ವಿಳಾಸ (ಏಕ್ ಪತಾ ) --- ಮೂಲ: ಗುಲ್ಜಾರ್ ಸಾಹಬ್

ವಿಳಾಸ (ಏಕ್ ಪತಾ ) --- ಮೂಲ: ಗುಲ್ಜಾರ್ ಸಾಹಬ್

 

ವಿಳಾಸ (ಏಕ್ ಪತಾ ) --- ಗುಲ್ಜಾರ

                       ಅನು: ಲಕ್ಷ್ಮೀಕಾಂತ ಇಟ್ನಾಳ

 

ಇಲ್ಲಿಂದ ಒಂದಿಷ್ಟು ಮುಂದ ನಡೆದರ

ಹರಿದ ಜಮಖಾನೆಯ ಮೇಲೆ

ಪೂರಾ ಹಲ್ಲಿಯ ಹಾಗೆ ಸೊರಗಿದಂಥ

ಮನುಷ್ಯನ ಆಕೃತಿಯಂತಹದೊಂದು ಸಿಗುವುದು

ಆ ಚೆಹರೆ ಪೂರ್ತಿ ನೋಡಲು ಆಗುವುದಿಲ್ಲ

ಡಬ್ಬು ಮಲಗಿ, ಭಿಕ್ಷಾ ಪಾತ್ರೆ ಇಟ್ಟುಕೊಂಡ

ಭಿಕ್ಷುಕನೊಬ್ಬ ಸಿಗುತ್ತಾನೆ,.... ಆದರವ ಏನೂ ಬೇಡುವುದಿಲ್ಲ

 

ಅಲ್ಲಿಂದ ಬಲಕ್ಕೆ ತಿರುಗಿ ಮುಂದೆ ಹೋದರೆ

ಅಂಗಡಿಗಳ ಉದ್ದುದ್ದ ಸಾಲುಗಳೇ ಸಿಗುತ್ತವೆ

ಶರಣಾರ್ಥಿಗಳವು ಅವೆಲ್ಲಾ ...!

ಎಲ್ಲವೂ ಕಟ್ಟಿಗೆಯ ಗೂಡಂಗಡಿಗಳೇ

ಈ ಅಂಗಡಿಗಳ ಹಿಂದೇನೇ, ಕೆಲ ಇಂಚುಗಳಷ್ಟು ಹಿಗ್ಗಿಸಿದ ಜಾಗದಲ್ಲೇ ಇವರ ವಾಸ

ಇಲ್ಲಿಯವರಾರು ಇಲ್ಲಿ ಇಲ್ಲ

ಮಸೀದೆಯಲ್ಲಿಯೇ ಇರಲಿಕ್ಕೆ ಹತ್ತಿದ್ದರು ಬಂದು ಬಂದು

ಅಲ್ಲಿಂದ ಹೊರದಬ್ಬಲಾಯಿತು ಇವರನ್ನು

ಅದು ದೇವರ ವಾಸದ ಮನೆಯೆಂದು

ನೀವೇ ಹೇಳಿ, ದೇವರಿಗೆ ಅಷ್ಟೊಂದು ಸ್ಥಳವೆಲ್ಲಿದೆ ಇಲ್ಲಿ, ?

ಇಲ್ಲಾ ಅಂದರೆ, ಇಡಿ ಜಗತ್ತಿಗೇ ಜಾಗ ಕೊಡುತ್ತ ಕೂಡಬೇಕಾದೀತು ಅವನು..!

 

ಅರೆ ಹಾಂ...!

