ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು

ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು

ಪಂಪನ ’ವಿಕ್ರಮಾರ್ಜುನ ವಿಜಯ’ದಲ್ಲಿ ಮತ್ತು ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ ಕಂಡುಬರುವ ಕನ್ನಡನಾಡಿನ ಚೆಲುವು
ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆಯ್ದಿಲ
ಪೊಸವೂ ಪೊದಳ್ದ ಪೊಸನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂ
ಗೊಲೆಯೊಳೆ ಜೋಲ್ವ ಶಾಳಿ [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ ಕ
ಯ್ವೊಲಗಳಿನೊಪ್ಪಿ ತೋಱೆ ಸಿರಿ ನೋಡುಗುಮಾ ವಿಷಯಾಂತರದೊಳ್

ಪದ ಬಿಡಿಸುವಿಕೆ

ಜಲಜಲನೆ = ಕಲರವ ಮಾಡುತ್ತ, ಒೞ್ಕುತಿರ್ಪ = ಹರಿಯುತ್ತಿರುವ ಪರಿಕಾಲ್ =ಕಾಲುವೆ, ಪರಿಕಾಲೊಳ್= ಕಾಲುವೆಯಲ್ಲಿ ಅಳುರ್ಕೆಗೊಂಡ =ಹರಡಿದ, ನೆಯ್ದಿಲ ಪೊಸಪೂ ಪೊದಳ್ದ =ನೈದಿಲೆಯ ಹೊಸ ಹೂವು ಬೀರಿದ, ಪೊಸನೆಯ್ದಿಲ ಕಂಪನೆ ಬೀಱಿ= ನೈದಿಲೆಯ ಅಚ್ಚಗಂಪನ್ನು ಹರಡಿರಲು, ಕಾಯ್ತ ಕೆಂಗೊಲೆಯೊಳೆ ಜೋಲ್ವ ಶಾಳಿ = ಬಿಸಿಲಿನಲ್ಲಿ ಕಾದಿರುವ ಕೆಂಪು ತೆನೆಯಲ್ಲಿ ತೂಗಾಡುವ ಬತ್ತ(ದ ಗದ್ದೆ), [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ= ಹೊಸ ಬತ್ತಕ್ಕೆ ಮುತ್ತುತ್ತಿರುವ ಗಿಳಿವಿಂಡು (ಕಾಣುತ್ತಿರಲು),ಕಯ್ವೊಲಗಳಿನೊಪ್ಪಿ ತೋಱೆ = ಬತ್ತದ ಗದ್ದೆಗಳಿಗೆ ಅಂದವಾಗಿ ಕಾಣುತ್ತಿರಲು, ಆ ವಿಷಯಾಂತರದೊಳ್ = ಆ ನಾಡಿನಲ್ಲಿ (ಅದರ) ಸಿರಿ ನೋಡುಗುಂ= ಬೆಡಗು ನೋಡಬೇಕು!!
(ಈ ಪದ್ಯದ ಕೊನೆಯಲ್ಲಿನ ಅರ್ಥೈಕೆಯ ಬಗ್ಗೆ ಅಷ್ಟು ಸಮಾಧಾನವಿಲ್ಲ)

ಒಟ್ಟರ್ಥ:-

ಜುಳುಜುಳು ಹರಿಯುತ್ತಿರುವ ನೀರಿನ ಕಾಲುವೆಗಳಲ್ಲಿ ಹೊಸ ನೈದಿಲೆ ಹೂಗಳು ಅಚ್ಚಗಂಪು ಬೀರುತ್ತಿವೆ. ಬಿಸಿಲಿಗೆ ಕಾದ ಕೆಂಪು ತೆನೆಯ ಬತ್ತದ ಗದ್ದೆಗಳು ಗಾಳಿಗೆ ತುಯ್ಯುತ್ತಿವೆ. ಈ ಬತ್ತದ ತೆನೆಗೆ ಹಾಯುವ (ದಾಳಿಯಿಡುವ) ಗಿಳಿಗಳ ಹಿಂಡು,ಅವುಗಳಿಗೆ ಅಂದ ನೀಡುತ್ತಿರಲು ಆ ಕನ್ನಡನಾಡಿನ ಸೊಬಗು ನೋಡಬೇಕು.

