ಚಂದಮಾಮನಲ್ಲಿಂದ ಬಂದವ..
ರಿಮೋಟ್ ಕೈಯಲ್ಲಿ ಹಿಡಿದು ಚಾನೆಲ್ ಬದಲಿಸುತ್ತಾ ಕುಳಿತಿದ್ದೆ.
ಥಟ್ಟನೆ ಅವನು ಬಂದು ನನ್ನ ಮಡಿಲಲ್ಲಿ ಮಲಗಿದ.
ನೀನ್ಯಾರು? ಎದ್ದೇಳು...
ನಿನಗೆ ಗೊತ್ತಿಲ್ವಾ ನಾನ್ಯಾರೆಂದು? ಕಳ್ಳಿ!
ನೀನ್ಯಾರೆಂದು ನನಗೆ ಗೊತ್ತಿಲ್ಲ... ಮನೆಯೊಳಗೆ ಹೇಗೆ ಬಂದೆ?
ಸೆಕ್ಯೂರಿಟಿ....ನಾ ಕೂಗತೊಡಗಿದೆ.
ಪ್ರಿಯೇ...ಗಾಬರಿಯಾಗಬೇಡ...ನಾನ್ಯಾರೆಂದು ಗೊತ್ತಿಲ್ಲವೇ?
ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು ನೋಡೋಣ...ಮೆಲ್ಲನೆ ನನ್ನ ಗಲ್ಲ ಹಿಂಡಿದ..
ಮೈ ಬೆವರುತ್ತಿತ್ತು... ನನಗೆ ಗೊತ್ತಿಲ್ಲ...
ಅಂತ ಹೇಳಿದೆ ತಾನೇ? ನಡಿ ಹೊರಗೆ...
ಸೆಕ್ಯೂರಿಟಿ...... ಸುಳ್ಳು ಹೇಳ್ತಾ ಇದ್ದಿ ನೀನು. ನಿನಗೆ ಗೊತ್ತು ನಾನ್ಯಾರೆಂದು...ಒಂದಷ್ಟು ಹೊತ್ತು ನಿನ್ನ ಮಡಿಲಲ್ಲಿ ಮಲಗಬೇಕು ಎಂಬ ಆಸೆಯಾಗಿದೆ..ಪ್ಲೀಸ್...ಬೇಡ ಅನ್ನಬೇಡ.
ಕೋಪ ಉಕ್ಕಿ ಬರುತ್ತಿತ್ತು, ಜತೆಗೆ ಭಯವೂ
ನೋಡು, ಇನ್ನು ಸ್ವಲ್ಪ ಹೊತ್ತಿನಲ್ಲೇ ನನ್ನ ಗಂಡ ಬರ್ತಾರೆ..ಅವರು ನಿನ್ನನ್ನು ಕಂಡರೆ? ಭಗವಂತಾ...ಪ್ಲೀಸ್ ಹೋಗ್ಬಿಡು ಇಲ್ಲಿಂದ ...
ಅಲ್ಲಿಯವರೆಗೆ ನಾನು ಇಲ್ಲೇ ಇತೀ೯ನಿ ನಿನ್ನ ಜತೆಗೆ...
ಅವನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ.
ನಾ ಮುಖ ತಿರುಗಿಸಿದೆ..
ಮತ್ತೆ ಆ ಕಡೆ ನೋಡಿದೆ, ಅವ ಮುಗುಳ್ನಗುತ್ತಾ ನನ್ನನ್ನೇ ನೋಡುತ್ತಿದ್ದ
ನಾ ನಗಲಿಲ್ಲ
ಇವನನ್ನು ಎಲ್ಲೋ ನೋಡಿದಂತೆ ಇದೆಯಲ್ಲಾ? ಯಾರಿವನು?
ನೋಡೋಕೆ ಸಖತ್ತಾಗಿಯೇ ಇದ್ದಾನೆ. ನಗುವಾಗ ಎರಡೂ ಕೆನ್ನೆಯಲ್ಲಿ ಡಿಂಪಲ್ ಬೀಳುತ್ತೆ..ಒಳ್ಳೆ ಪರಿಚಯವಿರುವ ಮುಖ..ಆದ್ರೆ ಯಾರೂ ಅಂತ ಗೊತ್ತಾಗ್ತಿಲ್ಲವಲ್ಲಾ?
