ಕ್ಷಮಿಸಿ ... ದೇವರಾಗುವುದಿರಲೀ ... ನಮ್ಮಿಂದ ಕನಿಷ್ಠ ಮನುಷ್ಯರಾಗಿರುವುದಕ್ಕೂ ಸಾಧ್ಯವಾಗುತ್ತಿಲ್ಲ...!
ಕಳೆದ ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಆಸಕ್ತರಿಗೆ ತಮ್ಮ ಆಲೋಚನೆ, ಅಭಿಪ್ರಾಯ ಹಾಗೂ ತಮ್ಮೆ ಕುಂಟು ಬರಹಗಳಿಗೆ ವೇದಿಕೆ ಯಾಗಿರು ಈ ಸಂಪದದಲ್ಲಿ ನನ್ನ ಪ್ರಥಮ ಬರಹ
’ದೇವರು’ ...ಬುದ್ಧಿ ಮೊರೆತಿರದ ಪುಟ್ಟ ಬಾಲಕನೊರ್ವ ತಾನು ಸಾಕ್ಷಿಯಾದ ಚಿತ್ರಣವನ್ನ ಕಂಡು ತಾನೂ ಡಾಕ್ಟರ್ ಅಂಕಲ್ ತರ ದೇವರಾಗಬೇಕು ಎಂದು ಬಯಸುವ ಕಥೆ. ಕಥೆಯ ರೂಪು ಕಾಲ್ಪನಿಕವಾದ್ರೂ ಅದರ ಹಿಂದಿದ್ದ ಭಾವ ನನ್ನದೂ ಕೂಡ...
ವೈದ್ಯರಂಗದಲ್ಲಿ ಕಣ್ಬಿಟ್ಟು ಆಗಲೇ 7 ವರ್ಷಗಳಾಯ್ತು. ನಾಲ್ಕೂವರೆ ವರ್ಷಗಳ ವ್ಯಾಸಂಗದ ನಂತರ ಆಲಸಿ ವಿದ್ಯಾರ್ಥಿಯಿಂದ ಪಾಲಿಸಿ ವೃತಿಪರನಾಗಿ ಮಾರ್ಪಡಾಗುವಲ್ಲಿ ಅಂತರಂಗದೊಂದಿಗಿನ ಹೋರಾಟ ನಿರಂತರವಾಗಿ ನಡಿತಿದೆ. ಇಂತಹ ಸಂದರ್ಭದಲ್ಲಿ, ಕೋಟಿಗಟ್ಟಲೇ ಸಂಭಾವನೆ ಪಡೆದು ಆಮೀರ್ ಖಾನ್ ನಡೆಸಿ ಕೊಟ್ಟಂತಹ ಸತ್ಯ ಮೇವ ಜಯತೆ ಕಾರ್ಯಕ್ರಮದಿಂದ ಶುರುವಿಟ್ಟು ಟಿ.ವಿ.,ರೇಡಿಯೋ,ಪತ್ರಿಕೆ ಹೀಗೆ ಎಲ್ಲಾ ಮಾದ್ಯಮದಲ್ಲಿ ಕೊನೆಗೆ ಸಿಕ್ಕ ಹಿತೈಷಿಗಳು , ದೂರದ ಬಂಧುಗಳು , ಅಪರೂಪದ ದರ್ಜಿ,ಕ್ಷೌರಿಕ ಕೂಡ ಈ ಬಗ್ಗೆ ಮಾತು ಶುರು ಮಾಡಿದಾಗ ವ್ಯವಸ್ಥೆಯಲ್ಲಿಯೇ ದೋಷವಿರುವ ಬಗ್ಗೆ ಅನುಮಾನ
ಕಾಡಿದ್ದು ನಿಜ... ಆದರೆ , ಇತ್ತೀಚೆಗೆ , ಕಡಿಮೆ ಬೆಲೆಯ ಔಷಧಿಯನ್ನ ಗೊತ್ತು ಮಾಡಲು ಮೊಬೈಲ್ ಪೋನ್ ಗಳಲ್ಲಿ ಅಪ್ಲಿಕೇಷನ್ ಗಳು ಬಂದಾಗ ದಿಗ್ಭ್ರಮೆಯಾಯ್ತು...
ಹಣ ಕೀಳುತ್ತಾರೆ , ಸುಮ್ಮನೆ ಲ್ಯಾಬ್ ಪರೀಕ್ಷೆ ಬರೆಯುತ್ತಾರೆ , ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆ ಮಾಡುತ್ತಾರೆ... ಎಂಬಿತ್ಯಾದಿ ನಿಮ್ಮ ಯಾವುದೇ ದೂರಿಗೆ ಸಮಾಜಾಯಿಷಿ ನೀಡುವ ಪ್ರಯತ್ನ ನನ್ನದಲ್ಲ... ನನ್ನದು ವಾಸ್ತವಾಂಶದ ಬಗೆಗೆ ಬೆಳಕು ಚೆಲ್ಲುವ ಆತುರವಷ್ಟೇ...
ತೀರಾ ಸಾಮಾನ್ಯವಾಗಿ ಬರುವ ಶೀತ-ಕೆಮ್ಮು ಕೂಡ ಕೊಡುವ ಯಾತನೆ ಅನುಭವಿಸುತ್ತಿರುವಾಗಷ್ಟೇ ... ನಿಮ್ಮ ನೋವು ಕಮ್ಮಿ ಆದ್ರೆ ಸಾಕು ಅಂತ ಬಡಬಡಿಸುವಾಗ ನಿಮಗೆ ಹಣ ಮುಖ್ಯವಾಗುವುದಿಲ್ಲ ... ನಮ್ಮ ಬಳಿಗೆ ಬಂದು ’ಸ್ಟ್ರಾಂಗ್ ಮಾತ್ರೆ ಕೊಡಿ ಡಾಕ್ಟ್ರೆ ...’ ಅಂತಲೇ ನೀವು ಮಾತು ಮುಗಿಸುತ್ತೀರಿ... ಮಕ್ಕಳ ಆರೋಗ್ಯದಲ್ಲೂ ನೀವು ಜಿಪುಣರಲ್ಲ... ನಿಮ್ಮ ಹಣಕಾಸು ಬಿಗಡಾಯಿಸುವುದು ಮನೆಯಲ್ಲಿರುವ ಹಿರಿಯರು ಯಾರದರೂ ಖಾಯಿಲೆ ಬಿದ್ದಾಗ; ಆಗ್ತಾ ಇರೋ ವಯಸ್ಸಿಂದ ಅಂತ ಅವ್ರೂ ಕೆಲ ದಿವಸ ಹೇಳಿರಲ್ಲ... ಅವ್ರೇಳಿದ್ಮೆಲೂ ನಿಮ್ಗೆ ಸಮಯ ಸಿಗೋಕೆ ಇನ್ನೊಂದಷ್ಟು ದಿನ ಆಗುತ್ತೆ. ಅಲ್ಲಿವರೆಗೆ ಯಾವತ್ತೂ ಆಸ್ಪತ್ರೆ ಕಂಡಿರದ ಅವರನ್ನ ಕರೆತಂದಾಗ ಅವರ ಸದ್ಯದ ದೇಹಸ್ಥಿತಿಯ ಬಗ್ಗೆ ಕೂಲಂಕುಷವಾಗಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿರತ್ತೆ. ಆ ಪರೀಕ್ಷೆಯ ಫಲಿತಾಂಶ ನಾರ್ಮಲ್ ಬರೋದೆ ಇಲ್ಲಿ ಸಮಸ್ಯೆ... ಕೊಡುವ ಔಷಧಿಯಿಂದ ತಿಳಿಯದ ದೇಹಸ್ಥಿತಿ ಮತ್ತಷ್ಟು ಹದಗೆಟ್ಟರೆ ; ನಿಮ್ಗೆ ಖರ್ಚು ಆಗುತ್ತೆ ಅಂತ ಪರೀಕ್ಷೆ ಮಾಡ್ಸಿರಲಿಲ್ಲ’ ಅಂತ ಸಮಾಜಾಯಿಷಿ ಕೊಟ್ಟರೆ ಕೇಳುವ;ಅರ್ಧೈಸುವ ವ್ಯವಧಾನ ನಿಮ್ಮಲ್ಲಿದಿಯಾ?
