ವಿದಾಯ ಹೇಳುವ ಮನಸು..

ವಿದಾಯ ಹೇಳುವ ಮನಸು..

ಕೆಲವೊಮ್ಮೆ ಜೀವನದ ಕೆಲವು ಅನುಭವ, ನಡುವಳಿಕೆಗಳಿಗೆ ಕಾರಣ ಹುಡುಕುವುದಾಗಲಿ, ಹೇಳುವುದಾಗಲಿ ಕಷ್ಟ. ಅದರಲ್ಲಿ ಸರ್ವೆ ಸಾಧಾರಣ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿ ಅನುಭವಿಸಿಯೆ ಇರಬಹುದಾದ ಅನುಭವವೆಂದರೆ - ವಿದಾಯದ ಕುರಿತಾದದ್ದು. ವಿದಾಯದ ವಿಶ್ವರೂಪವನ್ನು ಪರಿಗಣಿಸಿದರೆ ಏನೆಲ್ಲ ತರ ತರ ವಿದಾಯಗಳ ಹರವು ಬಿಚ್ಚಿಕೊಳ್ಳುತ್ತದೆಂದರೆ ಅದಕ್ಕೊಂದು ಸೀಮಿತ ನಿರ್ದಿಷ್ಠ ವ್ಯಾಖ್ಯೆಯನ್ನು ಕೊಡಲೆ ಆಗದಿರುವಷ್ಟು. ಶಾಲೆ , ಕಾಲೇಜುಗಳನ್ನು ಮುಗಿಸಿ ಹತ್ತಿರವಾಗಿದ್ದ ಆತ್ಮೀಯ ಗೆಳಯರಿಗೆ ವಿದಾಯ ಹೇಳುವುದರಿಂದ ಹಿಡಿದು, ಪ್ರೇಮಿಗಳ ಬೇರ್ಪಡಿಕೆಯ ವಿದಾಯ, ಮದುವೆಯ ಬಂಧನದತ್ತ ಹೆಜ್ಜೆಯಿಕ್ಕುತ್ತ ಹಸೆಮಣೆಯೇರಿದ ನಂತರ ತವರಿಗೆ, ಸಮೀಪದ ಬಂಧುಗಳಿಗೆ, ಸ್ನೇಹಿತೆಯರಿಗೆ, ಹುಟ್ಟಿ ಬೆಳೆದ ಪರಿಸರ, ವಾತಾವರಣಕ್ಕೆ, ಸಾಕಿ ಸಲಹಿದ್ದ ನೆಚ್ಚಿನ ಪ್ರಾಣಿಗಳು, ಗಿಡಮರಗಳಿಗೆ ಹೇಳಬೇಕಾಗಿಬರುವ ವಿದಾಯ, ಕೆಲಸದ ನಿಮಿತ್ತ ಬೇರಾಗಬೇಕಾಗಿ ಬಂದು ಹತ್ತಿರದವರಿಗೆ ಹೇಳಬೇಕಾಗಿ ಬರುವ ವಿದಾಯ, ತಲೆ ಚಿಟ್ಟು ಹಿಡಿಸುವವರಿಂದ ಬಲವಂತದಿಂದ ದೂರಾಗಬಯಸಿ ಹಾತೊರೆದು ಅಪ್ಪುವ ವಿದಾಯ, ತೀರಾ ಹತ್ತಿರವಾದ ಭಾಂಧವ್ಯ, ನಂಟುಗಳು ತಮ್ಮ ವೈಯಕ್ತಿಕ ಸ್ವಾತ್ಯಂತ್ರದ ಲಕ್ಷಣ ರೇಖೆಯನ್ನು ಅಧಿಗಮಿಸಿ, ತಮ್ಮತನವನ್ನೆ ಅತಿಕ್ರಮಿಸಿಕೊಳ್ಳುತ್ತಿದೆಯೇನೊ ಎಂಬ ಹತಾಶ ಗಾಬರಿಯಲ್ಲಿ ವಿನಾಕಾರಣ ಅಪ್ಪಿಕೊಳ್ಳುವ ವಿದಾಯ, ತಾವೆಷ್ಟೆ ಸ್ವಯಪ್ರೇರಿತವಾಗಿ ಕಾಯಕ ಮಾಡಿಕೊಂಡು ತಮ್ಮ ಶಕ್ತಿಮೀರಿದ ಕಾಣಿಕೆಯನ್ನು ನೀಡುತ್ತಿದ್ದರೂ, ಅದನ್ನು ಗಮನಿಸಿ ಪ್ರೋತ್ಸಾಹ ಮೆಚ್ಚುಗೆಯ ಮಾತಾಡುವ ಸೂಕ್ಷ್ಮ ಮನಸುಗಳಿಲ್ಲದ ಯಾತನೆ ಕಾಡಿ ಸೋತು, ಬೇಸತ್ತು ಹೇಳುವ ಮೌನ ವಿದಾಯ, ಹೆಪ್ಪುಗಟ್ಟಿದ ನೋವು ಕಂಬನಿಯಾಗಿ ಹೋಗಲೊ, ಬಿಡಲೊ ಎಂದಳುಕುತ್ತಲೆ ಹೇಳಿ ಹೋಗುವ ವಿದಾಯ - ಹೀಗೆ ಹುಡುಕುತ್ತಾ ಹೋದರೆ ವಿದಾಯಗಳ ವಿಪರೀತದ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ ಅವಿರತವಾಗಿ. 