ನನ್ನ ಗೊಂದಲವನ್ನು ನೋಡಿಯೇ ಅವನು ಮಾತನಾಡಲು ತೊಡಗಿದ...
ನಾನು ರಾಜಕುಮಾರ
ಯಾವ ದೇಶದ್ದು? ನಿನ್ನ ಹೖದಯ ಸಾಮ್ರಾಜ್ಯದ್ದು
ಅಹಾ...ಏನ್ ಡೈಲಾಗ್ ಹೊಡೀತೀಯಾ ನೀನು.
ನಿಜ ಕಣೇ...ನಿನ್ನ ಮನಸ್ಸಲ್ಲಿನ ರಾಜಕುಮಾರ ನಾನೇ...
ಹಾಗಾದರೆ ನೀನು ಇಲ್ಲಿ ತನಕ ಎಲ್ಲಿದ್ದೆ? ಇಲ್ಲೇ ಇದ್ದೆ...
ಹಲವಾರು ಬಾರಿ ನಾನು ನಿನ್ನಲ್ಲಿಗೆ ಬಂದಿದ್ದೆ...ಆದರೆ ನಿನಗೆ ನನ್ನ ಗುರುತು ಸಿಗಲೇ ಇಲ್ಲ.
ಓಹ್! ಹೌದಾ? ಅದ್ಯಾವಾಗ?
ನಿನಗಾಗ ವಯಸ್ಸು 13. ಟೀನೇಜ್ ನ ಪುಳಕ, ಮನಸ್ಸಿನಲ್ಲಿ ಹೊಸ ಅನುರಾಗದ ಸಂಚಲನ. ನಿದ್ದೆ ಬರದ ರಾತ್ರಿಗಳಲ್ಲಿ ನೀನು ಕವನಗಳನ್ನು ಗೀಚುತ್ತಾ ಕೂತಿದ್ದೆ. ನಿನ್ನ ಕವನದ ಸಾಲುಗಳಲ್ಲಿ ನಾನಿದ್ದೆ. ನೀನೋದಿದ ಕತೆಗಳಲ್ಲಿ ಅವಿತು ಕುಳಿತಿದ್ದ ನನ್ನನ್ನು ಹೊರಗೆಳೆದವಳೇ ನೀನು. ಚಂದಮಾಮದಲ್ಲಿ ಬಿಳಿ ಕುದುರೆಯನ್ನೇರಿ ಬರುವ ರಾಜಕುಮಾರನಾಗಿ ನೀನು ನನ್ನನ್ನು ಕಲ್ಪಿಸಿಕೊಂಡಿದ್ದೆ. ಧೀರನಾದ, ಪ್ರಜೆಗಳ ಹಿತ ಕಾಪಾಡುವ, ದಯಾಳುವಾಗಿರುವ ರಾಜಕುಮಾರನಾಗಿ ನಾನು ನಿನ್ನ ಮುಂದೆ ನಿಂತಿದ್ದೆ. ರಾತ್ರಿ ಹೊತ್ತು ಆಕಾಶವನ್ನೇ ದಿಟ್ಟಿಸುತ್ತಾ, ನಕ್ಷತ್ರವೊಂದು ಉರಿದು ಬೀಳುವ ಹೊತ್ತಲ್ಲಿ ನೀನು ನನ್ನ ರಾಜಕುಮಾರ ನನಗೆ ಸಿಗುವಂತಾಗಲಿ ಎಂದು ಪ್ರಾಥಿ೯ಸಿ ನನಗಾಗಿ ಕಾಯುತ್ತಾ ಕುಳಿತಿರುತ್ತಿದ್ದೆ. ಆಮೇಲೆ ನೀನು ನಿನ್ನ ಭಾವನೆಗಳಿಗೆ ಅಕ್ಷರ ರೂಪವನ್ನು ಕೊಟ್ಟೆ. ನಿನ್ನ ಕವನ, ಕತೆಗಳಲ್ಲಿ ನನ್ನ ಹುಡುಕಾಟ ಆರಂಭಿಸಿದೆ. ನಾನೆಲ್ಲವನ್ನೂ ಓದುತ್ತಿದ್ದೆ. ನಿನ್ನ ಪಕ್ಕದಲ್ಲೇ ಕುಳಿತು ನಿನ್ನನ್ನು ಕಾಡಿಸುತ್ತಿದ್ದರೂ ನಿನ್ನ ಮುಂದೆ ಬರುವ ಹೊತ್ತಿಗೆ...
