ಇದ್ದರು ಲಕ್ಷ, ಹೋದರು ಲಕ್ಷ, ಗೊತ್ತ ?! (ಡಾ. ರಾಜ್)

ಇದ್ದರು ಲಕ್ಷ, ಹೋದರು ಲಕ್ಷ, ಗೊತ್ತ ?! (ಡಾ. ರಾಜ್)

ಈಚೆಗೆ ಬಣ್ಣದಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ 'ಕಸ್ತೂರಿ ನಿವಾಸ'ದ ಮರುಬಿಡುಗಡೆಯ ಕೆಲವು ದೃಶ್ಯಾವಳಿಗಳನ್ನು ನೋಡುತ್ತಿದ್ದಂತೆ ನೆನಪಾದದ್ದು ಈ ನಾಣ್ಣುಡಿ - 'ಆನೆ ಇದ್ದರು ಲಕ್ಷ, ಹೋದರೂ ಲಕ್ಷ'. ಕೆಲವದರ ಮೌಲ್ಯ ಅದರ ಭೌತಿಕ ಅಸ್ತಿತ್ವವಿರಲಿ ಬಿಡಲಿ ಕುಗ್ಗುವುದೇ ಇಲ್ಲ - ನಿರಂತರವಾಗಿ ಹಿಗ್ಗುತಲೆ ಇರುವ ಅಭೌತಿಕ, ಅಲೌಕಿಕ ಸ್ವರೂಪದ್ದು. ಅಂತಹ ಅಪರೂಪದ ಕನ್ನಡದ ಶಾಶ್ವತ ಆಸ್ತಿ - ಡಾ. ರಾಜ್. ವಿಪರ್ಯಾಸವೆಂದರೆ ಒಂದು ನಟನಾಗಿ, ವ್ಯಕ್ತಿಯಾಗಿ ಮೇರು ಶಿಖರವನ್ನೆರಿದ, ಆಮರತ್ವವನ್ನು ಸಾಧಿಸಿದ ಡಾ. ರಾಜ್ ವ್ಯಕ್ತಿತ್ವವನ್ನೆ ಸರಿಗಟ್ಟುವ ಹುನ್ನಾರವೆಂಬಂತೆ, ಅವರ ಮೇಲಿನ 'ಅಭಿಮಾನ'ವೂ ಅದೇ ನಿರಂತರತೆಯ, ಶಾಶ್ವತತೆಯ ಮೆಟ್ಟಿಲೇರಲು ತುಡಿಯುತ್ತ ಹವಣಿಸುತ್ತಿರುವುದು - ಅವರ ಮರಣದ ಇಷ್ಟು ದಿನಗಳ ನಂತರವು. ಅಂತಹ ಅಭಿಮಾನದ ಪ್ರಕಟ ಸ್ವರೂಪವನ್ನು ಈಗಿನ ಪೀಳಿಗೆಯಲ್ಲಿ ಕಾಣಲಾದರು ಎಲ್ಲಿ ಸಾಧ್ಯ ? ಆದರೆ ಒಂದು ಮಾತಂತು ಸತ್ಯ ; ನಿಜವಾದ ಮೌಲ್ಯವುಳ್ಳದ್ದರ ಬೆಲೆ ಕಾಲ ದೇಶಗಳ ಗಡಿ ಮೀರಿ, ಕಾಲಾತೀತವಾಗಿ ಉಳಿದುಹೋಗುತ್ತದೆ, ನಿರಂತರವಾಗಿ - ಕನ್ನಡಿಗರ ಮನದಲ್ಲಿರುವ ಡಾ. ರಾಜ್ ನೆನಪಿನ ಹಾಗೆ. ಆ ನೆನಪಿಗೊಂದು ಕವನದ ಕುಸುಮ 'ಇದ್ದರು ಲಕ್ಷ, ಹೋದರು ಲಕ್ಷ !'