ಇದರಲ್ಲಿ ಕೆಲವು ವಿದಾಯಗಳು ತಾತ್ಕಲಿಕವಿದ್ದು, ತುಸು ಅಂತರದ ನಂತರ ಮತ್ತೆ ಮಿಲನದ ಸೌಭಾಗ್ಯ ಕಂಡರೆ ಮತ್ತೆ ಕೆಲವು ಶಾಶ್ವತ ವಿದಾಯವಾಗಿ ಬರಿಯ ನೆನಪನ್ನು ಮಾತ್ರ ಉಳಿಸಿ ಮಾಯವಾಗಿಬಿಡುವಂತಹದ್ದು. ನೆನಪು ಸಿಹಿಯೊ, ಕಹಿಯೊ - ಆದರೆ ಅದಿಲ್ಲದ ನಿರ್ವಾತಕ್ಕಿಂತ, ಹೇಗಾದರೂ ಸರಿ ಅಸ್ತಿತ್ವದಲ್ಲಿರುವ ಪರಿಯೆ ಹಿತಕರವೆನಿಸಿ ಅದಕ್ಕಾಗಿ ಹಾತೊರೆಯುವಂತೆ ಮಾಡಿಬಿಡುತ್ತದೆ. ವಿಪರ್ಯಾಸವೆಂದರೆ ಇಲ್ಲದಾಗ ತುಡಿದು, ಮಿಡಿದು, ಕೊಸರಾಡುವ ಮನ ಇರುವಾಗ ಅದರ ಬೆಲೆಯನ್ನು ಗುರುತಿಸದ ಅಥವಾ ಗೊತ್ತಿದ್ದು ನಿರ್ಲಕ್ಷಿಸುವ ಉಢಾಫೆಯ ಮನಸತ್ವವನ್ನು ತೋರಿಸಿಬಿಡುತ್ತದೆ, ಕೆಲವೊಮ್ಮೆ. ಹೀಗಾಗಿ ಈ ಇರುವಿಕೆ, ಇಲ್ಲದಿರುವಿಕೆಯ ನಡುವಿನ ತಾಕಲಾಟದ ನಡುವಲ್ಲಿ ನಿರ್ಲಿಪ್ತನಂತೆ ಯಾವ ಕಡೆಗೂ ವಾಲದೆ ಸುಮ್ಮನೆ ಇದ್ದುಬಿಡುವುದೂ ಸಾಧ್ಯವಿಲ್ಲ. ಭಾವಾತಿರೇಖದ ತೀವ್ರತೆ, ನಿರೀಕ್ಷೆಗಳ ಮಿತಿ ಮೀರಿದ ಅಳತೆ, ಸ್ವತಃ ಆರೋಪಿಸಿಕೊಂಡ ಅನಿಸಿಕೆಗಳ ವಾಸ್ತವಿಕ - ಅವಾಸ್ತವಿಕತೆಗಳ ಫಲಿತಗಳೊಡ್ಡುವ ಭಾರ - ಎಲ್ಲದರ ಸಮೀಕರಣವೂ ಒಟ್ಟಾಗಿ ಸಮಷ್ಟಿಸಿಕೊಂಡು ಉಂಟು ಮಾಡುವ ಭಾವ ರಾಸಾಯನಿಕ ಪ್ರಕ್ರಿಯೆಯಲ್ಲಿ ಮುನಿಸಿಕೊಂಡು ದೂರಾಗುವಷ್ಟೆ ಸಹಜವಾಗಿ, ಹೆಚ್ಚು ಕಾಲ ದೂರವಿರಲಾಗದ ಮತ್ತೆ ಹಾತೊರೆದು ಹತ್ತಿರವಾಗುವುದು ನಡೆಯುತ್ತಿರುತ್ತದೆ ಕಾಲಾನುಕಾಲದ ಅನುಸಂಧಾನದಲ್ಲಿ. 