ಏನಾಯ್ತು?
ಅವನು ನಿನ್ನ ಜೀವನಕ್ಕೆ ಪ್ರವೇಶ ಮಾಡಿದ್ದ..
ಯಾರು?
ನಿನ್ನ ಪ್ರೇಮಿ.
ಕಾಲೇಜಿನ ದಿನಗಳವು. ಕತೆ, ಕವಿತೆಗಳಲ್ಲಿ ನನ್ನನ್ನು ಹುಡುಕುತ್ತಿದ್ದ ನಿನಗೆ ಅವನು ಸಿಕ್ಕಿದ್ದ.ಮೊದಲ ಪ್ರೇಮ, ಮೊದಲ ಸ್ಪಶ೯, ಯೌವನದ ಹೊಸ ಕನಸುಗಳಲ್ಲಿ ನೀವಿಬ್ಬರೂ ಜತೆಯಾದಿರಿ. ನೀನು ಅವನ ಭುಜದಲ್ಲಿ ತಲೆಯಾನಿಸಿ ನನ್ನ ಬಗ್ಗೆ ಹೇಳುತ್ತಿದ್ದೆ. ನಿನ್ನ ಕನಸಿನ ರಾಜಕುಮಾರನ ಬಗ್ಗೆ. ಆ ರಾಜ ಕುಮಾರ ನನಗೆ ನಿನ್ನ ರೂಪದಲ್ಲಿ ಸಿಕ್ಕಿದ ಎಂದು ಖುಷಿಯಲ್ಲಿ ನೀನವನಿಗೆ ಮುತ್ತು ಕೊಟ್ಟೆ. ಅವನು ರಾಜಕುಮಾರನಾದ. ಕಾಲೇಜಿನ ಕಾರಿಡಾರ್ ನಲ್ಲಿ ನಿನಗಾಗಿ ಅವನು ಕಾಯುವಾಗ, ಲೈಬ್ರರಿಯಲ್ಲಿ ಪಿಸಪಿಸ ಮಾತಾಡುವಾಗ ಮೂಲೆಯಲ್ಲಿ ನಾ ಕುಳಿತಿರುತ್ತಿದ್ದೆ. ನೀನು ನನ್ನಿಂದ ದೂರವಾಗಿ ಅವನಿಗೆ ಹತ್ತಿರವಾಗಿದೆ. ಅವನ ಗುಳಿಕೆನ್ನೆಯ ಮೇಲೆ ನೀನು ಮುತ್ತಿಡುವಾಗ ನಾನು ಕಣ್ಣು ಮುಚ್ಚಿಕೊಳ್ಳುತ್ತಿದ್ದೆ. ಅಲ್ಲಿ ನಾನಿರಲಿಲ್ಲ, ನನ್ನ ಜಾಗದಲ್ಲಿ ಅವನಿದ್ದ, ನೀನು ಖುಷಿಯಾಗಿಯೇ ಇದ್ದೆ.
