುಡಿಸುವ ಕೆಲಸ ಪೂರ್ಣ ಮಾಡಿ ತೋರಿಸಿ ಅವನ ಬಾಯಿ ಮುಚ್ಚಿಸಬೇಕೆಂದು ನಿರ್ಧರಿಸಿ, ಪೊರಕೆಯನ್ನು ಕೈಲಿ ಹಿಡಿದವನೆ ಹೆಬ್ಬಾಗಿಲಿನತ್ತ ಮತ್ತೆ ಸರಸರನೆ ನಡೆದಿದ್ದ ಶ್ರೀನಾಥ, ತನ್ನ ಆ ಗುಡಿಸುವ ಕೆಲಸವನ್ನು ಮತ್ತೆ ಮೊದಲಿನಿಂದ ಆರಂಭಿಸಲು...! 

(ಇನ್ನೂ ಇದೆ)
__________
 

Comments

Submitted by partha1059 Thu, 10/16/2014 - 15:56

ನಾಗೇಶರೆ ಪುಟಗಳ ಸಂಖ್ಯೆಯ ಲೆಕ್ಕಚಾರ ನನಗಿಲ್ಲ, ಕತೆಯಂತು ಸಾಕಷ್ಟು ಖುಷಿ ಕೊಡುತ್ತಿದೆ, ಬೇಕಿದ್ದಲ್ಲಿ ಮುದ್ರಣಕ್ಕೆ ಹೋಗುವಾಗ ಎರಡು ಬಾಗಗಳನ್ನಾಗಿ ಮಾಡಿ ಪ್ರಕಟಿಸಿ. ಶ್ರೀನಾಥನ ಪ್ರಾಜೆಕ್ಟಿನ ಯಶಸಿನವರೆಗೂ ಮೊದಲ ಬಾಗ, ನಂತರದ ಅದ್ಯಾತ್ಮಕತೆಯ ವೈಜಾನಿಕ ನಿರೂಪಣೆ ಎರಡನೆ ಬಾಗ

Submitted by nageshamysore Fri, 10/17/2014 - 03:21

In reply to by partha1059

ಪಾರ್ಥಾ ಸಾರ್ ನಮಸ್ಕಾರ... ಉದ್ದಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತ ಹೋದರು ಕತೆ ಓದಿದಾಗ ಖುಷಿ ಕೊಡುತ್ತಿದೆಯೆಂದರೆ, ಈ ಪ್ರಯತ್ನ ನಿಜಕ್ಕೂ ಸಾರ್ಥಕ. ಆಧ್ಯಾತ್ಮಿಕದ ತಾತ್ವಿಕ ಮತ್ತು ವೈಜ್ಞಾನಿಕ ನಿರೂಪಣೆಯ ಭಾಗ ತನ್ನ ವಸ್ತು-ವಿಷಯ ಮತ್ತು ತುಸು 'ಮಾಮೂಲಿಗಿಂತ ಕಠಿಣತಮ' ಸ್ತರದಿಂದಲೆ ಓದಲು ನಿರಾಸಕ್ತಿ ಮೂಡಿಸಬಹುದು ಅಥವಾ ಸುಲಭದಲ್ಲಿ ಅರ್ಥವಾಗದೆ ಹೋಗಬಹುದು ಎಂಬ ಅಳುಕು ಬಾಧಿಸುತ್ತಿದ್ದರು, ಎರಡು ದೃಷ್ಟಿಕೋನದ ಸಮಗ್ರ ಚಿತ್ರಣವೆ ಅದರ ಸರಿಯಾದ ವ್ಯಾಖ್ಯಾನವೆನಿಸಿ ಮುಂದುವರೆಸಿಬಿಟ್ಟೆ. ಅದೊಂದು ರೀತಿಯಲ್ಲಿ ಸ್ವಯಂಕಲಿಕೆಯೂ ಆಗಿತ್ತು ಎನ್ನಬಹುದು. ಅಂದಹಾಗೆ ನಿಮ್ಮ ಪ್ರತಿಕ್ರಿಯೆಯಲ್ಲಿಯೆ ಮತ್ತೊಂದು ಪ್ರಶ್ನೆಗೂ ಉತ್ತರಿಸಿಬಿಟ್ಟಿದ್ದೀರಾ - ಪುಸ್ತಕವಾಗುವ ಕುರಿತು. ತಮ್ಮ ಈ ಮಹತ್ವದ ಅನಿಸಿಕೆ, ಅಭಿಪ್ರಾಯಕ್ಕೆ ಹೃತ್ಪೂರ್ವಕ ಧನ್ಯವಾದಗಳು.