ದೇಶದ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭ

ದೇಶದ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭ

ಚಿತ್ರ

ದೇಶದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜ ಸ್ತಂಭ(ಚಿತ್ರ-1) (೨೧೩ ಅಡಿ-ದೆಹಲಿಯದ್ದು ೨೦೭ ಅಡಿ) ನಮ್ಮ ಬೆಂಗಳೂರಿನ "ರಾಷ್ಟ್ರೀಯ ಸೈನಿಕ ಸ್ಮಾರಕ" ಉದ್ಯಾನದಲ್ಲಿದೆ(ಚಿತ್ರ-13). ರಾಜಭವನದ ಪಕ್ಕದಲ್ಲಿರುವ "ಜವಾಹರಲಾಲ್ ನೆಹರು ಪ್ಲಾನಟೋರಿಯಮ್"ನ ಎದುರಿಗೇ ಇದೆ. ರಾಷ್ಟ್ರಧ್ವಜ ಹಾರಾಡುತ್ತಿರುವುದನ್ನು ದೂರದಿಂದಲೇ ತಲೆ ಎತ್ತಿ ನೋಡಿ ರೋಮಾಂಚಿತರಾಗಬಹುದು. ಆದರೆ ಅಕ್ಕಪಕ್ಕದ ರಸ್ತೆ ತುಂಬಾ ವಾಹನಗಳು ವಿಪರೀತ ವೇಗದಲ್ಲಿ ಹೋಗುತ್ತಿರುವುದರಿಂದ, ಡ್ರೈವ್ ಮಾಡುತ್ತಾ ಧ್ವಜವನ್ನು ನೋಡುವ ಸಾಹಸ ಮಾಡಬೇಡಿ. (ನನ್ನ ವಿಷಯ ಬಿಡಿ. ೨೫ ವರ್ಷದಿಂದ ಬೆಂಗಳೂರೆಲ್ಲಾ ಓಡಾಡಿ ಅಭ್ಯಾಸವಿರುವ ನನ್ನ ಸ್ಕೂಟರ್ ಅದರ ಪಾಡಿಗೆ ಹೋಗುತ್ತಾ ಇರುತ್ತದೆ- ನಾನು ಕ್ಲಿಕ್ಕಿಸುತ್ತಾ ಹೋಗುವೆ...:)
 ಭಾರೀ ಗಾತ್ರದ ಧ್ವಜ(48 ಅಡಿ ಉದ್ದ, 72 ಅಡಿ ಅಗಲ), ದೆಹಲಿಯ ಧ್ವಜಕ್ಕಿಂತ (೬೦ ಅಡಿ ಉದ್ದ, ೯೦ ಅಡಿ ಅಗಲ) ಸ್ವಲ್ಪ ಕಿರಿದು, ಗಾಳಿಗೆ ಅರಳಿ ಹಾರುತ್ತಿರುವುದನ್ನು ನೋಡಲು ಬಹಳ ಖುಷಿಯಾಗುವುದು(ಚಿತ್ರ-15,23). ೩೧ ಕೆ.ಜಿ ತೂಕದ ಧ್ವಜವನ್ನು ಅರಳಿಸಬೇಕಾದರೆ ಗಾಳಿಯ ವೇಗ ಎಷ್ಟಿರಬಹುದು? ಆ ಗಾಳಿಯ ವೇಗವನ್ನೇ ಯಾವುದಕ್ಕಾದರೂ ಉಪಯೋಗಿಸಿಕೊಳ್ಳಬಹುದಲ್ವಾ ಅಂತ ಆಲೋಚಿಸುವಾಗಲೇ, ಅಲ್ಲೇ ಒಂದು ಗಾಳಿಯಂತ್ರವೂ ಇತ್ತು (ಚಿತ್ರ-26). ಸ್ವಲ್ಪ ದೂರದಲ್ಲಿ ಒಂದು