ಈ ಮಾಮೂಲಿನಂತಲ್ಲದ ಮಕ್ಕಳು ದೇವರು ಕೊಟ್ಟ ವರ...!
( 2014, ಆಗಸ್ಟ್ ತಿಂಗಳ ಸಿಂಗಪುರ ಕನ್ನಡ ಸಂಘದ ಮಾಸಪತ್ರಿಕೆ 'ಸಿಂಚನ'ದಲ್ಲಿ ಪ್ರಕಟಿತ ಲೇಖನ : http://singara.org/wp-content/uploads/2014/08/Aug14-Sinchana_Final.pdf )
ನಾವೆಲ್ಲ ಚಿಕ್ಕವರಿದ್ದಾಗ ಅರಿವಾಗದ, ಮನವರಿಕೆಯಾಗದ ಒಂದು ಸತ್ಯ ಪ್ರಾಯದ ಪ್ರಬುದ್ಧ ಹಂತವನ್ನು ದಾಟಿ ವಯಸ್ಕರಾಗಿ, ಸಂಸಾರಿಗರಾಗಿ ಜೀವನ ಗಾಲಿಯನ್ನು ಎಳೆಯುವ ಹೊತ್ತಿನಲ್ಲಿ ವೇದ್ಯವಾಗುತ್ತದೆ - ಮಕ್ಕಳನ್ನು ಸಾಕುವುದು ಎಷ್ಟು ಕಷ್ಟವೆಂದು. ನಾವುಗಳು ಮಕ್ಕಳಾಗಿದ್ದಾಗ ನಮ್ಮನ್ನು ಹೆತ್ತವರಿಗೆ, ಪೋಷಕರಿಗೆ ಅದೆಷ್ಟು ಕಾಟ, ಕೋಟಲೆ ಕೊಟ್ಟು ಬೆವರಿಳಿಸಿರಬಹುದೆಂಬ ಒಂದು ಸ್ಥೂಲ ಅಂದಾಜು ಸಿಗುವುದು ನಮ್ಮ ಮಕ್ಕಳಿಂದ ಅದೇ 'ಡೋಸೇಜ್' ನಮಗೆ ವಾಪಸ್ಸು ಸಿಗುವ ಹೊತ್ತಿನಲಿ ಮಾತ್ರವೆ ಎಂದು ಕಾಣುತ್ತದೆ. ಎಲ್ಲೊ ಕೆಲವು ಪುಣ್ಯವಂತರಾದವರಿಗೆ ಮಾತ್ರ ಹೇಳಿದಂತೆ ಕೇಳಿಕೊಂಡು, ಕೊಂಚವೂ ಗಲಾಟೆ ಮಾಡದೆ, ಇದ್ದುದ್ದೆ ಗೊತ್ತಾಗದಂತೆ ಬೆಳೆದು ದೊಡ್ಡವರಾಗಿಬಿಡುತ್ತಾರಾದರೂ ಎಲ್ಲಾ ಮಕ್ಕಳು ಅಷ್ಟೆ ನಯನಾಜೂಕಿನಿಂದ ಬೆಳೆದು ಪ್ರಬುದ್ಧರಾಗಿ ಬಿಡುತ್ತಾರೆಂದು ಹೇಳಬರುವುದಿಲ್ಲ. ಅದರಲ್ಲೂ ಅಪ್ಪ ಅಮ್ಮಂದಿರ ನಿರೀಕ್ಷೆಯ ಎತ್ತರವನ್ನು ತಲುಪಲಾಗದ ಕಾರಣಕ್ಕೆ ಅವರಿಂದ ಯಾವುದಾದರೊಂದು ಕಾರಣಕ್ಕೆ ಬೈಸಿಕೊಳ್ಳುತ್ತ ಅವರ ತರತರದ ತಲೆನೋವಿಗೆ ಕಾರಣರಾಗುವುದು ಮಾಮೂಲಿಯಾಗಿ ಕಾಣುವ ಅಂಶ. ಅದರ ಜತೆಗೆ ಬೆಳೆಯುತ್ತಿರುವ ಮಕ್ಕಳು ಪರಿಸರ ಮತ್ತು ವಯಸಿಗನುಗುಣವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ವಿಭಿನ್ನ ರೀತಿಯಲ್ಲಿ ವಿಕಸಿತರಾಗುತ್ತ ಹೋಗುವಾಗ ಆ ವಿಕಸನ ಸರಿಯಾದ ದಿಕ್ಕಿನಲ್ಲಿದೆಯೆ ಇಲ್ಲವೆ ಎಂಬ ಆತಂಕವಂತೂ ಸದಾ ಕಾಲ ಎಲ್ಲಾ ಪೋಷಕರನ್ನು ಕಾಡುವಂತದ್ದು. ಅವರ ಬೆಳವಣಿಗೆಯನ್ನು ನೋಡುತ್ತ, ಅದನ್ನು ತಮ್ಮ ಅರೆ ಮರೆತ ಬಾಲ್ಯದೊಂದಿಗೆ ಹೋಲಿಸಿಕೊಳ್ಳುತ್ತ ಅವರು ಅದೆ ಹಾದಿಯಲ್ಲಿದ್ದಾರೊ ಇಲ್ಲವೊ ಎಂದು ತಾಳೆ ನೋಡುತ್ತ, ಒಂದೊಮ್ಮೆ ತಮ್ಮನಿಸಿಕೆಗೆ ತಾಳೆಯಾಗದಿದ್ದರೆ ಸಿಡಿದೇಳುತ್ತ ಅವರನ್ನು ಬಲವಂತದಿಂದಲಾದರೂ ತಮಗೆ ಸರಿಯೇನಿಸಿದ ದಾರಿಯತ್ತ ಹೊರಳಿಸಲು ಪಡುವ ಆತಂಕ, ಪರದಾಟ, ಒದ್ದಾಟಗಳೇನು ಕಡಿಮೆಯದಲ್ಲ. ಅದೆಲ್ಲದರ ಹಿಂದಿನ ಅದ್ಭುತ ಪ್ರೇರಣಾ ಶಕ್ತಿ ತಮ್ಮ ಕುಡಿಗಳ ಮೇಲಿಟ್ಟಿರುವ ಅಪರಿಮಿತ ಪ್ರೀತಿಯೆ ಆದರೂ, ಅದು ನಿಯಂತ್ರಣದ ಕಡಿವಾಣಕ್ಕೆ ಸಿಕ್ಕಿದ ನಲುಗಿದ ಹೂವಾಗುವುದೊ ಅಥವಾ ಸರಿಯಾದ ಮೂಸೆಯಲ್ಲಿ ಎರಕ ಹೊಯ್ದ ಬಂಗಾರದ ಪುತ್ಥಳಿಯಾಗುವುದೊ ಹೇಳುವುದು ಕಷ್ಟ. ಒಂದೆಡೆ ಹೆತ್ತವರ ಆತಂಕ, ಅಸಹನೆಗಳ ಕಾಳಜಿಯ ಜತೆಗೆ ಮತ್ತೊಂದು ಕಡೆ ಬೆಳೆವ ಮಕ್ಕಳ ಆತಂಕ, ಅಸಹನೆ, ಭೀತಿ, ಕಾತುರಗಳ ಹೊಯ್ದಾಟದಲ್ಲೆ ಸರಿ ತಪ್ಪುಗಳ ಲೆಕ್ಕ ಹೇಗೊ ತನ್ನನ್ನು ತಾನೆ ಸಂಭಾಳಿಸಿಕೊಂಡು ತನ್ನ ತಾರ್ಕಿಕವಾದ ಹಂತವನ್ನು ಮುಟ್ಟುವುದು ಕಾಲ ಋತು ಚಕ್ರದ ಮತ್ತೊಂದು ವಿಸ್ಮಯ ಲೀಲೆಯೆನ್ನಬಹುದೇನೊ?
