" ಬಣ್ಣದ ವೇಷಗಳು "
ಬಣ್ಣದ ವೇಷಗಳವು ವೇಷ ಅವರ ಬದುಕು
ಹಾಲುಗಲ್ಲದ ಹಸುಳೆಗಳು
ಮುಖವೆಲ್ಲ ಚಿತ್ತಾರಗಳ ರಂಗೋಲಿ
ಮನೆಯಿಂದ ಮನೆಗೆ ದಿನವೆಲ್ಲ ಅಲೆದಾಟ
ಗೇಣು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ
ಆದರೂ ತುಂಬದ ತುತ್ತಿನ ಚೀಲ
ಮಾನವಂತ ಬದುಕಿಗೆ ಭರವಸೆಯಿಲ್ಲ
ಸಾಗಿದೆ ನಿರಂತರ ನಿರ್ವಿಕಾರ ಬದುಕು
ಬಾಲ್ಯದ ಬೆರಗಿನ ಯುವ ಚೇತನಗಳು
ಮನ ನೂರೆಂಟು ಕನಸುಗಳ ಆಗರ
ಹುಟ್ಟುತ್ತ ಬೆಳೆಯುತ್ತ ನೋಯುತ್ತ ನಲಿಯುತ್ತ
ಕಠೋರ ವಾಸ್ತವಕೆ ಕರಗಿ ಇಲ್ಲವಾಗುತ್ತ
ಸಾಗಿ ಬಂದಿದೆ ಬದುಕು ಅಂದಿನಿಂದ
ನೊಂದ ಅಸಂಗತ ಬದುಕಿನ ಪುನರಾವರ್ತನ
ದಿನದಂತೆ ದಿನವಿಲ್ಲ ಬಣ್ಣಗೊಳ್ಳುವ
ಇಲ್ಲವಾಗುವ ದೈನಂದಿನ ಯಾಂತ್ರಿಕ ಬದುಕು
ಯುಗ ಬಂದು ಯುಗವಳಿದು
ದೊರೆ ದೊರೆಸಾನಿಯರು ಬದಲಾಗಿ
ಜಗ ಸಾಗಿದ್ದರೂ ಮುಗಿಯದ ಬಾಳಗೋಳು
ಶೋಷಿತೋದ್ಧಾರ ಬರಿಯ ನಾಲಿಗೆ ಮೇಲೆ
ಆದರೂ ಆಗಿದೆ ಅವರುಗಳ ಉದ್ಧಾರ
ಮುಚ್ಚಿದ ಕಡತಗಳ ಒಳ ಪುಟಗಳಲ್ಲಿ
ಮುದುಡಿ ಹೋದವು ಬೆರಗು ತುಂಬಿದ
ಬಾಲ್ಯಗಳು ಸ್ಥಿತಗೊಂಡ ಬದುಕು
ಸಾಗಿದೆ ಅಮಾಯಕ ಸಮುದಾಯ ಪಯಣ
ಮರುಹುಟ್ಟು ಮರುಸಾವು ನಡುವೆ
ಬಾಲ್ಯದ ಬೆರಗು ಕನಸುಗಳು ಹುಟ್ಟಿ
ಅಲ್ಲಿಯ ಕಮರಿ ಬಂದು ಕವಿಯುವ ಸಾವು
ಸಾವು ಬದುಕಿನ ಸರಪಳಿಯ ನಡುವೆ
ಮೆರವಣಿಗೆ ಹೊರಟಿವೆ ‘‘ಬಣ್ಣದ ವೇಷಗಳು’
*
Comments
ಉ: " ಬಣ್ಣದ ವೇಷಗಳು "
ಇಂದಿನ ಸಮಾಜದ ರೀತಿಗೆ ಸಂಕೇತವಾಗಿವೆ ಈ ವೇಷಗಳು!