ಬೋರ್ಡ್ ಇತ್ತು-"ರಾಜ್ಯ ಮಟ್ಟದ ನವೀಕರಿಸಬಹುದಾದ ಇಂಧನ ಮೂಲಗಳ ಉದ್ಯಾನವನ"-ಮಾಜೀ ಮಂತ್ರಿ ರೇವಣ್ಣರಿಂದ ಉದ್ಘಾಟಿಸಲ್ಪಟ್ಟಿರುವುದು. ಇನ್ಯಾವ ಇಂಧನ ಮೂಲಗಳನ್ನು ಉಪಯೋಗಿಸಿದ್ದಾರೆ ಎಂದು ನೋಡುವಾಗ ಸೌರಫಲಕಗಳನ್ನು ಉದ್ದಕ್ಕೂ ಜೋಡಿಸಿರುವುದು ಕಾಣಿಸಿತು(ಚಿತ್ರ -25).
ಧ್ವಜಸ್ತಂಭದ ಬಳಿಯಲ್ಲೇ "ಅಗ್ನಿ", "ಪೃಥ್ವಿ", "ಬ್ರಹ್ಮೋಸ್"...ಮಿಸೈಲ್‌ಗಳ ಪ್ರತಿಕೃತಿಗಳನ್ನು, ಹಡಗು, ಟ್ಯಾಂಕರ್ ಇತ್ಯಾದಿಗಳನ್ನು ಸಾಲಾಗಿ ನಿಲ್ಲಿಸಿರುವರು(ಚಿತ್ರ17-21). (ಫೋಟೋ ತೆಗೆದದ್ದೇ ತೆಗೆದದ್ದು- ಮಿಸೈಲ್ ನಿರ್ಮಾಣದಲ್ಲಿ ನನ್ನ ಪಾತ್ರವೇನಿಲ್ಲದಿದ್ದರೂ ಪ್ರತಿಕೃತಿ ಎದುರು ಸೈಂಟಿಸ್ಟ್‌ನಂತೆ ಆಲೋಚಿಸುತ್ತಾ ನಿಂತಿರುವ ಫೋಟೋ ತೆಗೆಯಲೇನಡ್ಡಿ.. :))
 ಇಷ್ಟೇ ಅಲ್ಲ..ಮಕ್ಕಳಿಗೆ ಆಟವಾಡಲು (ಜಾರುಬಂಡಿ...ಚಿತ್ರ-24) ಸಾಕಷ್ಟು ಸ್ಥಳವಿದೆ.  
 ಮೊದಲ ವರ್ಲ್ಡ್ ವಾರ್‌ನಿಂದ ಕಾರ್ಗಿಲ್ ಯುದ್ಧದವರೆಗೆ ಹುತಾತ್ಮ ಯೋಧರ ನೆನಪಿಗೆ ಒಂದು ಪುತ್ಥಳಿ ಸ್ಥಾಪಿಸಿರುವರು(ಚಿತ್ರ-22).
 ಸಂಜೆಯ ಹೊತ್ತು "ಇಂದಿರಾಗಾಂಧಿ ಸಂಗೀತ ಕಾರಂಜಿ(ಚಿತ್ರ- 14,27,29)"ಯ ನೃತ್ಯ ನೋಡಬಹುದು. ನೋಡಲಾಗದಿದ್ದವರಿಗಾಗಿ  ಯುಟ್ಯೂಬ್‌ನ ಒಂದು ಕೊಂಡಿ - http://www.youtube.com/watch?v=A1dJGu5y10Y
 ದೀಪಾವಳಿಗೆ ಒಂದಕ್ಕೆ ಒಂದು ಫ್ರೀ ಆಫರ್ ಇರುವ ಹಾಗೇ, ಸೈನಿಕ ಸ್ಮಾರಕ ನೋಡಲು ಬಂದರೆ ಅದೇ ಉದ್ಯಾನವನದಲ್ಲಿಯೇ ಇಂಧನ ಮೂಲಗಳ ಉದ್ಯಾನ ಹಾಗೂ ಸಂಗೀತಕಾರಂಜಿ ನೋಡಲು ಸಿಗುವುದು. ಇನ್ನೂ ಸಮಾಧಾನವಾಗದಿದ್ದರೆ ಎದುರಿಗಿರುವ ಪ್ಲಾನಟೋರಿಯಮ್‌ಗೂ ಹೋಗಬಹುದು.
 

 

 

 

Rating
No votes yet

Comments

Submitted by ಗಣೇಶ Wed, 10/22/2014 - 22:09

In reply to by partha1059

ನನಗೂ ಇದೇ ಯೋಚನೆ ಬಂದಿತ್ತು ಪಾರ್ಥರೆ. ಸಂವಿಧಾನದ ಮಾಹಿತಿ ಸಿಗದಿದ್ದರೂ ಇದೊಂದು ಉಪಯುಕ್ತ ಕೊಂಡಿ ಸಿಕ್ಕಿತು-http://skpumesha.blogspot.in/2013/08/rules-for-flag-hoisting-india.html

Submitted by nageshamysore Wed, 10/22/2014 - 18:42

ಗಣೇಶ್ ಜಿ, ದೇಶದ ಎತ್ತರದ ರಾಷ್ಟ್ರಧ್ವಜ ಸ್ತಂಭ ಬೆಂಗಳೂರಿನಲ್ಲಿದೆ ಎನ್ನುವುದು ಖುಷಿಯ ಸಂಗತಿ. ಅದನ್ನೆಲ್ಲ ಪೋಟೊ ಮುಖಾಂತರವೆ ನೋಡಲು ಸಾಧ್ಯವಾಗಿದ್ದು ಇನ್ನೂ ಖುಷಿಯ ಸಮಾಚಾರ.. ನಾಡಗೀತೆಯ ಜತೆಗಿನ ಸಂಗೀತ ಕಾರಂಜಿಯ ವಿಡೀಯೊ ಕೂಡ ಚೆನ್ನಾಗಿದೆ.. !

Submitted by ಗಣೇಶ Wed, 10/22/2014 - 22:35

In reply to by nageshamysore

ನಾಗೇಶರೆ, ಧ್ವಜಕ್ಕೆ ಸಂಬಂಧಿಸಿ ಇನ್ನೊಂದು ದಾಖಲೆ ಸಹ ಕರ್ನಾಟಕದ್ದೇ- http://vijaykarnataka.indiatimes.com/articleshow/21833066.cms .
>>ನಾಡಗೀತೆಯ ಜತೆಗಿನ ಸಂಗೀತ ಕಾರಂಜಿಯ ವಿಡೀಯೊ ಕೂಡ ಚೆನ್ನಾಗಿದೆ.. !
-ನಾನು ಹೋಗಿದ್ದು ಬೆಳಗ್ಗೆ. "ಸಂಗೀತ ಕಾರಂಜಿ" ರಾತ್ರಿ ಹೊತ್ತು ಆದ್ದರಿಂದ ನೋಡಲಾಗಲಿಲ್ಲ. ಅದಕ್ಕೆ ಯುಟ್ಯೂಬಲ್ಲಿ ಹುಡುಕಿದಾಗ ಆ ವಿಡಿಯೋ ಚೆನ್ನಾಗಿ ಕಾಣಿಸಿತು. ನಾನು ತೆಗೆದದ್ದಲ್ಲ.
ಮೇಲಿನ ಚಿತ್ರಗಳಲ್ಲಿ ಕೊನೆಯ ಚಿತ್ರ-ಮೆಟ್ಟಲುಗಳ ಚಿತ್ರ ಗಮನಿಸಿ. ಸಂಗೀತ ಕಾರಂಜಿ ನೋಡಲು ಕುಳಿತುಕೊಳ್ಳುವ ಸ್ಥಳ. ಚಿತ್ರ ಎನ್‌ಲಾರ್ಜ್ ಮಾಡಿದರೆ ಒಂದು ನಾಯಿ ಸೀಟು ರಿಸರ್ವ್ ಮಾಡಿ ಕುಳಿತಿದ್ದು ಕಾಣಿಸುವುದು:)

Submitted by swara kamath Wed, 10/22/2014 - 20:11

ಗಣೇಶ್ ಅವರೆ ರಾಷ್ಟ್ರಧ್ವಜ ಸ್ಥಂಬದ ಕುರಿತಾದ ಚಿತ್ರಸಮೇತ ಮಾಹಿತಿಗಾಗಿ ಧನ್ಯವಾದ.ಬೇಂಗಳೂರಿಗೆ ಬಂದಾಗ ಈ ಸ್ಥಳಕ್ಕೆ ಬೇಟಿ ನೀಡುವೆ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

