ತೈಲಬೆಲೆ ಇಳಿಕೆಯ ಪ್ರಯೋಜನ ಪೂರ್ಣ ಪ್ರಮಾಣದಲ್ಲಿ ಜನಸಾಮಾನ್ಯರಿಗೆ ಸಿಕ್ಕಿಲ್ಲ

ತೈಲಬೆಲೆ ಇಳಿಕೆಯ ಪ್ರಯೋಜನ ಪೂರ್ಣ ಪ್ರಮಾಣದಲ್ಲಿ ಜನಸಾಮಾನ್ಯರಿಗೆ ಸಿಕ್ಕಿಲ್ಲ

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಸುಮಾರು ನಾಲ್ಕು ವರ್ಷ ಹಿಂದೆ ಇದ್ದ ಮಟ್ಟಕ್ಕೆ ಇಳಿದಿದೆ.  ಒಮ್ಮೆ ಪ್ರತಿ ಬ್ಯಾರೆಲ್ ತೈಲಕ್ಕೆ ೧೧೫ ಡಾಲರ್ ಮುಟ್ಟಿದ್ದ ತೈಲಬೆಲೆ ಇಂದು ೭೦ ಡಾಲರ್ ಮಟ್ಟಕ್ಕೆ ಇಳಿದಿದೆ.  ಅಂದರೆ ಶೇಕಡಾವಾರು ಮಟ್ಟದಲ್ಲಿ ಹೇಳುವುದಾದರೆ ಸುಮಾರು ೩೯% ತೈಲ ಬೆಲೆ ಇಳಿದಿದೆ.  ಆದರೆ ನಮ್ಮ ಸರಕಾರ ಇದೇ ಪ್ರತಿಶತ ಮಟ್ಟದಲ್ಲಿ ತೈಲಬೆಲೆ ಇಳಿಸಿಲ್ಲ.  ನಮ್ಮ ದೇಶದಲ್ಲಿ ಹೆಚ್ಚೆಂದರೆ ಸುಮಾರು ೧೧% ಶೇಕಡಾದಷ್ಟು ಮಾತ್ರ ತೈಲಬೆಲೆ ಇಳಿಸಲಾಗಿದೆ.  ಹಾಗಾದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಳಿದ ತೈಲಬೆಲೆಯ ಲಾಭ ಎಲ್ಲಿ ಹೋಗುತ್ತಿದೆ ಎಂದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಸರಕಾರವನ್ನು ಪ್ರಶ್ನಿಸಬೇಕಾಗಿದೆ.  ಭಾರಿ ಪ್ರಾಮಾಣಿಕ ಸರಕಾರ ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರ ಪ್ರಾಮಾಣಿಕವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಳಿದ ತೈಲಬೆಲೆಯ ಪ್ರಯೋಜನವನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಕೆಲಸಮಾಡುತ್ತಿಲ್ಲ ಎಂಬುದು ಇದರಿಂದ ಕಂಡುಬರುತ್ತದೆ.

ಕೇಂದ್ರ ಸರ್ಕಾರ ಡೀಸೆಲ್ ಬೆಲೆಯನ್ನು ೬-೭ ರೂಪಾಯಿ ಇಳಿಸಿದರೂ ಇದರ ಪ್ರಯೋಜನ ಪರೋಕ್ಷ ಗ್ರಾಹಕರಿಗೆ ತಲುಪಿಲ್ಲ ಅರ್ಥಾತ್ ಯಾವುದೇ ದಿನಬಳಕೆ ವಸ್ತುಗಳ ಬೆಲೆ; ಆಟೋ, ಟ್ಯಾಕ್ಸಿ, ಪ್ರವಾಸಿ ವಾಹನ, ಸರಕುಸಾಗಣೆ ವಾಹನ, ಪ್ರಯಾಣಿಕ ಬಸ್ಸುಗಳ ದರ, ರೈಲು ಸರಕು ಸಾಗಣೆ ಹಾಗೂ ಪ್ರಯಾಣಿಕ ದರ ಇತ್ಯಾದಿಗಳಲ್ಲಿ ಇಳಿಕೆ ಆಗಿಲ್ಲ.  ಇದನ್ನು ಇಳಿಸುವಂತೆ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ.  ಹೀಗೆ ಸಡಿಲ ನೀತಿ ಅನುಸರಿಸಿದರೆ ದಿನಬಳಕೆ ವಸ್ತುಗಳ ಬೆಲೆ ಕಡಿಮೆಯಾಗುವುದಾದರೂ ಹೇಗೆ?

