ಅನ್ವೇಷಣೆ ಭಾಗ ೮

ಅನ್ವೇಷಣೆ ಭಾಗ ೮

ಇನ್ಸ್ಪೆಕ್ಟರ್ ಜೀಪ್ ಹೈವೇಯ ಪಕ್ಕದಲ್ಲಿ ನಿಂತಿತ್ತು. ಇನ್ಸ್ಪೆಕ್ಟರ್ ಮತ್ತು ನಾನು ಕೆಳಗಿಳಿದು ರಸ್ತೆಯನ್ನು ದಾಟಿ ಬಯಲು ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದ ನೀಲಗಿರಿ ತೋಪಿನ ಕಡೆ ಹೆಜ್ಜೆ ಹಾಕುತ್ತಿದ್ದೆವು. ಆ ಸುತ್ತಮುತ್ತಲಿನ ಪ್ರದೇಶ ನಿರ್ಜನವಾಗಿತ್ತು. ಹೈವೇಯಲ್ಲಿ ಆಗೊಂದು ಈಗೊಂದು ಗಾಡಿಗಳು ಓಡಾಡುವುದು ಬಿಟ್ಟರೆ ಬೇರೆ ಯಾವುದೇ ಸಂಚಾರವಿರಲಿಲ್ಲ. ತಲೆ ಹೊಡೆದರೂ ಕೇಳುವವರು ಗತಿ ಇಲ್ಲದಂಥಹ ನಿರ್ಮಾನುಷ ಪ್ರದೇಶ ಅದಾಗಿತ್ತು.

ಸ್ವಲ್ಪ ದೂರದಲ್ಲಿ ಪೊದೆಯೊಂದರ ಬಳಿ ಪೊಲೀಸರು ಪಟ್ಟಿಗಳನ್ನು ಕಟ್ಟಿದ್ದರು. ಅದನ್ನು ನೋಡಿದ ಕೂಡಲೇ ತಿಳಿಯಿತು... ಇಲ್ಲಿಯೇ ಜಾನಕಿಯ ಶವ ಸಿಕ್ಕಿರುವುದು ಎಂದು. ಆ ಪೊದೆಯ ಬಳಿ ಬರುತ್ತಿದ್ದ ಹಾಗೆ ಯಾಕೋ ಇದ್ದಕ್ಕಿದ್ದಂತೆ ದುಃಖ ಉಮ್ಮಳಿಸಿ ಬಂತು. ಆದರೂ ತಡೆದುಕೊಂಡು ಒಮ್ಮೆ ಅಲ್ಲಿನ ಜಾಗವನ್ನು ಪರೀಕ್ಷಿಸಿದೆ.

ಅಲ್ಲಿ ಅನುಮಾನ ಬರುವಂಥಹ ಯಾವುದೇ ವಸ್ತುಗಳೂ ಕಾಣಲಿಲ್ಲ. ಅಲ್ಲಿ ಸುತ್ತಲೂ ಗಿಡ ಮರಗಳನ್ನು ಬಿಟ್ಟರೆ ಬೇರೆ ಏನೂ ಕಾಣಲಿಲ್ಲ. ಪೋಲೀಸರು ಅನುಮಾನಿಸಿರುವ ಹಾಗೆ ಬೇರೆಲ್ಲೋ ಕೊಲೆ ಮಾಡಿ ಇಲ್ಲಿ ತಂದು ಹಾಕಿದ್ದಾರೆ. ಆದರೆ ಯಾರು ಮಾಡಿರಬಹುದು?

