ವಾಕ್ಕೊಡೆಯರಾಗೋಣ !

ವಾಕ್ಕೊಡೆಯರಾಗೋಣ !

ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ

ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ|

ಸುಜನವಾಣಿ ಗುರುವಾಣಿ ಕೇಳುವವ ಧನ್ಯ

ಕೇಳು ಕೇಳು ಕೇಳು ನೀ ಕೇಳು ಮೂಢ||  

     ಮಾನವನಿಗೆ ಅಗತ್ಯವಿರುವ ಜ್ಞಾನ ಮತ್ತು ಜ್ಞಾನದ ಅಂತಸ್ಸತ್ವದ ಅರಿವಿರದಿದ್ದರೆ ಜ್ಞಾನ ಹೇಗೆ ಅರ್ಥಹೀನವಾಗುತ್ತದೆ ಎಂಬ ಬಗ್ಗೆ ತಿಳಿದುಕೊಂಡೆವು. ಈ ಜ್ಞಾನ ಅನ್ನುವುದು ಹೇಗೆ ಪ್ರಾಪ್ತವಾಗುತ್ತದೆ? ಜ್ಞಾನದ ಮೂಲ ಯಾವುದು?  ಈ ಜ್ಞಾನದ ಉಗಮದ ಮೂಲ ವಾಕ್ಕುವೇ ಆಗಿದೆ. ವೇದ ಸಾಹಿತ್ಯ ಈಗ ಲಭ್ಯವಿರುವ ಸಾಹಿತ್ಯಗಳ ಪೈಕಿ ಅತ್ಯಂತ ಪುರಾತನವಾದುದು. ಸುಮಾರು ೫೦೦೦ ವರ್ಷಗಳ ಹಿಂದೆ ವೇದಸಾಹಿತ್ಯ ರಚಿತವಾಯಿತೆನ್ನುತ್ತಾರೆ. ಅದಕ್ಕೂ ಮುಂಚೆ ವೇದವಿರಲಿಲ್ಲವೇ? ಇತ್ತು, ಅದರೆ ಅದನ್ನು ಲಿಪಿಯಲ್ಲಿ ಒಡಮೂಡಿಸಿದ್ದು ಆ ಸಮಯದಲ್ಲಿ ಅಷ್ಟೆ. ಅಪೌರುಷೇಯವೆನ್ನಲಾಗುವ ವೇದಗಳು ಮಂತ್ರದ್ರಷ್ಟಾರರಾದ ಋಷಿಮುನಿಗಳ ಮೂಲಕ ಪ್ರಕಟವಾಗಿ ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಕಲಿಸಲ್ಪಟ್ಟು ಮುಂದುವರೆದುಕೊಂಡು ಬಂದಿತ್ತು. ವೇದವ್ಯಾಸರು ಅವುಗಳನ್ನು ಸಂಗ್ರಹಿಸಿ ಒಂದು ರೂಪವಿತ್ತರು.

