"ತ್ರಿಶಂಕು ಸ್ಥಿತಿ"

"ತ್ರಿಶಂಕು ಸ್ಥಿತಿ"

 

ರಾಮಾಯಣ ಮಹಾಭಾರತಗಳು

ಅದ್ಭುತ ‘ಮಹಾ ಕಾವ್ಯಗಳು’

ರಾಮಾಯಣ ಸೋದರ ಪ್ರೀತಿ ಬಾಂಧವ್ಯಗಳ

ಪ್ರತೀಕವಾದರೆ ಮಹಾಭಾರತ

ಈರ್ಷೆ ದ್ವೇಷಗಳ ನಿಲ್ಲದ ಹೋರಾಟದ ಕಥನ

 

ಎಲ್ಲ ಸೋದರರ ಬೆಂಬಲವಿದ್ದೂ

ಅಧಿಕಾರದ ಗುದ್ದುಗೆಗೆ ಆಶೆ ಪಡದ ರಾಮ

ಒಂದೆಡೆಗಾದರೆ ಮತ್ತೊಂದೆಡೆ

ಅಧಿಕಾರದದ ಗದ್ದುಗೆಗೆ ದಾಯಾದಿಗಳ ಕಲಹ

ರಾಮಾಯಣದ ಮತಿತಾರ್ಥ

ಮಾನವ ದೇವತ್ವಕ್ಕೇರುವ ಆಶಯದ್ದಾದರೆ

ಮಹಾಭಾರತ ಮಾನವ ರಾಕ್ಷಸತ್ವದ

ಪ್ರಪಾತಕ್ಕಿಳಿಯುವುದರ ಒಂದು ಸೋದಾಹರಣೆ

 

ಕೌಸಲ್ಯಾತನಯ ರಾಮನ ಬೆಂಬಲಕ್ಕೆ ನಿಲ್ಲುವ

ಸುಮಿತ್ರಾ ಕೈಕೇಯಿ ತನಯರೆಲ್ಲಿ ?

ಕುಂತಿ ಮಾದ್ರಿಯರ ಪುತ್ರರು ಧರ್ಮನ

ಬೆಂಬಲಕ್ಕೆ ನಿಂತರೂ

ಅದನ್ನು ಆಗಗೊಡದಿರಲು ಶತಾಯ ಗತಾಯ

ಹೋರಾಡುವ ಧೃತರಾಷ್ಟ್ರ ಗಾಂಧಾರಿ ತನಯರು

ಅವರ ಬೆಂಬಲಕ್ಕೆ ಹಿತ ಶತ್ರು ಸೋದರಮಾವ ಶಕುನಿ

ರಾಮ ಇಲ್ಲಿ ಸುಖಿ

ಆತನಿಗೆ ದಾಯಾದಿ ಸೋದರರಿರಲಿಲ್ಲ

ಶಕುನಿಯಂತಹ ಸೋದರಮಾವನಿರಲಿಲ್ಲ  ಆದರೆ !

ಧರ್ಮಜನದು ನಾಯಿ ಪಾಡು ಆತನ ಬೆಂಬಲಕೂ

ಸೋದರಮಾವ ವಿಷ್ಣುರೂಪಿ ಶ್ರೀಕೃಷ್ಣನಿದ್ದ ಆದರೂ

ಜೀವನದುದ್ದಕೂ ಹೋರಾಟದ ಬದುಕೇ ಆತನದು

 

