ದೇವರು: ಒಂದು ತರ್ಕವಿತರ್ಕ - 2

ದೇವರು: ಒಂದು ತರ್ಕವಿತರ್ಕ - 2

ಹಿಂದಿನ ಲೇಖನಕ್ಕೆ ಲಿಂಕ್:  http://sampada.net/%E0%B2%A6%E0%B3%87%E0%B2%B5%E0%B2%B0%E0%B3%81-%E0%B2%92%E0%B2%82%E0%B2%A6%E0%B3%81-%E0%B2%A4%E0%B2%B0%E0%B3%8D%E0%B2%95%E0%B2%B5%E0%B2%BF%E0%B2%A4%E0%B2%B0%E0%B3%8D%E0%B2%95-1

     'ಏಕಂ ಸತ್ ವಿಪ್ರಾಃ ಬಹುಧಾ ವದಂತಿ' - ಒಬ್ಬನೇ ದೇವರು, ಒಂದೇ ಸತ್ಯ, ವಿಶೇಷ ಪ್ರಜ್ಞಾವಂತರು ಅದನ್ನು ಬಹುರೀತಿಯಲ್ಲಿ ಹೇಳುತ್ತಾರೆ. ಹಿಂದೂಗಳು ಬಹು ದೇವತಾರಾಧನೆ ಮಾಡುವವರಾದರೂ ಒಬ್ಬನೇ ದೇವರೆಂಬುದನ್ನು ನಂಬುತ್ತಾರೆ. ಮುಸ್ಲಿಮರೂ, ಕ್ರಿಶ್ಚಿಯನರೂ ಸಹ ಒಬ್ಬನೇ ದೇವರೆನ್ನುತ್ತಾರೆ. ಯಾರು ಆ ಒಬ್ಬ ದೇವರು? ಇಲ್ಲೇ ಸಮಸ್ಯೆ! ನಮ್ಮ ದೇವರೇ ಆ ಒಬ್ಬ ದೇವರು ಎಂದು ವಾದಿಸುವವರಿಂದಲೇ ಈ ಸಮಸ್ಯೆ. ಒಬ್ಬನೇ ದೇವರು ಅಂದಾಗ ಅವನನ್ನು ಯಾವ ಹೆಸರಿನಿಂದ ಕರೆದರೆ ಏನು? ಅಲ್ಲಾ ಅನ್ನಲಿ, ಏಸು ಅನ್ನಲಿ, ರಾಮ ಅನ್ನಲಿ, ಕೃಷ್ಣ ಅನ್ನಲಿ ತಪ್ಪೇನು ಎಂದು ವಾದಿಸುವವರ ಮಾತನ್ನು ಕೇಳುವವರು ಯಾರು? ಈ ವೇದ ಮಂತ್ರ ಹೇಳುತ್ತದೆ: 

ನ ದ್ವಿತೀಯೋ ನ ತೃತಿಯೋಶ್ಚತುರ್ಥೋ ನಾಪ್ಯುಚ್ಯತೇ | ನ ಪಂಚಮೋ ನ ಷಷ್ಠಃ ಸಪ್ತಮೋ ನಾಪ್ಯುಚ್ಯತೇ | ನಾಷ್ಟಮೋ ನ ನವಮೋ ದಶಮೋ ನಾಪ್ಯುಚ್ಯತೇ | ತಮಿದಂ ನಿಗತಂ ಸಹಃ ಸ ಏಷ ಏಕ ಏಕವೃದೇಕ ಏವಃ || 

(ಅಥರ್ವ.೧೩.೪.೧೬-೧೮,೨೦)

     ಎರಡನೆಯ ಪರಮಾತ್ಮನಿಲ್ಲ, ಮೂರನೆಯವನಿಲ್ಲ, ನಾಲ್ಕನೆಯವನು ಹೇಳಲ್ಪಡುವುದಿಲ್ಲ, ಐದನೆಯವನಿಲ್ಲ, ಆರನೆಯವನಿಲ್ಲ, ಏಳನೆಯವನು ವರ್ಣಿಸಲ್ಪಡುವುದಿಲ್ಲ, ಎಂಟನೆಯವನಿಲ್ಲ, ಒಂಬತ್ತನೆಯವನಿಲ್ಲ, ಹತ್ತನೆಯವನ ವಿವರಣೆಯೇ ಇಲ್ಲ. ಈ ಶಕ್ತಿ ಅವನಲ್ಲಿಯೇ ಸೇರಿದೆ. ಅವನು ಒಬ್ಬನೇ ಆಗಿದ್ದಾನೆ, ಒಬ್ಬನೇ ವ್ಯಾಪಕನಾಗಿದ್ದಾನೆ, ಇರುವುದು ಒಬ್ಬನೇ, ಒಬ್ಬನೇ, ಒಬ್ಬನೇ! ದೇವರು ಒಬ್ಬನೇ ಎಂದು ಈ ಮಂತ್ರ ಸಾರಿ ಸಾರಿ ಹೇಳುತ್ತಿದೆ. ಆದರೂ ನಾವು ನಮ್ಮ ದೇವರೇ ಹೆಚ್ಚು ಎಂದು ಬಡಿದಾಡುವುದಕ್ಕೆ ಅರ್ಥವಿದೆಯೇ?