ಈ ಮಿಲನ, ವಿದಾಯ, ಮರು ಮಿಲನಗಳ ಸಂಕೀರ್ಣ ಸಂಬಂಧದಲ್ಲಿಯೆ ಇರುವ ನೈಸರ್ಗಿಕ ಸತ್ಯವೊಂದು ಅಷ್ಟು ಸುಲಭದಲ್ಲಿ ಕಣ್ಣಿಗೆ ಬೀಳುವುದಿಲ್ಲವಾದ ಕಾರಣ, ಗಮನಕ್ಕೆ ಸಿಗದೆ ಜಾರಿಬಿಡುವುದೆ ಹೆಚ್ಚು. ಯಾವುದೆ ಸಂಬಂಧವಿರಲಿ, ನಂಟಿರಲಿ - ಮಿಲನ, ವಿದಾಯಗಳು ಸಹಜವಾಗಿ ನಡೆವ ಪ್ರಕ್ರಿಯೆಯೆನ್ನುವುದು ನಿಜವಾದರೂ, ಯಾವ ಮನಗಳಲ್ಲಿ ನೈಜವಾದ ತುಡಿತ, ಹಾತೊರೆತ, ನಿಜಾಯತಿಯ ಅನಿವಾರ್ಯವಿರುತ್ತದೊ ಆ ಮನಗಳು ಬೇಕೆಂದರೂ ಆ ಮಿಲನದಿಂದಾಚೆಗೆ ಉಳಿಯಲು ಸಾಧ್ಯವಾಗುವುದಿಲ್ಲ. ಅದು ನೈಜ ಅನಿವಾರ್ಯವಲ್ಲದೆ ಯಾವುದೊ ಕಾರಣಗಳಿಂದ ಬಲವಂತದಿಂದ ಆಪೋಷಿಸಿ, ಆರೋಪಿಸಿಕೊಂಡ ತುಡಿತಗಳಾದರೆ ಅದು ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗುವುದಿಲ್ಲ. ಅದರಲ್ಲು ಆ ತುಡಿತಗಳ ಹಿಂದೆ ಯಾವುದೊ ವ್ಯಕ್ತಾವ್ಯಕ್ತ ನಿರೀಕ್ಷೆಗಳ ಲೇಪವಿದ್ದು, ಆ ನಿರೀಕ್ಷೆಯನ್ನು ಮುಟ್ಟುವ ಮಟ್ಟದಲ್ಲಿ ಏನೊ ಹೆಚ್ಚುಕಡಿಮೆಯಾಗಿ, ಕೊರೆ ಬೀಳುತ್ತಿದೆಯೆಂದನಿಸಿಬಿಟ್ಟರಂತೂ ಮಾತನಾಡುವ ಹಾಗೆಯೆ ಇಲ್ಲ. ತಮ್ಮರಿವಿಗೆ ಬಾರದಂತೆಯೆ ಮನಸೇಕೊ ನಿಸ್ಸಾರವಾಗಿ, ನಿರಾಸಕ್ತವಾಗುತ್ತ, ಹಿಂಜರಿಯುತ್ತ ಹೋಗಿ ಕೊನೆಗೆ ಸಂಪೂರ್ಣ ಸಂಪರ್ಕವನ್ನೆ ಪ್ರತಿಬಂಧಿಸಿಕೊಳ್ಳುವ ಮಟ್ಟಕ್ಕೆ ಹೋಗಿಬಿಡುತ್ತದೆ. ಇಲ್ಲಿಯ ಮತ್ತೊಂದು ವಿಪರ್ಯಾಸವೆಂದರೆ, ಆ ರೀತಿಯ ಭಾವ ಸಂಘರ್ಷಕ್ಕೆ ಸಿಕ್ಕ ಮನ, ತಪ್ಪು ಯಾರದೆ ಇರಲಿ - ಶಿಕ್ಷೆ ಮಾತ್ರ ತನಗೆ ವಿಧಿಸಿಕೊಳ್ಳುವುದು...! ತನ್ಮೂಲಕ ಇನ್ನಾರಿಗೊ ಪಾಠ ಕಲಿಸುತ್ತಿರುವೆನೆಂಬ 'ಅಹಂ' ಪೂರೈಕೆಯೊ, ತಾನು ನೊಂದಿದ್ದರಿವಾಗಿ ಹಾಗೆ ನೋಯಿಸಿದವರು 'ಛೇ! ಎಂತಹ ಕೆಲಸ ಮಾಡಿಬಿಟ್ಟೆ?' ಎಂದು ಪಶ್ಚಾತ್ತಾಪ ಪಡಲಿ ಅಂತಲೊ, ಯಾರದೊ ಅನುಕಂಪದ ಸಹಾನುಭೂತಿಗೆ ಪಾತ್ರರಾಗಬೇಕೆಂಬ ಸಹಜ ರಾಗ, ಮೋಹದಿಂದಲೊ, ಅಥವಾ ಹೇಳಿಕೊಳ್ಳಲೆ ಆಗದ ವಿಚಿತ್ರ ಕಾರಣಗಳ ಸಂಕೀರ್ಣ ಸಮಾರೋಪದಿಂದಲೊ - ಒಟ್ಟಾರೆ ತಾವು ವಿಧಿಸಿಕೊಂಡ ದಿಗ್ಬಂಧನದಿಂದ ಕೆಲವೊಮ್ಮೆ ತಮ್ಮನ್ನು, ಮತ್ತೆ ಕೆಲವೊಮ್ಮೆ ಇತರ ಅನೇಕರನ್ನು ಈ ವಿದಾಯದ ಬೇಗುದಿಗೊಳಪಡಿಸುವುದು ತೀರಾ ಅಪರೂಪವೇನಲ್ಲ. ಒಟ್ಟಾರೆ 'ವಿದಾಯವೆ ನಿನ್ನ ವಿಶ್ವರೂಪವೆ!' ಎಂದು ಮೂಗಿನ ಮೇಲೆ ಬೆರಳಿಡುವಂತಾಗಿಸುತ್ತದೆ ಅದರ ಪರಾಕ್ರಮದ ಪರಿ. 

