ಡೀಸೆಲ್ ಬೆಲೆ ನಿಯಂತ್ರಣಮುಕ್ತ -ಹಗಲುದರೋಡೆಗೆ ಅನುಕೂಲ

ಡೀಸೆಲ್ ಬೆಲೆ ನಿಯಂತ್ರಣಮುಕ್ತ -ಹಗಲುದರೋಡೆಗೆ ಅನುಕೂಲ

ಕೇಂದ್ರ ಸರಕಾರವು ಡೀಸೆಲ್ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸಿದೆ.  ಹೀಗಾಗಿ ಇನ್ನು ಮುಂದೆ ಅಂತರರಾಷ್ಟ್ರೀಯ ಬೆಲೆಯನ್ನನುಸರಿಸಿ ಡೀಸೆಲ್ ಬೆಲೆಯಲ್ಲಿಯೂ ಹೆಚ್ಚು ಕಡಿಮೆ ಆಗುತ್ತದೆ.  ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳು ಇಳಿದಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಡೀಸೆಲ್ ಬೆಲೆಯಲ್ಲಿ ೩ ರೂಪಾಯಿ ಕಡಿಮೆ ಮಾಡಲಾಗಿದೆ ಆದರೆ ಇದರ ಪ್ರಯೋಜನ  ಪರೋಕ್ಷ ಬಳಕೆದಾರರಿಗೆ ಆಗಿಲ್ಲ, ಕೇವಲ ನೇರ ಬಳಕೆದಾರರಿಗೆ ಮಾತ್ರ ಆಗಿದೆ.  ಇಲ್ಲಿ ನೇರ ಬಳಕೆದಾರ ಎಂದರೆ ಡೀಸೆಲ್ ಬಳಸುವ ಸರಕು ಸಾಗಣೆ ವಾಹನದ ಮಾಲೀಕರು, ಸಾರಿಗೆ ಬಸ್ಸುಗಳ ಮಾಲೀಕರು, ಸಾರಿಗೆ ಸಂಸ್ಥೆಗಳು, ರೈಲ್ವೇ ಇತ್ಯಾದಿ.  ಪರೋಕ್ಷ ಬಳಕೆದಾರ ಎಂದರೆ ಬಸ್ಸಿನಲ್ಲಿ ಪ್ರಯಾಣಿಸುವ ಸಾಮಾನ್ಯ ವ್ಯಕ್ತಿ, ಎಲ್ಲಾ ದಿನಬಳಕೆ ವಸ್ತುಗಳ ಬಳಕೆದಾರರು ಸೇರುತ್ತಾರೆ.  ಸರಕು ಸಾಗಣೆ ವಾಹನಗಳ ಸರಕು ಸಾಗಣೆ ದರದಲ್ಲಿ ಇಳಿಕೆ ಆಗಿಲ್ಲ.  ಡೀಸೆಲ್ ಬೆಲೆ ಎರಡು ರೂಪಾಯಿ ಏರಿದರೆ ಬಸ್ಸು ಟಿಕೆಟ್ ದರವನ್ನು ಶೇಕಡಾ ೧೦ರಷ್ಟು ಹೆಚ್ಚಿಸುವ ಸಾರಿಗೆ ಸಂಸ್ಥೆಗಳು ಡೀಸೆಲ್ ಬೆಲೆ ಮೂರು ರೂಪಾಯಿ ಇಳಿದರೂ ಟಿಕೆಟ್ ದರದಲ್ಲಿ ಒಂದು ಪೈಸೆಯೂ ಕಡಿಮೆ ಮಾಡಿಲ್ಲ.  ಹಗಲುದರೋಡೆ ಎಂದರೆ ಇದುವೇ ಅಲ್ಲವೇ?  ಇವರಿಗೆ ಹೇಳುವವರು, ಕೇಳುವವರು ಎಂಬುದು ಹಾಗಾದರೆ ನಮ್ಮ ದೇಶದಲ್ಲಿ ಯಾರೂ ಇಲ್ಲವೇ?  ಡೀಸೆಲ್ ಬೆಲೆ ನಿಯಂತ್ರಣಮುಕ್ತಗೊಳಿಸಿದ ಸರಕಾರಕ್ಕೆ ಅದರ ಪ್ರಯೋಜನ ಜನಸಾಮಾನ್ಯರಿಗೆ ದೊರಕುವಂತೆ ಮಾಡುವ ಯಾವ ಜವಾಬ್ದಾರಿಯೂ ಇಲ್ಲವೇ?  ಸರಕಾರಗಳು ಏಕೆ ಈ ಹಗಲುದರೋಡೆಗೆ ಮೌನ ಸಮ್ಮತಿ ನೀಡಿವೆ?  ಹೀಗಾದರೆ ಇನ್ನು ಮುಂದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿದಾಗ ಡೀಸೆಲ್ ಬೆಲೆ ಏರಿ ಅದರ ಜೊತೆಗೆ ಮಧ್ಯರಾತ್ರಿಯೇ ಬಸ್ಸು ಟಿಕೆಟ್ ದರವೂ ಏರುವ ಮತ್ತು ಡೀಸೆಲ್ ಬೆಲೆ ಇಳಿದರೆ ಏರಿದ ಬಸ್ಸು ಟಿಕೆಟ್ ಹಾಗೂ ಸರಕು ಸಾಗಣೆ ದರಗಳು ಕಡಿಮೆಯಾಗದೇ ಹಾಗೆಯೇ ಮುಂದುವರಿಯುವ ತನ್ಮೂಲಕ ಜನಸಾಮಾನ್ಯರ ಹಗಲುದರೋಡೆಯ ಕೆಟ್ಟ ಪರಂಪರೆಗೆ ಮುಕ್ತ ಪರವಾನಗಿ ದೊರೆತಂತೆಯೇ ಸರಿ.  ಈ ವಿಚಾರವಾಗಿ ನಮ್ಮ ಟಿವಿ ಮಾಧ್ಯಮಗಳು ಏಕೆ ಚಕಾರ ಎತ್ತುತ್ತಿಲ್ಲ?  ಇದು ಸಾರ್ವಜನಿಕ ಹಿತಾಸಕ್ತಿಯ ವಿಷಯ ಅಲ್ಲವೇ?  ಟಿವಿ ಮಾಧ್ಯಮಗಳು ತಮ್ಮ ಕುಂಭಕರ್ಣ ನಿದ್ದೆಯಿಂದ ಎಚ್ಚತ್ತುಕೊಳ್ಳುವುದು ಯಾವಾಗ?

