ಸಂತೋಷದ ಜಾಡಿ!

ಸಂತೋಷದ ಜಾಡಿ!

ಚಿತ್ರ

ಆತ್ಮೀಯರೆ,

          ಈ ಹೊಸ ವರ್ಷದ ಆರಂಭದಿಂದ ಈ ಕಾರ್ಯವನ್ನು ಕೈಗೊಳ್ಳಬಹುದೆನಿಸುತ್ತದೆ, ಇದೇನೆಂದು ತಿಳಿಯಲು ಆಸಕ್ತಿಯುಳ್ಳವರು ಮುಂದಿನ ಬರಹವನ್ನು ಓದಿ.

          ಸಂತೋಷದ ಜಾಡಿ ಎಂದರೇನು? ಅದು ಜಗತ್ತಿನಲ್ಲಿರುವ ಅತ್ಯಂತ ಸರಳ ವಸ್ತು. ನೀವೇ ಸ್ವತಃ ಒಂದು ಜಾಡಿಯನ್ನು (ಡಬ್ಬಿ ಅಥವಾ ಇನ್ಯಾವುದೇ ತರಹದ ಪಾತ್ರೆ) ತೆಗೆದುಕೊಳ್ಳಿ ಮತ್ತು ಪ್ರತಿದಿನ, ದಿನದಾಂತ್ಯದಲ್ಲಿ ಅಂದಿನ ಅತ್ಯಂತ ಸಂತೋಷಕರ ಗಳಿಗೆಯನ್ನು ಒಂದು ಚೀಟಿಯಲ್ಲಿ ಬರೆದಿಟ್ಟು ಆ ಜಾಡಿಯಲ್ಲಿ ಹಾಕಿಡಿ.

          ನಿಮಗೆ ಅತ್ಯಂತ ಬೇಸರ ತಂದ ದಿನವಾದರೂ ಸರಿ, ಇದನ್ನು ಕ್ರಮ ತಪ್ಪದೇ ಮಾಡಿ, ಏಕೆಂದರೆ ಅಂತಹ ದಿವಸಗಳಲ್ಲಿ ಸಹ ಒಂದಾದರೂ ಸಂತಸಕರವಾದ ಕ್ಷಣವಿರುತ್ತದೆ (ಒಂದು ವೇಳೆ ಇಲ್ಲದಿದ್ದರೆ ಕಡೇ ಪಕ್ಷ ಕಡಿಮೆ ಕೆಟ್ಟದಾದ ಕ್ಷಣವಿರುತ್ತದೆ). ಹೀಗೆ ಬರೆದ ಕಾಗದದ ಚೀಟಿಯನ್ನು ಆ ಜಾಡಿಯಲ್ಲಿ ಹಾಕಿ.

          ಹಲವು ವರ್ಷಗಳ ನಂತರ ನಿಮ್ಮ ಸಂತಸದ ಕ್ಷಣಗಳ ದಾಖಲೆ ಸಿದ್ಧವಾಗಿರುತ್ತದೆ.

          ನಿಮಗೆ ಕೆಡುಕೆನಿಸುವ ಅಥವಾ ಕೆಟ್ಟದ್ದೆಂದು ಅಂದುಕೊಳ್ಳುವ ಯಾವುದಾದರೂ ಒಂದು ದಿವಸದಲ್ಲಿ ನಿಮ್ಮ ಕೈಯ್ಯನ್ನು ಆ ಜಾಡಿಯಲ್ಲಿ ಆಡಿಸಿ ಒಂದು ಹಿಡಿಯಷ್ಟು ಸಂತಸದ ಕ್ಷಣಗಳನ್ನು ಹೆಕ್ಕಿಕೊಳ್ಳಿ, ಅದರಲ್ಲಿ ನೀವು ದಾಖಲಿಸದೇ ಇದ್ದರೆ ವಾಸ್ತವವಾಗಿ ಮರೆತುಹೋಗಬಹುದಾಗಿದ್ದ ಸಂತಸದ ಕ್ಷಣಗಳು ದೊರೆಯುತ್ತವೆ.

          ಇದನ್ನು ನಾನು (ಮೂಲ ಲೇಖಕರು) ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ ಮತ್ತು ಹೀಗೆ ಮಾಡುವುದನ್ನು ನಾನು ಇಷ್ಟ ಪಡುತ್ತೇನೆ.

