‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’
‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’
ಇವೆರಡು ಪುಸ್ತಕಗಳು ನಾನು ಸುಮಾರು ೨೨ರಿಂದ ೨೫ ವರ್ಷಗಳ ಹಿಂದೆ ಓದಿದಂತಹವುಗಳು. ಮೊದಲನೆಯ ಪುಸ್ತಕವಾದ ’ದ ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ವೇರ್’ ನಲ್ಲಿ ಬಹುತೇಕ ಪ್ರಪಂಚಾದಾದ್ಯಂತ ಸ್ತ್ರೀಯರ ಗುಣ ಸ್ವಭಾವಗಳು ಹಾಗೂ ಅವರ ಪದ್ಧತಿಗಳ ಕುರಿತಾಗಿ ಭಾವಚಿತ್ರಗಳೊಂದಿಗೆ ಸಂಕ್ಷಿಪ್ತ ವಿವರಣೆಯೂ ಇತ್ತು. ಆದರೆ ಆ ಪುಸ್ತಕದ ಲೇಖಕರು ಯಾರೆನ್ನುವುದು ನೆನಪಿಲ್ಲ; ಬಹುತೇಕ ಒಬ್ಬ ಯೂರೋಪಿನಯನ್ ಅದರಲ್ಲೂ ವಿಶೇಷವಾಗಿ ಒಬ್ಬ ಬ್ರಿಟೀಷ್ ನಾಗರೀಕ ಆ ಪುಸ್ತಕ ಬರೆದಿರಬೇಕೆನ್ನುವುದು ನನಗಿರುವ ಮಸುಕಾದ ಜ್ಞಾಪಕ. ಅದರಲ್ಲಿದ್ದ ಕೆಲವು ವಿವರಗಳನ್ನು ಇಲ್ಲಿ ಬರೆಯುತ್ತೇನೆ.
ಅವನು ಬರೆದಂತೆ ವಿಶ್ವದ್ಯಾಂತ ಎಲ್ಲ ಕಡೆಗಳಲ್ಲಿಯೂ ಮುಸಲ್ಮಾನ ಸ್ತ್ರೀಯರು ಬುರಖಾವನ್ನು ಧರಿಸಿ ಪರಪುರುಷರಿಗೆ ತಮ್ಮ ಮುಖವನ್ನು ತೋರಿಸಲು ಒಪ್ಪದೇ ಇದ್ದದ್ದರಿಂದ ಅವರ ಫೋಟೋಗಳನ್ನು ಗ್ರಂಥ ಕರ್ತನಿಗೆ ತೆಗೆಯಲಾಗಲಿಲ್ಲವೆನ್ನುವುದು ಅವನ ಅಳಲು. ಇನ್ನು ಎರಡನೆಯದಾಗಿ ಅವನು ಬರೆಯುವುದೇನೆಂದರೆ ಚೀನಿಯರಲ್ಲಿ ಮತ್ತು ಜಪಾನಿಯರಲ್ಲಿದ್ದ ಕೆಲವು ವಿಚಿತ್ರ ಆಚರಣೆಗಳ ಕುರಿತಾಗಿ. ಚೀನಿಯರಲ್ಲಿ ಸ್ತ್ರೀಯರು ತಮ್ಮ ತೊಡೆಗಳವರೆಗೆ ಸ್ಕರ್ಟ್ನಂತಹ ಬಟ್ಟೆಗಳನ್ನು ತೊಟ್ಟರೆ ಅದು ಅಸಭ್ಯತೆ ಎನಿಸುತ್ತಿರಲಿಲ್ಲ ಆದರೆ ಅವರು ತಮ್ಮ ಕಂಠವನ್ನು ಹೊರಗೆ ಕಾಣುವಂತೆ ಬಟ್ಟೆ ಧರಿಸಿದರೆ ಅದು ಅವರ ಸಮಾಜದಲ್ಲಿ ಅಶ್ಲೀಲವೆನಿಸುತ್ತಿತ್ತು. ಇದಕ್ಕಿಂತ ವಿಚಿತ್ರವಾದ ನಡವಳಿಕೆ ಜಪಾನೀಯರಲ್ಲಿ ಇತ್ತು. ಅದೇನೆಂದರೆ ಅವರು