ಅಚಾನಕ್ ಆಗಿ ಒಂದು ದಿನ ನೀನು ನನ್ನನ್ನು ನೆನಪಿಸಿಕೊಂಡೆ. ಅಂದು ನಿನ್ನ ಹುಡುಗ ನಿನಗೆ ಕೈಕೊಟ್ಟು ಹೋಗಿದ್ದ. ಲವ್ ಬ್ರೇಕ್ ಅಪ್ ನ ದುಃಖದಲ್ಲಿ ನೀನು ಬಿಕ್ಕಿ ಬಿಕ್ಕಿ ಅತ್ತಾಗ ನೀನು ನನ್ನ ಹೆಸರು ಕೂಗಿದೆ. ಪ್ರೀತಿಯೆಂಬುದು ಕತೆ ಕಾದಂಬರಿಗಳಲ್ಲಿ ಅಷ್ಟೇ ಚೆನ್ನ, ರಿಯಲ್ ಲೈಫ್ ನಲ್ಲಿ ಅಲ್ಲ ಎಂದು ನೀನು ಡೈರಿಯಲ್ಲಿ ಬರೆದೆ. ನಿನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಬ್ರೋಕನ್ ಹಾಟ್೯ ಸ್ಮೈಲಿ ಹಾಕಿ ಲೀವ್ ಮಿ ಅಲೋನ್ ಎಂದು ಡಿಪಿ ಹಾಕಿದೆ. ಫೇಸ್ಬುಕ್ ಅಕೌಂಟ್ ಡಿಏಕ್ಟಿವೇಟ್ ಮಾಡಿ ನೀನು ಅಳುತ್ತಾ ಕುಳಿತಿದ್ದೆ. ಆ ನೋವಿನಿಂದ ಹೊರಗೆ ಬರಲು ನೀನು ಪುಸ್ತಕಗಳನ್ನೇ ಸಂಗಾತಿಯನ್ನಾಗಿಸಿದೆ.. ಒಂದು ಕಾಲದಲ್ಲಿ ಪ್ರೀತಿ ಪ್ರೇಮದ ಕತೆಗಳು ನಿನಗಿಷ್ಟವಾಗಿದ್ದವು. ಆ ಕತೆಗಳನ್ನು ಓದುವಾಗೆಲ್ಲಾ ನೀನು ಕಣ್ಣೀರು ಹಾಕುತ್ತಿದ್ದೆ. ನಿನ್ನನ್ನು ಸಮಾಧಾನ ಮಾಡಲು ನಾನು ಯತ್ನಿಸಿದರೂ ನೀನು ನನ್ನನ್ನು ನಂಬುವ ಮನಸ್ಥಿತಿಯಲ್ಲಿರಲಿಲ್ಲ. ನಿನ್ನ ಪ್ರೇಮ, ವಿರಹ ನೋವು ಎಲ್ಲವೂ ಕತೆ, ಕವನದ ಸಾಲಾಗಿ ಕಾಲದೊಂದಿಗೆ ನೆನಪುಗಳ ಬುಟ್ಟಿಗೆ ಸೇರುತ್ತಾ ಹೋಯಿತು. ನೀನು ಬದಲಾಗುತ್ತಾ ಹೋದೆ. ನಾನು ನಾನಾಗಿಯೇ ಉಳಿದೆ.
ನಿನ್ನ ಮದುವೆ ನಿಶ್ಚಯವಾಗಿತ್ತು. ಅಪ್ಪ ಅಮ್ಮ ಹುಡುಕಿದ ಹುಡುಗನೊಂದಿಗೆ ಬಾಳಲು ನಿನ್ನ ಮನಸ್ಸು ಸಜ್ಜಾಗುತ್ತಿತ್ತು. ಮದುವೆಯ ಕನಸುಗಳನ್ನು ಕಾಣುತ್ತಿದ್ದ ದಿನಗಳವು. ನಿಜ, ನಿನ್ನ ಮದುವೆಯಾಗುವ ಹುಡುಗನಿಗೆ ಡಿಂಪಲ್ ಇರಲಿಲ್ಲ. ನೀ ಬರೆದ, ನೀನು ಓದುವ ಕತೆ, ಕವನಗಳಲ್ಲಿ ಆಸಕ್ತಿಯೂ ಇರಲಿಲ್ಲ. ನಿನ್ನನ್ನು ಅವನು ತುಂಬಾ ಪ್ರೀತಿಸುತ್ತಿದ್ದ, ಅವನ ಪ್ರೀತಿಗೆ ನೀನು ಸ್ಪಂದಿಸಿದೆ. ಅವನಲ್ಲಿ ನೀನು ನನ್ನನ್ನು