     ಒಂದು ಹಂತದವರೆಗೆ ವಿವಿಧ ಆಚಾರ-ವಿಚಾರಗಳನ್ನು ಒಪ್ಪಿಕೊಳ್ಳಬಹುದು. ಆದರೆ, ನಾವು ಹೇಳುವುದೇ ಸರಿ, ಇತರರು ಹೇಳುವುದು ತಪ್ಪು, ದೇವರು ಹೀಗೆಯೇ ಇದ್ದಾನೆ, ನಾವು ಪಾಲಿಸುವ ಧರ್ಮ/ಜಾತಿ/ಮತವೇ ನೈಜವಾದದ್ದು ಎಂಬ ವಾದ ಒಪ್ಪುವುದು ಕಷ್ಟ. ಇತರ ವಿಚಾರಗಳನ್ನು ಹೊಂದಿರುವವರು ಧರ್ಮದ್ರೋಹಿಗಳು, ಶಿಕ್ಷಾರ್ಹರು, ಅವರು ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು, ನಮ್ಮ ಧರ್ಮಾನುಯಾಯಿಗಳಾಗಲೇಬೇಕು, ವಿಚಾರವನ್ನು ಒಪ್ಪಲೇಬೇಕು, ಎಂಬ ವಿಚಾರಧಾರೆ ಎಷ್ಟರ ಮಟ್ಟಿಗೆ ಸರಿ? ಅವರವರ ವಿಚಾರ ಅವರಿಗಿರಲಿ. ಅದನ್ನು ಕಡ್ಡಾಯವಾಗಿ ಇತರರ ಮೇಲೆ ಹೇರುವುದು ತರವಲ್ಲ. ತಮ್ಮ ಮತ/ಧರ್ಮ ಬೆಳೆಸಲು ಆರೋಗ್ಯ/ಶಿಕ್ಷಣ/ ಧಾರ್ಮಿಕ/ ವ್ಯಾವಹಾರಿಕ ಮಾಧ್ಯಮಗಳೆಲ್ಲವನ್ನೂ ಬಳಸಿಕೊಳ್ಳುವುದರ ಜೊತೆಗೆ ಬಡತನ, ಅಜ್ಞಾನಗಳನ್ನೂ ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಧರ್ಮಯುದ್ಧದ ಹೆಸರಿನಲ್ಲಿ ಇತರರನ್ನು ಮಟ್ಟ ಹಾಕುವ, ಬೆದರಿಕೆ ಹಾಕುವ, ಭಯೋತ್ಪಾದನೆ ನಡೆಸುವ ಕುರುಡು ಮತಾಂಧರ ಸಂಖ್ಯೆ ಸಹ ಕಡಿಮೆಯೇನಿಲ್ಲ. ವಿಗ್ರಹಾರಾಧನೆ ಮಾಡದಿರುವವರು ಧರ್ಮದ ಹೆಸರಿನಲ್ಲಿ ದೇವಸ್ಥಾನಗಳನ್ನು, ಪೂಜಾಸ್ಥಾನಗಳನ್ನು ಧ್ವ್ವಂಸ ಮಾಡಿ ಅನೇಕ ಅಮೂಲ್ಯ ಕಲಾಕೃತಿಗಳ ನಾಶ ಮಾಡುವುದನ್ನು, ಅದೇ ರೀತಿ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಘರ್ಷಣೆ ನಡೆಸುವುದನ್ನು ನಾಗರಿಕ ಸಮಾಜ ಒಪ್ಪಲಾರದು. ಕಲಾಕೃತಿಗಳನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲ; ಆದರೆ ಹಾಳು ಮಾಡುವುದು ಸುಲಭ. ಸ್ವತಃ ಜೀವ ಕೊಡಲಾರದವರು ಜೀವ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಪ್ರಯತ್ನಗಳಿಂದ ಅವರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ತರ್ಕಕ್ಕಾಗಿ ಕಾಲಘಟ್ಟದಲ್ಲಿ ಎಲ್ಲರೂ ಒಂದೇ ಮತ/ಜಾತಿ/ಧರ್ಮಕ್ಕೆ ಸೇರಿದರು ಎಂದಿಟ್ಟುಕೊಳ್ಳೋಣ. ಆಮೇಲೆ ಏನು ಮಾಡುವುದು? ವಾಸ್ತವವಾಗಿ ಆಗ ಘಟಿಸಬಹುದಾದುದೇನೆಂದರೆ ಅವರಲ್ಲೇ ಪುನಃ ಒಳಪಂಗಡಗಳ ಸೃಷ್ಟಿಯಾಗಿ ತಮ್ಮದೇ ಮೇಲು ಎಂದು ವಾದಿಸತೊಡಗುವರು. ದೇವರ ಕೊಡುಗೆಯಾದ ವೈಚಾರಿಕ ಶಕ್ತಿಯನ್ನು ಮೊಟಕುಗೊಳಿಸುವ, ಇದಕ್ಕೂ ಮುಂದೆ ಯೋಚಿಸಬಾರದು ಎಂದು ಬೇಲಿ ಹಾಕುವ ಇಂತಹ ಪ್ರವೃತ್ತಿಗಳಿಂದ ಒಂದು ರೀತಿಯಲ್ಲಿ ಪ್ರಗತಿಗೆ ಹಿನ್ನಡೆಯಾಗುತ್ತದೆ ಎಂದು ಅನ್ನಿಸುವುದಿಲ್ಲವೇ?