In reply to ಉ: " ಬಣ್ಣದ ವೇಷಗಳು " by kavinagaraj
ಉ: " ಬಣ್ಣದ ವೇಷಗಳು "
ಕವಿ ನಾಗರಾಜ ರವರಿಗೆ ವಂದನೆಗಳು ಕವನದ ಮೆಚ್ಚುಗೆಯ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: " ಬಣ್ಣದ ವೇಷಗಳು "
ನಮಸ್ಕಾರ ಸರ್
ಬಣ್ಣದ ಬದುಕಿನ ಜೀವನ ಸುಂದರವಾಗಿ ಮೂಡಿ ಬಂದಿದೆ ಸರ್ ಮನುಷ್ಯನ ಜೀವನದ ಮೂರು ಬಣ್ಣ ಚನ್ನಾಗಿದೆ . ಬಾಲ್ಯದ ಬಣ್ಣ, ಯೌವನದ ಬಣ್ಣ, ಮುಪ್ಪಿನ ಬಣ್ಣ.
ಸದಾ ಮೀನುಗುತಿರಲಿ ಈ ಬದುಕಿನ ಬಣ್ಣ.
ಧನ್ಯವಾದಗಳು ಸರ್.
In reply to ಉ: " ಬಣ್ಣದ ವೇಷಗಳು " by ravindra n angadi
ಉ: " ಬಣ್ಣದ ವೇಷಗಳು "
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು ತಾವು ಕವನವನ್ನು ಗ್ರಹಿಸಿದ ಮತ್ತು ಅದನ್ನು ಅಭಿವ್ಯಕ್ತಿಸಿದ ರೀತಿ ಖುಷಿ ನೀಡಿತು ಧನ್ಯವಾದಗಳು.
ಉ: " ಬಣ್ಣದ ವೇಷಗಳು "
ಹೊಟ್ಟೆಪಾಡಿಗಾಗಿ,ಮನೋರಂಜನೆಗಾಗಿ,ತಮ್ಮ ಸ್ವಾರ್ಥಕ್ಕಾಗಿ ಆಗಾಗ ವೇಷ ಭುಷಣಗಳು ಬದಲಾಗುತ್ತಲೇ ಇರುತ್ತವೆ ಈ ಬಣ್ಣದ ಪ್ಪಪಂಚದಲ್ಲಿ.ಸರಳವಾಗಿ ದೀನ ದಲಿತರ ಕೂಗನ್ನು ಬಿಂಬಿಸಿದ್ದೀರಿ. ವಂದನೆಗಳು ಪಾಟೀಲರೆ.
In reply to ಉ: " ಬಣ್ಣದ ವೇಷಗಳು " by swara kamath
ಉ: " ಬಣ್ಣದ ವೇಷಗಳು "
ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ನನಗೆ ಈ ಕವನಕ್ಕೆ ಪ್ರೇರಣೆ ನಾವು ಬಾಲ್ಯದಲ್ಲಿದ್ದಾಗ ನೋಡಿದ ವೇಷಧಾರಿಗಳು ಈಗ ಅವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರೂ ಮೊನ್ನೆ ಊರಿಗೆ ಹೋದಾಗ ಈ ವೇಷಧಾರಿಗಳನ್ನು ನೋಡಿದೆ, ಅದರ ಪ್ರೇರಣೆಯೆ ಈ ಕವನಕ್ಕೆ ಕಾರಣ ಕವನದ ಮೆಚ್ಚುಗೆಗೆ ಧನ್ಯವಾದಗಳು.
ಉ: " ಬಣ್ಣದ ವೇಷಗಳು "
namaskara sir..
kavana chennaagide.
In reply to ಉ: " ಬಣ್ಣದ ವೇಷಗಳು " by mmshaik shaik
ಉ: " ಬಣ್ಣದ ವೇಷಗಳು "
ಮೇಡಂ ವಂದನೆಗಳು ಬಹಳ ದಿನಗಳ ನಂತರ ಸಂಪದಕ್ಕೆ ಮರಳಿದ್ದಿರಿ ತಮ್ಮ ಪ್ರತಿಕ್ರಿಯೆ ನೋಡಿ ಸಂತಸವಾಯಿತು, ತಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.