" ಹಾಯಿ ಡೋಣಿ "

" ಹಾಯಿ ಡೋಣಿ "

ಚಿತ್ರ

 

ಸುತ್ತೆಲ್ಲ ವಿಸ್ತಾರದಲಿ ವ್ಯಾಪಿಸಿದ ‘

ಜಲ ಸಾಗರ

ದೈತ್ಯ ಅಲೆಗಳ ಹೊಡೆತಕ್ಕೆ

ಏರಿಳಿಯುತಿದೆ ಹಾಯಿ ಡೋಣಿ

ಅದು ನಿಂತ ನಾವೆಯಲ್ಲ

ಚಲನಶೀಲ ನೌಕೆಯದು

ನಮ್ಮ ಬದುಕಿನ ಪ್ರತೀಕದಂತೆ

ನಿಂತ ಸ್ಥಗಿತಗೊಂಡ ನೌಕೆಗೆ

ಯಾವ ಸವಾಲುಗಳೂ ಇರುವುದಿಲ್ಲ

 

ನಮ್ಮ ಬದುಕೂ ಸಹ

ಮಹಾ ಸಾಗರದ ಮಧ್ಯದಲಿ

ಏರುತ್ತ ಇಳಿಯುತ್ತ

ಸೇರುವ ಗಮ್ಯದೆಡೆ ಗುರಿಯಿಟ್ಟ

ನಾವೆಯಂತಿರಬೇಕು

ತೇಲಲಿ ಮುಳುಗಲಿ

ದಡ ಸೇರಲಿ ಬಿಡಲಿ

ಆ ನಿರ್ಲಿಪ್ತ ಹೋರಾಟದ

ಪಯಣಕೊಂದು ಅರ್ಥವಿದೆ

 

ಸ್ವಲ್ಪ ಜಗದ ಗತ ಚರಿತ್ರೆಯ

ಪುಟಗಳನ್ನು ತೆರೆದು ನೋಡೋಣ

ಅದು ಸಾಹಸಿಗಳ

ಮಹತ್ವಾಕಾಂಕ್ಷಿಗಳ ಕಥೆಗಳಿಂದ

ತುಂಬಿ ಹೋಗಿದೆ

ಭೀಕರ ಮಳೆಗಾಳಿಗಳು

ಗುಡುಗು ಮಿಂಚುಗಳು

ಭಯ ಹುಟ್ಟಿಸುವ ದೈತ್ಯ ಅಲೆಗಳು

ಭೀಕರ ಚಳಿಯಿಂದ ಕೂಡಿದ

ಬಿರುಗಾಳಿಗಳು ದಿಗಿಲುಗೊಳಿಸುವ

ನಾವೆಯ ಓಲಾಟ ಯಾವುವೂ

ಅವರನ್ನು ತಮ್ಮ ಗುರಿಗಳಿಂದ

ವಿಮುಖರಾಗಿಸಲಿಲ್ಲ

 

ಒಮ್ಮೊಮ್ಮೆ ಘನ ಘೋರ ಪ್ರಳಯದ

ವಿಪ್ಲವವನ್ನುಂಟು ಮಾಡುವ

ತೆರೆಗಳು ಮತ್ತೊಮ್ಮೆ ಕಂಡ

ಭೀಕರತೆ ರೌದ್ರಗಳೆಲ್ಲ ಸುಳ್ಳೆನ್ನುವಂತೆ

ಅದು ಪಡೆವ ಶಾಂತ ನಿರ್ಮಲ ಸ್ಥಿತಿ

ಇದೊಂದು ಬದುಕಿನ

‘ಹೋರಾಟದ ಪಯಣ’

ಬೆನ್ನು ತೋರಿದೆವೋ ಅದು ಮರಣ

ಪಯಣದ ಮುಂದುವರಿಕೆಯೆ ಜೀವನ

 

ನಮ್ಮ ಬಾಳೊಂದು ಸುಧೀರ್ಘ

ಕಡಲ ಪಯಣ

ದಿನಗಳುದ್ದಕೂ ಸುತ್ತ ಮುತ್ತಲಲೆಲ್ಲ

ತೆರೆದು ಕೊಳ್ಳುವ

ದಿಗ್ಭ್ರಮೆಗೊಳಿಸುವ ಪ್ರಪಂಚ

ಒಂದೊಂದು ನೋಟವೂ ಭಿನ್ನ

ಒಂದೊಂದು ಧೃಶ್ವವೂ

ಒಂದೊಂದು ಭಿನ್ನ ಕಲಾಕೃತಿ

ಚಿತ್ರಗಳೆಂದರೆ ಅವು

ಅಂತಿಂತಹ ಚಿತ್ರಗಳಲ್ಲ ! ಏನವು !!