          ಒಂದು ವೇಳೆ ನನ್ನ ಮನೆಗೇನಾದರೂ ಬೆಂಕಿ ಬಿದ್ದರೆ, ನಾನು ಹೊರಗೋಡಿ ಬರುವ ಮುನ್ನ ಮಾಡುವ ಮೊದಲ ಕೆಲಸವೆಂದರೆ ಇದನ್ನು ತೆಗೆದುಕೊಳ್ಳುವುದು..... ಏಕೆಂದರೆ ಅದರಲ್ಲಿ ಏನಿದೆ ಎಂದುಕೊಂಡಿರಿ - ಅದರಲ್ಲೇ ಎಲ್ಲಾ ಇದೆ, ಜೀವನದ ಮೂಲೋದ್ದೇಶ.

          ವರ್ಷಗಳು ಕಳೆದಂತೆ ನನ್ನ ಸಂತಸದ ಜಾಡಿ ನನಗೆ ಬಹಳಷ್ಟು ಕಲಿಸಿದೆ. ನನ್ನನ್ನು ಚಕಿತಗೊಳಿಸುವುದು ಏನೆಂದರೆ ಪ್ರತಿದಿನದ ಕಡೆಯಲ್ಲಿ ಚೀಟಿಯಲ್ಲಿ ಏನು ದಾಖಲಾಗುತ್ತದೆ ಎನ್ನುವುದು. ವ್ಹಾಹ್, ವ್ಹಾಹ್ ಎನ್ನುವ ಕಾರ್ಯಕ್ರಮಗಳಲ್ಲ, ಅಥವಾ ದೊಡ್ಡ ಸಾಧನೆಗಳಲ್ಲ - ಸಾಮಾನ್ಯವಾಗಿ ಕೇವಲ ಸಣ್ಣ-ಪುಟ್ಟ ಸಂಗತಿಗಳು, ಒಂದು ಕ್ಷಣದ ವಿವೇಚನೆ..... ನೀವು ಹೊರಗೆ ಕಾಲಿಡುತ್ತಿದ್ದಂತೆಯೇ ಬಂದು ಗುದ್ದಿದ ಕಾರು ನಿಮ್ಮ ತಲೆಗೆ ಪೆಟ್ಟಾಗುವಂತೆ ಮಾಡಿ, ಹಗಲಿನಲ್ಲಿ ನಕ್ಷತ್ರಗಳನ್ನು ಕಾಣುವಂತೆ ಮಾಡಿದ್ದು, ಮತ್ತು ತಕ್ಷಣವೇ ಅವನ್ನೆಲ್ಲಾ ಬದಿಗೆ ತಳ್ಳಿ ಸಧ್ಯ ನನಗೇನೂ ಆಗಲಿಲ್ಲ, ನಾನು ಜೀವಂತವಾಗಿಯೇ ಇದ್ದೇನೆ ಎನ್ನುವ ಧನ್ಯತಾ ಭಾವ ತಳೆಯುವುದು, ಮತ್ತು ನಿಮಗೆ ಅನಿಸುತ್ತದೆ, "ಹೌದು, ಇದೇ ಆ ಸಂತಸದ ಕ್ಷಣ!"

        ಇದು ಸಾಮಾನ್ಯವಾಗಿ ಅಷ್ಟು ಸಣ್ಣದು ಮತ್ತು ಅಷ್ಟೇ ಮಹತ್ತರವಾದದ್ದು.

         ನಿಮ್ಮಲ್ಲಿ ಬಹುತೇಕರು ಇದನ್ನು ಅಭ್ಯಾಸವಾಗಿಟ್ಟುಕೊಂಡಿರಬಹುದು, ಮತ್ತು ನಿಮ್ಮ ಜಾಡಿಯಲ್ಲಿನ ಚಿತ್ರಗಳನ್ನು ನೋಡುತ್ತಿರಬಹುದು, ಮತ್ತು ಇದನ್ನು ಯಾವ ರೀತಿ ನಿಮ್ಮ ಜೀವಿತದಲ್ಲಿ ಅಳವಡಿಸಿಕೊಂಡಿದ್ದೀರಿ ಎನ್ನುವುದು ನನಗೆ ತಿಳಿದಿದೆ. ನನಗೆ ಗೊತ್ತಿರುವ ಒಬ್ಬ ಮಹಿಳೆ ಈ ಸಂತಸದ ಜಾಡಿಯನ್ನು ತನ್ನ ಮನೆಯ ಡೈನಿಂಗ್ ಟೇಬಲ್ಲಿನ ಮೇಲಿಟ್ಟಿದ್ದಾಳೆ ಮತ್ತು ಆಕೆಯ ಮಕ್ಕಳೂ ಸಹ ಅದರಲ್ಲಿ ತಮ್ಮ ಸಂತಸದ ಕ್ಷಣಗಳ ಚೀಟಿಯನ್ನು ಹಾಕುತ್ತಾರೆ - ಎಂತಹ ಒಳ್ಳೆಯ ಕೌಟುಂಬಿಕ ಹವ್ಯಾಸ! ಇನ್ನೊಬ್ಬ ಹೆಂಗಸು ನನಗೆ ಇತ್ತೀಚೆಗೆ ಪತ್ರ ಬರೆದು ತಿಳಿಸಿದ್ದೇನೆಂದರೆ, ಈ ವರ್ಷ ತನ್ನ ಜೀವಿತದಲ್ಲೇ ಅತ್ಯಂತ ತಾಪತ್ರಯದಿಂದ ಕೂಡಿದ ದಿನಗಳನ್ನು ಎದುರಿಸುತ್ತಿದ್ದರೂ ಸಹ ಆಕೆ ಈ ಅಭ್ಯಾಸವನ್ನು ಪ್ರತಿದಿನವೂ ಮುಂದುವರೆಸಿಕೊಂಡು ಹೋಗುತ್ತಿದ್ದಾಳೆ, ಮತ್ತು ಈ ದಿನ ಅಂದರೆ ೨೦೧೪ನೇ ಸಂವತ್ಸರದ ಕಡೆಯ ದಿನ ಆಕೆ ಆ ಜಾಡಿಯಲ್ಲಿರುವ ಪ್ರತಿಯೊಂದೂ ಚೀಟಿಯನ್ನು ಹೆಕ್ಕಿ ಓದಿಕೊಂಡು ಇಂತಹ ಕಷ್ಟಕರ ದಿನಗಳಲ್ಲಿಯೂ ಸಹ ತನಗೆ ದಿನಕ್ಕೆ ಒಂದಾದರೂ ಸಂತಸದ ಕ್ಷಣಗಳಿದ್ದವು ಎಂದು ಖುಷಿ ಪಡುತ್ತಾಳೆ.

          ಆದ್ದರಿಂದ ಯಾರಾದರೂ ಈ ಅಭ್ಯಾಸವನ್ನು ಆರಂಭಿಸ ಬೇಕೆಂದರೆ ಈ ಹೊಸ ವರ್ಷದಿಂದಲೇ ಆರಂಭಿಸಬಹುದು, ಹೊಸ ವರ್ಷಕ್ಕೊಂದು ಮಹತ್ತರವಾದ ನಿರ್ಣಯವಾದೀತು!

          ನಿಮಗೆಲ್ಲರಿಗೂ ಆತ್ಮೀಯ ಮತ್ತು ಪ್ರೀತಿ ಪೂರ್ವಕವಾದ ೨೦೧೫ರ ಹೊಸ ವರ್ಷದ ಶುಭಾಶಯಗಳು.

ವಿ.ಸೂ. : ವೈಯಕ್ತಿಕವಾಗಿ ಪಾಶ್ಚಿಮಾತ್ಯ ಹೊಸ ವರ್ಷಕ್ಕೆ ಶುಭ ಕೋರುವ ಪದ್ಧತಿಯಿಲ್ಲದಿದ್ದರೂ ಸಹ ಇದರಲ್ಲಿರುವ ವಿಷಯ ಮಹತ್ವಪೂರ್ಣವೆನಿಸಿದ್ದರಿಂದ ಈ ಬರಹವನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಆಂಗ್ಲ ಮೂಲ: ಮಿತ್ರನೋರ್ವ ಹಂಚಿಕೊಂಡ ಮೊಗಹೊತ್ತಗೆಯ ಪುಟದಿಂದ.

ಚಿತ್ರ ಕೃಪೆ : ಗೂಗಲ್ 

 

 

 

Rating
No votes yet

Comments

Submitted by H A Patil Fri, 01/02/2015 - 20:06

ಶ್ರೀಧರ ಬಂಡ್ರಿಯವರಿಗೆ ವಂದನೆಗಳು
' ಸಂತೋಷ 'ದ ಕಾನ್ಸೆಪ್ಟ್ ಕುರಿತ ತಮ್ಮ ಅನಿಸಿಕೆ ಒಂದು ವಿನೂತನ ಸರಳ, ಉತ್ತಮ ವಿಚಾರವೊಂದನ್ನು ನಮಗೆ ತಿಳಿಸಿದ್ದೀರಿ ಧನ್ಯವಾಗದಳು.

