ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ

ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ

ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ...

ಅವರು ಜಿಲ್ಲಾ ಪಂಚಾಯ್ತಿ ಸದಸ್ಯ.ಹೆಸರು ನಾರಾಯಣಪ್ಪ.ತನ್ನೂರಿಗೆ ಯಜಮಾನನ ಸ್ಥಾನದಲ್ಲಿದ್ದವರು.ಮೂರು ವರ್ಷದ ಹಿಂದೆ ತನಗಿದ್ದ ಒಬ್ಬನೇ ಮಗನಿಗೆ ಪಕ್ಕದ ಊರಿನ ಹೆಣ್ಣನ್ನು ತಂದು ಮದುವೆ ಮಾಡಿಸಿದ್ದರು.ಅವಳು ವೃತ್ತಿಯಲ್ಲಿ ಶಿಕ್ಷಕಿ.ಗಂಡನ ಮನೆ ಚೆನ್ನಾಗಿದ್ದರು ಗಂಡನ ಊರಿನ ರಸ್ತೆ ಚೆನ್ನಾಗಿರಲಿಲ್ಲ.ಬಸ್ ಸಂಪರ್ಕವು ನಿಲುಗಡೆಗೊಂಡಿತ್ತು.ಹೀಗಾಗಿ ಅವಳು ದಿನಾ ಆಟೋದಲ್ಲಿ ಶಾಲಾ ಕರ್ತವ್ಯಕ್ಕೆ ತೆರಳುತ್ತಿದ್ದಳು.ನಾರಾಯಣಪ್ಪ ತಾನು ತಾತನಾಗುವ ಕನಸು ಕಾಣುತ್ತಿದ್ದ.ಅವನ ಸೊಸೆ ಎರಡನೆಯ ಬಾರಿ ಗರ್ಭ ಧರಿಸಿದ್ದಳು.ಕಳೆದ ಸಲದ ಹಾಗೆ ಸೊಸೆಗೆ ಗರ್ಭಪಾತವಾಗಿ ಬಿಟ್ಟು ವಂಶೋಧ್ಧಾರಕನನ್ನು ನೋಡುವ ಭಾಗ್ಯ ಎಲ್ಲಿ ಮತ್ತೆ ಕೈ ತಪ್ಪಿ ಹೋಗುತ್ತದೆಯೋ ಅನ್ನೋ ಭಯದಿಂದ ತನ್ನ ಸೊಸೆಯನ್ನು 5 ತಿಂಗಳ ಗರ್ಭಿಣಿಯಾಗಿರುವಾಗಲೆ ವೈದ್ಯಕೀಯ ರಜೆ ಹಾಕಿಸಿ ಕೆಲಸ ಬಿಡಿಸಿದ್ದರು.ತವರು ಮನೆಗೆ ಕಳುಹಿಸುವ ಶಾಸ್ತ್ರಕ್ಕೂ ಒಪ್ಪಿಕೊಂಡಿರಲಿಲ್ಲ.ವಂಶೋಧ್ಧಾರಕನ ಆಗಮನದ ನಿರೀಕ್ಷೆಯಲ್ಲಿದ್ದ ನಾರಾಯಣಪ್ಪನಿಗೆ ಸೊಸೆಗೆ ಪ್ರಸವ ವೇದನೆ ಬಂದಿರುವ ಸುದ್ದಿ ಸಿಕ್ಕಿತು.ನಾರಾಯಣಪ್ಪ ಆಸ್ಪತ್ರೆಯ ಹೆರಿಗೆ ಕೋಣೆಯ ಬಾಗಿಲಿಗೆ ಕಿವಿಯಾಗಿದ್ದರು.ತನ್ನ ಮೊಮ್ಮಗುವಿನ ಅಳುವಿನ ದನಿ ಕೇಳಲು ಕಾತುರದಿಂದ ಕಾಯುತ್ತಿದ್ದ.ಅಷ್ಟೊತ್ತಿಗೆ ವೈದ್ಯರು ಹೆರಿಗೆ ಕೋಣೆಯಿಂದ ಹೊರಬಂದರು.ಅವರ ಮೊಗದಲ್ಲಿ ಸೋಲಿನ ಭಾವವಿತ್ತು.