ಅವ್ಯಕ್ತ ಕಲಾವಿದನೊಬ್ಬನ

ಧಿಟ್ಟತನದ ಕಲಾಭಿವ್ಯಕ್ತಿಯ

‘ಕಲ್ಪನಾ ಲೋಕದ ಬಿಂಬ

ಕಣ್ಣು ಕೋರೈಸುವ ವರ್ಣ ವೈವಿಧ್ಯ

ತಿಂಗಳ ಬೆಳಕು ಇರಲಿ ಇಲ್ಲದಿರಲಿ

ಬಾನತುಂಬೆಲ್ಲ ನೆರೆವ ತಾರಾಗಣ

 

ಕಾಲವೆಲ್ಲೂ ಸ್ಥಗಿತವಾಗಿಲ್ಲ ಅದು

ಚಲನಶೀಲವಾಗಿದೆ

ಸೂರ್ಯನುದಯದ ಆಶೆ ತೇಲುವ

ವರ್ಣರಂಜಿತ ಕಡಲ ಬಿಂಬಗಳು

ಉದಯ ಅಸ್ತಮಾನ ಏನೇ ಇರಲಿ

ಅವೆಲ್ಲ ಕಾಲದ

ಚಲನಶೀಲತೆಯ ಸಾದೃಶ್ಯಗಳು

ನಮ್ಮ ಸ್ಮೃತಿ ಪಟಲದ ಕನಸುಗಳಂತೆ

 

                  ***

ಚತ್ರಕೃಪೆ: ಪ್ರೇಮ ಕವಿಯ ಪಯಣ: February 2010
http://poemsofpradeep.blogspot.in/2010_02_01_archive.html

Rating
No votes yet

Comments

Submitted by nageshamysore Wed, 10/29/2014 - 20:56

ಪಾಟೀಲರೆ ನಮಸ್ಕಾರ, ಬಹಳ ದಿನಗಳ ನಂತರ ನಿಮ್ಮ ಲೇಖನಿಯಿಂದೊಂದು ಚೆನ್ನಾದ ಕವನ ಮೂಡಿಬಂದಿದೆ. "ತೇಲಲಿ ಮುಳುಗಲಿ-ದಡ ಸೇರಲಿ ಬಿಡಲಿ-ಆ ನಿರ್ಲಿಪ್ತ ಹೋರಾಟದ-ಪಯಣಕೊಂದು ಅರ್ಥವಿದೆ " ಎನ್ನುವ ಸಾಲಿನಂತೆಯೆ ನಿಮ್ಮ ಬರಹಗಳೂ ಸಂಪದದಲ್ಲಿ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.

Submitted by H A Patil Sat, 11/01/2014 - 19:42

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ನೋಡಿದೆ, ಬರಹಗಳು ನಿರಂತರವಾಗಿರಲಿ ಎಂದಿದ್ದೀರಿ ನಿಮ್ಮ ನಿರೀಕ್ಷೆ ಮತ್ತು ಆಶಯಗಳು ನನ್ನಲ್ಲಿ ದಿಗಿಲು ಹುಟ್ಟಿಸುತ್ತಿವೆ ಎಂದು ಹೇಳಿ ಕೊಳ್ಳಲು ನನಗೆ ಸಂಕೋಚವಿಲ್ಲ. ಯಾಕೆಂದರೆ ನಾನು ಖಾಲಿಯಾಗಿ ಬಿಟ್ಟಿದ್ದೇನೆಯೆ ಎನ್ನುವ ಸಂಶಯ ನನ್ನನ್ನು ಬಲವಾಗಿ ಕಾಡುತ್ತಿದೆ, ಅದರಿಂದ ಹೊರ ಬರಲು ಪ್ರಯತ್ನ ಮುಂದುವರಿಸುವೆ. ಪ್ರತಿಕ್ರಿಯೆಗೆ ಮತ್ತು ತಮ್ಮ ಕಳಕಳಿಗೆ ಧನ್ಯವಾದಗಳು.

