’ಪರಿಭ್ರಮಣ’ ನಾಗೇಶರ ಕಾದಂಬರಿ ಒಂದೆರಡು ಮಾತು

’ಪರಿಭ್ರಮಣ’ ನಾಗೇಶರ ಕಾದಂಬರಿ ಒಂದೆರಡು ಮಾತು

ಇದನ್ನು ಸಣ್ಣಕಥೆಯೆಂದು ವರ್ಗಿಕರಿಸಬೇಕೊ, ನೀಳ್ಗತೆಯೆನ್ನಬೇಕೊ ನನಗೆ ಗೊಂದಲವಿದ್ದರೂ ಬ್ಯಾಂಕಾಕಿನಂತಹ ಮಹಾನಗರ ಜೀವನದ ಒಂದು ಪಲುಕಿನ ಪರಿಚಯವಾದೀತೆಂಬ ಆಶಯದೊಂದಿಗೆ ಸಂಪದದಲ್ಲಿ ಸೇರಿಸುತ್ತಿದ್ದೇನೆ. ಇದರಲ್ಲಿ ಕೆಲವು ಸ್ಥಳ, ದೃಶ್ಯ, ಹೆಸರುಗಳು ಅಲ್ಲಿ ನೈಜ್ಯವಾಗಿ ಕಂಡವುಗಳ ಪ್ರತ್ಯಕ್ಷ್ಯ ವರ್ಣನೆಯಾದರೆ ಕಥಾನಕದ ಮಿಕ್ಕ ಅಂಶಗಳೆಲ್ಲ ಕಲ್ಪನೆಯ ಮೂಸೆಯಿಂದ ಹೊರಹೊಮ್ಮಿದ್ದು. ಕಥೆಯೊಡನೆ ಅನುಭವ, ಗೊಂದಲ, ತಾಕಲಾಟಗಳ ವಿವಿಧ ಮಜಲುಗಳನ್ನು ಹತ್ತಿ ಇಳಿಯುವ ಕಥಾನಾಯಕನ ಚಿತ್ರಣಕ್ಕನುಗುಣವಾಗಿ, ಕಥೆಯನ್ನು ನಾಲ್ಕು ಪ್ರಮುಖ ಭಾಗಗಳಾಗಿ (ಅವರೋಹಣ...ಆಕ್ರಮಣ...ಅಧಃಪತನ...ಆರೋಹಣ...) ವಿಂಗಡಿಸಿದ್ದರೂ ಇವೆಲ್ಲವೂ ಪರಸ್ಪರಾವಲಂಬಿ ಸರಣಿ ಕೊಂಡಿಯಿಂದ ಬಂಧಿಸಲ್ಪಟ್ಟ "ಪರಿಭ್ರಮಣ" ಕಥಾನಕದ ಪೂರಕ ಅಂಗಗಳೆನ್ನಲು ಅಡ್ಡಿಯಿಲ್ಲ; ಭಾಗಗಳನ್ನೆಲ್ಲ ಬದಿಗೊತ್ತಿ, ಒಂದೇ ನೀಳ ಕಥಾನಕವೆಂದರೂ ಸರಿಯೆ. ಓದುಗರಿಗೆ ಸ್ವಲ್ಪ ಹತ್ತಿರವಾಗಿರಲೆಂದು, ಬ್ಯಾಂಕಾಕಿನಲ್ಲಿ ತಾತ್ಕಾಲಿಕವಾಗಿ ನೆಲೆಸಿದ ಭಾರತೀಯನೊಬ್ಬನ ಕಥೆಯ ಹಂದರವನ್ನು ಆರಿಸಿಕೊಂಡು, ಆ ಪಾತ್ರದ ಮೂಲಕ ಅಲ್ಲಿನ ಕಲೆ, ಆಚಾರ, ವಿಚಾರಗಳನ್ನು ಭಾರತೀಯ ದೃಷ್ಟಿಕೋನದಲ್ಲಿ ಹಿಡಿಯಲು ಯತ್ನಿಸಿದ್ದೇನೆ

ಈ ರೀತಿ ಮುನ್ನುಡಿಯೊಂದಿಗೆ ಪ್ರಾರಂಬವಾದ ನಾಗೇಶ ಮೈಸೂರುರವರ ಕತೆ 'ಪರಿಭ್ರಮಣ'  ಸಣ್ಣಕತೆಯಾಗದೆ, ನೀಳ್ಗತೆಯೂ ಆಗದೆ ಬೃಹುತ್ ಕಾದಂಬರಿಯಾಗಿ 67  ಕಂತುಗಳಲ್ಲಿ ಸರಿಸುಮಾರು ಒಂಬತ್ತು ತಿಂಗಳು ಕಾಲ ಹರಿದು ಬಂದಿತು. 