Submitted by ಗಣೇಶ Wed, 10/22/2014 - 22:57

In reply to by swara kamath

ಕಾಮತರೆ, ನಿಮಗೂ ಹಾಗೂ ಸಂಪದಿಗರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಪ್ರಥಮ ಬಾರಿಗೆ ಈ ಧ್ವಜಾರೋಹಣ ಮಾಡಿದ ಸುದ್ದಿ-
- http://bit.ly/1rqvxW6 (ಮೈಲುದ್ದದ ಕೊಂಡಿಯನ್ನು ಸಪ್ತಗಿರಿವಾಸಿ ಕೊಟ್ಟ ಕೊಂಡಿ ಮೂಲಕ ಕಿರಿದಾಗಿಸಿದೆ. ಸಪ್ತಗಿರಿವಾಸಿಗೆ ಧನ್ಯವಾದಗಳು)

Submitted by partha1059 Thu, 10/23/2014 - 17:50

ವಾಹ್ ಉತ್ತಮ‌ ಮಾಹಿತಿ!
ಗಮನಿಸಿ ಕಡೆಯ‌ ಬಾವುಟದ‌ ಅಳತೆ 30*60' ಅಳತೆಯದು
ಅಂದರೆ ಒಂದು ಸಾದಾರಣ‌ ಸೈಟಿಗಿಂತ‌ ದೊಡ್ಡದಾಗಿದೆ! ಅಂತಹ‌ ಅಳತೆಯ‌ ಬಾವುಟ‌ ಎಲ್ಲಿ ಹಾರಿಸಿದ್ದಾರಾ ಗೊತ್ತಿಲ್ಲ‌
ಹಾಗೆ ಬೆಂಗಳೂರಿನ‌ ರಸ್ತೆಗಳಲ್ಲಿ ಮಾರುವ‌ ಚಿಕ್ಕ‌ ಪ್ಲಾಸ್ಟಿಕ್ ಬಾವುಟ‌ ಸಂವಿದಾನ‌ ವಿರೋದಿ!

Submitted by venkatb83 Fri, 10/24/2014 - 16:34

In reply to by partha1059

ಗಣೇಶ್ ಅಣ್ಣ,
ನಾನು ಆನಂದರಾವ್ ಸರ್ಕಲ್ ಮೇಲೆ ಬಸ್ಸಿನಲ್ಲಿ ಹೋಗುವಾಗ ದಿನ ನಿತ್ಯ ಒಂದು ರಾಷ್ಟ್ರ ಧ್ವಜ ಎತ್ತರದಲ್ಲಿ ಹಾರಾಡುವುದು ಕಾಣಿಸಿವುದು .
ಅದು ವಿಧಾನ ಸೌಧ ಮೇಲಿನದು ಅನಿಸಿತ್ತು -ಆದರೆ ಅದರ ಬೃಹದಾಕಾರ ನೋಡಿ ಇದು ಓದುವಾಗ ಬಹುಶ ನೀವು ಬರೆದ ಆ ಧ್ವಜ -ನಾ ನೋಡಿದ ಧ್ವಜವೇ ಅನಿಸುತ್ತಿದೆ ... ನೀವು ಹೇಳಿದ ಎಲ್ಲ ಸ್ಥಳಗಳನ್ನು ಬೈಕಲ್ಲಿ (ಬೇರೆಯವರು ಓಡಿಸುವುದು -ನಾ ಹಿಂಬದಿ ಸವಾರ ..!!) ಹೋಗ್ವಾಗ ಹೊರಭಾಗದಲ್ಲಿ ನೋಡಿದ್ದೆ ...
ಈಗ ಎಲ್ಲ ಸ್ಥಳಗಳ ಬಗ್ಗೆ ಸಚಿತ್ರ ಮಾಹಿತಿ ಕೊಟ್ಟು ವಾರಾಂತ್ಯದ ಒಂದೊಳ್ಳೆ ಪ್ರವಾಸಿ ಸ್ಥಳದ ಬಗ್ಗೆ ತಿಳಿಸಿರಿವಿರಿ ..ನನ್ನಿ
ಶುಭವಾಗಲಿ
*****ಸಕಲ ಸಂಪದ ಓದುಗ -ಲೇಖಕ-ಸಂಪಾದಕ ಬಳಗಕ್ಕೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು*****
\|/