ಇದರಲ್ಲಿ ಸ್ವದೇಶಿ ವಾತಾವರಣದಲ್ಲಿ ಬೆಳೆದ ಮಕ್ಕಳು ವಿದೇಶಿ ವಾತಾವರಣದಲ್ಲಿ ಬೆಳೆದ ಮಕ್ಕಳಿಗಿಂತ ಇದ್ದುದರಲ್ಲಿ ಸ್ವಲ್ಪ ವಾಸಿಯೆಂದೆ ಹೇಳಬಹುದು. ಸಾಂಸ್ಕೃತಿಕವಾಗಿ ಸುತ್ತಲ ವಾತಾವರಣ ತಾನೆ ತಾನಾಗಿ ಆಯಾಚಿತವಾಗಿ ಒದಗಿಸುವ ಪರಿಸರ ಅದೆಷ್ಟೊ ಸಮಸ್ಯೆಗಳಿಗೆ ತಂತಾನೆ ಪರಿಹಾರ ಒದಗಿಸಿಬಿಟ್ಟಿರುತ್ತದೆ - ನಮಗರಿವಿಲ್ಲದ ಹಾಗೆ. ನೆರೆಹೊರೆಯಲ್ಲಿ ನೆಂಟರಿಷ್ಟರಲ್ಲಿ ಸರಾಗವಾಗಿ ಓಡಾಡಿಕೊಂಡು, ಹೋಗಿಬರುವ ಮಕ್ಕಳು ಹೇಳಿಕೊಡುವ ಅಗತ್ಯವಿಲ್ಲದೆಯೆ ಅದೆಷ್ಟೊ ತರದ ರೀತಿ, ರಿವಾಜು, ನಡೆ, ನುಡಿ, ನೀತಿಗಳನ್ನು ಕಲಿತುಬಿಟ್ಟಿರುತ್ತವೆ. ಆಟವಾಡಲೊ ಅಥವಾ ಜಗಳವಾಡಿ ನಂತರ ಮತ್ತೆ ಒಂದಾಗಲೊ ಮಕ್ಕಳಿಗೆ ಜತೆಯಿಲ್ಲವೆಂಬ ಚಿಂತೆಯೆ ಬಾಧಿಸದ ಹಾಗೆ ಸುತ್ತಮುತ್ತಲಿನ ನೆರೆಹೊರೆ, ಶಾಲೆಯ ಸಾಂಗತ್ಯ, ಸಾಮಾಜಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ಪರೋಕ್ಷವಾಗಿ ಕಲಿಸುವ ಸಾಂಸ್ಕೃತಿಕ ಮತ್ತು ಪರಂಪರಾನುಗತ ಆಚಾರ ವಿಚಾರ ನಂಬಿಕೆಗಳು - ಇವೆಲ್ಲವೂ ಬಿಡಿಗಾಸಿನ ಖರ್ಚಿಲ್ಲದೆ ಸಿಕ್ಕಿಬಿಡುತ್ತವೆ ಸ್ವದೇಶಿ ವಾತಾವರಣದಲ್ಲಿ. ಆದರೆ ವಿದೇಶಿ ಜೀವನದಲ್ಲಿ ಹೆಣಗಬೇಕಾದವರ ಕಥೆ ಅಷ್ಟು ಸುಲಭವಲ್ಲ - ಮೊದಲಿಗೆ ನೆರೆ ಹೊರೆಯ ಆಯ್ಕೆ ನಿರ್ಧರಿಸುವುದು ಸುಲಭವಲ್ಲ. ಯಾವ ಸಂಸ್ಕೃತಿ, ಆಚಾರ ವಿಚಾರಗಳ ಗುಂಪಿಗೆ ಸೇರಿದವರು ಪಕ್ಕದಲ್ಲಿರುತ್ತಾರೊ, ಅವರೊಂದಿಗಿನ ಸಹಬಾಳ್ವೆ ಮಕ್ಕಳಲ್ಲಿ ಯಾವ ರೀತಿಯ ಪರಿಣಾಮ ಬೀರುವುದೊ, ಯಾವ ಭಾಷೆಯ ನೆರೆಹೊರೆಯೊ? ಎಂದೆಲ್ಲ ಚಿಂತೆ ಕಾಡುತ್ತದೆ. ಸ್ವದೇಶದಲ್ಲಿ ಇಂತಹವರೆ ಪಕ್ಕದಲ್ಲಿದ್ದರೆ ಚೆಂದ ಎಂದು ಹುಡುಕಿ ನೆರೆಹೊರೆ ಕಟ್ಟಿಕೊಳ್ಳುವ ಸಾಧ್ಯತೆಯಿದ್ದರೆ ವಿದೇಶದಲ್ಲಿ ' ಸದ್ಯ ಯಾರಾದರೂ ನಮ್ಮ ದೇಶದವರು ಅಕ್ಕಪಕ್ಕ ಸಿಕ್ಕರೆ ಸಾಕಪ್ಪ, ಯಾವ ಭಾಷೆ ಮಾತನಾಡಿದರೂ ಸರಿ, ಪರವಾಗಿಲ್ಲ' ಅನ್ನುವ ದೇಶಾಭಿಮಾನಿ ಪ್ರಜ್ಞೆ ತಾನಾಗಿಯೆ ಉಜ್ವಲವಾಗಿಬಿಟ್ಟಿರುತ್ತದೆ. ಇನ್ನೂ ಸ್ಕೂಲಿನ ವಿಷಯಕ್ಕೆ ಬಂದರಂತೂ ಮಾತನಾಡುವಂತೆಯೆ ಇಲ್ಲ - ಏನೆಲ್ಲಾ ಹೊಂದಾಣಿಕೆ ಮಾಡಿಕೊಂಡು ಹೆಚ್ಚು ಫೀಸು ಕಟ್ಟಿಯೂ ತೃಪ್ತಿಕರವಿರದ ಶಾಲೆಗಳೊಂದಿಗೆ ಹೆಣಗುತ್ತಲೆ ಮಕ್ಕಳ ವಿದ್ಯಾಭ್ಯಾಸದ ಹೊಣೆ ಮತ್ತು ಹೊರೆಯನ್ನು ನಿಭಾಯಿಸಬೇಕು. ಇನ್ನು ಈ ತರದ ಎಷ್ಟೊ ಸಂಕಟಗಳ ನಡುವೆಯೆ ಮಕ್ಕಳು ಚೆನ್ನಾಗಿ ಓದುತ್ತ , ಆಟೋಟ ಕ್ರೀಡೆಗಳಲ್ಲಿ, ಸ್ಪರ್ಧೆಗಳಲ್ಲಿ ಜಯಶೀಲರಾಗುತ್ತ ಹೋದರೆ ಏನೊ ಒಂದು ರೀತಿಯ ಹೆಮ್ಮೆ, ಸಮಾಧಾನ. ಅದೆ ಫಲಿತಾಂಶ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದರೆ ಮತ್ತೊಂದು ರೀತಿಯ ಆತಂಕ, ಕಳವಳ, ದಿಗಿಲು ಕಾಡುವ ವಿಪರೀತದ ಪರಿಸ್ಥಿತಿ.
ಇನ್ನು ಸುಮಾರು ಜನರು ಅಷ್ಟಾಗಿ ಗಮನಿಸದ, ಸಾಮಾನ್ಯವಾಗಿ ನಿರ್ಲಕ್ಷಿಸಿ ಕಡೆಗಣಿಸುವ ಮತ್ತೊಂದು ಮಕ್ಕಳ ಗುಂಪು ಇಲ್ಲಿ ಪರಿಗಣನೆಗೆ ಅರ್ಹವೆಂದು ಹೇಳಬಹುದು. ವಿಪರೀತ ಬುದ್ದಿವಂತಿಕೆಯ ಜಾಣ ಮಕ್ಕಳು ಹೇಗಿದ್ದರೂ ತಮ್ಮ ಹತ್ತಿರದ ಮತ್ತು ಪರಿವಾರದವರ 'ಡಾರ್ಲಿಂಗು'ಗಳಾಗಿ ಸದಾ ಎಲ್ಲರ ಪರಿಗಣನೆ ಮತ್ತು ಕೃಪಾದೃಷ್ಟಿಗೆ ಪಾತ್ರರಾಗುವ ತರಕ್ಕೆ ಹೋಲಿಸಿದರೆ ಈ ಮಕ್ಕಳು ಆ ಮಾನದಂಡದ ಪಟ್ಟಿಯ ಮತ್ತೊಂದು ತುದಿಯಲ್ಲಿರುವ ದುರದೃಷ್ಟವಂತರು ಎಂದೆ ಹೇಳಬಹುದು. ಹುಟ್ಟಿನಿಂದ ಯಾವುದೊ ಕಾರಣಕ್ಕೆ ಏನಾದರೂ ದೋಷವನ್ನು ಹೊತ್ತುಕೊಂಡೆ ಜನಿಸುವ ಇಂತಹ ಮಕ್ಕಳ ಬೆಳವಣಿಗೆಯ ಪ್ರಕ್ರಿಯೆ ಮಿಕ್ಕ ಮಾಮೂಲಿ ಮಕ್ಕಳ ಹಾಗೆ ಸರಾಗವಾಗಿ ಸಾಗುವುದಿಲ್ಲ. ಅವರ ಬೆಳವಣಿಗೆಯ ಪ್ರತಿ ಹಂತವೂ ಒಂದು ದೊಡ್ಡ ಪಂಥವೆ ಆಗಿಬಿಡುತ್ತದೆ. ನೆರೆಹೊರೆಯವರ ಜತೆ ಒಡನಾಟವಿರಲಿ, ಶಾಲೆಗಳಲ್ಲಿ ಹೊಂದಿಕೊಂಡು ನಿಭಾಯಿಸುವುದಿರಲಿ, ಹೇಗೊ ಸ್ನೇಹ ಗಳಿಸಿ ಸ್ನೇಹಿತರನ್ನು ಕಟ್ಟಿ ಬೆಳಿಸಿ ಉಳಿಸಿಕೊಳ್ಳುವುದಿರಲಿ, ತಿಂದುಣ್ಣುವುದಿರಲಿ, ತಮ್ಮ ಸ್ವಂತದ ಸರಳ ದೈನಂದಿನ ಪ್ರಕ್ರಿಯೆಗಳನ್ನು ತಾವೆ ನಿಭಾಯಿಸಿಕೊಳ್ಳುವುದಿರಲಿ - ಎಲ್ಲದರಲ್ಲೂ ಇವರು ಹಿಂದೆಯೆ; ಮತ್ತು ವಯಸಿಗೆ ತಕ್ಕಂತಿನ್ನು ಬೆಳೆದಿರದ ಮೆದುಳಿನ ಪ್ರಭಾವಕ್ಕೊ ಏನೊ ಇತರರ ಚೇಷ್ಟೆ, ದಾದಾಗಿರಿಗೆ ಸುಲಭವಾಗಿ ಬಲಿಯಾಗಿ ನರಳುವವರು - ದೈಹಿಕವಾಗಿ ಮತ್ತು ಮಾನಸಿಕವಾಗಿ. ಆದರಿಂದಾಗಿಯೆ ಏನೊ ಇವರು ಸದಾ ಒಬ್ಬಂಟಿ, ಎಕಾಂಗಿ ಮತ್ತು ಅದೆ ವಯಸಿನ ಬೇರೆ ಮಕ್ಕಳಿಗಿರದ ನೂರೆಂಟು ತರದ ನೂನ್ಯತೆಗಳಿಂದ ನರಳುವ ಬಡಪಾಯಿಗಳು. ಇಂತಹ ಮಕ್ಕಳು ಸ್ವದೇಶದಲ್ಲಿದ್ದರೆ ಒಂದು ರೀತಿಯ ತೊಂದರೆ-ತಾಕಲಾಟ ಅನುಭವಿಸಿದರೆ, ವಿದೇಶಿ ವಾತಾವರಣದಲ್ಲಿ ಮತ್ತೊಂದು ರೀತಿಯ ತೊಡಕನ್ನು ಅನುಭವಿಸುತ್ತಾರೆ. ಆದರೆ ಎರಡೂ ಕಡೆಯಲ್ಲೂ ಅವರೂ ಒಬ್ಬಂಟಿಗಳೆ, ಅವರ ಹೆತ್ತವರನ್ನು ಸೇರಿಸಿದಂತೆ. ಅವರ ಮಕ್ಕಳ ಹೈಪರ ಆಕ್ಟೀವ್ನೆಸ್, ಆಟಿಸಂ, ಏ.ಎಸ್.ಡಿ, ಡಿಸ್ಲೆಕ್ಸಿಯ ರೀತಿಯ ವಿವಿಧ ದೌರ್ಬಲ್ಯಗಳ ಜತೆಯಲ್ಲೆ ಹೆಣಗಾಡುತ್ತ ಹೇಗೊ ಸಾವರಿಸಿಕೊಂಡು ಬದುಕಲೆಣಿಸುವ ಆ ಪೋಷಕರ ಸಹನೆ, ತಾಳ್ಮೆ, ಔದಾರ್ಯಗಳಿಗೆ ಒಂದೆಡೆ 'ನಮೋನಮಃ' ಎಂದು ಕೈಯೆತ್ತಿ ಮುಗಿಯಬೇಕೆನಿಸಿದರೆ ಆ ಕಾರಣಕ್ಕಾಗಿಯೆ ಒಂದು ರೀತಿಯಲ್ಲಿ ಸಮಾಜದಿಂದ ತಿರಸ್ಕೃತರಾಗಿ, ಇದ್ದೂ ಇಲ್ಲದಂತೆ, ಎಲ್ಲರಿಂದ ಆದಷ್ಟು ದೂರ ಇದ್ದುಕೊಂಡೆ ತಮ್ಮ ದೌರ್ಬಲ್ಯದ ಪರಿಸ್ಥಿತಿಯನ್ನು ಜಗಜ್ಜಾಹೀರಾಗಿಸಲಿಚ್ಚಿಸದೆ, ಒಂದು ರೀತಿಯ ಸ್ವಯಂ ತಿರಸ್ಕೃತ ಬದುಕು ದೂಡಬೇಕಾದ ಅನಿವಾರ್ಯ ಈ ಹೆತ್ತವರದು. ನಿಜ ಹೇಳಬೇಕೆಂದರೆ ಆ ರೀತಿಯ ಮಕ್ಕಳಿಗಿಂತ ಅದರ ಹತ್ತಾರು, ನೂರಾರು ಪಟ್ಟು ವೇದನೆ, ಯಾತನೆ, ಅವಮಾನಗಳಲ್ಲಿ ಸಿಕ್ಕಿ ಬಳಲಿ ಕುಗ್ಗಿ ಕೃಶರಾಗುವವರು ಆ ಮಕ್ಕಳ ತಂದೆ ತಾಯಿಗಳೆ ಎನ್ನಬಹುದು. ಕೊನೆಗದೆಲ್ಲ ನೋವು ಪರಿಪಕ್ವತೆಯ ಹಂತ ಮುಟ್ಟಿದಾಗ ಬಹುಶಃ ಈ ತರದ ಮಕ್ಕಳ ಜವಾಬ್ದಾರಿ ಮತ್ತು ಕಲ್ಯಾಣಕ್ಕಾಗಿಯೆ ತಮ್ಮ ನಿಮಿತ್ತ ಜನ್ಮವಾಯಿತೇನೊ ಎಂಬ ತೀರ್ಮಾನಕ್ಕೆ ಬಂದು, ತಮಗ್ಹುಟ್ಟಿದ ಅಂತಹ ಮಕ್ಕಳೆ ತಮ್ಮ ತಾಳ್ಮೆಯ ಬೆಳವಣಿಗೆ ಮತ್ತು ಪರೀಕ್ಷೆಗಾಗಿ ದೇವರು ಕೊಟ್ಟ ವರವೇನ್ನುವ ಖಚಿತ ಅಭಿಪ್ರಾಯಕ್ಕೆ ತಲುಪಿಬಿಡುತ್ತಾರೆ.
ಇಂತಹ ಮಕ್ಕಳ ಸೇವೆಯಲ್ಲಿ ಪಾಲನೆ ಪೋಷಣೆಯಲ್ಲಿ ಜೀವ ತೇಯುತ್ತಿರುವ ಕುಟುಂಬಗಳು ಅದೆಷ್ಟೊ ಇದ್ದರೂ ಅವರು ಬಹಿರಂಗಕ್ಕೆ ಬರಲು ಬಯಸುವುದಿಲ್ಲ. ಅದೊಂದು ರೀತಿಯ ಇಕ್ಕಳದ ಇಕ್ಕಟಿನ ಪರಿಸ್ಥಿತಿ - ಬಹಿರಂಗದಲ್ಲಿ ಬಂದರೆ ನಿಭಾಯಿಸಲಾಗದ ಕಷ್ಟ, ಬರದಿದ್ದರೆ ಸಮಸ್ಯೆಯ ಪರಿಹಾರವಾಗಬಹುದಾದ ತುಸು ಪಾಲು ಕೂಡ ಪರಿಹಾರ ಕಾಣದೆ ಮತ್ತಷ್ಟು ಉಲ್ಬಣವಾಗುವ ಚಕ್ರವ್ಯೂಹ. ಕೊನೆಗೆ ವಿಧಿಬರಹವೆಂದುಕೊಂಡು ಬಂದದ್ದೆಲ್ಲ ಬರಲೆಂದು ಜೀವನ ಸಾಗಿಸುವವರೆ ಅಧಿಕ. ಅಂತಹ ಹೆತ್ತವರ, ಪೋಷಕರ ಅಸೀಮ ಸಾಹಸಕ್ಕೆ, ಕೊನೆಯಿರದ ಜಂಜಾಟ ಹೋರಾಟಕ್ಕೆ ಬೆಂಬಲ ಸೂಚಿಸುವುದರ ಕುರುಹಾಗಿ ನಮನ ಸಲ್ಲಿಸುವುದು ಪ್ರಾಯಶಃ ಆ ತೊಂದರೆಯಲ್ಲಿ ಸಿಲುಕದ-ನರಳದ ಅದೃಷ್ಟವಂತರು ಮಾಡಬಹುದಾದ ತೀರಾ ಕನಿಷ್ಠ ಕರ್ತವ್ಯ. ಅಂತೆಯೆ ಅಂತಹ ಕುಟುಂಬಗಳು ಕಣ್ಣಿಗೆ ಬಿದ್ದಾಗ ಅವರನ್ನು ಅವರ ಚಿಪ್ಪಿನೊಳಗವಿತಿರಲು ಬಿಡದೆ, ಅವರ ಯಾತನೆಯ ಮೂಲವನ್ನರ್ಥ ಮಾಡಿಕೊಂಡು ಸಾಧ್ಯವಾದಷ್ಟು ಸಾಮಾಜಿಕ ಪ್ರೋತ್ಸಾಹ, ಸಹಕಾರ, ಉತ್ತೇಜನ, ಧೈರ್ಯಗಳನ್ನು ಕೊಟ್ಟು ಅವರ ನೋವಿನಲ್ಲಿ ತುಸುವಾದರೂ ಪಾಲುದಾರರಾಗುವ ಕಾಳಜಿ ತೋರಿಸಿದರೆ ಅದು ನಾಗರೀಕರಾಗಿ ನಮ್ಮ ಸಮಾಜದ ಋಣ ತೀರಿಸುವಲ್ಲಿ ನಾವು ಸಲ್ಲಿಸಬಹುದಾದ ಬಹು ದೊಡ್ಡ ಕಾಣಿಕೆಯೆ ಆಗಿಬಿಡುತ್ತದೆ. ಅಂತಹ ಕುಟುಂಬದ ಮಕ್ಕಳಿಗೆ ತಮ್ಮ ಮಕ್ಕಳನ್ನು ಹೋಲಿಸಿದಾಗ ತಾವೆಷ್ಟು ಪುಣ್ಯವಂತರೆಂಬ ಅರಿವೂ ಮೂಡಿ, ಅವರನ್ನು ಕಾರಣವಿಲ್ಲದೆ ಹೀಗಳೆಯುವ ಪ್ರವೃತ್ತಿಗೂ ಕಡಿವಾಣ ಹಾಕುತ್ತದೆ. ಪರಿಪಕ್ವ ಪ್ರಬುದ್ಧ ಮನಗಳಲ್ಲಿ ಅಂತದ್ದೊಂದು ಚಿಂತನೆ ಮೂಡಲು ಈ ಬರಹ ಪ್ರೇರಕವಾದರೆ ಈ ಪುಟ್ಟ ಲೇಖನದ ಆಶಯ ಸಾರ್ಥಕತೆಯನ್ನು ಕಂಡಂತೆ.
- ವಿನಮ್ರತೆಯಿಂದ, ನಾಗೇಶ ಮೈಸೂರು.
Comments
ಉ: ಈ ಮಾಮೂಲಿನಂತಲ್ಲದ ಮಕ್ಕಳು ದೇವರು ಕೊಟ್ಟ ವರ...!
ಮನದಲ್ಲಿ ವೈಚಾರಿಕ ತರಂಗಗಳನ್ನು ಎಬ್ಬಿಸಬಲ್ಲ ಬರಹ! ಧನ್ಯವಾದಗಳು, ನಾಗೇಶರೇ.
In reply to ಉ: ಈ ಮಾಮೂಲಿನಂತಲ್ಲದ ಮಕ್ಕಳು ದೇವರು ಕೊಟ್ಟ ವರ...! by kavinagaraj
ಉ: ಈ ಮಾಮೂಲಿನಂತಲ್ಲದ ಮಕ್ಕಳು ದೇವರು ಕೊಟ್ಟ ವರ...!
ಕವಿಗಳೆ ನಮಸ್ಕಾರ. ಮಕ್ಕಳ ಬೆಳೆಸುವ ಪಂಥದ ವಿವಿಧ ಮಜಲುಗಳ ಕುರಿತಾದ ಚಿಂತನೆಗೆ ಈ ಬರಹ ಪ್ರೇರೇಪಣೆ ನೀಡಿದರೆ ಅದರ ಅರ್ಧ ಉದ್ದೇಶ ಈಡೇರಿದಂತೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.