ಬ್ಯಾಕಾಂಕಿನಂತಹ ಮಹಾನಗರದ ವಿವಿದ ಬಾಗಗಳ ಪರಿಚಯ, ಒಂದು ಪ್ರವಾಸ ಕಥನ ಎನ್ನುವಂತೆ ಪ್ರಾರಂಭವಾದ ಕಥಾನಕ, ನಂತರ ಶ್ರೀನಾಥನ ವ್ಯಕ್ತಿತ್ವದ ವಿವಿಧ ಮಗ್ಗುಲುಗಳನ್ನು ತೋರಿಸುತ್ತ ಸಾಗಿದಂತೆ , ಮನುಷ್ಯನ ಮನಸಿನ ವಿಶ್ವರೂಪದರ್ಶನವಾದಂತೆ ಆಯಿತು. ಮೊದಲಿಗೆ ಅವನು ಕಾಮವಾಂಚಿತನಾಗಿ ರಸ್ತೆಯಲ್ಲಿ ಸಿಗುವ ಹುಡುಗಿಯರ ಹಿಂದೆ ಬೀಳುವುದು, ಹಣಕಳೆದು ಕೊಳ್ಳುವುದು ,ಯಾವುದೋ ಸುಂದರಿಯ ಹಿಂದೆ ಬಿದ್ದು ಕಡೆಗೆ ಅವಳು ಹೆಣ್ಣಲ್ಲ ಗಂಡು ಎಂದು ಅರಿತು ಬೆದರುವುದು. ಕಡೆಗೆ ಅಂತಹ ಬೆಲೆವೆಣ್ಣನ್ನು ತಾನಿದ್ದ ಮನೆಗೆ ಕರೆಸಿಕೊಂಡು ಸುಖಿಸುವ ಯತ್ನ ಇವೆಲ್ಲ ಮನುಷ್ಯನ ಅದಃಪತನದ ಪಯಣವನ್ನು ಚಿತ್ರಿಸಿಕೊಟ್ಟಿತು. 

ಶ್ರೀನಾಥನ ಅಂಡಲೆಯುವ ಹಿನ್ನಲೆಯಲ್ಲಿ ಪೂರ್ಣ ಬ್ಯಾಂಕಾಂಕಿನ ಪರಿಚಯವನ್ನೆ ಮಾಡಿಕೊಟ್ಟರು ನಾಗೇಶರು. ಅಲ್ಲಿಯ ರಸ್ತೆಗಳು , ಅಲ್ಲಿಯ ಜನ,  ಪಾರ್ಕುಗಳು, ಆಸ್ಪತ್ರೆ,  ಸರ್ಕಾರದ ವ್ಯವಸ್ಥೆ ಅಲ್ಲದೆ  ಅಲ್ಲಿಯ ಸಂಪ್ರದಾಯಗಳು, ಥಾಯ್ ನ ಭಾಷೆ, ಚೀನಿಯರ ಪ್ರಭಾವ ಹೀಗೆ ಎಲ್ಲವನ್ನು ಅನಾವರಣಗೊಳಿಸಿದರು. ಬಹುಶಃ ಬೃಹತ್ ಕಾದಂಬರಿಯೊಂದು ತಟ್ಟಬಹುದಾದ ಎಲ್ಲ ಮಗ್ಗುಲುಗಳನ್ನು ಪರಿಚಯಿಸಿದರು. 

ಹಾಗಿರುವಾಗ ಅವನ ಹೆಣ್ಣಿನ ಹಿಂದೆ ಅಲೆಯುವ ಸ್ವಭಾವಕ್ಕೆ ಇಂಬುಗೊಡಲೋ ಎಂಬಂತೆ ಅವನದೇ ಆಫೀಸಿನ ಕೆಲಸಗಾತಿ ಕುನ್.ಸೂ ಪರಿಚಯ. ಅವಳ ಮೂಲಕ ಆ ದೇಶದ ಸಂಸ್ಕೃತಿಯ , ಚೀನಿ ಬಾಷೆಯ, ಅಲ್ಲಿಯ ಸಂಭಂದಗಳನ್ನು ಅರಿಯುವ ಪ್ರಯತ್ನ ಎಲ್ಲವೂ ಶ್ರೀನಾಥನ ವ್ಯಕ್ತಿತ್ವದ ಸಂಕೀರ್ಣತೆಯ ಕನ್ನಡಿ. 

