ನಾಚಿಕೆ ಇಲ್ಲದ ಸಾಲುಗಳು-2
ಅಕ್ಷರಕ್ಕೆ ನೇತುಬಿದ್ದ
ಎಲ್ಲಾ ಭಾವಗಳನು
ಯಾವ ಭಾಷೆಯಲಿ ಬಂದಿಸಿದರೂ
ಕಣ್ಣೀರು ಶಾಶ್ವತವಾದರೆ,
ನನಗ್ಯಾಕೆ ಬೇಕು ಭಾಷೆ ?
ನಾನು ಮೂಕನಾಗಬಲ್ಲೆ.
********************************
ಧರ್ಮದ ಹಗ್ಗದ ಕೊನೆಯಲ್ಲಿ
ನನ್ನ ಕೊರಳನ್ನು
ಅಮುಕಿ ಹಿಡಿದು,
ಹಸಿವೆಯಲಿ ಕಿರುಚುವಾಗ
ಯಾವ ಧರ್ಮವೂ ಅನ್ನವಿಕ್ಕಲಿಲ್ಲವೆಂದರೆ.
ನನಗ್ಯಾಕೆ ಬೇಕು ಧರ್ಮ ?
ನಾನು ಮನುಜನಾಗಬಲ್ಲೆ.
********************************
ಉಸಿರುಗಟ್ಟಿಸುವ
ನಗರದ ತುದಿಯಲೀ,
ದೊಡ್ಡಮನೆಯ ಜಗುಲಿಯಲೀ
ಲಕ್ಷ ದುಡಿದೂ,
ನೆಮ್ಮದಿ ಇಲ್ಲದ ಜೇನು ಹುಳುವಾದರೆ.
ನನಗ್ಯಾಕೆ ಬೇಕು, ಈ ನಗರ, ಈ ಲಕ್ಷ ?
ನಾನು ಬಡವನಾಗಬಲ್ಲೆ.
********************************
ದಿನವೂ ಚರ್ಚು, ಮಸೀದಿ, ಮಂದಿರ ಸುತ್ತಿ
ಲೆಕ್ಕವಿಲ್ಲದಷ್ಟು ಮಂತ್ರಗಳನು ಜಪಿಸಿ
ರಾತ್ರಿ ಹೊಟ್ಟೆಗಿಲ್ಲದೆ
ಉಪವಾಸ ಮಲಗುವುದಾದರೆ,
ನನಗೇಕೆ ಬೇಕು ಚರ್ಚು, ಮಸೀದಿ, ಮಂದಿರ ?
ನಾನು ನಾಸ್ತಿಕನಾಗಬಲ್ಲೆ.
********************************
ಇರುವ "ಒಂದೇ ಒಂದು ಬದುಕನು" ಬದುಕಲು,
ಏನೆಲ್ಲಾ ,,,,,,,,,,,,,,,,,,,,,,,,,
-ಜೀ ಕೇ ನ
Comments
ಉ: ನಾಚಿಕೆ ಇಲ್ಲದ ಸಾಲುಗಳು-2
ನವೀನ ರವರಿಗೆ ವಂದನೆಗಳು
ತಾವು ಬರೆದದ್ದು ನಾಚಿಕೆಯಿಲ್ಲದ ಸಾಲುಗಳಲ್ಲ ಜಗತ್ತು ನಾಚಿಕೆ ಪಟ್ಟುಕೊಳ್ಳಬೇಕಾದ ಸಾಲುಗಳು. ಅವು ಹೊರಡಿಸುವ ಧ್ವನಿ ಓದುಗನನ್ನು ಚಿಂತಿಸುವಂತೆ ಮಾಡುತ್ತವೆ. ಆ ಸಾಲುಗಳ ಹುಟ್ಟು ಸಾರ್ಥಕ. ಉತ್ತಮ ಕವನ ನೀಡಿದ್ದೀರಿ ಧನ್ಯವಾದಗಳು.