      ಮಾತು ಅನ್ನುವುದು ಒಳಗೆ ಉತ್ಪನ್ನವಾಗುವ ಭಾವದ ಪ್ರಕಟರೂಪ. ತಮ್ಮೊಳಗಿನ ಭಾವಗಳನ್ನು ಇನ್ನೊಬ್ಬರಿಗೆ ವ್ಯಕ್ತಪಡಿಸುವ ಸಲುವಾಗಿ ಹೊರಡಿಸಿದ ಶಬ್ದ/ಧ್ವನಿ/ಸಂಜ್ಞೆಗಳೇ ಮಾತುಗಳಾದವು. ಒಂದು ಪ್ರದೇಶದಲ್ಲಿನ ಜನರಿಗೂ, ಬೇರೆ ಪ್ರದೇಶಗಳಲ್ಲಿನ ಜನರ ಅಭಿವ್ಯಕ್ತಿಯ ಸ್ವರೂಪದ ಶಬ್ದಗಳು/ರೀತಿಗಳು ಬೇರೆ ಬೇರೆ ರೀತಿಯಲ್ಲಿದ್ದುದರಿಂದ ಆ ಮಾತುಗಳು ಬೇರೆ ಬೇರೆ ಭಾಷೆಗಳೆನಿಸಿದವು. ಇದನ್ನು ಭಾಷಾವಿಜ್ಞಾನವೆನ್ನಬಹುದು. ಬೇರೆ ಬೇರೆ ಭಾಷೆಗಳಿಗೆ ಬೇರೆ ಬೇರೆ ಲಿಪಿಗಳು ರಚಿಸಲ್ಪಟ್ಟವು. ಈ ಎಲ್ಲಾ ರಚನೆಗಳಿಗೂ ಮೂಲವಾದುದು ಒಡಮೂಡಿದ ಮಾತುಗಳೇ! ನಾವು ಜ್ಞಾನಭಂಡಾರವೆಂದು ಪರಿಗಣಿಸುವ ವೇದಗಳು, ಬೈಬಲ್, ಕುರಾನ್ ಮೊದಲಾದ ಧರ್ಮಗ್ರಂಥಗಳು, ವಿಜ್ಞಾನ, ಗಣಿತ ಮುಂತಾದವುಗಳು ರಚಿತವಾಗಬೇಕಾದರೆ ಅವು ಮೊದಲು ಮಾತುಗಳ ಮೂಲಕವೇ ಮೂಡಿದವು ಅಲ್ಲವೇ? ಆದುದರಿಂದ ಯಾವುದರಿಂದ ಜ್ಞಾನ ಮೂಡಿತೋ ಆ ಮಾತುಗಳು ಜ್ಞಾನಕ್ಕಿಂತ ಮೇಲಿನದು. ಎಲ್ಲ ಜ್ಞಾನಗಳ ಹಿಂದಿನ ಬೆನ್ನೆಲುಬು, ಹಿನ್ನೆಲೆ ಮಾತುಗಳೇ ಆಗಿವೆ. ಕಾರಣವು ಪರಿಣಾಮಕ್ಕಿಂತ ಹಿರಿದು. ಈ ಭೂಮಿ, ಈ ವಿಶ್ವ, ಪ್ರತಿಯೊಂದು ವಸ್ತು, ಸಂಗತಿಗಳು ಜ್ಞಾನದ ಮೂಲಕ ಅರ್ಥಾತ್ ಅದರ ಹಿಂದಿನ ಮಾತು/ಅಭಿವ್ಯಕ್ತಿಗಳ ಮೂಲಕವೇ ನಮ್ಮ ಅರಿವಿಗೆ ಬಂದಿದೆ.

     ಮುಖವು ವ್ಯಕ್ತಿತ್ವದ ಸೂಚಿ ಎನ್ನುತ್ತಾರೆ. ಆದರೆ ಮಾತು ನಿಜವಾಗಿ ಮನುಷ್ಯನ ಸ್ವಭಾವದ ಕನ್ನಡಿ ಅನ್ನಬಹುದು. ನೋಡಲು ಕೆಲವರು ದೊಡ್ಡ ಜ್ಞಾನಿಯಂತೆ ತೋರುತ್ತಾರೆ. ಆದರೆ ಅವರು ಮಾತನಾಡಿದಾಗ ಗೊತ್ತಾಗುತ್ತದೆ ದಡ್ಡಶಿಖಾಮಣಿಗಳೆಂದು! ಅಂತಹವರನ್ನೇ ಕುರಿತು ಇರುವ ಗಾದೆ ಮಾತು ಇದು: 'ಬಾಯಿ ಬಿಟ್ಟರೆ ಬಣ್ಣಗೇಡು'. ನಯ-ವಿನಯದ ಮಾತುಗಳು ಸುಸಂಸ್ಕಾರವನ್ನು ತೋರಿಸಿದರೆ, ಸಭ್ಯತೆಯ ಎಲ್ಲೆ ಮೀರಿದ ಮಾತುಗಳು ಕುಸಂಸ್ಕಾರವನ್ನು ಬಿಂಬಿಸುತ್ತವೆ. ಮಾತುಗಳು ಹೊರಡುವ ರೀತಿಯಿಂದ ವ್ಯಕ್ತಿ ಕೋಪದಲ್ಲಿದ್ದಾನೋ, ತಾಳ್ಮೆಯಿಂದಿದ್ದಾನೋ, ವ್ಯಂಗ್ಯವಿದೆಯೋ, ಪ್ರೀತಿಯಿದೆಯೋ, ದ್ವೇಷವಿದೆಯೋ, ದರ್ಪಿಷ್ಟನೋ, ಅಹಂಕಾರಿಯೋ, ಇತ್ಯಾದಿಗಳು ತಿಳಿದುಬಿಡುತ್ತವೆ. ಜ್ಞಾನಕ್ಕೂ ಮಾತಿಗೂ ಅವಿನಾಭಾವ ಸಂಬಂಧವಿದೆ. ಜ್ಞಾನ ಹೆಚ್ಚಿದಷ್ಟೂ ಮಾತಿನ ಸೌಂದರ್ಯ ಹೆಚ್ಚುತ್ತಾ ಹೋಗುತ್ತದೆ.

