ವಿಕಲ ಚೇತನ ಸಕಲ..
'ಪಂಜು' ಆನ್ಲೈನ್ ವಾರಪತ್ರಿಕೆಯ ನೂರನೆ ಸಂಚಿಕೆಯನ್ನು 'ವಿಕಲಾಂಗ ವಿಶೇಷ' ಸಂಚಿಕೆಯಾಗಿ ಹೊರತರಲಾಗಿತ್ತು. ಆ ಸಂಚಿಕೆಯಲ್ಲಿ ಪ್ರಕಟವಾದ ವಿಕಲಾಂಗತೆಯ ಕುರಿತಾದ ನನ್ನ ಕವನವಿದು.
ವಿಕಲ ಚೇತನ ಸಕಲ..
____________________
ಯಾರು ವಿಕಲ ಚೇತನರು, ಸ್ವಾಮಿ ?
ಸಕಲವಿದ್ದೂ ಇಲ್ಲದ ನಾವೊ, ಅವರೊ?
ಯಾರ ತಪ್ಪೊ, ಪಾಪವೊ ಸುಂಕ
ಕಟ್ಟುತ ತೆರದಲೆ ಜೀವನ ಪೂರ
ಹೋರಾಟದ ಬದುಕಲಿ ಛಲ ಬಂಡವಾಳ...
ಆತ್ಮಾಭಿಮಾನ ಸ್ವಾಭಿಮಾನ ಹಂಬಲ
ಸಕಲಾಂಗರೆ ಕೈಬಿಟ್ಟಾ ಗಳಿಗೆ
ವೈಕಲ್ಯವೆ ದೂರಿ, ಕಾಡಿ ಸಂಬಳ ನೋವಲ್ಲೆ
ಕೀಳರಿಮೆ ಅನುಕಂಪದ ಎದೆಯಲೆ
ಬೀಜ ಬಿತ್ತು ಬೆಳೆದು - ಗೊಂಚಲೊ, ಕುರುಚಲೊ..!
ಊನವಿದ್ದರೇನು ದೈಹಿಕ, ಮಾನಸಿಕ ?
ವಿಕಲಾಂಗ ನೋಡುವ ದೃಷ್ಟಿ ಸಹಿತ
ಸಹಿ ಹಾಕಿಬಿಡುವ ಅಂಕಿತ ಮುದ್ರೆಯಡಿ
ಕಳಚಿಕೊಂಡಂತಲ್ಲವೆ ಹೊಣೆ?
ಲೊಚಗುಟ್ಟಿ ಬದಿ ಸರಿಸಿ ಕಾರ್ಯಬಾಹುಳ್ಯ ..
ಯಾರಿಲ್ಲವೀ ಜಗದಲಿ ಸರ್ವೋತ್ಕೃಷ್ಟಾ
ಒಂದಲ್ಲೊಂದು ಯಾತನೆ ತನುಮನಾಸ್ವಸ್ಥ
ಇಣುಕಿತೆಂದು ಇನಿತು ವಿಕಲ ಚೇತನವೇ?
ಕೆಣಕದಿರೆ ಜಗವ ಸಜ್ಜನಿಕೆ, ಚೇತೋಹಾರಿಯೆ ?
ಬಿಡು ಯಾರಿಲ್ಲ ವಿಕಲ-ಚೇತನ-ಸಕಲ ಸೃಷ್ಟಿಯಲಿ ..
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ವಿಕಲ ಚೇತನ ಸಕಲ..
ನಾಗೇಶ ಮೈಸೂರು ರವರಿಗೆ ವಂದನೆಗಳು
ವಿಕಲ ಚೇತನ ಸಕಲ' ಕವನ ಚೆನ್ನಾಗಿದೆ,ವಿಕಲ ಚೇತನರು ಅವರಲ್ಲ, ಅವರನ್ನು ಕಡೆಗಣಿಸುವ ಸಕಲ ಚೇತನರೆನಿಸುವ ನಾವು ಬಹಳ ಅರ್ಥಗರ್ಭಿತ ಕವನ ಧನ್ಯವಾದಗಳು.