In reply to ಉ: ನಾಚಿಕೆ ಇಲ್ಲದ ಸಾಲುಗಳು-2 by H A Patil
ಉ: ನಾಚಿಕೆ ಇಲ್ಲದ ಸಾಲುಗಳು-2
"ಸಾಲುಗಳ ಹುಟ್ಟು ಸಾರ್ಥಕ",,,,, ನನ್ನ ಭಾವ ಸಾರ್ಥಕತೆ ಪಡೆದುಕೊಂಡಿತು ಪಾಟೀಲರೆ,,,, ಭಾವಪೂರ್ಣ ಪ್ರತಿಕ್ರಿಯೆಗೆ ಅಭಾರಿ,,,
ಉ: ನಾಚಿಕೆ ಇಲ್ಲದ ಸಾಲುಗಳು-2
ಇದು ನಾಚಿಕೆಯಿಲ್ಲದ ಸಾಲುಗಳೇ. ಜಗತ್ತು ಯಾಕೆ ನಾಚಿಕೊಳ್ಳಬೇಕು?
ಕಣ್ಣೀರು ಶಾಶ್ವತವಾದಲ್ಲಿ ಅಕ್ಷರದ್ದೇನು ತಪ್ಪಿದೆ?
ಹಸಿವೆಯಲ್ಲಿ ಕಿರುಚಿದಾಗ ಅನ್ನ ಹಾಕುವುದು ಧರ್ಮದ ಕೆಲಸವಾ?
ಲಕ್ಷ ದುಡಿದೂ ನೆಮ್ಮದಿಯಿಲ್ಲದ್ದಿದ್ದರೆ ನಗರ ಕಾರಣವಾ?
ಕೊನೆಯಲ್ಲಿ- ನಾಸ್ತಿಕನಾದ ಮೇಲೆ...
ರಾತ್ರಿ ಹೊಟ್ಟೆಗಿಲ್ಲದೆ
ಉಪವಾಸ ಮಲಗುವುದಾದರೆ,.....ಮತ್ತೇನಾಗುವಿರಿ? :)
ತಮ್ಮ ತಪ್ಪಿಗೆ ಚರ್ಚ್, ಮಸೀದಿ ಮಂದಿರವನ್ನು ದೂರುವ ಬದಲು ಇರುವ ಒಂದೇ ಒಂದು ಬದುಕನ್ನು ಏನಾದರೂ ಸಾಧಿಸಲು ಪ್ರಯತ್ನಿಸಿ. ಕಡೇ ಪಕ್ಷ ಇದ್ದುದರಲ್ಲಿ ನೆಮ್ಮದಿಯಲ್ಲಿ ಬಾಳಲು ಕಲಿಯಿರಿ.
ನವೀನರೆ ಇದು ತಮ್ಮನ್ನು ದೂರಿದ್ದಲ್ಲ- ನಾಚಿಕೆಯಿಲ್ಲದ ಸಾಲುಗಳಿಗೆ(೨) ಮಾತ್ರ ನನ್ನ ಪ್ರತಿಕ್ರಿಯೆ.
In reply to ಉ: ನಾಚಿಕೆ ಇಲ್ಲದ ಸಾಲುಗಳು-2 by ಗಣೇಶ
ಉ: ನಾಚಿಕೆ ಇಲ್ಲದ ಸಾಲುಗಳು-2
ಗಣೇಶರೆ ತಾರ್ಕಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ನೋಡಿದರೇ, ಜಗತ್ತಿಗೂ ನಮಗೂ ವ್ಯವಹಾರಿಕ ಸಂಬಂದ ಮಾತ್ರ ಕಂಡು ಬರುತ್ತದೆ,
ಭಾವನಾತ್ಮಕ ಸಿಟ್ಟೊಂದು ಮೂಡಬೇಕೆಂದರೆ, ಜಗದೊಂದಿಗಿನ ಅತೀವ ಪ್ರೀತಿ ಬೇಕಾಗುತ್ತದೆ,
ನಿಮ್ಮ ಪ್ರತಿಕ್ರಿಯೆ ದೃಷ್ಟಿಕೋನ ವಿಭಿನ್ನವಾಗಿತ್ತು, ಬೇರೆ ಕೋನದಿಂದಾ ಮಂಡಿಸಿದ ತರ್ಕ ನಮಗೂ ಜಗಕ್ಕೂ ಸಂಬಂದ ಇಲ್ಲ ಎಂದು ತೋರಿಸಿಕೊಟ್ಟಿದ್ದು, ಆಲೋಚಿಸುವಂತೆ ಮಾಡುತ್ತಿದೆ,,,
ಇಂತಹ ಭಾವಗಳು ಇನ್ನಷ್ಟು ಹರಿಯಲಿ,,, ಧನ್ಯವಾದಗಳು,,,
-ಜೀ ಕೇ ನ