ಮೈಸೂರು ದಸರಾ
ಮಳೆ ನಿಂತು ಚಳಿ ಹರಡುವ ಮುಂಚೆ ಮೈಸೂರಿನ ತುಂಬ ಸಡಗರದ ಸಮಯ. ಸರ್ಕಾರಿ ಭಾಷೆಯಲ್ಲಿ ಈ ಸಮಯಕ್ಕೆ ಮಧ್ಯಂತರ ರಜೆ ಎನ್ನುತ್ತಾರಾದರೂ ನಮಗೆಲ್ಲಾ ಅದು ದಸರಾ ರಜೆ. ಚಳಿಗೆ ಚಾಮುಂಡಿ ಬೆಟ್ಟವೇ ಮೋಡದ ಹೊದಿಕೆ ಹೊದ್ದು ಬೆಚ್ಚಗೆ ಮಲಗಿರುವ ಸಮಯ. ಇಬ್ಬನಿಯೂ ಸಹ ಹೂವನ್ನು ತಬ್ಬಿ ಕನಸು ಕಾಣುತ್ತಿರುವ ಗಳಿಗೆ. ಇಂತಹ ಸುಂದರ ಹೊತ್ತಿನಲ್ಲಿ....
"ಏಳೋ ಸೋಂಭೇರಿ, ಬಿಟ್ರೆ ದಿನಾ ಪೂರ್ತಿ ಮಲಗೇ ಇರ್ತೀಯಾ" ಎನ್ನುವ ಅಮ್ಮನ ಗೊಣಗಾಟಕ್ಕೆ ಎದ್ದಾಯ್ತು. ಅಮ್ಮನ ಅಣತಿಯಂತೆ ಹಾಲು ತರಲು ಸೈಕಲ್ ಹತ್ತಿ ಚಾಮುಂಡಿ ಪುರಂ ಕಡೆಗೆ ಹೊರಟೆ. ಬೆಟ್ಟದ ತಪ್ಪಲಿನಲ್ಲಿ ಸುಂದರವಾಗಿ ಬೆಳೆದು ನಿಂತ ವೀಳ್ಯದೆಲೆ ತೋಟ. ಹಿಂದೆಯೇ ನಾಚಿ ಮುಸುಕು ಹೊದ್ದ ನಾರಿಯಂತೆ ಬೆಟ್ಟ. ರಾತ್ರಿ ನಕ್ಕವಳು ಇವಳೇನಾ ಎಂದು ಭ್ರಮಿಸುವಂತೆ ಕಣ್ಮರೆಯಾದ 'ಸುಸ್ವಾಗತ' ಎಂಬ ದೀಪಗಳು. ಇವೆಲ್ಲವನ್ನೂ ನಿರ್ಲಿಪ್ತ ಭಾವದಿಂದ ನೋಡುತ್ತಲೇ ಸೈಕಲ್ಲಿನಿಂದ ಭರ್ರೆಂದು ಮನೆಯ ಕಡೆಗಿಳಿದೆ.
ಬಿಸಿ ಬಿಸಿ ಹಂಡೆಯ ಸುಡುನೀರನ್ನು ಮೈಯ್ಯಿಗೆ ಹುಯ್ದು, ಇದ್ದ ಸಾವಿರ ದೇವರುಗಳ ಫೋಟೋಗಳಿಗೆ ಕೈ ಮುಗಿದು ಬಂದ ನನಗೆ ಕಾದದ್ದಾದರೂ ಎಂಥ ಶಿಕ್ಷೆ! ಹರ ಹರಾ!! ಉಪ್ಪಿಟ್ಟು! ನನ್ನ ಸಾತ್ವಿಕ ಸಿಟ್ಟಿಗೆ ಅಮ್ಮನ ಉತ್ತರ ಒಂದೇ "ಬೇಕಿದ್ರೆ ಯಾವಳಾದ್ರು ಹೋಟೇಲವರ ಮಗಳನ್ನು ಮದುವೆ ಮಾಡ್ಕೋ, ಅವಳು ಮಾಡಿ ಹಾಕ್ತಾಳೆ. ಇವಾಗೆ ಸುಮ್ಮನೆ ತಿನ್ನು" ಅಂತಾ. ಬೇಕಿತ್ತಾ ನನಗೆ ಎಂದು ಗೊಣಗುತ್ತಲೇ ಮುಗಿಸಿ ಎದ್ದೆ.