In reply to ಉ: ವಿಕಲ ಚೇತನ ಸಕಲ.. by H A Patil
ಉ: ವಿಕಲ ಚೇತನ ಸಕಲ..
ಪಾಟೀಲರೆ ನಮಸ್ಕಾರ. ಈ ಜಗದ ಯಾವ ಜೀವಿಯೂ ಪರಿಪೂರ್ಣವಲ್ಲ - ಯಾವುದಾದರೊಂದು ಕುಂದು, ಕೊರತೆ, ದೋಷಗಳಿರದ ಜೀವಿ, ವ್ಯಕ್ತಿ ಇರಲು ಸಾಧ್ಯವೆ ಇಲ್ಲ. ಹೀಗಿರುವಾಗ ತುಸು ಎದ್ದು ಕಾಣುವ ವೈಕಲ್ಯವನ್ನು ತುಚ್ಛೀಕರಿಸಿದರೆ ಆ ಭಾವವೆ ಒಂದು ರೀತಿಯ ವೈಕಲ್ಯತೆಯಾಗಿಬಿಡುತ್ತದೆ. ಯಾರೂ ಪರಿಪೂರ್ಣರಲ್ಲ ಎಂಬ ಅರಿವಿನಿಂದಾದರೂ ಎಲ್ಲರತ್ತ ಸಹಾನುಭೂತಿ, ಕಾಳಜಿ ತೋರುವಂತಾದರೆ ವಿಕಲ ಚೇತನರ ಬಾಳು ತುಸು ಸಹನೀಯವಾದೀತೆಂಬ ಆಶಯ :-)
ಉ: ವಿಕಲ ಚೇತನ ಸಕಲ..
ಎರಡು ಕಾಲುಗಳನ್ನು ಕಳೆದುಕೊಂಡರೂ ಕೃತಕ ಕಾಲುಗಳಿಂದ ಹಿಮಾಲಯ ಏರಿದ ಅರುಣಿಮಾ ಸಿನ್ಹಾ, ಹುಟ್ಟು ಕುರುಡರಾಗಿದ್ದರೂ ಮಹರ್ಷಿ ದಯಾನಂದ ಸರಸ್ವತಿಯವರಂತಹವರನ್ನು ಜಗತ್ತಿಗೆ ನೀಡಿದ ಅವರ ಗುರು ವಿರಜಾನಂದರು ವಿಕಲ ಚೇತನರಿಗೆ ಮಾರ್ಗದರ್ಶಿಯಾಗಿದ್ದಾರೆ. ಇಚ್ಛಾಶಕ್ತಿಯಿದ್ದರೆ ಅಂಗವಿಕಲತೆ ಸಾಧನೆಗೆ ಅಡ್ಡಿಯಾಗದು. ವಿಚಾರಕ್ಕೆ ಹಚ್ಚುವ ಕವನಕ್ಕಾಗಿ ವಂದನೆಗಳು.
In reply to ಉ: ವಿಕಲ ಚೇತನ ಸಕಲ.. by kavinagaraj
ಉ: ವಿಕಲ ಚೇತನ ಸಕಲ..
ನಿಮ್ಮ ಮಾತು ನಿಜ ಕವಿಗಳೆ. ತಮ್ಮ ವೈಕಲ್ಯವನ್ನು ಬಲಹೀನತೆಯಾಗಲಿಕ್ಕೆ ಬಿಡದೆ ಅದನ್ನೆ ಸಾಮರ್ಥ್ಯವನ್ನಾಗಿಸಿಕೊಂಡು ಅಸಾಧಾರಣ ಸಾಧನೆಗೈದ ಇಂತಹವರ ಮುಂದೆ ನಮ್ಮ ಸಾಧನೆಗಳು ಏನೇನೂ ಇಲ್ಲ. ಬಹುಶಃ ಅವರ ದೌರ್ಬಲ್ಯವೆ ಅವರ ಶಕ್ತಿಯೂ ಹೌದು ಎನ್ನಬಹುದೇನೊ?