ಆ ವಿಳಾಸದ ಬಗ್ಗೆ ಹೇಳುತ್ತಿದ್ದೆನಲ್ಲಾ,

ಅದೇ ದಾರಿಯಲ್ಲಿ ಈ ಅಂಗಡಿಗಳನ್ನು ದಾಟಿ ಮಂದೆ ಹೋದರೆ

, ಆ ಮಸೀದೆ ಸಿಗುತ್ತದೆ, ....ಅದೇ ಈಗ ಹೇಳಿದೆನಲ್ಲಾ ಅದು

ಆ 'ದೇವಪುತ್ತ, ಅವಧೂತ ಸಯ್ಯದ್ ವಲೀ ಖಾನ್' ' ನ ಪವಿತ್ರ ಮಂದಿರ

ಅಲ್ಲಿಂದ ಮುಂದೆ ತುಸು ಎಡಕ್ಕೆ ತಿರುಗಿದ ಕೂಡಲೇ,

ಒಂದು ಹತ್ತು ಹನ್ನೆರಡು ಹೆಜ್ಜೆಗಳಷ್ಟೇ

ದೊಡ್ಡದೊಂದು ಹೊಲಸು ನಾರುತ್ತಿರುವ ತಿಪ್ಪೆಗುಂಡಿ ಕಾಣುವುದು......., ಅಲ್ಲೇ ಕಣ್ಮುಂದಯೇ,

ಅಲ್ಲಿಗೆ ಹೊರಳುವುದಕ್ಕಿಂತ ಮುಂಚೆನೇ, .... ಮೂಗಿಗೆ ವಾಸನೆ ಅಡರಿ ಬಿಡುತ್ತದೆ

ಅದು ಇಷ್ಟಿಷ್ಟ ಕಡಿಮೆ ಆದರೂ,, ... ದಿನಾಲೂ ಅಷ್ಟಷ್ಟ ಹೆಚ್ಚು ಆಗುತ್ತಲೇ ಇರುತ್ತದೆ !

ಅದು ಈಗ ಆ ಭಾಗದೊಳಗೆಲ್ಲಾ ಒಂದು ಗುರುತಿನ ಜಾಗವಾಗಿಯೇ ಗುರುತಿಸಿಕೊಂಡಿದೆ !

 

ಆದರೆ ನಿನಗೆ ಆ ಜಾಗದೊಳಗೇನೂ ನಿಲ್ಲುವ ಜರೂರತ್ ಏನಿಲ್ಲಾ

ಇನ್ನಷ್ಟು ಹೊತ್ತು ಸೀಧಾ ಹಾಗೆಯೇ ನಡೆಯುತ್ತಿರು ನೀನು

ಪುಸ್ತಕಗಳ ಬಾಜಾರ ಸಿಗುವುದು ಎದುರಿಗೆ,

ಅಲ್ಲಿಯೇ ತುಕ್ಕು ಹಿಡಿದಂತಹದೊಂದು ಹಳೆಯ ಛಾವಣಿಯ ಕೆಳಗೆ ಹಾದು ಬಂದರೆ

ಎಡಕ್ಕೆ ಕತ್ತಲು ಕತ್ತಲಿನಂತಿರುವ ಓಣಿಯ ತರಹದ್ದೊಂದು ಸಿಗುವುದು,

ಓಣಿ ಅಂದರೆ, ,,,,ಓಣಿಯೂ ಅಲ್ಲಾ ಮತ್ತೆ,

ಯಾಕಂದರೆ ಅಲ್ಲಿ ಕೆಲ ಬಡವರು ಮನೆಗಳ ತರಹ ಮಾಡಿಕೊಂಡಿದ್ದಾರೆ ಅಷ್ಟೆ,

ಮನೆ ಅಂದರೆ ಮನೆ ಎಂದು ತಿಳಕೋಬೇಡಾ ಮತ್ತೆ, ......ಮನೆಗಳೂ ಅಲ್ಲಾ ಅವು

ಯಾಕಂದರೆ ಅವುಗಳಿಗೆ ಬಾಗಿಲು, ಮತ್ತೆ, ಕಿಟಕಿಗಳೇ ಇಲ್ಲಾ, ......ಅಸಲು ಗೋಡೆಗಳೇ ಇಲ್ಲಾ

ಪರದೆ ಹಾಕಿಕೊಂಡಿದ್ದಾರೆಂದರೆ ,..... ಅದೂ ಇಲ್ಲಾ

ಹಾದು ಹೋಗುವಾಗ ನಿನಗೆ ಬಹುಶ: ಹಾಗೆ ಅನ್ನಿಸಲಿ ಎಂದು ಅಷ್ಟೆ,

ಯಾವುದೋ ಒಂದು ಅಗ್ಗದ ಕಾದಂಬರಿಯ

ಬೆತ್ತಲೆಯಂತಿರುವ ಖಾಲಿ ಅಧ್ಯಾಯವೊಂದರ ಮೇಲೆ ಕಣ್ನಾಡಿಸುವಂತೆ ಅಷ್ಟೆ !