ಇದ್ದರು ಲಕ್ಷ, ಹೋದರು ಲಕ್ಷ !
_________________________

ಸತ್ತರು ಬಿಡದಲ್ಲ ಭೂತ
ಎಷ್ಟು ಅಭೂತಪೂರ್ವ ಗೊತ್ತಾ?
ಐರಾವತ ದೇವೇಂದ್ರನಾನೆ
ಇದ್ದರು ಲಕ್ಷ, ಹೋದರು ಲಕ್ಷ ||

ಯಾರು ಸತ್ತವರು ಜನ -
ಇದ್ದು ಸತ್ತಂತಿರುವ ನಾವೆ ?
ಸಾಯುವುದಿಲ್ಲ ಕೆಲವರು
ಪರಬ್ರಹ್ಮದಪರಾವತಾರ ತಾನೆ! ||

ಯಾರು ಅಳುವರು ಸಾವಿಗೆ 
ಸತ್ತಿದ್ದರೆ ತಾನೆ ದುಃಖ ?
ಜನಮನದಡಿ ಕೂತ ಕನಸು
ಕಟ್ಟಿದ್ದು ನಟನೆಯ ತಪ ತಾನೆ? ||

ಕಟ್ಟಿದರು ನಕ್ಷತ್ರ ಬಳಗ
ಕುರುಹೆಂದರು ಅಭಿಮಾನಕೆ
ನಕ್ಷತ್ರವೆ ಆಗಿಹೋದರು ಬಿಡದೆ
ಕಟ್ಟುತಲೇ ಇಹ ವಿಸ್ಮಯಕೆ ||

ಮೂಕ ವಿಸ್ಮಿತ ಅಭಿಮಾನಕೆ
ಪಡೆದು ಬಂದಿರಬೇಕು ನಿಜ
ಬರಿ ವರನಟನಿಗೆ ಮಾತ್ರವೇನು?
ಪಡೆದು ಬಂದಿದ್ದು ನಾವೆಲ್ಲ ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು, ಸಿಂಗಪುರ

Comments

Submitted by nageshamysore Sun, 11/16/2014 - 15:22

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಆಂಗ್ಲದಲ್ಲೊಂದು ಮಾತು ಕೇಳಿದ್ದೆ - 'ದಿ ಕಿಂಗ್ ಇಸ್ ಡೆಡ್, ಲಾಂಗ್ ಲೀವ್ ದ ಕಿಂಗ್' ಎಂದು. ಕನ್ನಡದ ಮಟ್ಟಿಗೆ ಡಾ. ರಾಜ್ ವಿಷಯದಲ್ಲಂತು ಆ ಮಾತು ಅಕ್ಷರಷಃ ನಿಜವೆನ್ನಬಹುದು.

Submitted by H A Patil Thu, 11/20/2014 - 19:15

ನಾಗೇಶ ಮೈಸೂರು ರವರಿಗೆ ವಂದನೆಗಳು
ಡಾ.ರಾಜ ಕುಮಾರ ಬಗೆಗೆ ಬರೆದ ಮಾಹಿತಿ ಲೇಖನ ಮತ್ತು ಕವನಗಳು ಅವರ ಘನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಮೂರೂವರೆ ದಶಕಗಳ ಹಿಂದೆ 3.75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಕಸ್ತೂರಿ ನಿವಾಸ ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಣ್ಣದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬಂದಿದೆ. ಕರ್ನಾಟಕದಲ್ಲಿ ಸರಿ ಸುಮಾರು 50 ಥಿಯೇಟರ್ ಗಳಲ್ಲಿ ಚಲನಚಿತ್ರ ಐದು ದಿನಗಳಲ್ಲಿ ಒಂದು ಕೋಟಿ ದುಡ್ಡು ಮಾಡಿದೆ ಎಂದು ಒಂದು ಪತ್ರಿಕೆ ವರದಿ ಮಾಡಿದೆ.ಇನ್ನೊಂದು ವಾರ ಹೀಗೆಯೆ ಅದು ಪ್ರದರ್ಶನ ಕಾಣುತ್ತ ಹೋದರೆ ಅದಕ್ಕೆ ತಗುಲಿದ ವೆಚ್ಚ ಹಿಂದಕ್ಕೆ ಬರುವ ಸಾಧ್ಯತೆಯಿದೆ. ರಾಜ ಕುಮಾರ ಒಂದು ಆದರ್ಶ ಅವರ ನಟನೆಯ ಚಿತ್ರಗಳಿಗೆ ಇನ್ನೂ ಬೆಂಬಲವಿದೆ ಎನ್ನುವುದಕ್ಕೆ ಕಸ್ತೂರಿ ನಿವಾಸ ಚಿತ್ರಕ್ಕೆ ಪ್ರೇಕ್ಷಕರು ನೀಡಿದ ಅಭೂತಪೂರ್ವ ಬೆಂಬಲ ಕಾರಣ ಎಂದರೆ ತಪ್ಪಾಗ ಲಾರದು. ಧನ್ಯವಾದಗಳು