ಕಾಣಲಿಲ್ಲ, ಅವನು ಅವನಾಗಿಯೇ ಇದ್ದ. ನೀನು ನೀನಾಗಿಯೇ ಅವನ ಹೆಂಡತಿಯಾದೆ. ಸುಖ ಸಂಸಾರ ನಿನ್ನದಾಯಿತು. ಅವನಿಲ್ಲದ ಸಮಯದಲ್ಲಿ ನಾನು ನಿನ್ನ ಬಳಿಗೆ ಬರುತ್ತಿದ್ದೆ. ಅಡುಗೆ ಮನೆಯಲ್ಲಿ ಒಬ್ಬಳೇ ಅಡುಗೆ ಮಾಡುವಾಗ ನಿನ್ನ ಕಿವಿ ಪಕ್ಕ ಬಂದು ಮೆಲ್ಲನೆ ಪಿಸುಗುಡುತ್ತಿದ್ದೆ. ಆವಾಗ ನೀನು ನಿನ್ನ ಗಂಡನಿಗೆ ಫೋನ್ ಮಾಡಿ ಮನೆಗೆ ಬೇಗ ಬರುವಂತೆ ಹೇಳುತ್ತಿದ್ದೆ. ನಿಮ್ಮ ಪ್ರೀತಿಯ ನಡುವೆ ನನಗೇನು ಕೆಲಸ? ನಾನು ನಿನ್ನ ಪುಸ್ತಕದ ಶೆಲ್ಫ್ ನಲ್ಲಿ ಅವಿತು ಎಲ್ಲವನ್ನೂ ನೋಡಿದೆ. ಗಂಡ, ಮನೆ, ಅಡುಗೆ, ಸಂಸಾರ ಎಲ್ಲವನ್ನೂ ಸಂಭಾಳಿಸುತ್ತಾ ನಿನ್ನ ಸಮಯ ಕಳೆದು ಹೋಗುತ್ತಿತ್ತು.
ಇವತ್ತು ನೀನು ಶೆಲ್ಫ್ ಕ್ಲೀನ್ ಮಾಡಿ ಪುಸ್ತಕವೊಂದನ್ನು ತಿರುವಿ ಹಾಕುತ್ತಿದ್ದೆ. ಹೌದು, ಅದೇ ನಿನ್ನ ಕವನ ಸಂಕಲನ. ಆ ಕವನಗಳನ್ನು ಓದಿ, ಆ ಅಕ್ಷರಗಳ ಮೇಲೆ ಕೈಯಾಡಿಸುತ್ತಾ ನೀನು ಕಂಬನಿಗೆರೆದೆ. ನಿನ್ನ ಸಂಕಟ ನನಗೆ ನೋಡಲಾಗಲಿಲ್ಲ. ಎದ್ದು ಬಂದೆ. ನಿನ್ನ ಮಡಿಲಲ್ಲಿ ಮಗುವಾಗುವ ಆಸೆಯಾಯಿತು.
(ಹೊರಗೆ ಬಾಗಿಲು ಬಡಿಯುವ ಸದ್ದು... )
ಅಯ್ಯೋ, ನನ್ನವರು ಬಂದ್ರು...
ನೀನು ಹೋಗು...ಬೇಗ...
ನಾನು ಹೋಗಲ್ಲ..ಇಲ್ಲೇ ಇರ್ತೀನಿ...ನೀನು ಬಾಗಿಲು ತೆಗಿ...
ಏನು ಬಾಗಿಲು ತೆಗೆಯೋಕೆ ಇಷ್ಟು ಹೊತ್ತು?
ಹಗಲು ಕನಸು ಕಾಣುತ್ತಾ ಕುಳಿತಿದ್ಯಾ ಏನು? ಇಲ್ಲ... ಬರೀತಾ ಇದ್ಯಾ?
ಹೂಂ..ಇಲ್ಲ ಸುಮ್ನೇ ..ಯೋಚನೆ ಮಾಡಿ ಕುಳಿತುಕೊಳ್ಳುವ ಬದಲು ಏನಾದರೂ ಬರಿಬಾದಾ೯? ಕವನ ಕತೆ ಏನಾದರೂ... ಸರಿ...
ನಾನು ಕಾಫಿ ರೆಡಿ ಮಾಡ್ತೀನಿ...
ನನ್ನ ರಾಜಕುಮಾರ ಪುಸ್ತಕದ ನಡುವಿನಿಂದ ನಗುತ್ತಾ ವಿಶ್ ಮಾಡಿದ.
(ಚಿತ್ರ ಕೃಪೆ:disney.wikia.com)
Comments
ಉ: ಚಂದಮಾಮನಲ್ಲಿಂದ ಬಂದವ..
:) ಶುಭಾಶಯಗಳು.