ಸ್ನಾನ ಮಾಡುವಾಗ ಬೇರೆ ಸ್ತ್ರೀಯರು ಅಲ್ಲಿದ್ದರೆ ಅದು ಅವರಿಗೆ ನಾಚಿಕೆಯ ವಿಷಯವಾಗಿತ್ತು. ಆದರೆ ಅವರು ಸ್ನಾನ ಮಾಡುವಾಗ ಪುರುಷರು ಅವನು ಗಂಡನೇ ಆಗಲಿ ಅಥವಾ ಯಾರೇ ಆಗಲಿ ಅವನು ಲೆಕ್ಕಕ್ಕಿರಲಿಲ್ಲ. ಬಹಳ ಕಾಲದ ನಂತರ ಜಪಾನಿನೊಂದಿಗೆ ಯೂರೋಪಿಯನ್ನರ ಸಂಪರ್ಕವೇರ್ಪಟ್ಟು ಅವರನ್ನು ಈ ಕುರಿತಾಗಿ ಯೂರೋಪಿಯನ್ನರು ತಮಾಷೆ ಮಾಡಲು ಪ್ರಾರಂಭಿಸಿದಾಗ ಈ ಪದ್ಧತಿಯು ನಿಂತು ಹೋಯಿತಂತೆ.
ಇದಕ್ಕಿಂತ ವಿಚಿತ್ರವಾದ ಪದ್ಧತಿಯು ನಮ್ಮ ಮಲಯಾಳ ದೇಶದಲ್ಲಿದ್ದದ್ದು. ಅದೇನೆಂದರೆ ಕೆಳವರ್ಗದ ಸ್ತ್ರೀಯರು ರವಿಕೆಯನ್ನೇ ತೊಡುತ್ತಿರಲಿಲ್ಲ. ಅದು ಇಷ್ಟಕ್ಕೇ ಸೀಮಿತವಾಗಿದ್ದರೆ ಅದೇನೂ ದೊಡ್ಡ ವಿಷಯವಲ್ಲ ಬಿಡಿ. ನಮ್ಮ ಕರ್ನಾಟಕದಲ್ಲೂ ಕೆಲವೊಂದು ಜನಾಂಗಗಳವರೂ ತೀರಾ ಒಂದೆರಡು ದಶಕಗಳ ಹಿಂದಿನವರೆಗೆವರೆಗೆ ರವಿಕೆಯನ್ನು ತೊಡುತ್ತಿರಲಿಲ್ಲ. ಉತ್ತರ ಕರ್ನಾಟಕದಲ್ಲಿ, ಯಾರ ಬಳಿಯಲ್ಲಾದರೂ ಇಲ್ಲದುದನ್ನು ಅಪೇಕ್ಷಿಸಿದರೆ ಅದರ ಬಗ್ಗೆ ಒಂದು ಗಾದೆಯನ್ನು ಹೇಳುತ್ತಾರೆ; ಅದು ಹೀಗಿದೆ, "ವಡ್ಡರ ಹೆಣ್ಣು ಮಕ್ಕಳ ಹತ್ತಿರ ಕುಬುಸ ಕೇಳಿದಂಗಾತು". ಕೇವಲ ರವಿಕೆ ತೊಡದೇ ಇರುವುದೇ ಒಂದು ಸಂಗತಿಯಾಗಿದ್ದರೆ ಅದರಲ್ಲೇನೂ ವಿಶೇಷವಿರುತ್ತಿರಲಿಲ್ಲ, ಆದರೆ ಮಲೆಯಾಳಿಗಳ ಕೆಲವೊಂದು ಜನಾಂಗಗಳಲ್ಲಿ ಇದ್ದ ವಿಚಿತ್ರ ಪದ್ಧತಿ ಏನೆಂದರೆ ತಮ್ಮದೇ ಜನಾಂಗದ ಪುರುಷರು ಅವರು ಬರುವ ಹಾದಿಯಲ್ಲಿ ಎದುರಾದರೆ ತಮ್ಮ ಸೆರಗನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕಾಗುತ್ತಿತ್ತು ಅದೇ ಸಾಮಾಜಿಕವಾಗಿ ಉನ್ನತ ಸ್ತರದಲ್ಲಿರುವ ಇತರೇ ಜನಾಂಗದವರು ಅವರ ಹಾದಿಯಲ್ಲಿ ಬಂದರೆ ಅವರ ಎದುರಿನಲ್ಲಿ ತಮ್ಮ ಸೆರಗನ್ನು ಬಿಚ್ಚಿ ತಮ್ಮ ಎದೆಯು ಕಾಣುವಂತೆ ನಿಂತುಕೊಳ್ಳಬೇಕಾಗಿತ್ತು!.