ಇತ್ತೀಚಿನ ಸಂಪದದಲ್ಲಿನ ಕೆಲವು ಪ್ರತಿಕ್ರಿಯೆಗಳನ್ನು ನೋಡುತ್ತಿದ್ದಾಗ ಕಾಣಿಸಿದ ಕೆಲವು ಹಳೆಯ ಬರಹ / ಪ್ರತಿಕ್ರಿಯೆಗಳನ್ನು ನೋಡಿದಾಗ ಮೂಡಿಬಂದ ಭಾವಲಹರಿ ಇದು. ದಶಕದ ಮೈಲಿಗಲ್ಲನು ದಾಟಿ ಮುನ್ನಡೆದಿರುವ ಸಂಪದದಲ್ಲಿ ಆ ಹಳೆಯ ದಿನಗಳಲ್ಲಿದ್ದ 'ಚಾರ್ಮ್' ಇಲ್ಲವಾಗುತ್ತಿದೆಯಲ್ಲ ಎಂಬ ಬೇಸರ, ಹತಾಶೆಗಳು ಎದ್ದು ಕಾಣಿಸುತ್ತಿವೆ. ಅಂದು ಸಕ್ರೀಯರಾಗಿದ್ದು ಇಂದು ಸಂಪದದಲ್ಲಿ ಸಕ್ರೀಯರಾಗಿರದೆ ವಿದಾಯ ಹೇಳಿರುವ (ತಾತ್ಕಾಲಿಕವಾಗಿಯೊ, ಶಾಶ್ವತವಾಗಿಯೊ ಯಾರು ಬಲ್ಲರು?) ಎಷ್ಟೊ ಕ್ರಿಯಾಶೀಲ ಮನಸುಗಳು ಇಂದಿಗೂ ಮೌನವಾಗಿ ಇವೆಲ್ಲವನ್ನು ನೋಡುತ್ತ ನಿರಾಸಕ್ತಿಯಿಂದ ಸುಮ್ಮನಿದ್ದುಬಿಡುತ್ತಿವೆಯೆ? ಅಥವಾ ಈ ಹೊಸ ನೀರು ಸತತವಾಗಿ ಹರಿಯುವ ತಾಂತ್ರಿಕ ಜಗತ್ತಿನಲ್ಲಿ ಕಂಡು ಬಂದ ಹೊಸ ಹಾದಿಗಳಲ್ಲಿ ನಡೆದು, ತಮ್ಮದೆ ದಾರಿ ಅನ್ವೇಷಿಸಿಕೊಂಡು ಹಿಂಬರಲಾಗದಷ್ಟು ಮುಂದಕ್ಕೆ ಹೋಗಿಬಿಟ್ಟಿವೆಯೆ? ಅದೊಂದು ಇಲ್ಲದ ಸಾಮಾನ್ಯ ನಿರಾಸಕ್ತಿ, ಮನಗಳಿಗೆ ಬೀಗ ಜಡಿದು ಜಡವಾಗಿಸಿ ಕೂರಿಸಿಬಿಟ್ಟಿದೆಯೆ? ಅಥವಾ ಎಷ್ಟೋ ಕಡೆ ನಡೆಯುವಂತೆ, ಆರಂಭದ ಉತ್ಸಾಹದಲ್ಲಿದ್ದ ಪಾಲ್ಗೊಳ್ಳುವಿಕೆ ಪಕ್ವತೆಯ ಸ್ಥಿತಿಯನ್ನು ತಲುಪಿದಂತಾಗಿ, ಅದರಿಂದುಂಟಾದ ಸಂತೃಪ್ತ ಭಾವ ಸಕ್ರೀಯತೆಗೆ ಜಡತೆಯ, ಮೌನದ ಸೆರಗ್ಹೊದಿಸಿ ಕೂರಿಸಿಬಿಟ್ಟಿದೆಯೆ? - ಹೀಗೆ ಏನೇನೊ ಊಹೆಗಳು, ಕಾರಣಗಳು ಮೂಡಿಬರಲು ಕಾರಣವಾಗಿದ್ದು ಈ ಪ್ರತಿಕ್ರಿಯೆಗಳು. ನಿಜದಲ್ಲಿ ಇದಾವುದೂ ಅಲ್ಲದ ಬೇರಾವುದೊ ಕಾರಣಗಳು ಇದಕ್ಕೆ ಪ್ರೇರಕವಾಗಿರಬಹುದಾದರು, ನನ್ನಂತಹ ಹೊಸ ಮುಖಗಳಿಗೆ ಆರಂಭದ ದಿನಗಳಲ್ಲಿದ್ದ 'ಸುವರ್ಣ ಯುಗ'ದಂತಹ ವಾತಾವರಣವನ್ನು ಊಹಿಸಿಕೊಳ್ಳಲು ಇವು ಅನುವುಮಾಡಿಕೊಟ್ಟಿತ್ತೆನ್ನುವುದು ಸತ್ಯ. 

ಬದಲಾವಣೆ ಈ ಜಗದ ನಿಯಮವೆನ್ನುತ್ತಾರೆ.... ಅರ್ಥಾತ್ ಈ ವಿದಾಯದ ಮೂಲಕವುಂಟಾಗುವ ಸ್ಥಿತ್ಯಂತರವನ್ನು ಅದೇ 'ಬದಲಾವಣೆ' ಯೆಂಬ ಮೂಸೆಯಲ್ಲಿಟ್ಟು ನೋಡಿಯೆ ಸಮಾಧಾನಪಟ್ಟುಕೊಳ್ಳಬೇಕೊ ಏನೊ - ಈಗಿನ ಪ್ರಸ್ತುತ, ಮುಂದಿನ 'ಸುವರ್ಣ ಯುಗ' ವಾದೀತೇನೊ ಎಂಬ ಸದಾಶಯದಲ್ಲಿ. ಅದೆಂತೆ ಇದ್ದರೂ ಆ ಸುವರ್ಣಯುಗಗಳುಳಿಸಿ ಹೋಗುವ ಸಿಹಿ-ಕಹಿ ನೆನಪುಗಳು ಮಾತ್ರ ಎಂದೆಂದಿಗು ಚಿರಂತನ, ಚಿರ ನೂತನ ಎಂಬುದು ಅಷ್ಟೆ ಸತ್ಯದ ಮಾತು. 

