ಅನ್ವೇಷಣೆ ‍ ಭಾಗ ೧೦

ಅನ್ವೇಷಣೆ ‍ ಭಾಗ ೧೦

ಮೇಡಂ ನಿಮ್ಮ ಸಂಕಟ ನನಗೆ ಅರ್ಥವಾಗುತ್ತೆ. ಜಾನಕಿಯ ಅಗಲಿಕೆ ನಮ್ಮೆಲ್ಲರಿಗೂ ಅತೀವ ದುಃಖ ಉಂಟು ಮಾಡಿದೆ. ಆದರೆ ಅದನ್ನು ಹಾಗೆ ಬಿಟ್ಟರೆ ಇನ್ನೆಷ್ಟು ಅನಾಥ ಜಾನಕಿಯರು ಬಲಿಯಾಗುತ್ತಾರೋ ಗೊತ್ತಿಲ್ಲ. ಅದಕ್ಕೆ ಹೇಗಾದರೂ ಮಾಡಿ ಆ ಕೊಲೆಗಡುಕರನ್ನು ಹಿಡಿಯಬೇಕು ಎಂಬ ನಿಟ್ಟಿನಲ್ಲಿ ನಿಮ್ಮ ಬಳಿ ಏನಾದರೂ ಮಾಹಿತಿ ಸಿಗುವುದೇನೋ ಎಂದು ಬಂದೆ. ಜಾನಕಿ ನಿಮ್ಮ ಆಶ್ರಮಕ್ಕೆ ಬಂದಾಗಿನಿಂದ ಅವಳಿಗೆ ಯಾವುದಾದರೂ ಬೆದರಿಕೆಗಳು ಏನಾದರೂ ಇದ್ದವ? ಅಥವಾ ಯಾರಾದರೂ ಅವಳನ್ನು ಹುಡುಕಿಕೊಂಡು ಬರುತ್ತಿದ್ದರ?

ಇಲ್ಲಪ್ಪ ಅರ್ಜುನ್, ಜಾನಕಿಯನ್ನು ಬಿಟ್ಟು ಹೋದ ದಿನದಿಂದ ಯಾರೂ ಸಹ ಅವಳ ಕುರಿತಾಗಿ ವಿಚಾರಿಸಿಕೊಂಡು ಬಂದಿರಲಿಲ್ಲ. ಅನಾಥ ಮಕ್ಕಳನ್ನು ಯಾರಾದರೂ ಯಾಕಪ್ಪ ವಿಚಾರಿಸಿಕೊಂಡು ಬರುತ್ತಾರೆ. ಯಾವುದೋ ಅಕ್ರಮ ಸಂಬಂಧಕ್ಕೆ ಹುಟ್ಟಿದ್ದೋ, ಅಥವಾ ಸಾಕಲು ಸಾಧ್ಯವಾಗದಿದ್ದಾಗ ಅಂಥಹ ಮಕ್ಕಳಿಗೆ ದೊರೆಯುವ ಜಾಗ ಅನಾಥಾಶ್ರಮ. ಅಂಥಹ ಮಕ್ಕಳನ್ನು ಮತ್ತೆ ಯಾರು ತಾನೇ ನೋಡಲು ಬರುತ್ತಾರೆ ನೀನೇ ಹೇಳು....

ತುಂಬಾ ಧನ್ಯವಾದಗಳು ಮೇಡಂ. ನನಗೆ ಅನುಮಾನ ಇದ್ದ ಒಂದೇ ಒಂದು ಸಾಧ್ಯತೆ ಇದಾಗಿತ್ತು..... ಈಗ ಇದೂ ಸಹ.... ಛೇ.... ಜಾನಕಿ ದಯವಿಟ್ಟು ನನ್ನನ್ನು ಕ್ಷಮಿಸು ಎಂದು ಆಗಸದ ಕಡೆ ನೋಡಿ ವಾಪಸ್ ಹೊರಡಲು ಅನುವಾದಾಗ ಸ್ವಲ್ಪ ದೂರ ಹೋಗಿದ್ದ ವೀಣಾದೇವಿ ಮತ್ತೆ ವಾಪಸ್ ಬಂದು ಅರ್ಜುನ್.... ನಾನು ಈಗ ಆಶ್ರಮ ಮುಚ್ಚಿ ಸರಿಯಾಗಿ ಎರಡು ವರ್ಷ ಆಯಿತು. ನಾನು ಆಶ್ರಮ ಮುಚ್ಚುವ ಒಂದು ತಿಂಗಳು ಮುಂಚೆ ಇಬ್ಬರು ವ್ಯಕ್ತಿಗಳು ನಮ್ಮ ಆಶ್ರಮಕ್ಕೆ ಬಂದು ತಾವು ಸರ್ಕಾರಿ ಅಧಿಕಾರಿಗಳು, ಅನಾಥ ಮಕ್ಕಳ ಜನಗಣತಿಗೆಂದು ಬಂದಿದ್ದೇವೆ, ನೀವು ಆಶ್ರಮ ಶುರು ಮಾಡಿದಾಗಿನಿಂದ ಯಾರ್ಯಾರು ಮಕ್ಕಳು ಇದ್ದರು, ನಂತರ ಯಾರಾದರೂ ದತ್ತು ಪಡೆದಿದ್ದರೆ ಆ ವಿವರಗಳು, ಇನ್ನೊಂದಿಷ್ಟು ಮಾಹಿತಿಗಳು ಬೇಕೆಂದು ಒಂದು ಕಡತವನ್ನು ತೆಗೆದುಕೊಂಡು ಮತ್ತೆ ಹಿಂದಿರುಗಿಸುವುದಾಗಿ ಹೇಳಿದರು. ಆದರೆ ಮತ್ತೆ ಅವರು ಬರಲೇ ಇಲ್ಲ.