     ಸೂರ್ಯನ ಕಿರಣಗಳನ್ನು ಮಸೂರದ (ಲೆನ್ಸ್) ಮೂಲಕ ಹಾಯಿಸಿ ಕೇಂದ್ರೀಕರಿಸಿ ಒಣಗಿದ ಕಾಗದ, ತರಗೆಲೆಗಳಿಗೆ ಬೆಂಕಿ ಹೊತ್ತಿಸಲು ಸಾಧ್ಯವಿರುವಂತೆಯೇ, ನಮ್ಮ ಮನಸ್ಸನ್ನು ನಿಯಂತ್ರಿಸಿ ಒಂದು ವಿಷಯದ ಕುರಿತು ಕ್ರೋಢೀಕರಿಸಿ ಪ್ರಾರ್ಥಿಸಿದಾಗ, ನಾವು ಎಷ್ಟರ ಮಟ್ಟಿಗೆ ಆರೀತಿ ಮಾಡಲು ಸಾಧ್ಯವಿದೆಯೋ ಅಷ್ಟರ ಮಟ್ಟಿಗೆ ಸಫಲತೆ ಕಂಡುಕೊಳ್ಳಬಹುದೆಂಬುದು ನನ್ನ ವೈಯಕ್ತಿಕ ಅನುಭವ. ಅನಿರೀಕ್ಷಿತವಾಗಿ ಕಷ್ಟಕರ ಪರಿಸ್ಥಿತಿಗೆ ಸಿಲುಕಿ ಹತಾಶನಾಗಿದ್ದಾಗ, ಅವಮಾನಿತನಾಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದು ಒಳಿತೆಂದು ಭಾವಿಸಿದ ಸಂದರ್ಭವೊಂದರಲ್ಲಿ ನಾನು ದೇವಸ್ಥಾನಕ್ಕೆ ಹೋಗಿ ಅಡ್ಡಬೀಳಲಿಲ್ಲ. ಆ ಸಮಯದಲ್ಲಿ ನಾನು ಸುಬ್ರಹ್ಮಣ್ಯದಲ್ಲಿ ಕೊಠಡಿಯೊಂದರಲ್ಲಿ ವಾಸವಿದ್ದೆ. ದೇವಸ್ಥಾನದ ಹೊರಗಿನ ಕಟ್ಟೆಯೊಂದರ ಮೇಲೆ ಕುಳಿತು ನನ್ನನ್ನು ಪಾರು ಮಾಡುವಂತೆ ಅಗೋಚರ ಶಕ್ತಿಯಲ್ಲಿ ತದೇಕ ಚಿತ್ತದಿಂದ ಆರ್ತನಾಗಿ, ಮೌನವಾಗಿ ಪ್ರಾರ್ಥಿಸಿದ್ದೆ. ನನ್ನ ಪ್ರಾರ್ಥನೆಯ ಫಲವೋ, ದೇವರ ಸಹಾಯವೋ ಎಂಬಂತೆ ನನ್ನನ್ನು ಮುಸುಕಿ ಮುಳುಗಿಸಲಿದ್ದ ಕಾರ್ಮೋಡ ಸರಿದು ಹೋಗಿದ್ದಂತೂ ಸತ್ಯ. ಒಮ್ಮೆಯಾದರೆ ಆಕಸ್ಮಿಕವೆನ್ನಬಹುದಿತ್ತು. ಹಲವಾರು ಸಂದರ್ಭಗಳಲ್ಲಿ ಮನಸ್ಸು ನಿಯಂತ್ರಿಸಿ ಮಾಡಿದ ಏಕಚಿತ್ತದ ಧ್ಯಾನ ನನಗೆ ಪರಿಹಾರದ ದಾರಿ ತೋರಿದೆ, ಸಾಂತ್ವನ ನೀಡಿದೆ. ನನಗೆ ದೇವರ ಕುರಿತು ಸ್ಪಷ್ಟ ಕಲ್ಪನೆಯಿಲ್ಲ, ಅಭಿಪ್ರಾಯವಿಲ್ಲ. ಯಾರನ್ನು ಪ್ರಾರ್ಥಿಸುತ್ತಿದ್ದೇನೆ, ಆ ದೇವರು ಹೇಗಿದ್ದಾನೆ ಎಂಬುದೂ ಗೊತ್ತಿಲ್ಲ. ಆದರೆ ಅಗೋಚರ, ಕಲ್ಪನೆ/ತರ್ಕಕ್ಕೆ ಮೀರಿದ, ನಮ್ಮನ್ನೆಲ್ಲಾ ನಿಯಂತ್ರಿಸುವ ಶಕ್ತಿಯೊಂದಿದೆ ಎಂಬ ನಂಬಿಕೆ ಮಾತ್ರ ಧೃಢವಾಗಿದ್ದು ನಾನು ಪ್ರಾರ್ಥಿಸಿದ್ದು, ಪ್ರಾರ್ಥಿಸುವುದು ಆ ಶಕ್ತಿಯನ್ನೇ! ಹಾಗಾದರೆ ನಮ್ಮ ಪ್ರಾರ್ಥನೆ ಸಫಲಗೊಳಿಸಿಕೊಳ್ಳಬಲ್ಲ ಶಕ್ತಿ ನಮ್ಮೊಳಗೇ ಇದೆಯೇ? ಹೌದಾದರೆ ದೇವರು ನಮ್ಮೊಳಗೂ ಇದ್ದಾನಲ್ಲವೇ?

     ದೇವರು ಸಾಕಾರನೋ, ನಿರಾಕಾರನೋ ಎಂಬುದು ಇನ್ನೊಂದು ವಿಶೇಷವಾಗಿ ಚರ್ಚಿತವಾಗುವ ವಿಷಯ.  ನಾನು ವಿಗ್ರಹಾರಾಧನೆಯನ್ನು ಸಮರ್ಥಿಸುವುದಿಲ್ಲವೆಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಿಲ್ಲ. ಏಕೆಂದರೆ ನಾನು ಯಾವುದೇ ವಿಚಾರ, ತತ್ವಗಳನ್ನು ಪ್ರತಿಪಾದಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ. ವಿಗ್ರಹ ಪೂಜೆಯಿಂದ ಶಾಂತಿ, ನೆಮ್ಮದಿ ಪಡೆಯುತ್ತಿರುವ/ಪಡೆಯಬಯಸುವ ಬಹುತೇಕರ ಶ್ರದ್ಧೆ, ನಂಬಿಕೆಗಳು ಸುಳ್ಳೆಂದು ನಾನು ಹೇಗೆ ಹೇಳಲಿ? ಅವರುಗಳ ಪ್ರಾರ್ಥನೆಗೆ ವಿಗ್ರಹಗಳು ಮಾಧ್ಯಮವಾಗಿರಬಹುದು. ವಿಗ್ರಹಗಳು ಅವರ ಮನೋಶಕ್ತಿಯ ಕೇಂದ್ರೀಕರಣಕ್ಕೆ ಸಾಧನ ಹಾಗೂ ಸಹಕಾರಿಯಾಗಿ ಇರಬಹುದು. ವಿಗ್ರಹಗಳನ್ನು ದೇವರೆಂದು ಭಾವಿಸಿ, ನಂಬಿ ಪೂಜಿಸುವವರ ಮಾನಸಿಕ ಚಿಂತನೆಯ ಅಲೆಗಳು ವಿಗ್ರಹಗಳಲ್ಲಿ ಕ್ರೋಢೀಕೃತಗೊಂಡು ಅಲ್ಲಿ ಶಕ್ತಿ ಸಂಚಯನ ಆಗಿರಬಹುದು. ಅಂತಹ ಸ್ಥಳಗಳು ಶಕ್ತಿ ಕೇಂದ್ರಗಳಾಗಿರಬಹುದು. ಇಲ್ಲೂ ಸಹ ವಿಗ್ರಹಗಳಿಗಿಂತ ಅವುಗಳನ್ನು ಪೂಜಿಸುವವರ ಮನೋಶಕ್ತಿಯೇ ನಿರ್ಧಾರಕವೆಂದು ನನ್ನ ವೈಯಕ್ತಿಕ ಅನಿಸಿಕೆ. ದೇವರನ್ನು ವಿಗ್ರಹಗಳಲ್ಲಿ ಅಥವ ವಿಗ್ರಹಗಳ ಮೂಲಕ ಕಾಣುವುದರಲ್ಲಿಯೂ ಅರ್ಥವಿರಬಹುದು, ಇಲ್ಲದಿರಬಹುದು. ಆದರೆ ವಿಗ್ರಹಗಳೇ ದೇವರೆಂದು ಭಾವಿಸುವುದು ತಾರ್ಕಿಕವಾಗಿಯೂ ಸಹ ಕಷ್ಟಕರ ಸಂಗತಿ. ಒಂದು ಹಂತದ ಪರಿಪಕ್ವತೆ ಬಂದ ನಂತರದಲ್ಲಿ ವಿಗ್ರಹ ಪೂಜೆಯ ಅಗತ್ಯ ಬಾರದೇ ಹೋಗಬಹುದು. ಕೆಲವು ದೇವಸ್ಥಾನಗಳಲ್ಲಿ ದೇವರ ಪ್ರಸಾದ ಕೇಳಿ ಬೇಡುತ್ತಾ ಕುಳಿತ ಭಕ್ತರನ್ನು ಗಮನಿಸಿದ್ದೀರಾ? ಬಲಗಡೆ ಹೂವು ಬಿದ್ದರೆ ಒಪ್ಪಿಗೆಯೆಂತಲೂ ಎಡಗಡೆ ಬಿದ್ದರೆ ಅಶುಭವೆಂದು ನಂಬುವ ಅವರು ದೇವರೊಂದಿಗೆ ಮಾತನಾಡುವ ಪರಿಯನ್ನೂ ನೋಡಿದ್ದೇನೆ. ತಮ್ಮ ಕಷ್ಟ ಸುಖ ತೋಡಿಕೊಳ್ಳುತ್ತಾ 'ಯಾಕಪ್ಪಾ ಇಷ್ಟು ಪರೀಕ್ಷೆ ಮಾಡುತ್ತೀಯಾ? ಇನ್ನೂ ಸತಾಯಿಸಬೇಡ, ಒಳ್ಳೆಯದು ಮಾಡಪ್ಪಾ, ಬೇಗ ಪ್ರಸಾದ ಕೊಡು' ಎಂಬಿವೇ ಇತ್ಯಾದಿ ಹಳಹಳಿಸುತ್ತಿರುತ್ತಾರೆ. ಪ್ರಸಾದ ಕೇಳಲು ಬಂದ ಇತರರೂ ಅವರ ಸರದಿಗಾಗಿ ಕಾಯುತ್ತಿರುತ್ತಾರೆ. ಹಲವರಿಗೆ ಅದು ಭ್ರಮೆಯಂತೆ ಕಂಡರೂ ಭಕ್ತರ ತದೇಕ ಚಿತ್ತತೆ, ನಂಬಿಕೆ ಅಲ್ಲಿ ಎದ್ದು ಕಾಣುತ್ತದೆ. ಅಲ್ಲಿಯೂ ಅವರ ಮನೋಶಕ್ತಿಯೇ ಪ್ರಮುಖವೆಂದು, ವಿಗ್ರಹವಲ್ಲವೆಂದು ನನಗೆ ಅನ್ನಿಸುತ್ತದೆ. ವೈದ್ಯರಲ್ಲಿನ ನಂಬಿಕೆ ಅರ್ಧ ಕಾಯಿಲೆ ವಾಸಿ ಮಾಡುವಂತೆ ದೇವರಲ್ಲಿನ ಅವರ ನಂಬಿಕೆ ಅವರಿಗೆ ನೆಮ್ಮದಿ, ಶಾಂತಿ ಕಂಡುಕೊಳ್ಳಲು ನೆರವಾಗಬಹುದು. ಮೊದಲಿನಿಂದ ಪೂರ್ವಜರು ಮತ್ತು ಸುತ್ತಮುತ್ತಲಿನವರು ಇಟ್ಟುಕೊಂಡು ಬಂದ ನಂಬಿಕೆ, ನಡವಳಿಕೆಗಳನ್ನು ಅವರು ಮುಂದುವರೆಸುತ್ತಾರೆ. ಮುಂದೆ ಅವರ ಮಕ್ಕಳೂ ಅದೇ ರೀತಿಯಲ್ಲಿ ಸಾಗಬಹುದು.