 

ಹುಷಾರಾಗಿ ಮುಂದೆ ಸಾಗು, ಕಾಲುಗಳು ಜಾರುವ ಸಂಭವವಿದೆ ಅಲ್ಲಿ

ಅಡುಗೆ ಮಾಡುತ್ತ,...... ಉಣ್ನುತ್ತ ಅಲ್ಲೇ ಇದ್ದಾರೆ ಅವರೆಲ್ಲಾ

ಅದಕ್ಕಿಂತ ಹೆಚ್ಚಿಗೆ ಅಂದರೆ

ಎಲ್ಲಿ ಅಪ್ಪಿ ತಪ್ಪಿ

ಯಾವುದೋ ಜೀವಂತ, ಬಿದ್ದಿಕೊಂಡಿರುವ

ಥೇಟ್ ಶವದ ಹಾಗಿರುವುದರ ಮೇಲೆ

ಹೆಜ್ಜೆ ಇಟ್ಟಗಿಟ್ಟೀಯೋ ಎಂಬ ಭಯ

ಯಾಕಂದರೆ ಒಬ್ಬರಲ್ಲಾ ಒಬ್ಬರು ಸಾಯುತ್ತಾರೆ,

ಸತ್ತರೆ ಇಬ್ಬರು ಹುಟ್ಟುತ್ತಾರೆ, ... ಆ ಓಣಿಯಲ್ಲಿ ದಿನಾಲೂ

ಸತ್ತೇ ಹುಟ್ಟುವವರು, .....ಹುಟ್ಟುತ್ತಲೇ ಸಾಯುವವರು,... ಈ ಲೆಖ್ಖದಲ್ಲಿಲ್ಲ ಮತ್ತೆ !

 

ಆ ಗಲ್ಲಿಯೊಳಗಿಂದ ಹೊರಬಂದ ಕೂಡಲೇ

ಕಣ್ಣುಗಳಿಗೆ ಕುಕ್ಕುವಂತೆ ಛಾಯೆ ಬೀಳುವುದು

ಫಳ ಫಳ ಹೊಳೆಯುವ ಬಿಸಿಲಿನದು ಅದು

ಆಗ ಕೆಲ ಹೊತ್ತು ಏನೂ ಕಾಣುವುದಿಲ್ಲ .....ಕಣ್ಣಿಗೆ,

ಸ್ವಲ್ಪ ಕಣ್ನುಗಳನ್ನು ಕಿರಿದುಗೊಳಿಸಿ,

ಆ ಕಡೆ ನೋಡಿದಾಗ

ಒಂದು ಚೌಕ ಕಣ್ಣಿಗೆ ಬಿಳುವುದು, ......ಅಲ್ಲೇ ಮುಂದೆಯೇ

ಅಲ್ಲಿಂದಂತೂ ಮಾರಳತೆಯಲ್ಲಿಯೇ ಇದೆ ಆ ರಸ್ತೆಯೂ ಸಹ,...ನಿಲುಕಲಾರದಷ್ಟು ಸಮೀಪ !

ಅಲ್ಲಿ ನಿನಗೆ ಎಲ್ಲಾ, 'ಪಿ.ಎಮ್' ' ಗಳ, 'ಜಿ. ಎಮ್' ಗಳ ಆಲಿಶಾನ್ ಬಂಗಲೆಗಳು ಸಿಗುತ್ತವೆ,

ಅದೇ ರಾಜಮಾರ್ಗದ ಗುಂಟ

ಬಾಳ ಮುಂದ, ಅಂದರ ...ಇನ್ನೂ ಮುಂದಕ್ಕ ಹೋದರ

ಈಗ ಕಟ್ಟಲಿಕ್ಕೆ ಹತ್ತಿರುವ ವಿಮಾನ ನಿಲ್ದಾಣ ಸಿಗುವುದು

 

ಹೌದು, ....ಅದೆಲ್ಲಾ ಸರಿ,

ಆದರೆ, ....ನಿನಗೆ ಯಾರನ್ನು ಭೇಟಿಯಾಗಬೇಕಿತ್ತು ಹೇಳು ?