ಕಾಲೇಜು ಇದ್ರೆ ಬಂಕು ಹೊಡೀಬಹುದು. ಇಲ್ಲದೇ ಇದ್ರೆ ಬಂಕು ಹೊಡೆಯೋದಾದರೂ ಹೇಗೆ? ಈ ರೀತಿಯ ವಿಚಿತ್ರ ಯಕ್ಷಪ್ರಶ್ನೆಗಳ ಆಗರ ಈ ದಸರಾ ರಜೆ. "ಅಮ್ಮಾ, ಆದ್ರೆ ಅಜ್ಜಿ ಮನೆ ಕಡೆಗೆ ಹೋಗಿ ಬರ್ತೀನಿ. ಸಂಜೆ ಲೇಟಾಗುತ್ತೆ' ಎಂದು ಹೇಳುತ್ತಲೇ ನರಸಿಂಹರಾಜ ಮೊಹಲ್ಲಾ ಕಡೆ ಇದ್ದ ಅಜ್ಜಿ ಮನೆಗೆನ್ನುವಂತೆ ಹೊರಟೆ.
ರಾಮಾನುಜ ರಸ್ತೆಯ ಕಡೆಯ ಭಾಗವಾದ ಅಗ್ರಹಾರ ದಾಟುವಲ್ಲಿ ಜನರ ಗಿಜಿಗಿಜಿ, ಅಲ್ಲಿ ಇದ್ದ ಒಬ್ಬ ಸ್ನೇಹಿತ ಬೆಂಗಳೂರಿಗೆ ಹೋಗಿದ್ದಾನಂತೆ. ಇನ್ನೊಬ್ಬನ ಮನೆಗೆ ಹೋಗಿ ಕರೆದರೆ ಹೊರಗೆ ಬಂದವಳು ಅವನಕ್ಕ. "ಲೋ, ಅವನೂ ನಿನ್ ಥರಾ ಬೆಳಿಗ್ಗೆನೇ ಎದ್ದು ಎಲ್ಲೋ ಪೋಲಿ ಸುತ್ತೋಕೆ ಹೋಗಿದ್ದಾನೆ. ನಿಂಗೆ ಎಲ್ಲಾದ್ರೂ ಸಿಕ್ರೆ ಕರ್ಕೊಂಡು ಬಾ' ಎಂದಳು. ಥತ್ತೇರಿ. ಇವತ್ಯಾಕೋ ದಿನಾ ಸರಿ ಇಲ್ಲಾ ಎಂದು ಈ ಸಲ ನಿಜವಾಗಿ ಅಜ್ಜಿ ಮನೆ ಕಡೆಗೆ ಹೊರಟೆ.