     ದೇವರು ನಿರಾಕಾರನೆಂದು ಒಪ್ಪುವವರ ವಾದವನ್ನೂ ತಳ್ಳಿಹಾಕಲಾಗದು. ಅವರ ಪ್ರಕಾರ ಆಕಾರ ಯಾವುದೇ ಇರಲಿ, ಅದು ಸಂಯೋಗಜನ್ಯವಾದ ಪ್ರಾಕೃತಿಕ ಮತ್ತು ಭೌತಿಕ ವಸ್ತುಗಳಿಗೆ ಅನ್ವಯಿಸುತ್ತದೆಯೇ ಹೊರತು ಆಧ್ಯಾತ್ಮಿಕ ತತ್ವಗಳಿಗಲ್ಲ. ಆಕಾರಿಯಾದವನಿಗೆ ಮಿತಿಯಿರುತ್ತದೆ, ಆದ್ದರಿಂದ ಅವನನ್ನು ಸರ್ವಜ್ಞ, ಸರ್ವವ್ಯಾಪಕ, ಸರ್ವಶಕ್ತ ಎನ್ನಲಾಗುವುದಿಲ್ಲ. ಆಕಾರಕ್ಕೆ ಆದಿ ಇರುತ್ತದೆ, ಅಂತ್ಯವೂ ಇರುತ್ತದೆ. ಇದು ದೇವರ ಅನಾದಿ, ಅನಂತ ತತ್ವಕ್ಕೆ ವಿರೋಧವಾಗುತ್ತದೆ. ದೇವರಿಗೆ ಆಕಾರವನ್ನು ಕೊಟ್ಟವರು ಯಾರು ಎಂಬ ಪ್ರಶ್ನೆ ಬರುತ್ತದೆ. ದೇವರಿಗೆ ಆಕಾರವನ್ನು ಕೊಟ್ಟವರು ದೇವರಿಗಿಂತಲೂ ಶ್ರೇಷ್ಠರೇ ಆಗುತ್ತಾರೆ. ಹಾಗಾದರೆ ದೇವರ ಶ್ರೇಷ್ಠತ್ವಕ್ಕೆ ಧಕ್ಕೆ ಬರುವುದಿಲ್ಲವೇ? ಈ ಸೃಷ್ಟಿ, ಈ ಬ್ರಹ್ಮಾಂಡವೆಂದರೆ ಒಂದು ಭೂಮಿಯಲ್ಲ, ಒಂದು ಸೂರ್ಯನಲ್ಲ, ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾದ ನಕ್ಷತ್ರಗಳಿರುವ ಅನಂತ ಆಕಾಶದಲ್ಲಿ ಊಹಿಸಲು ಸಾಧ್ಯವಿಲ್ಲದಂತಹ ಕಾಯಗಳಿವೆ. ಇದನ್ನೆಲ್ಲಾ ರಚಿಸುವ, ನಿಯಂತ್ರಿಸುವ ಶಕ್ತಿ ಎಲ್ಲೋ ಒಂದು ಸ್ಥಳದಲ್ಲಿ ಇರುವಂತಹ ಶಕ್ತಿಗೆ ಅಥವ ವ್ಯಕ್ತಿಗೆ ಸಾಧ್ಯವಿಲ್ಲ. ವೇದಮಂತ್ರ ಹೇಳಿರುವಂತೆ:

ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ | ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ || (ಯಜು.೪೦.೫.) 

