ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..
ಧಾರವಾಡದ "ಕಲ್ಲು" ಗೊತ್ತಿದೆಯಲ್ಲಾ.. (ಪೇಡಾ ಆದರೂ ಪರವಾಗಿಲ್ಲ) ಅದನ್ನು ಎತ್ತಿ ಕನ್ನಡದ ಯಾವುದೇ ಟಿ.ವಿ ಚಾನಲ್ನ ಕಛೇರಿಗೆ ಎಸೆದರು ಅಂತಿಟ್ಟುಕೊಳ್ಳಿ...
ಅದು ಬೀಳುವುದು ಜ್ಯೋತಿಷಿಯ ತಲೆಯಮೇಲೇ.. :)
ಬೆಳ್ಳಂಬೆಳಗ್ಗೆ ಟಿವಿ ಆನ್ ಮಾಡಿದರೆ ಕಣ್ಣಿಗೆ ಬೀಳುವುದೇ ಅವರು- ಹಳೇ ಕಾಲದ ಹೆಂಗಸರ ಹಾಗೆ-ಜರಿ ಸೀರೆ, ಮುಖತುಂಬಾ ಮೇಕಪ್, ಮೇಲೊಂದು ಬೊಟ್ಟು, ಕೈ ಕುತ್ತಿಗೆ ತುಂಬಾ ಚಿನ್ನದ ಬಳೆ ಸರ...ಬಾಯಿ ಬಿಟ್ಟರೆ ಶನಿ ರಾಹು ಕೇತು ಎಂದು ಭಯ ಬೀಳಿಸುವರು.
ರಾತ್ರಿ ಸಹ ಅವರದ್ದೇ ಸುದ್ದಿಯೊಂದಿಗೆ ಟಿವಿ ಆಫ್ ಮಾಡುವುದು.
ಬರಬರುತ್ತಾ ಈ ಜ್ಯೋತಿಷಿಗಳು ಹೇಳಿದ ಭವಿಷ್ಯ ಬಿಡಿ, ಅವರದೇ ವರ್ತಮಾನನೇ ಸಂಕಷ್ಟಕ್ಕೀಡಾಗುತ್ತಿದೆ!
ಯಾಕೆ?
ಯಾಕೆಂದರೆ ಕಾಲಕ್ಕೆ ತಕ್ಕಂತೆ ಬದಲಾಗದಿರುವುದು. ತಾವು ಮಾಡರ್ನ್ ಎಂದು ತೋರಿಸಲು ಎದುರಿಗೆ ಕವಡೆ ಬದಲು ಲ್ಯಾಪ್ಟಾಪ್ ಇದೆ. ಏನು ಪ್ರಯೋಜನ? ಅದರೊಳಗೂ ಇರುವುದು ಅದೇ ೧೨ ಮನೆ ಕುಂಡಲಿ! ಇಡೀ ಊರಲ್ಲಿ ೧೨ ಮನೆ ಇದ್ದ ಕಾಲ ಹೋಗಿ ಒಂದು ಬೀದಿಯ ಒಂದು ಅಪಾರ್ಟ್ಮೆಂಟ್ನಲ್ಲಿ ನೂರೆಂಟು ಮನೆಗಳು ಆದರೂ ಜ್ಯೋತಿಷಿಗಳ ಕುಂಡಲಿ ಬದಲಾಗಲಿಲ್ಲ.
ಜ್ಯೋತಿಷ್ಯ ಪ್ರಾರಂಭವಾದ ಕಾಲದಲ್ಲಿ ಆಕಾಶ ಶುಭ್ರವಾಗಿತ್ತು, ನಕ್ಷತ್ರಗಳು, ಗ್ರಹಗಳು ತಮ್ಮ ಪ್ರಭಾವ ಭೂಮಿಯ ವ್ಯಕ್ತಿಯ ಮೇಲೆ ಬೀರುವಷ್ಟು ಶಕ್ತವಾಗಿದ್ದವು. ಈಗ ಶನಿ ಎಷ್ಟೇ ಪ್ರಯತ್ನ ಪಟ್ಟು ತನ್ನ ವಕ್ರ ದೃಷ್ಟಿ ಬೀರಿದರೂ, ಅದು ಭೂಮಿಯ ವಾತಾವರಣ ದಾಟಲು ಸಾಧ್ಯವೇ ಇಲ್ಲ. ಇನ್ನು ರಾಹು ಕೇತುಗಳ ವಿಷಯಬಿಡಿ.
ಕೋಟ್ಯಾಂತರ ಮೈಲು ದೂರದಲ್ಲಿರುವ ಗುರು, ರವಿ...ಗಳ ಪ್ರಭಾವಕ್ಕಿಂತ, ಆಕಾಶದ ತುಂಬಾ ತುಂಬಿರುವ ಟಿವಿ ಚಾನಲ್ಗಳ ತರಂಗಗಳ ಪ್ರಭಾವವೇ ಮಾನವರ ಮೇಲೆ ಜಾಸ್ತಿಯಾಗುವುದು.
ನೀವೇ ಯೋಚಿಸಿ- ೮ ವರ್ಷದ ಕಂದಮ್ಮ ಕ್ರೈಂ ಚಾನಲ್ ನೋಡಿ ಅದರ ಪ್ರಭಾವದಿಂದ ಆತ್ಮಹತ್ಯೆ ಮಾಡುವ ಚಾನ್ಸ್ ಜಾಸ್ತಿಯಾ, ದೂರದ ಮಂಗಳನ ದೃಷ್ಟಿ ಕಾರಣವಾ?
ಗರ್ಭಿಣಿ ಸ್ತ್ರೀ ಹಿಂದಿ ಟಿವಿ ಸೀರಿಯಲ್ ನೋಡುತ್ತಿದ್ದರೆ, ಅವಳಿಗೆ ಹುಟ್ಟಿದ ಮಕ್ಕಳಿಗೆ 3 ಸಲ ಹೇಳಿದರೆ ಮಾತ್ರ ಅರ್ಥವಾಗುವುದು ಯಾಕೆ?
ನಮ್ಮ ಸಂಶೋಧನೆ ಪ್ರಕಾರ- ಕನ್ಯಾ ರಾಶಿ ಹಾಗೂ ವೃಶ್ಚಿಕ ರಾಶಿಯ ನಡುವೆ ಇರುವ ತುಲಾ ರಾಶಿಯಲ್ಲೇ ಟಿವಿ ರಾಶಿ ವಕ್ಕರಿಸಿದೆ! ತಾನು ತಕ್ಕಡಿಯಂತೆ ನಿಷ್ಪಕ್ಷಪಾತ ಎಂದರೂ, ಅಕ್ಕಪಕ್ಕದ ಎರಡೂ ರಾಶಿಯ ಪ್ರಭಾವ ಟಿವಿ ರಾಶಿ ಮೇಲಿದೆ. "ಕನ್ಯಾ" ಪ್ರಭಾವದ ಕಾಲದಲ್ಲಿ ಹಗಲೂ-ರಾತ್ರಿ ಬಿಡದೇ ಕಾಡುತ್ತದೆ. ವೃಶ್ಚಿಕದ ಪ್ರಭಾವದಿಂದ ಕುಟುಕಲು ಪ್ರಾರಂಭಿಸಿದರೆ ಆತನ ವೃತ್ತಿ, ಜೀವನ ಸರ್ವನಾಶವಾದಂತೆ...
ಜ್ಯೋತಿಷಿಗಳಿಗೆ ಇದರ ಬಗ್ಗೆ ಇನ್ನಷ್ಟು ವಿವರ ಬೇಕೆಂದಿದ್ದರೆ ನಾವು ನಡೆಸಲಿರುವ "6 ತಿಂಗಳ ಟಿವಿ ಜ್ಯೋತಿಷ್ಯ" ಕ್ಲಾಸ್ಗೆ ಸೇರುವುದು ಒಳಿತು. ಟಿವಿ ರಾಶಿಯಲ್ಲದೇ ೧೨ ರಾಶಿಯೊಳಗೆ ಸೇರಿರುವ ಇತರ ರಾಶಿಗಳ ಬಗ್ಗೆ ನಾವು ಅಲ್ಲಿ ವಿವರವಾಗಿ ಹೇಳಲಿದ್ದೇವೆ. ಮತ್ತೆ ನಿಮ್ಮ ಟಿವಿದೆಶೆ(ಶುಕ್ರದೆಶೆ ಇದರೆದುರಿಗೆ ಏನೂ ಇಲ್ಲ) ತಿರುಗಲಿದೆ. ರೋಮರೋಮಕ್ಕೂ ಚಿನ್ನದ ಒಡವೆ ಹಾಕಬಹುದು!