 

ಇಲ್ಲಾ ..., ಅದೇನೂ ನನಗೆ ಗೊತ್ತಿಲ್ಲಾ !

 

ನೀನೇ ನಿನ್ನ ಮನೆಯ ವಿಳಾಸ ಕೇಳುತ್ತ

ಇಲ್ಲಿಗೆ ಬಂದಿರುವೆ ಏನೋ ಎಂದು ನಾನು ತಿಳಿದಿದ್ದೆ !

Rating
No votes yet

Comments

Submitted by lpitnal Thu, 01/08/2015 - 23:21

In reply to by kavinagaraj

ಗುರುಜಿ ಕವಿನಾಗರಾಜ್ ರವರೇ, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯ ಸರ್, ವಂದನೆಗಳು.

Submitted by swara kamath Thu, 01/08/2015 - 16:46

ಸುಂದರ ಅನುವಾದ ಇಟ್ನಾಳರೆ,ಬದುಕಿನ ನೆಲೆಯನ್ನು ಹುಡುಕುತ್ತಾ ಜೀವ ಅಂಡೆಲೆಯುವ ಕರಾಳ ದೃಷ್ಯ ಕಣ್ಮುಂದೆ ಬಂದಂತಾಗುತ್ತದೆ.
ವಂದನೆಗಳು. .
ರಮೇಶ ಕಾಮತ್

Submitted by lpitnal Thu, 01/08/2015 - 23:29

In reply to by swara kamath

ಆತ್ಮೀಯ ರಮೇಶ ಕಾಮತ್ ರವರೇ ,ನಮಸ್ಕಾರ. ತಮ್ಮ ಮೆಚ್ಚುಗೆಗೆ ವಂದನೆಗಳು. ಬದುಕಿನ ನೆಲೆಗಳ ವಿಳಾಸಗಳನ್ನು ಅದು ಹೇಗೆ ಹೆಕ್ಕಿ ತೆಗೆದಿದ್ದಾರೆ ಗುಲ್ಜಾರರು. ತಾವು ಗಮನಿಸಬಹುದು, ಒಂದೊಂದು ಸಾಲಿನಲ್ಲೂ ಕೂಡ ಹಲ ವಿಳಾಸಗಳನ್ನು ಹುಡುಕುತ್ತ, ನಮ್ಮ ಮುಂದೆ ಪ್ರಸ್ತುತಿಸುವ ಪರಿ ಅದ್ಭುತ. ಅಲ್ಲಿಯೆ ಮಾರು ದೂರಗಳಲ್ಲಿ , ನಿಲುಕದ ಸಾಮೀಪ್ಯದಲ್ಲಿ ಆಳುವ ಪ್ರಭುಗಳಿದ್ದರೂ, ಅವರ ಮೂಗಿನ ನೆರಳಲ್ಲಿಯೇ ಅದೆಂಥ ಬದುಕುಗಳು ಜೀವ ಹಿಡಿದಿವೆ ಅಲ್ಲವೇ ಸರ್. ಇದು ಎಲ್ಲ ಕಡೆಗೂ ಗಮನಿಸಬಹುದಾದ ಕಠೋರ ಸತ್ಯ. ಆದರೂ ಬದುಕು ಕೊನೆಗೂ ಸುಂದರವಾಗುವ ಬಗ್ಗೆ ಆಶಾವಾದಿಯಾಗಿರೋಣ............