ನಂತರ ನಾನೂ ಆಶ್ರಮವನ್ನು ಮುಚ್ಚಿದ್ದರಿಂದ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಇದರಿಂದ ನಿನಗೇನಾದರೂ ಉಪಯೋಗ ಆಗಬಹುದೇನೋ ಎಂದು ಹೇಳಿದೆ ಅಷ್ಟೇ.

ವೀಣಾದೇವಿ ಹೇಳಿದ ಮಾತು ಕೇಳಿ ಆಶ್ಚರ್ಯವಾಗಿ, ಮೇಡಂ ಆ ಕಡತದಲ್ಲಿ ಯಾವ ಮಗು ಯಾವಾಗಿನಿಂದ ಆಶ್ರಮಕ್ಕೆ ಸೇರಿದ್ದು ಎಂಬ ತಾರೀಖು ನಮೂದಿಸಿರುತ್ತೀರಾ? ಮತ್ತೆ ಆ ಕಡತದ ಇನ್ನೊಂದು ಪ್ರತಿ ಮತ್ತು ಈಗ ಆ ಮಕ್ಕಳ ವಿವರ ಮತ್ತು ಅವರ ನಂಬರ್ ಗಳು ಇದ್ದರೆ ಕೊಡುತ್ತೀರಾ?

ಹಾ ಹೌದು ಅರ್ಜುನ್.... ಅದರಲ್ಲಿ ಯಾವ ಮಕ್ಕಳು ಯಾವಾಗಿನಿಂದ ಆಶ್ರಮದಲ್ಲಿ ಸೇರಿದ್ದು ಎಂಬ ದಿನಾಂಕ ಇರುತ್ತದೆ. ಇನ್ನು ಆ ಕಡತದ ಪ್ರತಿ ಇದೆ, ಆದರೆ ಅದೆಲ್ಲಿ ಇದೆ ಎಂದು ಹುಡುಕಬೇಕು. ನೀನು ಇನ್ನೊಂದು ವಾರ ಬಿಟ್ಟು ಮೈಸೂರಿಗೆ ಬಂದರೆ ನಾನು ಆ ಕಡತವನ್ನು ಕೊಡುತ್ತೇನೆ. ಆದರೆ ಅದರಿಂದ ಏನು ಪ್ರಯೋಜನ ಅರ್ಜುನ್?

ಮೇಡಂ ನೀವು ಮೊದಲು ಆ ಕಡತ ಮತ್ತು ಮಕ್ಕಳ ಈಗಿನ ವಿವರ ಕೊಟ್ಟರೆ ಖಂಡಿತ ನನಗೆ ಸಹಾಯ ಆಗುತ್ತದೆ ಎಂದಷ್ಟೇ ಹೇಳಬಲ್ಲೆ. ಯಾಕೆಂದರೆ ನಾನು ಕುರುಡಾಗಿ ಮುನ್ನುಗ್ಗುತ್ತಿದ್ದೇನೆ. ಅಲ್ಲಿ ನನಗೆ ಫಲಿತಾಂಶ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಸಿಗುವ ಯಾವುದೇ ಅವಕಾಶವನ್ನು ನಾನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಮೇಡಂ ನಾನು ಮುಂದಿನವಾರ ಮೈಸೂರಿಗೆ ಬರುತ್ತೇನೆ. ಮೇಡಂ ಇನ್ನೊಂದು ವಿಷಯ, ನಾನು ನಿಮ್ಮನ್ನು ಭೇಟಿ ಮಾಡಿದ ವಿಷಯ ದಯವಿಟ್ಟು ಯಾರಿಗೂ ತಿಳಿಸಬೇಡಿ.. ಹಾ ಪೋಲೀಸರಿಗೂ....