ಮಾತಿನಲಿ ವಿಷಯ ಭಾಷೆಯಲಿ ಭಾವ

ಅನುಭವದಿ ಪಾಂಡಿತ್ಯ ಮೇಳವಿಸಿ|

ಕೇಳುಗರಹುದಹುದೆನುವ ಮಾತುಗಾರ

ಸರಸತಿಯ ವರಸುತನು ಮೂಢ||

     ನಾನು ಹೊಳೆನರಸಿಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಗೊಂಬೆ ಸುಬ್ಬಯ್ಯ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆತ ಅವಿದ್ಯಾವಂತ, ಶಾಲೆಯ ಮೆಟ್ಟಲು ಹತ್ತಿದವನಲ್ಲ. ತೊಗಲು ಗೊಂಬೆ ಆಡಿಸಿ ಜೀವನ ನಡೆಸುತ್ತಿದ್ದವನು. ಅವನು ಊರೂರು ಸುತ್ತಿ ತೊಗಲು ಗೊಂಬೆ ಆಡಿಸಲು ಹೋಗುತ್ತಿದ್ದರಿಂದ ಆ ಅವಕಾಶ ಉಪಯೋಗಿಸಿಕೊಂಡು, ಸರ್ಕಾರದಿಂದ ಅವನಿಗೆ ಮಂಜೂರಾಗಿದ್ದ ದರ್ಖಾಸ್ತು ಜಮೀನನ್ನು ಗ್ರಾಮದ ಒಬ್ಬ ಬಲಾಢ್ಯ ಅತಿಕ್ರಮಿಸಿಕೊಂಡಿದ್ದ. ಅದನ್ನು ಮರಳಿ ಸುಬ್ಬಯ್ಯನಿಗೆ ಬಿಡಿಸಿಕೊಟ್ಟಿದ್ದೆ. ಈ ವಿಷಯ ಒತ್ತಟ್ಟಿಗಿರಲಿ. ಒಮ್ಮೆ ಬಿಡುವಾಗಿದ್ದಾಗ ಆತನಿಂದ ಗೊಂಬೆ ಆಡಿಸುವ ಸಲುವಾಗಿ ಹಿನ್ನೆಲೆಯಾಗಿ ಹೇಳುತ್ತಿದ್ದ ಪದ್ಯಗಳು, ಕಥೆಗಳು ಇವುಗಳನ್ನು ಹೇಳಿಸಿ ಕೇಳಿದ್ದೆ. ಪುರಾಣದ, ಜನಪದದ ಕಥೆಗಳನ್ನು ಆತ ಹೇಳುತ್ತಿದ್ದ ರೀತಿ, ಸುಶ್ರಾವ್ಯವಾಗಿ ಹೇಳುತ್ತಿದ್ದ ಪದ್ಯಗಳು, ಅದರಲ್ಲಿ ಬರುವ ಪಾತ್ರಗಳ ಸಂಭಾಷಣೆಗಳು ಇತ್ಯಾದಿಗಳನ್ನು ಕೇಳಿ ಬೆರಗಾಗಿದ್ದೆ. ಭೀಮ ದುರ್ಯೋಧನ, ಇತ್ಯಾದಿ ಪಾತ್ರಗಳ ಕುರಿತು ಅವನ ವಿಮರ್ಶೆ ಮಾಡುತ್ತಿದ್ದ ರೀತಿ ಯಾವ ಪಂಡಿತೋತ್ತಮರಿಗಿಂತಲೂ ಕಡಿಮೆಯಿರಲಿಲ್ಲ. ವಂಶ ಪಾರಂಪರ್ಯವಾಗಿ ಈ ಕಲೆ ಅವನಿಗೆ ಒಲಿದಿತ್ತಾದರೂ, ಜೀವನಾನುಭವಗಳು ಕಲೆಯ ಮೆರುಗನ್ನು ಹೆಚ್ಚಿಸಿದ್ದವು. ಆತ ತನ್ನ ಕಲಾಪ್ರದರ್ಶನದ ಹೊರತಾಗಿಯೂ ಮಾತನಾಡುತ್ತಿದ್ದ ರೀತಿ-ನೀತಿಗಳು ಅವನೊಬ್ಬ ಜ್ಞಾನಿ ಎಂಬುದನ್ನು ತೋರಿಸುತ್ತಿದ್ದವು. ಆತನ ಜ್ಞಾನದ ಮೂಲ ಮಾತೇ ಆಗಿತ್ತು!