ಅಲ್ಲಿಂದ ಅರಮನೆಯ ಕಡೆಗೆ ಬಂದರೆ ವಿಪರೀತ ಜನ. ಟೆಂಪೋ, ಬಸ್ಸು, ವ್ಯಾನುಗಳಲ್ಲಿ ಬಂದಿಳಿದ ಹಿಂಡು ಹಿಂಡು ಟೋರಿಸ್ಟುಗಳು. ಹಿಂದಿ, ತೆಲುಗು ಮತ್ಯಾವುದೋ ತಿಳಿಯದ ಭಾಷೆ ಮಾತನಾಡುವ ಜನ. ಇವರಿಗೆ ಗೊಂಬೆ, ಸೌತೆಕಾಯಿ ಹಾಗೂ ಏನು ಸಿಕ್ಕರೆ ಅದು ಮಾರಲು ತಯ್ಯಾರಾಗಿರುವ ಕನ್ನಡದ ಹುಡುಗರು. ಅಲ್ಲಲ್ಲಿ ನೆಲದ ಮೇಲೆ ಜರ್ಕಿನ್ನುಗಳ ಗುಡ್ಡೆ ಹಾಕಿ ಕುಳಿತ ಟಿಬೆಟನ್ನರು. ಈ ಸಂತೆಯ ಮಧ್ಯೆ ಕಣ್ಮರೆಯಾದ ಅರಮನೆ. ಇವೆಲ್ಲವನ್ನೂ ದಾಟಿ ಬರುತ್ತಿದ್ದಂತೆ ಪ್ರಾಯಶಃ ಜೂ ಕಡೆಗೆಂಬಂತೆ ಹೊರಟ ಕಾಲೇಜು ಹುಡುಗಿಯರು ತುಂಬಿದ್ದ ಕೇರಳದ ಬಸ್ಸೊಂದನ್ನು ನೋಡಿ ನನ್ನ ಸೈಕಲ್ಲು ಆ ಕಡೆಗೆ ಎಳೆಯತೊಡಗಿತು. ಹಸಿದಿದ್ದ ಹೊಟ್ಟೆ ಹ್ಯಾಂಡಲನ್ನು ಮೊಹಲ್ಲಾ ಕಡೆಗೇ ಓಡಿಸಿತು.
ತಾತನವರ ಮನೆಯದು ವಿಶಾಲವಾದ ಕಾಂಪೌಂಡು. ಫಲವತ್ತಾಗಿ ಬೆಳೆದ ಸೀಬೆ, ಸಪೋಟಾ ತೆಂಗು, ಹಲಸಿನ ಮರಗಳು, ಮಧ್ಯದಲ್ಲಿ ಈ ಪ್ರಕೃತಿಯ ಭಾಗವೇ ಎಂಬಂತಿದ್ದ ಮನೆ. ಕಣ್ಣು ಮೊದಲು ಹೋದದ್ದ್ರು ಅಂಗೈ ಅಗಲ ಗಾತ್ರದ ಸೀಬೆ ಹಣ್ಣು ಬಿಡುವ ಮರದ ಮೇಲೆ. ಅದರ ಒಳಗಿನ ಬೆಣ್ಣೆಯಂತಹ ಮೃದುವಾದ ಸಿಹಿ ತಿರುಳು ಬಾಲ್ಯದಿಂದಲೂ ನನಗೆ ಅತಿಪ್ರಿಯವಾದದ್ದು. ಆ ಮರದ ಮಧ್ಯದಲ್ಲಿ ಒಂದು ದೊಡ್ಡ ಹಣ್ಣಿಗೆ ಬಿಳಿಯ ಬಟ್ಟೆ ಕಟ್ಟಲ್ಪಟ್ಟಿತ್ತು. ಆ ಹಣ್ಣು ಮಾತ್ರ ಮುಟ್ಟುವಂತಿಲ್ಲ. ಅದನ್ನು ಚಿಕ್ಕಪ್ಪ ಪ್ರೀತಿಯಿಂದ ಕಾಪಾಡಿಕೊಂಡು ಬಂದಿದ್ದಾನೆ. ದಸರಾ ಫಲ-ಪುಷ್ಪ ಪ್ರದರ್ಶನಕ್ಕೆ ಕೊಂಡೊಯ್ಯುತ್ತಾನೇನೋ ನಾಳೆ. ಹಿಂದಿನ ಎರದು ವರ್ಷ ಬಹುಮಾನ ಬಂದಿದೆ ಅವನಿಗೆ. ಇವೆಲ್ಲವನ್ನೂ ಯೋಚಿಸುತ್ತಾ ಅಜ್ಜಿ ಹಾಕಿದ ರುಚಿಯಾದ ಸಾರು ಅನ್ನ ಹೊಟ್ಟೆಯೊಳಗೆ ಹೋದದ್ದೇ ತಿಳಿಯಲಿಲ್ಲ.