ಮಿ.ಅರ್ಜುನ್ ಬನ್ನಿ ಇನ್ನು ಹೊರಡೋಣ. ನಾವು ನಮ್ಮ ತನಿಖೆ ಮುಂದುವರಿಸುತ್ತೇವೆ. ಖಂಡಿತ ನಿಮಗೆ ನ್ಯಾಯ ಒದಗಿಸಿ ಕೊಡುತ್ತೇವೆ. ಕ್ಷಮಿಸಿ... ನಮ್ಮ ಕೈಲಿ ಮತ್ತೆ ಜಾನಕಿಯನ್ನು ವಾಪಸ್ ಕರೆತರಲು ಸಾಧ್ಯವಿಲ್ಲ... ಆದರೆ ಆ ಕೊಲೆಗಡುಕರನ್ನು ಖಂಡಿತ ಹುಡುಕುತ್ತೇವೆ.

ಸರ್... ಧನ್ಯವಾದಗಳು. ನಿಮ್ಮ ತನಿಖೆ ನೀವು ಮುಂದುವರೆಸಿ... ನಾನು ಸಹ ಏನಾದರೂ ಸುಳಿವು ಸಿಗುತ್ತದೇನೋ ನೋಡುತ್ತೇನೆ.

ಮಿ.ಅರ್ಜುನ್, ಹಾಗೊಂದು ವೇಳೆ ನಿಮಗೇನಾದರೂ ಅನುಮಾನ ಅಥವಾ ಸುಳಿವು ಸಿಕ್ಕರೆ ದಯವಿಟ್ಟು ಮೊದಲು ನಮಗೆ ಮಾಹಿತಿ ನೀಡಿ. ಏಕೆಂದರೆ ನೀವು ಆವೇಶದಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಹೋದರೆ ಅಪಾಯ ತಪ್ಪಿದ್ದಲ್ಲ.

ಖಂಡಿತ ಸರ್ ಎಂದು ಅಲ್ಲಿಂದ ಹೊರಟು ಮತ್ತೆ ವಾಪಸ್ ಮನೆಗೆ ಬಂದು ಯಾರು ಈ ಕೃತ್ಯವನ್ನು ಮಾಡಿರಬಹುದೆಂದು ಯೋಚಿಸಲು ಶುರು ಮಾಡಿದೆ.  

ಮೊದಲು ಜಾನಕಿಯ ಸ್ನೇಹಿತೆಯರನ್ನು ವಿಚಾರಿಸಿ ನೋಡಬೇಕು. ಅವಳಿಗೆ ಯಾರಾದರೂ ಆಗದವರು ಇದ್ದರ ಹೇಗೆ ಎಂದು. ಆನಂತರ ಜಾನಕಿಯ ಅಪ್ಪ ಅಮ್ಮನನ್ನು ವಿಚಾರಿಸಿ ನೋಡಬೇಕು. ಒಟ್ಟಿನಲ್ಲಿ ಜಾನಕಿಯನ್ನು ಕೊಂದವರನ್ನು ಮಾತ್ರ ಉಳಿಸಬಾರದು. ಅವರಿಗೆ ತಕ್ಕ ಶಿಕ್ಷೆ ಕೊಡಿಸಲೇಬೇಕು ಎಂದುಕೊಂಡು ಜಾನಕಿಯ ಕಾಲೇಜ್ ಗೆ ಹೋಗಿ ಅಲ್ಲಿ ಡೀನ್ ಅನುಮತಿ ತೆಗೆದುಕೊಂಡು ಉಳಿದ ಲೆಕ್ಚರರ್ಗಳನ್ನು ವಿಚಾರಿಸಿ, ನಂತರ ಜಾನಕಿಗೆ ಆಪ್ತರಾಗಿದ್ದ ಒಂದಷ್ಟು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಎಲ್ಲರೂ ಹೇಳಿದ್ದು ಒಂದೇ ಮಾತು, ಜಾನಕಿಯಂಥಹ ವ್ಯಕ್ತಿಗೆ ಖಂಡಿತ ಯಾರೂ ಶತ್ರುಗಳು ಇರಲು ಸಾಧ್ಯವಿಲ್ಲ. ಅಂಥಹ ಒಳ್ಳೆಯವಳು ಜಾನಕಿ ಎಂದು ಹೇಳಿದರು.