ಭಾರತದಲ್ಲಿ ಒಂದು ಅಂದಾಜಿನ ಪ್ರಕಾರ ದಿನಕ್ಕೆ ೨೨ ಲಕ್ಷ ಬ್ಯಾರೆಲ್ ತೈಲ ಬಳಕೆ ಆಗುತ್ತದೆ.  ಒಂದು ಬ್ಯಾರೆಲ್ಲಿಗೆ ಸುಮಾರು ೪೫ ಡಾಲರ್ ಬೆಲೆ ಈಗ ಕಡಿಮೆಯಾಗಿದೆ.  ಇದು ಸುಮಾರು ೩೯% ಶೇಕಡಾ ಆಗುತ್ತದೆ.  ಇದರಲ್ಲಿ ಸರಕಾರ ಸುಮಾರು ೧೧% ಶೇಕಡಾದಷ್ಟು ಬೆಲೆಯನ್ನು ಇಳಿಸಿದೆ.  ಉಳಿದ ೨೮% ಶೇಕಡಾದಷ್ಟು ಸರ್ಕಾರ/ತೈಲ ಕಂಪನಿಗಳಿಗೆ ಲಾಭ ಆಗುತ್ತದೆ.  ದೇಶದಲ್ಲಿ ದಿನವೊಂದಕ್ಕೆ ಬಳಕೆಯಾಗುವ ೨೨ ಲಕ್ಷ ಬ್ಯಾರೆಲ್ ತೈಲಕ್ಕೆ ಸರ್ಕಾರ/ತೈಲ ಕಂಪನಿಗಳಿಗೆ ಎಷ್ಟು ಲಾಭ ಆಗುತ್ತದೆ ಲೆಕ್ಕ ಹಾಕಿ ನೋಡಿ.  ಸರ್ಕಾರ ತೈಲ ಬೆಲೆಗಳನ್ನು ಇನ್ನಷ್ಟು ಇಳಿಸಬೇಕಾಗಿತ್ತು ಆದರೆ ಇಳಿಸುತ್ತಿಲ್ಲ.  ಈ ಬಗ್ಗೆ ನಾವು ಕೂಡ ಚಕಾರ ಎತ್ತುತ್ತಿಲ್ಲ.  ಇಲ್ಲಿ ನಾವು ಎಂದರೆ ಅತ್ಯಂತ ಪ್ರಭಾವಶಾಲಿಯಾದ ಟಿವಿ ಮಾಧ್ಯಮ ಎಂದು ತಿಳಿದುಕೊಳ್ಳಬೇಕು.  ನಮ್ಮ ಯೋಚನಾಶಕ್ತಿಗೆ ಮಂಕು ಬಡಿದಿದೆ.  ನಾವು ಎಚ್ಚತ್ತುಕೊಳ್ಳದಿದ್ದರೆ ನಮ್ಮ ಸರ್ಕಾರವೇ ನಮ್ಮನ್ನು ಶೋಷಣೆ ಮಾಡಲು ಹಿಂಜರಿಯುವುದಿಲ್ಲ.

Comments

Submitted by kavinagaraj Fri, 12/05/2014 - 08:58

ಟಿವಿ ಮಾಧ್ಯಮ ಜನಪರವಾಗಿದೆಯೆಂದು ಯಾರೂ ನಂಬುತ್ತಿಲ್ಲ, ಅವರೂ 'ಹಣ'ದ ಪರ ಇದ್ದಾರೆ, ಅರ್ಥಾತ್ ಹಣ ಕೊಟ್ಟವರ ಪರ! ಅವರಿಗೆ ಹಣ ಪ್ರಥಮ ಆದ್ಯತೆಯಾಗಿದೆ.