ಶ್ರೀನಾಥನ ಕತೆಯ ಮೂಲಕ ನಾಗೇಶರು ಭಾರತೀಯರು ಹೊರದೇಶದಲ್ಲಿ ಅನುಭವಿಸಬಹುದಾದ ಎಲ್ಲ ಅನುಭವಗಳನ್ನು ತೆರೆದಿಟ್ಟಿದ್ದಾರೆ ಅನ್ನಿಸುತ್ತೆ. ಅಲ್ಲಿಯ ಮಾರ್ಕೆಟ್ಟಿನಲ್ಲಿ ತನಗೆ ಬೇಕಾದ ಅಕ್ಕಿಯನ್ನು ಕೊಳ್ಳುವದರಿಂದ , ಕಡಿಮೆ ಖರ್ಚಿನಲ್ಲಿ ಎಲ್ಲಿ ಕಾಫಿ ಕುಡಿಯಬಹುದು ಅನ್ನುವದರ ಜೊತೆಗೆ, ಭಾರತೀಯವಲ್ಲದೆ, ಅಲ್ಲಿಯದೆ ಆದ ಅಹಾರಗಳು, ಹಬ್ಬಗಳ ಆಚರಣೆ. ಹೊಸವರ್ಷದ ಆಚರಣೆ,  ಕಡೆಗೊಮ್ಮೆ ಯಾವುದಾದರು ಸಾವುಂಟಾದಾಗ ಅಲ್ಲಿ ಇರಬಹುದಾದ ವ್ಯವಸ್ಥೆ ಇಂತಹುದನ್ನೆಲ್ಲ ಸರಾಗವಾಗಿ ವಿವರಿಸುತ್ತ ಇರುವಾಗಲೆ, ಭಾರತದಿಂದ ಶ್ರೀನಾಥನು ಯಾವ ಪ್ರಾಜೆಕ್ಟಿಗಾಗಿ ಅಲ್ಲಿಗೆ ಬಂದಿದ್ದನ್ನು ಅದರ ಅತೀ ಆಳವಾದ ವಿವರಣೆಗಳನ್ನು ಕೊಟ್ಟಿದ್ದಾರೆ. 

ಸಾಫ್ಟವೇರ್ ಕಂಪನಿ ಎಂಬಾ ಮಾಯಜಿಂಕೆಯ ಅನಾವರಣ. ಅಲ್ಲಿರುವ ಕಾರ್ಮಿಕರ, ಕೆಲಸಗಾರರ ವಿವಿದ ಮನೋವೃತ್ತಿ. ಅಲ್ಲಿರಬಹುದಾದ ಅಸೂಯೆ, ರಾಜಕೀಯ ಎಲ್ಲವು ವಿವರಿಸಿದ್ದಾರೆ. 
ಈ ನಡುವೆಯು ಶ್ರೀನಾಥನ ಹೆಣ್ಣಿನ ಬೇಟೆಯ ಚಪಲವಂತು ಸಾಗುತ್ತಲೇ ಇರುತ್ತದೆ. ಆ ಬುದ್ದಿಗೇಡಿ ಕೆಲಸದಿಂದಾಗಿ ಹಲವು ಬಾರಿ ಆಪತ್ತಿಗೆ ಸಿಕ್ಕಿದ್ದರು, ಕೈಲಿದ್ದ ಪರ್ಸ್ ಹಣ ಕಳೆದುಕೊಂಡಿದ್ದರು ನಾಯಿ ಬಾಲ ಡೊಂಕು ಎನ್ನುವಂತೆ ಶ್ರೀನಾಥನ ಮನ. 