    ಅದು ವಿಶ್ವಕ್ಕೇ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿಯೂ ಇದೆ, ಹತ್ತಿರದಲ್ಲಿಯೂ ಇದೆ. ಅದು ಎಲ್ಲದರ ಒಳಗೂ ಇದೆ, ಹೊರಗೂ ಇದೆ ಎಂಬುದು ಇದರ ಅರ್ಥ. ಇಂತಹ ಸರ್ವವ್ಯಾಪಕತ್ವ ಆಕಾರಿಗೆ ಅಸಾಧ್ಯ.

     ವಿಗ್ರಹಾರಾಧನೆಗೂ ಸಮರ್ಥನೆಗಳನ್ನು ಕೊಡಲಾಗುತ್ತದೆ. ಆಸ್ತಿಕರು ಎಂದು ಗುರುತಿಸಿಕೊಳ್ಳುವವರಲ್ಲಿ ಹೆಚ್ಚಿನವರು ದೇವರನ್ನು ಸಾಕಾರ ರೂಪದಲ್ಲೇ ಆರಾಧಿಸುತ್ತಿದ್ದಾರೆ ಮತ್ತು ಅದನ್ನು ಒಪ್ಪಿಕೊಂಡಿದ್ದಾರೆ. ಈ ಉದಾಹರಣೆಯನ್ನು ವಿಗ್ರಹಾರಾಧನೆಗೆ ಸಮರ್ಥನೆಯಾಗಿ ಬಳಸಲಾಗುತ್ತದೆ. ಒಂದು ಪ್ರಾಂತದ ರಾಜನೊಬ್ಬ ಸ್ವಾಮಿ ವಿವೇಕಾನಂದರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭ. ಆ ರಾಜನಿಗೆ ವಿಗ್ರಹಾರಾಧನೆಯಲ್ಲಿ/ಮೂರ್ತಿ ಪೂಜೆಯಲ್ಲಿ ನಂಬಿಕೆಯಿರಲಿಲ್ಲ. ವಿಗ್ರಹಪೂಜೆ ಬಗ್ಗೆ ಆತ ನಿಕೃಷ್ಟವಾಗಿ ಮಾತನಾಡಿದುದನ್ನು ಶಾಂತವಾಗಿ ಆಲಿಸಿದ ವಿವೇಕಾನಂದರು ರಾಜನ ಭಾವಚಿತ್ರವೊಂದನ್ನು ತರಿಸಲು ಹೇಳಿದರು. ಭಾವಚಿತ್ರ ತಂದಾಗ ಅಲ್ಲಿದ್ದ ಸಭಾಸದರೊಬ್ಬರನ್ನು ಕರೆದು ಆ ಭಾವಚಿತ್ರದ ಮೇಲೆ ಉಗುಳಲು ಹೇಳಿದರು. ಆ ವ್ಯಕ್ತಿ ನಡುಗಿಹೋದರು -'ರಾಜರ ಭಾವಚಿತ್ರದ ಮೇಲೆ ಉಗುಳುವುದೇ?'. ವಿವೇಕಾನಂದರು ಹೇಳಿದರು -'ಇದು ರಾಜರ ಭಾವಚಿತ್ರವೇ ಹೊರತು ರಾಜರಲ್ಲ; ಉಗುಳಿದರೆ ರಾಜರಿಗೆ ಏನೂ ಆಗುವುದಿಲ್ಲ'. ಅದಕ್ಕೆ ಅವರು 'ಸ್ವಾಮಿ, ಇದು ಭಾವಚಿತ್ರವಿರಬಹುದು. ಆದರೆ ಇದರಲ್ಲಿ ನಾವು ರಾಜರನ್ನು ಕಾಣುತ್ತಿದ್ದೇವೆ. ಇದರ ಮೇಲೆ ಉಗುಳುವುದು ನಮಗೆ ಕಲ್ಪನೆಯಲ್ಲಿಯೂ ಅಸಾಧ್ಯ'. ಆಗ ವಿವೇಕಾನಂದರು ರಾಜರಿಗೆ 'ದೇವರ ವಿಗ್ರಹಗಳು ದೇವರಲ್ಲ. ಅದರೆ ಜನ ಅಲ್ಲಿ ದೇವರನ್ನು ಕಾಣುತ್ತಾರೆ. ಅವುಗಳನ್ನು ಪೂಜಿಸಿ ನೆಮ್ಮದಿ, ಶಾಂತಿ ಕಂಡುಕೊಳ್ಳುತ್ತಾರೆ. ಆದ್ದರಿಂದ ವಿಗ್ರಹಪೂಜೆಯನ್ನು ವಿರೋಧಿಸುವುದು ಸಲ್ಲ' ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಇಲ್ಲೂ ಸಹ ಒಂದು ಸಂದೇಹ ಕಾಡದೇ ಇರದು. ಅದೆಂದರೆ, ರಾಜನನ್ನು ನೋಡಲು ಸಾಧ್ಯವಿದ್ದುದರಿಂದ ರಾಜರ ಭಾವಚಿತ್ರ ತಯಾರಿಸಲು ಸಾಧ್ಯವಿತ್ತು. ಆದರೆ ದೇವರು ಹೀಗೆಯೇ ಇದ್ದನೆಂದು ಹೇಗೆ ಹೇಳುವುದು? ಅವನನ್ನು ಕಂಡಿದ್ದವರು ಯಾರು?

ಆಗಸದ ಬಣ್ಣವದು ತೋರುವಂತಿಹುದೇನು

ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |

ಅರಿತವರು ಯಾರಿಹರು ಗಗನದ ನಿಜಬಣ್ಣ

ದೇವನೆಂತಿಹನೆಂದು ಗೊತ್ತಿಹುದೆ ಮೂಢ ||

-ಕ.ವೆಂ.ನಾಗರಾಜ್. 

[ಮುಂದುವರೆಯುವುದು].