Submitted by H A Patil Mon, 01/12/2015 - 20:23

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಕವಿ ಗುಲ್ಞಾರರ ಕವನ ’ ಏಕ್ ಪತಾ ’ ವನ್ನು ಬಹಳ ಸುಂದರವಾಗಿ ಕನ್ನಡಕ್ಕೆ ತಂದಿದ್ದೀರಿ. ದೆಹಲಿಯ ಚಿತ್ರಣವನ್ನು ತಮ್ಮದೆ ಮಾನವೀಯ ಶೈಲಿಯಲ್ಲಿ ಕವಿ ಗುಲ್ಞಾರ ತಂದಿದ್ದಾರೆ, ನನಗೆ ಬರಿ ದೆಹಲಿ ಮಾತ್ರವಲ್ಲ ಎಲ್ಲ ಪ್ರಮುಖ ಪಟ್ಟಣಗಳ ಪರಿಸರಗಳು ಮನದ ಪರದೆಯ ಮುಂದೆ ಸರಿದು ಹೋದವು. ಎಷ್ಟು ಗಾಢ ಕವಿಯ ಅಭಿವ್ಯಕ್ತಿ ಬಹಳ ಸೊಗಸಾದ ಅನುವಾದ ಗುಲ್ಙಾರರೆ ಕನ್ನಡದಲ್ಲಿ ಬರೆದಂತಿದೆ, ಉತ್ಪ್ರೆಕ್ಷೆ ಎಂದು ಭಾವಿಸಬೇಡಿ ದನ್ಯವಾದಗಳು.

Submitted by lpitnal Tue, 01/13/2015 - 07:28

In reply to by H A Patil

ಹಿರಿಯರಾದ ಕವಿ, ಲೇಖಕ, ಚಿಂತಕ, ಹೆಚ್ ಏ ಪಾಟೀಲ ರವರೇ, ಓಹ್ ಅಂತಹ ಮಟ್ಟಕ್ಕೆ ಹೋಲಿಸಬೇಡಿ ದಯವಿಟ್ಟು. ಅವರೊಂದಿಗೆ ಕುಳಿತು, ಮಾತಾಡಿ, ಇಡೀ ದಿನಗಟ್ಟಲೆ ಚರ್ಚಿಸಿ ಬಂದ ನಾನು, ಆ ನನ್ನ ಗುರುವಿನ ಆ ಸಾಗರದ ಆಳ ಅಗಲ, ವಿಸ್ತಾರಗಳನ್ನು ಅನುಭವಿಸಿ, ಸವಿದು ಬಲ್ಲೆ. ಸಾಹಿತ್ಯಿಕವಾಗಿ ಅವರೊಂದಿಗೆ ಒಡನಾಟವಿಟ್ಟುಕೊಂಡ, ಕವನಗಳ ಅನುವಾದಗಳ ಹಕ್ಕುಗಳನ್ನು ಪಡೆದ ಮೊದಲ ದಕ್ಷಿಣ ಭಾರತೀಯನೆಂದು ಗೆಳೆಯರು ಹೊಗಳಿದರೂ, ಎಷ್ಟಿದ್ದರೂ ಅವರ ಅಭಿಮಾನಿ ಮಾತ್ರ ಸರ್ ನಾನು. ಅವರ ಒಂದಂಶವೂ ನಾನಾಗೆನು. ಅಲ್ಪ, ಅಜ್ಞ ನಾನು. ಅವರ ಕವನಗಳ ಮೇಲಿನ ಪ್ರೀತಿಗಾಗಿ, ಅವರ ಕವನಗಳ ಸತ್ವಗಳು ನನ್ನನ್ನು ಅನುವಾದಿಸಲು ಪ್ರೇರೇಪಿಸುತ್ತವೆ ಸರ್. ಆದರೆ, ಇದೊಂದು ನನ್ನ ಪ್ರೀತಿಯ ಪ್ರಯತ್ನವಷ್ಟೆ. ಅವರ ಹಾಡುಗಳು, ಕವನಗಳು ಹೂಗಳಾದರೆ, ಅನುವಾದಗಳು ಹೂವಿನ ಹಾರಗಳಲ್ಲಿ ಅಲ್ಲಲ್ಲಿ ಎಲೆಗಳಿರುತ್ತವಲ್ಲ ಹಾಗೆ. ತಮ್ಮ ಪ್ರೀತಿಗೆ ಮೂಕನಾದೆ. ಇದೊಂದು ಪ್ರೇರಣೆ ಎಂದಷ್ಟೆ ಭಾವಿಸುವೆ ಸರ್. ಧನ್ಯವಾದಗಳು ........