ಇನ್ನು ‘ದ ಅದರ್ ವುಮೆನ್’ ಕುರಿತಾದ ಕೆಲವು ಸ್ವಾರಸ್ಯಕರ ಸಂಗತಿಗಳು. ಇದನ್ನು ಬರೆದದ್ದು ಒಬ್ಬ ಕೇರಳಿಗ ಎನ್ನುವುದು ನೆನಪಿದೆಯಾದರೂ ಅದನ್ನು ಬರೆದ ಮೂಲ ಲೇಖಕರ ಹೆಸರು ಜ್ಞಾಪಕವಿಲ್ಲ. ಇದರಲ್ಲಿ ವಿಶೇಷವಾಗಿ ಮಲಯಾಳಿಗಳಲ್ಲಿದ್ದ ಕೌಟುಂಬಿಕ ಹಾಗೂ ಸಾಮಾಜಿಕ ಪದ್ಧತಿಗಳ ಕುರಿತಾಗಿ ಬರೆಯಲಾಗಿದೆ. ಆ ಪುಸ್ತಕದಲ್ಲಿ ಬರೆದಂತೆ ಅಲ್ಲಿನ ನಂಬೂದರಿಗಳಲ್ಲಿ ಒಂದು ಆಚಾರವಿತ್ತು. ಅದೇನೆಂದರೆ ಹಿರಿಯ ಮಗನಿಗೆ ಮಾತ್ರ ಆಸ್ತಿಯಲ್ಲಿ ಪಾಲಿತ್ತು ಮತ್ತು ಕಿರಿಯ ಮಕ್ಕಳಿಗೆ ಆಸ್ತಿಯಲ್ಲಿ ಪಾಲಿರುತ್ತಿರಲಿಲ್ಲ. ಈ ಪದ್ಧತಿ ಏಕೆ ಆಚರಣೆಯಲ್ಲಿತ್ತೆಂದರೆ ಅವರಿಗಿರುತ್ತಿದ್ದದ್ದು ಅಲ್ಪ-ಸ್ವಲ್ಪ ಜಮೀನು ಹಾಗಾಗಿ ಆಸ್ತಿ ವಿಭಾಗವಾದರೆ ಅದೂ ಹರಿದು ಹಂಚಿಹೋದರೆ ಯಾರಿಗೂ ಅದರಿಂದ ಲಾಭದಾಯಕ ವ್ಯವಸಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ತಮ್ಮನೇನೋ ಆಸ್ತಿಗಾಗಿ ಹೊಡೆದಾಡದೆ ಸುಮ್ಮನಿರಬಹುದು, ಆದರೆ ಅವನ ಮಕ್ಕಳು ಸುಮ್ಮನಿರುತ್ತಾರೆಯೇ ಅದಕ್ಕಾಗಿ ಅವರ ಸಾಮಾಜಿಕ ವ್ಯವಸ್ಥೆಯಲ್ಲಿ ಹಿರಿಯ ಮಗನ ಹೊರತಾಗಿ ಇತರರಿಗೆ ಮದವೆಯಾಗುವ ಹಕ್ಕೇ ಇರಲಿಲ್ಲ. ಆದರೆ ಇವರಿಗೆ ವಿವಾಹ ಮಾಡಿಕೊಳ್ಳುವ ಹಕ್ಕಿಲ್ಲದಿದ್ದರೂ ಇವರು ಬೇರೆ ಜನಾಂಗದವರೊಂದಿಗೆ ವೈವಾಹಿಕ ಸಂಭಂದವೇರ್ಪಡಿಸುಕೊಳ್ಳುವದಕ್ಕೆ ಯಾವುದೇ ನಿರ್ಭಂದಗಳಿರಲಿಲ್ಲ. ಆದರೆ ಅವರನ್ನು ಹೆಂಡತಿಯಾಗಿ ಸ್ವೀಕರಿಸುವಂತಿರಲಿಲ್ಲ. ಸಾಮಾನ್ಯವಾಗಿ ಈ ನಂಬೂದರಿಗಳು ನಾಯರ್ ಜನಾಂಗದವರೊಂದಿಗೆ ಈ ವಿಧವಾದ ಸಂಭಂದಗಳನ್ನಿರಿಸಿಕೊಳ್ಳುತ್ತಿದ್ದರಂತೆ. ನಾಯರ್ ಜನಾಂಗದಲ್ಲಿ ಮಾತೃ ಪ್ರಧಾನ ಸಮಾಜ ವ್ಯವಸ್ಥೆಯಿದ್ದು ಅವರಲ್ಲಿ ಆಸ್ತಿಯು ತಾಯಿಯಿಂದ ಮಕ್ಕಳಿಗೆ ವರ್ಗಾವಣೆಯಾಗುವ ವ್ಯವಸ್ಥೆಯಿತ್ತು. ಹಾಗಾಗಿ ಅವರಲ್ಲಿ ತಂದೆಯಿಲ್ಲದೆಯೇ ಕುಟುಂಬ ವ್ಯವಸ್ಥೆಯು ಮುಂದುವರಿಯುತ್ತಿತ್ತು. ಅವರಲ್ಲಿ ಗಂಡು ಮಕ್ಕಳಿಗೆ ಯಾವುದೇ ಸ್ಥಾನಮಾನಗಳಿರಲಿಲ್ಲ. ಅವರ ಜನಾಂಗದ ಗಂಡು ಮಕ್ಕಳು ಮದುವೆ ಮಾಡಿಕೊಂಡ ಮೇಲೆ ತಮ್ಮ ಹೆಂಡತಿಯ ಮನೆಗೇ ಹೋಗಿ ವಾಸಮಾಡ ಬೇಕಾಗುತ್ತಿತ್ತು; ಅವನಿಗೆ ಕುಟುಂಬದ ಆಸ್ತಿಯಲ್ಲಿ ಯಾವುದೇ ಪಾಲಿರುತ್ತಿರಲಿಲ್ಲ. ಆದರೆ ಎಲ್ಲಾ ಹೆಣ್ಣು ಮಕ್ಕಳಿಗೆ ಆಸ್ತಿಯ ಮೇಲೆ ಸಮಾನ ಹಕ್ಕು ಇರುತ್ತಿತ್ತು. ಇನ್ನೊಂದು ತಮಾಷೆಯ ಸಂಗತಿ ಏನೆಂದರೆ ಈ ನಂಬೂದರಿಗಳು ಬೇರೆ ಜಾತಿಯ ಸ್ತ್ರೀಯೊಂದಿಗೆ ವೈವಾಹಿಕ ಸಂಭಂದವಿರಿಸಿಕೊಂಡು ಅವರನ್ನು ಮುಟ್ಟಿ ನೇರವಾಗಿ ಮನೆಯೊಳಗೆ ಪ್ರವೇಶಿಸಬಹುದಾಗಿತ್ತು. ಅವರನ್ನು ಮುಟ್ಟಿಕೊಂಡರೆ ಅವರಿಗೆ ಮೈಲಿಗೆಯಾಗುತ್ತಿರಲಿಲ್ಲ ಆದರೆ ಅವರಿಗೇ ಜನಿಸಿದ ತಮ್ಮ ಸ್ವಂತ ಮಕ್ಕಳನ್ನು ಮುಟ್ಟಿದರೂ ಸಹ ಅವರಿಗೆ ಮೈಲಿಗೆ ಅಂಟಿಕೊಳ್ಳುತಿತ್ತು. ನಾಯರ್ ಜನಾಂಗದವರಲ್ಲಿ ಬಹುತೇಕ ಇತರೇ ಜನಾಂಗಗಳವರನ್ನು ಮದುವೆ ಮಾಡಿಕೊಳ್ಳುತ್ತಿದ್ದರು. ಅವರಿಗೆ ನಂಬೂದರಿ ಅಥವಾ ಬ್ರಾಹ್ಮಣ ವರನು ಸಿಕ್ಕಿದರೆ ಅವರು ಹೆಚ್ಚು ಅದೃಷ್ಣಶಾಲಿಗಳೆಂದು ಭಾವಿಸುತ್ತಿದ್ದರು. (ಬಹುಶಃ ಈ ಪದ್ಧತಿ ಇದ್ದದ್ದರಿಂದಲೇ ದೂರದ ಅರಬ್ ದೇಶಗಳಿಂದ ಬಂದ ವ್ಯಾಪಾರಿಗಳನ್ನು ಮದುವೆಯಾಗಿ ಅವರ ಧರ್ಮವನ್ನೇ ಸ್ವೀಕರಿಸಿದವರು ಕೇರಳದ ಮೋಪ್ಳಾಗಳೆಂದು ತಿಳಿಯುತ್ತೇನೆ. ಏಕೆಂದರೆ ಮಾಪಿಳ್ಳೆ ಎಂದರೆ ಮಲಯಾಳಂನಲ್ಲಿ ಅಳಿಯ ಎಂದು ಅರ್ಥ ಹಾಗು ಅವನಿಂದ ಬಂದ ಧರ್ಮವು ಮಾಪ್ಳಾ ಅಥವಾ ಮೋಪ್ಳಾ ಧರ್ಮವಾಗಿ ಕರೆಯಲ್ಪಟ್ಟಿತು).