ಮಗು ತಾಯಿಯ ಗರ್ಭದಲ್ಲೇ ಸತ್ತು ಹೋಗಿತ್ತು.'ನಿಮಗೆ ಕಳೆದ ಬಾರಿ ಗರ್ಭಪಾತವಾದಾಗಲೆ ಹೇಳಿದ್ದೆ,ನಿಮ್ಮ ಸೊಸೆಯನ್ನು ಇಂಚಿಗೊಂದರಂತೆ ಹೊಂಡವಿರುವ ನಿಮ್ಮೂರಿನ ರಸ್ತೆಯಲ್ಲಿ ಓಡಾಡಲು ಬಿಡಬೇಡಿ ಅಂತ. ಆದರೆ ನೀವು ನನ್ನ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ' ಎಂದು ತಮ್ಮ ಅಸಹನೆಯನ್ನು ಹೊರಹಾಕಿದರು.ಈ ಮಾತು ಕೇಳುತ್ತಿದ್ದಂತೆ ನಾರಾಯಣಪ್ಪ ನೇರವಾಗಿ ಹಾಸಿಗೆ ಮೇಲೆ ಮಲಗಿದ್ದ ಸೊಸೆಯ ಬಳಿ ಹೋದರು.ಅವಳಿಗೆ ಇನ್ನೂ ಎಚ್ಚರವಾಗಿರಲಿಲ್ಲ.ಸೊಸೆಯ ಕಾಲ ಬಳಿ ಕೂತವರೇ ಗಳಗಳನೇ ಅತ್ತರು.ನಿನ್ನ ಮಗುವನ್ನು ಕೊಂದ ಪಾಪಿ ನಾನು.ಗುತ್ತಿಗೆಯವನ ಮಾತು ಕೇಳಿ ನಕಲಿ ಬಿಲ್ ಸೃಷ್ಟಿಮಾಡದೆ ರಸ್ತೆ ದುರಸ್ತಿಗೆ ಬಂದ ಹಣವನ್ನು ಪ್ರಾಮಾಣಿಕವಾಗಿ ಬಳಸಿಕೊಂಡಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ,ಹಣದ ಆಸೆಗೆ ಬಲಿಯಾದೆ,ನನ್ನ ಭ್ರಷ್ಟಾಚಾರ ನನ್ನ ಮೊಮ್ಮಗನನ್ನು ಕೊಂದು ತಿಂದಿತು ಎಂದು ಪಶ್ಚಾತ್ತಾಪ ಪಟ್ಟರು.

(ಇದೊಂದು ನೈಜ ಘಟನೆ.ಕಥೆಯ ರೂಪ ಕೊಟ್ಟು ನಿಮ್ಮ ಮುಂದಿಟ್ಟಿದ್ದೇನೆ ಅಷ್ಟೇ..ದಿನಂಪ್ರತಿ ಓಡಾಡಿಕೊಂಡು ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರು ರಸ್ತೆ ಸರಿಯಿಲ್ಲದೆ ಇಂದಿಗೂ ಗರ್ಭಪಾತದಂತಹ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ..)

-@ಯೆಸ್ಕೆ

Comments

Submitted by swara kamath Tue, 11/25/2014 - 13:01

ಬ್ರಷ್ಟಾಚಾರಕ್ಕೆ ತಕ್ಕ ಒಂದು ನೀತಿ ಪಾಠ.ಮಾಡಿದ್ದುಣ್ಣೋ ಮಹರಾಯ ಎಂಬಂತೆ.!
ಸುನಿಲರೆ ಇಂತಹ ಘಟನೆಗಳನ್ನು ಬರೆಯುತ್ತಿರಿ.