ಜನಸಾಮಾನ್ಯರಿಗೆ- ೨೦೧೫ರ ನೂತನ ವರ್ಷದ ತಮ್ಮ ಭವಿಷ್ಯ ತಿಳಿಯಬೇಕೆಂದಿದ್ದರೆ ತಮ್ಮ ಮನೆಯಲ್ಲಿರುವ ಟಿವಿ ಯಾವುದು,ಎಷ್ಟು ಚಾನಲ್, ಸದಾ ನೋಡುತ್ತಿರುವ ಟಿವಿ ಚಾನಲ್ ಯಾವುದು ಎಂಬ ವಿವರದೊಂದಿಗೆ ೧೫೦೦೦ರೂ ಕಳುಹಿಸಬೇಕು:)
ಕೆಲವು ಫ್ರೀ ಸಲಹೆಗಳು :
-ನಿಮ್ಮ ಮಗ "ಫೇಸ್ಬುಕ್" ಬದಲು ಸ್ಕೂಲ್ಬುಕ್ ಓದಬೇಕೆಂದು ಇದ್ದರೆ "ಫೇಂ ಸೇಂ ಬೂಂ ಕುಂ" ಎಂದು ಒಂದು ಕಾಗದದಲ್ಲಿ ಬರೆದು ಹುಡುಗನ ತಲೆದಿಂಬಿನಡಿಯಲ್ಲಿಡಿ.
-ನಿಮ್ಮ ಮಗಳು "ವಾಟ್ಸ್ಅಪ್" ಬಿಟ್ಟು ಅಪ್-ಮ್ಮನ ಕಡೆ ಗಮನ ಕೊಡಬೇಕೆಂದಿದ್ದರೆ-ಒಂದು ಪಾತ್ರೆ ನೀರಿಗೆ ತುಳಸೀ ಎಲೆ ಹಾಕಿ "ವಾಟೀಸಾಯ ಸ್ವಾಹಾ, ಅಪಾಯ ಸ್ವಾಹಾ" ಎನ್ನುತ್ತಾ ಮಗಳ ಮೊಬೈಲನ್ನು ೧೮ ಬಾರಿ ಆ ನೀರಲ್ಲಿ ಮುಳುಗಿಸಿ ತೆಗೆಯಿರಿ.
ಸದ್ಯಕ್ಕೆ ಇಷ್ಟು ಸಾಕಲ್ವಾ..
-ಅಂಡಾಂಡಭಂಡಸ್ವಾಮಿ.
Comments
ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..
ನೀವು ಇಂತಹುದನ್ನೆಲ್ಲ ಹೇಳುತ್ತೀರಾ ? ತಡೆಯಿರಿ
ನೋಡಿ ಅದೇನೊ 'ಸಂಪದಾಯ ಸ್ವಾಹ ಸಂಪದಾಯ ಸ್ವಾಹ' ಎನ್ನುವ ಮಂತ್ರ ನಿಮ್ಮ ಮನೆಯೊಳಗಿನಿಂದ ಕೇಳುತ್ತಿದೆ,
ನಿಮ್ಮ ಕಂಪ್ಯೂಟರ್ ನೀರಿನ ಬಕೆಟ್ಟಿನಲ್ಲಿ ಅದ್ದಿ ತೆಗೆಯುತ್ತಿದ್ದಾರೆ ನಿಮ್ಮ ಮನೆಯವರು !