Comments

Submitted by ಗಣೇಶ Tue, 11/18/2014 - 23:21

ಕವಿನಾಗರಾಜರೆ,
>>>ಎರಡನೆಯ ಪರಮಾತ್ಮನಿಲ್ಲ, ಮೂರನೆಯವನಿಲ್ಲ, ನಾಲ್ಕನೆಯವನು ಹೇಳಲ್ಪಡುವುದಿಲ್ಲ, ಐದನೆಯವನಿಲ್ಲ, ಆರನೆಯವನಿಲ್ಲ, ಏಳನೆಯವನು ವರ್ಣಿಸಲ್ಪಡುವುದಿಲ್ಲ, ಎಂಟನೆಯವನಿಲ್ಲ, ಒಂಬತ್ತನೆಯವನಿಲ್ಲ, ಹತ್ತನೆಯವನ ವಿವರಣೆಯೇ ಇಲ್ಲ...............
ಎಲ್ಲಾ ಸರಿ, ದೇವರು ಒಬ್ಬನೇ ಎನ್ನುವುದಕ್ಕೆ ನೀವು ಹೇಳಿದ ಶ್ಲೋಕ ಬಿಟ್ಟು ಬೇರೇನು ಆಧಾರವಿದೆ!?
ಅದ್ಯಾಕೆ ಆತ ನಿರಾಕಾರನಾಗಿಯೇ ಇರುವುದು?-ಇದ್ದರೆ ತಾನೆ ಆಕಾರದ ಯೋಚನೆ. :).
ಕೋಟ್ಯಾಂತರ ಜನಕ್ಕೆ-ಹೋಗಲಿ ನನ್ನ ನಿಮ್ಮಂತಹ ಒಬ್ಬಿಬ್ಬರಿಗಾದರೂ ಕಾಣಸಿಗುವುದಿಲ್ಲ ಯಾಕೆ?:)
ದೇವರು ಇಲ್ಲ ಎಂಬುದೇ ನಿಜ. "ದೇವರು ಒಬ್ಬನೇ, ಒಗ್ಗಟ್ಟಾಗಿರಿ" ಎನ್ನುವುದಕ್ಕಿಂತ ದೇವರಿಲ್ಲ ನಾವೆಲ್ಲಾ ಒಗ್ಗಟ್ಟಾಗಿರೋಣ ಎನ್ನುವುದು ವಾಸಿಯಲ್ವಾ?
ಆತ್ಮಹತ್ಯೆಯ ಯೋಚನೆ ಬಂದಾಗಲೂ ಧ್ಯಾನ ಇತ್ಯಾದಿ ಬೇಕೇ ಇಲ್ಲ..ಬೇರೆ ವಿಷಯದೆಡೆಗೆ ಆಸಕ್ತರಾದಾಗ ಆತ್ಮಹತ್ಯೆ ಯೋಚನೆ ತನ್ನಿಂದ ತಾನೇ ದೂರಾಗುವುದು.
ಎಲ್ಲಾ ಸರಿ....ಈ ನಿರಾಕಾರ ದೇವರ ಬಗ್ಗೆ ಅದ್ಯಾವ ರೀತಿ ಧ್ಯಾನ ಮಾಡುವಿರಿ? ಅದು ದೇವರಿಗೆ ತಲುಪುವುದೆಂದು ತಿಳಿಸಿದವರು ಯಾರು?

Submitted by kavinagaraj Wed, 11/19/2014 - 08:59

In reply to by ಗಣೇಶ

ಮಿತ್ರ ಗಣೇಶರೇ, ದೇವರು ಒಬ್ಬನೇ ಎನ್ನುವುದಕ್ಕೆ ಹಲವಾರು ಆಧಾರಗಳನ್ನು ತಿಳಿದವರು ಪ್ರಸ್ತುತ ಪಡಿಸಿದ್ದಾರೆ. ವಿಸ್ತಾರವಾಗಬಹುದಾದ ದೃಷ್ಟಿಯಿಂದ ನಿಮ್ಮ ಈ ತರ್ಕ/ವಿತರ್ಕಕ್ಕೆ ಹಾಗೂ ದೇವರ ಕುರಿತ "ನನ್ನ ತಿಳುವಳಿಕೆ"ಯ ಮಿತಿಯ ಬಗ್ಗೆ ಪ್ರತ್ಯೇಕ ಲೇಖನವನ್ನು 4ನೆಯ ಕಂತಾಗಿ ಮುಂದೆ ಪ್ರಸ್ತುತಪಡಿಸುವೆ.

Submitted by nageshamysore Wed, 11/19/2014 - 19:19

In reply to by kavinagaraj

ಕವಿಗಳೆ, ದೇವರ ಅಸ್ತಿತ್ವದ ಕುರಿತಾದ ನಿರ್ಣಾಯಕ ಅಂತಿಮ ತೀರ್ಪು ಎಂದಿಗು ಬರುವುದಿಲ್ಲವೆಂದು ಕಾಣುತ್ತದೆ. ಇದೆ ಇಲ್ಲವೆನ್ನುವ ಸಂವಾದವೆ ನಿರಂತರವೇನೊ?

ಗಣೇಶ್ ಜಿ, ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆ ನಾನು ಪರಿಭ್ರಮಣದಲ್ಲಿ ಮಂಡಿಸಿರುವ ಆಸ್ತಿಕರ ಮತ್ತು ನಾಸ್ತಿಕರಿಬ್ಬರ ದೃಷ್ಟಿಕೋನಕ್ಕೂ ಸಮ್ಮತವಾಗುವ ಸಿದ್ದಾಂತಕ್ಕೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ? ಎಂಬ ಕುತೂಹಲ ಮೂಡಿದೆ. :-)

Submitted by kavinagaraj Thu, 11/20/2014 - 14:36

In reply to by nageshamysore

ಅಂತಿಮ ತೀರ್ಪು ಕೊಡುವ ಸಾಮರ್ಥ್ಯ ಹುಲುಮಾನವರಿಂದ ನಿರೀಕ್ಷಿಸಲಾಗದು. ಸ್ವಾನುಭವ, ಆತ್ಮಾವಲೋಕನ ಮಾತ್ರ ಸ್ವಲ್ಪ ಮಾರ್ಗದರ್ಶನ ಮಾಡೀತು! ಗಣೇಶರ ಅನಿಸಿಕೆ, ಪ್ರತಿಕ್ರಿಯೆಗಳು ಚಿಂತನೆಗೆ ಪ್ರೇರಿಸುವಂತಿರುತ್ತವೆ. ಕೆಣಕುವುದರಲ್ಲೂ ಅವರು ನಿಸ್ಸೀಮರು. ಆದರೆ ಅದು ಸಹನೀಯವಾಗಿರುತ್ತದೆ. ನಾಗೇಶ ಮತ್ತು ಗಣೇಶರಿಗೆ ವಂದನೆಗಳು.