ಇಲ್ಲಿ ನನ್ನದೇ ಆದ ಪ್ರಪಂಚ. ಪುಸ್ತಕಗಳ ಮಧ್ಯೆ ಒಂದಷ್ಟು ಕಾಲ ಕಳೆದು, ಗಡದ್ದಾಗಿ ಒಂದು ಪುಟ್ಟ ನಿದ್ದೆ ಎಳೆದು ತಾತನ ಜೊತೆ ಸಂಜೆ ಕಾಫಿಗೆ ಕುಳಿತೆ. "ಈ ಅಜ್ಜಿಗೆ ವಯಸ್ಸಾಯ್ತು, ನಿಂಗೆ ಇನ್ನೊಂದು ಹುಡುಗಿ ಹುಡುಕಿ ಮದ್ವೆ ಮಾಡೋಣ ಬಿಡು ತಾತ" ಎಂದು ರೇಗಿಸಿ, ಸೈಕಲ್ ಹತ್ತಿ ವಾಪಸ್ ಮನೆಯ ಕಡೆಗೆ ಪಯಣ ಬೆಳೆಸಿದೆ.
ಸಂಜೆಯ ವೇಳೆಗೆ ಸ್ನೇಹಿತರ ಗುಂಪು ಮನೆಯ ಬಳಿ ರೆಡಿಯಾಗಿತ್ತು. ಇವತ್ತು ವಸ್ತುಪ್ರದರ್ಶನಕ್ಕೆ ಹೋಗುವ ಉತ್ಸುಕತೆ.ಲಕ್ಷದೀಪಗಳಿಂದ ಜಗಜಗಿಸುತ್ತಾ ಮೆರಗುತ್ತಿದ್ದ ಅರಮನೆಯ ಬಳಿ ಬಂದಾಗ ಅಲ್ಲಿನ ಜನಜಂಗುಳಿ ಮಧ್ಯೆಯೂ ತೇಲಿಬರುತ್ತಿದ್ದ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲು ವಾದನ ಆ ಸಂಜೆಯ ಹಿತವಾದ ತಂಗಾಳಿಗೆ ಮತ್ತು ತುಂಬಿತ್ತು. ಇದೇ ಗುಂಗಿನಲ್ಲಿ ನಾವು ಅರಮನೆ ಹಾಯಿಸಿ ವಸ್ತುಪ್ರದರ್ಶನಕ್ಕೆ ಬಂದಿದ್ದೆವು.
ಬಣ್ಣ ಬಣ್ಣದ ಬಳೆ, ಚಿತ್ರ ವಿಚಿತ್ರ ಆಟದ ಸಾಮಾನುಗಳು, ಬಗೆ ಬಗೆಯ ಬಟ್ಟೆ ಅಂಗಡಿಗಳು, ಇವುಗಳ ಮಧ್ಯೆ ಸರ್ಕಾರಿ ಇಲಾಖೆಗಳ ಪ್ರದರ್ಶನಗಳು ಎಲ್ಲವನ್ನೂ ನಿಧಾನಕ್ಕೆ ದಾಟುತ್ತಾ ಜಯಂಟ್ ವೀಲು ಮುಂತಾದ ಆಟಗಳ ಎದುರು ಬಂದು ನಿಂತಾಗ ಎಂಟು ಗಂಟೆ. ಇದ್ದ ಐದು ರುಪಾಯಿಯಲ್ಲಿ ಎರದು ರುಪಾಯಿಗೆ ಜಯಂಟ್ ವೀಲಿನ ಕಾಯಕಲ್ಪ. ಉಳಿದ ಮೂರು ರುಪಾಯಿಯ ಗುರಿಯೇ ಬೇರೆ.