ನಂತರ ಅಲ್ಲಿಂದ ಜಾನಕಿಯ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಒಂದು ಹತ್ತು ನಿಮಿಷ ಕಾದ ಬಳಿಕ ಜಾನಕಿಯ ಅಪ್ಪ ಬಂದರು. ಬಾಪ್ಪ ಅರ್ಜುನ್, ಜಾನಕಿ ಹೋದ ಮೇಲೆ ಇವಳು ಸಿಕ್ಕಾಪಟ್ಟೆ ಖಿನ್ನಳಾಗಿದ್ದಳು. ಅದಕ್ಕೆ ಅವಳನ್ನು ಅವಳ ಅಕ್ಕನ ಮನೆಯಲ್ಲಿ ಸ್ವಲ್ಪ ದಿನ ಇರಲಿ ಎಂದು ಬಿಟ್ಟು ಬರಲು ಹೋಗಿದ್ದೆ. ಮದುವೆಯಾಗಿ ನೆಮ್ಮದಿಯಾಗಿ ಸಂಸಾರ ಮಾಡಿಕೊಂಡು ಇರಬೇಕಾದ ಹುಡುಗ ಹೇಗಾಗಿಬಿಟ್ಟಿದ್ದೀಯ... ನಿನ್ನನ್ನು ನೋಡಿದರೆ ಕರುಳು ಚುರುಕ್ ಎನ್ನುತ್ತದೆ.

ಅಂಕಲ್... ಜಾನಕಿಗೆ ಸಂಬಂಧಿಸಿದಂತೆ ಸ್ವಲ್ಪ ಮಾಹಿತಿ ಬೇಕಿತ್ತು. ದಯವಿಟ್ಟು ನನಗೆ ಆ ಮಾಹಿತಿಗಳನ್ನು ಕೊಡುತ್ತೀರಾ?

ಅದಕ್ಯಾಕೆ ಅರ್ಜುನ್ ಅಷ್ಟೊಂದು ಕೇಳುತ್ತೀಯ.... ಬಾ ನಿನಗೆ ಏನು ಮಾಹಿತಿ ಬೇಕಿತ್ತೋ ಕೇಳು.

ಅಂಕಲ್.... ಜಾನಕಿಗೆ ಯಾರಾದರೂ ಶತ್ರುಗಳು ಅಥವಾ ದ್ವೇಷಿಗಳು ಇದ್ದರ? ಯಾರಾದರೂ ಅವಳಿಗೆ ಫೋನ್ ಮಾಡಿ ಹಿಂಸೆ ಕೊಡುತ್ತಿದ್ದವರು, ಮನೆ ಬಳಿ ಬಂದು ಯಾರಾದರೂ ಅವಳಿಗೆ ತೊಂದರೆ ಕೊಡುತ್ತಿದ್ದವರು, ಕಾಲೇಜಿನಲ್ಲಿದ್ದಾಗ ಯಾರಾದರೂ ಇವಳನ್ನು ಪ್ರೀತಿ ಮಾಡಲು ಪೀಡಿಸುತ್ತಿದ್ದವರು ಹೀಗೆ ಯಾವುದೇ ರೀತಿಯಲ್ಲಿ ಯಾರಾದರ ಮೇಲೆ ನಿಮಗೆ ಅನುಮಾನ ಇದೆಯಾ?