Submitted by nageshamysore Fri, 11/21/2014 - 04:52

In reply to by H A Patil

ಪಾಟೀಲರೆ ನಮಸ್ಕಾರ. ನನಗನಿಸುವಂತೆ ಕಸ್ತೂರಿ ನಿವಾಸ ಎಂದು ಜನಮಾನಸದಿಂದ ಮರೆಯಾಗಳು ಬಿಡದಂತೆ ಆ ಸುಂದರ ಹಾಡುಗಳು ಅದರ ನೆನಪಿನ ತುಣುಕನ್ನು ಸದಾ ಜೀವಂತವಾಗಿಟ್ಟಿದ್ದವೆನಿಸುತ್ತದೆ. ಹೀಗಾಗಿ ಮತ್ತೊಮ್ಮೆ ಬಣ್ಣದ ದೃಶ್ಯ ಮಾಧ್ಯಮದಲ್ಲಿ ಬರುವುದೆಂದಾಗ ಹೊಸ ಮಾರ್ಕೆಟಿಂಗ್ ಮಾಡುವ ಅಗತ್ಯವೂ ಇಲ್ಲದ ಹಾಗೆ ಆ ಹಾಡಿನ ಮೆಲುಕುಗಳೆ ಜನರನ್ನು ಅಲ್ಲಿಗೆ ಕರೆದೊಯ್ಯುತ್ತಿರಬೇಕು. ಇದರ ಜತೆಗೆ ರಾಜ್ ವ್ಯಕ್ತಿತ್ವ, ನಟನೆ, ನಿರ್ದೇಶನ, ಕಥೆ ಎಲ್ಲವೂ ಅಚ್ಚುಕಟ್ಟಾಗಿ ಸೇರಿದ ಈ ಚಿತ್ರ ಕಪ್ಪುಬಿಳುಪಲ್ಲೆ ಅಚ್ಚುಕಟ್ಟಾದ ಊಟವಾಗಿದ್ದರೆ, ಬಣ್ಣದಲ್ಲಿ ವೈಭವೋಪೇತ ಹಬ್ಬದೌತಣವೆ ಸರಿ.

ಇದನ್ನು ಬರೆಯುವಾಗ ಒಮ್ಮೆ ಓದಿದ ಘಟನೆ ನೆನಪಾಯ್ತು. ಶಿವಾಜಿ ಗಣೇಶನ್ ರವರು ತಮಿಳು ಆವೃತ್ತಿಗಾಗಿ ತಮ್ಮ ಡ್ರೈವರ ಮೂಲಕ ಈ ಚಿತ್ರದ ಹಕ್ಕು ಖರೀದಿಸಲು ಪ್ರಯತ್ನಿಸಿದ್ದು, ಮತ್ತು ಆತ ಶಿವಾಜಿ ಗಣೇಶನ್ ಡ್ರೈವರ ಎಂದು ಜತೆಯಲ್ಲಿದ್ದವರಾರೊ (ನಿರ್ದೇಶಕ ಭಗವಾನ್ ಇರಬೇಕು) ಕಂಡುಹಿಡಿದು 'ಸೂಕ್ತ ವ್ಯವಹಾರಕ್ಕೆ' ಹುಷಾರಾಗಿಬಿಟ್ಟಿದ್ದು, ಇತ್ಯಾದಿ. ಈ ಘಟನೆ ನೆನೆದರು ಆಗ ಬಿಡುಗಡೆಯಾದ ಹೊತ್ತಲ್ಲು ಇದು ಹೀಗೆ ಸುದ್ದಿ ಮಾಡಿರಬೇಕು ತನ್ನ ಯಶಸ್ಸಿನ ಕಾರಣದಿಂದ.