     ಮಾತು ಎಂತಹ ಪವಾಡ ಮಾಡುತ್ತದೆ ಎಂಬುದಕ್ಕೆ ತಮಿಳುನಾಡಿನ ಪಾಲಂ ಕಲ್ಯಾಣಸುಂದರಮ್ ಜೀವಂತ ನಿದರ್ಶನವಾಗಿದ್ದಾರೆ. ವಿಶ್ವಸಂಸ್ಥೆ ಇವರನ್ನು '೨೦ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾದ ಒಂದು ಸಂಸ್ಥೆ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಸನ್ಮಾನಿಸಿದೆ. ಇವರನ್ನು 'ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು' ಎಂದು ಗುರುತಿಸಲಾಗಿದೆ. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುಚ್ಛ ಗೌರವಾನ್ವಿತರಲ್ಲೊಬ್ಬರು' ಎಂದು ಅಭಿದಾನವಿತ್ತು ಗೌರವಿಸಿದೆ. ಶೀವೈಕುಂಠಮ್‌ನಲ್ಲಿನ ಕಲಾಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಮಾಡುತ್ತಿದ್ದ ಕೆಲಸದಿಂದ ಬರುತ್ತಿದ್ದ ಸಂಬಳದ ಹಣವನ್ನು ಪೂರ್ಣವಾಗಿ ದೀನದಲಿತರ ಸೇವೆಗಾಗಿ ಖರ್ಚು ಮಾಡಿದ ವ್ಯಕ್ತಿ ಬಹುಷಃ ಇವರೊಬ್ಬರೇ ಇರಬೇಕು. ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಇವರು ತಮ್ಮ ವೈಯಕ್ತಿಕ ಖರ್ಚುವೆಚ್ಚಗಳಿಗಾಗಿ ಹೋಟೆಲು ಮಾಣಿಯಾಗಿಯೂ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆಂದರೆ ನಂಬಲು ಕಷ್ಟವಾದರೂ ಸತ್ಯವಾದ ಸಂಗತಿ. 'ಸಹಸ್ರಮಾನದ ಪುರುಷ'ರೆಂಬ ಗೌರವದ ಜೊತೆಗೆ ಬಂದ ೩೦ ಕೋಟಿ ರೂ. ಹಣವನ್ನೂ ಸಹ ಬಿಡಿಗಾಸೂ ಉಳಿಸಿಕೊಳ್ಳದೆ ಎಂದಿನಂತೆ ಸಮಾಜಕ್ಕೇ ಧಾರೆಯೆರೆದ ಪುಣ್ಯಾತ್ಮರಿವರು. ಇವರ ಈ ರೀತಿಯ ಜೀವನಕ್ಕೆ ಪ್ರೇರಣೆ ನೀಡಿದ್ದು ಅವರು ಕೇಳಿದ ಮಾತುಗಳು! ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಜನರು ನಾಮುಂದು-ತಾಮುಂದು ಎಂಬಂತೆ ತಮ್ಮ ತನು-ಮನ-ಧನಗಳನ್ನು ಅರ್ಪಿಸುತ್ತಿದ್ದರು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜರು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾಗ ಕಲ್ಯಾಣಸುಂದರಮ್ ಆಗಿನ್ನೂ ಕಾಲೇಜು ವಿದ್ಯಾರ್ಥಿ. ದೇಶಭಕ್ತಿ ಪ್ರೇರಿತ ಹುಡುಗ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದು ಕಾಮರಾಜರಿಗೆ ಯುದ್ಧ ಸಂತ್ರಸ್ತರ ನಿಧಿಗಾಗಿ ಅರ್ಪಿಸಿದ. ನಂತರದಲ್ಲಿ ಆನಂದವಿಕಟನ್ ಪತ್ರಿಕೆ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್‌ರನ್ನು ಕಂಡು ವಿಷಯವನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದಾಗ ಅವರು, "ನೀನು ಸ್ವತಃ ದುಡಿದು ದಾನ ಮಾಡಿದಾಗ ಹೇಳು, ಪ್ರಕಟಿಸುವೆ" ಎಂದು ಹೇಳಿ ವಾಪಸು ಕಳಿಸಿದ್ದರು. ಈ ಮಾತು ಪವಾಡವನ್ನೇ ಮಾಡಿತು. ಆ ಹುಡುಗ ಅದನ್ನು ಸವಾಲಾಗಿ ಸ್ವೀಕರಿಸಿದ, ದಿಟ್ಟ ನಿರ್ಧಾರ ಮಾಡಿದ. ಅದೇ ಮುಂದೆ ಅವನನ್ನು ಗ್ರಂಥಪಾಲಕನಾಗಿ ಕೆಲಸಕ್ಕೆ ಸೇರಿದ ನಂತರ ಬಂದ ಪ್ರತಿ ತಿಂಗಳ ಪೂರ್ಣ ಹಣವನ್ನು ಸಮಾಜೋಪಯೋಗೀ ಕಾರ್ಯಕ್ಕೆ ವಿನಿಯೋಗಿಸುವಂತೆ ಮಾಡಿದ್ದು. ಸುಮಾರು ೩೦ ವರ್ಷಗಳ ಕಾಲ ಸಲ್ಲಿಸಿದ ಸೇವೆಯಲ್ಲಿ ಗಳಿಸಿದ ಎಲ್ಲಾ ಹಣವನ್ನೂ, ಪಿಂಚಣಿ ಸೇರಿದಂತೆ. ಸಮಾಜಕ್ಕೆ ಅರ್ಪಿಸಿದ ಆ ಅಸಾಮಾನ್ಯ ಪುಣ್ಯಾತ್ಮ ಸಾಮಾನ್ಯನಾಗೇ ಉಳಿದುದು ವಿವರಣೆಗೆ ನಿಲುಕದ ಸಂಗತಿ. 

