ಕನಸು
ಕನಸು
ನೆರಳು ಬೆನ್ನತ್ತುವದ ನಿಲ್ಲಬಹುದೇನೋ
ಆದರೆ ಕನಸುಗಳು ಬೆನ್ನತ್ತುವುದ ನಿಲ್ಲಲಾರವು
ನೆರಳೂ ಕೂಡ ಕದ ತಟ್ಟಿ ಒಳ ಬರಬಹುದೇನೋ
ಕನಸುಗಳಿಗೆ ಮನಸಿನ ಕದವೇ ಗೊತ್ತಿಲ್ಲ
ಎಲ್ಲ ವಾಸ್ತವ ಒಮ್ಮೆಲೇ ಮರೆಸಿ, ಸದಾ
ಬಂದು ನನ್ನ ಹೊತ್ತೊಯ್ಯುವ ನಿನಗೆ
ನನ್ನ ಮೈ ಮನಗಳಿಗೆ ರಸದೌತಣ
ಉಣಬಡಿಸದೆ ಮನದ ತಣಿವಾರದೇ
ನೀ ನಿತ್ಯವೂ ತೋರುವ ಲೋಕದ
ಸೌಂದರ್ಯವು ನಿನ್ನ ಕೈಗಳ ಸೃಷ್ಟಿಯೇ
ಅಥವಾ ಇಂದ್ರನ ಆಸ್ಥಾನದಿಂದ
ನನಗಾಗಿ ಎರವಲು ತಂದಿರಿವೆಯೋ
ದಿನ ನಿತ್ಯ ನೋಡುವ ವಿಭಿನ್ನ ಕಥಾನಕ
ಆ ಕಥೆಯ ವಿವಿಧ ಪಾತ್ರಗಳು ನನ್ನ
ಕುತೂಹಲವ ಮೀರಿ ಸಂತಸವ
ಹೊತ್ತು ತಂದು ಮನದುಂಬಿವೆ
ನೀ ನನಗಾಗಿ ತರುವ ಸುಖಾನುಭವ
ಸಂತಸವಿತ್ತಿದೆ, ಎನ್ನುವುದರ ಜೊತೆಗೆ
ವಾಸ್ತವವ ಮರೆಮಾಚಿ ನನ್ನ ಕೆಲಸ
ಕಾರ್ಯಗಳ ತಡ ಮಾಡಿರುವುದೂ ಸತ್ಯ
ನೀ ಒಯ್ಯುವ ಸುಂದರ ಲೋಕದ
ಪಯಣಕೆ ಶಿಸ್ತಿನ ಅಲ್ಪವಿರಾಮವನಿತ್ತಿ
ವಾಸ್ತವ ಜೀವನಕು ಪ್ರಾಶಸ್ತ್ಯ ಕೊಟ್ಟು
ಎರಡನು ಸಮತೋಲನಗೊಳಿಸುವಾಸೆ
- ತೇಜಸ್ವಿ.ಎ.ಸಿ
Comments
ಉ: ಕನಸು
ಸುಂದರ ಅಸೆ! ಒಂದು ವಿಷಯ: ಬೆಳಕಿನಲ್ಲಿ ನೆರಳೂ ಸೇರಿದಂತೆ ಹಿಂಬಾಲಿಸುವವರಿರುತ್ತಾರೆ. ಕತ್ತಲಿನಲ್ಲಿ ಇತರರಿರಲಿ, ನೆರಳೂ ಹಿಂಬಾಲಿಸದು!
In reply to ಉ: ಕನಸು by kavinagaraj
ಉ: ಕನಸು
ಸರಿಯಾದ ಮಾತು ... :-)