ಒಂದು ಕ್ಷೌರದ ಕತೆ
ಒಂದು ಕ್ಷೌರದ ಕಥೆ
ಅವನ ಹೆಸರು ಸತೀಶ. ಇನ್ನೆರೆಡು ದಿನಗಳಲ್ಲಿ ತನ್ನ ಅಕ್ಕನ ಮದುವೆ ಇದ್ದರಿಂದ ಬಂದಿರುವ ಕುರುಚಲು ಗಡ್ಡಕ್ಕೆ ಒಂದು ಗತಿ ಕಾಣಿಸಿ ಬರೋಣವೆಂದು ಸೆಲೂನ್ ಕಡೆ ಹೊರಟ.ಸಾಮಾನ್ಯವಾಗಿ ಯಾವಾಗಲು ಖಾಲಿ ಇರುವ ಸೆಲೂನ್ ನಾವು ಹೋಗ್ತಿವಿ ಅನ್ನೋವಾಗ ಗ್ರಾಹಕರಿಂದ ತುಂಬಿರುತ್ತದೆ.ಸತೀಶನ ಅದೃಷ್ಟಕ್ಕೆ ಸೆಲೂನಿನಲ್ಲಿ ಮೂರರಲ್ಲಿ ಒಂದು ಕುರ್ಚಿ ಖಾಲಿ ಇತ್ತು.ಸತೀಶ ಯಾರಾದರೂ ಅ ಸ್ಥಾನ ಭರ್ತಿ ಮಾಡುವ ಮೊದಲು ತಾನು ಕುಳಿತುಕೊಳ್ಳಬೇಕೆಂದು ನಿರ್ಧರಿಸಿ ಹೋಗಿ ಕುಳಿತುಕೊಂಡ.ಆದರೆ ಅಲ್ಲೇ ಇದ್ದ ಕ್ಷೌರಿಕ ಇವನನ್ನು ನೋಡಿದರು ಕ್ಷೌರ ಮಾಡಲು ಮುಂದೆ ಬರಲಿಲ್ಲ.ಕಾರಣ ಅವನು ಅಲ್ಲಿದ್ದ ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡುವುದರಲ್ಲಿ ಬ್ಯುಸಿಯಾಗಿದ್ದ.ಫೈನಲ್ ಪಂದ್ಯವಾಗಿದ್ದರಿಂದ ತಾನು ಈವರೆಗೆ ಬೆಟ್ಟಿಂಗ್ ಮಾಡಿ ನಷ್ಟವಾದ ಹಣವನ್ನೆಲ್ಲ ವಾಪಾಸ್ಸು ಪಡೆಯಬೇಕೆಂದು ದೊಡ್ಡ ಮೊತ್ತವನ್ನೆ ಆವತ್ತು ಹಾಕಿದ್ದ ಅ ಕ್ಷೌರಿಕ. ಸತೀಶ, 'ಅರ್ಜೆಂಟ್' ಅಂತ ಹೇಳಿ ಅವನನ್ನು ಕೂಗಿದ.ಕ್ಷೌರಿಕ ಒಲ್ಲದ ಮನಸ್ಸಿನಿಂದ ಬಂದು ಸತೀಶನ ಮುಖಕ್ಕೆ ಫೋಮ್ ಹಚ್ಚಿ ಶೇವಿಂಗ್ ಮೆಷಿನ್ ಗೆ ಅರ್ಧ ಬ್ಲೇಡ್ ಏರಿಸಿ ಬೋಳಿಸಲು ಸಿದ್ಧನಾದ.ಮನಸ್ಸು ಕ್ರಿಕೆಟ್ ಮೇಲಿದ್ದರಿಂದ ಕ್ಷೌರಿಕನ ಕೈ ಅಷ್ಟೊಂದು ವೇಗವಾಗಿ ಸತೀಶನ ಮುಖದ ಮೇಲೆ ಕೆಲಸ ಮಾಡುತ್ತಿರಲಿಲ್ಲ.ಕೊನೆಯ ಓವರಿನಲ್ಲಿ 18 ರನ್ನು ಬೇಕಿತ್ತು.ಸತೀಶ ಕ್ಷೌರಿಕನನ್ನು ಆಗಾಗ ಎಚ್ಚರಿಸಿ ಕೆಲಸ ಮುಂದುವರಿಸುವಂತೆ ಹೇಳುತ್ತಿದ್ದ.ಅದು ಪಂದ್ಯದ ಕೊನೆಯ ಎಸೆತ. ಗೆಲ್ಲಲು 4 ರನ್ ಬೇಕಿತ್ತು.ಕ್ಷೌರಿಕನ ಹೃದಯ ಢವಢವ ಅನ್ನುತ್ತಿರುವಾಗಲೇ ಸ್ಟೈಕರ್ ನಲ್ಲಿದ್ದ ಬ್ಯಾಟ್ಸ್ ಮನ್ ಬಾಲನ್ನು ಲೀಲಾಜಾಲವಾಗಿ ಬೌಂಡರಿ ದಾಟಿಸಿದ್ದ.ಕ್ಷೌರಿಕ ಬೆಟ್ಟಿಂಗ್ ಹಣ ಗೆದ್ದ ಖುಷಿಯಲ್ಲಿ ಕೈ ಎಲ್ಲಿದೆ,ಕೈಯಲ್ಲಿ ಏನಿದೆ ಎಂಬ ಪರಿವೇ ಇಲ್ಲದೆ ಸಂಭ್ರಭಿಸಲೆಂದು ಕೈಯನ್ನು ರಭಸವಾಸಗಿ ಎಳೆದು ಮೇಲೆತ್ತಿದ.ಅವನ ಎಳೆತಕ್ಕೆ ಸತೀಶನ ಕತ್ತು ಸೀಳಿತ್ತು.ಮುಂದೆ ಇದ್ದ ಕನ್ನಡಿ ಕೆಂಪಾಗಿತ್ತು.ತಾನು ಕನಸಿನಲ್ಲಿಯೂ ಕಲ್ಪಿಸದ ಘಟನೆಯೊಂದು ತನ್ನ ಕೈಯಿಂದ ಆದದ್ದನ್ನು ನೋಡಿ ಕ್ಷೌರಿಕ ಮೂರ್ಛೆ ತಪ್ಪಿ ಬಿದ್ದಿದ್ದ.ಅಕ್ಕನ ಮದುವೆ ಮಾಡಬೇಕಿದ್ದ ಸತೀಶ ಆಸ್ಪತ್ರೆಯ ಬೆಡ್ ಮೇಲೆ ಶವವಾಗಿ ಮಲಗಿದ್ದ.
-@ಯೆಸ್ಕೆ
Comments
ಉ: ಒಂದು ಕ್ಷೌರದ ಕತೆ
ಹೀಗೂ ಉಂಟೆ??