     ಧೀಮಂತ ಸಿಂಹ ಸಂನ್ಯಾಸಿ ಮರ್ಹ ದಯಾನಂದ ಸರಸ್ವತಿಯವರನ್ನು ಜಗತ್ತಿಗೆ ಪರಿಚಯಿಸಿದ ಗುರು ವಿರಜಾನಂದರು ರೂಪಿತವಾಗಿದ್ದೂ ನಿಂದನೆಯ ಮಾತುಗಳಿಂದ! ವಿರಜಾನಂದರು ಹುಟ್ಟು ಕುರುಡರು, ಚಿಕ್ಕಂದಿನಲ್ಲೇ ಅವರ ತಂದೆ-ತಾಯಿ ತೀರಿಹೋಗಿದ್ದರು. ಅವರ ಅಣ್ಣ, ಅತ್ತಿಗೆ ಆ ಚಿಕ್ಕ ಬಾಲಕನನ್ನು ಪ್ರತಿನಿತ್ಯವೆಂಬಂತೆ ದಂಡಪಿಂಡ, ಶನಿ, ಇತ್ಯಾದಿ ಮೂದಲಿಸುತ್ತಿದ್ದುದಲ್ಲದೆ, 'ಎಲ್ಲಿಗಾದರೂ ತೊಲಗಿ ಹೋಗಬಾರದೇ' ಎಂದು ಶಪಿಸುತ್ತಿದ್ದರು. ಇನ್ನು ಸಹಿಸುವುದು ಸಾಧ್ಯವಿಲ್ಲವೆನಿಸಿದಾಗ, ಪಂಜಾಬಿನ ಕರ್ತಾರಪುರದಲ್ಲಿದ್ದ ಆ ಎಂಟು ವರ್ಷದ ಕುರುಡ ಬಾಲಕ ಕೈಯಲ್ಲಿ ಒಂದು ಕೋಲು ಹಿಡಿದುಕೊಂಡು ಮನೆ ಬಿಟ್ಟು ಹೊರಟ. ೧೮ನೆಯ ಶತಮಾನದ ಆ ಸಂದರ್ಭದಲ್ಲಿ ಈಗಿನಂತೆ ರಸ್ತೆಗಳಾಗಲೀ, ವಾಹನ ಸೌಲಭ್ಯಗಳಾಗಲೀ ಇರಲಿಲ್ಲ. ಧೃಢಕಾಯರೇ ಒಬ್ಬರೇ ಓಡಾಡಲು ಹಿಂಜರಿಯುತ್ತಿದ್ದ ಆ ಸಮಯದಲ್ಲಿ ಕುರುಡ ಬಾಲಕ ಸುಮಾರು ೨೦೦೦ ಮೈಲುಗಳ ದೂರ ಕ್ರಮಿಸಿ ಹರಿದ್ವಾರ ತಲುಪಿದ್ದೇ ಒಂದು ಸಾಧನೆ. ಆತನ ಸಾಧನೆ ಇಲ್ಲಿಗೇ ನಿಲ್ಲಲಿಲ್ಲ. ಏಕಗ್ರಾಹಿಯಾಗಿದ್ದ ಅವರು ಗುರುಗಳಿಂದ ಪುರಾತನ ಋಷಿ-ಮುನಿಗಳು ರಚಿಸಿದ ಸಾಹಿತ್ಯ, ಸಂಸ್ಕೃತ ವ್ಯಾಕರಣ, ನಿರುಕ್ತ, ಮುಂತಾದುವನ್ನು ಕಲಿತದ್ದಲ್ಲದೇ, ಕೇವಲ ಕೇಳಿಯೇ ವೇದಗಳನ್ನು ಕಲಿತರು. ಅನೇಕ ವರ್ಷಗಳ ಕಾಲ ಗಾಯತ್ರಿ ಮಂತ್ರ ಪಠಿಸಿದ್ದರಿಂದ ದಿವ್ಯಜ್ಞಾನ ಪ್ರಾಪ್ತವಾಯಿತೆನ್ನುತ್ತಾರೆ. ಅದೇನೇ ಇರಲಿ, ಅವರು ನಾಲ್ಕೂ ವೇದಗಳಲ್ಲಿ ಪಾಂಡಿತ್ಯ ಪಡೆದಿದ್ದಂತೂ ನಿರ್ವಿವಾದದ ವಿಚಾರವಾಗಿತ್ತು. ಕಣ್ಣಿರುವವರಿಗೂ ಕಷ್ಟವಾದ ಆ ಜ್ಞಾನಪ್ರಾಪ್ತಿ ಪ್ರಜ್ಞಾಚಕ್ಷು ವಿರಜಾನಂದರಿಗೆ ಆಗಿತ್ತು.