ಅದಕ್ಕೆ ನಿಮ್ಮ ಕಂಪ್ಯೂಟರ್ ಪದೆ ಪದೆ ಕೈಕೊಡುವುದು !
ನೀವು ಹಾಕಿರುವ ಜಾತಕದ ಪೋಟೋ ನೋಡಿದೆ, ಆದರೆ ನನಗೆ ಕುತೂಹಲ ಕೆರಳಿಸಿದ ಅಲ್ಲಿನ ’ಹ್ಯಾಂಡ್ ರೈಟಿಂಗ್’ ಎಲ್ಲ ಹಳೆಯ ಜಾತಕಗಳನ್ನು ಒಂದೇ ರೀತಿಯ ಕೈಬರಹ ಇರುತ್ತೆ, ಹೇಗೆ ಅಂತ ಅರ್ಥವಾಗಲಿಲ್ಲ
ಅದಿರಲಿ ಬಿಡಿ
ಹನ್ನೆರಡು ಮನೆಗಳಿರುತ್ತವೆ ಜಾತಕದಲ್ಲಿ , ಒಂಬತ್ತು ಗ್ರಹಗಳಿಗಾಯ್ತು, ಇನ್ನೊಂದು ನೀವು ಹೇಳಿದಂತೆ ಟೀವಿ ರಾಶಿ ಒಂದು ಸೇರಿದರೆ ಹತ್ತು ಮನೆ ಬರ್ತಿಯಾಯ್ತು, ಹಾಗೆ ಇನ್ನೆರಡು ಗ್ರಹ ಒಂದು ಭ್ರಹ್ಮಾಂಡ ಆಯಿತು, ಮತ್ತೊಂದು ? ಉಳಿದ ಎರಡು ಮನೆಯಲ್ಲಿ ಕೂಡಿಸಿ,
ಯಾರು ಆ ಮನೆಯಿಂದ ಈಮನೆ , ಈ ಮನೆಯಿಂದ ಆ ಮನೆ ಓಡಾಡಬೇಡಿ ಅಂತ ಕಟ್ಟುಪಾಡು ಮಾಡಿದರೆ, ನೆಮ್ಮದಿ ಅಲ್ಲವೆ ?
ಅವರರವರ ಮನೆಯಲ್ಲಿ ಅವರು ಬಾಗಿಲು ಹಾಕಿರುತ್ತಾರೆ ಯಾರಿಗೂ ತೊಂದರೆ ಇರಲ್ಲ :)
In reply to ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ.. by partha1059
ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..
>>ನಿಮ್ಮ ಕಂಪ್ಯೂಟರ್ ನೀರಿನ ಬಕೆಟ್ಟಿನಲ್ಲಿ ಅದ್ದಿ ತೆಗೆಯುತ್ತಿದ್ದಾರೆ ನಿಮ್ಮ ಮನೆಯವರು !
-ಕಂಪ್ಯೂಟರ್ ಕ್ಲೀನ್ ಮಾಡದೇ ಬಹಳ ದಿನವಾಯಿತು ಎಂದಿದ್ದೆ. ಸರ್ಫ್ ಹಾಕಿ ಕ್ಲೀನ್ ಮಾಡಿದ ಮೇಲೆ ಈಗ ಸ್ವಲ್ಪ ಫಾಸ್ಟ್ ಆಗಿ ಓಪನ್ ಆಗುತ್ತಿದೆ.
ಪಾರ್ಥರೆ, ನಮ್ಮದು ಐನ್ಸ್ಟೀನ್ ಕಾಲದ ಕಂಪ್ಯೂಟರ್...೧೦ ಗಂಟೆಗೆ ಆನ್ ಮಾಡಿದರೆ, ಎಲ್ಲಾ ಕಡತ ಹುಡುಕಿ,(ಬಹುಷಃ ಸಂಪದಿಗರೆಲ್ಲರ ಕಂಪ್ಯೂಟರ್ ಸಹ ಸರ್ಚ್ ಮಾಡಿ ಬರುತ್ತದೆ ಕಾಣುತ್ತದೆ) ವಿಂಡೋಸ್ ಓಪನ್ ಆಗುವಾಗ ೧೨ವರೆ ದಾಟಿರುತ್ತದೆ. ಕಾದು ಕಾದು ಅಲ್ಲೇ ನಿದ್ರೆ ಮಾಡಿರುವುದೇ ಜಾಸ್ತಿ. ಈದಿನ ೧೧-೪೫ಕ್ಕೇ ತೆರೆಯಿತು! ನಿಮ್ಮ ಮನೆಯವರಿಗೆ ಹೇಳಿ ನೀವು ಪ್ರಯತ್ನಿಸಿ ನೋಡಿ.