ಅವನ ಪ್ರೋಜೆಕ್ಟಿನ ಯಶಸ್ವಿಯಾಗಿ ಸಾಗಲು ಹಲವು ಅಡಚಣೆಗಳು ಹಾಗೆ ಅನಿರೀಕ್ಷಿತವಾದ ಯಾರದೋ ಸಹಾಯದೊಂದಿಗೆ ಯಶಸ್ಸಿನತ್ತ ಹೆಜ್ಜೆ ಎನ್ನುವಂತೆ ಸಾಗುವಾಗಲೆ. ಅವನ ಅಧಃಪತನದ ಕಡೆಯ ಹೆಜ್ಜೆ ಎನ್ನುವಂತೆ ಕೆಲಸಗಾತಿ ಕುನ್.ಸೂ ಜೊತೆ ಅನಿರೀಕ್ಷಿತ ಸಂದರ್ಭದಲ್ಲಿ ದೈಹಿಕ ಸಂಬಂಧ ಬೆಳೆದು , ಅವನನ್ನು ತಪಿತಸ್ಥನನ್ನಾಗಿ ನಿಲ್ಲಿಸುತ್ತದೆ. 

ಕುನ್.ಸೂ ಜೊತೆಗಿನ ತನ್ನ ಆಕ್ರಮಣದ ವರ್ತನೆ, ನಂತರ ಅವಳು ಕೆಲಸವನ್ನೆ ಬಿಟ್ಟುಹೋದ ಸಂದರ್ಭ ಎಲ್ಲವನ್ನು ಅವನನ್ನು ಮನದಲ್ಲೆ ಹಣ್ಣಾಗಿಸುವಾಗಾಲೆ, ತಾನು ಪ್ರೋಜೆಕ್ಟಿನಲ್ಲಿ ಪೂರ್ಣ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಅವನಿಗೆ. ಕುನ್.ಸೊವಿ, ಸೌರಬ್ ರಂತ ಹಿತೈಶಿಗಳ ನೆರವಿನೊಡನೆ, ಎಲ್ಲ ಅಡೆತಡೆಗಳನ್ನು ದಾಟಿ ಪ್ರಾಜೆಕ್ಟ್ ನಲ್ಲಿ ಯಶಗಳಿಸಿದ್ದಾಗ ಓದುಗರು ಒಮ್ಮೆ ನಿಟ್ಟಿಸಿರು ಬಿಟ್ಟಿರಲು ಸಾಕು. ಶ್ರೀನಿವಾಸಪ್ರಭು ಎಂಬ ವಿಲನ್ ರೀತಿಯ ಪಾತ್ರವೊಂದು ಶ್ರೀನಾಥನನ್ನು ಕಥಾನಾಯಕನನ್ನಾಗಿಸಿತು ಅನಿಸುವಂತೆ ಮಾಡಿತು. 

ಸರಿ ಇನ್ನೇನು ಕತೆ ಮುಗಿಸುತ್ತಾರೆ ಅಂದುಕೊಂಡವರಿಗೆ, ಮತ್ತೆ ಶ್ರೀನಾಥನ ಕತೆಯ ಪುನಃ ಪ್ರಾರಂಭ. ಶ್ರೀನಾಥನ ಕೆಟ್ಟನಡೆಯಿಂದ ತಾನು ಕೆಟ್ಟ ಹೆಸರನ್ನು ಹೊತ್ತು, ಎಲ್ಲಿಯೂ ಅವನನ್ನು ದೂಷಿಸದೆ ದೂರ ಸರಿದ ಕುನ್.ಸೂ ಮತ್ತೆ ಬರುತ್ತಾಳೆ ಎಂಬ ನಿರೀಕ್ಷೆ ಓದುಗರದು. ಆದರೆ ನಾಗೇಶರು ನಮ್ಮನ್ನೆಲ್ಲ ಮತ್ತೆ ಕರೆದೋಯ್ದದ್ದು ಬೇರೆಯದೆ ಆದ ಪ್ರಪಂಚಕ್ಕೆ. 

ಶ್ರೀನಾಥನಿಗೆ ಅನೀರಿಕ್ಷಿತ ಎಂಬಂತೆ ಬೌದ್ದ ಗುರು ಒಬ್ಬರ ಪರಿಚಯವಾಗುತ್ತದೆ. ಅವರು ಅವನ ಮನದಲ್ಲಿ ಅಪಾರ ಪ್ರಭಾವ ಬೀರುತ್ತಾರೆ. ಹಾಗೆ ಕುನ್.ಸೂ ಒಂದಿಗೆ ತನ್ನ ಕೆಟ್ಟನಡೆ ಶ್ರೀನಾಥನ ಮನದ ಮೇಲೆ ಪರಿಣಾಮ ಬೀರುತ್ತದೆ. ಅವನು ತಪ್ಪಿತಸ್ಥ ಮನದ ಭಾವದೊಂದಿಗೆ ಸುತ್ತುತ್ತಿರುತ್ತಾನೆ. 