ತಲೆಯಲ್ಲಿ ಸಾವಿರ ಯೋಚನೆಗಳು ಓಡುತ್ತಿದ್ದವು, ಆ ಕಡತದಿಂದ ನಿಜವಾಗಲೂ ಏನಾದರೂ ಪ್ರಯೋಜನ ಇದೆಯಾ? ಇದ್ದರೂ ಆ ಕಡತವನ್ನು ಕೊಂಡೊಯ್ದವರು ಯಾರೆಂದು ಹೇಗೆ ಕಂಡು ಹಿಡಿಯುವುದು? ನಿಜವಾಗಲೂ ಗಣತಿಗೆ ಬಂದಿದ್ದರೆ ಅವರು ಬರೀ ಮಾಹಿತಿ ಪಡೆದು ಹೋಗುತ್ತಿದ್ದರು. ಆದರೆ ಕಡತವನ್ನು ಏಕೆ ತೆಗೆದುಕೊಂಡು ಹೋಗಿದ್ದಾರೆ? ಎಲ್ಲೋ ಏನೋ ಯಡವಟ್ಟು ಆಗಿರುವ ಹಾಗೆ ಕಾಣುತ್ತಿದೆ. ಇರಲಿ ಮೊದಲು ಕಡತ ಕೈಗೆ ಸಿಕ್ಕು ಈಗಿನ ಪರಿಸ್ಥಿತಿಯಲ್ಲಿ ಉಳಿದವರನ್ನು ಸಂಪರ್ಕಿಸಿದರೆ ಏನಾದರೂ ಮಾಹಿತಿ ಸಿಗಬಹುದೇನೋ ನೋಡೋಣ.

ಒಂದು ವಾರದ ನಂತರ ಮೈಸೂರಿಗೆ ಹೋಗಿ ವೀಣಾದೇವಿಯವರನ್ನು ಭೇಟಿ ಮಾಡಿ ಅವರು ಕೊಟ್ಟ ಕಡತ ಮತ್ತು ಉಳಿದವರನ್ನು ಸಂಪರ್ಕಿಸಲು ಅವರ ನಂಬರ್ ಗಳನ್ನು ತೆಗೆದುಕೊಂಡು ವಾಪಸ್ ಬಂದು ಒಬ್ಬೊಬ್ಬರಿಗೆ ಕರೆ ಮಾಡಲು ಶುರು ಮಾಡಿದೆ. ಇಪ್ಪತ್ತು ವರ್ಷದಲ್ಲಿ ಸುಮಾರು ಮುನ್ನೂರು ಮಕ್ಕಳು ಆ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಪ್ರತಿಯೊಬ್ಬರೂ ಯಾವ ದಿನಾಂಕದಲ್ಲಿ ಆಶ್ರಮಕ್ಕೆ ಸೇರಿದ್ದು, ಯಾವಾಗ ಆಶ್ರಮ ಬಿಟ್ಟಿದ್ದು ಎಲ್ಲಾ ಮಾಹಿತಿಗಳು ಇದ್ದವು. ಆದರೆ ಕೆಲವೊಂದು ನಂಬರ್ ಗಳು ಮಾತ್ರ ಅಸ್ತಿತ್ವದಲ್ಲಿದ್ದವು, ಉಳಿದ ನಂಬರ್ ಗಳು ಚಾಲ್ತಿಯಲ್ಲಿರಲಿಲ್ಲ.

ಚಾಲ್ತಿಯಲ್ಲಿದ್ದ ಅಷ್ಟೂ ನಂಬರ್ ಗಳಿಂದ ಉಪಯುಕ್ತವಾದ ಯಾವುದೇ ಮಾಹಿತಿ ದೊರೆಯಲಿಲ್ಲ. ಇನ್ನು ನಂಬರ್ ಚಾಲ್ತಿಯಲ್ಲಿಲ್ಲದ ೬೦-೭೦ ವ್ಯಕ್ತಿಗಳನ್ನು ಮುಖತಃ ಸಂಪರ್ಕಿಸಬೇಕಿತ್ತು. ಆದರೆ ಜಾನಕಿ ಹೋದಾಗಿನಿಂದ ಸರಿಯಾಗಿ ಕೆಲಸಕ್ಕೆ ಹೋಗಿರಲಿಲ್ಲವಾದ್ದರಿಂದ ಸತತವಾಗಿ ರಜೆ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಅವರೆಲ್ಲರನ್ನೂ ವಾರಾಂತ್ಯದಲ್ಲೇ ಸಂಪರ್ಕಿಸಬೇಕಿತ್ತು. ಸತತವಾಗಿ ಒಂದೇ ವಿಷಯ ಯೋಚಿಸುತ್ತಿದ್ದರಿಂದ ಮೆದುಳು ಸ್ವಲ್ಪ ಜಡವಾದಂತೆ ಎನಿಸಿಬಿಟ್ಟಿತ್ತು. ಹೇಗಿದ್ದರೂ ವಾರಾಂತ್ಯದವರೆಗೂ ಏನೂ ಕೆಲಸ ಇಲ್ಲದ್ದರಿಂದ ಆಫೀಸಿಗೆ ಹೋದೆ.

Rating
No votes yet

Comments