ಮಾತಾಗಲಿ ಮುತ್ತು ತರದಿರಲಿ ಆಪತ್ತು

ಮಾತು ನಿಜವಿರಲಿ ನೋವು ತರದಿರಲಿ |

ಪ್ರಿಯವಾದ ಹಿತವಾದ ನುಡಿಗಳಾಡುವನು

ನುಡಿಯೋಗಿ ಜನಾನುರಾಗಿ ಮೂಢ || 

     ಈ ಮಾತಿನಿಂದಲೇ ಜಗತ್ತು ನಡೆಯುತ್ತಿದೆ! ಮಾತಿನಿಂದ ಸೃಷ್ಟಿಯಾಗುತ್ತಿದೆ, ಮಾತಿನಿಂದ ವಿನಾಶವಾಗುತ್ತಿದೆ, ಮಾತಿನಿಂದಲೇ ಎಲ್ಲವೂ ಆಗುತ್ತಿದೆ. ಮಾತಿನ ಮಹತ್ವದ ಕುರಿತು ಅದೆಷ್ಟು ಗಾದೆಗಳು, ನೀತಿಮಾತುಗಳು, ಅದೆಷ್ಟು ವಚನಗಳು, ದಾಸರ ಪದಗಳು, ಅದೆಷ್ಟು ಸಾಧು-ಸಂತರ ಮಾರ್ಗದರ್ಶನಗಳು!  ಕೇವಲ ಮಾತಿನಿಂದಲೇ ಒಬ್ಬರ ನೋವನ್ನು ಶಮನಗೊಳಿಸಬಹುದು, ಮಾತುಗಳಿಂದಲೇ ಒಬ್ಬರಿಗೆ ಚಿತ್ರಹಿಂಸೆ ಕೊಡಬಹುದು! ನಿಜವಾದ ಸಾಧಕ ಮಾತುಗಳಿಗೆ ಒಡೆಯನಾಗಿರುತ್ತಾನೆ. ದೇವರು ಎರಡು ಕಣ್ಣುಗಳು, ಎರಡು ಕಿವಿಗಳನ್ನು ಕೊಟ್ಟಿದ್ದರೂ ಬಾಯಿ ಒಂದೇ ಇದೆ. ಏಕೆಂದರೆ ಮಾತನಾಡುವುದಕ್ಕಿಂತ ನೋಡಲು, ಕೇಳಲು ಹೆಚ್ಚು ಆದ್ಯತೆ ಕೊಡಬೇಕಿದೆ. ವಾಕ್ಕೊಡೆಯನಾದವನು ಕೇವಲ ತಾನು ಆಡುವ ಮಾತುಗಳ ಮೇಲೆ ಹತೋಟಿ ಹೊಂದಿರುವುದಲ್ಲದೆ, ಇತರರ ಸ್ತುತಿ, ನಿಂದೆಗಳ ಕುರಿತೂ ನಿರ್ಲಿಪ್ತನಾಗಿರುತ್ತಾನೆ. ಜೈನ ಮುನಿ ಶ್ರೀ ತರುಣಸಾಗರರು ಹೇಳಿದ ಈ ಸಾಂದರ್ಭಿಕ ಉದಾಹರಣೆ ಮನನೀಯವಾಗಿದೆ. ಒಮ್ಮೆ ಶಿಷ್ಯ ಗುರುವಿಗೆ, "ಗುರುಗಳೇ, ಆಶ್ರಮಕ್ಕೆ ಭಕ್ತನೊಬ್ಬ ಹಸು ನೀಡಿದ್ದಾನೆ" ಎಂದಾಗ ಗುರು, "ಒಳ್ಳೆಯದಾಯಿತು. ಹಾಲು ಸಿಗುತ್ತದೆ" ಎಂದರು. ಒಂದು ವಾರದ ನಂತರದಲ್ಲಿ ಶಿಷ್ಯ, "ಗುರುಗಳೇ, ಯಾರು ಹಸುವನ್ನು ನೀಡಿದ್ದರೋ ಆ ಭಕ್ತ ಹಸುವನ್ನು ವಾಪಸು ತೆಗೆದುಕೊಂಡು ಹೋಗಿದ್ದಾನೆ" ಎಂದಾಗ ಗುರು, "ಒಳ್ಳೆಯದಾಯಿತು. ಸಗಣಿ ಬಾಚುವ ಕೆಲಸ ತಪ್ಪಿತು" ಎಂದರಂತೆ! ಬಂದದ್ದನ್ನು ಬಂದಂತೆ ಸ್ವೀಕರಿಸುವ, ಒಪ್ಪುವ ಮನೋಭಾವ ಸಾಧಕರಿಗೆ ಸುಲಭವಾಗಿರುತ್ತದೆ. ನಾವೂ ಸಹ 'ವಾಕ್ಕೊಡೆಯ'ರಾಗುವ ಪ್ರಯತ್ನ ಮಾಡೋಣ.