ವೇಗದ ಬದುಕಿಗೆ ಅಡಿಕ್ಟ್ ಆಗಿರೋ ನಿಮ್ಗೆ ಎಲ್ಲ ಕಡೆ ಪ್ರೈವಸಿ ಬೇಕು... ಬಸ್ಸಲ್ಲಿ ಹೋಗೊವಾಗಾಗ್ಲಿ ಯಾವುದೆ ಸಾರ್ವಜನಿಕ ಸ್ಥಳದಲ್ಲೇ ಆಗ್ಲಿ ಒಬ್ಬರೇ ಇರೋದಕ್ಕೆ ಬಯಸ್ತೀರಿ... ಆಸ್ಪತ್ರೆಲೀ ಉಳಿಬೇಕಾದ ಸಂದರ್ಭ ಬಂದಾಗ್ಲೂ ನಿಮ್ಗೆ ಆ ಪ್ರೈವಸಿ ಬೇಕು. ಜನರಲ್ ವಾರ್ಡ್ ಬದಲಿಗೆ ಸಿಂಗಲ್ ರೂಂ ಬೇಕು ಅಂತ್ತೀರಿ. ಖಾಯಿಲೆಯವರ ಜೊತೆ ಇರಲೇಬೇಕಾದ ಕರ್ಮಕ್ಕೆ ಅಂತ ಇರೋರ ಸಮಯ ಹೋಗಲು ರೂಂ ನಲ್ಲೊಂದು ಟಿ.ವಿ., ಸೇವೆಗೆ ದಾದಿ, ಶುಚಿಗೆ ಆಯಾ, ಆಸ್ಪತ್ರೆಗೂ ಶೃಂಗರಿಸಿ ಬರೋರಿಗೆ ಸೆಕ್ಯುರಿಟಿ... ಇವೆಲ್ಲದರ ಪರಿಪಾಲನೆಗೆ ನೀವು ಖರ್ಚು ಮಾಡುತ್ತೀರೇ ಹೊರತು ವಾರ್ಡ್ ನ ವ್ಯತ್ಯಾಸದಲ್ಲಿ ಶಸ್ತ್ರಚಿಕಿತ್ಸೆಯ ಅಥವಾ ವೈದ್ಯರ ಬಾಬ್ತಿನಲ್ಲಿ ಹೆಚ್ಚಿನ ವ್ಯತ್ಯಾಸ ಇರೋದಿಲ್ಲ. ನಿಮ್ಮ ಕಂಪರ್ಟ್ ಗಾಗಿ ನೀವೇ ಸೃಷ್ಟಿಸಿದ ಅನಿವಾರ್ಯತೆಗೆ ಸ್ಪಂದಿಸಿದ್ದರ ಪರಿಣಾಮ ಇವತ್ತಿನ ವ್ಯವಸ್ಥೆ. ಇಷ್ಟೇಲ್ಲದರ ನಂತರ ಅರ್ಧ ಗಂಟೆಯ ಆಪರೇಷನ್ , 6 ದಿನದ ಸ್ಟೇ, ಅದಕ್ಕೆ ಇಷ್ಟು ಖರ್ಚು, ಬಡವರಿಗೆ ಆರೋಗ್ಯ ಗಗನ ಕುಸುಮವೇ ಸರಿ.. ಅಂತ ಷರಾ ಬರೀತ್ತೀರಿ.