ಅರ್ಜುನ್... ಜಾನಕಿ ಬಂಗಾರದಂಥಹ ಹುಡುಗಿನಪ್ಪ. ಅವಳು ಚಿಕ್ಕಂದಿನಿಂದಲೂ ಯಾವತ್ತೂ ಯಾರೊಂದಿಗೂ ವೈಷಮ್ಯ ಕಟ್ಟಿಕೊಂಡವಳಲ್ಲ. ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದಳು. ಯಾವತ್ತೂ ಯಾರನ್ನೂ ದ್ವೇಷಿಸಿದವಳಲ್ಲ. ಸದಾಕಾಲ ನಗುನಗುತ್ತಿದ್ದಳು....ಇನ್ನು ಪ್ರೀತಿಯ ವಿಷಯ... ಅದರಲ್ಲೂ ಸಹ ಅವಳು ಯಾರೊಂದಿಗೂ ಪ್ರೀತಿಯಲ್ಲಿರಲಿಲ್ಲ....ಅಂಥಹ ಹುಡುಗಿಯ ಮೇಲೆ ಕೊಲೆ ಮಾಡುವಂಥಹ ದ್ವೇಷ ಏನು ಎಂದೇ ನಮಗೆ ತಿಳಿಯುತ್ತಿಲ್ಲ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು.

ಅಂಕಲ್ ಈ ಕೊಲೆಯ ಹಿಂದೆ ಏನೋ ದೊಡ್ಡ ಕರಾಮತ್ತು ಇದೆ ಎಂದು ಎನಿಸುತ್ತಿದೆ, ಏಕೆಂದರೆ ಯಾರನ್ನೇ ಕೇಳಿದರೂ ಜಾನಕಿಗೆ ಯಾರ ಜೊತೆಯೂ ದ್ವೇಷ ಅಥವಾ ಕೊಲ್ಲುವಂಥಹ ಆಕ್ರೋಶ ಇರಲಿಲ್ಲ ಎಂದು ತಿಳಿದು ಬರುತ್ತಿದೆ. ಅಂಥದ್ದರಲ್ಲಿ.....ಅಂಕಲ್ ಅದು ಯಾವುದು ಫೋಟೋ ಎಂದು ಎದುರುಗಡೆ ಗೋಡೆಯ ಮೇಲಿದ್ದ ಮಗುವಿನ ಫೋಟೋ ತೋರಿಸಿ ಕೇಳಿದ್ದಕ್ಕೆ.... ಅದು ಜಾನಕಿಯದ್ದೇ ಫೋಟೋನಪ್ಪ ಎಂದು ಹೇಳಿದರು.

ಅದು ಸರಿ ಅಂಕಲ್ Background ನಲ್ಲಿ ಯಾವುದೋ ಅನಾಥಾಶ್ರಮದ ಚಿತ್ರ ಇದೆ.... ನೀವು ಅನಾಥಾಶ್ರಮ ನಡೆಸುತ್ತಿದ್ದೀರ?

ಅರ್ಜುನ್ ಏನಪ್ಪಾ ಹೀಗೆ ಕೇಳುತ್ತಿದ್ದೀಯ.... ಜಾನಕಿ ನಿನಗೆ ವಿಷಯ ಹೇಳಿಲ್ಲವಾ?

ಅವರ ಮಾತು ಕೇಳಿ ಕುತೂಹಲದಿಂದ.... ಯಾವ ವಿಷಯ ಅಂಕಲ್....

ಅರ್ಜುನ್.... ಜಾನಕಿ ನಮ್ಮ ಸ್ವಂತ ಮಗಳಲ್ಲಪ್ಪ!!!

Rating
No votes yet

Comments

Submitted by H A Patil Fri, 01/02/2015 - 20:00

ಜಯಂತ ರಾಮಾಚಾರ್ ರವರಿಗೆ ವಂದನೆಗಳು
ತಮ್ಮ ಅನ್ವೇಷಣೆ ಬಹಳ ಭರ್ಜರಿಯಾಗಿ ಕುತೂಹಲಭರಿತವಾಗಿ ಸಾಗುತ್ತಿದೆ. ಓದಿಸಿಕೊಂಡು ಹೋಗುವ ನಿಮ್ಮ ಬರಹದ ನಿರೂಪಣೆ ಮನಕ್ಕೆ ಖುಷಿ ನೀಡಿತು, ಧನ್ಯವಾದಗಳು.