ರಾತ್ರಿಯ ಆ ಚಳಿಯಲ್ಲಿ ಗಮಗಮಿಸುವ, ಬಿಳಿಯ ಬಣ್ಣ ದ ಮೇಲೆ ಕೆಂಪಗೆ ಅಲ್ಲಲ್ಲಿ ಮೆಣಸಿನ ಪುಡಿ ಉದುರಿಸಿದ , ಬಿಸಿಬಿಸಿಯಾಗಿದ್ದರೂ ಕೆಳಗೆ ಕೇವಲ ಒಂದು ತೆಳು ಪೇಪರು ಮೇಲೆ ನಿಂತ ಆ ಡೆಲ್ಲಿ ಹಪ್ಪಳ, ಅದರ ಮೇಲೆ ಸವಾಲೊಡ್ಡುವಂತೆ ಕುಳಿತ ಮೆಣಸಿನಕಾಯಿ ಬಜ್ಜಿ ತಿನ್ನುವಾಗ ಪ್ರಪಂಚದ ಇನ್ಯಾವ ಯೋಚನೆಗಳೂ ಇರಲಿಲ್ಲ.
ಆ ತಂಗಾಳಿಯಲ್ಲಿ ಅತ್ತಿತ್ತ ಅಲೆದಾಡುತ್ತಿದ್ದ ಕಣ್ಣುಗಳು ಯಾರನ್ನೋ ನೋಡಿ ಗಕ್ಕನೆ ನಿಂತವು. ಸ್ನೇಹಿತೆಯರೊಡನೆ ಬಂದಿದ್ದ ಅವಳು ಅಲ್ಲಿ ನಿಂತಿದ್ದಳು. ಗಾಳಿಗೆ ಹಾರಾಡುತ್ತಿದ್ದ ಆ ದಟ್ಟಕೂದಲು, ಚಂದ್ರನನ್ನು ನಾಚಿಸುವಂತೆ ಬೆಳ್ಳಗಿದ್ದ ಅವಳ ಚೂಡಿದಾರ, ಗಲ್ಲೆಂದು ನಗುವ ಅವಳ ನಗು ಇವೆಲ್ಲವೂ ನನ್ನ ದಿನಕ್ಕೆ ಒಂದು ಸಾರ್ಥಕತೆಯನ್ನು ಕೊಟ್ಟಿದ್ದವು. ಅವಳ ಕಂಗಳೂ ನನ್ನ ಮೇಲೆ ನಿಂತಾಗ ನನ್ನ ಹೃದಯವೇ ಎಲ್ಲೋ ಹಾರಾಡುತ್ತಿತ್ತು. ಅವಳು ನನ್ನ ಕಡೆ ಒಂದು ಸಣ್ಣ ನಗೆ ಎಸೆದಳಾ? ಅವಳಿಗೆ ಹಾಯ್ ಹೇಳಬೇಕಾ? ಪರಿಚಯದ ನಗೆ ಬೀರಬೇಕಾ? ಇವೆಲ್ಲ ಸಾವಿರ ಪ್ರಶ್ನೆಗಳಿಗೆ ನಾನು ಉತ್ತರ ಹುಡುಕುವ ಮುನ್ನವೇ ನನ್ನ ಪಾಪಿ ಸ್ನೇಹಿತರು ಅಡ್ಡ ಬಂದರಲ್ಲಾ! ಛೆ! ಮತ್ತೆ ಹುಡುಕುವ ವೇಳೆಗೆ ಅವಳು ಕಾಣಲೇ ಇಲ್ಲ.
ಮನೆಗೆ ಬಂದು ಅಮ್ಮ ಹಾಕಿದ ಊಟ ಮಾಡಿ ಕಣ್ಮುಚ್ಚಿ ಮಲಗಿದರೆ ಇಲ್ಲದೆಯೂ ಕೇಳಿಸುತ್ತಲೇ ಇದ್ದ ಕೊಳಲು ವಾದನದ ಮಧ್ಯೆ ಕಣ್ಣ ತುಂಬಾ ಆ ಅರಮನೆಯ ದೀಪ, ಎದುರಲ್ಲಿ ದೊಡ್ಡ ಜಯಂಟ್ ವೀಲ್ ಒಂದರಲ್ಲಿ ಜೊತೆಯಾಗಿ ಕುಳಿತ ನಾನು, ಅವಳು ಮೇಲಕ್ಕೇರಿ ಕೆಳಗೆ ಹಾರುತ್ತಿದ್ದಂತೆ ಕನಸು!
Comments
ಉ: ಮೈಸೂರು ದಸರಾ
:))