ವೈದ್ಯ ವ್ಯವಸ್ಥೆಯಲ್ಲಿನ ಅನಾರೋಗ್ಯದ ಬಗ್ಗೆ ಮಾತನಾಡುವ ನಿಮಗೆ ನಿಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಇದೆ. ಬೆಳಗ್ಗೆದ್ದು ವ್ಯಾಯಾಮ , ಸಂಜೆ ವಾಕಿಂಗ್ ತಪ್ಪಿಸದೇ ಸಬೂಬು ಕೊಡದೇ ವಾರದಲ್ಲಿ ಎಷ್ಟು ದಿನ ಮಾಡುತ್ತೀರಿ..? ಧೂಮಪಾನ , ಮದ್ಯಪಾನ ಆರೋಗ್ಯಕ್ಕೆ ಒಳ್ಳೆದಲ್ಲ ಅಂತ ಗೊತ್ತಿದ್ರೂ ಸೇವಿಸ್ತೀರಿ. ಇನ್ನು ಹಿತ-ಮಿತ ಆಹಾರದ ಬಗ್ಗೆ ನಿಮ್ಮ ದೃಷ್ಟಿಕೋನವೇ ಬೇರೆ ... ನಿಮ್ಮ ಕಪಾಟು ಅಥವಾ ಡಬ್ಬಿ ತೆಗೆದು ನೋಡಿ ... ಇವರೆಗೆ ವೈದ್ಯರು ಕೊಟ್ಟಿರೋ ಔಷಧಿಯನ್ನ ನೀವು ಪೂರ್ತಿಯಾಗಿ ತಗೋಂಡಿದೀರಾ...? ಕೊನೆಯ ಪಕ್ಷ ನಿಮ್ಮ ಮನೆಯ ನೀರಿನ ಪಿಲ್ಟರ್ ಬದಲಾಯಿಸಿ ಎಷ್ಟು ತಿಂಗಳು ಊಂ ವರ್ಷಗಳಾಗಿವೆ...?
ನಿಮ್ಗೆ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಗೋತ್ತಾಗಿ ನಮ್ಮತ್ರ ಬರೋ ಹೊತ್ತಿಗೆ ವಾರ ಕಳೆದಿರತ್ತೆ ... ಅಷ್ಟರಲ್ಲಿ ಮನೆಯ ಕಷಾಯ, ಮನೇಲಿದ್ದ ಯಾವುದೋ ಹೋದ್ಸಾರಿ ಮಾತ್ರೆ, ಹತ್ತಿರದ ಮೆಡಿಕಲ್ ಎಲ್ಲಾ ಒಂದ್ಸಾರಿ ಮುಗ್ಸಿರ್ತೀರಾ.. ಅದೊಂದು ಹೊತ್ತಲ್ಲಿ ಸಹದ್ಯೋಗಿಯೊಬ್ರು ತಾವು ಗಮನಿಸಿದ ಸರಿಸುಮಾರು ನಿಮ್ಮದೇ ಲಕ್ಷಣವಿದ್ದು , ಪತ್ತೆಯಾದ ಖಾಯಿಲೆಯೊಂದರ ಕಥೆಯೊಂದನ್ನ ಪ್ರಾಸ್ತಾಪಿಸಿ ತಣ್ಣಗೆ ಎದ್ದು ಹೋಗಿರ್ತಾರೆ. ನಿಮ್ಮ ಅನುಮಾನ ಪರಿಯಾರಕ್ಕಾಗಿ ದೌಡಾಯಿಸ್ತೀರಾ ... ಆ ಹೊತ್ತಲ್ಲಿ ... ಓದಿಕೊಂಡ ವಿದ್ಯೆ ಹಾಗೂ ಆದ ಅನುಭವದಿಂದ ನಾವು ನೀಡುವ ಯಾವುದೇ ಸಲಹೆ ಬಗ್ಗೆ ನಿಮಗೆ ನಂಬಿಕ ಬರುವುದಿಲ್ಲ... (ಆ ಪರೀಕ್ಷೆಯ ಫಲಿತಾಂಶದ ಹೊರತು...)
ಮಾರುಕಟ್ಟೆಯಲ್ಲಿರುವ ಔಷಧಗಳ ಬೆಲೆಯ ಬಗ್ಗೆ ಚರ್ಚಿಸುವ ಮೊದಲು ದಿನನಿತ್ಯ ಉಪಯೋಗಿಸೋ ಟೂತ್ ಪೇಸ್ಟ್ , ಸೋಪ್ , ಶ್ಯಾಂಪು ಎಲ್ಲದರಲ್ಲಿ ಮುಖ್ಯವಾಗಿ ಇರುವ ಅಂಶ ಒಂದೇ... ಆದರೂ ಅಷ್ಟೊಂದು ವಿಧ ಎಲ್ಲಿಂದ... ಅನ್ನೋ ಮಾಹಿತಿ ಕಲೆ ಹಾಕಿ...
ನಿಮ್ಮ ಎಲ್ಲಾ ಎಡಬಿಡಂಗಿತನವನ್ನ ಸಹಿಸಿ, ನಿಮ್ಮ ಆರೋಗ್ಯ ಸಮಸ್ಯೆಯಲ್ಲಿ ನೈಜಾಂಶವನ್ನ ಹುಡುಕಿ , ಅದರ ಗಂಭೀರತೆಯನ್ನ ಅಂದಾಜಿಸಿ, ಅದನ್ನ ನಿಮಗೆ ಅರ್ಥೈಸಿ ನಿಮ್ಮ ಸಮಸ್ಯೆಗೊಂದು ಪರಿಹಾರ ಕೊಡುವ ಕೆಲಸ ತೀರಾ ಸಾಮಾನ್ಯದ್ದು ಅನ್ನೋ ಮನೋಭಾವಕ್ಕೆ ಬರಬೇಡಿ... ನಿಮ್ಮದೇ ಶೌಚವನ್ನ ಶುಚಿ ಮಾಡಲು ಹೇಸಿಗೆ ಪಡುವ .. ವರ್ಷಕ್ಕೆ ಒಮ್ಮೆ ಆಸ್ಪತ್ರೆಗೆ ಬರಲು ಭಯ ಪಡುವ ... ಅಲ್ಲಿನ ಅಸಹ್ಯ ಡೆಂಟಾಲ್ ವಾಸನೆಗೆ ಮೂಗು ಮುರಿವ ನೀವು ಅದೇ ವಾತಾವರಣದಲ್ಲಿ ಹಗಲಿರುಳು ನಿಮ್ಮ ಆರೋಗ್ಯದ ಪಾಲನೆಗಾಗಿ ಶ್ರಮಿಸುತ್ತಿರುವಾಗ ಪ್ರತಿಕ್ಷಣ ರೋಗವೊಂದಕ್ಕೆ ತೆರೆದುಕೊಳ್ಳುವ ವೈದ್ಯರ ಬಗ್ಗೆ ಅವರ ಕೆಲಸದ ಬಗ್ಗೆ ನಿಮಗೆ ಗೌರವವಿಲ್ಲದಿದ್ದರೂ.. ನಿಮಗಾದ ಒಂದು ಅನುಭವದಲ್ಲಿ ... ಒಂದು ಸಾಲಿನಲ್ಲಿ ಷರಾ ಬರೆದುಬೀಡಬೇಡಿ... ನಿಮ್ಮ ದೂರುಗಳ ಸಾವಿರ ಸಾವಿರ ಪಟ್ಟು ನಮ್ಮ ಇರುವಿಕೆಯನ್ನ ನಿತ್ಯ ನೆನೆಯುತ್ತಿದ್ದಾರೆ... ಮಾದ್ಯಮಕ್ಕೆ ಅವರೂ ತೆರೆದುಕೊಳ್ಳಬೇಕಷ್ಟೇ..