ದೊಡ್ಡ ಮಕ್ಕಳನ್ನು ಹೊರತು ಪಡಿಸಿ ಇತರ ಮಕ್ಕಳಿಗೆ ಅನ್ಯಜಾತಿಯ ಸ್ತ್ರೀಯರೊಂದಿಗೆ ಸಂಬಂಧವಿಟ್ಟುಕೊಳ್ಳುವುದಕ್ಕೆ ಸಾಮಾಜಿಕ ಒಪ್ಪಿಗೆಯಿದ್ದರೂ ಸಹ ನಂಬೂದರಿಗಳಲ್ಲಿ ದೊಡ್ಡವರೂ ಸಹ ಅನ್ಯಜಾತಿಯ ಸ್ತ್ರೀಯರೊಂದಿಗೆ ಸಂಬಂಧವಿಟ್ಟುಕೊಳ್ಳುವುದು ಸರ್ವೇಸಾಮನ್ಯ ಸಂಗತಿಯಾಗಿತ್ತು. ಒಮ್ಮೆ ಒಬ್ಬ ನಂಬೂದರಿಗೆ ಮದುವೆಯಾಗಿ ಬಹುಕಾಲ ಸಂದರೂ ಅವನ ಹೆಂಡತಿಗೆ ಮಕ್ಕಳೇ ಆಗಲಿಲ್ಲ. ಇದಕ್ಕೆ ಕಾರಣವೇನೆಂದರೆ ಆ ನಂಬೂದರಿಯು ಇನ್ನೊಬ್ಬ ಜಾತಿಯ ಹೆಂಗಸಿನೊಡನೆ ಸಂಬಂಧವಿಟ್ಟುಕೊಂಡು ರಾತ್ರಿ ವೇಳೆಯನ್ನು ಅವಳ ಮನೆಯಲ್ಲೇ ಕಳೆಯುತ್ತಿದ್ದ. ಇದನ್ನು ಅರಿಯದ ಆ ಮನೆಯ ಹಿರಿಯ ತನ್ನ ಮಗನಿಗೆ ಪುತ್ರ ಸಂತಾನವಿಲ್ಲದೇ ಇರುವುದರಿಂದ ತನ್ನ ವಂಶವು ಇಲ್ಲಿಗೇ ನಿಂತು ಹೋಗುತ್ತದೆ ಎಂದು ಭಾವಿಸಿ ತನ್ನ ಬಳಗದವರೆಲ್ಲರನ್ನೂ ತನ್ನ ಮನೆಗೆ ಕರೆಯಿಸಿ ತನ್ನ ಮಗನಿಗೆ ಇನ್ನೊಂದು ಮದುವೆಯನ್ನು ಮಾಡಬೇಕೆನ್ನುವ ತನ್ನ ಮನದ ಇಂಗಿತವನ್ನು ಅವರೆಲ್ಲರ ಮುಂದೆ ಇಟ್ಟ. ಇದಕ್ಕೆ ಅಲ್ಲಿ ನೆರೆದಿದ್ದ ಬಂಧು ಬಳಗದವರೆಲ್ಲಾ ತಮ್ಮ ಒಪ್ಪಿಗೆ ನೀಡಿದರು. ಕಡೆಯಲ್ಲಿ ಹಿರಿಯ ಮಗನ ಹೆಂಡತಿಯನ್ನೂ ಒಂದು ಮಾತು ಕೇಳೋಣವೆಂದು ಅವಳ ಅಭಿಪ್ರಾಯ ಕೇಳಿದರು. ಆಗ ಆಕೆಯು ತನ್ನ ಮಾವನಿಗೆ ಹಾಗೂ ಅಲ್ಲಿ ನೆರೆದಿದ್ದವರಿಗೆ ಹೀಗೆ ಉತ್ತರವಿತ್ತಳು, "ನನ್ನ ಗಂಡ ಇನ್ನೊಂದು ಮದುವೆಯಾಗಿ ಸಂತಾನವನ್ನು ಪಡೆಯುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲಾ; ಆದರೆ ಮದುವೆಯಾಗಿ ಬರುವವಳು ನನ್ನ ಗಂಡ ರಾತ್ರಿಯಲ್ಲಿ ಬೇರೆ ಕಡೆ ಹೋಗಿ ಮಲಗಿದರೂ ಸಹ ಅವಳಿಗೆ ಮಕ್ಕಳಾಗುವ ಹಾಗಿದ್ದರೆ ಸರಿ ಎಂದಳು". ಆಗ ಅಲ್ಲಿ ನೆರೆದಿದ್ದವರೆಗೆಲ್ಲಾ ಆಕೆಯ ಗಂಡನ ಇನ್ನೊಂದು ವ್ಯವಹಾರ ಗೊತ್ತಾಗಿ ಅದಕ್ಕೆ ಕಡಿವಾಣ ಹಾಕಿದರೆನ್ನಿ. ಇಲ್ಲಿ ಈ ಹೆಂಗಸು ತನ್ನ ಬುದ್ಧಿವಂತಿಕೆಯಿಂದ ತನ್ನ ಗಂಡನ ಎರಡನೇ ಮದುವೆಯನ್ನು ತಪ್ಪಿಸುವುದಲ್ಲದೇ ಅವನ ದುಶ್ಚಟವನ್ನೂ ನಾಜೂಕಾಗಿ ಬಿಡಿಸಿ ಹೇಳಿ ತನ್ನ ಗಂಡನನ್ನು ಕಾಪಾಡಿಕೊಂಡಳು ಎನ್ನುವುದು ’ದ ಅದರ್ ವುಮೆನ್’ ಪುಸ್ತಕದ ಕಥೆಯ ಸಾರಾಂಶ.
(ಈ ನಂಬೂದರಿಗಳು ಬಹುತೇಕ ಜಾತಿ ಭ್ರಷ್ಠರಾಗಿರುತ್ತಾರೆಂದು ಗೊತ್ತಿದ್ದರಿಂದ ಕೇರಳದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಪೌರೋಹಿತ್ಯಕ್ಕೆ ಕರ್ನಾಟಕದ ಕರಾವಳಿಯ ಬ್ರಾಹ್ಮಣರನ್ನೇ ನೇಮಿಸಿಕೊಳ್ಳುತ್ತಿದ್ದರು ಎಂದು ಇತ್ತೀಚೆಗೆ ಬಹುಶಃ ಶ್ರೀಕರ್ ಅವರ ಯಾವುದೋ ಒಂದು ಲೇಖನದ ಪ್ರತಿಕ್ರಿಯೆಯಲ್ಲಿ ಓದಿದ ನೆನಪು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ರವಿಶಂಕರ್ ಗುರೂಜೀಯವರಿಗೆ ವರ್ಷದ ಕನ್ನಡಿಗ ಪ್ರಶಸ್ತಿಯನ್ನು ಕೊಡುವಾಗಿನ ಅಧ್ಯಕ್ಷೀಯ ಭಾಷಣ ಮಾಡುತ್ತಾ ಸಾಂದರ್ಭಿಕವಾಗಿ ಆದಿ ಶಂಕರಾಚಾರ್ಯರು ಕೇರಳಕ್ಕೆ ಸೇರಿದವರಾಗಿದ್ದರೂ ಸಹ ನೇಪಾಳದ ಪಶುಪತಿನಾಥ ಆಲಯಕ್ಕೆ ಅರ್ಚಕರನ್ನಾಗಿ ಕರಾವಳಿ ಕರ್ನಾಟಕದ ಶೈವ ಬ್ರಾಹ್ಮಣರನ್ನೇ ನೇಮಿಸಲು ಸೂಚಿಸಿದ್ದರೆಂದೂ ಹೇಳಿದ್ದರು, ಏಕೆಂದರೆ ಇವರು ಬಹಳ ನೇಮ ನಿಷ್ಠೆಗಳನ್ನು ಆಚರಿಸುತ್ತಾರೆಂದು. ಇದನ್ನು ಈಗಲೂ ಸಹ ಮುಂದುವರೆಸಿಕೊಂಡು ಹೋಗಲಾಗುತ್ತಿದೆ.)