Submitted by H A Patil Fri, 01/02/2015 - 20:06

ಶ್ರೀಧರ ಬಂಡ್ರಿಯವರಿಗೆ ವಂದನೆಗಳು
' ಸಂತೋಷ 'ದ ಕಾನ್ಸೆಪ್ಟ್ ಕುರಿತ ತಮ್ಮ ಅನಿಸಿಕೆ ಒಂದು ವಿನೂತನ ಸರಳ, ಉತ್ತಮ ವಿಚಾರವೊಂದನ್ನು ನಮಗೆ ತಿಳಿಸಿದ್ದೀರಿ ಧನ್ಯವಾಗದಳು.

Submitted by makara Sat, 01/03/2015 - 09:58

In reply to by H A Patil

ನಿಮಗೂ ಸಹ ವಂದನೆಗಳು ಪಾಟೀಲರೆ, ನಿಮ್ಮ ಉತ್ತೇಜಕ ಪ್ರತಿಕ್ರಿಯೆಗೆ ವಂದನೆಗಳು. ಆದರೆ ವಿಚಾರ ನನ್ನದಲ್ಲ, ನಾನು ಕೇವಲ ಅನುವಾದಕ ಮಾತ್ರ :)

Submitted by kavinagaraj Sat, 01/03/2015 - 08:26

ಓದಿದ್ದೆ, ಆದರೆ ಮರೆತಿದ್ದೆ. ನೆನಪಿಸಿ ಒಳ್ಳೆಯದು ಮಾಡಿದಿರಿ. ಸುಂದರ ವಿಚಾರ, ಅನುಸರಿಸಬಹುದಾದ ವಿಧಾನ.

Submitted by makara Sat, 01/03/2015 - 10:00

In reply to by kavinagaraj

ಹೌದು, ವಿಚಾರ ಹಳೆಯದಾದರೂ ಅದನ್ನು ಮಿತ್ರನೋರ್ವ ಅಂಚೆಯಲ್ಲಿ ಹಂಚಿಕೊಳ್ಳುವುದರ ಮೂಲಕ ನೆನಪಿಸಿದ್ದರಿಂದ ಅದನ್ನು ಇಲ್ಲಿ ಸೇರಿಸಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು ಕವಿಗಳೆ.

Submitted by nageshamysore Sun, 01/04/2015 - 15:28

ಶ್ರೀಧರರೆ ನಮಸ್ಕಾರ. ಮನುಷ್ಯ ತನ್ನ ದುಃಖದ ತೀವ್ರತೆಯನ್ನು ಅನುಭವಿಸಿದಷ್ಟು ತೀಕ್ಷ್ಣವಾಗಿ ಸುಖ-ಸಂತಸದ ನೆನಪನ್ನು ಗ್ರಹಿಸಲಾರ. ಇನ್ನು ಎರಡರ ಆಗುವಿಕೆ ಯಾವುದೆ ಸೂತ್ರಬದ್ಧ ನಿಯಮಕ್ಕೊಳಪಡದೆ ಯಾವಾಗ ಬೇಕಾದರು ಸಂಭವಿಸುವುದರಿಂದ ಎರಡರ ಮಿಶ್ರಣದಲ್ಲಿ ಸಂತಸದ ಗಳಿಗೆಗಳ ಗ್ರಹಿಕೆ ಕಳೆದುಹೋಗುವುದೆ ಹೆಚ್ಚು. ಅಲ್ಲದೆ ದುಃಖದ ಗಳಿಗೆಗಳು ಉದ್ದವಾಗಿ, ಸಂತಸದ ಗಳಿಗೆಗಳು ಕ್ಷಣಿಕವಾಗಿ ತೋರುವ ಭ್ರಾಂತ ಅನುಭೂತಿ ಬೇರೆ ಸೇರಿಕೊಂಡು ಬದುಕೆಲ್ಲ ಬರಿ ಕಷ್ಟ ಕಾರ್ಪಣ್ಯಗಳು ಮಾತ್ರವೇನೊ ಅನಿಸಿಬಿಡುತ್ತದೆ. ಹೀಗೆ ಸಂತಸದ ಗಳಿಗೆಗಳನ್ನು ಒಟ್ಟುಗೂಡಿಸುತ್ತ ಹೋದರೆ (ಬಾಟಲಿಯಲ್ಲೊ, ಪೆಟಾರಿಯಲ್ಲೊ ಅಥವಾ ಕಂಪ್ಯೂಟರಿನಲ್ಲೊ) ಕನಿಷ್ಠ ಬದುಕೆಲ್ಲ ಬರಿ ನೋವಲ್ಲ, ನಲಿವು ಇದೆಯೆಂದು ಅರಿವಾಗುತ್ತದೆ. ಜತೆಗೆ ಇದು ಧನಾತ್ಮಕ ವಿಧಾನ ಸಹ !