ಕಳೆದ ತಿಂಗಳು ರಾಜ್ಯದ ವೈದ್ಯಾಧಿಕಾರಿಗಳೆಲ್ಲಾ ತಮ್ಮ ಹಲವಾರು ಬೇಡಿಕೆಗಳನ್ನ ಮುಂದಿಟ್ಟು ಮುಷ್ಕರ ನಡೆಸಿದ ಸಮಯದಲ್ಲಿ.... ಅಪಘಾತ ಅಥವಾ ಹೊಡೆದಾಟದ ಪ್ರಕರಣದ ರೋಗಿಯ ಚಿಕಿತ್ಸೆಗೆಂದು ಬಂದು ತಮ್ಮ ಕೇಸ್ ನ ಸಲುವಾಗಿ ವೈದ್ಯರಿಗೆ ಕಿರಿಕಿರಿ ಮಾಡುವ ಬೀದಿ ಬೀದಿ ಗೆ ಹತ್ತರಂತೆ ಕಟ್ಟಿಕೊಂಡಿರುವ ಸಂಘ ಸಂಸ್ಥೆಯಿಂದ ಹಿಡಿದು ಉತ್ತಮ ಸಮಾಜಕ್ಕಾಗಿ ಅನ್ನೊ ಹಣೆ ಪಟ್ಞಿ ಹೊತ್ತಿರುವ ಮಾಧ್ಯಮ ಗಳವರೆಗೆ ಒಂದೇ ಒಂದು ಬೆಂಬಲದ ಮಾತು...??!
ಯಾಕೆ? ಔಷಧಿ ಪೂರೈಕೆ,ಖಾಲಿ ಉದ್ಯೋಗ ಭರ್ತಿ, ದಾದಿಯರ ನೇಮಕ, ತುರ್ತು ಚಿಕಿತ್ಸೆಗೆಂದು ವಿಶೇಷ ವೈದ್ಯರ ನೇಮಕ ಮುಂತಾದ ವೈದ್ಯರ ಬೇಡಿಕೆಗಳು ಆರೋಗ್ಯವಂತ ಸಮಾಜವನ್ನ ಕಾಣುವ ಸಲುವಾಗೇ ಇತ್ತಲ್ವೇ...??!
ಹೌದು ನಿಮ್ಮ ಆರೋಗ್ಯದ ಸಮಸ್ಯೆ ನಿಮಗೆ ಬೆಟ್ಟದಂತಹದ್ದೇ... ಆದರೆ, ನಮಗದರ ಪರಿಹಾರ ವೃತ್ತಿ... ನಿಮ್ಮ ತರಹದ ಜೀವಗಳೇ ನಮ್ಮ ಸಮಯ ಬೇಡುತ್ತೀರುವುದು ಅನ್ನುವುದರ ಅರಿವು ನಿಮಗಿರಲಿ...
ಕಣ್ಣೆದುರಿಗೆ ಜೀವ ಸಾಯುತ್ತಿರುವಾಗ ... ಎದುರಿಗಿರುವ ರೋಗಿ ಕೆಲ ಕ್ಷಣದಲ್ಲಿ ಸಾಯಿತ್ತಾನೆಂದು ಅರಿವಿಗೆ ಬಂದಾಗ ಏನೂ ಮಾಡಲಾಗದೇ ಅಸಾಯಕರಾಗುವ ನಮ್ಮಲ್ಲಿ ಬಾವುಕತೆ ಉಳಿದಿಲ್ಲ... ನಿಮ್ಮನ್ನ ಬಾಧಿಸುತ್ತಿರುವ ನೋವನ್ನ ಕಡಿಮೆ ಮಾಡುವ ಜವಾಬ್ದಾರಿ ಯ ನಿಮಿತ್ತವಾಗಿ ನಾವಿದ್ದೇವೆ ಹೊರತು ಸಾವನ್ನು ತಡೆಯುವ ಶಕ್ತಿ ನಮ್ಮಲ್ಲಿಲ್ಲ...
ಕ್ಷಮಿಸಿ… ದೇವರಾಗುವುದಿರಲಿ... ಕನಿಷ್ಠ ಮನುಷ್ಯರಾಗಿರುವುದೂ ನಮ್ಮಿಂದ ಸಾಧ್ಯವಾಗುತ್ತಿಲ್ಲ...!
WE ARE WORKING JUST LIKE A MACHINE…!
- ಕೃ. ವಿಶಾಂತ್ ರಾವ್
Comments
ಉ: ಕ್ಷಮಿಸಿ ... ದೇವರಾಗುವುದಿರಲೀ ... ನಮ್ಮಿಂದ ಕನಿಷ್ಠ...
ಸುಂದರ ವಿಚಾರ!