ನಿಂದನೆಯ ನುಡಿಗಳು ಅಡಿಯನೆಳೆಯುವುವು

ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು|

ಪರರ ನಿಂದಿಪರ ಜಗವು ಹಿಂದಿಕ್ಕುವುದು

ವಂದಿತನಾಗು ನಲ್ನುಡಿಯೊಡೆಯನಾಗು ಮೂಢ|| 

-ಕ.ವೆಂ.ನಾಗರಾಜ್.

ಚಿತ್ರಕೃಪೆ:  http://www.examiner.com/images/blog/wysiwyg/image/father-son.png

Comments

Submitted by lpitnal Thu, 01/01/2015 - 23:24

ಗುರುಜಿ, ಈ ಸಂದರ್ಭದಲ್ಲಿ ನಾಡೋಜ ಚೆಂಬೆಳಕಿನ ಕವಿಗಳ ಈ ಸಾಲುಗಳನ್ನು ಕೂಡ ಗಮನಿಸಬಹುದು
ನೀನಾಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ

Submitted by H A Patil Fri, 01/02/2015 - 20:20

ಕವಿ ನಾಗರಾಜ ರವರಿಗೆ ವಂದನೆಗಳು
' ವಾಕ್ಕೊಡೆಯರಾಗೋಣ ' ನಾವು ಮಾತಿನ ಒಡೆಯರಾಗುವುದು ಎಷ್ಟು ಕಷ್ಟ ಮತ್ತು ಅದರ ವರ್ತಮಾನದ ಅಗತ್ಯತೆಯನ್ನು ಮನ ಮುಟ್ಟುವಂತೆ ನಿರೂಪಿಸಿದ್ದೀರಿ. ವೇದ ಸಾಹಿತ್ಯದ ಪೂರ್ವ ಕಾಲದಿಂದ ಪ್ರಾರಂಭವಾಗಿ ಇಂದಿನ ವರೆಗೂ ಬಂದು ನಿಲ್ಲುವ ಪರಿ ಅದ್ಭುತ.ಬದುಕು ಬಂದಂತೆ ಸ್ವೀಕರಿಸುವ ಸ್ವಭಾವವನ್ನು ನಾವು ರೂಢಿಸಿಕೊಂಡರೆ ಜಗದ ಅರ್ಧ ಜಂಜಡ ಕಡಿಮೆಯಾಗುತ್ತದೆ. ಧನ್ಯವಾದಗಳು.

Submitted by kavinagaraj Sat, 01/03/2015 - 08:09

In reply to by H A Patil

ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು, ಹನುಮಂತ ಅನಂತ ಪಾಟೀಲರೇ. ನಿರೀಕ್ಷೆ ನೋವು ತರಬಹುದು, ಆದರೆ ಬಂದದ್ದನ್ನು ಒಪ್ಪಿದರೆ ನೋವಿನ ಅನುಭವದ ತೀವ್ರತೆ ಕಡಿಮೆಯಾಗುವುದು ಎಂಬ ನಿಮ್ಮ ಮಾತು ಸತ್ಯ.