Submitted by makara Tue, 01/06/2015 - 09:16

In reply to by nageshamysore

ಕಥೆಯ ಸಾರವನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದೀರ ನಾಗೇಶರೆ. ಬಹಳಷ್ಟು ದಿನಗಳಿಂದ ಸಂಪದದವನ್ನು ಅದೇಕೋ ಓದದೇ ಹಾಗೇ ಬಿಟ್ಟದ್ದರಿಂದ ನಿಮ್ಮೆಲ್ಲರ ಉತ್ತಮ ಬರಹಗಳನ್ನು ಮಿಸ್ ಮಾಡಿಕೊಂಡೆ.

Submitted by ಗಣೇಶ Mon, 01/05/2015 - 00:17

ಹೊಸವರ್ಷಕ್ಕೆ ಸಂಪದಕ್ಕೆ ಶ್ರೀಧರ್‌ಜಿಯ ಪುನರಾಗಮನ ಖುಷಿಯಾಯಿತು. ಈ ಜಾಡಿ ಕತೆ ಕೇಳಲು ಚೆನ್ನಾಗಿದೆ. ಆದರೆ ಆಚರಿಸಲು ಹೋಗಬೇಡಿ- ನಾನು ಡೈರಿ ಅನೇಕ ವರ್ಷಗಳಿಂದ ಬರೆದೂ ಬರೆದೂ-ಮೊದ ಮೊದಲು ಗಾಡ್ರೆಜ್ ಒಳಗೆ ಇದ್ದುದು, ನಂತರ ಕಪಾಟಿಗೆ ಶಿಫ್ಟ್ ಆಗಿ, ನಂತರ ಅಲ್ಲಿಂದ ಅಟ್ಟ ಸೇರಿ, ಗೆದ್ದಲು ತಿಂದು, ಕೆಲವು ಒಲೆ ಸೇರಿದವು :( .
ಇನ್ನು ಉಪ್ಪಿನಕಾಯಿ ಭರಣಿಗಳೇ ಇರದ ಈ ಕಾಲದಲ್ಲಿ, ಸಂತೋಷದ ಜಾಡಿಗಳನ್ನು ಎಲ್ಲಿ ಜೋಡಿಸುವಿರಿ!?
ಸುಲಭ ಉಪಾಯ ಹೇಳುವೆ- ತಾಪತ್ರಯ, ತಲೆಬಿಸಿ ಆದಾಗ "ಸಂಪದ" ತೆರೆದು ಓದಿ..

Submitted by makara Tue, 01/06/2015 - 09:18

In reply to by ಗಣೇಶ

ಗಣೇಶ್‌ ಜಿ,
>>ಸುಲಭ ಉಪಾಯ ಹೇಳುವೆ- ತಾಪತ್ರಯ, ತಲೆಬಿಸಿ ಆದಾಗ "ಸಂಪದ" ತೆರೆದು ಓದಿ..<< ನೀವು ಹೇಳಿದ ಇದೇ ಕಾರಣಕ್ಕೇ ಇರಬಹುದು ನಾನು ಪುನಃ ಸಂಪದದ ಪುಟಗಳನ್ನು ತೆರೆದು ಓದು ಇಲ್ಲಿಗೆ ಮರಳಿ ಬಂದದ್ದು. ಸಂಪದದಲ್ಲಿ ನಮ್ಮಂತಹ ಅನೇಕ ಕಿರು, ಹಿರಿ ತೆರೆಗಳು ಬಂದು ಹೋಗುತ್ತಲಿರುತ್ತವೆ, ಆದರೆ ಸಮುದ್ರದಲ್ಲಿರುವ ಹೆಬ್ಬಂಡೆಯಂತೆ ನೀವು ಇಲ್ಲಿ ಸ್ಥಿರವಾಗಿರುವುದು ಸಂತಸ ಕೊಡುತ್ತದೆ.