ಈ ಮಹಾ ಕಾವ್ಯಗಳು ಕ್ಲೀಷ್ಟ ಮನುಜ ಸ್ವಭಾವಗಳ

ನಿರೂಪಣೆಯ ನಮ್ಮ ಜೀವನ ವೈರುಧ್ಯದ

ಎರಡು ಭಿನ್ನ ಭಿನ್ನ ಚರಮ ಬಿಂದುಗಳು

ಜಗದ ಮೂಲ ಆಶಯ ಎಲ್ಲರೂ ರಾಮನಂತಾಗುವುದು

ಆದರೆ ಅದು ನಿಂತಿರುವುದು ಕೌರವರ ಮನಸ್ಥಿತಿಯಲ್ಲಿ

ಇವೆರಡು ಅತಿಗಳ ಮಧ್ಯೆ

ಅತ್ತ ರಾಮನೂ ಆಗದ ಇತ್ತ ಕೌರವರೂ ಆಗದ

ಅಂತರ್ಪಿಶಾಚಿ ಧರ್ಮಜನ ತ್ರಿಶಂಕು ಸ್ಥಿತಿ ನಮ್ಮೆಲ್ಲರದು

                       

 

 

 

 

 

Rating
No votes yet

Comments

Submitted by ಗಣೇಶ Fri, 11/21/2014 - 00:05

ಪಾಟೀಲರೆ, ಹೋಲಿಕೆ ಕವನ ಬಹಳ ಚೆನ್ನಾಗಿದೆ. ಸಿನೆಮಾದ ಎಂಡ್‌ನ ಹಾಗೇ ಕ್ಲೈಮಾಕ್ಸ್ ಸೂಪರ್. -ಅಂತರ್ಪಿಶಾಚಿ ಧರ್ಮಜನ ತ್ರಿಶಂಕು ಸ್ಥಿತಿ ನಮ್ಮೆಲ್ಲರದು :(

Submitted by nageshamysore Fri, 11/21/2014 - 04:20

ಪಾಟೀಲರೆ ನಮಸ್ಕಾರ. ಸಾಚಾತನ ಮತ್ತು ನೀಚತನಗಳ ನಡುವಿನ ದ್ವಂದ್ವ ಪ್ರತಿ ಮನಗಳ ತಿಕ್ಕಾಟ. ಅದರ ಗುಣರೂಪಕಗಳನ್ನು ರಾಮಯಣ-ಮಹಾಭಾರತದಂತಹ ಉನ್ನತ ಸ್ತರದ ದೃಷ್ಟಿಯಿಂದಲು, ಅದರ ಪಾತ್ರಗಳ ಸಾಮಾನ್ಯ ಸ್ತರದಿಂದಲೂ ತುಲನೆ ಮಾಡಿದ ರೀತಿ ಕವನದಲ್ಲಿ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಮೂಡಿದೆ. ಧನ್ಯವಾದಗಳು.

Submitted by H A Patil Sun, 11/23/2014 - 18:54

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಕವನವನ್ನು ತಾವು ಗ್ರಹಿಸಿದ ರೀತಿ ಮತ್ತು ಅದನ್ನು ಪದಗಳ ರೂಪದಲ್ಲಿ ಹಿಡಿದಿಟ್ಟ ರೀತಿ ಚೆನ್ನಾಗಿದೆ ಮೆಚ್ಚುಗೆಗೆ ದನ್ಯವಾದಗಳು.

Submitted by kavinagaraj Fri, 11/21/2014 - 15:24

ಉತ್ತಮ ವಿಚಾರ. ನಮ್ಮದು ತ್ರಿಶಂಕು ಸ್ಥಿತಿ ಏಕೆಂದರೆ ರಾಮರೂ ನಾವೇ, ರಾವಣರೂ ನಾವೇ ಆಗಿರುವುದು!