ಚಿತ್ರ: ಅಂತರ್ಜಾಲದಿಂದ.

Comments

Submitted by H A Patil Wed, 10/29/2014 - 19:38

ಆನಂದರವರಿಗೆ ವಂದನೆಗಳು
ತಮ್ಮ ಲೇಖನ ವರ್ತಮಾನ ಸ್ಥಿತಿಗೆ ಹಿಡಿದ ಕೈಗನ್ನಡಿ.ಇದರಿಂದ ನೇರ ಬಳಕೆದಾರರಿಗೆ ಲಾಭ ಎನ್ನುವುದನ್ನು ಬಿಟ್ಟರೆ ಪರಾವಲಂಬಿ ಜನ ಸಾಮಾನ್ಯನಿಗೆ ಇದರಿಂದ ಏನೂ ಲಾಭವಿಲ್ಲ. ಸರ್ಕಾರಿ ಮತ್ತು ಖಾಸಗಿ ಸಂಚಾರ ಸಾರಿಗೆ ವ್ಯವಸ್ಥೆ ಈ ನಿಟ್ಟಿನಲ್ಲಿ ಯೋಚನೆಯನ್ನೆ ಮಾಡಿಲ ಅವು ಮಾಡುವುದೂ ಇಲ್ಲ. ಈ ಟೆಲಿವಿಜನ್ ಮಾಧ್ಯಮಗಳನ್ನು ಬಿಡಿ ಅವು ಯಾವತ್ತು ಸಾರ್ವಜನಿಕ ಹಿತಾಸಕ್ತಿಗೆ ಸ್ಪಂದಿಸಿವೆ. ಉತ್ತಮ ಮತ್ತು ಯೋಚನೆಗೆ ಹಚ್ಚುವ ವಿಷಯ ಪ್ರಸ್ತಾಪಿಸಿದ್ದೀರಿ ಧನ್ಯವಾದಗಳು.