Submitted by H A Patil Sun, 11/23/2014 - 20:30

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಇದು ಮೊದಲಿನಲ್ಲಿ ನಟ ಶಿವಾಜಿ ಗಣೇಶರನ್ನು ಕಥಾ ನಾಯಕನನ್ನಾಗಿ ಮನಸಿನಲ್ಲಿಟ್ಟುಕೊಂಡು ಬರೆದಿದ್ದ ಕಥಾನಕ, ಆದರೆ ಇದೊಂದು ದುರಂತ ಕಥಾನಕವಾಗಿದ್ದು ಕೊನೆಯಲ್ಲಿ ಕಥಾ ನಾಯುಕ ಸಾಯುತ್ತಾನೆ ದುರಂತದಲ್ಲಿ ಕೊನೆಗಳ್ಳುವ ಈ ಕಥಾನಕ ಅವರಿಗೆ ಮನಸಿನಲ್ಲಿ ಬರಲಿಲ್ಲ. ನಂತರ ದೊರೆ ಭಗವಾನರಿಗೆ ಗೊತ್ತಾಗಿ ವರದಪ್ಪರವರೊಂದಿಗೆ ಚರ್ಚಿಸಿ ಈ ಕಥಾನಕ ಪಡೆಯಲು ಆಗಿನ ಮದ್ರಾಸಿಗೆ ತೆರಳುತ್ತಾರೆ, ಆಗಲೆ ಅ ಕಥೆ 25,000 ರೂ.ಗಳಿಗೆ ಬೇರೊಬ್ಬರಿಗೆ ಮಾರಾಟವಾಗಿದ್ದುದು ಗೊತ್ತಾಗಿ ಅ ವ್ಯಕ್ತಿಯ ಬಳಿಗೆ ಹೋಗುತ್ತಾರೆ, ಆ ವ್ಯಕ್ತಿ ಸದರಿ ಕಥೇಗೆ ಅನುಕೂಲವಾದ ರೀತಿಯಲ್ಲಿ ಸೆಟ್ಟಿಂಗ್ಸ ಹಾಕಿಸಲು 40,000 ರೂ.ಗಳನ್ನು ಖರ್ಚು ಮಾಡಿರುತ್ತಾರೆ. ಕಥೇಯ ಹಕ್ಕಿನ ಜೊತೆಗೆ ಸೆಟ್ಟಿಂಗ್ಸ್ ಗಾಗಿ ಅತ ಖರ್ಚು ಮಾಡಿದ ಹಣಕೊಟ್ಟು ಕಥಾನಕ ತಂದರೆ ಶಿವಾಜಿ ಗಣೇಶನ್‌ ಬಿಟ್ಟ ಕತೆಯೆಂದು ತಿಳಿದ ರಾಜ ಕುಮಾರ ಅಂತಹ ದೊಡ್ಡ ನಟರು ಒಪ್ಪದಿದ್ದ ಕಥಾನಕದ ಚಿತ್ರದಲ್ಲಿ ನಟಿಸಲು ಒಪ್ಪುವುದೆ ಇಲ್ಲ. ಕೊನೆಗೆ ಅವರ ನಿಕಟವರ್ತಿಗಳ ಲೊಬ್ಬರಾದ ಚಿ.ಉದಯ ಶಂಕರರ ಮೂಲಕ ಹೇಳಿಸಿ ಒಪ್ಪಿಸುತ್ತಾರೆ. ಇದರ ನಿರ್ಮಾಣದಲ್ಲಿ ಪಾಲುದಾರರಾಗಲು ಕೆಸಿಎನ್ ಮೂವ್ಹೀಸ್ ರವರು ಮುಂದೆ ಬರುತ್ತಾರೆ ಆದರೆ ದೊರೆ ಭಗವಾನ ಜೋಡಿ ತಾವೆ ತಮ್ಮ ಸ್ವಂತ ಬ್ಯಾನರಿನಲ್ಲಿ ತಯಾರಿಸುವ ಆಶೆಯನ್ನು ವ್ಯಕ್ತ ಪಡಿಸುತ್ತಾರೆ, ಆದರೆ ಅವರು ಇದಕ್ಕೆ ಫೈನಾನಸಿಯರ್‌ ಅಗುತ್ತಾರೆ. ಇಡಿ ಚಿತ್ರ ಕೇವಲ 17 ದಿನಗಳಲ್ಲಿ ಚಿತ್ರಿಕರಣ ಗೊಂಡು ಕೆಸಿಎನ್ ಸಂಸ್ತೆಯವರು ವಿತರಣೆಯ ಹಕ್ಕನ್ನು ಪಡೆದು ಚಿತ್ರ ಬಿಡುಗಡೆ ಮಾಡುತ್ತಾರೆ. ಮೊದಲು ಎರಡು ವಾರ ಕುಂಟುತ್ತ ನಡೆದ ಚಿತ್ರ ಮುಂದೆ ಭರ್ಜರಿಯಾಗಿ ಪ್ರದರ್ಶನ ಕಾಣುತ್ತ ಹೋಗಿ ಅ ಕಾಲದಲ್ಲಿಯೆ 7 ಲಕ್ಷದಷ್ಟು ಹಣ ಸಂಪಾದಿಸುತ್ತದೆ. ಈ ಚಿತ್ರದ ಭರ್ಜರಿ ಪ್ರದರ್ಶನದ ಮಾಹಿತಿ ಪಡೆದ ಶಿವಾಜಿ ಗಣೇಶನ್ ಅದರ ತಮಿಳು ಅವತರಣಿಕೆಯಲ್ಲಿ ಅಭಿನಯಿಸಿದೆ ಹಿಂದಿ ಅವತರಣಿಕೆಯಲ್ಲಿ ಸಂಜೀವ ಕುಮಾರ ಅಬಿನಯದಲ್ಲಿ ಶಾನದಾರ್ ಚಿತ್ರ ತಯಾರಾಗುತ್ತದೆ. ಈ ಎರಡೂ ಚಿತ್ರಗಳ ತಯಾರಿಕೆಯ ಹಕ್ಕಿಗಾಗಿ ತಮಿಳು ನಿರ್ಮಾಪಕ 2 ಲಕ್ಷ ಕೊಟ್ಟರೆ ಹಿಂದಿಯಲ್ಲಿ ಇದರ ಕತೆ 4 ಲಕ್ಷಗಳಿಗೆ ಮಾರಟವಾಗಿ ಅಲ್ಲಿಯೂ ಸಹ ಈ ಕಥೇಯಾಧಾರಿತ ಚಿತ್ರಗಳು ಭರ್ಜರಿ ಸಂಪಾದಿಸುತ್ತವೆ. ಕನ್ನಡದ ಕಸ್ತೂರಿ ನಿವಾಸವನ್ನು ಬಣ್ಣದಲ್ಲಿ ತಯಾರಿಸುವ ಇಷ್ಚೆ ಕೆಸಿಎನ್ ಸಂಸ್ತೆಗೆ ಇದ್ದು ಅದು ಮರು ವರ್ಣವೈಬವದಲ್ಲಿ ಬಿಡುಗಡೆಯಾಗಿದೆ ಇದೊಂದು ಸ್ಥೂಲ ವಿವರಣೆ. ಧನ್ಯವಾದಗಳು.