>>...ಅಲ್ಲಿನ ’ಹ್ಯಾಂಡ್ ರೈಟಿಂಗ್’ ಎಲ್ಲ ಹಳೆಯ ಜಾತಕಗಳನ್ನು ಒಂದೇ ರೀತಿಯ ಕೈಬರಹ ಇರುತ್ತೆ, ಹೇಗೆ ಅಂತ ಅರ್ಥವಾಗಲಿಲ್ಲ...
- ಎಲ್ಲಾ ಪಟಾಕಿಗಳು ಹೇಗೆ ಶಿವಕಾಶಿಯಲ್ಲಿ ತಯಾರಾಗುವುದೋ ಹಾಗೇ ಎಲ್ಲಾ ಜಾತಕಗಳೂ ನಮ್ಮ ಫ್ಯಾಕ್ಟರಿಯಲ್ಲೇ ತಯಾರಾಗುವುದು...
>>>ಈ ಮನೆಯಿಂದ ಆ ಮನೆ ಓಡಾಡಬೇಡಿ ಅಂತ ಕಟ್ಟುಪಾಡು ಮಾಡಿದರೆ, ನೆಮ್ಮದಿ ಅಲ್ಲವೆ ?
ಅವರರವರ ಮನೆಯಲ್ಲಿ ಅವರು ಬಾಗಿಲು ಹಾಕಿರುತ್ತಾರೆ ಯಾರಿಗೂ ತೊಂದರೆ ಇರಲ್ಲ :)
-ಯಾರಿಗೂ ತೊಂದರೆ ಇರದಿದ್ದರೆ ಜ್ಯೋತಿಷಿಗಳ ಗತಿ!?
ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..
ಗಣೇಶ ರವರಿಗೆ ವಂದನೆಗಳು
ಈ ಲೇಖನದಲ್ಲಿ ನಮ್ಮ ಈಗಿನ ಕನ್ನಡ ಚಾನಲ್ ಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮಗಳ ಕುರಿತು ವಿಡಂಬನಾತ್ಮಕ ರಿತಿಯಲ್ಲಿ ಬಹಳ ಚೆನ್ನಾಗಿ ನಿರೂಪಿಸಿದ್ದೀರಿ, ಈ ಕಾರ್ಯಕ್ರಮಗಳ ಹಾವಳಿಯಿಂದ ಹೊರ ಬರುವುದು ಹೇಗೆ? ಇದಕ್ಕೆ ನೋಡುಗರು ತಮಗೆ ತಾವೇ ಕಡಿವಾಣ ಹಾಕಿಕೊಳ್ಲಬೇಕು ಅಂದಾಗ ಮಾತ್ರ ಇವುಗಳ ಹಾವಳಿಯಿಂದ ಮುಕ್ತಿಯೇನೋ? ಸಕಾಲಿಕ ಸಮಸ್ಯೆಯನ್ನು ಎಲ್ಲರ ಗಮನಕ್ಕೆ ತರುವಲ್ಲಿ ಲೇಖನ ಯಶಸ್ವಿಯಾಗಿದೆ ಧನ್ಯವಾದಗಳು.
In reply to ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ.. by H A Patil
ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..
ಟಿವಿ ಭವಿಷ್ಯ ಜನರ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದೆ. ಒಬ್ಬೊಬ್ಬರೇ ಜ್ಯೋತಿಷಿಗಳ ಹುಳುಕು ಹೊರಬರುತ್ತಿದ್ದರೂ ಜನರ ಮೂಢನಂಬಿಕೆ ಹೋಗುವುದಿಲ್ಲ. ಅದನ್ನೇ ಈ ಟಿವಿ ಚಾನಲ್ಗಳು ಲಾಭ ಮಾಡಿಕೊಳ್ಳುತ್ತಿವೆ. ಮೊದಲು ಟಿವಿ ಚಾನಲ್ಗಳ ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು.
ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..
atuttama
ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..
ಗಣೇಶರವರೇ ಅನೇಕ ದಿನಗಳಿಂದ ನಾನು ಈ ಜೋತಿಷಿಗಳು ಹೇಳುವ ಭವಿಷ್ಯ ಹಾಗೂ ಅವರು ಹೇಳುವ ಅತಿರಂಜೀತ,ಕಪೋಲಕಲ್ಪಿತ ಜೋತಿಷ್ಯಗಾರರ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಟಿ.ವಿ.ಚಾನಲ್ ನವರ ಬಗ್ಗೆ ತಾತ್ಸಾಸಾರ ಭಾವನೆ ಕಾಡುತಿತ್ತು ಸಂಪದದಲ್ಲಿ ನೀವೊಬ್ಬರೇ ದೈರ್ಯವಾಗಿ ಬರೆದಿದ್ದಿರಿ ಸಂತೋಷದ ವಿಷಯವಾಗಿದೆ.ವೈಚಾರಿಕೆ,ಬ್ರಷ್ಟಚಾರ,ಪ್ರಜಾ ಪ್ರಭುತ್ವದ ಬಗ್ಗೆ ದೃಶ್ಯ ಮಾಧ್ಯಮದಲ್ಲಿ ಹಲವು ಚಾಲನಗಳು ಕನ್ನಡಲ್ಲಿ ಕೆಲವರು ಉತ್ತಮ ಶಿರೋನಾಮೆಯಲ್ಲಿ ವಾರ್ತೆ ಹಾಗೂ ಇತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವವರೇ ಜ್ಯೋತಿಷಿಗಳ ಕಾರ್ಯಕ್ರಮವನ್ನು ಇನ್ನಾದರೂ ನಿಲ್ಲಿಸಲಿ ಉತ್ತಮವಾಗಿ ಬರೆದಿರುವದಕ್ಕೆ ಧನ್ಯವಾದಗಳು
In reply to ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ.. by Amaresh patil
ಉ: ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..
ಅಮರೇಶ ಪಾಟೀಲರೆ,
ಹಿಂದೆ ಕ್ರೈಂ ಚಾನಲ್ಗಳು ರಾತ್ರಿಹೊತ್ತು ಪ್ರಸಾರವಾಗುವಾಗ ನಾಲ್ಕು ದಿನದ ನಂತರ ಜನರಿಗೆ ಬೋರಾಗಿ ನಿಲ್ಲಬಹುದು ಅಂತ ತಿಳಕೊಂಡೆ. ಆದರೆ ಅದನ್ನೇ ವೈಭವೀಕರಿಸಿ, ಕೊನೆಯಲ್ಲಿ ತಪ್ಪು ಎಂದು ಒಂದೇ ವಾಕ್ಯದಲ್ಲಿ ವಿಚಿತ್ರ ಕೆಟ್ಟ ಸ್ವರದಲ್ಲಿ , ವಿಚಿತ್ರ ವೇಷ ಧರಿಸಿ, ಹೇಳುವ ನಿರೂಪಕರು, ಎಲ್ಲಾ ಚಾನಲ್ಗಳಲ್ಲೂ ಪ್ರತ್ಯಕ್ಷರಾದರು. ಹಾಗೇ ಈ ಜ್ಯೋತಿಷಿಗಳೂ ಸಹ ಪ್ರತೀ ಚಾನಲ್ನಲ್ಲೂ...ಪ್ರತೀ ವಿಷಯದ ಬಗ್ಗೆಯೂ ಚರ್ಚಿಸುವಷ್ಟು ಮಹತ್ವದ ವ್ಯಕ್ತಿಗಳಾದರು! ತೀರಾ ಅತಿಯಾಯಿತು..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.