Submitted by ಗಣೇಶ Thu, 11/20/2014 - 23:53

In reply to by nageshamysore

ಕವಿನಾಗರಾಜರೆ,
ತರ್ಕ ವಿತರ್ಕ ಎಂದು ನೀವು ಸರಣಿ ಪ್ರಾರಂಭಿಸಿದಾಗ ನನ್ನದೂ ಕುತರ್ಕ ಸೇರಿಸಿದೆ. :) ದೇವರ ಬಗ್ಗೆ ಹುಡುಕುತ್ತಾ ಹೋದ ಹಾಗೇ ದೇವರಿಲ್ಲ ಎಂಬುದು ಅರಿವಾಗುವುದು. ಅಷ್ಟು ವರ್ಷ ಅಧ್ಯಯನ ವ್ಯರ್ಥವಾಗುವುದಲ್ಲಾ...ಇನ್ನೇನು ಮಾಡುವುದು? -ಸುಲಭದ ದಾರಿ "ನಾನೇ ದೇವರು" ಎಂದು ಆಶ್ರಮ ಕಟ್ಟಿ ಒಂದಷ್ಟು ಭಕ್ತರಿಗೆ ಉಪದೇಶಮಾಡಿ, ಅವರನ್ನೂ ದೇವರನ್ನು ಹುಡುಕಲು ಪ್ರೇರೇಪಿಸುವುದು..(ನಾನು ಮಂಗ ಆದೇ, ಅವರೂ ಆಗಲಿ ಎನ್ನುವಂತೆ)
"ಅಲ್ಲಾ...ಒಂದೇ ದೇವರು" ಅಂತ ಅದು ಹೇಗೆ ನಿರ್ಧಾರ ಮಾಡುವಿರಿ ಅದೇ ಅರ್ಥವಾಗುತ್ತಿಲ್ಲ. ಯಾವುದಕ್ಕೂ ೩-೪ ನೇ ಕಂತಿಗೆ ಕಾಯುವೆ. :)
ನಾಗೇಶರೆ,
ಪಾರ್ಥರು ಸಂಕ್ಷಿಪ್ತವಾಗಿ ಹೇಳಿದಾಗಲೇ ನಿಮ್ಮ "ಪರಿಭ್ರಮಣ"ದ ಕೊನೆಯ ಎರಡು ಕಂತು ಓದೇ ಬಿಡೋಣ ಅಂತಿದ್ದೆ. ಆದರೆ ತಡವಾದರೂ ಪರವಾಗಿಲ್ಲ ಪ್ರತೀ ಕಂತನ್ನು ಓದಬೇಕೆಂಬ ಹಠದಿಂದ..ಈಗ ೧೭ನೇ ಕಂತಿನ ವರೆಗೆ ತಲುಪಿರುವೆ. ಬಹಳ ಚೆನ್ನಾಗಿದೆ. ದೇವರ ಬಗ್ಗೆ ನೀವು, ಕವಿನಾಗರಾಜರು, ಶ್ರೀಧರ್‌ಜಿ ಎಲ್ಲಾ ತುಂಬಾ ತಿಳಿದವರು. ನನ್ನದೇನಿದ್ದರೂ ಮೊಂಡುವಾದ...ಸುಮ್ಮನೇ..:)

Submitted by nageshamysore Fri, 11/21/2014 - 04:39

In reply to by ಗಣೇಶ

ಗಣೇಶ್ ಜಿ ನಮಸ್ಕಾರ. ಆ ವಿಷಯದಲ್ಲಿ, ಜ್ಞಾನ, ಪಾಂಡಿತ್ಯದಲ್ಲಿ ಕವಿಗಳು, ಶ್ರೀಧರರು ಇಬ್ಬರು ಗ್ರೇಟು ಎಂದು ನಾನು ಒಪ್ಪಿಕೊಳ್ಳುತ್ತೇನೆ. ನನ್ನದೇನಿದ್ದರು ಅವರಂತವರಿಂದ ಪಡೆದ ಬಾಡಿಗೆ ಜ್ಞಾನ. ಅದಕ್ಕೆ ನನ್ನ ಸಿದ್ದಾಂತ, ತತ್ವ, ವಾದಗಳನ್ನು ಸಮೀಕರಿಸಿ ಸ್ವಲ್ಪ ಸಮಗ್ರವಾಗಿ ನೋಡುವುದಷ್ಟೆ ನಾನು ಮಾಡುವ ಕೆಲಸ. ಆದರೆ ನಿಮ್ಮದು ಆ ತುದಿಯಿಂದ ಈ ತುದಿಯವರೆಗೆ ಎಲ್ಲದರ ಕುರಿತು ತುಲನೆ ಮಾಡುವ, ಆಳಕ್ಕಿಳಿದು ಎಲ್ಲಾ ವಿವರ ನೋಡುವ ಅಪಾರ ಕುತೂಹಲದ ಗುಣ. ಹೀಗೆ ಎಲ್ಲರದು ವಿಶಿಷ್ಟವಾದ ಸಾಮರ್ಥ್ಯ. ಅವೆಲ್ಲ ಒಟ್ಟಾದಾಗ ರುಚಿಯಾದ ಸಾಮರಸ್ಯ :-)

ಪರಿಭ್ರಮಣ ಕುರಿತು: ವಾಹ್! ಗಣೇಶ್ ಜೀ, ನಾನೆಲ್ಲೊ ಇನ್ನು ಓದಲು ಬಿಡುವಾಗಿಲ್ಲ ಅಂದುಕೊಂಡಿದ್ದೆ, ಆದರೆ ನೀವಾಗಲೆ 17ಕ್ಕೆ ತಲುಪಿಬಿಟ್ಟಿದ್ದೀರಿ - ಕಂತುಗಳ ಲೆಕ್ಕದಲ್ಲಿ 25% ದಾಟಿಬಿಟ್ಟಿದ್ದೀರಾ! ಅಂದ ಹಾಗೆ ದೇವರ ಅಸ್ತಿತ್ವದ ತರ್ಕ ಜಿಜ್ಞಾಸೆಯ ಹಂತ ಮುಟ್ಟಲು ಇನ್ನೊಂದು 25% ದಾಟಬೇಕು (33-34 ರ ಆಸುಪಾಸು). ಅಲ್ಲಿಂದ ಆರಂಭವಾಗುವ ಆಶ್ರಮವಾಸದ ಕಂತುಗಳೆಲ್ಲ ಈ ತರ್ಕ, ವಿತರ್ಕದ ಸುತ್ತಲೆ - ಬಹುತೇಕ ಕೊನೆಯ ಕಂತಿನವರೆಗೆ. ನಿಮ್ಮ ಬಿಜಿ ವ್ಯವಹಾರದಲ್ಲು ಅದನ್ನು ಓದಲು ಸಮಯ ಮಾಡಿಕೊಳ್ಳುತ್ತಿದ್ದಿರ ಅದಕ್ಕೆ ಧನ್ಯವಾದಗಳು...!

Submitted by kavinagaraj Fri, 11/21/2014 - 14:44

In reply to by nageshamysore

ನಾಗೇಶರೇ, ಎಲ್ಲರ ಪಾಂಡಿತ್ಯವೂ ಬಾಡಿಗೆಯದೇ. ಸ್ವಂತದ್ದು ಅನ್ನವುದು ಭ್ರಮೆ. ಗಣೇಶರ ವಿಮರ್ಶಾತ್ಮಕ, ಚಿಕಿತ್ಸಾತ್ಮಕ ನೋಟ ನನಗೆ ಇಷ್ಟವಾಗುತ್ತದೆ.