Comments
ಉ: ‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’
ಶ್ರೀಧರರೆ ನಮಸ್ಕಾರ. ನಿಮ್ಮ ವನಿತಾ ಉವಾಚ ಬಹಳ ಕುತೂಹಲಕಾರಿಯಾದ ಅಂಶಗಳನ್ನು ಹೊರಗೆಡವಿದೆ. ಒಟ್ಟಾರೆ ಅನಾದಿ ಕಾಲದಿಂದಲೂ ವನಿತಾ ಕುತೂಹಲ ನಿರಂತರವೆನ್ನುವುದು ಸೋಜಿಗದ ಸಂಗತಿ. ಅಂತೆಯೆ ಕಾಲಮಾನಘಟ್ಟಗಳಲ್ಲಿ ಬದಲಾಗುವ ಪದ್ದತಿ, ಆಚಾರ, ವಿಚಾರ, ಆಲೋಚನೆಗಳು ಕುತೂಹಲಕಾರಿಯೆನ್ನಬಹುದು. ಚೆಂದದ ಲಘು ಹರಟೆ ಬರಹ :-)
In reply to ಉ: ‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’ by nageshamysore
ಉ: ‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’
ಅದಕ್ಕೇ ಅಲ್ಲವೇ ನಾಗೇಶರೆ, ಅನಾಮಿಕನೊಬ್ಬ ಹೇಳಿರುವುದು, "God made man and rested, God made women and since then neither man nor God has rested" ಎಂದು :)
ಉ: ‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’
ವಿದೇಶೀ ಬರಹಗಾರರ ಬರಹಗಳಲ್ಲಿ ಕೆಲವೊಮ್ಮೆ ಉತ್ಪ್ರೇಕ್ಷೆ ಸಹ ಇರುತ್ತದೆ. ಇರಲಿ ಬಿಡಿ, ಸ್ವೀಕರಾರ್ಹವಾದದ್ದನ್ನು ಒಪ್ಪಬಹುದು.
In reply to ಉ: ‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’ by kavinagaraj
ಉ: ‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’
ನಿಜ ಕವಿಗಳೆ, ವಿದೇಶಿ ಬರಹಗಾರರು ತಮ್ಮದೇ ಮೂಸೆಯಲ್ಲಿ ಭಾರತೀಯರನ್ನು ನೋಡಿ ಅದರಂತೆಯೇ ಇಲ್ಲಿನ ಸಂಗತಿಗಳನ್ನು ಚಿತ್ರಿಸಿರುತ್ತಾರೆ. ಆದರೆ ನನಗೆ ನೆನಪಿರುವಂತೆ ಆ ಪುಸ್ತಕದಲ್ಲಿ ಯಾವುದೇ ವಿಷಯವನ್ನು ತಿರುಚಿ ಬರೆದಂತಿರಲಿಲ್ಲ, ಮತ್ತು ಇಲ್ಲಿ ದಾಖಲಿಸಿರುವುದು ಕೇವಲ ನನ್ನ ನೆನಪಿನಲ್ಲಿರುವ ಸಂಗತಿಗಳನ್ನಷ್ಟೇ.