ಸ್ವಲ್ಪ ಇದೇ ಬಗೆಯ ಬಣ್ಣನೆ ಆಂಡಯ್ಯನಲ್ಲೂ ಕಾಣಬಹುದು.

ಉಱೆಕಾಯ್ವ ಬಿಸಿಲೊಳೆಮ್ಮಂ
ಮಱೆದುಂ ಕೊರಗಿಸದೆ ಪೊರೆದುದೆಂದೊಲವಿಂ ಬಂ
ದೆಱಗುವವೋಲ್ ತೆನೆಯಿಂ ಕಾ
ಲ್ಗೆಱಗುವ ಕೞವೆಗಳವೆಲ್ಲಿಯುಂ ಸೊಗಯಿಸುಗುಂ

ಪದವಿಭಾಗ:-

ಉಱೆಕಾಯ್ವ ಬಿಸಿಲೊಳ್= ಬಹುವಾಗಿ ಬಳಲಿಸುವ ಬಿಸಿಲಿನಲ್ಲೂ, ಎಮ್ಮಂ= ನಮ್ಮನ್ನು, ಮಱೆದುಂ ಕೊರಗಿಸದೆ = ತಪ್ಪಿಯೂ ನೋಯಿಸದೆ ಎಂದೂ= ಎಂದಿಗೂ ಒಲವಿಂ ಪೊರೆದು = ಒಲವಿನಿಂದ ಕಾಪಿಟ್ಟು, ತೆನೆಯಿಂ ಕಾಲ್ಗೆರಗುವ = ತಮ್ಮ ಕದಿರಿನಿಂದ ನಮಸ್ಕಾರ ಮಾಡುವ (ವಿನಯ ತೋರುವ, ಕೞವೆಗಳವೆಲ್ಲಿಯುಂ ಸೊಗಯಿಸುಗುಂ = ಬತ್ತದ ಗದ್ದೆಗಳು ಎಲ್ಲಿಲ್ಲಿಯೂ ಬೆಡಗುಸೂಸುತ್ತವೆ.
ಭಾವ:-

ನೆತ್ತಿಸುಡುವ ಬಿಸಿಲಿನಲ್ಲಿ ಓಡಾಡುವ ಹಾದಿಹೋಕರನ್ನು ಅಪ್ಪಿತಪ್ಪಿಯೂ ಮನನೋಯಿಸದೆ ಪ್ರೀತಿಯಿಂದ ಪೊರೆಯುತ್ತ, (ಗಾಳಿಗೆ ತೂಗಿ ಬಾಗುವ) ತಮ್ಮ ಕದಿರುಗಳಿಂದ ಕಾಲಿಗೆರಗುವ ಬತ್ತದ ಗದ್ದೆಗಳು ಎಲ್ಲೆಲ್ಲಿಯೂ ಕಂಗೊಳಿಸುತ್ತಿವೆ.

(ಸಂಸ್ಕೃತ ಕವಿಗಳು ಮಾಡಿದ ತಪ್ಪನ್ನೇ ಕನ್ನಡ ಕವಿಗಳೂ ಮಾಡಿರುವುದನ್ನು ಇಲ್ಲಿ ಗಮನಿಸಬೇಕು. ತಾವರೆ, ನೈದಿಲೆಗಳಂಥ ನೀರಿನ ಹೂಗಳು ಮಲೆತ ನೀರುನಲ್ಲಿ ಬೆಳೆಯುತ್ತವೆಯೇ ಹೊರತು ಹರಿಯುವ ನೀರಿನಲ್ಲಲ್ಲ. ಈ ವಿಷಯ ಕನ್ನಡದ ಕವಿಗಳ ಗಮನಕ್ಕೂ ಬಾರದೆ ಹೋಯಿತೆ?!"

Rating
No votes yet

Comments