Submitted by H A Patil Sun, 11/23/2014 - 18:47

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು ತಮ್ಮಅನಿಸಿಕೆ ಸರಿ ಮನುಷ್ಯ ಜೀವಿ ಒಳಿತು ಮತ್ತು ಕೆಡಕುಗಳ ಗುಣ ಸ್ವಭಾವದ ಒಂದು ಸಂಕೀರ್ಣರೂಪ, ಮನುಷ್ಯನಾಗುವುದು ಇಲ್ಲ ರಾಕ್ಷಸನಾಗುವುದು ಅತ ಬೆಳೆಯುವ ಮನೆ ಹಾಗೂ ಸಾಮಾಜಿಕ ಜೀವನಗಳು ಕಾರಣವಾಗುತ್ತವೆ ಇಂತಹ ಪರಿಸ್ತಿತಿ ಇರುವಾಗ ರಾವಣರಾಗುವುದೆ ಜಾಸ್ತಿ. ಹಳೆಯ ಗುಣ ಮೌಲ್ಯಗಳೆಲ್ಲವೂ ಇಲ್ಲವಾಗಿರುವುದು ಇಂದಿನ ಸಾಮಾಜಿಕ ದುಸ್ತಿತಿಗೆ ಕಾರಣ ಕವನದ ಮೆಚ್ಚುಗೆಗೆ ಧನ್ಯವಾದಗಳು.

Submitted by swara kamath Sun, 11/23/2014 - 14:48

ಈ ಕಲಿಯುಗ ಈರ್ಷೆ ದ್ವೇಷಗಳಮೇಲೆಯೆ ನಿಂತಿರುವಾಗ ಈ ಧರೆಯಲ್ಲಿ ರಾಮ. ಕೃಷ್ಣ..ಧರ್ಮಜರ ಆದರ್ಶಗಳಿಗೆ ಬೆಲೆ ಇಲ್ಲದೆ ಸದಾ ಅತ್ರಪ್ತ ಮನಸ್ಸಿನಿಂದ ತೊಳಲಾಡುವ ಮಾನವನು ತ್ರಿಶಂಕು ಸ್ಥಿತಿಯಲ್ಲೇ ಇರುವುದು ಸತ್ಯ.
ಒಳ್ಳೆಯ ಕವನ ಪಾಟೀಲರೆ.......ನಮಸ್ಕಾರ

Submitted by H A Patil Sun, 11/23/2014 - 19:18

In reply to by swara kamath

ರಮೆಶ ಕಾಮತರಿಗೆ ವಂದನೆಗಳು
ತಮ್ಮ ಅನಿಸಿಕೆ ಸರಿಯಿದೆ, ಮನುಷ್ಯನ ವ್ಯಕ್ತಿತ್ವ ಮತ್ತು ಗುಣ ಸ್ವಭಾವಗಳು ಬೆಳೆಯ ಬೇಕಾದುದು ಕುಟುಂಬ ಮತ್ತು ಸಮಾಜದಲ್ಲಿ ವರ್ತಮಾನದ ಧಾವಂತದ ಜೀವನ ನೈತಿಕ ಮೌಲ್ಯಗಳಿಗೆ ನಾವು ನೀಡಿದ ತಿಲಾಂಜಲಿ ಇಂದು ವ್ಯಕ್ತಿ ಸಮಾಜದ ಅದಃಪತನಕ್ಕೆ ಕಾರಣಗಳು ಎಂದೆನಿಸುತ್ತಿದೆ. ಹೀಗಾಗಿ ರಾಮನನ್ನು ಬದಿಗಿಟ್ಟು ರಾವಣನನ್ನು ನಾವು ಅಪ್ಪಿಕೊಳ್ಳುತ್ತಿರುವುದುಏ, ಅ ಪಾಠ ಮನೆಯಿಂದಲೇ ಅಗಬೇಕು ಅದು ಇಂದಿನ ಅಗತ್ಯ ಕವನದ ಮೆಚ್ಚುಗೆಗೆ ಧನ್ಯವಾದಗಳು.