ಪ್ರಾಜೆಕ್ಟಿನ ಯಶಸ್ಸಿನ ಸಂಭ್ರಾಮಚರಣೆಯ ಕಡೆಯಲ್ಲಿ , ಅವರೆಲ್ಲರಿಗೂ ತನ್ನಿಂದ ಕುನ್.ಸೂ ಳಿಗೆ ಆದ ಅನ್ಯಾಯದ ಅರಿವು ಅಲ್ಲಿ ಎಲ್ಲರಿಗೂ ಇದೆಯೆಂದು ಶ್ರೀನಾಥನಿಗೆ ಭೋದೆಯಾಗುತ್ತದೆ. ಕೇವಲ ಅವನ ಪ್ರಾಜೆಕ್ಟಿನ ಯಶಸ್ಸು ಅವನ ತಪ್ಪನ್ನು ಮುಚ್ಚಿರುತ್ತದೆ ಎಂದು ಅರಿಯುತ್ತಾನೆ. ಅವನಲ್ಲಿ ಪಶ್ಚಾತಾಪ ಮೂಡಿದಾಗ, ಅವನ ಪಾಪವನ್ನು ತೊಳೆಯಲೋ ಎನ್ನುವಂತೆ ಮೂಡಿದ ಮಳೆಯ ಚಿತ್ರಣ ಗಮನ ಸೆಳೆಯುತ್ತದೆ 

ಅಂತಹುದೇ ಮಳೆಯಲ್ಲಿ ತಾನಿರುವ ಮನೆಯಲ್ಲಿಯೆ ಬಂದಿಯಾದಾಗ ಬ್ಯಾಂಕಾಕಿನ ಮೇಲೆ ಬೀಳುವ ಮಳೆಯ ಪರಿಣಾಮವನ್ನು ನಾಗೇಶರು ಯಶಸ್ವಿಯಾಗಿ ಚಿತ್ರಿಸಿದ್ದಾರೆ.  ಆ ಮಳೆಯಲ್ಲಿ ಬಂದಿಯಾದ ಶ್ರೀನಾಥನಿಗೆ , ಬೆಂಗಳೂರಿನಲ್ಲಿ ಹಾಸಿಗೆ ಹಿಡಿದು ಸಾವಿಗೆ ಹತ್ತಿರವಾಗಿ ಮಲಗಿರುವ ತನ್ನ ಮಗುವಿನ ಸುದ್ದಿ ತಡವಾಗಿ ತಿಳಿಯುತ್ತದೆ. 

ಶ್ರೀನಾಥನ ಪಶ್ಚಾತಾಪ, ಅವನ ಮಗುವಿನ ಅನಾರೋಗ್ಯ ಇವುಗಳ ನಡುವೆ ಅವನಿಗೆ ಬರುವ ನೆರವಿನ ಆಸರೆ ಬೌದ್ದಗುರು ಮಾಂಕ್ ಸಾಕೇತರದು.  ತನ್ನ ಲೌಕಿಕವಾದ ಕಷ್ಟಗಳಿಗೆ,ಮಾನಸಿಕ ಕ್ಲೇಶಗಳಿಗೆ ಅಲೌಕಿಕ ಸಾಧನೆಗಳ ಹಿನ್ನಲೆಯಲ್ಲಿ ಉತ್ತರ ಹುಡುಕಲು ಹೊರಡುವ ಶ್ರೀನಾಥ ,  ಮಾಂಕ್ ಸಾಕೇತರ ಮಾತಿನಂತೆ ತಾನು ’ಮಾ೦ಕ್ ಹುಡ್’ ದೀಕ್ಷೆಗಾಗಿ ’ವಾಟ್ ಪ: ನಾನಾಚಟ್ ’ ಎನ್ನುವ ಆಶ್ರಯಧಾಮದಲ್ಲಿ ಸೇರುವನು. 

ಇಲ್ಲಿಂದ ಮುಂದೆ ನಾಗೇಶರು ತಮ್ಮದೆ ಆದ ತತ್ವ ಒಂದನ್ನು ಶ್ರೀನಾಥನ ಮೂಲಕ ನಮ್ಮೆಲ್ಲರಿಗು ತಲುಪಿಸುವ ಯತ್ನ ಮಾಡುತ್ತಿದ್ದಾರೆ ಅನ್ನಿಸುತ್ತಿದೆ. 