Submitted by ಗಣೇಶ Wed, 10/29/2014 - 23:43

>>..ಬೆನ್ನು ತೋರಿದೆವೋ ಅದು ಮರಣ
ಪಯಣದ ಮುಂದುವರಿಕೆಯೆ ಜೀವನ..
ದಿನಗಳುದ್ದಕೂ ಸುತ್ತ ಮುತ್ತಲಲೆಲ್ಲ
...ತೆರೆದು ಕೊಳ್ಳುವ
ದಿಗ್ಭ್ರಮೆಗೊಳಿಸುವ ಪ್ರಪಂಚ
ಒಂದೊಂದು ನೋಟವೂ ಭಿನ್ನ..
-ಪ್ರತಿಯೊಂದು ಸಾಲೂ ಚೆನ್ನಾಗಿದೆ. ಉತ್ತಮ ಕವನ ಪಾಟೀಲರೆ.

Submitted by swara kamath Fri, 10/31/2014 - 10:11

ನಮಸ್ಕಾರ ಪಾಟೀಲರೆ,
ಒಳ್ಳಯ ಕವನ. ಹಿಂದೆ ನೋಡದೆ,ಧೈರ್ಯಗೆಡದೆ ನಾವು ಕಾಲದೊಂದಿಗೆ ಚಲಿಸುತ್ತಿರಬೇಕು ಎನ್ನವ ಕವನದ ತಿರುಳು ಹಿಡಿಸಿತು.
ವಂದನೆಗಳು.

Submitted by H A Patil Sat, 11/01/2014 - 19:46

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ಕವನದ ನಾಡಿ ಮಿಡಿತವನ್ನು ಒಂದೇ ವಾಕ್ಯದಲ್ಲಿ ಸಮರ್ಥವಾಗಿ ವಿಮರ್ಶಿಸಿದ್ದೀರಿ, ಮೆಚ್ಚುಗೆಗೆ ಧನ್ಯವಾದಗಳು.

Submitted by naveengkn Sun, 11/02/2014 - 01:03

ಪಾಟೀಲರಿಗೆ ನಮಸ್ತೆ,
"ನಿಂತ ಸ್ಥಗಿತಗೊಂಡ ನೌಕೆಗೆ
ಯಾವ ಸವಾಲುಗಳೂ ಇರುವುದಿಲ್ಲ",
ಬಹಳ ಕಾಡಿದ ಸಾಲು,
ಅಭಿವ್ಯಕ್ತಿಗೊಂಡ ಭಾವ ಅದ್ಭುತವಾಗಿದೆ,
ಸೂರ್ಯೊದಯದ ವಿಭಿನ್ನ ಶೈಲಿ ಹಾಯಿದೋಣಿ ಎಂಬ ಶೀರ್ಷಿಕೆಯಲ್ಲಿ ಹುಟ್ಟಿದೆ,,
ಧನ್ಯವಾದಗಳು

Submitted by H A Patil Mon, 11/03/2014 - 19:35

In reply to by naveengkn

ನವೀನ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಕವನದ ಗ್ರಹಿಕೆಗೆ ಅದನ್ನು ತಾವು ಅಭಿವ್ಯಕ್ತಿಸಿದ ಬರೆಯುವ ಉತ್ಸಾಹ ಹೆಚ್ಚಿಸಿದೆ ಧನ್ಯವಾದಗಳು.

Submitted by ravindra n angadi Mon, 11/03/2014 - 13:08

ನಮಸ್ಕಾರ ಸರ್
ತುಂಬಾ ಚನ್ನಾಗಿದೆ ಕವನ ಸರ್
ಧನ್ಯೆವಾದಗಳು