Submitted by ಗಣೇಶ Sun, 10/26/2014 - 19:49

In reply to by venkatb83

ಸಪ್ತಗಿರಿವಾಸಿಯವರೆ, ನಿಮಗೂ ಶುಭಾಶಯಗಳು.
ಯಾಕೋ ಏನೋ ಗೊತ್ತಿಲ್ಲ. ೫-೬ ದಿನದಿಂದ ಧ್ವಜ ಕಾಣಿಸುತ್ತಿಲ್ಲ. ಬಹುಷಃ ಭಾರಿ ಮಳೆ ಎಂದು ಧ್ವಜವನ್ನು ತೆಗೆದಿಟ್ಟಿರಬಹುದು. ಧ್ವಜಸ್ತಂಭ ಇದೆ:)

Submitted by ಗಣೇಶ Sun, 10/26/2014 - 19:41

In reply to by partha1059

ಪಾರ್ಥರೆ,
>>>ಗಮನಿಸಿ ಕಡೆಯ‌ ಬಾವುಟದ‌ ಅಳತೆ 30*60' ಅಳತೆಯದು, ಅಂದರೆ ಒಂದು ಸಾದಾರಣ‌ ಸೈಟಿಗಿಂತ‌ ದೊಡ್ಡದಾಗಿದೆ!
-ಧ್ವಜಸ್ತಂಭದ ಎತ್ತರ ಏರಿಸುವುದೇ ದೇಶ ದೇಶದೊಳಗೆ ಒಂದು ಸ್ಪರ್ಧೆ ಆಗಿದೆ. ಸದ್ಯಕ್ಕೆ ಇರುವ ದಾಖಲೆ- http://www.arabnews.com/saudi-arabia/news/634401 ಸೌದಿ ಅರೇಬಿಯಾದ ಜೆಡ್ಡಾದಲ್ಲಿರುವ ಧ್ವಜಸ್ತಂಭದ್ದು : ೫೬೧ ಅಡಿ! ಗಿನೆಸ್ ದಾಖಲಿಸಿದ್ದು- http://www.guinnessworldrecords.com/records-1/tallest-unsupported-flagpole/
ಬಾವುಟದ ಅಳತೆ ಗಮನಿಸಿ- 32.5 m (106 ft 7.5 in) by 49.35 m (161 ft 10.9 in)!
ಹೀಗೇ ಮುಂದುವರೆದರೆ ಒಂದು ದಿನ flagpole ಹತ್ತಿಯೇ ಮಂಗಳ ಗ್ರಹ ತಲುಪುವೆವು. :)

Submitted by venkatb83 Tue, 12/09/2014 - 16:01

ಗಣೇಶ್ ಅಣ್ಣಾ ಅವರು ದೇಶದ ಅತಿ ಎತ್ತರದ ಧ್ವಜದ ಬಗ್ಗೆ ಬರೆದ ಲೇಖನ ಓದಿದ್ದೇವೆ.. ಈಗ ವಿಜಯವಾಣಿಯ ಡಿಸೆಂಬರ್ 5 ರ ಶುಕ್ರವಾರದ ಸಂಚಿಕೆಯಲ್ಲಿ ಆ ಬಗ್ಗೆ ಸಂಪೂರ್ಣ ವಿವರ ಇದೆ ...
ಓದಿ ಲಿಂಕ್ ಇಲ್ಲಿದೆ ...http://bit.ly/1G9hAWghttp://bit.ly/1G9hFt4http://bit.ly/1wuCE8T
ಶುಭವಾಗಲಿ
ನನ್ನಿ
\|/

Submitted by ಗಣೇಶ Thu, 12/11/2014 - 00:43

In reply to by venkatb83

ಸಪ್ತಗಿರಿವಾಸಿ(ವೆಂಕಟ್),
ಇನ್ನಷ್ಟು ಮಾಹಿತಿಯುಕ್ತ ಕೊಂಡಿ ಕೊಟ್ಟುದ್ದಕ್ಕೆ ಧನ್ಯವಾದಗಳು.