ಯಾವುದೇ ವಿಷಯ ವಸ್ತುವನ್ನು ಮುಟ್ಟುವಾಗ ಅದರಲ್ಲಿ ಪರಸ್ಪರ ವಿರುದ್ದವಾದ ಎರಡು ಮುಖ ಅಥವ ದ್ವಂದ್ವದ ತುದಿಗಳಿರುತ್ತದೆ ಎನ್ನುವುದು ಈ ವಾದದ ಮುಖ್ಯ ಅಂಶ. ಈ ದ್ವಂದ್ವದ ಸಮತೋಲನವೆ ನಮ್ಮ ಮನಸಿನ ನೆಮ್ಮದಿಯ ಶಕ್ತಿಯ ಮೂಲ ಎನ್ನುವ ವಾದವನ್ನು ಪ್ರಸ್ತುಪಡಿಸುತ್ತಾರೆ. ಹಾಗೆ ಇಂತಹ ದ್ವಂದ್ವದ ಅಸಮತೋಲನವೆ ನಮ್ಮೆಲ್ಲ ವಿಕೃತಿಗಳಿಗೆ ಕಾರಣ ಎನ್ನುತ್ತಾರೆ. ಅತ್ಯಂತ ತರ್ಕಬದ್ಧವಾಗಿ ಮನಸಿಗೆ ನಾಟುವಂತೆ ತಮ್ಮ ವಾದವನ್ನು ಓದುಗರ ಮುಂದಿಡುತ್ತ ಆ ಮೂಲಕ ಶ್ರೀನಾಥನು ದಾರಿ ತಪ್ಪಿದ ತನ್ನ ಬದುಕಿನ ಸಮತೋಲನವನ್ನು ಸಾಧಿಸುವನೆ ಎನ್ನುವುದು ಕುತೂಹಲದ ವಸ್ತುವಾಗಿ ನಾವು ಮುಂದೆ ಓದುವಂತೆ ಪ್ರೇರಿಪಿಸುತ್ತದೆ. 

 ಹಾಗೆಯೆ ನಮ್ಮ ವೇದಾಂತಗಳು ಸಾರುವ ಮನುಷ್ಯನಲ್ಲಿ ಹಾಸುಹೊಕ್ಕಾಗಿರುವ ಸತ್ವ-ರಜೋ-ತಮೋ ಗುಣಗಳನ್ನು ನಾಗೇಶರು ವೈಜ್ಞಾನಿಕ ಬಾಷೆಯಲ್ಲಿ,  ಹಾಗು ಅದನ್ನು ರಸಾಯನಶಾಸ್ತ್ರದ ಆದಾರದಲ್ಲಿ ವಿವರಿಸುವ ಪರಿಯಂತು ವಿಸ್ಮಯ ಮೂಡಿಸುತ್ತದೆ.  

ಅಲ್ಲಿಯ ಬೌದ್ದಾಶ್ರಮದಲ್ಲಿ ಮೌನಚಿಂತನೆ ದೈಹಿಕ ಪರಿಶ್ರಮಗಳ ಅನುಭವಗಳಿಸುತ್ತ  ಹಾಗೆಯೆ ತನ್ನ ಜೀವನದ ದ್ವಂದ್ವಗಳಿಗೂ ಪರಿಹಾರಹುಡುಕಲು ಪ್ರಯತ್ನಿಸಿ ಕಡೆಗೂ ಅದರಲ್ಲಿ ಯಶಸ್ವಿಯಾಗುತ್ತಾನೆ ಶ್ರೀನಾಥ. ಪಶ್ಚಾತಾಪದ ಕ್ರಿಯೆಗಳ ಮೂಲಕ ತನ್ನ ತಪ್ಪುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಅವನು ತನ್ನ ಬ್ಯಾಕಾಂಕಿನ ಪ್ರೋಜೆಕ್ಟನ್ನು ಮುಗಿಸಿ ಹೊರಡಲು ಸಿದ್ದನಾಗುತ್ತಾನೆ. 