ವಿದಾಯ
_________________

ಪ್ರತಿ ನಂಟಿಗೊಂದು ನಿರೀಕ್ಷೆ
ಈ ಜೀವನವೊಡ್ಡುವ ಪರೀಕ್ಷೆ
ಗೆದ್ದುಬಿಟ್ಟೆನೆಂದವನ ಹಮ್ಮಿಗೆ
ಕೊಳ್ಳಿಯಿಟ್ಟು ಸುಡುತಲಿ ಲಗ್ಗೆ ||

ಗೆದ್ದೆನಾರದೊ ಮನ ಕುಣಿತವೆ
ಕದ್ದ ಮನಸು ತನದೆಂದ ಕಾವೆ
ಅಮಾಯಕತೆ ಹರಿಸಿದ ಕಿಡಿಗೆ
ಈರ್ಷೆಯೊಡಲೆ ಪ್ರೀತಿಗೆ ಹಡಗೆ ||

ಸಾಧಿಸಲೇನೊ ಹೊರಟಾ ಸತ್ಯ
ಅದರ ಹೊದರ ಅರಿಯಲಗತ್ಯ
ನೀರಿಗೆ ಬಿದ್ದು ಈಜಿದ ಹುಮ್ಮಸ್ಸು
ಸೋತಾ ತನು ಯಾಕೊ ಮುನಿಸು ||

ಏನೊ ಬೇಸರ ಸಂತೆಗು ಏಕಾಂತ
ಗದ್ದಲದ ನಡುವೆ ಮೌನವೆ ಸ್ವಂತ
ಕಾಣದು ಮುಂದೇನು ಬಿಟ್ಟುಬಿಡೆಲ್ಲ
ದೊಂಬಿಯೆದ್ದ ಹಾದಿ ನೀರಸ ಬಲ ||

ಕಳುವಾದ ಕವನ ಮನ ಯಾತನೆ
ದೂರಾಗಿಸಿತೇ ಬೇಡೆನ್ನುವ ಭಾವನೆ ?
ಸದ್ದು ಪ್ರಕ್ಷುಬ್ದದ ನಡುವಲ್ಲೆಲ್ಲೊ ನಮ್ಮನೆ
ಕಾಣೆ ತಪನೆ ಬದುಕಿನನಿವಾರ್ಯ ತಾನೆ ? ||

Comments

Submitted by ಗಣೇಶ Thu, 10/30/2014 - 00:37

>>>ತಲೆ ಚಿಟ್ಟು ಹಿಡಿಸುವವರಿಂದ ಬಲವಂತದಿಂದ ದೂರಾಗಬಯಸಿ ಹಾತೊರೆದು ಅಪ್ಪುವ ವಿದಾಯ.., :) :)
ನಾಗೇಶರೆ, ವಿದಾಯಗಳ ಪಟ್ಟಿ ದೊಡ್ಡದಿದೆ..ಕಾರಣವೂ ನೀವು ಹೇಳಿದಂತೆ ಅಂದಾಜು ಮಾಡಲು ಸಾಧ್ಯವಿಲ್ಲ.
ನೋವಿಂದ ವಿದಾಯವಾಗದೇ ಏನಾದರೂ ಸಾಧನೆಗೆ ವಿದಾಯವಾಗಲಿ.
ಸಂಪದ "ಹೊಸ ಚಿಗುರು ಹಳೆ ಬೇರು!" ಅಲ್ವಾ.. ಹಳೇ ಬೇರು ಕಾಣಿಸದು. ಅದಕ್ಕಾಗಿ ಹಳೇ ಕಡತಗಳನ್ನು ಮೂರ್ತಿಯಂತಹವರು ಅಗೆದು ತೆಗೆದು ಬೇರನ್ನು ಹುಡುಕಿ ತೋರಿಸುವರು.:)
ಅಂದಿನಂತೆ ಇಂದಿನ ಬರಹಗಳೂ ಚೆನ್ನಾಗಿವೆ. ಹಳೇ ಸಂಪದಿಗರೂ ಸಹ ಹೊಸ ಹುರುಪಿನೊಂದಿಗೆ ಪುನಃ ಸಂಪದದಲ್ಲಿ ಬರೆಯಲಿ ಎಂದು ಆಶಿಸುವ
-ಗಣೇಶ.