ಮುಂಜಾನೆ ನಂದಿಬೆಟ್ಟ
ಕವನ
ಚಂದ್ರನ ಕದ್ದ ರಾತ್ರಿಯ ನಿದ್ದೆ ಗೆದ್ದ ಭೂಮಿ;
ಮುಗಿಲ ಮೆಚ್ಚಿ ಮುತ್ತಿಡಲು ದಿಟ್ಟನೆದ್ದಂತಿತ್ತು ಬೆಟ್ಟ
ಮಂದ ಮಾರುತದ ಬಿಸಿಯುಸಿರೆಳೆದು
ಉಬ್ಬಿದೆದೆಯ ಪ್ರೀತಿ ತುಂಬಿ ತಂಪು ಮೋಡ ಮಾಡಿ
ಭುವಿಯೆಡೆಗೆ ಗುರಿಮಾಡಿ ಊದುತಿತ್ತು ಬಾನು
ನೆಲಮುಗಿಲ ಮಿಲನ ಕಂಡು ನಾಚಿ ಕೆಂಪಾಗಿ
ಬೆಳ್ಳಿಮೋಡದ ತೆರೆಯ ಹಿಂದೆ ಸರಿಯುತಿದ್ದ ಸೂರ್ಯ
ಮನದುಂಬಿ ಕಣ್ಣ ಕಣಿವೆ ಒತ್ತಿ ಹೊರಬಿದ್ದು
ಹನಿಕೂಡಿ ಹೊಳೆದು ಕೆನ್ನೆಬೆಟ್ಟದಿಳಿಜಾರಲ್ಲಿ ಹರಿಯುತಿತ್ತು ಜಲಧಾರೆ
ಹೊದ್ದ ತಂಪು ಹವೆಯ ಚಾದರ ಸರಿಸಿ
ತಾಯಿಮಡಿಲಿಂದ ಹೊರಬಂದು ಮೈದಡವಿ ಆಕಳಿಸಿತ್ತು ಕಾಡು
ದಿಗಂತದೆಡೆಗೆ ತಂಗಾಳಿ ಪಯಣ
ಅನಂತ ಸೇರಲು ಚೇತನಕೂ ಆಹ್ವಾನ
ಎಲೆಬಳ್ಳಿ ಮೇಲಿಂದ ಇಬ್ಬನಿಯ ಸಿಂಚನ
ಕಿಲ ಕಿಲನೆ ನಸುನಕ್ಕಿತು ಹೂಮುಡಿದ ಗಿಡ
ಕೈಬೀಸಿ ಹರಸಿತ್ತು ನೆಲಹಿಡಿದ ಮರ
Comments
ಉ: ಮುಂಜಾನೆ ನಂದಿಬೆಟ್ಟ
Excellent ravi :)
In reply to ಉ: ಮುಂಜಾನೆ ನಂದಿಬೆಟ್ಟ by ವಿಶ್ವ ಪ್ರಿಯಂ
ಉ: ಮುಂಜಾನೆ ನಂದಿಬೆಟ್ಟ
ಧನ್ಯವಾದಗಳು ವಿಶ್ವ ಪ್ರಿಯಂ
ಉ: ಮುಂಜಾನೆ ನಂದಿಬೆಟ್ಟ
ಸುಂದರ ಭಾವ,,,, ಓಳ್ಳೆಯ ಬರಹ,,,,
ಜೀ ಕೇ ನ