ಜೀವನದಲ್ಲಿ ಸುಖಾಂತ್ಯ ಅಥವ ದುಃಖಾಂತ್ಯವೆಂಬುದು ಇಲ್ಲವೇ ಇಲ್ಲ ಅದೊಂದು ಹರಿಯುವ ನದಿ ಎನ್ನುವಂತೆ, ಇಲ್ಲಿ ತನ್ನ ಸಮಸ್ಯೆಗಳಿಗೆಲ್ಲ ಪರಿಹಾರಕಾಣುತ್ತಿರುವಂತೆ, ಮುಖ್ಯಕಛೇರಿಯಲ್ಲಿ ಅವನಿಗೆ ಮತ್ತೊಂದು ಪ್ರೋಜೆಕ್ಟ್ ಸಿದ್ದವಾಗಿರುತ್ತದೆ ಇಂಡೋನೇಶಿಯಾದಲ್ಲಿ , ಅದರ ಹಿಂದೆ ಮತ್ತೆ ಯಥಾ ಪ್ರಕಾರ ಶ್ರೀನಿವಾಸಪ್ರಭುವಿನ ಕುತಂತ್ರವಿರುತ್ತದೆ. ಆದರೆ ಶ್ರೀನಾಥ ಈ ಬಾರಿ ನಿರ್ಲಿಪ್ತ, ಅದನ್ನು ಎದುರಿಸುವ ಮಾನಸಿಕ ಸ್ಥಿರತೆಯೊಡನೆ ಹೊರಡುವ ಎನ್ನುವಲ್ಲಿಗೆ ಪರಿಭ್ರಮಣದ ಕತೆ ಮುಕ್ತಾಯ. 

ದೀರ್ಘಕಾಲ ೬೭ ಕಂತುಗಳೊಡನೆ ಮುಂದುವರೆದ ಈ ಕತೆ ಅಥವ ಅನುಭವ ಓದುವಾಗ ಸಾಕಷ್ಟು ಖುಷಿಕೊಟ್ಟಿತು. ಬಹುಶಃ ನಾಗೇಶರಿಗೆ ಕತೆಯನ್ನು ಪುಸ್ತಕಮಾಡುವ ಉದ್ದೇಶವಿರಬಹುದು , ಎರಡನೆ ಬಾಗದಲ್ಲಿ ಚಿಂತನೆಗಳಲ್ಲಿಯ ಕೆಲವು ಪುನಾರವರ್ತನೆಗಳನ್ನು ಕಡಿಮೆಗೊಳಿಸಿ ಪುಸ್ತಕರೂಪದಲ್ಲಿ ಬಂದರೆ ಆಕರ್ಷಕ ಕಾದಂಬರಿಯಾಗಬಹುದು. 

 ಉತ್ತಮ ಕಾದಂಬರಿಯೊಂದನು ಬರೆದ , ಸಂಪದ ಓದುಗರೆಲ್ಲರಿಗೂ ಸಂತಸ ನೀಡಿದ ನಾಗೇಶರಿಗೆ ಅಭಿನಂದನೆಗಳು. 

 

 

 

Rating
No votes yet

Comments

Submitted by H A Patil Sun, 10/26/2014 - 19:57

ಪಾರ್ಥ ಸಾರಥಿಯವರಿಗೆ ವಂದನೆಗಳು
ನಾಗೇಶ ಮೈಸೂರು ರವರ ಕಾದಂಬರಿ 'ಪರಿಭ್ರಮಣಕ್ಕೆ' ತಾವು ಬರೆದ ಪ್ರತಿಕ್ರಿಯೆ ಓದಿದೆ. ಈ ಕಾದಂಬರಿಯ ಬಹಳಷ್ಟು ಕಂತುಗಳನ್ನು ನನಗೆ ಓದಲಾಗಲಿಲ್ಲ. ತಮ್ಮ ಈ ಪ್ರತಿಕ್ರಿಯೆಯನ್ನು ನಾನು ಆ ಕೃತಿಯ ವಿಮರ್ಶೆಯಾಗಿ ಭಾವಿಸುವೆ. ತಮ್ಮ ಪ್ರತಿಕ್ರಿಯೆ ಅಷ್ಟು ಚೆನ್ನಾಗಿದೆ. ಅದು ನನಗೆ ನಾಗೇಶರ ಇಡಿ ಕಾದಂಬರಿಯ ಸಾರವನ್ನು ಪರಿಚಯಿಸಿತು. ತಮ್ಮ ವಿವರವಾದ ಪ್ರತಿಕ್ರಿಯೆ ಸಂತಸ ತಂದಿದೆ. ಧನ್ಯವಾದಗಳು.