Submitted by kavinagaraj Fri, 11/21/2014 - 14:36

In reply to by ಗಣೇಶ

ಗಣೇಶರೇ, ನಿಮ್ಮ ವಾದವನ್ನು ಮೊಂಡು ಎಂದಾಗಲೀ, ಕುತರ್ಕ ಎಂದಾಗಲೀ ತಿಳಿಯಲಾಗದು. ತಿಳಿಯುತ್ತಾ ಹೋದಂತೆ, ಅಧ್ಯಯನ ಮಾಡುತ್ತಾ ಹೋದಂತೆ ನಾನು ತಿಳಿದವನಲ್ಲ ಎಂಬ ಅರಿವು ಮೂಡುತ್ತಾ ಹೋಗುತ್ತದೆ. ಆದರೆ, ಇಷ್ಟಂತೂ ನಿಜ, ನಾನು ಯಾವುದೇ ಸಿದ್ಧಾಂತವನ್ನಾಗಲೀ, ವಾದವನ್ನಾಗಲೀ ಮಂಡಿಸುತ್ತಿಲ್ಲ. ನನ್ನ ವಾದವನ್ನು ಇತರರು ಒಪ್ಪಲೇಬೇಕೆಂಬ ಹಠವೂ ಇಲ್ಲ. ನನಗೆ ತಿಳಿದಿದ್ದನ್ನು ಹಂಚಿಕೊಳ್ಳುವ ಕೆಲಸ ಮಾತ್ರ ಮಾಡುತ್ತಿರುವೆ. ತಪ್ಪಿದ್ದರೆ ಗೊತ್ತಿದ್ದವರು ತಿದ್ದುತ್ತಾರೆ, ತಿದ್ದಿಕೊಳ್ಳುತ್ತೇನೆ. ಮೊದಲು ಬರೆದದ್ದು ಮೂರೇ ಕಂತುಗಳು. ಈಗ ನಾಲ್ಕನೆಯ ಕಂತನ್ನು ಮಂಡಿಸುವೆ. ಗಣೇಶ ಗುರೂಜಿಯ ಮಾರ್ಗದರ್ಶನ ಎಂದಿನಂತೆ ಇರಲಿ. ನೀವು ಆಶ್ರಮ ಕಟ್ಟಿದರೆ ಖಂಡಿತಾ ಅಲ್ಲಿಗೆ ಭೇಟಿ ಕೊಡುತ್ತೇನೆ. ರಾಮ್ ಪಾಲ್ ಅಂತಹ ಗುರು ಮಾತ್ರ ಆಗದಿರಿ.

Submitted by swara kamath Thu, 11/20/2014 - 14:37

ಕವಿನಾಗರಾಜಿಗೆ ನಮಸ್ಕಾರ,
ದೇವರನ್ನು ಸಾಕಾರರೂಪದಿಂದ ಧ್ಯಾನಿಸುವುದು ತುಂಬಾ ಸುಲಭದ ವಿಧಾನ ಮತ್ತು ಆ ನಿಟ್ಟಿನಲ್ಲಿ ಮನಸ್ಸನ್ನು ಕ್ಷಣಿಕಕಾಲ ಒಂದಡೆ ಕೇಂದ್ರಿಕರಿಸಿ ಆತ್ಮವಿಶ್ವಾಸ ಗಳಿಸಲು ಸಹಾಯವಾಗುವುದು ನಿಜ.ಮಹಾನ್ ಪುರುಷರುಗಳಿಗೆ ಮಾತ್ರ ದೇವರನ್ನು ನಿರಾಕಾರ ರೂಪದಲ್ಲಿ ಧ್ಯಾನಿಸಲು ಶಕ್ತರಾಗಿರುತ್ತಾರೆ ಎಂಬುವುದು ನಮಗೆ ಗೊತ್ತಿರುವ ವಿಚಾರ. ಚನ್ನಾಗಿ ಬರುತ್ತಿದೆ ತಮ್ಮ ಈ ಲೇಖನ ಸರಣಿ.................... ರಮೇಶ ಕಾಮತ್

Submitted by kavinagaraj Thu, 11/20/2014 - 14:46

In reply to by swara kamath

ಮನೋಶಕ್ತಿಯ ಮೇಲೆ ಮನಸ್ಸಿನ ನಿಯಂತ್ರಣ ಅವಲಂಬಿತವೆಂಬ ನಿಮ್ಮ ಅಭಿಪ್ರಾಯ ಸರಿಯಾಗಿದೆ. ಧನ್ಯವಾದ, ರಮೇಶಕಾಮತರೇ.

Submitted by H A Patil Thu, 11/20/2014 - 19:32

ಕವಿ ನಾಗರಾಜ ರವರಿಗೆ ವಂದನೆಗಳು
ದೇವರ ಅಸ್ತಿತ್ವ ಕುರಿತು ತಾವು ಮಂಡಿಸುತ್ತಿರುವ ವಿಚಾರಧಾರೆ ಚೆನ್ನಾಗಿ ಮೂಡಿ ಬಂದಿದೆ.ದೇವರು ಮನುಷ್ಯ ಸೃಷ್ಟಿಯಾದರೂ ಈ ಜಗತ್ತಿನ ಸೃಷ್ಟಿಗೆ ಕಾರಣವಾದ ಅವ್ಯಕ್ತ ಶಕ್ತಿಗೆ ದೇವರು ಎನ್ನ ಬಹುದು. ಮನುಷ್ಯ ತೋಂದರೆಗಳಿಗೆ ಸಿಲುಕಿದಾಗ ಬಹುತೇಕ ದೇವರು ಎನ್ನುವ ಆ ಅವ್ಯಕ್ತ ಶಕ್ತಿಗೆ ಮೊರೆ ಹೋಗುತ್ತಾನೆ.ದೇವರ ಕುರಿತು ಚೆನ್ನಾಗಿ ಬರೆದಿದ್ದೀರಿ ಧನ್ಯವಾದಗಳು.

Submitted by kavinagaraj Thu, 11/20/2014 - 20:21

In reply to by H A Patil

ದೇವರು ಇದ್ದಾನೆ ಅನ್ನಲಿ, ಇಲ್ಲ ಅನ್ನಲಿ, ನೀವು ಹೇಳಿದಂತೆ ಆ ಅವ್ಯಕ್ತ ಶಕ್ತಿಗೆ ಏನೂ ಬಾಧಕವಿಲ್ಲ. ಧನ್ಯವಾದಗಳು, ಪಾಟೀಲರೇ.