Submitted by partha1059 Mon, 11/24/2014 - 17:15

ರಾಮಾಯಣ ಆದರ್ಶಕ್ಕೆ ಹೆಸರಾದ ಕಾವ್ಯ, ತಂದೆಯ ಮಾತನ್ನು ನಡೆಸುವ ಮಗ, ಗಂಡನನ್ನು ಅನುಸರಿಸಿದ ಪತ್ನಿ, ಅಣ್ಣನ ಸೇವೆಗೆ ಕಾಡಿಗೆ ಬಂದ ಲಕ್ಷ್ಮಣ, ರಾಜ್ಯವನ್ನು ಒಲ್ಲದೆ ಅಣ್ಣನ ಪಾದರಕ್ಷೆಯನ್ನು ಮುಂದೆ ಇಟ್ಟು ರಾಜ್ಯವಾಳಿದ ತಮ್ಮ, ಪ್ರಭುವಿಗಾಗಿ ಹೋರಾಡಿದ ಕಪಿಸೈನ್ಯೆ, ಹನುಮ ಹೀಗೆ ಸಾಗುತ್ತದೆ,
ಮಹಾಭಾರತವಾದರೋ ತದ್ವಿರುದ್ದ
ಕತ್ತಿ ಹಿಡಿದು ನಿಂತ ಅಣ್ಣ ತಮ್ಮಂದಿರು, ತಮ್ಮನ್ನ ಮಕ್ಕಳನ್ನು ಕಾಡಿಗೆ ಅಟ್ಟಲು ಸಹಕರಿಸುವ ದೃತರಾಷ್ಟ್ರ, ಸೋದರಳಿಯರನ್ನು ಮಟ್ಟಹಾಕಲು ಕಾದಿರುವ ಶಕುನಿ, ಮಗನ ಪ್ರಾಣಹೋಗುವಾಗಲು ಮೌನಧರಿಸುವ ಕುಂತಿ, ಮುಳ್ಳಿಗೆ ಮುಳ್ಳೆ ಪರಿಹಾರವೆನ್ನುವ ಕೃಷ್ಣ ಹೀಗೆ ಸಾಗುತ್ತದೆ ಮಹಾಭಾರತ
ಎರಡು ಮಹಾಕಾವ್ಯಗಳು
ಎರಡರಲ್ಲು ಸಹ ದುಃಖ ಯುದ್ದ ಸ್ರೀಶೋಷಣೆ ಇಂತಹುದೆಲ್ಲ ತಪ್ಪಲೇ ಇಲ್ಲ
-ಪಾರ್ಥಸಾರಥಿ
(ಮೊದಲೆ ಪ್ರತಿಕ್ರಿಯೆ ಹಾಕಲು ನೋಡಿದೆ, ಮನೆಯಲ್ಲಿ ಕಂಪ್ಯ್ಯ್ಟಟರ್ ನ ಹಾರ್ಡ್ ಡಿಸ್ಕ್ ತೆಗೆದುಕೊಂಡುಹೋಗಿರುವಾಗ ವಾಪಸ್ಸು ಬರುತ್ತಲೇ ಇಲ್ಲ, ಇನ್ನು ಮೊಬೈಲ್ ನಲ್ಲಿ ತುಂಬಾ ಟೈಪ್ ಮಾಡಲು ಆಗಲ್ಲ. ಅಲ್ಲದೆ ಮೊಬೈಲಿನಿಂದ ಸಂಪದದಲ್ಲಿ ಟೈಪ್ ಮಾಡಲು ನನಗೆ ಗೊತ್ತಾಗುತ್ತಿಲ್ಲ
ಇದು ಬೇರೆ ಕಂಪ್ಯೂಟರಿನಿಂದ ಟೈಪ್ ಮಾಡಿರುವುದು

Submitted by H A Patil Fri, 11/28/2014 - 19:50

In reply to by partha1059

ಪಾರ್ಥಸಾರಥಿಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಇಂದು ಓದಿದೆ, ಪ್ರತಿತಿಕ್ರಿಯಿಸಲು ಬಹಳ ಶ್ರಮ ವಹಿಸಿದ್ದೀರಿ ಕವನದ ಮೆಚ್ಚುಗೆಗೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.