Submitted by nageshamysore Mon, 11/24/2014 - 04:59

In reply to by H A Patil

ಪಾಟೀಲರೆ ನಮಸ್ಕಾರ. ಇಡಿ ಕಥೆಯ ಹಿನ್ನಲೆಯ ಸಣ್ಣ ತುಣುಕು ಮಾತ್ರ ಗೊತ್ತಿದ್ದ ನನಗೆ ನಿಮ್ಮ ಸಮಗ್ರ ವಿವರಣೆಯಿಂದ ಪೂರ್ಣ ಹಿನ್ನಲೆ ತಿಳಿದಂತಾಯ್ತು. ಮೊದಲಿಗೆ ಇದು ಶಿವಾಜಿ ಗಣೇಶನ್ ರವರೆ ಕೈ ಬಿಟ್ಟಿದ್ದ ಕಥೆಯೆಂಬುದು ಗೊತ್ತಿರಲಿಲ್ಲ. ಕಸ್ತೂರಿ ನಿವಾಸದ ಹಿನ್ನಲೆಯ ಈ ಕಥೆಯು ಆ ಸಿನಿಮಾದಷ್ಟೆ ರೋಚಕವಾಗಿದೆ. ಬಣ್ಣದಲ್ಲಿ ಅದರ ಅನುಭವ ಇನ್ನು ಶ್ರೀಮಂತಗೊಂಡು ಹೊಸರೂಪಿನಲ್ಲಿ ಬಂದಿರುವುದು ಮಾತ್ರವಲ್ಲದೆ ಈಗಿನ ಹೊಸ ಪೀಳಿಗೆಯ ಎಷ್ಟೊ ಜನರಿಗೂ ಒಂದು ಒಳ್ಳೆಯ ಚಿತ್ರ ನೋಡುವಂತಾಗಿ, ಆ ಪರಂಪರೆಯ ತುಣುಕು ಕೈಗೆ ಸಿಗುವಂತಾಗಿದೆ. ತಮ್ಮ ಸಹನೆಯ, ವಿವರಣಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.